Saturday, April 25, 2020

ಕೇಂದ್ರ ಕೋವಿಡ್ ತಂಡಕ್ಕೆ ದೀದಿ ಸರ್ಕಾರದ ‘ದಿಗ್ಬಂಧನ’

ಕೇಂದ್ರ ಕೋವಿಡ್ ತಂಡಕ್ಕೆ ದೀದಿ ಸರ್ಕಾರದ  ‘ದಿಗ್ಬಂಧನ
ಹೊರ ಹೋಗಬೇಕೆಂದರೆ ಬೇಕಂತೆ ಪೊಲೀಸರ ಅನುಮತಿ
ನವದೆಹಲಿ: ಕೊರೋನಾವೈರಸ್ ಹರಡದಂತೆ ತಡೆಯುವ ನಿಟ್ಟಿನಲ್ಲಿ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ನೆರವಾಗುವ ಸಲುವಾಗಿ ಕಳುಹಿಸಲಾದ ಕೇಂದ್ರದ ತಂಡವು, ತನಗೆ ರಾಜ್ಯ ಸರ್ಕಾರದಿಂದ ಮೂಲಭೂತ ಸಾಗಣೆ ಬೆಂಬಲ ಅಥವಾ ಯಾವುದೇ ಅಗತ್ಯ ಮಾಹಿತಿಗಳು ಲಭಿಸುತ್ತಿಲ್ಲ, ಆದರೂ ಸಾಂಕ್ರಾಮಿಕ ನಿಭಾವಣೆಯಲ್ಲಿನ ತೂತುಗಳು ತನ್ನ ಗಮನಕ್ಕೆ ಬಂದಿವೆ ಎಂದು ಕೇಂದ್ರ ಗೃಹ ಸಚಿವಾಲಯಕ್ಕೆ ತಿಳಿಸಿದೆ.

ರಾಜ್ಯ ಪೊಲೀಸರ ಅನುಮತಿ ಇಲ್ಲದೆ ಅತಿಥಿ ಗೃಹದಿಂದ ಹೊರಕ್ಕೆ ಹೋಗದಂತೆ ತನ್ನ ಭದ್ರತೆಗಾಗಿ ನಿಯೋಜಿಸಲಾಗಿರುವ ಬಿಎಸ್ಎಫ್ ಸಿಬ್ಬಂದಿ ಪ್ರಾರಂಭದಲ್ಲೇ ತಮ್ಮ ತಂಡಕ್ಕೆ ಸೂಚಿಸಿರುವುದಾಗಿ ಹಿರಿಯ ಐಎಎಸ್ ಅಧಿಕಾರಿ ಅಪೂರ್ವ ಚಂದ್ರ ನೇತೃತ್ವದ ಅಂತರ ಸಚಿವಾಲಯ ಕೇಂದ್ರೀಯ ತಂಡವು ಕೇಂದ್ರಕ್ಕೆ ಮಾಹಿತಿ ನೀಡಿದೆ.

ತಂಡವು ಏಪ್ರಿಲ್ ೨೦ರ ಸೋಮವಾರ ಕೋಲ್ಕತಕ್ಕೆ ಬಂದಿಳಿದಿತ್ತು.

ಬಹುಶಃ ಅವರು ಬಿಎಸ್ ಎಫ್ ಅತಿಥಿ ಗೃಹದಲ್ಲೇ ಸಿಕ್ಕಿಹಾಕಿಕೊಂಡಿರುವಂತೆ ಕಾಣುತ್ತದೆ ಮತ್ತು ಕ್ಷೇತ್ರಕ್ಕೆ ಕೇವಲ ಗಂಟೆಗಳ ಕಾಲ ಭೇಟಿ ನೀಡಲು ಸಾಧ್ಯಗಿರುಂತೆ ಕಾಣುತ್ತಿದೆ ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ಗೃಹ ಸಚಿವ ಅಮಿತ್ ಶಾ ಅವರಿಗೆ ವಿಷಯವನ್ನು ವಿವರಿಸಲಾಗಿದ್ದು ಅವರು ರಾಜ್ಯಗಳಿಗೆ ನೆರವಾಗುವ ಕೇಂದ್ರದ ಯತ್ನಕ್ಕೆ ಅಡ್ಡಿ ಪಡಿಸಲಾಗುತ್ತಿರುವ ಬಗ್ಗೆ ಭ್ರಮನಿರಸನಗೊಂಡರು ಎಂದು ವರದಿಗಳು ಹೇಳಿದವು.
ಐದು ದಿನಗಳಿಂದ ಪಶ್ಚಿಮ ಬಂಗಾಳದಲ್ಲಿ ಇರುವ ನಾಗರಿಕ ಅಧಿಕಾರಿಗಳು ಮತ್ತು ಆರೋಗ್ಯ ತಜ್ಞರ ತಂಡದ ಮುಖ್ಯಸ್ಥರಾದ ಅಪೂರ್ವ ಚಂದ್ರ ಅವರು, ತಮಗೆ ಮೂರು ಆಸ್ಪತ್ರೆಗಳು ಮತ್ತು ಒಂದು ಕ್ವಾರಂಟೈನ್ ಕೇಂದ್ರ ಸೇರಿದಂತೆ ಕೇವಲ ಎರಡು ಕ್ಷೇತ್ರ ಭೇಟಿ ಮಾತ್ರ ಸಾಧ್ಯವಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯಕ್ಕೆ ತಿಳಿಸಿದ್ದಾರೆ. 
ಹೌರಾ ಜಿಲ್ಲೆಯ ಉಲುಬೆರಿಯಾ ಉಪ ವಿಭಾಗದ ತಮ್ಮ ಎರಡನೇ ಕ್ಷೇತ್ರ ಭೇಟಿಯಿಂದ ವಾಪಸಾಗುವಾಗ ತಂಡವು ಸಾಲ್ಕಿಯಾ ಕಂಟೈನ್ಮೆಂಟ್ ವಲಯದ ಕಡೆಗೂ ತೆರಳಿತ್ತು.

ಕೋವಿಡ್ -೧೯ರ ವಿರುದ್ಧ ಹೋರಾಡಲು ಏಳು ರಾಜ್ಯಗಳಿಗೆ ನೆರವಾಗುವ ಸಲುವಾಗಿ ಕೇಂದ್ರವು ರಚಿಸಿದ ಹಲವಾರು ತಂಡಗಳಲ್ಲಿ ಅಪೂರ್ವ ಚಂದ್ರ ನೇತೃತ್ವದ ತಂಡವೂ ಒಂದಾಗಿದೆ.

ಅಪೂರ್ವ ಚಂದ್ರ ನೇತೃತ್ವದ ತಂಡವನ್ನು ಬಂಗಾಳಕ್ಕೆ ಭೇಟಿಗಾಗಿ ನಿಯೋಜಿಸಿದ ದಿನವೇ ಕೇಂದ್ರವು ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಿಗೆ ಕೂಡಾ ಕಳುಹಿಸಲು ತಂಡಗಳನ್ನು ನಿಯೋಜಿಸಿತ್ತು. ಶುಕ್ರವಾರ ಅದು ಗುಜರಾತ್, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳಿಗೆ ತೆರಳಲೂ ತಂಡಗಳನ್ನು ರಚಿಸಿತು.

ಆದರೆ ಕೇಂದ್ರ ಸರ್ಕಾರವು ವಿರೋಧ ಪಕ್ಷಗಳ ಆಳ್ವಿಕೆ ಇರುವ ರಾಜ್ಯಗಳಿಗೆ ಮಾತ್ರವೇ ತಂಡಗಳನ್ನು ಕಳುಹಿಸಿದ್ದು, ಇದರಲ್ಲಿ ರಾಜಕೀಯ ಇದೆ ಎಂದು ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಆಪಾದಿಸಿತ್ತು.

No comments:

Advertisement