Sunday, August 18, 2024

ಬಡಾವಣೆ ಮಧ್ಯದ ನಿರುಪದ್ರವಿ ಮರದ ಕಗ್ಗೊಲೆ..!

 ಬಡಾವಣೆ ಮಧ್ಯದ ನಿರುಪದ್ರವಿ ಮರದ ಕಗ್ಗೊಲೆ..!

ಬೆಂಗಳೂರು: ಮರಕ್ಕೆ ಕೊಡಲಿ, ಕಾಡುನಾಶಗಳಿಂದ ಆಗುತ್ತಿರುವ ಅನಾಹುತಗಳು, ಭೂ ಕುಸಿತಗಳು, ಗುಡ್ಡ ಕುಸಿತಗಳು ಮಳೆ, ಬಿಸಿಲಿನ ಏರುಪೇರು ಸೇರಿದಂತೆ ಹವಾಮಾನ ವೈಪರೀತ್ಯಗಳ ವರದಿಯನ್ನು ನಿತ್ಯವೂ ಪತ್ರಿಕೆಗಳಲ್ಲಿ ನೋಡುತ್ತಲೇ ಇದ್ದೇವೆ. ಮರ ಕಡಿಯಬಾರದು ಎಂಬುದಾಗಿ ಎಲ್ಲೆಡೆಯಲ್ಲಿ ಜೋರಾದ ಕೂಗು ಕೇಳಿ ಬರುತ್ತಿದೆ.

ಆದರೆ ಯಾವುದೇ ಸಾರ್ವಜನಿಕ ಹಿತದ ಯೋಜನೆಗಾಗಿ ಅಲ್ಲ, ವಾಹನ ಸಂಚಾರ, ಜನ ನಿಬಿಡ ರಸ್ತೆಯಲ್ಲಿ ಸಂಚಾರ ಅಡ್ಡವಾಗುತ್ತಿದೆ ಎಂದು ಅಲ್ಲ, ಯಾವುದೇ ಮನೆ ಕಟ್ಟಡದ ಮೇಲೆ ಬಿದ್ದು ಮನೆಗೆ ಹಾನಿ ಜೀವಹಾನಿ ಆದೀತು ಎಂಬ ಭೀತಿಗಾಗಿಯೂ ಅಲ್ಲ, ಸುಖಾ ಸುಮ್ಮನೆ ಮರ ಗುತ್ತಿಗೆದಾರರ ಖಯಾಲಿಗಾಗಿ ಜನವಸತಿ ಇರುವ ಬಡಾವಣೆಯ ರಸ್ತೆಯೊಂದರಲ್ಲಿನ ಬೃಹತ್‌ ʼಮಳೆ ಮರʼವನ್ನು 2024 ಆಗಸ್ಟ್‌ 17ರ ಶನಿವಾರ ನಿವಾಸಿಗಳ ಪ್ರತಿಭಟನೆಯ ನಡುವೆಯೇ ʼಕಗ್ಗೊಲೆʼ ಮಾಡಲಾಗಿದೆ.

ಈ ಕಗ್ಗೊಲೆಗೆ ಮರ ಗುತ್ತಿಗೆದಾರರ ಜೊತೆಗೆ ಬಿಬಿಎಂಪಿಯೂ ಕೈಜೋಡಿಸಿದೆ ಎಂಬ ಆಪಾದನೆಗಳು ಕೇಳಿ ಬಂದಿವೆ.

ಈ ದೊಡ್ಡ ಮಳೆ ಮರವು 40 ವರ್ಷಗಳಿಂದ ರಾಜರಾಜೇಶ್ವರಿನಗರದ ಸಚ್ಚಿದಾನಂದ ನಗರ ಬಡಾವಣೆಯ ಜನರಿಗೆ ಅಮೂಲ್ಯವಾದ ಪರಿಸರ ಸೇವೆಯನ್ನು ನೀಡಿತ್ತು.

ಮರ ಆರೋಗ್ಯಕರವಾಗಿತ್ತು. ಹುಳಬಾಧೆ ಸೇರಿದಂತೆ ಯಾವುದೇ ರೋಗಬಾಧೆಯೂ ಇದಕ್ಕೆ ಇರಲಿಲ್ಲ. ಈ ಮರದಿಂದ ಯಾರಿಗೂ ಯಾವುದೇ ಬೆದರಿಕೆಯೂರಲಿಲ್ಲ.

ಆದರೆ ಅದನ್ನು ನಿರ್ದಯಿ ಮರಗುತ್ತಿಗೆದಾರರು ಗುತ್ತಿಗೆದಾರರು ಆಗಸ್ಟ್ 17 ರಂದು ಒಂದೆರಡು ಮರಕತ್ತರಿಸುವ ಯಂತ್ರವನ್ನು ಬಳಸಿ ಕೆಲವೇ ಗಂಟೆಗಳಲ್ಲಿ ತುಂಡುಗಳಾಗಿ ಕತ್ತರಿಸಿದರು.

ಬಿ ಎನ್ ಪ್ರಸನ್ನ ಕುಮಾರ್ ಎಂಬವರು ಕೃತ್ಯದ ರೂವಾರಿಯಾಗಿದ್ದು, ಮರ ಕಡಿಯಲು ಅವರಿಗೆ ಅನುಮತಿ ನೀಡುವ ಮೂಲಕ ಬಿಬಿಎಂಪಿ ಅರಣ್ಯಕೋಶ ಅವರೊಂದಿಗೆ ಶಾಮೀಲಾಗಿರುವುದು ದಾಖಲೆಗಳಲ್ಲಿ ಕಂಡುಬಂದಿದೆ.

ಈ ಹಿತಚಿಂತಕ ಮರ ಇರುವ ಸ್ಥಳವನ್ನು ಟ್ರೀ ಆಫೀಸರ್‌ ಪರಿಶೀಲಿಸದೆಯೇ ಮರಕ್ಕೆ ಕೊಡಲಿ ಏಟು ನೀಡಲು ಆಗಸ್ಟ್‌ 12ರಂದು ಬಿಬಿಎಂಪಿ ಅರಣ್ಯ ಕೋಶವು ಆದೇಶ ನೀಡಿದೆ

ಟ್ರೀ ಆಫೀಸರ್ ಮರವನ್ನು ಪರೀಕ್ಷಿಸಿ ತನ್ನ ವರದಿಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಆದರೆ...ಹಾಗೆ ಮಾಡದೆಯೇ ಗುತ್ತಿಗೆದಾರ ಒತ್ತಾಯದ ಮೇರೆಗೆ ಬಿಬಿಎಂಪಿಯ ವೃಕ್ಷಾಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಹಿಯಡಿಯಲ್ಲಿ ಮರ ಕಡಿಯುವ ಆದೇಶ ಹೊರಡಿಸಲಾಗಿತ್ತು ಎಂದು ತಿಳಿದುಬಂದಿದೆ. ವಿವಾದಾತ್ಮಕ ರಾಜಕೀಯ ನಾಯಕರೊಂದಿಗಿನ ನಿಕಟ ಸಂಬಂಧದಿಂದಾಗಿ ಗುತ್ತಿಗೆದಾರರು  ಬಿಬಿಎಂಪಿ ಅರಣ್ಯ ಕೋಶದ ಅಧಿಕಾರಿಗಳ ಮೇಲೆ ಪ್ರಾಬಲ್ಯ ಹೊಂದಿದ್ದಾರೆ ಎನ್ನಲಾಗಿದೆ.

74 ವರ್ಷದ ಶಂಕರ್ ನಾರಾಯಣ್ ಅವರು ಮರವನ್ನು ಉಳಿಸಲು ಶತ ಪ್ರಯತ್ನ ಮಾಡಿದರು. ಆದರೆ ಆಸ್ತಿ ಮಾಲೀಕರು ಮತ್ತು ಬಿಬಿಎಂಪಿ ಗುತ್ತಿಗೆದಾರರು ಅವರ ಮನವಿಗೆ ಕಿವಿಗೊಡಲಿಲ್ಲ. ಅಕ್ಕ ಪಕ್ಕದ ನಿವಾಸಿಗಳ ಪ್ರತಿಭಟನೆ ಕೂಡಾ ಫಲ ನೀಡಲಿಲ್ಲ.

ಅರಣ್ಯ ಉಪ ಸಂರಕ್ಷಣಾಧಿಕಾರಿ, ಬಿಬಿಎಂಪಿ, ಅರಣ್ಯ ಕೋಶದ ವಿರುದ್ಧ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ.

ನಮ್ಮ ಪರಿಸರ ವ್ಯವಸ್ಥೆಯನ್ನು ಉಳಿಸುವುದು ಸಂವಿಧಾನದ  51-ಎ (ಜಿ) ವಿಧಿಯ ಅಡಿಯಲ್ಲಿ ನಮ್ಮ ಸಾಂವಿಧಾನಿಕ ಕರ್ತವ್ಯವಾಗಿದೆ.

ನಾಗರಿಕರ ಮೂಲಭೂತ ಕರ್ತವ್ಯಗಳ ಬಗ್ಗೆ ವ್ಯವಹರಿಸುವ ವಿಧಿ 51-A (g) ಹೀಗೆ ಹೇಳುತ್ತದೆ: “ಕಾಡುಗಳು, ಸರೋವರಗಳು, ನದಿಗಳು ಮತ್ತು ವನ್ಯಜೀವಿಗಳು ಸೇರಿದಂತೆ ನೈಸರ್ಗಿಕ ಪರಿಸರವನ್ನು ರಕ್ಷಿಸುವುದು ಮತ್ತು ಸುಧಾರಿಸುವುದು ಮತ್ತು ಜೀವಂತ ಜೀವಿಗಳ ಬಗ್ಗೆ ಸಹಾನುಭೂತಿ ಹೊಂದುವುದು ಭಾರತದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ."

ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮತ್ತು ಭವಿಷ್ಯದಲ್ಲಿ ಇಂತಹ ಸಂಶಯಾಸ್ಪದ ಮರ ಕಡಿಯುವ ಆದೇಶಗಳು ಹೊರಬೀಳದಂತೆ ನೋಡಿಕೊಳ್ಳಲು ಶಂಕರ ನಾರಾಯಣ ಅವರಂತಹ ವೃಕ್ಷಪ್ರೇಮಿಗಳ ಜೊತೆಗೆ ಇತರರು ಜೊತೆಗೂಡತೊಡಗಿದ್ದಾರೆ.

ಕಲುಷಿತ ಬೆಂಗಳೂರಿನಲ್ಲಿ ಉಸಿರಾಡಲು ಶುದ್ಧ ಗಾಳಿಯ ಅವಶ್ಯಕತೆ ಇದ್ದಾಗ ಬಿಬಿಎಂಪಿಯು ಇಂತಹ ಬೃಹತ್ ಮರಕ್ಕೆ ಕೊಡಲಿ ಪೆಟ್ಟು ಕೊಡುವ ಮೂಲಕ ನಮಗೆ ಘೋರ ಅನ್ಯಾಯ ಮಾಡಿದೆ ಎಂದು ಆಸುಪಾಸಿನ ನಿವಾಸಿಗಳೂ ದೂರುತ್ತಿದ್ದಾರೆ.

ಪರಿಸರದ ಬಗ್ಗೆ ನಿಮಗೆ ಕಾಳಜಿ ಇರುವವರು ತಮ್ಮ ಪ್ರತಿಭಟನೆಯನ್ನು ಬರೆದು ಬಿಬಿಎಂಪಿ ಡಿಸಿಎಫ್‌, ಬಿಬಿಎಂಪಿ ಕಮೀಷನರ್‌, ಕರ್ನಾಟಕದ ಮುಖ್ಯಮಂತ್ರಿ ಮತ್ತು ಪಿಸಿಸಿಎಫ್‌ ಅವರ ಮಿಂಚಂಚೆಗಳಿಗೆ ಕಳುಹಿಸುವಂತೆ ಅವರು ಕೋರಿದ್ದಾರೆ.

ಮಿಂಚಂಚೆಗಳು ಹೀಗಿವೆ:

dcfbbmp12@gmail.com

comm@bbmp.gov.in

cm.kar@nic.in

pccfkar@gmail.com

ಸುದ್ದಿ ನೋಡಿ- ಇತರ ಮಾಧ್ಯಮಗಳಲ್ಲಿ: ಕೆಳಗೆ ಕ್ಲಿಕ್‌ ಮಾಡಿರಿ.

ಪ್ರಜಾವಾಣಿ: 


https://www.prajavani.net/district/bengaluru-city/a-tree-that-has-been-providing-shade-for-four-decades-cut-accused-2932495

ಸ್ಪೀಡ್‌ ನ್ಯೂಸ್‌ ಕನ್ನಡ: https://www.youtube.com/watch?v=piGXwT1u55s

ಡೆಕ್ಕನ್‌ ಹೆರಾಲ್ಡ್‌ :

 https://www.deccanherald.com/india/karnataka/bengaluru/bbmp-axes-mature-rain-tree-in-rr-nagar-3155232 

No comments:

Advertisement