My Blog List

Friday, October 9, 2020

ದೇವಾಲಯ ಭೂಮಿ ಅತಿಕ್ರಮಣ ತಡೆಯಲೆತ್ನಿಸಿದ ಅರ್ಚಕರಿಗೆ ಬೆಂಕಿ,ಹತ್ಯೆ

 ದೇವಾಲಯ ಭೂಮಿ ಅತಿಕ್ರಮಣ ತಡೆಯಲೆತ್ನಿಸಿದ ಅರ್ಚಕರಿಗೆ ಬೆಂಕಿ,ಹತ್ಯೆ

ಜೈಪುರ: ರಾಜಸ್ಥಾನದ ಕರೌಲಿ ಜಿಲ್ಲೆಯಲ್ಲಿ ದೇವಾಲಯದ ಭೂಮಿಯನ್ನು ಅತಿಕ್ರಮಣದಿಂದ ತಡೆಯಲು ಯತ್ನಿಸಿದ ೫೦ರ ಹರೆಯದ ಅರ್ಚಕರಿಗೆ ಬೆಂಕಿ ಹಚ್ಚಿದ ಘಟನೆ ಘಟಿಸಿದ್ದು, ತೀವ್ರ ಸುಟ್ಟ ಗಾಯಗಳಿಂದ ಅರ್ಚಕ 2020 ಅಕ್ಟೋಬರ್ 08ರ ಗುರುವಾರ ಸಂಜೆ ಜೈಪುರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತತ್ ಕ್ಷಣ ಎಲ್ಲ ಆರೋಪಿಗಳನ್ನೂ ಬಂಧಿಸುವಂತೆ ಆಗ್ರಹಿಸಿ ಅರ್ಚಕರ ಕುಟುಂಬ ಸದಸ್ಯರು ಪ್ರತಿಭಟನೆ ನಡೆಸಿದರು.

ಜೈಪುರದ ಎಸ್ಎಂಎಸ್ ಆಸ್ಪತ್ರೆಯಲ್ಲಿ ಸುಟ್ಟಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಅರ್ಚಕ ಬಾಬುಲಾಲ್ ವೈಷ್ಣವ್ ನಿಧನರಾದರು. ನಾವು ಹಳ್ಳಿಯ ಐದು ಜನರ ವಿರುದ್ಧ ಕೊಲೆ ಯತ್ನಕ್ಕಾಗಿ ಪ್ರಕರಣ ದಾಖಲಿಸಿದ್ದೇವೆ, ಈಗ ಆರೋಪವನ್ನು ಕೊಲೆ ಆರೋಪಕ್ಕೆ ಪರಿವರ್ತಿಸಲಾಗುತ್ತದೆ ಎಂದು ಕರೌಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಮೃದೂಲ್ ಕಚವಾ ಹೇಳಿದ್ದಾರೆ. ಅರ್ಚಕರು ಸಾವಿಗೆ ಮುನ್ನ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ ಎಂದು ಅವರು ಹೇಳಿದರು.

ಆರೋಪಿ ಕೈಲಾಶ್ ಮೀನಾ ಮತ್ತು ಅವರ ಕುಟುಂಬದ ಇತರರು ಸಪೋತ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಬುಕ್ನಾ ಗ್ರಾಮದಲ್ಲಿ ಅರ್ಚಕರ ಗುಡಿಸಲಿಗೆ ಬುಧವಾರ ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಲಾಗಿದೆ. ಗಾಯಗೊಂಡ ಅರ್ಚಕರನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿಂದ ವೈದ್ಯರು ಜೈಪುರಕ್ಕೆ ಕಳುಹಿಸಿದರು.

ಗಂಭೀರ ಸ್ಥಿತಿಯಲ್ಲಿ ವೈಷ್ಣವ್ ಅವರನ್ನು ಎಸ್ಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗುರುವಾರ ಸಂಜೆ ತಡವಾಗಿ ಅವರು ಸಾವನ್ನಪ್ಪಿದ್ದಾರೆ.

ಮೂರು ಎಕರೆ ಭೂಮಿ ದೇವಾಲಯದ ಮಾಲೀಕತ್ವದಲ್ಲಿದೆ. ಆದರೆ ಮೀನಾ ಅದರಲ್ಲಿ ಸ್ವಲ್ಪ ಭಾಗವನ್ನು ಅತಿಕ್ರಮಿಸಲು ಬಯಸಿದ್ದರು. ಕೆಲವು ದಿನಗಳ ಹಿಂದೆ, ಮೀನಾ ಕಣ್ಣಿಟ್ಟಿದ್ದ ಭೂಮಿಯಲ್ಲಿ ಅರ್ಚಕರು ತಮಗಾಗಿ ಒಂದು ಮನೆಯನ್ನು ನಿರ್ಮಿಸಲು ಪ್ರಾರಂಭಿಸಿದರು. ಬುಧವಾರ ಆರೋಪಿಗಳು ಗುಡಿಸಲಿನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಅರ್ಚಕ ಬಾಬುಲಾಲ್ ಬೆಂಕಿಯ ಮಧ್ಯೆ ಸಿಲುಕಿಕೊಂಡರು ಎಂದು ಪೊಲೀಸರು ನುಡಿದರು.

ಮುಖ್ಯ ಆರೋಪಿ ಕೈಲಾಶ್ ಮೀನಾ ಅವರನ್ನು ಬಂಧಿಸಲಾಗಿದೆ ಮತ್ತು ಇತರರನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಎಸ್ಪಿ ಹೇಳಿದರು. ಮೀನಾ ಅವರೊಂದಿಗಿನ ಜಮೀನಿನ ವಿವಾದದ ಬಗ್ಗೆ ಅರ್ಚಕರು ಮುನ್ನ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ ಎಂದು ಅವರು ಹೇಳಿದರು.

ವೈಷ್ಣವ್ ಅವರ ಕುಟುಂಬವು ಶವ ಸಂಸ್ಕಾರಕ್ಕಾಗಿ ಶುಕ್ರವಾರ ಶವವನ್ನು ಗ್ರಾಮಕ್ಕೆ ತಂದಿತು.

ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ತನ್ನ ಸಾಯುತ್ತಿರುವ ವೇಳೆಯಲ್ಲಿ ನೀಡಿದ ಸಾಕ್ಷ್ಯದಲ್ಲಿ, ಅರ್ಚಕರು ತಮಗೆ ಬೆಂಕಿ ಹಚ್ಚಿದ ಆರು ಜನರನ್ನು ಹೆಸರಿಸಿದ್ದಾದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ರಾಜ್ಯ ಸರ್ಕಾರವನ್ನು ಟ್ವೀಟ್ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.

ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಸರ್ಕಾರದ ಅಡಿಯಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ ಎಂದು ಇತರ ಕೆಲವು ಬಿಜೆಪಿ ನಾಯಕರು ಆರೋಪಿಸಿದರು.

No comments:

Advertisement