My Blog List

Saturday, August 15, 2020

ಪಾಕ್, ಚೀನಾಕ್ಕೆ ಪ್ರಧಾನಿ ಮೋದಿ ಖಡಕ್ ಎಚ್ಚರಿಕೆ

 ಪಾಕ್, ಚೀನಾಕ್ಕೆ ಪ್ರಧಾನಿ ಮೋದಿ ಖಡಕ್ ಎಚ್ಚರಿಕೆ

ಸ್ವಾಲಂಬಿ ಭಾರತಕ್ಕೆ ಪ್ರಬಲ ಒತ್ತು

ನವದೆಹಲಿ: ದೇಶದ ಸಾರ್ವಭೌಮತ್ವಕ್ಕೆ ಸವಾಲು ಹಾಕಿದವರಿಗೆ ಭಾರತೀಯ ಸೇನೆಯು ನಿಯಂತ್ರಣ ರೇಖೆಯಿಂದ (ಎಲ್‌ಒಸಿ) ವಾಸ್ತವಿಕ ನಿಯಂತ್ರಣ ರೇಖೆಯವರೆಗೆ (ಎಲ್‌ಎಸಿ) ಸೂಕ್ತ ಉತ್ತರ ನೀಡಿದೆ ಎಂಬುದಾಗಿ ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು 2020 ಆಗಸ್ಟ್ 15ರ ಶನಿವಾರ ಪಾಕಿಸ್ತಾನ ಮತ್ತು ಚೀನಾಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಪ್ರಬಲ ಸೇನೆ ರಚನೆಯ ಘೋಷಣೆಯನ್ನೂ ಮಾಡಿದ್ದಾರೆ.

ದೆಹಲಿಯ ಕೆಂಪುಕೋಟೆಯಲ್ಲಿ ೭೪ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿದ ಬಳಿಕ  ಸತತ ಏಳನೇ ಸ್ವಾತಂತ್ರ್ಯ ದಿನಾಚರಣೆ ಭಾಷಣ ಮಾಡಿದ ಪ್ರಧಾನಿಆತ್ಮ ನಿರ್ಭರ ಭಾರತ, ರಕ್ಷಣೆ, ಕೃಷಿ ಕ್ಷೇತ್ರಗಳಲ್ಲಿ ಸ್ವಾವಲಂಬನೆ, ಮಹಿಳಾ ಸಬಲೀಕರಣ, ಅಂತಾರಾಷ್ಟ್ರೀಯ ಬಾಂಧವ್ಯ ಸೇರಿದಂತೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿದರು.

ದೇಶವು ಭಯೋತ್ಪಾದನೆ ಮತ್ತು ವಿಸ್ತರಣಾವಾದದ ವಿರುದ್ಧ ದೃಢ ನಿಶ್ಚಯದೊಂದಿಗೆ ಹೋರಾಡುತ್ತಿದೆ ಎಂದು ಪ್ರಧಾನಿ ಹೇಳಿದರು.

ಭಾರತದ ಸಾರ್ವಭೌಮತ್ವದ ಮೇಲೆ ಕಣ್ಣುಹಾಕಿದ ಎಲ್ಲರಿಗೂ ದೇಶದ ಸೈನ್ಯವು ಅದರದೇ ಭಾಷೆಯಲ್ಲಿ ಉತ್ತರ ನೀಡಿದೆ ಎಂದು ಮೋದಿ ಅವರು ಯಾವುದೇ ರಾಷ್ಟ್ರದ ಹೆಸರು ಉಲ್ಲೇಖಿಸದೇ ಸೂಚ್ಯವಾಗಿ ತಿಳಿಸಿದರು.

ಗಡಿಯಲ್ಲಿ ಶಾಂತಿ ಸ್ಥಾಪನೆಗಾಗಿ ಸೇನಾ ವಾಪಸಾತಿ ಕುರಿತು ಭಾರತ ಮತ್ತು ಚೀನಾ ನಡುವೆ ಮಾತುಕತೆ  ನಡೆಸುತ್ತಿರುವ ಹೊತ್ತಿನಲ್ಲೇ, ಭಾರತದ ಸಾರ್ವಭೌಮತೆಯು ಸರ್ವೋತ್ಕೃಷ್ಟವಾದುದು ಎಂದು ಹೇಳಿದ ಪ್ರಧಾನಿ, ನೆರೆಹೊರೆಯ ದೇಶಗಳೊಂದಿಗಿನ ಭಾರತದ ಸಂಬಂಧವು ಭದ್ರತೆ ಮತ್ತು ವಿಶ್ವಾಸದ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹೇಳಿದರು.

ಭಾರತದ ಸಾರ್ವಭೌಮತ್ವವನ್ನು ಗೌರವಿಸುವುದು ಮಹೋನ್ನತವಾದುದು ಮತ್ತು ಸಂಕಲ್ಪವನ್ನು ಕಾಪಾಡಿಕೊಳ್ಳಲು ಭಾರತದ ಸೈನಿಕರು ಏನು ಮಾಡಬಹುದು ಎಂಬುದನ್ನು ಜಗತ್ತು ಲಡಾಕ್‌ನಲ್ಲಿ ನೋಡಿದೆ ಎಂದು ಮೋದಿ ಹೇಳಿದರು.

ನಾನು ಕೆಂಪು ಕೋಟೆಯಿಂದ ಎಲ್ಲ ಧೈರ್ಯಶಾಲಿ ಸೈನಿಕರಿಗೆ ನಮಸ್ಕರಿಸುತ್ತೇನೆ. ಎಲ್‌ಒಸಿಯಿಂದ ಎಲ್‌ಎಸಿವರೆಗೆ, ದೇಶದ ಸಾರ್ವಭೌಮತ್ವದ ಮೇಲೆ ಕಣ್ಣಿಟ್ಟ ಯಾರಾದರೂ ಸರಿ, ದೇಶದ ಸಶಸ್ತ್ರ ಪಡೆಗಳು ಅವರಿಗೆ ಅರ್ಥಮಾಡಿಕೊಳ್ಳುವ ಭಾಷೆಯಲ್ಲಿ ದಿಟ್ಟ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಪ್ರಧಾನಿ ಹೇಳಿದರು.

ಚೀನಾದೊಂದಿಗೆ ಭಾರತದ ಗಡಿರೇಖೆಯಾಗಿರುವ ಎಲ್‌ಎಸಿಯ ಉದ್ದಕ್ಕೆ ಮತ್ತು ಪಾಕಿಸ್ತಾನದೊಂದಿಗಿನ ಗಡಿರೇಖೆಯಾಗಿರುವ ನಿಯಂತ್ರಣ ರೇಖೆಯ ಉದ್ದಕ್ಕೂ ಕದನ ವಿರಾಮ ಉಲ್ಲಂಘನೆಯ ಘಟನೆಗಳ ಮಧ್ಯೆ ಮೋದಿಯವರ ಮಾತುಗಳು ಬಂದವು.

ಜೂನ್ ೧೫ ರಂದು ಗಲ್ವಾನ್ ಕಣಿವೆಯಲ್ಲಿ ಚೀನಾದ ಸೈನ್ಯದೊಂದಿಗೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಇಪ್ಪತ್ತು ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರೆ. ಚೀನಾದ ಕಡೆಯಲ್ಲೂ ಸಾವು ನೋವುಗಳಾಗಿವೆ. ಆದರೆ ಅವರು ವಿವರಗಳನ್ನು ಬಹಿರಂಗ ಪಡಿಸಿಲ್ಲ.

ಇದಕ್ಕೆ ಪ್ರತೀಕಾರವಾಗಿ, ಪ್ರಮುಖ ವಿಡಿಯೋ-ಹಂಚಿಕೆ ವೇದಿಕೆಗಳಾದ ಟಿಕ್‌ಟಾಕ್ ಸೇರಿದಂತೆ ಕನಿಷ್ಠ ೫೯ ಅಪ್ಲಿಕೇಶನ್‌ಗಳನ್ನು (ಆಪ್) ಭಾರತ ನಿಷೇಧಿಸಿತು ಮತ್ತು ಚೀನಾದ ಸಂಸ್ಥೆಗಳನ್ನು ಒಪ್ಪಂದಗಳಿಂದ ಮುಕ್ತಗೊಳಿಸಲು ಮತ್ತು ಅದರ ಆಮದನ್ನು ನಿರ್ಬಂಧಿಸಲು ಇತರ ಕ್ರಮಗಳನ್ನು ತೆಗೆದುಕೊಂಡಿತು.

ಭೂಮಿ ಮೂಲಕವೇ ಇರಲಿ ಅಥವಾ ಸಮುದ್ರದ ಮೂಲಕವೇ ಇರಲಿ ನಮ್ಮ ಜೊತೆಗೆ ಸಂಪರ್ಕ ಹೊಂದಿರುವ ನೆರೆಹೊರೆಯವರೊಂದಿಗಿನ ಸಂಬಂಧವನ್ನು ಭಾರತ ಗೌರವಿಸುತ್ತದೆ ಎಂದು ಮೋದಿ ಹೇಳಿದರು. ನೆರೆಹೊರೆಯವರೊಂದಿಗಿನ ಸಂಬಂಧವು ಈಗ "ಭದ್ರತೆ, ಪ್ರಗತಿ ಮತ್ತು ವಿಶ್ವಾಸ" ಕ್ಕೆ ಸಂಬಂಧಿಸಿದೆ ಎಂದು ಅವರು ನುಡಿದರು.

"ನೆರೆಹೊರೆಯವರು ಎಂದರೆ ಕೇವಲ ನಮ್ಮ ಭೌಗೋಳಿಕತೆಯನ್ನು ಹಂಚಿಕೊಳ್ಳುವವರಲ್ಲ, ನಮ್ಮೊಂದಿಗೆ ಹೃದಯವನ್ನು ಹಂಚಿಕೊಳ್ಳುವವರು. ಬಾಂಧವ್ಯವನ್ನು ಎಲ್ಲಿ ಗೌರವಿಸಲಾಗುತ್ತದೆಯೋ ಅಲ್ಲಿ ಹಿತಕರವಾದ ಶಾಖವಾಗುತ್ತದೆ ಎಂದು ಅವರು ಹೇಳಿದರು.

ವಿಶ್ವದ ಜನಸಂಖ್ಯೆಯ ನಾಲ್ಕನೇ ಒಂದು ಭಾಗವು ದಕ್ಷಿಣ ಏಷ್ಯಾದಲ್ಲಿ ವಾಸಿಸುತ್ತಿರುವುzರತ್ತ ಬೊಟ್ಟು ಮಾಡಿದ ಪ್ರಧಾನಿ, ‘ಸಹಕಾರ ಮತ್ತು ಪಾಲ್ಗೊಳ್ಳುವಿಕೆಯೊಂದಿಗೆ ಇಷ್ಟು ದೊಡ್ಡ ಜನಸಂಖ್ಯೆಯ ಅಭಿವೃದ್ಧಿ ಮತ್ತು ಸಮೃದ್ಧಿಯ ಹೇಳಲಾಗದ ಸಾಧ್ಯತೆಗಳನ್ನು ನಾವು ಸಾಧಿಸಬಹುದು. ಬೃಹತ್ ಸಾಮೂಹಿಕ ಗುಂಪಿನ ಅಭಿವೃದ್ಧಿ ಮತ್ತು ಪ್ರಗತಿಯ ಬಗ್ಗೆ ಪ್ರದೇಶದ ಎಲ್ಲ ನಾಯಕರು ಪ್ರಮುಖ ಜವಾಬ್ದಾರಿಯನ್ನು ಹೊಂದಿದ್ದಾರೆ ಎಂದು ಮೋದಿ ಹೇಳಿದರು.

. ಮಿಲಿಯನ್ (೧೪ ಲಕ್ಷ) ಸಂಖ್ಯೆಯ ಪ್ರಬಲ ಭಾರತೀಯ ಸೇನೆಯನ್ನು ನಿರ್ಮಿಸಲಾಗುವುದು ಎಂದು ಮೋದಿ ಹೇಳಿದರು. "ಭಾರತವು ತನ್ನ ಭದ್ರತೆಗೆ ಬದ್ಧವಾಗಿದೆ ಮತ್ತು ಶಾಂತಿ ಮತ್ತು ಸಾಮರಸ್ಯಕ್ಕಾಗಿ ಮಾಡುವ ಪ್ರಯತ್ನಗಳ ಜೊತೆಗೇ ತನ್ನ ಸೈನ್ಯವನ್ನು ಬಲಪಡಿಸುತ್ತದೆ ಎಂದು ಪ್ರಧಾನಿ ದೃಢಪಡಿಸಿದರು.

ರಕ್ಷಣಾ ಉತ್ಪಾದನೆಯಲ್ಲಿ ದೇಶವನ್ನು "ಸ್ವಾವಲಂಬಿಗಳನ್ನಾಗಿ" ಮಾಡುವ ಪ್ರಯತ್ನಗಳನ್ನು ಮೋದಿ ಒತ್ತಿ ಹೇಳಿದರು.

 ನ್ಯಾಷನಲ್ ಡಿಜಿಟಲ್ ಹೆಲ್ತ್ ಮಿಷನ್

ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೊಸನ್ಯಾಷನಲ್ ಡಿಜಿಟಲ್ ಹೆಲ್ತ್ ಮಿಷನ್ ಯೋಜನೆ ಘೋಷಿಸಿದರು.

ಯೋಜನೆಯಡಿ ಪ್ರತಿಯೊಬ್ಬ ಭಾರತೀಯನಿಗೂಆರೋಗ್ಯ ಗುರುತು ಚೀಟಿ (ಹೆಲ್ತ್ ಐಡಿ) ನೀಡಲಾಗುವುದು. ಯೋಜನೆಯಿಂದ ಬಡವರಿಗೆ ಪ್ರಯೋಜನವಾಗಲಿದೆ ಎಂದು ಮೋದಿ ಹೇಳಿದರು.

ವೈದ್ಯರು ಯಾವ ಔಷಧ ತೆಗದುಕೊಳ್ಳಲು ಸೂಚಿಸಿದ್ದಾರೆ, ಯಾವಾಗ ಅದನ್ನು ಸೂಚಿಸಲಾಗಿದೆ ಎಂಬ ಮಾಹಿತಿಯ ಜೊತೆಗೆ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಗಳು ವ್ಯಕ್ತಿಯ ಆರೋಗ್ಯ ಗುರುತು ಚೀಟಿಗೆ ಸಂಪರ್ಕ ಹೊಂದಲಿವೆ.

ಆಯುಷ್ಮಾನ್ ಭಾರತ ಬಳಿಕ ಆರೋಗ್ಯ ಕ್ಷೇತ್ರದ ಅತ್ಯಂತ ಮಹತ್ವದ ಯೋಜನೆ ಇದಾಗಲಿದೆ ಎಂದು ಹೇಳಲಾಗಿದೆ.

ಏನಿದು ಯೋಜನೆ?

ಯೋಜನೆಯ ನೀಲನಕ್ಷೆಯನ್ನು ಕೇಂದ್ರ ಸರ್ಕಾರ ಕಳೆದ ವರ್ಷ ರೂಪಿಸಿತ್ತು. ದತ್ತಾಂಶಗಳು ಹಾಗೂ ಮೂಲಸೌಕರ್ಯ ಸೇವೆಗಳ ಮೂಲಕ ದಕ್ಷ ಮತ್ತು ಕೈಗೆಟಕುವ gದಲ್ಲಿ ಪ್ರತಿಯೊಬ್ಬರಿಗೂ ಆರೋಗ್ಯ ಸುರಕ್ಷತೆ ಒದಗಿಸುವ ಗುರಿಯನ್ನು ಯೋಜನೆ ಹೊಂದಿದೆ.

ಯೋಜನೆಯು ತಂತ್ರಜ್ಞಾನ ಆಧಾರಿತ ಯೋಜನೆಯಾಗಿದ್ದು, ಎಲ್ಲರಿಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಡಿಜಿಟಲ್ ವ್ಯವಸ್ಥೆಗಳನ್ನು ಬಳಸಿಕೊಳ್ಳಲಾಗುತ್ತದೆ. ಇದು ಅನೇಕ ಡಿಜಿಟಲ್ ಆರೋಗ್ಯ ಸೇವೆಗಳನ್ನು ಒಟ್ಟುಗೂಡಿಸಿ ಅಸ್ತಿತ್ವದಲ್ಲಿರುವ ಆರೋಗ್ಯ ಮಾಹಿತಿಗಳನ್ನು ಸಂಯೋಜಿಸಲು ನೆರವಾಗಲಿದೆ. ವೈಯಕ್ತಿಕ ಮಾಹಿತಿಯ ಸುರಕ್ಷತೆ ಮತ್ತು ಗೋಪ್ಯತೆಯನ್ನು ಖಾತರಿಪಡಿಸಲಾಗುತ್ತದೆ ಎಂದು ಸರ್ಕಾರ ಹೇಳಿದೆ.

ಏನಿದು ಆರೋಗ್ಯ ಗುರುತು ಚೀಟಿ?

ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಡಿಜಿಟಲ್ ಹೆಲ್ತ್ ಐಡಿ (ಡಿಜಿಟಲ್ ಆರೋಗ್ಯ ಗುರುತು ಚೀಟಿ) ದೊರೆಯಲಿದೆ. ವ್ಯಕ್ತಿಯ ಆರೋಗ್ಯ ದಾಖಲೆಗಳು ಡಿಜಿಟಲ್ ಸ್ವರೂಪದಲ್ಲಿ ಇರಲಿದ್ದು, ದೇಶದಾದ್ಯಂತ ಇರುವ ವೈದ್ಯರು ಮತ್ತು ಸರ್ಕಾರದ ಆರೋಗ್ಯ ಸೌಲಭ್ಯಗಳೊಂದಿಗೆ ಸಂಪರ್ಕ ಹೊಂದಿರಲಿದೆ.

ಯೋಜನೆಯ ಉದ್ದೇಶ

ಆರೋಗ್ಯ ಸೇವೆಗಳ ದಕ್ಷತೆ, ಪರಿಣಾಮ ಮತ್ತು ಪಾರದರ್ಶಕತೆ ಹೆಚ್ಚಿಸುವ ಸಲುವಾಗಿ ಯೋಜನೆ ರೂಪಿಸಲಾಗಿದೆ. ಹೆಲ್ತ್ ಐಡಿಯು ಮೊಬೈಲ್ ಆಪ್ ರೂಪದಲ್ಲಿ ಇರಲಿದೆ.

 ಪ್ರಧಾನಿ ಭಾಷಣದ ಮುಖ್ಯಾಂಶಗಳು

* ದೇಶದ ಉಜ್ವಲ ಭವಿಷ್ಯಕ್ಕೆ ಕೊರೊನಾ ಅಡ್ಡಿಯಾಗಿದೆ. ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಕೊರೊನಾ ಯೋಧರ ಕಾರ್ಯ ಶ್ಲಾಘನೀಯ.

* ನಾವು ಸಂಕಷ್ಟದ ಸಮಯಗಳನ್ನು ಎದುರಿಸುತ್ತಿದ್ದೇವೆ. ನಾನು ಇಂದು (ಕೆಂಪು ಕೋಟೆಯಲ್ಲಿ) ಚಿಕ್ಕ ಮಕ್ಕಳನ್ನು ನನ್ನ ಮುಂದೆ ನೋಡಲು ಸಾಧ್ಯವಾಗುತ್ತಿಲ್ಲ. ಕೊರೊನಾ ಎಲ್ಲರಿಗೂ ತಡೆಯೊಡ್ಡಿದೆ.

* ಕೋವಿಡ್ ಕಾಲದಲ್ಲಿ, ಕೊರೊನಾ ಯೋಧರುಸೇವಾ ಪರಮೋ ಧರ್ಮಃ ಮಂತ್ರವನ್ನು ಗಮನದಲ್ಲಿಟ್ಟುಕೊಂಡು ಭಾರತದ ಜನರಿಗೆ ಸೇವೆ ಸಲ್ಲಿಸಿದ್ದಾರೆ. ಅವರಿಗೆ ಕೃತಜ್ಞತೆಗಳು.

* ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ನೆನಪಿಸುವ ದಿನ ಇದು. ನಮ್ಮ ಭದ್ರತೆಯನ್ನು ಖಾತರಿಪಡಿಸುವ ಸೇನೆ, ಅರೆಸೈನಿಕ ಮತ್ತು ಪೊಲೀಸರು ಸೇರಿದಂತೆ ಭದ್ರತಾ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸುವ ದಿನ ಇದು.

* ಭಾರತ ಯುವ ಶಕ್ತಿಯಿಂದ ತುಂಬಿದ ದೇಶ, ‘ಆತ್ಮ ನಿರ್ಭರಕ್ಕೆ (ಸ್ವಾವಲಂಬಿ) ಆತ್ಮವಿಶ್ವಾಸ ಹೊಂದಿರುವ ದೇಶ ಭಾರತ.

* ದೇಶದ ಮಹಿಳೆಯರು, ಮಕ್ಕಳ ಮೇಲೆ ನನಗೆ ಪೂರ್ಣ ನಂಬಿಕೆಯಿದೆ. ನಾವುಆತ್ಮ ನಿರ್ಭರ ಭಾರತ ಸಾಧಿಸಬಲ್ಲೆವು.

* ದೇಶದ ೧೩೦ ಕೋಟಿ ಜನರ ಮಂತ್ರವಾಗಿದೆಆತ್ಮ ನಿರ್ಭರ ಭಾರತ.

* ಕೃಷಿ ಕ್ಷೇತ್ರದಲ್ಲಿ ನಾವುಆತ್ಮ ನಿರ್ಭರರಾಗುತ್ತಿದ್ದೇವೆ. ಕೃಷಿ ಕ್ಷೇತ್ರಗಳಿಗೆ ಸಂಬಂಧಿಸಿದ ಕಾನೂನುಗಳನ್ನು ಸರಳಗೊಳಿಸಲಾಗಿದೆ.

* ‘ಆತ್ಮ ನಿರ್ಭರ ಭಾರತ ಕನಸನ್ನು ಭಾರತ ಸಾಕಾರಗೊಳಿಸುತ್ತದೆ ಎಂಬ ವಿಶ್ವಾಸ ನನಗಿದೆ. ಭಾರತೀಯರ ಸಾಮರ್ಥ್ಯ ಸಾಮರ್ಥ್ಯದ ಬಗ್ಗೆ ನನಗೆ ವಿಶ್ವಾಸವಿದೆ.

* ಒಮ್ಮೆ ನಾವು ಏನನ್ನಾದರೂ ಮಾಡಲು ನಿರ್ಧರಿಸಿದರೆ, ಗುರಿಯನ್ನು ಸಾಧಿಸುವವರೆಗೂ ನಾವು ವಿರಮಿಸುವುದಿಲ್ಲ.

* ‘ಆತ್ಮ ನಿರ್ಭರ ಭಾರತ ಸಾಧಿಸುವಲ್ಲಿ ಲಕ್ಷಾಂತರ ಸವಾಲುಗಳಿವೆ ಎಂಬುದನ್ನು ಬಲ್ಲೆ. ಆದರೆ, ಸವಾಲುಗಳಿಗೆ ದೇಶದಲ್ಲಿ ಕೋಟ್ಯಂತರ ಪರಿಹಾರಗಳೂ ಇವೆ. ನನ್ನ ದೇಶವಾಸಿಗಳು ಸವಾಲು ಮೆಟ್ಟಿ ನಿಲ್ಲುವ ಪರಿಹಾರ ನೀಡುತ್ತಾರೆ.

* ಸ್ವತಂತ್ರ ಭಾರತದ ಮನಸ್ಥಿತಿವೋಕಲ್ ಫಾರ್ ಲೋಕಲ್ (ಸ್ಥಳೀಯ ಉತ್ಪನ್ನಗಳಿಗೆ ನಾವು ದನಿಯಾಗಬೇಕು)’ ಆಗಿರಬೇಕು. ಸ್ಥಳೀಯ ಉತ್ಪನ್ನಗಳನ್ನು ನಾವು ಇಷ್ಟಪಡಬೇಕು. ನಾವಿದನ್ನು ಮಾಡದಿದ್ದರೆ ಸ್ಥಳೀಯವಾಗಿ ಉತ್ತಮ ಉತ್ಪನ್ನಗಳ ತಯಾರಿಗೆ ಅವಕಾಶ, ಪ್ರೋತ್ಸಾಹ ದೊರೆಯುವುದಿಲ್ಲ.

* ಕಳೆದ ವರ್ಷ ವಿದೇಶಿ ನೇರ ಹೂಡಿಕೆಯಲ್ಲಿ ಶೇ ೧೮ರ ದಾಖಲೆಯ ಹೆಚ್ಚಳವಾಗಿತ್ತು. ಜಗತ್ತು ಭಾರತದ ಮೇಲೆ ವಿಶ್ವಾಸ ಇರಿಸಿದೆ. ನಮ್ಮ ಪ್ರಜಾಪ್ರಭುತ್ವ, ಆರ್ಥಿಕತೆಯ ತಳಹದಿ ಗಟ್ಟಿಗೊಳಿಸುವ ನಿಟ್ಟಿನಲ್ಲಿ ನೀತಿಗಳನ್ನು ರೂಪಿಸಿದ್ದೇವೆ.

* ‘ಆತ್ಮ ನಿರ್ಭರ ಭಾರತ ಸಾಧಿಸಲು ಕೃಷಿ ಕ್ಷೇತ್ರ, ಕೃಷಿಕರುಆತ್ಮ ನಿರ್ಭರರಾಗಬೇಕಿದೆ. ಕೃಷಿಕರಿಗೆ ಹೆಚ್ಚು ಮೂಲಸೌಕರ್ಯ ಕಲ್ಪಿಸಲು ಲಕ್ಷ ಕೋಟಿ ರೂಪಾಯಿಗಳಕೃಷಿ ಮೂಲಸೌಕರ್ಯ ನಿಧಿ ಸ್ಥಾಪಿಸಲಾಗಿದೆ.

* ೨೦೧೪ಕ್ಕೂ ಮೊದಲು ಕೇವಲ ಡಜನ್ ಹಳ್ಳಿಗಳಿಗೆ ಆಪ್ಟಿಕಲ್ ಫೈಬರ್ ಸಂಪರ್ಕವಿತ್ತು. ಕಳೆದ ವರ್ಷಗಳಲ್ಲಿ . ಲಕ್ಷ ಗ್ರಾಮ ಪಂಚಾಯಿತಿಗಳಿಗೆ ಆಪ್ಟಿಕಲ್ ಫೈಬರ್ ಸಂಪರ್ಕ ಒದಗಿಸಲಾಗಿದೆ. ಮುಂದಿನ ಸಾವಿರ ದಿನಗಳಲ್ಲಿ ಎಲ್ಲ ಹಳ್ಳಿಗಳಿಗೆ ಆಪ್ಟಿಕಲ್ ಫೈಬರ್ ಸಂಪರ್ಕ ದೊರೆಯಲಿದೆ.

* ‘ಆತ್ಮ ನಿರ್ಭರ ಭಾರತ ಸಾಧಿಸಲು ಶಿಕ್ಷಣ ಬಹು ಮುಖ್ಯವಾದದ್ದು. ಅದಕ್ಕಾಗಿ ಹೊಸ ಶಿಕ್ಷಣ ನೀತಿ ರೂಪಿಸಿದ್ದೇವೆ.

* ಮಹಿಳೆಯರು ಅವಕಾಶ ಸಿಕ್ಕಾಗಲೆಲ್ಲ ಭಾರತವನ್ನು ಗಟ್ಟಿಗೊಳಿಸಿದ್ದಾರೆ. ಹೆಮ್ಮೆ ಪಡುವಂತೆ ಮಾಡಿದ್ದಾರೆ.

* ಸ್ತ್ರೀಯರ ವಿವಾಹದ ಕನಿಷ್ಠ ವಯೋಮಿತಿಯ ಮರು ಪರಿಶೀಲನೆಗೆ ಸಮಿತಿ ರಚಿಸಿದ್ದೇವೆ. ಸಮಿತಿ ವರದಿ ಸಲ್ಲಿಸಿದ ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದೇವೆ.

* ಕೊರೊನಾ ಸೋಂಕಿಗೆ ಲಸಿಕೆ ಅಭಿವೃದ್ಧಿಪಡಿಸಲು ವಿಜ್ಞಾನಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ದೇಶದಲ್ಲಿ ಮೂರು ಲಸಿಕೆಗಳು ಪ್ರಾಯೋಗಿಕ ಹಂತದಲ್ಲಿವೆ. ವಿಜ್ಞಾನಿಗಳು ಸಮ್ಮತಿ ಸೂಚಿಸಿದ ಬೆನ್ನಲ್ಲೇ ಅಪಾರ ಪ್ರಮಾಣದ ಉತ್ಪಾದನೆ ಆರಂಭವಾಗಲಿದೆ.

* ಜಮ್ಮು-ಕಾಶ್ಮೀರದಲ್ಲಿ ಅಭಿವೃದ್ಧಿಯ ಹೊಸ ಯುಗ ಶುರುವಾಗಿದೆ.

* ನಮ್ಮೊಂದಿಗೆ ಗಡಿ ಹಂಚಿಕೊಂಡಿರುವವರು ಮಾತ್ರ ನೆರೆಯವರಲ್ಲ. ಸಹೃದಯಿ ಬಾಂಧವ್ಯ ಹೊಂದಿಕೊಂಡಿರುವವರೂ ನೆರೆಯವರೇ. ಕಳೆದ ಕೆಲವು ಸಮಯದಿಂದ ಭಾರತವು ಎಲ್ಲ ದೇಶಗಳೊಂದಿಗೆ ಬಾಂಧವ್ಯ ಹೆಚ್ಚಿಸಿಕೊಂಡಿದೆ.

* ಭಯೋತ್ಪಾದನೆ, ಭೂಪ್ರದೇಶ ವಿಸ್ತರಣಾ ವಾದವನ್ನು ಭಾರತ ಸೋಲಿಸುತ್ತಿದೆ. ಎಲ್‌ಒಸಿಯಿಂದ ಎಲ್‌ಎಸಿ ವರೆಗೆ ನಮ್ಮ ದೇಶದ ಸಾರ್ವಭೌಮತ್ವದ ಮೇಲೆ ಕಣ್ಣಿಟ್ಟವರಿಗೆ ನಮ್ಮ ಯೋಧರು ಅವರದ್ದೇ ಆದ ರೀತಿಯಲ್ಲಿ ತಿರುಗೇಟು ಕೊಟ್ಟಿದ್ದಾರೆ.

No comments:

Advertisement