My Blog List

Monday, March 23, 2020

ರಾಷ್ಟ್ರ ರಾಜಧಾನಿಯಲ್ಲಿ ಆಯುಷ್ಮಾನ್ ಭಾರತ ಅನುಷ್ಠಾನ

ರಾಷ್ಟ್ರ ರಾಜಧಾನಿಯಲ್ಲಿ ಆಯುಷ್ಮಾನ್ ಭಾರತ ಅನುಷ್ಠಾನ
ಆಪ್ ಸರ್ಕಾರದ ಒಪ್ಪಿಗೆ, ಏಮ್ಸ್ ಒಪಿಡಿ ಬಂದ್
ನವದೆಹಲಿ: ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ ಯೋಜನೆಯನ್ನು ಅನುಷ್ಠಾನಗೊಳಿಸಲು ದೆಹಲಿಯ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ (ಆಪ್) ಸರ್ಕಾರ 2020 ಮಾರ್ಚ್ 23ರ ಸೋಮವಾರ ನಿರ್ಧರಿಸಿದ್ದು, ಯೋಜನೆಯು ೨೦೨೦-೨೧ರ ಹಣಕಾಸು ವರ್ಷದಿಂದ ಜಾರಿಯಾಗಲಿದೆ ಎಂದು ಪ್ರಕಟಿಸಿತು.

ರಾಷ್ಟ್ರೀಯ ರಾಜಧಾನಿಯಲ್ಲಿ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಯನ್ನು ಜಾರಿಗೊಳಿಸಬಾರದು ಎಂಬ ನಿಲುವು ತಳೆದಿದ್ದ ಆಪ್ ಸರ್ಕಾರವು, ದೇಶಾದ್ಯಂತ ಕೊರೋನಾವೈರಸ್ ಸೋಂಕಿನ ಪ್ರಕರಣಗಳು ೪೧೫ಕ್ಕೆ ತಲುಪುತ್ತಿದ್ದಂತೆಯೇ ತನ್ನ ನಿಲುವು ಬದಲಾಯಿಸುವ ನಿರ್ಧಾರ ಕೈಗೊಂಡಿತು.

ಕೋವಿಡ್-೧೯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಪ್ ಸರ್ಕಾರ ಕೂಡಾ ಕೇಂದ್ರ ಪ್ರಾಯೋಮಿತ ಆರೋಗ್ಯ ರಕ್ಷಣಾ ಯೋಜನೆಯನ್ನು ೨೦೨೦-೨೧ರ ವಿತ್ತ ವರ್ಷದಿಂದ ಜಾರಿಗೆ ತರಲಿದೆ ಎಂದು ದೆಹಲಿ ವಿಧಾನಸಭೆಯಲ್ಲಿ ದೆಹಲಿಯ ವಿತ್ತ ಸಚಿವ ಮನಿಶ್ ಸಿಸೋಡಿಯಾ ಅವರು ಸೋಮವಾರ ಪ್ರಕಟಿಸಿದರು. ಪ್ರಸ್ತುತ ವರ್ಷದಲ್ಲಿ ಯೋಜನೆಗೆ ಕೋಟಿ ರೂಪಾಯಿಗಳನ್ನು ಮತ್ತು ಮುಂದಿನ ವಿತ್ತ ವರ್ಷದಲ್ಲಿ ೫೦ ಕೋಟಿ ರೂಪಾಯಿಗಳನ್ನು ಕೊರೋನಾವೈರಸ್ ಸಾಂಕ್ರಾಮಿಕ ವಿರುದ್ಧದ ಹೋರಾಟಕ್ಕೆ ಒದಗಿಸಲಾಗುವುದು ಎಂದು ಹೇಳಿದರು.

ಪ್ರತಿಯೊಂದು ಕುಟುಂಬಕ್ಕೆ ಪ್ರತಿವರ್ಷ ಲಕ್ಷ ರೂಪಾಯಿಗಳವರೆಗಿನ ಆರೋಗ್ಯ ವಿಮಾ ರಕ್ಷಣೆ ಒದಗಿಸುವ ಸಲುವಾಗಿ ದೆಹಲಿ ಸರ್ಕಾರವು ೨೦೨೦-೨೧ರ ಆರ್ಥಿಕ ವರ್ಷದಿಂದ ಆಯುಷ್ಮಾನ್ ಭಾರತ- ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯನ್ನು ದೆಹಲಿಯಲ್ಲಿ ಜಾರಿಗೊಳಿಸಲಿದೆ ಎಂದು ಸಿಸೋಡಿಯಾ ನುಡಿದರು.

ರಾಷ್ಟ್ರೀಯ ರಾಜಧಾನಿಯಲ್ಲಿ ಯೋಜನೆಯು ಆಡಳಿತಾರೂಢ ಆಪ್ ಮತು ಬಿಜೆಪಿ ನಡುವಣ ಘರ್ಷಣೆಗೆ ಕಾರಣವಾಗಿತ್ತು.

ಆಪ್ ಸರ್ಕಾರವು ರಾಷ್ಟ್ರ ರಾಜಧಾನಿಯಲ್ಲಿ ಯೋಜನೆಯ ಅನುಷ್ಠಾನ ಮಾಡಲು ನಿರಾಕರಿಸುವ ಮೂಲಕ ಜನರನ್ನು ಅದರ ಲಾಭದಿಂದ ವಂಚಿತರನ್ನಾಗಿ ಮಾಡಿದ್ದಾರೆ ಎಂದು ದೆಹಲಿ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ ನಿರಂತರವಾಗಿ ಟೀಕಿಸುತ್ತಾ ಬಂದಿದ್ದರು.

ಸರ್ಕಾರವು ಆಯುಷ್ಮಾನ್ ಭಾರತ ಯೋಜನೆಯನ್ನು ಜಾರಿಗೊಳಿಸುವುದಿಲ್ಲ ಎಂದು ದೆಹಲಿಯ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಕಳೆದ ವರ್ಷ ಹೇಳಿದ್ದರು.

ಏಮ್ಸ್ ಹೊರರೋಗಿ ವಿಭಾಗ ಬಂದ್: ಮಧ್ಯೆ, ಏಮ್ಸ್ ಆಸ್ಪತ್ರೆಯು ವಿಶೇಷ ಸೇವೆಗಳು ಸೇರಿದಂತೆ ಹೊರರೋಗಿ ವಿಭಾಗವನ್ನು (ಒಪಿಡಿ) ಮುಂದಿನ ಆದೇಶದವರೆಗೆ ಮುಚ್ಚುವುದಾಗಿ ಸೋಮವಾರ ಪ್ರಕಟಿಸಿತು.

ಕೋವಿಡ್-೧೯ ಸಾಂಕ್ರಾಮಿಕ ಪಿಡುಗನ್ನು ನಿಯಂತ್ರಿಸುವ ಸಲುವಾಗಿ ನೇರವಾಗಿ ಬಂದು ಹೊರರೋಗಿಯಾಗಿ ಚಿಕಿತ್ಸೆ ಪಡೆಯಲು ಅವಕಾಶವಿದ್ದ ಒಪಿಡಿಯನ್ನು ಮಾರ್ಚ್ ೨೩ರಿಂದ ತಾತ್ಕಾಲಿಕವಾಗಿ ಅಮಾನತುಗೊಳಿಸಲು ಮತ್ತು ತನ್ನ ಸಂಪನ್ಮೂಲವನ್ನು ಕೋವಿಡ್ -೧೯ ಪಿಡುಗು ನಿವಾರಣೆಗಾಗಿ ಬಳಸಿಕೊಳ್ಳಲು ಏಮ್ಸ್ ಆಡಳಿತ ನಿರ್ಧರಿಸಿತು.

ಯಾವುದೇ ಹೊರರೋಗಿಗಳ ನೋಂದಣಿಯನ್ನು ಹೊಸದಾಗಿ ಮಾಡಿಕೊಳ್ಳಲಾಗುವುದಿಲ್ಲ. ಮಾರ್ಚ್ ೨೪ರಿಂದ ಏಮ್ಸ್ ಆಸ್ಪತ್ರೆಯಲ್ಲಿ ಮತ್ತು ಅದರ ಎಲ್ಲ ಕೇಂದ್ರಗಳಲ್ಲಿ ಹೊಸದಾಗಿ ಹೊರರೋಗಿಗಳ ನೋಂದಣಿಯನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ಆಸ್ಪತ್ರೆಯ ಸುತ್ತೋಲೆ ತಿಳಿಸಿತು. ಆಸ್ಪತ್ರೆಯು ಶುಕ್ರವಾರ ಎಲ್ಲ ಅನಗತ್ಯ ಚಿಕಿತ್ಸೆ ಮತ್ತು ಸರ್ಜರಿಗಳನ್ನು ಕೂಡಾ ಮುಂದೂಡುವುದಾಗಿ ಸುತ್ತೋಲೆ ಹೊರಡಿಸಿತ್ತು.

No comments:

Advertisement