Monday, April 27, 2020

ರೂಪಾಯಿ ನಷ್ಟವೂ ಇಲ್ಲ: ಚೀನಾದ ಕ್ಷಿಪ್ರ ಪರೀಕ್ಷಾ ಕಿಟ್‌ ಆರ್ಡರ್ ರದ್ದು

ರೂಪಾಯಿ ನಷ್ಟವೂ ಇಲ್ಲ: ಚೀನಾದ ಕ್ಷಿಪ್ರ ಪರೀಕ್ಷಾ ಕಿಟ್‌ ಆರ್ಡರ್ ರದ್ದು
ನವದೆಹಲಿ: ಚೀನಾದ ಎರಡು ಕಂಪೆನಿಗಳಿಂದ ಕ್ಷಿಪ್ರ ಪ್ರತಿಕಾಯ ಪರೀಕ್ಷಾ ಕಿಟ್‌ಗಳಿಗಾಗಿ ನೀಡಲಾಗಿದ್ದ ಆರ್ಡರ್‌ನ್ನು ಗುಣಮಟ್ಟ ವಿವಾದದ ಹಿನ್ನೆಲೆಯಲ್ಲಿ ರದ್ದು ಪಡಿಸಲಾಗಿದೆ ಎಂದು 2020 ಏಪ್ರಿಲ್ 27ರ ಸೋಮವಾರ ಪ್ರಕಟಿಸಿದ ಕೇಂದ್ರ ಸರ್ಕಾರ ಔಷಧ ಸರಬರಾಜಿಗಾಗಿ ಯಾವುದೇ ಹಣ ಪಾವತಿ ಮಾಡಲಾಗಿಲ್ಲ ಎಂದು ತಿಳಿಸಿತು.

ಭಾರತವು ಕಿಟ್‌ಗಳಿಗೆ ದುಪ್ಪಟ್ಟು ದರವನ್ನು ತೆರುತ್ತಿದೆ ಎಂಬುದನ್ನು ದೆಹಲಿ ಹೈಕೋರ್ಟ್ ನೀಡಿದ ಆದೇಶವೊಂದು ಬಹಿರಂಗಗೊಳಿಸಿದ ಹಿನ್ನೆಲೆಯಲ್ಲಿ ವಿವಾದ ಉದ್ಭವಿಸುತ್ತಿದ ಒಂದು ದಿನದ ಬಳಿಕ ಸರ್ಕಾರ ಕ್ರಮ ಕೈಗೊಂಡಿದೆ.

ಚೀನಾದ ಗುವಾಂಗ್‌ಝೊವು ವೊಂಡ್ಫೋ ಬಯೋಟೆಕ್ ಮತ್ತು ಝುಹಾಯಿ ಲಿವ್ ಝೋನ್ ಡಯಾಗ್ನಾಸ್ಟಿಕ್ - ಎರಡು ಕಂಪೆನಿಗಳು ಕ್ಷಿಪ್ರ ಪರೀಕ್ಷಾ ಕಿಟ್‌ಗಳನ್ನು ತಯಾರಿಸಿದ್ದು, ಅವು ಸಮರ್ಪಕವಾಗಿ ಕಾರ್‍ಯ ನಿರ್ವಹಿಸುತ್ತಿಲ್ಲ ಎಂಬುದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಪತ್ತೆ ಹಚ್ಚಿತ್ತು ಎಂದು ಸರ್ಕಾರ ತಿಳಿಸಿದೆ.

ಸೂಕ್ತ ಪ್ರಕ್ರಿಯೆಯನ್ನು ಅನುಸರಿಸಿದ್ದರಿಂದ (ಹಣ ಪಾವತಿ ಮಾಡದೇ ಇರುವುದರಿಂದ) ಸರ್ಕಾರಕ್ಕೆ ಒಂದು ರೂಪಾಯಿ ಕೂಡಾ ನಷ್ಟವಾಗಿಲ್ಲ ಎಂದು ಐಸಿಎಂಆರ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಸಾಧನವು ತಪ್ಪು ಫಲಿತಾಂಶಗಳನ್ನು ತೋರಿಸಿದ್ದರಿಂದ ಪರೀಕ್ಷಾ ಕಿಟ್‌ಗಳನ್ನು ಬಳಸಬೇಡಿ ಎಂಬುದಾಗಿ ಐಎಸಿಎಂಆರ್ ಎಲ್ಲ ರಾಜ್ಯಗಳಿಗೂ ಈಗಾಗಲೇ ಸೂಚನೆ ಕೂಡಾ ನೀಡಿದೆ.

ಸರ್ಕಾರವು ಮಾರ್ಚ್ ೨೭ರಂದು ಐಸಿಎಂಆರ್ ಮೂಲಕ ಚೀನಾದ ವೊಂಡ್ಫೋ ಸಂಸ್ಥೆಗೆ ಲಕ್ಷ ಕ್ಪಿಪ್ರ ಪ್ರತಿಕಾಯ ಪರೀಕ್ಷಾ ಕಿಟ್‌ಗಳಿಗಾಗಿ ಆರ್ಡರ್ ನೀಡಿತ್ತು. ಖರೀದಿ ಆದೇಶಕ್ಕೆ ಐಸಿಎಂಆರ್ ಮತ್ತು ಅರ್ಕ ಫಾರ್ಮಾಸ್ಯೂಟಿಕಲ್ ಸಹಿ ಮಾಡಿದ್ದವು.

ಪರೀಕ್ಷಾ ಕಿಟ್‌ಗಳನ್ನು ಆಮದು ಸಂಸ್ಥೆ ಮ್ಯಾಟ್ರಿಕ್ ಮುಲಕ ಚೀನಾದಿಂದ ಭಾರತಕ್ಕೆ ತರಲಾಗಿತ್ತು. ರಿಯಲ್ ಮೆಟಾಬೋಲಿಕ್ಸ್ ಮತ್ತು ಅರ್ಕ ಫಾಮ್ಯಾಸ್ಯೂಟಿಕಲ್ಸ್ ಇದೇ ಕಿಟ್ ಗಳನ್ನು ತಲಾ ೬೦೦ ರೂಪಾಯಿಯಂತೆ ಅಂದರೆ ಶೇಕಡಾ ೬೦ರಷ್ಟು ಹೆಚ್ಚಿನ ದರದಲ್ಲಿ ಸರ್ಕಾರಕ್ಕೆ ಮಾರಿದ್ದವು.

ಕಾನೂನಿನ ವಿವಾದ ಹೈಕೋರ್ಟಿಗೆ ಮುಟ್ಟಿದಾಗ ಕಿಟ್ ಗಳಿಗೆ ಯದ್ವಾತದ್ವ ದರ ವಿಧಿಸಿದ್ದು ಬೆಳಕಿಗೆ ಬಂದಿತ್ತು. ಹೈಕೋರ್ಟ್ ಕಿಟ್ ಗಳಿಗೆ ತಲಾ ೪೦೦ ರೂಪಾಯಿಗಳ ಮಿತಿಯನ್ನು ವಿಧಿಸಿತು.

ಆದಾಗ್ಯೂ, ಕಿಟ್‌ಗಳಿಗೆ ಜಾಗತಿಕವಾಗಿ ಭಾರೀ ಬೇಡಿಕೆ ಇರುವ ಕಾರಣ ದಾಸ್ತಾನು ಮಾಡುವ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ಸರ್ಕಾರ ಹೇಳಿತ್ತು.

ಭಾರತಕ್ಕೆ ವಿಶೇಷ ವಿತರಕ ಸಂಸ್ಥೆಯಾಗಿರುವ ವೊಂಡ್ಫೋ ಮೂಲಕ ಪರೀಕ್ಷಾ ಕಿಟ್ ಖರೀದಿಸುವ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ಸರ್ಕಾರ ತಿಳಿಸಿತ್ತು. ಯಾವುದೇ ಮುಂಗಡ ಹಣವನ್ನೂ ಕೇಳದೆ, ಎಲ್ಲ ವೆಚ್ಚಗಳನ್ನು ಒಳಗೊಂಡು ದರವನ್ನು ನಿಗದಿ ಪಡಿಸಿದ್ದರಿಂದ ನಿರ್ಧಾರ ಕೈಗೊಳ್ಳಲಾಗಿತ್ತು. ಚೀನಾದಿಂದ ನೇರ ಖರೀದಿಸುವುದಾಗಿದ್ದಲ್ಲಿ ಗುಣಮಟ್ಟದ ಯಾವುದೇ ಖಾತರಿ, ಯಾವುದೇ ಪೂರೈಕೆ ಕಾಲಮಿತಿಯ ಬದ್ಧತೆಯೂ ಇಲ್ಲದೇ ಶೇಕಡಾ ೧೦೦ರಷ್ಟು ಹಣವನ್ನು ಅಮೆರಿಕನ್ ಡಾಲರುಗಳಲ್ಲಿ ಮುಂಗಡಪಾವತಿ ಮಾಡಬೇಕಾಗಿತ್ತು ಎಂದು ಸರ್ಕಾರ ವಿವರಿಸಿತ್ತು.

ಯಾವುದೇ ಭಾರತೀಯ ಸಂಸ್ಥೆಯು ಇಂತಹ ಕಿಟ್ ಗಳನ್ನು ಖರೀದಿಸುತ್ತಿರುವ ಮೊದಲ ಪ್ರಯತ್ನ ಇದು ಮತ್ತು ಸೂಚಿಸಲಾದ ದರ ಕೇವಲ ಉಲ್ಲೇಖವಾಗಿತ್ತು ಎಂಬುದನ್ನೂ ಗಮನಿಸುವ ಅಗತ್ಯವಿದೆ ಎಂದು ಹೇಳಿಕೆ ತಿಳಿಸಿದೆ.

No comments:

Advertisement