Monday, October 24, 2022

ವಿಶ್ವ ವಿಜೇತ ದೇಶಕ್ಕೆ ಈಗ ಭಾರತದ ನಾಯಕ!

 ವಿಶ್ವ ವಿಜೇತ ದೇಶಕ್ಕೆ ಈಗ ಭಾರತದ ನಾಯಕ!

ಅದೊಂದು ಕಾಲವಿತ್ತು. ಭಾರತಕ್ಕೆ ಸ್ವಾತಂತ್ರ್ಯ ನೀಡಲು ಮೀನಾ ಮೇಷ ಎಣಿಸುತ್ತಿದ್ದ ಕಾಲ. ಆಗ ಬ್ರಿಟಿಷರು ಹೇಳಿದ್ದ ಮಾತು ಈಗಲೂ ಹಿರಿತಲೆಗಳ ನಾಲಿಗೆಯಲ್ಲಿ ಬರುತ್ತಿರುತ್ತದೆ:” ಭಾರತೀಯರು ಸ್ವಾತಂತ್ರ್ಯಕ್ಕೆ ಲಾಯಕ್ಕಲ್ಲ. ಸಿಕ್ಕಿದರೂ ಅವರು ಸ್ವಾತಂತ್ರ್ಯ ಉಳಿಸಿಕೊಳ್ಳಲಾರರು… ಅವರು ಆಡಳಿತ ನಡೆಸಲು ಸಾಧ್ಯವಿಲ್ಲ” ಅಂತ.

ಭಾರತ ಈಗ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ಭಾರತದ ಹಿರಿಮೆ ವಿಶ್ವದ ಮೂಲೆ ಮೂಲೆಗೂ ಪಸರಿಸುತ್ತಿದೆ.

ಆದರೆ, ವಿಶ್ವವನ್ನೇ ಆಳಿದ್ದ ದೇಶ. ಇಂಗ್ಲೆಂಡ್…‌ ಈಗಿನ ಯುನೈಟೆಡ್‌ ಕಿಂಗ್‌ ಡಮ್‌ʼ (ಯುಕೆ) ಆರ್ಥಿಕವಾಗಿ ನಲುಗುತ್ತಿದೆ. ಗೆದ್ದಿದ್ದ ಪ್ರಧಾನಿ ಲಿಜ್‌ ಟ್ರಸ್‌ ಕೇವಲ ೪೫ ದಿನ ಆಡಳಿತ ನಡೆಸಿ ನಿರ್ಗಮಿಸಿದ್ದಾರೆ. ಅವರ ಸ್ಥಾನಕ್ಕೆ ೨೦೨೨ರ ಅಕ್ಟೋಬರ್‌ ೨೪ರ ಸೋಮವಾರ ಭಾರತದ ಅದರಲ್ಲೂ ಕರ್ನಾಟಕದ ಅಳಿಯ ಯುವ ರಿಷಿ ಸುನಕ್ ಅವರು ಬ್ರಿಟನ್ ದೇಶದ ಮುಂದಿನ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.

ಸುಮಾರು 200 ವರ್ಷಗಳಿಗೂ ಹೆಚ್ಚು ಭಾರತವನ್ನು ಆಡಳಿತ ಮಾಡಿದ್ದ ಯುನೈಟೆಡ್‌ ಕಿಂಗ್‌ ಡಮ್‌ ಗೆ ಇದೇ ಮೊದಲ ಬಾರಿಗೆ ಭಾರತೀಯ ಮೂಲದ ವ್ಯಕ್ತಿ ಆಡಳಿತ ಮುನ್ನಡೆಸುವಂತಹ ಸ್ಥಿತಿ ಬಂದಿದೆ.

ರಿಷಿ ಸುನಕ್ ಅವರು ಇನ್ಫೋಸಿಸ್ ಕಂಪನಿ ಸ್ಥಾಪಕರಾದ ನಾರಾಯಣ ಮೂರ್ತಿ ಹಾಗೂ ಸುಧಾಮೂರ್ತಿ ಅವರ ಅಳಿಯ.. ಬ್ರಿಟನ್‌ನಲ್ಲಿ ಪ್ರಬಲ ಯುವ ರಾಜಕಾರಣಿಯಾಗಿ ಬೆಳದಿರುವ ರಿಷಿ ಸುನಕ್ ಬದಲಾದ ಪರಿಸ್ಥಿತಿಯಲ್ಲಿ ಯುಕೆಯ ಉನ್ನತ ಹುದ್ದೆ ಪಡೆಯುವಂತಾಗಿದೆ.

ಕೇವಲ 45 ದಿನ ಆಡಳಿತ ನಡೆಸಿ ನಿರ್ಗಮಿಸಿದ ಲಿಜ್ ಟ್ರಸ್ ಅವರಿಂದ ರಾಜಕೀಯ ಬಿಕ್ಕಟ್ಟು ಏರ್ಪಟ್ಟಿತ್ತು ಯುಕೆಯ ಟೋರಿ ನಾಯಕತ್ವಕ್ಕಾಗಿ ಒಟ್ಟು ಬಲದ ಅರ್ಧಕ್ಕೂ ಹೆಚ್ಚು ಸಂಸದರು ರಿಷಿ ಸುನಕ್ ಅವರು ಪ್ರಧಾನಿಯಾಗಲು ಹಸಿರು ನಿಶಾನೆ ತೋರಿಸಿದ್ದಾರೆ.

ಪ್ರತಿಸ್ಫರ್ಧಿಯಾಗಬಹುದಾಗಿದ್ದ ಸಂಸದೆ ಪೆನ್ನಿ ಮೊರ್ಡಾಂಟ್ ಅವರಿಗೆ ಕೇವಲ 28 ಸಂಸದರು ಆಸಕ್ತಿ ತೋರಿದರು. ಇದರಿಂದ ಸುನಕ್ ಹಾದಿ ಸುಗಮವಾಯಿತು. 198 ಸಂಸದರು ರಿಷಿ ಪರವಾಗಿದ್ದಾರೆ. ಇದಕ್ಕೂ ಮುನ್ನ ಪ್ರತಿಸ್ಪರ್ಧಿಯಾಗಬಯಸಿದ್ದ ಬೋರಿಸ್‌ ಜಾನ್ಸನ್‌ ಪುನರಾಯ್ಕೆ ಬಯಸುವುದಿಲ್ಲ ಎಂದು ಹೇಳಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು.

ಸೋಮವಾರ ಸಂಜೆಯ ವೇಳೆಗೆ ರಿಷಿ ಸುನಕ್‌ ಅವರು ಕನ್ಸರ್ವೇಟಿವ್‌ ಪಕ್ಷದ ನಾಯಕನಾಗಿ ಆಯ್ಕೆಯಾದ ಪ್ರಕಟಣೆ ಹೊರಬಿದ್ದಿತು. ಸುನಕ್‌ ಅವರು ಅಕ್ಟೋಬರ್‌ ೨೮ರಂದು ಪ್ರಮಾಣವಚನ ಸ್ವೀಕರಿಸಬಹುದು ಎಂದು ವರದಿಗಳು ತಿಳಿಸಿವೆ.

ವಿಶ್ವವನ್ನೇ ಆಳಿದ, ಭಾರತೀಯರು ತಮ್ಮನ್ನು ತಾವು ಆಳಿಕೊಳ್ಳಲು ನಾಲಾಯಕ್‌ ಜನ ಎಂದು ಹೇಳಿದ ದೇಶಕ್ಕೆ ಇದೀಗ ಆಡಳಿತ ನಡೆಸಲು ಭಾರತೀಯರೇ ಬರಬೇಕಾಯಿತು. ಇದಕ್ಕೇ ಹೇಳುವುದು: ಕಾಲಾಯ ತಸ್ಮೈ ನಮಃ.

No comments:

Advertisement