Wednesday, April 8, 2020

ಕೋವಿಡ್ ಪರೀಕ್ಷೆಗಳಿಗೆ ಶುಲ್ಕ ನಿಷೇಧ: ಖಾಸಗಿ ಲ್ಯಾಬ್‌ಗಳಿಗೆ ಸುಪ್ರೀಂ ಆದೇಶ

ಕೋವಿಡ್ ಪರೀಕ್ಷೆಗಳಿಗೆ ಶುಲ್ಕ ನಿಷೇಧ:
ಖಾಸಗಿ ಲ್ಯಾಬ್ಗಳಿಗೆ ಸುಪ್ರೀಂ ಆದೇಶ
ನವದೆಹಲಿ: ಕೊರೋನಾವೈರಸ್ ಸೋಂಕಿಗೆ ಸಂಬಂಧಿಸಿದಂತೆ ರೋಗಿಗಳ ಮೇಲೆ ನಡೆಸುವ ಪರೀಕ್ಷೆಗಳಿಗೆ ಶುಲ್ಕ ವಿಧಿಸದಂತೆ ಸುಪ್ರೀಂಕೋರ್ಟ್ 2020 ಏಪ್ರಿಲ್ 8ರ ಬುಧವಾರ  ಖಾಸಗಿ ಪ್ರಯೋಗಾಲಯಗಳ ಮೇಲೆ ನಿಷೇಧ ಹೇರಿತು. ಪರೀಕ್ಷೆಗಳಿಗಾಗಿ ರೋಗಿಗಳ ಮೇಲೆ ಶುಲ್ಕ ವಿಧಿಸಬಾರದು ಎಂಬ ಬಗ್ಗೆ ತಮಗೆ ಮನವರಿಕೆಯಾಗಿದೆ ಎಂದು ತಿಳಿಸಿದ ನ್ಯಾಯಮೂರ್ತಿಗಳು ಹಣವನ್ನು ಸರ್ಕಾರದಿಂದ ಮರುಪಾವತಿ ಪಡೆಯಬಹುದೇ ಎಂಬ ಬಗ್ಗೆ ತಾವು ಮುಂದಕ್ಕೆ ನಿರ್ಧರಿಸುವುದಾಗಿ ಹೇಳಿದರು.

ರಾಷ್ಟ್ರವು ಬಿಕ್ಕಟ್ಟನ್ನು ಎದುರಿಸುತ್ತಿರುವ ಘಳಿಗೆಯಲ್ಲಿ ಉದಾರ ಸೇವೆ ಒದಗಿಸುವ ಮೂಲಕ ಸಾಂಕ್ರಾಮಿಕ ಪಿಡುಗು ಹರಡದಂತೆ ತಡೆಯುವಲ್ಲಿ ಪ್ರಯೋಗಾಲಯಗಳು (ಲ್ಯಾಬೋರೇಟರಿಗಳು) ಸೇರಿದಂತೆ ಖಾಸಗಿ ಆಸ್ಪತ್ರೆಗಳು ಮಹತ್ವದ ಪಾತ್ರ ವಹಿಸಬೇಕಾಗಿದೆ. ಹೀಗಾಗಿ ಉಚಿತವಾಗಿ ಕೋವಿಡ್-೧೯ ಪರೀಕ್ಷೆಗಳನ್ನು ನಡೆಸುವಂತೆ ಮಾನ್ಯತೆ ಪಡೆದ ಖಾಸಗಿ ಪ್ರಯೋಗಾಲಯಗಳಿಗೆ ಅಗತ್ಯ ನಿರ್ದೇಶನ ನೀಡಬೇಕೆಂಬ ಅರ್ಜಿದಾರರ ಮನವಿಯಲ್ಲಿ ಹುರುಳಿದೆ ಎಂದು ನ್ಯಾಯಮೂರ್ತಿಗಳಾದ ಅಶೋಕ ಭೂಷಣ್ ಮತ್ತು ಎಸ್ ರವೀಂದ್ರ ಭಟ್ ಅವರನ್ನು ಒಳಗೊಂಡ ಪೀಠ ಹೇಳಿತು.

ಕೋವಿಡ್-೧೯ನ್ನು ದೃಢಪಡಿಸುವ ಪರೀಕ್ಷೆ ಮತ್ತು ಸ್ಕ್ರೀನಿಂಗ್ ಗೆ ,೫೦೦ ರೂಪಾಯಿ ಶುಲ್ಕ ವಿಧಿಸಲು ಖಾಸಗಿ ಪ್ರಯೋಗಾಲಯಗಳಿಗೆ ಅನುಮತಿ ನೀಡುವುದು ದೇಶದ ಹೆಚ್ಚಿನ ಜನರ ಪಾಲಿಗೆ ಹೊರೆಯಾಗುತ್ತದೆ. ಪರೀಕ್ಷೆಗಾಗಿ ಶುಲ್ಕ ಪಾವತಿ ಮಾಡಲು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ಯಾವ ವ್ಯಕ್ತಿ ಕೂಡಾ ಪರೀಕ್ಷಾ ಅವಕಾಶದಿಂದ ವಂಚಿತನಾಗಬಾರದು ಎಂದು ಪೀಠ ಹೇಳಿತು.

ಅರ್ಜಿದಾರ ವಕೀಲ ಶಶಾಂಕ ದೇವ್ ಸುಧಿ ಅವರ ಅರ್ಜಿಯನ್ನು ಆಲಿಸುವ ಬಗ್ಗೆ ನ್ಯಾಯಮೂರ್ತಿಗಳು ಬೆಳಗ್ಗೆಯೇ ಒಲವು ವ್ಯಕ್ತ ಪಡಿಸಿದ್ದರು. ಸರ್ಕಾರಿ ಆಸ್ಪತ್ರೆಗಳು ಕಿಕ್ಕಿರಿದಿರುವುದರಿಂದ ಸಾಮಾನ್ಯರಿಗೆ ಸರ್ಕಾರಿ ಪ್ರಯೋಗಾಲಯಗಳಿಗೆ ಪರೀಕ್ಷೆಗಾಗಿ ಹೋಗುವುದು ಕಷ್ಟಕರವಾಗಿದೆ ಎಂದು ಅರ್ಜಿದಾರರು ಹೇಳಿದ್ದರು.

ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ಸವಲತ್ತುಗಳ ಅಭಾವದ ಪರಿಣಾಮವಾಗಿ ಖಾಸಗಿ ಪ್ರಯೋಗಾಲಯಗಳು ಭಾರತದಲಿ ಕೋವಿಡ್ -೧೯ ಪರೀಕ್ಷೆಗಳನ್ನು ನಡೆಸುತ್ತಿದ್ದವು.

ಖಾಸಗಿ ಪ್ರಯೋಗಾಲಯಗಳಿಗೆ ಪರೀಕ್ಷೆಗಳನ್ನು ನಡೆಸಲು ಅನುಮತಿ ನೀಡುವಾಗ ಉಚಿತವಾಗಿ ಪರೀಕ್ಷೆಗಳನ್ನು ನಡೆಸುವಂತೆ ಸರ್ಕಾರ ಮನವಿ ಮಾಡಿತ್ತು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಇದಕ್ಕೆ ಮುನ್ನ ತಿಳಿಸಿತ್ತು.

No comments:

Advertisement