Sunday, May 3, 2020

ಅಯ್ಯೊ ಜೀವವೇ.. ಜೀವನವೇ..

ಅಯ್ಯೊ ಜೀವವೇ.. ಜೀವನವೇ..
(ಇದು ಸುವರ್ಣ ನೋಟ)
ಗಂಟುಮೂಟೆಗಳಲ್ಲಿ ಜೀವನ, ಅಂಗೈಯಲ್ಲಿ ಜೀವ ಕಟ್ಕೊಂಡು, ಊರಿಗೆ ಹೋಗುವ ದಾರಿಯಲ್ಲಿದ್ದಾರೆ ವಲಸೆ ಕಾರ್ಮಿಕರು.
ಉದ್ದಾನುದ್ದ ಹೆಬ್ಬಾವಿನಂತೆ ಮಲಗಿರುವ ರಸ್ತೆಗಳು, ಮೇಲ್ಸೇತುವೆಗಳು ಸದ್ಯಕ್ಕೆ ಕಾಲು ಚಾಚಿ ಕೂರಲಷ್ಟೇ ಅನುಕೂಲ ಮಾಡಿಕೊಡುವಂತಿವೆ..
ಅಮ್ಮನೆದೆಗಾನಿ ಮಲಗಿರುವ ಎಳೆಮಗುವಿಗೆ ಯಾವ ಪರಿವೆಯೂ ಇಲ್ಲ. ಹಾಲು ಹೀರಿದರೂ ಬರುತ್ತಿಲ್ವಲ್ಲ ಅನ್ನುವ ಹಟ. ಉಣ್ಣದೆ ಹಾಲುಣಿಸುವುದು ಹೇಗೆ? ಅಸಹಾಯಕತನದ ದೃಷ್ಟಿ ಅಮ್ಮನ ಕಣ್ಣಲ್ಲಿ.
 ಸಿಮೆಂಟಿನ ಚೀಲದಲ್ಲಿ ಬಟ್ಟೆಗಳು... ಕುಂಚಿಗೆ ಕುಲಾವಿ ಕಟ್ಟಿಕೊಂಡ ಮಕ್ಕಳು, ಊರಿಗೆ ಹೋಗಬೇಕೆನ್ನುವ ನಿರೀಕ್ಷೆ, ಬಸ್ಸಿನ ವ್ಯವಸ್ಥೆ ಆಗದ ನಿರಾಸೆ... ಅದೆಷ್ಟು ನೋಟಗಳು... ಜೀವನವಿಲ್ಲಿ ದುಬಾರಿ.. ಜೀವವೇ ಅಗ್ಗ ಎಂಬಂತೆ!!
 ಹಸಿವಾದರೂ ಏನೂ ದೊರೆಯದು, ಅಮ್ಮ ತಾರಳು, ಅಪ್ಪನಿಗೆ ಸಿಗದು ಎಂಬುದು ಗೊತ್ತಿರುವಂತೆ ಆಡುವುದು ಮರೆತು, ಹಾಡುವುದೂ ಮರೆತು, ಬೆನ್ನಿಗಂಟಿಸಿಕೊಂಡಿರುವ ಹೊಟ್ಟೆಗೆ ಇವರ ಪರಿಸ್ಥಿತಿಯ ಅರಿವಿಲ್ಲ. ಹೊತ್ತು ಹೊತ್ತಿಗೆ ತಾಳ ಹಾಕುವುದು ಅದು ಬಿಟ್ಟಿಲ್ಲ..
ಬೆಂಗಳೂರಿನಲ್ಲಿ ಕಣ್ಮರೆಯಾಗಿರುವ ಗಿಜಿ ಗಿಜಿ ಜೀವನ ಮರೆತು ಮತ್ತೆ ತಮ್ಮೂರಿನ ಮೊರೆ ಹೊಗಲು ಹೊರಟಿದ್ದಾರೆ ಈ ಮಂದಿ.
ಎಲ್ಲರನ್ನೂ ಕರೆಕರೆದು ಜಾಗ ಕೊಟ್ಟು ನೇವರಿಸಿದ ಬೆಂಗಳೂರು ಇದೀಗ ಅವರಿಗೆ ಪರವೂರಾಗಿದೆ. 
ಮನೆಯೆಂದುಕೊಂಡಿದ್ದ ಜೋಪಡಿಗಳನ್ನು ಬಿಡುವ ಮುನ್ನವೂ ಬಡಿದುಕೊಂಡಿರುವ ರೊಟ್ಟಿ, ಪಲ್ಯೆಗಳು ಹಸಿವು ತಣಿಸುತ್ತಿಲ್ಲ. ಹಂಚಿಕೊಂಡು ತಿಂದರೂ.. ಮುಂದಿನೂಟಕ್ಕೇನು ಎಂಬ ಪ್ರಶ್ನೆ ಹಣೆಗಂಟಿನಲ್ಲಿ.
ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ  ಅವರ ಕ್ಯಾಮರಾದಲ್ಲಿ ಈ ಮಂದಿಯ ಬದುಕಿನ ಬವಣೆ ಮೂಡಿ ಬಂದದ್ದು ಹೀಗೆ.

ಸಮೀಪ ದೃಶ್ಯದ ಅನುಭವಕ್ಕೆ ಫೊಟೋ ಗಳನ್ನು ಕ್ಲಿಕ್ಕಿಸಿ.

No comments:

Advertisement