Sunday, September 12, 2021

ಪಶ್ಚಿಮ ಘಟ್ಟ: ಹೀಗೊಂದು ದೃಶ್ಯ ಕಾವ್ಯ…

 ಪಶ್ಚಿಮ ಘಟ್ಟ: ಹೀಗೊಂದು  ದೃಶ್ಯ ಕಾವ್ಯ…


ಪಶ್ಚಿಮ ಘಟ್ಟ- ದಕ್ಷಿಣ ಭಾರತದ ಕಾಶ್ಮೀರವೆಂದರೆ ತಪ್ಪಲ್ಲ. ಪಶ್ಚಿಮ ಘಟ್ಟದ ಕಾನನಗಳ ಮಧ್ಯೆ ಚಾರಣ, ಪಯಣ ಒಂದು ಅಪೂರ್ವ ಅನುಭವ.

ಬೆಟ್ಟ, ಗುಡ್ಡ, ಕಣಿವೆ, ನೀರಿನ ಝರಿಗಳು,ಕಣಿವೆ- ಪ್ರಪಾತಗಳು, ಸೇತುವೆಗಳು, ಸುರಂಗಗಳು, ಅಪರೂಪದ ಸಸ್ಯರಾಶಿ, ಹಾವು ಪವಡಿಸಿದಂತೆ  ಕಾಣುವ ಮಾರ್ಗ, ಇವೆಲ್ಲಕ್ಕೆ ಕಿರೀಟವಿಟ್ಟಂತೆ ತೇಲುವ ಮೋಡ, ಹಿಮ, ತೀಡುವ ತಂಗಾಳಿ…

ಪಶ್ಚಿಮ ಘಟ್ಟದ ಆಹ್ಲಾದಕರ ಅನುಭವವನ್ನು  ಅಲ್ಲಿ ಪಯಣಿಸಿದವರೇ ಬಲ್ಲರು. ದಶಕಗಳಿಂದಲೇ ಇಲ್ಲಿ ಓಡುತ್ತಿರುವ ರೈಲುಗಳಲ್ಲಿ ಪಶ್ಚಿಮ ಘಟ್ಟದ ಈ ಸೊಬಗು ವೀಕ್ಷಿಸಲೆಂದೇ ಹಗಲು ರೈಲಿನಲ್ಲಿ ಪಯಣಿಸುವವರ ಸಂಖ್ಯೆ ಕಡಿಮೆಯೇನೂ ಇಲ್ಲ. ಮೊಬೈಲ್ ಯುಗ ಆರಂಭವಾದ ಬಳಿಕವಂತೂ ಸಕಲೇಶಪುರ ಕಳೆಯಿತು ಎಂದರೆ ಸುಬ್ರಹ್ಮಣ್ಯ ರಸ್ತೆಯವರೆಗೂ ಮೊಬೈಲ್ ಕ್ಲಿಕ್ಕಿಸಿಕೊಂಡು ಫೊಟೋಗ್ರಾಫರ್ ಆಗಿದ್ದೇವೆಂದು ಹೆಮ್ಮೆಯಿಂದ ಬೀಗುವವರಿಗೆ ಲೆಕ್ಕವಿಲ್ಲ.

ಪಶ್ಚಿಮ ಘಟ್ಟದ ಸೊಬಗನ್ನು ಜನರಿಗೆ ಪರಿಚಯಿಸಲೆಂದೇ ರೈಲ್ವೇ ಇಲಾಖೆಯು ಈ ಮಾರ್ಗದಲ್ಲಿ ಈಗ ವಿಸ್ಟಾಡೋಮ್ ರೈಲು ಪಯಣವನ್ನೂ ಹಗಲಿನಲ್ಲಿ ಆರಂಭಿಸಿದೆ. ಸಂಪೂರ್ಣ ಗಾಜುಮಯವಾದ ಈ ರೈಲಿನಲ್ಲಿ ನಿಮಗೆ ಪಶ್ಚಿಮಘಟ್ಟದಲ್ಲಿ ಕುಳಿತುಕೊಂಡೇ ಹಾರುತ್ತಿರುವ ಅನುಭವ ಆಗಬಲ್ಲುದು.

ಛಾಯಾಚಿತ್ರಕಾರರಿಗಂತೂ ಪಶ್ಚಿಮ ಘಟ್ಟದ ರೈಲು ಪಯಣ ಒಂದು ಹಬ್ಬ. ತಮ್ಮ ಕ್ಯಾಮರಾ ಹೆಗಲಿಗೇರಿಸಿಕೊಂಡು ಭೂಮಾತೆಯ ಸೌಂದರ್ಯವನ್ನು ಸೆರೆ ಹಿಡಿಯಲು ಅವರಿಗೆ ಅಮಿತೋತ್ಸಾಹ.

ಪಕ್ಷಿ, ಪ್ರಾಣಿ, ಪ್ರಕೃತಿ, ಕೋಟೆ – ಹೀಗೆ ವೈವಿಧ್ಯಮಯ ಛಾಯಾಚಿತ್ರಗಳನ್ನು ತೆಗೆಯುವುದರಲ್ಲಿ ಸಿದ್ಧ ಹಸ್ತರಾದ ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣರಿಗೂ ಪಶ್ಚಿಮ ಘಟ್ಟದ ಸೊಬಗು ಸೆರೆ ಹಿಡಿಯುವುದೆಂದರೆ ಅಪಾರ ಆಸಕ್ತಿ. ವಿಸ್ಟಾಡೋಮ್ ಪಯಣ ಆರಂಭಕ್ಕೆ ಸ್ವಲ್ಪ ಮುನ್ನವೇ ಅವರು ಸೆರೆ ಹಿಡಿದ ಪಶ್ಚಿಮ ಘಟ್ಟದ ಛಾಯಾಚಿತ್ರಗಳು ಅಪ್ಯಾಯಮಾನವಾಗಿವೆ.

ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಇಡೀ ದೇಶದ ಜನರನ್ನು ಬಡಿದೆಬ್ಬಿಸಿದ್ದ ವಂದೇ ಮಾತರಂ ಗೀತೆಯಲ್ಲಿ ಬಂಕಿಮ್ ಚಂದ್ರ ಚಟರ್ಜಿಯವರು ವರ್ಣಿಸಿದ್ದ ಭೂಮಾತೆಯ ಸೊಬಗು ಈ ಪಶ್ಚಿಮ ಘಟ್ಟದಲ್ಲಿ ಪಯಣಿಸುವಾಗ ಕಣ್ಣಿಗೆ ರಾಚುತ್ತದೆ.

ಈ ವಂದೇ ಮಾತರಂ ಗೀತೆಯನ್ನು ಭಾಗವತರಾದ ಪಟ್ಲಸತೀಶ ಶೆಟ್ಟಿ, ಸತ್ಯನಾರಾಯಣ ಪುಣ್ಚಿತ್ತಾಯ ಮತ್ತು ಕಾವ್ಯಶ್ರೀ  ಅಜೇರು ಅವರು ಯಕ್ಷಗಾನದ ಶೈಲಿಯಲ್ಲಿ ಹಾಡಿದ್ದು ಇತ್ತೀಚೆಗೆ ವಾಟ್ಸಪ್ ಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು.

ವಿಶ್ವನಾಥ ಸುವರ್ಣರ ಪಶ್ಚಿಮ ಘಟ್ಟದ ಛಾಯಾಚಿತ್ರಗಳನ್ನು ನೋಡುತ್ತಿದ್ದಂತೆಯೇ  ಮನಸ್ಸಿನಲ್ಲಿ ಭಾರತ ಮಾತೆಯ ಸೊಬಗನ್ನು ಬಣ್ಣಿಸುವ ‘ವಂದೇ ಮಾತರಂ’ ಮನದೊಳಗೆ ಮೂಡಿಬಂದದ್ದರ ಪರಿಣಾಮವೇ  ಈ ‘ವಂದೇ ಮಾತರಂ ದೃಶ್ಯ ಕಾವ್ಯದ ಚಿತ್ರಣ ನೀಡುವ ವಿಡಿಯೋ ಸೃಷ್ಟಿಗೆ  ಪ್ರೇರಣೆಯಾಯಿತು.

ಈ ದೃಶ್ಯ ಕಾವ್ಯದ  ಎರಡು ಆವೃತ್ತಿಗಳು ಇಲ್ಲಿವೆ: ಕೇಳಿ ಆನಂದಿಸಿ. ಈ ವಿಡಿಯೋಗಳು ‘ಪರ್ಯಾಯ-5’ ಯು ಟ್ಯೂಬ್ ಚಾನೆಲ್ ನಲ್ಲಿಯೂ ಲಭ್ಯವಿವೆ.

ವಿಡಿಯೋಗಳನ್ನು ವೀಕ್ಷಿಸಲು ಕೆಳಗಿನ ಚಿತ್ರಗಳನ್ನು ಕ್ಲಿಕ್ ಮಾಡಿ.




-ನೆತ್ರಕೆರೆ ಉದಯಶಂಕರ.

No comments:

Advertisement