ಗೋಸ್ವಾಮಿಗೆ ಜಾಮೀನು: ಬಾಂಬೆ ಹೈಕೊರ್ಟ್ ನಕಾರ
ಮುಂಬೈ: ೨೦೧೮ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತ ಅರ್ನಾಬ್ ಗೋಸ್ವಾಮಿ ಅವರಿಗೆ ಮಧ್ಯಂತರ ಜಾಮೀನು ನೀಡಲು ಬಾಂಬೆ ಹೈಕೋರ್ಟ್ 2020 ನವೆಂಬರ್ 09ರ ಸೋಮವಾರ ನಿರಾಕರಿಸಿತು.
ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ೨೦೧೮ ರ ಅಪರಾಧ ಪ್ರಕರಣದಲ್ಲಿ ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಜಾಮೀನು ಕೋರಿರುವುದನ್ನು ಬಾಂಬೆ ಹೈಕೋರ್ಟ್ ಸೋಮವಾರ ತಿರಸ್ಕರಿಸಿತು.
ಗೋಸ್ವಾಮಿ ಅವರ ಮನವಿಯ ಮೇರೆಗೆ ಹೈಕೋರ್ಟ್ ತನ್ನ ಆದೇಶವನ್ನು ಶನಿವಾರ ಕಾಯ್ದಿರಿಸಿತ್ತು.
ವಾಸ್ತುಶಿಲ್ಪಿ-ಒಳಾಂಗಣ ವಿನ್ಯಾಸಕ ಅನ್ವಯ್ ನಾಯಕ್ ಮತ್ತು ಅವರ ತಾಯಿಯ ಆತ್ಮಹತ್ಯೆಗೆ ಸಂಬಂಧಿಸಿದಂತೆ ಗೋಸ್ವಾಮಿ ಮತ್ತು ಫಿರೋಜ್ ಶೇಖ್ ಮತ್ತು ನಿತೀಶ್ ಸರ್ದಾ ಅವರನ್ನು ನವೆಂಬರ್ ೪ ರಂದು ಬಂಧಿಸಲಾಗಿತ್ತು.
ಮುಂಬೈಯ ಲೋವರ್ ಪ್ಯಾರೆಲ್ ನಿವಾಸದಿಂದ ಬಂಧನಕ್ಕೊಳಗಾದ ನಂತರ, ಗೋಸ್ವಾಮಿ ಅವರನ್ನು ಅಲಿಬಾಗ್‌ಗೆ ಕರೆದೊಯ್ಯಲಾಗಿತ್ತು. ಅಲ್ಲಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ರು ಗೋಸ್ವಾಮಿ ಮತ್ತು ಇನ್ನಿಬ್ಬರನ್ನು ನವೆಂಬರ್ ೧೮ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದರು.
ಗೋಸ್ವಾಮಿ ಅವರನ್ನು ಅಲಿಬಾಗ್ ಜೈಲಿಗೆ ಕೋವಿಡ್ -೧೯ ಕೇಂದ್ರವೆಂದು ಗೊತ್ತುಪಡಿಸಲಾಗಿದ್ದ ಸ್ಥಳೀಯ ಶಾಲೆಯಲ್ಲಿ ಇರಿಸಲಾಗಿತ್ತು. ಅವರನ್ನು ಭಾನುವಾರ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ತಾಲೋಜ ಜೈಲಿಗೆ ಸ್ಥಳಾಂತರಿಸಲಾಯಿತು. ನ್ಯಾಯಾಂಗ ಬಂಧನದಲ್ಲಿದ್ದಾಗ ಮೊಬೈಲ್ ಫೋನ್ ಬಳಸಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಗೋಸ್ವಾಮಿಯನ್ನು ತಲೋಜ ಜೈಲಿಗೆ ಸ್ಥಳಾಂತರಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ನವೆಂಬರ್ ೪ ರಂದು ಬಂಧನಕ್ಕೊಳಗಾದಾಗ ಗೋಸ್ವಾಮಿ ಅವರ ವೈಯಕ್ತಿಕ ಮೊಬೈಲ್ ಫೋನನ್ನು ಪೊಲೀಸರು ವಶಪಡಿಸಿಕೊಂಡಿದ್ದರೂ, ಬೇರೆಯವರ ಮೊಬೈಲ್ ಫೋನ್ ಬಳಸಿ ಗೋಸ್ವಾಮಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದುದನ್ನು ರಾಯಗಡ್ ಅಪರಾಧ ವಿಭಾಗವು ಕಂಡುಹಿಡಿದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಗೋಸ್ವಾಮಿ ಅವರು ಇದಕ್ಕೂ ಮುನ್ನ ಬಾಂಬೆ ಹೈಕೋರ್ಟ್‌ಗೆ ಮಧ್ಯಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು, ಆಗ ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ಹೈಕೋರ್ಟ್ ಅವರಿಗೆ ಅವಕಾಶ ನೀಡಿತ್ತು. ಪತ್ರಕರ್ತ ಅದರಂತೆ ಸೋಮವಾರ ಸೆಷನ್ಸ್ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರು.
ರಾಜ್ಯಪಾಲರ ಆತಂಕ:
ಈ ಮಧ್ಯೆ, ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರು ರಾಜ್ಯ ಗೃಹ ಸಚಿವ ಅನಿಲ್ ದೇಶಮುಖ್ ಅವರೊಂದಿಗೆ ಮಾತನಾಡಿ, ಬಂಧಿತ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರ ಭದ್ರತೆ ಮತ್ತು ಆರೋಗ್ಯದ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತ ಪಡಿಸಿದ್ದಾರೆ ಎಂದು ರಾಜಭವನದ ಪ್ರಕಟಣೆ ತಿಳಿಸಿದೆ.
ಗೋಸ್ವಾಮಿ ಅವರ ಕುಟುಂಬಕ್ಕೆ ಅವರನ್ನು ಭೇಟಿ ಮಾಡಲು ಅವಕಾಶ ನೀಡುವಂತೆಯೂ ರಾಜ್ಯಪಾಲರು ಗೃಹ ಸಚಿವರಿಗೆ ಸೂಚಿಸಿದರು.
ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ೨೦೧೮ ರ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್ ೪ ರಂದು ಮುಂಬೈ ಪೊಲೀಸರಿಂದ ಬಂಧಿಸಲ್ಪಟ್ಟಿರುವ ಅರ್ನಾಬ್ ಗೋಸ್ವಾಮಿ ಅವರು ತಮಗೆ ಚಿತ್ರಹಿಂಸೆ ನೀಡಲಾಗುತ್ತಿದೆ ಮತ್ತು ತಮ್ಮ ವಕೀಲರೊಂದಿಗೆ ಮಾತನಾಡಲು ಅವಕಾಶ ನೀಡಲಾಗುತ್ತಿಲ್ಲ ಎಂದು ಆಪಾದಿಸಿದ್ದಾರೆ.
ಅವರು ರಿಪಬ್ಲಿಕ್ ಟಿವಿ ವರದಿಗಾರರೊಂದಿಗೆ ವ್ಯಾನ್ ನಿಂದ ಮಾತನಾಡುತ್ತಿದ್ದರು,
‘ನಾನು (ನನ್ನ ವಕೀಲರೊಂದಿಗೆ) ಮಾತನಾಡಲು ಅವಕಾಶ ಮಾಡಿಕೊಡಿ ಎಂದು ಅವರಿಗೆ ವಿನಂತಿಸಿದ್ದೆ. ಆದರೆ ಅವರು ನಿರಾಕರಿಸಿದರು. ನನ್ನ ಜೀವನವು ಅಪಾಯದಲ್ಲಿದೆ ಎಂದು ನಾನು ಎಲ್ಲರಿಗೂ ಹೇಳುತ್ತಿದ್ದೇನೆ. ನನ್ನ ಪೊಲೀಸ್ ಕಸ್ಟಡಿಯನ್ನು ತಿರಸ್ಕರಿಸಲಾಗಿದೆ. ಅವರು ರಾತ್ರಿಯಲ್ಲಿ ನನ್ನನ್ನು ಸ್ಥಳಾಂತರಿಸಲು ಪ್ರಯತ್ನಿಸಿದರು. ಇಂದು ಬೆಳಗ್ಗೆ ಅವರು ನನ್ನನ್ನು ಎಳೆದಾಡಿದ್ದಾರೆ. ನನಗೆ ಏನಾಗುತ್ತಿದೆ ಎಂದು ಎಲ್ಲರೂ ನೋಡುತ್ತಿದ್ದಾರೆ. ಅವರು ಪ್ರಕ್ರಿಯೆಯನ್ನು ವಿಳಂಬಗೊಳಿಸಲು ಮತ್ತು ನನ್ನನ್ನು ಜೈಲಿನಲ್ಲಿಡಲು ಬಯಸುತ್ತಾರೆ. ದಯವಿಟ್ಟು ನನಗೆ ಜಾಮೀನು ನೀಡಿ, ನಾನು ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸುತ್ತಿದ್ದೇನೆ’ ಅರ್ನಾಬ್ ಗೋಸ್ವಾಮಿ ಕೈ ಮುಗಿದುಕೊಂಡು ಹೇಳುತ್ತಿದ್ದ ವಿಡಿಯೋದಲ್ಲಿ ಕಂಡು ಬಂತು.
No comments:
Post a Comment