My Blog List

Friday, May 8, 2020

ತಾತ್ಕಾಲಿಕ ಪರಿಹಾರ ೫೦ ಕೋಟಿ ರೂ ಕಟ್ಟಿ: ಎಲ್ ಜಿ ಪಾಲಿಮರ್ಸ್‌ಗೆ ಎನ್‌ಜಿಟಿ ಆದೇಶ

ತಾತ್ಕಾಲಿಕ ಪರಿಹಾರ ೫೦ ಕೋಟಿ ರೂ ಕಟ್ಟಿ:  ಎಲ್ ಜಿ ಪಾಲಿಮರ್ಸ್ಗೆ ಎನ್ಜಿಟಿ ಆದೇಶ
ನವದೆಹಲಿ: ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಶುಕ್ರವಾರ ಸಂಭವಿಸಿದ ವಿಷಾನಿಲ ಸೋರಿಕೆ ಪ್ರಕರಣದ ಹಿನ್ನೆಲೆಯಲ್ಲಿ ೫೦ ಕೋಟಿ ರೂಪಾಯಿಗಳ ಮಧ್ಯಂತರ ಪರಿಹಾರ ನೀಡುವಂತೆ ಎಲ್ಜಿ ಪಾಲಿಮರ್ಸ್ ಇಂಡಿಯಾ ಕಂಪೆನಿಗೆ  2020 ಮೇ 08ರ ಶುಕ್ರವಾರ  ಆದೇಶ ನೀಡಿದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್ಜಿಟಿ) ಕೇಂದ್ರ ಮತ್ತು ಇತರರಿಗೆ ನೋಟಿಸ್ ಜಾರಿ ಮಾಡಿತು.

ಎನ್ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಆದರ್ಶ ಕುಮಾರ್ ಗೋಯೆಲ್ ನೇತೃತ್ವದ ಪೀಠವು ೧೧ ಮಂದಿಯ ಸಾವು ಮತ್ತು ಸುಮಾರು ೧೦೦೦ ಮಂದಿ ಅಸ್ವಸ್ಥಗೊಳ್ಳುವಂತೆ ಮಾಡಿದ ಗುರುವಾರದ ರಾಸಾಯನಿಕ ಕಾರ್ಖಾನೆಯಲ್ಲಿನ ಅನಿಲ ಸೋರಿಕೆ ಪ್ರಕರಣದ ತನಿಖೆಗೆ ಸದಸ್ಯರ ಸಮಿತಿಯೊಂದನ್ನೂ ರಚನೆ ಮಾಡಿತು.

ನಿಯಮಾವಳಿಗಳು ಮತ್ತು ಸ್ಥಾಯೀ ವಿಧಿಗಳನ್ನು ಪಾಲಿಸುವಲ್ಲಿ ವೈಫಲ್ಯ ಸಂಭವಿಸಿರುವಂತೆ ಕಾಣುತ್ತಿದೆ ಎಂದು ನ್ಯಾಯಮಂಡಳಿ ಹೇಳಿತು.

ಪ್ರಾಣ, ಸಾರ್ವಜನಿಕ ಆರೋಗ್ಯ ಮತ್ತು ಪರಿಸರಕ್ಕೆ ಆಗಿರುವ ಹಾನಿ ಮೇಲ್ನೋಟಕ್ಕೇ ಕಂಡು ಬರುತ್ತಿದ್ದು, ೫೦ ಕೋಟಿ ರೂಪಾಯಿಗಳ ಪ್ರಾಥಮಿಕ ಮೊತ್ತವನ್ನು ತತ್ ಕ್ಷಣವೇ ಠೇವಣಿ ಇಡುವಂತೆ ನಾವು ಎಲ್ ಜಿ ಪಾಲಿಮರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ಗೆ ಆದೇಶ ನೀಡುತ್ತಿದ್ದೇವೆ. ಹಣವನ್ನು ವಿಶಾಖಪಟ್ಟಣ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಗೆ ಪಾವತಿ ಮಾಡಬೇಕು, ಜಿಲ್ಲಾ ಮ್ಯಾಜಿಸ್ಟ್ರೇಟರು ನಿಟ್ಟಿನಲ್ಲಿ ನ್ಯಾಯಮಂಡಳಿ ನೀಡುವ ಮುಂದಿನ ಆದೇಶವನ್ನು ಪಾಲಿಸಬೇಕು ಎಂದು ಪೀಠ ಆಜ್ಞಾಪಿಸಿತು.

 ಕಂಪೆನಿಯ ಆರ್ಥಿಕ ಸ್ಥಿತಿ ಮತ್ತು ಆಗಿರುವ ಹಾನಿಯ ಪ್ರಮಾಣಕ್ಕೆ ಅನುಗುಣವಾಗಿ ಮೊತ್ತವನ್ನು ನಿಗದಿ ಪಡಿಸಲಾಗುತ್ತದೆ ಎಂದು ಪೀಠ ತಿಳಿಸಿತು.

ಪರಿಸರ ಮತ್ತು ಅರಣ್ಯ ಸಚಿವಾಲಯ, ಎಲ್ಜಿ ಪಾಲಿಮರ್ಸ್ ಇಂಡಿಯಾ, ಆಂಧ್ರ ಪ್ರದೇಶ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಕೇಂದ್ರೀಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ವಿಶಾಖಪಟ್ಟಣ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಗೂ ನೋಟಿಸ್ಗಳನ್ನು ಜಾರಿ ಮಾಡಿದ ಪೀಠ ಮುಂದಿನ ವಿಚಾರಣಾ ದಿನಾಂಕ ಮೇ ೧೮ಕ್ಕೆ ಮುನ್ನ ಉತ್ತರ ಸಲ್ಲಿಸಲು ಸೂಚಿಸಿತು.

ಘಟನೆಯ ತನಿಖೆಗಾಗಿ ಆಂದ್ರ ಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿ ಬಿ ಶೇಷಾಯನ ರೆಡ್ಡಿ, ವಿ. ಆಂಧ್ರ ವಿಶ್ವ ವಿದ್ಯಾಲಯದ ಮಾಜಿ ಉಪಕುಲಪತಿ ವಿ. ರಾಮಚಂದ್ರ ಮೂರ್ತಿ, ಆಂದ್ರ ವಿಶ್ವವಿದ್ಯಾಲಯದ ಕೆಮಿಕಲ್ ಎಂಜಿನಿಯರಿಂಗ್ ಇಲಾಖೆಯ ಮುಖ್ಯಸ್ಥ ಪ್ರೊ. ಪುಲಿಪಾಟಿ ಕಿಂಗ್, ಸಿಪಿಸಿಬಿ ಸದಸ್ಯ ಕಾರ್ಯದರ್ಶಿ, ಸಿಎಸ್ ಐಆರ್- ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ ನಿದೇಶಕ ಮತ್ತು ವಿಶಾಖಪಟ್ಟಣದ ನೀರಿ (ಎನ್ ಇಇಆರ್ ) ಮುಖ್ಯಸ್ಥರನ್ನು ಒಳಗೊಂಡ ಸಮಿತಿಯನ್ನು ಪೀಠ ರಚಿಸಿತು.

ಸಮಿತಿಗೆ ವಸ್ತುಸ್ಥಿತಿ ಪರಿಶೀಲನೆ ಮತ್ತು ವರದಿ ತಯಾರಿಸುವ ನಿಟ್ಟಿನಲ್ಲಿ ಸಾಗಣೆ ಮತ್ತಿತರ ಅಗತ್ಯ ಬೆಂಬಲ ಒದಗಿಸುವಂತೆ ಎನ್ಜಿಟಿಯು ವಿಶಾಖಪಟ್ಟಣದ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ನಿರ್ದೇಶಿಸಿತು.

ಸಮಿತಿಯು ಸ್ಥಳ ಪರಿಶೀಲನೆ ನಡೆಸಿ ಆದಷ್ಟೂ ಬೇಗ, ಮೇ ೧೮ರ ಒಳಗಾಗಿ -ಮೇಲ್ ಮೂಲಕ ವರದಿ ಸಲ್ಲಿಸಬೇಕು. ಸ್ಥಳೀಯವಾಗಿ ಲಭ್ಯರಿರುವ ಸದಸ್ಯರು ಸ್ಥಳಕ್ಕೆ ಭೇಟಿ ನೀಡಬಹುದು ಎಂದು ಎನ್ಜಿಟಿ ತಿಳಿಸಿತು.

ಘಟನಾವಳಿಗಳು, ವೈಫಲ್ಯದ ಕಾರಣಗಳು ಮತ್ತು ಘಟನೆಗೆ ಕಾರಣರಾದ ವ್ಯಕ್ತಿಗಳು ಮತ್ತು ಅಧಿಕಾರಿಗಳು, ಜೀವಹಾನಿ ಮತ್ತು ಇತರ ಹಾನಿಗಳ ಪ್ರಮಾಣ ಕುರಿತು ಸಮಿತಿ ವರದಿ ಸಲ್ಲಿಸಬೇಕು ಎಂದು ಪೀಠ ಹೇಳಿತು.

ನಿಯಮಾವಳಿಗಳಲ್ಲಿ ಸೂಚಿಸಿರುವ ಪ್ರಕಾರ ಸ್ಟೈರೀನ್ ಅನಿಲವು ಅಪಾಯಕಾರಿ ರಾಸಾಯನಿಕವಾಗಿದೆ ಮತ್ತು ರಾಸಾಯನಿಕ ಬಳಸುವ ಜಾಗ ಮತ್ತು ಆಸುಪಾಸಿನಲ್ಲಿ ತುರ್ತು ಸ್ಥಿತಿ ನಿಭಾವಣೆ ಹಾಗೂ ಹಾನಿ ತಡೆ ಖಾತರಿಗಾಗಿ ತುರ್ತುಯೋಜನೆಯನ್ನು ರೂಪಿಸಿರಬೇಕು ಎಂದು ಎನ್ಜಿಟಿ ಹೇಳಿತು.

ನಿಯಮಗಳು ಮತ್ತು ಇತರ ಸ್ಥಾಯೀ ವಿಧಿಗಳ ಅನುಸರಣೆಯಲ್ಲಿ ವೈಫಲ್ಯವಾಗಿರುವಂತೆ ಕಾಣುತ್ತದೆ. ಸಾರ್ವಜನಿಕ ಆರೋಗ್ಯ ಮತ್ತು ಪರಿಸರಕ್ಕೆ ಇಷ್ಟೊಂದು ಪ್ರಮಾಣದಲ್ಲಿ ಪ್ರತಿಕೂಲ ಪರಿಣಾಮ ಬೀರುವ ಮಟ್ಟದಲ್ಲಿ ಅಪಾಯಕಾರಿ ಅನಿಲದ ಸೋರಿಕೆಯಾಗಿರುವುದು ಅಪಾಯಕಾರಿ ಉದ್ಯಮದಲ್ಲಿ ತೊಡಗಿರುವ ಉದ್ಯಮದ ಕಟ್ಟುನಿಟ್ಟಾದ ಹೊಣೆಗಾರಿಕೆ ಬಗ್ಗೆ ಗಮನ ಸೆಳೆಯುತ್ತದೆ. ಇಂತಹ ಸಂಸ್ಥೆಯು ಪರಿಸರ, ಕಾನೂನು ಇತರ ಸ್ಥಾಯೀ ವಿಧಿಗಳಿಗೆ ಆಗಿರುವ ಹಾನಿಯ ಪುನಃಸ್ಥಾಪನೆಗೆ ಸಂಪೂರ್ಣ ಹೊಣೆಯಾಗುತ್ತದೆ ಎಂದು ಪೀಠ ಹೇಳಿತು.

ಇಂತಹ ಚಟುವಟಿಕೆಗಳನ್ನು ನಿಯಂತ್ರಿಸುವ ಸ್ಥಾಯೀ ಪ್ರಾಧಿಕಾರಗಳನ್ನು ಕೂಡಾ ಅವುಗಳ ಲೋಪದೋಷಗಳಿಗಾಗಿ ಹೊಣೆ ಮಾಡಬಹುದು ಎಂದು ಎನ್ಜಿಟಿ ಹೇಳಿತು.

ವಿಶಾಖಪಟ್ಟಣದ ಆರ್. ಆರ್. ವೆಂಕಟಪುರಂನ ದಕ್ಷಿಣ ಕೊರಿಯಾ ಮಾಲಕತ್ವದ ಎಲ್ ಜಿ ಪಾಲಿಮರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪೆನಿಯ ರಾಸಾಯನಿಕ ಘಟಕದಲ್ಲಿ ಮೇ ೭ರಂದು ಸಂಭವಿಸಿದ ಅಪಾಯಕಾರಿ ಸ್ಟೈರೇನ್ ವಿಷಾನಿಲ ಸೋರಿಕೆ ಕುರಿತ ಮಾಧ್ಯಮ ವರದಿಗಳ ಆಧಾರದಲ್ಲಿ ಪೀಠವು ಸ್ವ ಇಚ್ಛೆಯಿಂದ ವಿಷಯವನ್ನು ವಿಚಾರಣೆಗೆ ಎತ್ತಿಕೊಂಡಿತ್ತು.

ಬೆಳ್ಳಂಬೆಳಗ್ಗೆ ಪಾಲಿಮರ್ಸ್ ಘಟಕದಲ್ಲಿ ಸಂಭವಿಸಿದ ವಿಷಾನಿಲ ಸೋರಿಕೆಯಿಂದ ಐದು ಕಿಮೀ ವ್ಯಾಪ್ತಿಯ ಕಾಲೋನಿಗಳು ಮತ್ತು ಗ್ರಾಮಗಳಲ್ಲಿ ದುಷ್ಪರಿಣಾಮಗಳಾಗಿ ಹಲವರು ಉಸಿರು ಕಟ್ಟುವಿಕೆ, ಕಣ್ಣುರಿ ಮತ್ತಿತರ ಆರೋಗ್ಯ ಸಮಸ್ಯೆಗಳಿಗೆ ಈಡಾಗಿದ್ದರು ಮತ್ತು ಹಲವರು ಸಾವನ್ನಪ್ಪಿದ್ದರು.

ಕಂಪೆನಿಯ ಪುನಾರಂಭಕ್ಕಾಗಿ ಯಂತ್ರಗಳನ್ನು ಪರಿಶೀಲಿಸುತ್ತಿದ್ದ ಕಂಪೆನಿಯ ಸಿಬ್ಬಂದಿ ಸೋರಿಕೆಯನ್ನು ಗಮನಿಸಿ ಅಪಾಯದ ಸೈರನ್ ಮೊಳಗಿಸಿದ್ದರು.

ನಸುಕಿನ .೩೦ರ ಸುಮಾರಿಗೆ ಸ್ಟೈರೀನ್ ಅನಿಲ ಸೋರಿಕೆಯ ಕೆಲವು ಗಂಟೆಗಳ ಬಳಿಕ ಹಲವರು ರಸ್ತೆಗಳಲ್ಲಿ ಇಲ್ಲವೇ ಪುಟ್ಪಾತ್ಗಳಲ್ಲಿ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದರು.

No comments:

Advertisement