My Blog List

Sunday, November 21, 2021

ಪ್ರಜಾಪ್ರಭುತ್ವದ ತಾಯಿ ಭಾರತ

 ಪ್ರಜಾಪ್ರಭುತ್ವದ ತಾಯಿ ಭಾರತ


ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯ 76ನೇ ಸಮ್ಮೇಳನದಲ್ಲಿ ಮಾತನಾಡುತ್ತಾ ‘ಪ್ರಜಾಪ್ರಭುತ್ವದ ತಾಯಿ’ ಎನಿಸಿರುವ ಭಾರತದ ಪ್ರತಿನಿಧಿಯಾಗಿ ವಿಶ್ವಸಂಸ್ಥೆಯನ್ನು ಪ್ರತಿನಿಧಿಸುತ್ತಿರುವುದಕ್ಕಾಗಿ ತಮಗೆ ಹೆಮ್ಮೆಯಾಗುತ್ತದೆ. ಭಾರತದ ಪ್ರಜಾಪ್ರಭುತ್ವಕ್ಕೆ ಸಹಸ್ರಾರು ವರ್ಷಗಳ ಇತಿಹಾಸವಿದೆ ಎಂಬುದಾಗಿ ಹೇಳಿದರು.

ವಿಶ್ವದ ಪ್ರಜಾಪ್ರಭುತ್ವಕ್ಕೆ ಗ್ರೀಕ್ ದೇಶವೇ ಮೂಲ ಎಂಬುದಾಗಿ ನಂಬಿದ್ದ ಹಲವರಿಗೆ ಇದು ಇರುಸು ಮುರುಸು ಉಂಟು ಮಾಡಿದ್ದು ಸುಳ್ಳಲ್ಲ. ಸಾಮಾಜಿಕ ಜಾಲತಾಣದಲ್ಲಿ ಇದರ ಬಗ್ಗೆ ಬಹಳಷ್ಟು ಚರ್ಚೆಗಳು ನಡೆದವು.

ಈ ಸಂದರ್ಭದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯ ಕೇಂದ್ರದ ಸಹವರ್ತಿ ಕಾನ್‌ಸ್ಟಾಂಟಿನೋ ಕ್ಸೇವಿಯರ್  ಮಾಡಿದ ಒಂದು ಟ್ವೀಟ್ ಎಲ್ಲರ ಗಮನ ಸೆಳೆಯಿತು.

 "ಸ್ಥಳೀಯ ಭಾರತೀಯ ಪ್ರಜಾಪ್ರಭುತ್ವ" ಎಂಬ ಪರಿಕಲ್ಪನೆಯನ್ನು ಭಾರತದ ದಿಗಂಗತ ಪ್ರಧಾನಿಗಳಾಗಿದ್ದ ಮೊರಾರ್ಜಿ ದೇಸಾಯಿ ಮತ್ತು  ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ಹಲವರು ಪ್ರಸ್ತಾಪಿಸಿದ್ದರು ಎಂದು ಅವರು ಟ್ವೀಟ್ ಮಾಡಿದರು.

ಅನೇಕ ವರ್ಷಗಳಿಂದ ವ್ಯಾಪಕವಾಗಿ ಪ್ರಚಾರದಲ್ಲಿರುವ  ಸಂದರ್ಶನ ಒಂದರ ಕಡೆಗೆ ಕ್ಸೇವಿಯರ್ ಗಮನ ಸೆಳೆದಿದ್ದರು.   “ಭಾರತದಲ್ಲಿ ಪ್ರಜಾಪ್ರಭುತ್ವವು ಇತರ ದೇಶಗಳಿಗಿಂತ ಹೆಚ್ಚು ಸಹಜವಾಗಿದೆ ಎಂಬುದನ್ನು ಜನರು ಮರೆಯುತ್ತಾರೆ. ಏಕೆಂದರೆ ಪ್ರಪಂಚದಲ್ಲಿ ಬೇರೆ ಯಾವುದೇ ದೇಶವು ಕನಸು ಕಾಣುವ ಮೊದಲೇ ಭಾರತದಲ್ಲಿ ಪ್ರಜಾಪ್ರಭುತ್ವವಿತ್ತು. ಇದು ವೇದಗಳಲ್ಲಿ ಇದೆ, ಅದನ್ನು ಸಂಪೂರ್ಣವಾಗಿ ಮತ್ತು ದೃಢವಾಗಿ ವಿವರಿಸಲಾಗಿದೆ " ಎಂದು ಮೊರಾರ್ಜಿ ದೇಸಾಯಿ ಹೇಳಿದ್ದರು.

ಬ್ರಿಟನ್‌ನಲ್ಲಿ ಅನೇಕರು ಭಾರತಕ್ಕೆ ತಾವು ನೀಡಿರುವ ಕೊಡುಗೆ  ಪ್ರಜಾಪ್ರಭುತ್ವ ಎಂದು ಭಾವಿಸಿದ್ದಾರಲ್ಲ ಎಂದು ಸಂದರ್ಶಕರು ಕಾಲೆಳೆದಾಗ ಮೊರಾರ್ಜಿ ಹೀಗೆ ಉತ್ತರಿಸಿದ್ದರು:  “ಅದು ಅವರಿಗೆ  ಇಷ್ಟವಾದರೆ, ಅದರ ಬಗ್ಗೆ ನನಗೆ ಯಾವುದೇ ತಕರಾರು ಇಲ್ಲ. ಆದರೆ ನಾವು 2,500 ವರ್ಷಗಳ ಹಿಂದೆ ಗಣರಾಜ್ಯಗಳನ್ನು ಹೊಂದಿದ್ದೆವು - 2,500 ವರ್ಷಗಳ ಹಿಂದೆ, ಗ್ರೀಸ್ ತನ್ನದೇ ರೀತಿಯ ಪ್ರಜಾಪ್ರಭುತ್ವವನ್ನು ಹೊಂದಿರುವುದಕ್ಕಿಂತ  ಮುಂಚೆಯೇ”.

ನಂತರ, 2003 ರಲ್ಲಿ,ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಭಾರತದ ಸಂಸತ್ತಿನ ಸುವರ್ಣ ಮಹೋತ್ಸವದ ಅಂಗವಾಗಿ ನಡೆದ ಅಂತಾರಾಷ್ಟ್ರೀಯ ಸಂಸತ್ತಿನ ಸಮ್ಮೇಳನದಲ್ಲಿ, "ಭಾರತದ ಪ್ರಜಾಪ್ರಭುತ್ವವು ಆಳವಾದ ಬೇರುಗಳನ್ನು ಹೊಂದಿದೆ ಮತ್ತು ನಮ್ಮ ಪ್ರಾಚೀನ ಸಂಸ್ಕೃತಿಯು ವಿಭಿನ್ನ ಮತ್ತು ಭಿನ್ನಾಭಿಪ್ರಾಯಗಳಿಗೆ ಗೌರವವನ್ನು ಕಲಿಸುತ್ತದೆ” ಎಂದು ಹೇಳಿದ್ದನ್ನೂ ಕ್ಸೇವಿಯರ್ ತಮ್ಮ ಟ್ವೀಟಿನಲ್ಲಿ ಪ್ರಸ್ತಾಪಿಸಿದರು.

1990 ರಲ್ಲಿ  ಆಗಿನ ವಿದೇಶಾಂಗ ವ್ಯವಹಾರಗಳ ಸಚಿವ ಪಿ.ವಿ. ನರಸಿಂಹ ರಾವ್ ( ರಾಜೀವ ಗಾಂಧಿಯವರ ಬಳಿಕ  ಪಿವಿ ನರಸಿಂಹ ರಾವ್ ಅವರೂ ಭಾರತದ ಪ್ರಧಾನಿಯಾದರು)  ನೇಪಾಳಕ್ಕೆ ಭೇಟಿ ನೀಡಿದಾಗ, "ಬುದ್ಧನ ಹುಟ್ಟು ಮತ್ತು ಬೋಧನೆಗಳ ಕಾಲದಲ್ಲಿ ಪ್ರಪಂಚದ ಈ ಭಾಗದಲ್ಲಿ ಅಸ್ತಿತ್ವದಲ್ಲಿದ್ದ ಪ್ರಜಾಪ್ರಭುತ್ವ ಗಣರಾಜ್ಯಗಳ ಬಗ್ಗೆ ಮಾತನಾಡಿದ್ದರು” ಎಂದೂ ಕ್ಸೇವಿಯರ್ ಪ್ರಸ್ತಾಪ ಮಾಡಿದ್ದಾರೆ.

ಲಿಚ್ಚಾವಿಗಳ ರಾಜಧಾನಿಯಾದ ವೈಶಾಲಿ ಪ್ರಜಾಪ್ರಭುತ್ವ ಗಣರಾಜ್ಯವಾಗಿದ್ದು, ಚುನಾಯಿತ ಅಧ್ಯಕ್ಷರೊಂದಿಗಿನ ಗಣ್ಯರ ಸಭೆಯಿಂದ ನಿಯಂತ್ರಿಸಲ್ಪಡುತ್ತಿತ್ತು ಎಂದು ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಕೂಡಾ ಹೇಳಿದ್ದರು.

ಭಾರತೀಯ ಸಂಸ್ಕೃತಿಯ ಅಡಿಪಾಯವೇ ಆಗಿರುವ ವೇದಗಳಲ್ಲಿ, ರಾಮಾಯಣದಲ್ಲಿ, ಮಹಾಭಾರತದಲ್ಲಿ ಪ್ರಜಾಪ್ರಭುತ್ವದ ಉಲ್ಲೇಖವಿದೆ.

ಹಾಗಾದರೆ ಭಾರತ ಪ್ರಜಾಪ್ರಭುತ್ವದ ಮೂಲ ಬೇರು ಯಾವುದು?  ಗ್ರಾಮ ಪಂಚಾಯತಿಗಳು ಇಲ್ಲವೇ ಗ್ರಾಮ ಸಭೆಗಳು. ವೇದ, ರಾಮಾಯಣ, ಮಹಾಭಾರತಗಳಲ್ಲಿ ಇದರ ಪ್ರಸ್ತಾಪವಿದೆ.

ಸಹಸ್ರಾರು ವರ್ಷಗಳ ಹಿಂದಿನ ಶಿಲಾ ಶಾಸನಗಳಲ್ಲೂ ಬಗ್ಗೆ ಉಲ್ಲೇಖಗಳಿವೆ. ತಮಿಳುನಾಡಿನ  ಉತಿರಾಮೆರೂರು ಎಂಬ ಗ್ರಾಮದ ದೇವಸ್ಥಾನದಲ್ಲಿನ ಶಿಲಾಶಾಸನವೊಂದರಲ್ಲಿ ಗ್ರಾಮ ಸಭೆಯ ಕಾರ್ಯ ನಿರ್ವಹಣೆಯ ಬಗೆಗೆ ಬರಹಗಳಿವೆ.

ಗ್ರಾಮಸಭೆಯ ಸದಸ್ಯರ ಆಯ್ಕೆ, ಅವರ ಕಾರ್ಯ ನಿರ್ವಹಣೆ, ಕರ್ತವ್ಯಗಳ ಬಗ್ಗೆ, ಅವರನ್ನು ಅನರ್ಹಗೊಳಿಸುವ ಬಗ್ಗೆ ವಿವರಗಳಿವೆ.

ಬಗೆಗಿನ ವಿಡಿಯೋವನ್ನು ನೋಡಲು ಮೇಲಿನ/ ಕೆಳಗಿನ ಚಿತ್ರಗಳನ್ನು ಕ್ಲಿಕ್ ಮಾಡಿ.


- ಹೌದು, ನಿಜವಾಗಿಯೂ ನಮ್ಮ ಪ್ರಜಾಪ್ರಭುತ್ವದ ಇತಿಹಾಸ, ಅದರ ಅಡಿಪಾಯವಾದ ಪಂಚಾಯತಿ ವ್ಯವಸ್ಥೆ ಬಗ್ಗೆ ನಾವಿಂದು ಹೆಮ್ಮೆ ಪಡಬೇಕಾಗಿದೆ.

-ನೆತ್ರಕೆರೆ ಉದಯಶಂಕರ

No comments:

Advertisement