Friday, April 3, 2020

೯೬೦ ವಿದೇಶೀ ಜಮಾತ್ ಕಾರ್ಯಕರ್ತರ ವಿರುದ್ಧ ಎಫ್‌ಐಆರ್: ರಾಜ್ಯಗಳಿಗೆ ಕೇಂದ್ರ ಆಜ್ಞೆ

೯೬೦ ವಿದೇಶೀ ಜಮಾತ್ ಕಾರ್ಯಕರ್ತರ ವಿರುದ್ಧ ಎಫ್ಐಆರ್: ರಾಜ್ಯಗಳಿಗೆ ಕೇಂದ್ರ ಆಜ್ಞೆ
ನವದೆಹಲಿ: ಮಾರಕ ಕೊರೋನಾವೈರಸ್ ಹಿನ್ನೆಲೆಯಲ್ಲಿ ವಿಧಿಸಲಾಗಿರುವ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯ ವೇಳೆಯಲ್ಲಿ ಜನರ ಜೀವಗಳನ್ನು ಅಪಾಯಕ್ಕೆ ತಳ್ಳಿದ ೯೬೦ ಮಂದಿ ತಬ್ಲಿಘಿ ಜಮಾತ್ ವಿದೇಶೀ ಕಾರ್ಯಕರ್ತರ ವಿರುದ್ಧ ಪ್ರಥಮ ಮಾಹಿತಿ ವರದಿಗಳನ್ನು (ಎಫ್ ಐಆರ್) ದಾಖಲಿಸುವಂತೆ ಕೇಂದ್ರ ಗೃಹ ಸಚಿವಾಲಯವು ದೆಹಲಿ ಪೊಲೀಸ್ ಕಮೀಷನರ್ ಮತ್ತು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ)  2020 ಏಪ್ರಿಲ್ 03ರ ಶುಕ್ರವಾರ ಆಜ್ಞಾಪಿಸಿತು.

೯೬೦ ವಿದೇಶೀಯರನ್ನು ಕಪ್ಪು ಪಟ್ಟಿಗೆ ಸೇರಿಸಿ ಅವರ ವೀಸಾಗಳನ್ನು ರದ್ದು ಪಡಿಸಲಾಗಿದೆ ಎಂಬ ಮಾಹಿತಿಯನ್ನು ಗೃಹ ಸಚಿವಾಲಯವು ಗುರುವಾರ ರಾತ್ರಿ ರಾಜ್ಯಗಳಿಗೆ ತಿಳಿಸಿತ್ತು.

ವಿದೇಶೀಯರು ಪ್ರವಾಸೀ ವೀಸಾಗಳ ಆಧಾರದಲ್ಲಿ ದೇಶವನ್ನು ಪ್ರವೇಶಿಸಿದ್ದರು. ಆದರೆ ಬಳಿಕ ರಾಷ್ಟ್ರವ್ತಾಪಿ ದಿಗ್ಬಂಧನ ಜಾರಿಯಲ್ಲಿ ಇದ್ದುದರ ಹೊರತಾಗಿಯೂ ನಿಜಾಮುದ್ದೀನ್ ಕೇಂದ್ರ ಕಚೇರಿಯಲ್ಲಿ ತಬ್ಲಿಘಿ ಚಟುವಟಿಕೆಗಳಲ್ಲಿ ನಿರತರಾಗಿದ್ದರು. ತಬ್ಲಿಘಿ ಸಮಾವೇಶವು ದೇಶದಲ್ಲಿ ಕೊರೋನಾವೈರಸ್ ಸೋಂಕು ವ್ಯಾಪಿಸಲು ಕಾರಣವಾಗಿದೆ ಎಂದು ಶಂಕಿಸಲಾಗಿದೆ.

ಮಾರ್ಚ್ ತಿಂಗಳಲ್ಲಿ ನಡೆದ ತಬ್ಲಿಘಿ ಜಮಾತ್ ಸಮಾವೇಶವು ಭಾರತದಾದ್ಯಂತ ನೂರಾರು ಕೋವಿಡ್-೧೯ ಪ್ರಕರಣಗಳಿಗೆ ಕಾರಣವಾಗಿರುವುದು ಬೆಳಕಿಗೆ ಬಂದಿದೆ. ಗುರುವಾರ ಸಂಜೆವರೆಗಿನ ದೆಹಲಿಯ ೨೯೩ ಕೋವಿಡ್ -೧೯ ಪ್ರಕರಣಗಳಲ್ಲಿ ಶೇಕಡಾ ೬೦ರಷ್ಟು ಪ್ರಕರಣಗಳು ಜಮಾತ್ ಸಮಾವೇಶಕ್ಕೆ ಸಂಬಂಧಿಸಿದವೇ ಆಗಿವೆ ಎಂಬುದು ಖಚಿತವಾಗಿದೆ.

ವಿದೇಶೀ ಜಮಾತ್ ಕಾರ್ಯಕರ್ತರ ಚಟುವಟಿಕೆಗಳು ಹಾಲಿ ಕೋವಿಡ್-೧೯ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಹಲವರ ಪ್ರಾಣಗಳನ್ನು ಅಪಾಯಕ್ಕೆ ಒಡ್ಡಿವೆ ಎಂದು ಪತ್ರ ತಿಳಿಸಿದೆ.

ಹಿನ್ನೆಲೆಯಲ್ಲಿ ಚಟುವಟಿಕೆಗಳಲ್ಲಿ ಶಾಮೀಲಾದ  ಎಲ್ಲ ವಿದೇಶೀಯರು ಮತ್ತು ಭಾರತೀಯ ನಾಗರಿಕರ ವಿರುದ್ಧ ವಿದೇಶೀಯರ ಕಾಯ್ದೆ ೧೯೪೬ ಮತ್ತು ವಿಪತ್ತು ನಿರ್ವಹಣಾ ಕಾಯ್ದೆ ೨೦೦೫ರ ಅಡಿಯಲ್ಲಿ ಹೊರಡಿಸಲಾದ ಸ್ಥಾಯೀ ಆದೇಶಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮತ್ತು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸಂಬಂಧಿತ ವಿಧಿಗಳ ಅಡಿಯಲ್ಲಿ ಎಸಗಲಾಗಿರುವ ಅಪರಾಧಗಳಿಗಾಗಿ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಗೃಹ ಸಚಿವಾಲಯದ ಪತ್ರ ಹೇಳಿದೆ.

ಎಫ್ ಐಆರ್ ದಾಖಲಿಸಲು ಕೈಗೊಳ್ಳಲಾಗಿರುವ ನಿರ್ಧಾರವು ಜಮಾತ್ ವಿರುದ್ಧ ಅದರ ನಿರ್ಲಕ್ಷ್ಯ ಧೋರಣೆಗಾಗಿ ಪೂರ್ಣ ಪ್ರಮಾಣದ ಕಾನೂನು ಕ್ರಮ ಕೈಗೊಳ್ಳುವ ಸರ್ಕಾರದ ಸಂಕಲ್ಪವನ್ನು ಪ್ರತಿಫಲಿಸಿದೆ ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಕೊರೋನಾವೈರಸ್ ಹರಡದಂತೆ ತಡೆಯುವ ಸಲುವಾಗಿ ಸರ್ಕಾರವು ಕೈಗಾರಿಕೆಗಳನ್ನು, ಕಚೇರಿಗಳನ್ನು ಮುಚ್ಚುವ ವಿಮಾನಯಾನ ಮತ್ತು ರೈಲುಗಳ ಪಯಣವನ್ನು ಸ್ಥಗಿತಗೊಳಿಸುವುದು ಸೇರಿದಂತೆ ಅಭೂತಪೂರ್ವ ಕ್ರಮಗಳನ್ನು ಕೈಗೊಂಡಿದೆ. ಆದರೆ ಗುಂಪಿನ ಚಟುವಟಿಕೆಗಳು ಇಡೀ ದಿಗ್ಬಂಧನ ಕಸರತ್ತನ್ನೇ ವ್ಯರ್ಥಗೊಳಿಸುವ ಅಪಾಯವನ್ನು ಉಂಟು ಮಾಡಿವೆ ಎಂದು ಅಧಿಕಾರಿ ಹೇಳಿದರು.

ಸಾಮಾನ್ಯ ತಬ್ಲಿಘಿ ಕಾರ್ಯಕರ್ತರು ಕಾನೂನನ್ನು ಪಾಲಿಸಿದರೆ ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಿಸುವ ಇರಾದೆ ಸರ್ಕಾರಕ್ಕೆ ಇಲ್ಲ ಎಂದು ಅವರು ಸ್ಪಷ್ಟ ಪಡಿಸಿದರು.

ತಬ್ಲಿಘಿ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳುವ ಯೋಜನೆಯು ವಿದೇಶೀ ನಾಗರಿಕರಿಗೆ ವೀಸಾ ಸವಲತ್ತು ಒದಗಿಸಿಕೊಟ್ಟ ಮತ್ತು ಅವರ ವಾಸ್ತವ್ಯಕ್ಕೆ ಸಹಕರಿಸಿದ ತಬ್ಲಿಘಿ ಕಾರ್ಯಕರ್ತರನ್ನು ಉದ್ದೇಶಿಸಿದ್ದಾಗಿದೆ ಎಂದು ಅಧಿಕಾರಿ ನುಡಿದರು. ಆದರೆ ಹೆಚ್ಚಿನ ವಿವರಣೆಯನ್ನು ನೀಡಲು ಅವರು ನಿರಾಕರಿಸಿದರು.

ಇದು ತಬ್ಲಿಘಿ ಜಮಾತ್ ನಾಯಕತ್ವಕ್ಕೆ ಸಂಬಂಧಿಸಿದ್ದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ನುಡಿದರು. ದೆಹಲಿ ಪೊಲೀಸರು ಈಗಾಗಲೇ ತಬ್ಲಿಘಿ ನಾಯಕತ್ವದ ವಿರುದ್ಧ ಮರ್ಕಜ್ನಿಂದ ತೆರವುಗೊಳಿಸಲಾದ ಹಲವರಲ್ಲಿ ಕೊರೋನಾವೈರಸ್ ಸೋಂಕು ಕಂಡು ಬಂದ ಹಿನ್ನೆಲೆಯಲ್ಲಿ ಒಂದು ಪ್ರಕರಣ ದಾಖಲಿಸಿದ್ದಾರೆ.

ಎಫ್ ಐಆರ್ ದಾಖಲಿಸುವಂತೆ ಗೃಹ ಸಚಿವಾಲಯವು ನೀಡಿರುವ ಸೂಚನೆಯು ಈಗಾಗಲೇ ದೇಶದಿಂದ ತಮ್ಮ ರಾಷ್ಟ್ರಕ್ಕೆ ತೆರಳಿರುವ ೩೬೦ ಮಂದಿ ತಬ್ಲಿಘಿ ಕಾರ್ಯಕರ್ತರಿಗೆ ಅನ್ವಯಿಸುವುದಿಲ್ಲ,  ಆದರೆ ಅವರನ್ನು ಮತ್ತೆ ದೇಶ ಪ್ರವೇಶಿಸದಂತೆ ತಡೆಯಲು ಕಪ್ಪು ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ.

ಅಪಾಯಕಾರಿ ರೋಗದ ಸೋಂಕು ಹರಡಿಸುವಲ್ಲಿನ ನಿರ್ಲಕ್ಷ್ಯಕ್ಕಾಗಿ ಆರು ತಿಂಗಳವರೆಗೆ ಸೆರೆವಾಸ ವಿಧಿಸಬಹುದಾದ ಮತ್ತು ಅಪಾಯಕಾರಿ ರೋಗ ಹರಡುವಲ್ಲಿನ ಪ್ರಜಾದ್ರೋಹಿ ಕೃತ್ಯಕ್ಕಾಗಿ ಎರಡು ವರ್ಷಗಳ ಸೆರವಾಸ ವಿಧಿಸಬಹುದಾದ ಭಾರತೀಯ ದಂಡ ಸಂಹಿತೆಯ ೨೬೯ ಮತ್ತು ೨೭೦ನೇ ವಿಧಿಗಳ ಅಡಿಯಲ್ಲಿ ಪೊಲೀಸರು ಪ್ರಕರಣಗಳನ್ನು ದಾಖಲಿಸಬಹುದು ಎಂದು ಗೃಹ ಸಚಿವಾಲಯದ ಅಧಿಕಾರಿ ವಿವರಿಸಿದರು.

ಇದಲ್ಲದೆ ವಿದೇಶೀಯರ ಕಾಯ್ದೆ ಮತ್ತು ವಿಪತ್ತು ನಿರ್ವಹಣಾ ಆಯ್ದೆಗಳ ಅಡಿಯಲ್ಲಿಯೂ ವಿದೇಶೀಯರು ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದೂ ಗೃಹ ಸಚಿವಾಲಯದ ಪತ್ರ ಹೇಳಿದೆ.

No comments:

Advertisement