ನೇಪಾಳ-ಭಾರತ ಬಾಂಧವ್ಯ ತುಂಡರಿಸಲಾಗದು: ರಾಜನಾಥ್ ಸಿಂಗ್
ಡೆಹ್ರಾಡೂನ್: ಭಾರತ ಮತ್ತು ನೇಪಾಳ ನಡುವಣ ಬಾಂಧವ್ಯಗಳು ಮುರಿಯಲು ಅಸಾಧ್ಯವಾದ ಬಾಂಧವ್ಯಗಳು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು 2020 ಜೂನ್ 15ರ ಸೋಮವಾರ ಇಲ್ಲಿ ಹೇಳಿದರು. ರಾಜನಾಥ್ ಸಿಂಗ್ ಅವರು ಭಾರತೀಯ ಜನತಾ ಪಕ್ಷದ ಉತ್ತರಾಖಂಡ ಸದಸ್ಯರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
’ನಮ್ಮ ಸೇನೆಯು ಗೂರ್ಖಾ ರೆಜಿಮೆಂಟನ್ನು ಹೊಂದಿದೆ. ಅದರ ಯೋಧರು ದೇಶದ ಸಲುವಾಗಿ ಅಪ್ರತಿಮ ಶೌರ್‍ಯ ಹಾಗೂ ಕೆಚ್ಚುನ್ನು ಹಲವಾರು ಸಂದರ್ಭಗಳಲ್ಲಿ ಪ್ರದರ್ಶಿಸಿದ್ದಾರೆ. ’ಮೈ ಮಹಾಕಾಳಿ, ಆಯೋ ರೇ ಗೂರ್ಖಾಲಿ’ (ಮಹಾಕಾಳಿಗೆ ಜೈ, ಗೂರ್ಖಾ ಬರುತ್ತಿದ್ದಾನೆ)’ ಎಂಬುದು ಗೂರ್ಖಾ ಯೋಧರ ಸಮರ ಘೋಷಣೆಯಾಗಿದೆ.. ಅಲ್ಲದೆ ಕೋಲ್ಕತ, ಕಾಮಾಕ್ಯ ಮತ್ತು ವಿಂಧ್ಯಾಚಲದಲ್ಲಿಯೂ ಕಾಳಿ ಇದ್ದಾಳೆ. ಕಾಳಿಯ ಭಕ್ತರು ಭಾರತದಾದ್ಯಂತ ಇದ್ದಾರೆ. ಉಭಯ ದೇಶಗಳ ನಡುವಣ ಈ ಬಾಂಧವ್ಯವನ್ನು ಹೇಗೆ ತುಂಡರಿಸಲು ಸಾಧ್ಯ?’ ಎಂದು ಸಿಂಗ್ ಅವರು ಗಢವಾಲ ವಿಭಾಗದಲ್ಲಿ ನಡೆದ ಸಮಾವೇಶವನ್ನು ಉದ್ದೇಶಿಸಿ ವಿಡಿಯೋ ಭಾಷಣದಲ್ಲಿ ಪ್ರಶ್ನಿಸಿದರು.
ಅತ್ಯಂತ ಆಯಕಟ್ಟಿನ ಜಾಗಗಳಾದ ಲಿಪುಲೇಖ, ಕಾಲಾಪಾನಿ ಮತ್ತು ಲಿಂಪಿಯಧುರ ಪ್ರದೇಶಗಳನ್ನು ನೇಪಾಳಕ್ಕೆ ಸೇರಿಸಿದ ಹೊಸ ರಾಜಕೀಯ ನಕ್ಷೆಗೆ ನೇಪಾಳದ ಸಂಸತ್ತು ಅನುಮೋದನೆ ನೀಡಿದ ಕೆಲವೇ ದಿನಗಳ ಬಳಿಕ ರಕ್ಷಣಾ ಸಚಿವರಿಂದ ಈ ಹೇಳಿಕೆ ಬಂದಿದೆ. ಉತ್ತರಾಖಂಡದ ಪಿತೋರಗಢ ಜಿಲ್ಲೆಯಲ್ಲಿ ರಾಜನಾಥ್ ಸಿಂಗ್ ಅವರು ಲಿಪುಲೇಖ ಕಣಿವೆ ಮತು ದಾರ್ಚುಲಾ ಪ್ರದೇಶವನ್ನು ಸಂಪರ್ಕಿಸುವ ನಿರ್ಣಾಯಕ ರಸ್ತೆಯನ್ನು ಉದ್ಘಾಟಿಸಿದ ಬಳಿಕ ನೇಪಾಳ ಸರ್ಕಾರವು ತನ್ನ ನಕ್ಷೆಯನ್ನು ಬದಲಾಯಿಸುವ ನಿರ್ಣಯವನ್ನು ಕೈಗೊಂಡಿದೆ. ರಸ್ತೆಯು ತನ್ನ ನೆಲದ ಮೇಲೆ ಹಾದು ಹೋಗುತ್ತಿದೆ ಎಂದು ನೇಪಾಳವು ಪ್ರಬಲ ತಕರಾರು ತೆಗೆದಿದೆ.
’ಭಾರತ-ನೇಪಾಳ ಬಾಂಧವ್ಯಗಳು ಸಾಮಾನ್ಯವಾದವುಗಳಲ್ಲ. ನಮ್ಮಲ್ಲಿ ’ರೋಟಿ ಮತ್ತು ಬೇಟಿ’ (ರೊಟ್ಟಿ ಮತ್ತು ಮಗಳ) ಬಾಂಧವ್ಯ ಇದೆ. ಇದನ್ನು ಜಗತ್ತಿನ ಯಾವುದೇ ಶಕ್ತಿಯೂ ತುಂಡರಿಸಲು ಸಾಧ್ಯವಿಲ್ಲ’ ಎಂದು ಉಭಯ ದೇಶಗಳ ಜನರ ನಡುವಣ ಪ್ರಬಲ ಸಂಪರ್ಕವನ್ನು ಉಲ್ಲೇಖಿಸುತ್ತಾ ಸಿಂಗ್ ನುಡಿದರು.
ನೇಪಾಳದಲ್ಲಿ ಅತ್ಯಂತ ಪೂಜ್ಯವಾಗಿರುವ ಪಶುಪತಿನಾಥ ದೇವಾಲಯದ ಜೊತೆಗಿನ ಆಧ್ಯಾತ್ಮಿಕ ಬಾಂಧವ್ಯವನ್ನೂ ರಾಜನಾಥ್ ಸಿಂಗ್ ಉಲ್ಲೇಖಿಸಿದರು.
’ನಾವು ನೇಪಾಳದ ಜೊತೆಗೆ ಹೊಂದಿರುವುದು ಕೇವಲ ಭೌಗೋಳಿಕ, ಚಾರಿತ್ರಿಕ ಮತ್ತು ಸಾಮಾಜಿಕ ಬಾಂಧವ್ಯವಲ್ಲ, ಆಧ್ಯಾತಿಕ ಬಾಂಧವ್ಯವನ್ನೂ ಹೊಂದಿದ್ದೇವೆ. ಬಾಬಾ ಪಶುಪತಿನಾಥನನ್ನು ಯಾರು ಮರೆಯಲು ಸಾಧ್ಯ? ಬಾಬಾ ಅಮರನಾಥ, ಸೋಮನಾಥ ಮತ್ತು ಕಾಶಿ ವಿಶ್ವನಾಥನಿಂದ ಅವನನ್ನು ಪ್ರತ್ಯೇಕಿಸಲು ಹೇಗೆ ಸಾಧ್ಯ? ಈ ಬಾಂಧವ್ಯವು ಕೇವಲ ಈ ವಿಶ್ವದ್ದಲ್ಲ, ಸಂಪೂರ್ಣವಾಗಿ ಬೇರೆಯೇ ಜಗತ್ತಿನದ್ದು’ ಎಂದು ರಕ್ಷಣಾ ಸಚಿವರು ಹೇಳಿದರು.
’ನೇಪಾಳಕ್ಕೆ ಸಂಬಂಧಿಸಿದಂತೆ ಲಿಪುಲೇಖದ ಬಗ್ಗೆ ಕೆಲವು ತಪ್ಪಭಿಪ್ರಾಯಗಳು ಮೂಡಿವೆ. ಇವುಗಳನ್ನು ಮಾತುಕತೆ ಮೂಲಕ ಇತ್ಯರ್ಥ ಪಡಿಸಲಾಗುವುದು’ ಎಂದು ಸಿಂಗ್ ನುಡಿದರು.
ಲಿಪುಲೇಖ ಮತ್ತು ದಾರ್ಚುಲಾ ನಡುವಣ ರಸ್ತೆ ಬಗ್ಗೆ ನೇಪಾಳದ ಜನರಲ್ಲಿ ತಪ್ಪಭಿಪ್ರಾಯಗಳು ಇದ್ದರೆ, ನಾವು ಒಟ್ಟಿಗೆ ಕುಳಿತು ಮಾತುಕತೆ ಮೂಲಕ ಅಂತಹ ವಿಷಯಗಳನ್ನುಇತ್ಯರ್ಥ ಪಡಿಸಿಕೊಳ್ಳುತ್ತೇವೆ. ನಾನು ಇದನ್ನು ಸಂಪೂರ್ಣವಿಶ್ವಾಸದೊಂದಿಗೆ ಹೇಳುತ್ತಿದ್ದೇನೆ. ಯಾರೇ ಭಾರತೀಯನಿಗೆ ನೇಪಾಳದ ಬಗ್ಗೆ ದ್ವೇಷವಿಲ್ಲ, ನಮ್ಮೊಳಗೆ ಅಂತಹ ಗಾಢ ಬಂಧುತ್ವ ಇದೆ’ ಎಂದು ರಕ್ಷಣಾ ಸಚಿವರು ಹೇಳಿದರು.
ಸಮಾವೇಶಕ್ಕೆ ಮುನ್ನ ಸಚಿವರು ಕೋವಿಡ್-೧೯ ಸಾಂಕ್ರಾಮಿಕದ ವಿರುದ್ಧದ ಸಮರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕೈಗೊಳ್ಳಲಾಗಿರುವ ಕ್ರಮಗಳನ್ನು ಕೂಡಾ ಶ್ಲಾಘಿಸಿದರು.
’ಪ್ರಧಾನಿ ಮೋದಿಯವರು ಸಾಂಕ್ರಾಮಿಕ ವಿರುದ್ಧ ಹೋರಾಟದ ಕಠಿಣ ಸವಾಲು ಎದುರಿಸುತ್ತಿದ್ದಾರೆ ಮತ್ತು ಈವರೆಗೂ ಅತ್ಯಂತ ರೋಗವನ್ನು ಹತೋಟಿಯಲ್ಲಿ ಇಡಲು ದಿಟ್ಟ ಮತ್ತು ನಿಣಾಯಕ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಈ ಪ್ರಯತ್ನಗಳನ್ನು ಇತರ ರಾಷ್ಟ್ರಗಳು ಮಾತ್ರವೇ ಅಲ್ಲ ಸ್ವಯಂ ವಿಶ್ವ ಆರೋಗ್ಯ ಸಂಸ್ಥೆ ಕೂಡಾ ಶ್ಲಾಘಿಸಿದೆ’ ಎಂದು ರಾಜನಾಥ್ ಸಿಂಗ್ ನುಡಿದರು.
ಪ್ರಧಾನಿ ಮೋದಿ ಅವರ ಅಡಿಯಲ್ಲಿ ನಮ್ಮ ಸರ್ಕಾರವು ಸಾಂಕ್ರಾಮಿಕದ ಕಾಲದಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಆರೋಗ್ಯ ಸುರಕ್ಷತಾ ಮೂಲಸವಲತ್ತುಗಳನ್ನು ಬಲ ಪಡಿಸಿದೆ. ಪರಿಣಾಮವಾಗಿ, ನಾವೀಗ ಪಿಪಿಇ (ವೈಯಕ್ತಿಕ ಸುರಕ್ಷಾ ಸಾಧನ) ಕಿಟ್ ಗಳನ್ನು ನಮ್ಮ ಆರೋಗ್ಯ ಕಾರ್‍ಯಕರ್ತರಿಗೆ ಮಾತ್ರವೇ ತಯಾರಿಸುತ್ತಿರುವುದಲ್ಲ, ವಿದೇಶಗಳಿಗೂ ರಫ್ತು ಮಾಡುತ್ತಿದ್ದೇವೆ. ನಾವು ಒಟ್ಟಾಗಿ ಈ ಸಮರವನ್ನು ಶೀಘ್ರದಲ್ಲೇ ಗೆಲ್ಲಲಿದ್ದೇವೆ ಎಂಬ ಬಗ್ಗೆ ನಮಗೆ ಖಚಿತತೆ ಇದೆ’ ಎಂದು ಸಿಂಗ್ ಹೇಳಿದರು.
ವಿಡಿಯೋ ಸಂವಹನ ಮೂಲಕ ನಡೆದ ವರ್ಚುವಲ್ ರ್‍ಯಾಲಿಯಲ್ಲಿ ಕೇಂದ್ರ ಮಾನವ ಸಂಪನ್ಮೂಲ ಇಲಾಖಾ ಸಚಿವ ರಮೇಶ ಪೋಖ್ರಿಯಾಲ್ ನಿಶಾಂಕ್, ಉತ್ತರಾಖಂಡದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಶ್ಯಾಮ್ ಜಾಜೂ ಮತ್ತು ಪಕ್ಷದ ಇತರ ನಾಯಕರು ಕೂಡಾ ಪಾಲ್ಗೊಂಡಿದ್ದರು.
No comments:
Post a Comment