ಕಡೆಗೂ ಹಾರಿತು ಹದ್ದಿನ ಮರಿ ….!
ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆ. 2021 ಜುಲೈ 13ರ ಮಂಗಳವಾರ ಬೆಳಗ್ಗೆ 9.36ರ ಸಮಯ. ಬಡಾವಣೆಯ ವಾಟ್ಸಪ್ ಗುಂಪಿನಲ್ಲಿ ಮರವೊಂದರಲ್ಲಿ ಹಕ್ಕಿ ನೇತಾಡುತ್ತಿರುವ ಚಿತ್ರದ ಸಹಿತ ಸಂದೇಶ ಒಂದು ಪ್ರಕಟವಾಯಿತು. ಆರೋನ್ ಎಂಬವರು ಪ್ರಕಟಿಸಿದ ಚಿತ್ರದ ಮರದಲ್ಲಿ ಬಾವಲಿಯಂತೆ ಹಕ್ಕಿಯೊಂದು ನೇತಾಡುತ್ತಿತ್ತು.
‘ಈ ಬಡಪಾಯಿ ಹಕ್ಕಿಗೆ (ಈಗಲ್ - ಹದ್ದು) ಹಾರಲು ಯಾರಾದರೂ ನೆರವಾಗುತ್ತೀರಾ? ಇದರ ರೆಕ್ಕೆಗೆ ಗಾಳಪಟದ ನೂಲು ಸಿಕ್ಕಿ ಹಾಕಿಕೊಂಡಿದೆ. ಅದರಿಂದ ತಪ್ಪಿಸಿಕೊಳ್ಳಲು ನಡೆಸಿದ ಯತ್ನದಲ್ಲಿ ಅದು ನೂಲಿನಲ್ಲಿ ಇನ್ನಷ್ಟು ಸಿಕ್ಕಿ ಹಾಕಿಕೊಂಡಿದೆ. ಅದಕ್ಕೆ ತಾನಾಗಿಯೇ ಹಾರಲು ಸಾಧ್ಯವಾಗುತ್ತಿಲ್ಲ. ಈ ಹಕ್ಕಿ ಸಿಕ್ಕಿಹಾಕಿಕೊಂಡಿರುವ ಜಾಗ ಬಡಾವಣೆಯ 2ನೇ ಕ್ರಾಸಿನ ದಕ್ಷಿಣ ಬದಿ’ ಎಂದು ಆರೋನ್ ಬರೆದಿದ್ದರು.
‘ಅಗ್ನಿಶಾಮಕ ದಳದ ಮಂದಿ ಈ ಪ್ರಕರಣದಲ್ಲಿ ನೆರವಾಗಬಹುದೇನೋ ಎಂದು ಯೋಚಿಸುತ್ತಿದ್ದೇನೆ. ಏಕೆಂದರೆ ಅವರ ಬಳಿ ದೊಡ್ಡ ಏಣಿಗಳು ಇರುತ್ತವೆ. ಈ ಏಣಿಗಳೂ ಈ ಎತ್ತರವನ್ನು ತಲುಪಬಹುದು. ಕೆಲವು ವರ್ಷಗಳ ಹಿಂದೆ ನನ್ನ ಕಚೇರಿಯ ಸಮೀಪ ಪಾರಿವಾಳವೊಂದು ಗಗನಚುಂಬಿ ಕಟ್ಟಡದಲ್ಲಿ ಹೀಗೆ ಸಿಕ್ಕಿಹಾಕಿಕೊಂಡಿತ್ತು. ಅಗ್ನಿಶಾಮಕ ದಳದವರು ಅಲ್ಲಿಗೆ ಬಂದು ತಮ್ಮ ಎತ್ತರದ ಏಣಿಗಳನ್ನು ಬಳಸಿ ರಕ್ಷಿಸಿದ್ದರು’ ಕಾರ್ತಿಕ್ ಅದಕ್ಕೆ ಪ್ರತಿಕ್ರಿಯಿಸಿದರು.
‘ಹೌದು ನೀವು ಅವರನ್ನ ಕರೆಯಬಹುದು’ ಬಡಾವಣೆಯ ಸಂಘದ ಸಹಕಾರ್ಯದರ್ಶಿ ರಾಘವೇಂದ್ರ ಕಾಮತ್ ಸೂಚಿಸಿದರು. ‘ಹೌದು’ ಇದು ಈಗಲ್ ಮರಿ’ ಎಂದೂ ಹಕ್ಕಿಯ ಚಿತ್ರವನ್ನು ಹಿರಿದುಗೊಳಿಸಿ ಅವರು ವಿವರಿಸಿದರು.
‘ಹತ್ತಿರದಲ್ಲೇ ಪ್ರಾಣಿ ರಕ್ಷಣಾ ಕೇಂದ್ರದವರಿದ್ದಾರೆಯೇ ಎಂದು ನೀವು ಪರಿಶೀಲಿಸಬಹುದು. ಅವರು ನೆರವು ನೀಡಬಹುದು’ ಎಂದು ಸೂಚನೆ ಸೈಯದ್ ವಾಸೀಮ್ ಅವರಿಂದ ಬಂತು. ಹಕ್ಕಿ ಸಂರಕ್ಷಣಾ ಕೇಂದ್ರದ ನಂಬರ್ 944964222 ಇದನ್ನೂ ಅವರು ನಮೂದಿಸಿದರು. ‘ಸಂಪರ್ಕಿಸಲು ಯತ್ನಿಸುತ್ತಿದ್ದೇನೆ ಬಿಜಿ ಬರುತ್ತಿದೆ’ ಎಂದು ವಾಸೀಮ್ ಬರೆದರು.
‘ಬೆಸ್ಕಾಮ್ ಅಥವಾ ಬಿಬಿಎಂಪಿಯವರನ್ನು ಕರೆಯಿರಿ. ಅವರ ಬಳಿಯೂ ದೊಡ್ಡ ದೊಡ್ಡ ಏಣಿಗಳಿವೆ. ಅವರು ನೆರವಾಗಬಹುದು’ ಎಂದರು ಮಂಜುಳಾ.
‘ಅವರನ್ನು ಕೂಡಾ ಕರೆಯಲು ಯತ್ನಿಸುತ್ತೇನೆ’ ಉತ್ತಿಸಿದರು ವಾಸೀಮ್. ‘ಪೀಪಲ್ ಫಾರ್ ಎನಿಮಲ್ಸ್’ನವರನ್ನು ಕರೆಯಿರಿ. ಇದು ಅವರ ನಂಬರ್ 9900025370. ನಾನು ಈಗಷ್ಟೇ ಅವರ ಬಳಿ ಮಾತನಾಡಿದೆ. ಅವರಿಗೆ ಲೊಕೇಷನ್ ಮತ್ತು ವಿಡಿಯೋ ಬೇಕಂತೆ’ ಸುಧೀರ್ ತಮ್ಮ ಸಂದೇಶವನ್ನು ಪ್ರಕಟಿಸಿದರು.
‘ಹಿಂದೊಮ್ಮೆ ಕಾಗೆ ಮರಿಯೊಂದು ಈ ಬಡಾವಣೆಯ 3ನೇ ಕ್ರಾಸಿನಲ್ಲಿ ಹೀಗೆ ಸಿಕ್ಕಿ ಹಾಕಿಕೊಂಡಿತ್ತು. ನಾನು ಅದನ್ನು ಉದ್ದವಾದ ಕೋಲಿನ ನೆರವಿನಿಂದ ಬಿಡಿಸಿದ್ದೆ’ ಮಧು ನಾಯರ್ ಅವರಿಗೆ ಹಿಂದಿನ ಘಟನೆ ನೆನಪಾಯಿತು.
‘ಇದು ಪೀಪಲ್ ಫಾರ್ ಎನಿಮಲ್ಸ್’ನವರ ಸ್ಥಿರ ದೂರವಾಣಿ ಸಂಖ್ಯೆ ‘080-28611986’ ಇದಕ್ಕೂ ಕರೆ ಮಾಡಿ’ ಸುಧೀರ್ ಮತ್ತೆ ಸೂಚಿಸಿದರು.
‘ಈಗಾಗಲೇ ತಿಳಿಸಿ ಆಗಿದೆ. ಅವರು ಬಾಕಿ ಇರುವ ಪ್ರಕರಣಗಳನ್ನು ಮುಗಿಸಿಕೊಂಡು ಬರುತ್ತಾರಂತೆ. ಆದರೆ ಅದು ತಡವಾಗಬಹುದೇನೋ?’ ನಾನು ಗಾಳಿಪಟದ ನೂಲನ್ನು ಕತ್ತರಿಸಿದೆ. ಆದರೆ ನೂಲು ರೆಕ್ಕೆಗಳಿಗೆ ಸುತ್ತಿಕೊಂಡು ಕೊಂಬೆಗೆ ಸಿಕ್ಕಿ ಹಾಕಿಕೊಂಡಿದೆ’ ರಾಘವೇಂದ್ರ ಕಾಮತ್ ಆತಂಕ ವ್ಯಕ್ತ ಪಡಿಸಿದರು. ‘ಹೌದಾ’ ಮಧು ನಾಯರ್ ಅವರಿಂದ ಅಸಹಾಯಕತೆಯ ಭಾವ ವ್ಯಕ್ತವಾಯಿತು.
‘ಉದಯಶಂಕರ್ ಅವರು ಬೀದಿ ದೀಪ ಸರಿ ಪಡಿಸುವವರನ್ನು ಕರೆದಿದ್ದಾರೆ. ಬಹುಶ ಅವರು ನೆರವಿಗೆ ಬರಬಹುದು’ ರಾಘವೇಂದ್ರ ಕಾಮತ್ ಆಶಾಭಾವನೆ ವ್ಯಕ್ತ ಪಡಿಸಿದರು.
‘ಇದು ಹೊರಮಾವು ಘಟಕದ ನಂಬರ್ 9449642222’ ಸುಧೀರ್ ಇನ್ನೊಂದು ಮೊಬೈಲ್ ನಂಬರ್ ನೀಡಿದರು.
‘ನಾನೂ ಪ್ರಯತ್ನಿಸಿದೆ. ನಾವು ಕೊಂಬೆ ಕಡಿಯಬೇಕಾಗಬಹುದು. ಆದರೆ ಅದು ತುಂಬಾ ಎತ್ತರದಲ್ಲಿದೆ. ಅಲ್ಲಿಗೆ ಏರುವುದು ಕಷ್ಟ. ಮೇಲಿನ ಯಾವುದಾದರೂ ತಂಡ ಬರಬಹುದು ಎಂದು ಆಶಿಸೋಣ’ ಮಧು ನಾಯರ್ ಆಸೆ. ‘ಹಕ್ಕಿಈಗ ಸದ್ದಿಲ್ಲದೆ ನೇತಾಡುತ್ತಿದೆ. ಹೀಗೆ ಸದ್ದಿಲ್ಲದೆ ನೇತಾಡುತ್ತಿದ್ದರೆ, ಸ್ವಲ್ಪ ತಡವಾದರೂ ಅದಕ್ಕೆ ಹಾನಿ ಆಗದೇ ಇರಬಹುದು’ ನಾಯರ್ ಸಂದೇಶಕ್ಕೆ ಸ್ವಲ್ಪ ನಿರಾಳತೆಯ ವಾಕ್ಯ ಸೇರಿತ್ತು.
‘ಈಗ ಬರಬಹುದು. ನನಗೆ ಉದ್ದವಾದ ಪೈಪ್ ಸಿಕ್ಕಿದೆ’ ನಾಯರ್, ಕಾಮತ್ ಸಂದೇಶಕ್ಕೆ ಸಂಘದ ಆಂತರಿಕ ಲೆಕ್ಕ ಪರಿಶೋಧಕ ಮೊಹ್ಸಿನ್ ಪ್ರತಿಕ್ರಿಯಿಸಿದರು.
‘ಪ್ರಯತ್ನಿಸಿದೆ, ಅದೂ ಸಾಲುತ್ತಿಲ್ಲ’ ಮೊಹ್ಸಿನ್ ನಿರಾಶೆ.
‘ಇರಲಿ, ಹೇಗಿದ್ದರೂ ಅವರು ಬರುತ್ತಿದ್ದಾರಲ್ಲ. ಕಾಯೋಣ’ ಮಧು ನಾಯರ್.
ಗಂಟೆ 11.31 ಆಗಿತ್ತು. ಹಕ್ಕಿ ಸಿಕ್ಕಿ ಹಾಕಿಕೊಂಡು ಅದಾಗಲೇ ಸುಮಾರು 2 ಗಂಟೆಗಳಾಗಿತ್ತು. ಹಕ್ಕಿಯಿಂದ ಯಾವ ಸದ್ದೂ ಇರಲಿಲ್ಲ.
‘ಓಹ್ ಬಂದರು’ ಮೊಹ್ಸಿನ್ ಖುಷಿಯ ಸಂದೇಶ. ಮಧು ನಾಯರ್ ಅವರಿಂದಲೂ ಖುಷಿಯ ಸಂಕೇತ.
ಬೆಳಗ್ಗೆ 11.31ರಿಂದ 11.51ರವರೆಗೆ ಸ್ಮಶಾನ ಮೌನ. ಹಕ್ಕಿಗೆ ಏನಾಗಿದೆಯೋ ಏನೋ ಎಂಬ ಆತಂಕ.
ಸುಮಾರು 20 ನಿಮಿಷಗಳ ಬಳಿಕ ರಾಘವೇಂದ್ರ ಕಾಮತ್ ಸಂದೇಶ ಪ್ರಕಟವಾಯಿತು: ‘ಹಕ್ಕಿಯ ರಕ್ಷಣೆಯಾಯಿತು. ಧನ್ಯವಾದಗಳು ಎಆರ್ ಆರ್ ಸಿ ಹಕ್ಕಿ ರಕ್ಷಣಾ ತಂಡಕ್ಕೆ’
ಸಂದೇಶದ ಜೊತೆಗೆ ಎಆರ್ ಆರ್ ಸಿ ತಂಡದ ಕಾರು, ಏಣಿ, ನೂಲಿನ ಜೊತೆಗೆ ತಂಡದ ಕಾರ್ಯಾಚರಣೆಯ ವಿಡಿಯೋವನ್ನೂ ಕಾಮತ್ ಸಂದೇಶ ಹಂಚಿಕೊಂಡಿತ್ತು.
‘ಓಹ್. ನಿಮಗೆ ಇಡೀ ತಂಡಕ್ಕೆ ಧನ್ಯವಾದಗಳು’ ಆರೋನ್ ಕೃತಜ್ಞತೆ ಸಲ್ಲಿಸಿದರು. ‘ ಎಆರ್ ಆರ್ ಸಿ ತಂಡಕ್ಕೆ ಧನ್ಯವಾದಗಳು’ ಸೈಯದ್ ವಾಸೀಮ್ ಸಂದೇಶ ಅದಕ್ಕೆ ಜೋಡಿಯಾಯಿತು. ಮಂಜುಳಾ, ಮಧು ನಾಯರ್ ಅವರಿಂದಲೂ ಖುಷಿಯ ಸಂದೇಶ ಹೊರ ಹೊಮ್ಮಿತು.
‘ಎಆರ್ ಆರ್ ಸಿ ತಂಡದಿಂದ ಅತ್ಯಂತ ಅದ್ಭತ ಕೆಲಸ. ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ’-ಇಡೀ ಬಡಾವಣೆಯ ಪರವಾಗಿ ತಮ್ಮ ಕೃತಜ್ಞತೆ ಸಲ್ಲಿಸಿದರು ಸಂಘದ ಅಧ್ಯಕ್ಷ ಶಿವಪ್ಪ ಶಾಂತಪ್ಪನವರ್. ‘ಉತ್ತಮ ಕೆಲಸ’ ಎಂದು ದನಿ ಗೂಡಿಸಿದರು ವಿಕಾಸ್ ವರ್ಮಾ.
ಸುಮಾರು ಎರಡು ಗಂಟೆಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ ಪುಟ್ಟ ಹಕ್ಕಿ ಮರಿ ಕಡೆಗೂ ಸ್ವಚ್ಚಂದವಾಗಿ ಬಾನಿನಲ್ಲಿ ಹಾರಿತ್ತು. ಗಾಳಿಪಟದ ನೂಲು ಎಂಬ ‘ಮೃತ್ಯು ಪಾಶ’ದಿಂದ ಪಾರಾಗಿತ್ತು.
ಹಾಗಾದರೆ ಎ ಆರ್ ಆರ್ ಸಿ ತಂಡದವರು ಮಾಡಿದ್ದೇನು?
ಈ ಪುಟ್ಟ ವಿಡಿಯೋ ನೋಡಿ:
-ನೆತ್ರಕೆರೆ ಉದಯಶಂಕರ
1 comment:
kannada quotes
apj abdul kalam quotes in kannada - ಡಾ.ಎ.ಪಿ.ಜೆ ಅಬ್ದುಲ್ ಕಲಾಂ ರವರ ನುಡಿಮುತ್ತುಗಳು
Gautama buddha quotes in kannada
kannada Quotes about life - ಜೀವನದ ಬಗ್ಗೆ ಉಲ್ಲೇಖಗಳು ಕನ್ನಡ
Good morning quotes in kannada | ಶುಭ ಮುಂಜಾನೆ ಗುಡ್ ಮಾರ್ನಿಂಗ್ ಶುಭೋದಯ quotes
friendship day 2022 kannada quotes - heart touching friendship quotes kannada
Best Positive vivekananda kannada quotes - vivekananda kannada nudimuttugalu
heart touching friendship kannada quotes - 2022 friendship day quotes
kannada quotes about love
kannada quotes images
Post a Comment