ಭಾರತಕ್ಕೆ ಕಾಯಂ ಸದಸ್ಯತ್ವ: ರಶ್ಯಾ ಬೆಂಬಲ
ವಿಶ್ವಸಂಸ್ಥೆ ಭದ್ರತಾ ಮಂಡಳಿ
ನವದೆಹಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸದಸ್ಯತ್ವ ನೀಡುವ ಪ್ರಸ್ತಾಪಕ್ಕೆ ರಶ್ಯಾ ಮತ್ತೊಮ್ಮೆ ಬೆಂಬಲ ವ್ಯಕ್ತ ಪಡಿಸಿದೆ. 2020 ಜೂನ್ 23ರ ಮಂಗಳವಾರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆದ ರಶ್ಯಾ, ಭಾರತ ಮತ್ತು ಚೀನಾವನ್ನು ಒಳಗೊಂಡ ಆರ್‌ಐಸಿ ಗುಂಪಿನ ವಿದೇಶಾಂಗ ಸಚಿವರ ತ್ರಿಪಕ್ಷೀಯ ಸಮ್ಮೇಳನದಲ್ಲಿ ಮೂರೂ ದೇಶಗಳು ವಿಶ್ವಸಂಸ್ಥೆ ಸುಧಾರಣೆಗಳ ಬಗ್ಗೆ ಚರ್ಚಿಸಿವೆ ಎಂದು ರಶ್ಯಾ ಹೇಳಿದೆ.
ವಿಶ್ವಸಂಸ್ಥೆಯ ಅತ್ಯಂತ ಪ್ರಬಲ ಅಂಗವಾಗಿರುವ ಭದ್ರತಾ ಮಂಡಳಿ ಸಹಿತವಾಗಿ ವಿಶ್ವಸಂಸ್ಥೆಯಲ್ಲಿ ಮಹತ್ವದ ಸುಧಾರಣೆಗಳಿಗಾಗಿ ಭಾರತವು ಒತ್ತಾಯಿಸುತ್ತಿದೆ, ಅದರ ಸಂಯೋಜನೆಯು ಹಾಲಿ ವಾಸ್ತವಗಳನ್ನು ಪ್ರತಿಬಿಂಬಿಸುವುದಿಲ್ಲ ಮತ್ತು ಪ್ರತಿನಿಧಿಸುತ್ತಿಲ್ಲ ಎಂದು ಭಾರತ ಹೇಳುತ್ತಿದೆ.
"ಇಂದು ನಾವು ವಿಶ್ವಸಂಸ್ಥೆಯ ಸಂಭಾವ್ಯ ಸುಧಾರಣೆಗಳ ಬಗ್ಗೆ ಮಾತನಾಡಿದ್ದೇವೆ ಮತ್ತು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಕಾಯಂ ಸದಸ್ಯನಾಗಲು ಭಾರತವು ಪ್ರಬಲ ಅಭ್ಯರ್ಥಿಯಾಗಿದೆ. ನಾವು ಭಾರತದ ಉಮೇದುವಾರಿಕೆಯನ್ನು ಬೆಂಬಲಿಸುತ್ತೇವೆ. ಭಾರತವು ಭದ್ರತಾ ಮಂಡಳಿಯ ಪೂರ್ಣ ಪ್ರಮಾಣದ ಸದಸ್ಯರಾಗಬಹುದು ಎಂದು ನಾವು ನಂಬುತ್ತೇವೆ’ ಎಂದು ಸೆರ್ಗೆಯ್ ಲಾವ್ರೊವ್ ಹೇಳಿದ್ದಾರೆ.
ವಿಶ್ವಸಂಸ್ಥೆಯಂತಹ ಅಂತಾರಾಷ್ಟ್ರೀಯ ಸಂಸ್ಥೆಯು ನಿರ್ಧಾರ ತೆಗೆದುಕೊಳ್ಳುವಲ್ಲಿ ಭಾರತದ ಹೆಚ್ಚಿನ ಪಾತ್ರವನ್ನು ಬೆಂಬಲಿಸುವಂತೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಸೋಮವಾರ ಪ್ರಬಲ ವಾದ ಮಂಡಿಸಿದ್ದರು.
ಸುಧಾರಿತ ಬಹುಪಕ್ಷೀಯ ವಿಶ್ವ ವ್ಯವಸ್ಥೆಯ ಅಗತ್ಯವನ್ನು ಅವರು ಒತ್ತಿ ಹೇಳಿದರು. ಹೊಸ ವ್ಯವಸ್ಥೆಯಲ್ಲಿ ಭಾರತದ ಪಾತ್ರವನ್ನು ನಿರ್ಲಕ್ಷಿಸಲಾಗದು ಎಂದು ಅವರು ಪ್ರತಿಪಾದಿಸಿದ್ದರು.
"ವಿಶ್ವಸಂಸ್ಥೆಯು ೫೦ ಸದಸ್ಯರೊಂದಿಗೆ ಪ್ರಾರಂಭವಾಯಿತು, ಪ್ರಸ್ತುತ ಅದು ೧೯೩ ಸದಸ್ಯರನ್ನು ಹೊಂದಿದೆ. ಖಂಡಿತವಾಗಿ, ಅದರ ನಿರ್ಧಾರ ತೆಗೆದುಕೊಳ್ಳುವ ವ್ಯವಸ್ಥೆಯು ಈ ವಾಸ್ತವಾಂಶವನ್ನು ನಿರಕರಿಸಲು ಸಾಧ್ಯವಿಲ್ಲ. ನಾವು, ಆರ್‌ಐಸಿ ದೇಶಗಳು ಜಾಗತಿಕ ಕಾರ್ಯಸೂಚಿಯನ್ನು ರೂಪಿಸುವಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದೇವೆ. ಸುಧಾರಿತ ಬಹುಪಕ್ಷೀಯತೆಯ ಮೌಲ್ಯವನ್ನು ನಾವು ಈಗ ಒಮ್ಮುಖಗೊಳಿಸಬೇಕು ಎಂಬುದು ಭಾರತದ ಆಶಯವಾಗಿದೆ’ ಎಂದು ಆರ್‌ಐಸಿ ಶೃಂಗಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಜೈಶಂಕರ್ ಹೇಳಿದ್ದರು.
No comments:
Post a Comment