Monday, June 2, 2025

ಬಣ್ಣ ಬದಲಿಸುವಾಗ ಸಿಕ್ಕಿಹಾಕಿಕೊಂಡ ಓತಿಕ್ಯಾತ..!

 ಬಣ್ಣ ಬದಲಿಸುವಾಗ ಸಿಕ್ಕಿಹಾಕಿಕೊಂಡ ಓತಿಕ್ಯಾತ..!

ತಿಕ್ಯಾತ ಬಣ್ಣ ಬದಲಿಸುತ್ತದೆ ಎಂಬುದು ಬಹಳ ಜನಕ್ಕೆ ಗೊತ್ತು. ಆದರೆ ಹಾಗೆ ಬಣ್ಣ ಬದಲಿಸುವಾಗ ಕಾಣ ಸಿಗುವುದು ಬಲು ಅಪರೂಪ. ಸಿಕ್ಕಿದರೂ ಅದನ್ನೆಲ್ಲ ನೋಡುವಷ್ಟು ಹೊತ್ತು ಅದೇನು ಫೋಸ್‌ ನೀಡುತ್ತಾ ನಿಲ್ಲುತ್ತದೆಯೇ?

ಮನುಷ್ಯರ ಕಾಲಿನ ಸಪ್ಪಳ ಕೇಳುವಷ್ಟರಲ್ಲೇ ಅದು ಸ್ಥಳದಿಂದ ಪರಾರಿ ಆಗಿ ಬಿಡುತ್ತದೆ.

ಅಂತಹ ಓತಿಕ್ಯಾತ ಬಣ್ಣ ಬದಲಿಸುತ್ತಾ ವರ್ಣಮಯ ರೂಪದಲ್ಲಿ ನಿಂತು ಫೋಸ್‌ ಕೊಟ್ಟು ಬಿಟ್ಟಿದೆ ನೋಡಿ- ನಮ್ಮ ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣರಿಗೆ.

ನಮ್ಮ ಕರ್ನಾಟಕದ ಮಧ್ಯಭಾಗದಲ್ಲಿ ಇರುವ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ವನ್ಯಜೀವಿ ಅಭಯಾರಣ್ಯಕ್ಕೆ ನೆಲೆ. ರಾಣಿಬೆನ್ನೂರು ಕೃಷ್ಣಮೃಗ ಅಭಯಾರಣ್ಯದಲ್ಲಿ ಕೃಷ್ಣಮೃಗ, ಗ್ರೇಟ್ ಇಂಡಿಯನ್ ಬಸ್ಟರ್ಡ್ ಮತ್ತು ತೋಳಗಳು ಸಾಕಷ್ಟವೆ. ಆದರೆ ಇಲ್ಲಿದ್ದ ಗ್ರೇಟ್ ಇಂಡಿಯನ್ ಬಸ್ಟರ್ಡ್ ಹಕ್ಕಿ ಈಗ ಬಹುತೇಕ ಅಳಿದು ಹೋದಂತಿದೆ. ಕೊನೆಯ ಬಾರಿಗೆ 2005 ರಲ್ಲಿ ಈ ಪಕ್ಷಿ ಕಾಣಿಸಿಕೊಂಡಿತ್ತು. ಆ ನಂತರ ಈ ಯಾರಿಗೂ ಕಂಡದ್ದಿಲ್ಲವಂತೆ.

ವಿಶ್ವನಾಥ ಸುವರ್ಣ ಇತ್ತೀಚಿನ ದಿನಗಳಲ್ಲಿ ಅಳಿಯುತ್ತಿರುವ ಚಿಕ್ಕಪುಟ್ಟ ಪ್ರಾಣಿಗಳು, ಪಕ್ಷಿಗಳ ಹುಡುಕಾಟದಲ್ಲಿದ್ದಾರೆ. ಅವುಗಳನ್ನು ಸೆರೆ ಹಿಡಿದು (ಕ್ಯಾಮರಾದಲ್ಲಿ ಮಾರಾಯರೆ) ಜನರಿಗೆ ತೋರಿಸಬೇಕೆಂಬ ತವಕದಲ್ಲಿ ಇದ್ದಾರೆ. ಹೀಗಾಗಿ ತಮ್ಮ ಕ್ಯಾಮರಾ ಹಿಡಿದುಕೊಂಡು ಊರೂರು ಸುತ್ತುತ್ತಿದ್ದಾರೆ.

ಇತ್ತೀಚೆಗೆ ಅವರು ಹಾವೇರಿ ಜಿಲ್ಲೆಯ ರಾಣೆ ಬೆನ್ನೂರಿಗೆ ಭೇಟಿ ಕೊಟ್ಟಿದ್ದರು. ಹಾಗೆಯೇ ಹೆಗಲಿಗೆ ಕ್ಯಾಮರಾ ಏರಿಸಿಕೊಂಡು ಸುತ್ತಾಡುತ್ತಿದ್ದಾಗ, ಹೊಲ ಒಂದರಲ್ಲಿ ಬಣ್ಣ ಬದಲಿಸುತ್ತಿದ್ದ ಓತಿ ಕ್ಯಾತ ಇವರ ಕ್ಯಾಮರಾಕ್ಕೆ ಫೋಸ್‌ ಕೊಟ್ಟೇ ಬಿಟ್ಟಿತು.

ಆ ಓತಿಕ್ಯಾತನ ಚಿತ್ರಗಳು ಇಲ್ಲಿವೆ ನೋಡಿ.

ಇದೇ ಸಮಯದಲ್ಲಿ ಸುವರ್ಣರಿಗೆ ಅಪರೂಪದ ಪಕ್ಷಿಯಾದ ಫ್ಲೈ ಕ್ಯಾಚರ್‌ ಹಕ್ಕಿಯೂ ಕಾಣ ಸಿಕ್ಕಿತು. ಫ್ಲೈ ಕ್ಯಾಚರ್‌ ಪಕ್ಷಿಗಳನ್ನು ʼಇಂಡಿಯನ್‌ ಪ್ಯಾರಡೈಸ್‌ ಫ್ಲೈ ಕ್ಯಾಚರ್‌ʼ ಎಂಬುದಾಗಿಯೂ ಕರೆಯುತ್ತಾರೆ.

ಅತ್ಯಂತ ಆಕರ್ಷಕವಾದ ಈ ಪಕ್ಷಿ ಜಾತಿಯ ಗಂಡು ಹಕ್ಕಿಗಳು ಉದ್ದವಾದ ರಿಬ್ಬನ್‌ ಮಾದರಿಯ ಬಾಲ ಹೊಂದಿರುತ್ತವೆ. ಗಂಡು ಹಕ್ಕಿಗಳು ದಾಲ್ಚಿನ್ನಿ ಮತ್ತು ಬಿಳಿ ಎರಡು ಬಣ್ಣಗಳಲ್ಲಿ ಇರುತ್ತವೆ. ಎರಡೂ ಬಣ್ಣದ ಹಕ್ಕಿಗಳು ಕಣ್ಣಿನ ಸುತ್ತಲೂ ನೀಲಿ ಉಂಗುರವನ್ನು ಹೊಂದಿರುತ್ತವೆ. ಕಪ್ಪುಬಣ್ಣದ ಹೊಳಪುಳ್ಳ ತಲೆಯನ್ನು ಹೊಂದಿರುತ್ತವೆ. ಆದರೆ ಬಿಳಿ ಹಕ್ಕಿ ಕೆಳಗೆ ಸಂಪೂರ್ಣವಾಗಿ ಬೆಳ್ಳಗಿರುತ್ತದೆ. ದಾಲ್ಚಿನ್ನಿ ಹಕ್ಕಿ ದಾಲ್ಚಿನ್ನಿ ಮೇಲ್ಭಾಗ ಮತ್ತು ಬಾಲ ಮತ್ತು ಮಾಸಿದ ಬಿಳಿಬಣ್ಣದ  ಒಳಭಾಗವನ್ನು ಹೊಂದಿರುತ್ತದೆ.

ಹೆಣ್ಣು ಹಕ್ಕಿಗಳು ಬೂದು ಬಣ್ಣದ ಗಂಟಲು, ಚಿಕ್ಕ ಬಾಲವನ್ನು ಹೊಂದಿರುತ್ತವೆ. ಬಾಲದ ಮೇಲ್ಭಾಗದಲ್ಲಿ ದಾಲ್ಚಿನ್ನಿ ಬಣ್ಣವಿರುತ್ತದೆ. ಹೆಣ್ಣು ಹಕ್ಕಿಯು ಗಂಡು ಹಕ್ಕಿಯಂತೆ ನೀಲಿ ಕಣ್ಣುರೆಪ್ಪೆಯನ್ನು ಹೊಂದಿರುವುದಿಲ್ಲ.

ಈ ಹಕ್ಕಿಗಳು ಕೀಟಗಳ ಮೇಲೆ ಸಣ್ಣ ವಿಮಾನದಂತೆ ಎರಗುತ್ತವೆ. ಕೀಟಗಳನ್ನು ಹಿಡಿಯಲು ಸಾಂದರ್ಭಿಕವಾಗಿ ನೆಲಕ್ಕೆ ಇಳಿಯುತ್ತವೆ. ಮುಖ್ಯವಾಗಿ ಕಾಡಿನ ಆವಾಸಸ್ಥಾನಗಳಲ್ಲಿ ಇವು ಕಂಡು ಕಂಡುಬರುತ್ತವೆ.

ಅಪರೂಪದ ಈ ಕ್ಯಾಚ್‌ ಫ್ಲೈಯರ್‌ ಹಕ್ಕಿ ತನ್ನ ಮರಿಗಳಿಗೆ ಆಹಾರ ನೀಡುತ್ತಿದ್ದಾಗ ಸುವರ್ಣರ ಕ್ಯಾಮರಾದಲ್ಲಿ ಸೆರೆಯಾಗಿ ಬಿಟ್ಟದ್ದನ್ನು ಇಲ್ಲಿ ನೋಡಬಹುದು.


ಚಿತ್ರಗಳ ಸಮೀಪ ನೋಟಕ್ಕೆ ಅವುಗಳನ್ನು ಕ್ಲಿಕ್‌ ಮಾಡಿ.




ನೆತ್ರಕೆರೆ ಉದಯಶಂಕರ

ಸುವರ್ಣ ನೋಟದ ಇತರ ಕಂತುಗಳಿಗೆ ಕೆಳಗೆ 👇ಕ್ಲಿಕ್‌ ಮಾಡಿ


No comments:

Advertisement