Thursday, October 15, 2020

ಮಲಯಾಳಂ ’ಮಹಾಕವಿ’ ಅಕ್ಕಿಥಂ ಅಚ್ಯುತನ್ ನಿಧನ

 ಮಲಯಾಳಂ "ಮಹಾಕವಿ ಅಕ್ಕಿಥಂ ಅಚ್ಯುತನ್ ನಿಧನ

ತ್ರಿಶ್ಶೂರ್: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಲಯಾಳಂ ಕವಿ ಅಕ್ಕಿಥಂ ಅಚ್ಯುತನ್ ನಂಬೂದಿರಿ (೯೪) ಅವರು ತ್ರಿಶ್ಶೂರಿನ ಖಾಸಗಿ ಆಸ್ಪತ್ರೆಯಲ್ಲಿ 2020 ಅಕ್ಟೋಬರ್ 15ರ ಗುರುವಾರ ನಿಧನರಾದರು.

ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಕಳೆದ ವಾರ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಬಹು ಅಂಗಾಂಗ ವೈಫಲ್ಯದಿಂದ ಕೊನೆಯುಸಿರೆಳೆದರು ಎಂದು ಕುಟುಂಬ ಮೂಲಗಳು ತಿಳಿಸಿವೆ.

ಇಬ್ಬರು ಪುತ್ರರು ಮತ್ತು ನಾಲ್ವರು ಪುತ್ರಿಯರನ್ನು ಮಹಾಕವಿ ಬಿರುದಿನ ಅಕ್ಕಿಥಂ ಅಗಲಿದ್ದಾರೆ. ಹಳೆಯ ಬೇರುಗಳ ಜೊತೆ ಆಧುನಿಕಯ ಸೊಗಡನ್ನು ಜೋಡಿಸಿ ಬರೆದ ಅಕ್ಕಿಥಂ, ಸಹಜ ಕವಿ ಎನಿಸಿದ್ದರು. ಬಾಲ್ಯದಿಂದಲೇ ಕವಿತೆ ಬರೆಯುವ ವ್ಯಾಮೋಹಕ್ಕೆ ಸಿಲುಕಿದ್ದ ಅವರು, ಇರುಪತಾಂ ನೂಟ್ಟಾಂಡಿಂಟೆ ಇತಿಹಾಸಂ ಸಂಕಲನದ ಮೂಲಕ ಮಲಯಾಳಂ ಕಾವ್ಯ ಜಗತ್ತಿನಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿದ್ದರು.

 ದುಃಖವನ್ನು ತಮ್ಮ ಕಾವ್ಯದ ಆಪ್ತ ವಸ್ತುವನ್ನಾಗಿ ಪರಿಗಣಿಸಿದ್ದ ಅಕ್ಕಿಥಂ, ಬೆಳಕು ದುಃಖವನ್ನು, ಕತ್ತಲೆ ಆನಂದವನ್ನು ತರುತ್ತದೆ ಎಂದು ಗ್ರಹಿಸಿ ಬರೆದ ಕಾವ್ಯ ಕೇರಳದಲ್ಲಿ ಮನೆಮಾತಾಗಿತ್ತು.

ಕವನ ಸಂಕಲನ, ನಾಟಕ ಮತ್ತು ಸಣ್ಣ ಕಥೆಗಳು ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ೪೫ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದರು.

೨೦೧೯ರಲ್ಲಿ ಅವರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿತ್ತು. ಶ್ರೇಷ್ಠ ಪ್ರಶಸ್ತಿ ಪಡೆದ ಮಲಯಾಳಂನ ಆರನೇ ಸಾಹಿತಿ ಎನ್ನುವ ಕೀರ್ತಿಗೆ ಅವರು ಭಾಜನರಾಗಿದ್ದರು. ಪದ್ಮಶ್ರೀ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಅವರಿಗೆ ಸಂದಿದ್ದವು.

No comments:

Advertisement