ಮಹಿಳೆಯರ ಸುರಕ್ಷತೆಗೆ ಬದ್ಧ: ಸಿಎಂ ಆದಿತ್ಯನಾಥ್ ಟ್ವೀಟ್
ನವದೆಹಲಿ: ಹತ್ರಾಸ್ ಮತ್ತು ಬಲರಾಂಪುರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಘಟನೆಗಳಿಗೆ ಸಾಕ್ಷಿಯಾದ ಉತ್ತರ ಪ್ರದೇಶದ ಕಾನೂನು ವೈಫಲ್ಯದ ವಿರುದ್ಧ ರಾಷ್ಟ್ರವ್ಯಾಪಿ ಆಕ್ರೋಶದ ಮಧ್ಯೆ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಹಿಳೆಯರಿಗೆ ಅಗೌರವ ತೋರುವ ಬಗ್ಗೆ ಯೋಚಿಸುವವರಿಗೆ ಕೂಡಾ ಆದರ್ಶ ಪ್ರಾಯವಾದ ಶಿಕ್ಷೆ ನೀಡಲಾಗುವುದು ಎಂದು 2020 ಅಕ್ಟೋಬರ್ 02ರ ಶುಕ್ರವಾರ ಹೇಳಿದರು.
"ಉತ್ತರ ಪ್ರದೇಶ ಸರ್ಕಾರವು ರಾಜ್ಯದ ಪ್ರತಿಯೊಬ್ಬ ತಾಯಿ ಮತ್ತು ಸಹೋದರಿಯನ್ನು ರಕ್ಷಿಸಲು ಬದ್ಧವಾಗಿದೆ. ಇದು ನಮ್ಮ ಭರವಸೆ’ ಎಂದು ಮುಖ್ಯಮಂತ್ರಿ ಟ್ವೀಟ್ ಮಾಡಿದರು.
ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಗುರುವಾರ ಹತ್ರಾಸ್ಗೆ ತೆರಳುವಾಗ ಬಂಧಿಸಿದ ನಂತರ ಯೋಗಿ ಆದಿತ್ಯನಾಥ್ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಪಕ್ಷಗಳ ಆಗ್ರಗ ಜೋರಾಗಿದೆ.
ಶುಕ್ರವಾರ, ಮೃತ ದಲಿತ ಮಹಿಳೆಯ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ಹತ್ರಾಸ್ಗೆ ತೆರಳುತ್ತಿದ್ದ ತೃಣಮೂಲ ಕಾಂಗ್ರೆಸ್ ನಿಯೋಗವನ್ನು ಉತ್ತರ ಪ್ರದೇಶ ಪೊಲೀಸರು ತಡೆದಿದ್ದರು.
ಯೋಗಿ ಸರ್ಕಾರವನ್ನು ದೂಷಿಸಿದ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರು ರಾಜೀನಾಮೆ ನೀಡುವಂತೆ ಮುಖ್ಯಮಂತ್ರಿಯನ್ನು ಒತ್ತಾಯಿಸಿದರು.
‘ಅವರನ್ನು ಅವರ ಮೂಲಸ್ಥಳವಾದ ಗೋರಖನಾಥ ಮಠಕ್ಕೆ ಕಳುಹಿಸುವಂತೆ ನಾನು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇನೆ. ಅವರು ಮಠವನ್ನು ಇಷ್ಟಪಡದಿದ್ದರೆ, ಅವರಿಗೆ ರಾಮ ಮಂದಿರ ನಿರ್ಮಾಣದ ಕೆಲಸವನ್ನು ನೀಡಬೇಕು’ ಎಂದು ಮಾಯಾವತಿ ಹೇಳಿದರು. ಪ್ರತಿಪಕ್ಷಗಳು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸುವಂತೆ ಆಗ್ರಹಿಸುತ್ತಿವೆ.
ಸೆಪ್ಟೆಂಬರ್ ೧೪ ರಂದು ದಲಿತ ಮಹಿಳೆಯೊಬ್ಬರ ಮೇಲೆ ನಾಲ್ಕು ಮಂದಿ ಮೇಲ್ಜಾತಿಯ ಪುರುಷರು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆರಂಭದಲ್ಲಿ ಅಲಿಘಡ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ನಂತರ, ಅವರನ್ನು ದೆಹಲಿಯ ಫ್ದರ್ ಜಂಗ್ ಆಸ್ಪತ್ರೆಗೆ ಕರೆತರಲಾಗಿತ್ತು. ಅಲ್ಲಿ ಅವರು ಸೆಪ್ಟೆಂಬರ್ ೨೯ ರಂದು ಸಾವನ್ನಪ್ಪಿದ್ದರು. ಹತ್ರಾಸ್ ಪೊಲೀಸರು ಅವಸರದ ಅಂತ್ಯಕ್ರಿಯೆಗೆ ಒತ್ತಾಯಿಸಿದರು ಮತ್ತು ಕುಟುಂಬದ ಒಪ್ಪಿಗೆಯಿಲ್ಲದೆ ಮುಂಜಾನೆ ೨.೩೦ ಕ್ಕೆ ಅಂತ್ಯವಿಧಿಗಳನ್ನು ನೆರವೇರಿಸಲಾಗಿತ್ತು.
ಹತ್ರಾಸ್ ಘಟನೆಯ ಬೆನ್ನಲ್ಲೇ, ಉತ್ತರ ಪ್ರದೇಶದ ಬಲರಾಂಪುರದ ಇನ್ನೊಬ್ಬ ದಲಿತ ಮಹಿಳೆ, ಇಬ್ಬರು ಪುರುಷರಿಂದ ಅತ್ಯಾಚಾರಕ್ಕೊಳಗಾದ ನಂತರ ಸಾವನ್ನಪ್ಪಿದ್ದಾರೆ. ಸೆಪ್ಟೆಂಬರ್ ೩೦ ರಂದು, ಪುರುಷರ ಗುಂಪು ಮಹಿಳೆಯನ್ನು ತಮ್ಮ ಕಾರಿನಲ್ಲಿ ಬಲವಂತವಾಗಿ ಇರಿಸಿ, ಅವಳಿಗೆ ಚುಚ್ಚುಮದ್ದು ನೀಡಿ ಅತ್ಯಾಚಾರ ಎಸಗಿತು ಎಂದು ವರದಿಯಾಗಿದೆ.
ನಂತರ ಅವರು ಆಕೆಯನ್ನು ರಿಕ್ಷಾದಲ್ಲಿ ಮನೆಗೆ ಕಳುಹಿಸಿದರು. ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಆಕೆಯನ್ನು ಲಕ್ನೋಗೆ ಕರೆದೊಯ್ಯುವಂತೆ ಕುಟುಂಬಕ್ಕೆ ಸಲಹೆ ನೀಡಲಾಯಿತು. ಮಹಿಳೆ ದಾರಿಯಲ್ಲಿ ಮೃತಪಟ್ಟಳು ಎಂದು ವರದಿಗಳು ತಿಳಿಸಿವೆ.
ಹತ್ರಾಸ್: ದೆಹಲಿ ಪ್ರಾರ್ಥನಾ ಸಭೆಗೆ ಪ್ರಿಯಾಂಕಾ
ನವದೆಹಲಿ: ಹತ್ರಾಸ್ ಸಂತ್ರಸ್ತರಿಗಾಗಿ ದೆಹಲಿ ದೇವಸ್ಥಾನ ಒಂದರಲ್ಲಿ ನಡೆದ ಪ್ರಾರ್ಥನಾ ಸಭೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾಗಾಂಧಿ ವಾದ್ರಾ ಅವರು 2020 ಅಕ್ಟೋಬರ್ 02ರ ಶುಕ್ರವಾರ ಪಾಲ್ಗೊಂಡರು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮತ್ತು ಸಹೋದರ ರಾಹುಲ್ ಗಾಂಧಿ ಅವರು ನೂರಾರು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಹತ್ರಾಸ್‌ನ ದಲಿತ ಮಹಿಳೆಯ ಕುಟುಂಬವನ್ನು ಭೇಟಿ ಮಾಡಲು ಹೊರಟಿದ್ದಾಗ ಗುರುವಾರ ಉತ್ತರ ಪ್ರದೇಶ ಪೊಲೀಸರು ವಶಕ್ಕೆ ತೆಗೆದುಕೊಂಡು ಬಳಿಕ ದೆಹಲಿಗೆ ವಾಪಸ್ ಕಳುಹಿಸಿದ್ದರು.ವಾಪಸ್ ಕಳುಹಿಸಿದ ಮರುದಿನವೇ ದೆಹಲಿಯ ವಾಲ್ಮೀಕಿ ದೇವಸ್ಥಾನಕ್ಕೆ ಶುಕ್ರವಾರ ಆಗಮಿಸಿದ ಪ್ರಿಯಾಂಕಾ ಮೃತ ಮಹಿಳೆಯ ಸಲುವಾಗಿ ನಡೆದ ಪ್ರಾರ್ಥನಾ ಸಭೆಯಲ್ಲಿ ಪಾಲ್ಗೊಂಡರು.ಹತ್ರಾಸ್ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರಕ್ಕೆ ಬಲಿಯಾದ ಸಂತ್ರಸ್ತೆಯ ಸಲುವಾಗಿ ಪ್ರಾರ್ಥನಾ ಸಭೆಯನ್ನು ದೇವಾಲಯ ಟ್ರಸ್ಟ್ ಆಯೋಜಿಸಿತ್ತು. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಪಿ.ಎಲ್.ಪುನಿಯಾ, ಸುಷ್ಮಿತಾ ದೇವ್ ಮತ್ತು ಅನಿಲ್ ಚೌಧರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮೃತ ಮಹಿಳೆಗೆ ಹೂವಿನ ಗೌರವ ಸಲ್ಲಿಸಿದರು."ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿಯವರ ಆಶ್ರಯದಲ್ಲಿ ಮಹಿಳಾ ಕಾಂಗ್ರೆಸ್ ಘಟಕವು ಈ ಅನ್ಯಾಯದ ವಿರುದ್ಧ ಹೋರಾಟ ಮುನ್ನಡೆಸಬೇಕು ಮತ್ತು ಪ್ರತಿಭಟಿಸಬೇಕು" ಎಂದು ಮಹಿಳಾ ಕಾಂಗ್ರೆಸ್ ಮುಖ್ಯಸ್ಥೆ ಸುಷ್ಮಿತಾ ದೇವ್ ಹೇಳಿದರು. "ಈ ದೇಶದ ಮಹಿಳೆಯರೇ ನರೇಂದ್ರ ಮೋದಿಯವರನ್ನು ಕೆಳಗಿಳಿಸಲಿದ್ದಾರೆ’ ಎಂದು ಅವರು ನುಡಿದರು.
No comments:
Post a Comment