Friday, April 23, 2021

ಶಾಂತಾರಾಮ ನೀನೂ ರವಿಯ ದಾರಿ ಹಿಡಿದೆಯಾ..?

 ಶಾಂತಾರಾಮ ನೀನೂ ರವಿಯ ದಾರಿ ಹಿಡಿದೆಯಾ..?

2020ರ ಡಿಸೆಂಬರ್ 14.

ಶಾಂತಾರಾಮ, ನೀನೇ ಫೋನ್ ಮಾಡಿದ್ದೆ. ನಾನು ಊರಲ್ಲಿದ್ದೆ. ರವಿ (ವೈ. ರವಿ, ಏತಡ್ಕ) ನಮ್ಮನ್ನು ಬಿಟ್ಟು ಹೋದ ಎಂಬ ಆಘಾತದ ಸುದ್ದಿ ಕೊಟ್ಟೆ. ರವಿಯನ್ನು ಅಗಲಿದ ನೋವು ಇನ್ನೂ ಹೋಗಿಲ್ಲ. ಕೇವಲ ನಾಲ್ಕು ತಿಂಗಳುಗಳು ಕಳೆದಿವೆ.

ಇಂದು 2021 ಏಪ್ರಿಲ್ 23. ಸೂರ್ಯ ವಜ್ರಾಂಗಿ ಮಾಡಿದ ಫೋನ್ ಕರೆ ದಿಕ್ಕೆಡಿಸಿತು. ಶಾಂತಾರಾಮ (ಶಾಂತಾರಾಮಭಟ್, ಇಟಗಿ ಸಿದ್ದಾಪುರ) ನೀನೂ ರವಿಯ ಬೆಂಬತ್ತಿಕೊಂಡು ಹೋಗಿ ಬಿಟ್ಟೆಯಲ್ಲ…

ಸಂಯುಕ್ತ ಕರ್ನಾಟಕದ ದಿನಗಳಿಂದ ಹಿಡಿದು ಪ್ರಜಾವಾಣಿಯ ಸೇವೆ ಸಲ್ಲಿಸಿ, ನಿವೃತ್ತಿಯ ಬಳಿಕವೂ ಮುಂದುವರೆದ ನಮ್ಮ ಸ್ನೇಹಕ್ಕೆ 33 ವರ್ಷಗಳಿಗೂ ಹೆಚ್ಚಿನ ಇತಿಹಾಸ. ಜೊತೆಯಾಗಿ ಕೆಲಸ ಮಾಡಿದ ದಿನಗಳಷ್ಟೇ ಅಲ್ಲ, ಹಳ್ಳಿಗಳಿಂದ ಬಂದು ಬೆಂಗಳೂರಿನಲ್ಲಿ ನಿಂತ ತನ್ನಂತಹವರಿಗೆ ಸೂರು ಕಟ್ಟಿಕೊಳ್ಳಲು ನಡೆಸಿದ ಪ್ರಯತ್ನಗಳು, ಮನೆಕಟ್ಟಿಕೊಂಡ ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಮೂಲಭೂತ ಸೌಕರ್ಯಗಳಿಗಾಗಿ ಪಟ್ಟ ಶ್ರಮ, ಜೊತೆಗೆ ನ್ಯಾಯಕ್ಕಾಗಿ ಮಾಡಿದ ಹೋರಾಟಗಳ ನೆನಪು ಕೂಡಾ ಎಂದಿಗೂ ಮರೆಯಾದಂತಹುದು. ಹೈಕೋರ್ಟಿನಲ್ಲಿ ಹೂಡಿದ್ದ ನಿವೃತ್ತಿ ವಯೋಮಿತಿ-ವೇತನ ಏರಿಕೆಗೆ ಸಂಬಂಧಿಸಿದ ಪ್ರಕರಣ ನ್ಯಾಯಮೂರ್ತಿಗಳ ಮುಂದೆ ಬರುತ್ತಿಲ್ಲವೆಂದು ಕೆಲವೇ ದಿನಗಳ ಹಿಂದೆ ವಕೀಲರ ಜೊತೆಗೆ ತಗಾದೆ ಕೂಡಾ ತೆಗೆದಿದ್ದೆಯಲ್ಲ?

ಆದರೆ, ಶಾಂತಾರಾಮ ಎಂತಹ ಸನ್ನಿವೇಶದಲ್ಲಿ ನೀವಿಬ್ಬರೂ ಹೊರಟು ಬಿಟ್ಟಿರಿ. ದಿನದಿಂದ ದಿನಕ್ಕೆ ಉಲ್ಬಣಿಸುತ್ತಿರುವ ಕೊರೋನಾ ಸೋಂಕು ಕೊನೆಯ ಗಳಿಗೆಯಲ್ಲಿ ಕೂಡಾ ಮುಖ ನೋಡದಂತೆ ಮಾಡಿ ಬಿಟ್ಟಿತು.

ಏನೂ ಬರೆಯಲಾಗುತ್ತಿಲ್ಲ…. ಕ್ಷಮಿಸು ಶಾಂತಾರಾಮ, ಕ್ಷಮಿಸು ರವಿ.

ನಿಮ್ಮ ಆತ್ಮಗಳು ಒಟ್ಟಾಗಿ ಶಾಂತಿ ಪಡೆಯಲಿ. ಕುಟುಂಬ, ಬಂಧು ವರ್ಗದವರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ.

-ನೆತ್ರಕೆರೆಉದಯಶಂಕರ

Advertisement