Showing posts sorted by date for query ವಿಟ್ಲ. Sort by relevance Show all posts
Showing posts sorted by date for query ವಿಟ್ಲ. Sort by relevance Show all posts

Sunday, October 4, 2026

ರಂಗಸ್ಥಳದಲ್ಲಿ ದೇವಿಯಾಗಿ ಮಿಂಚಲಿರುವ ಅರ್ಷಿಯಾ ಖಾನ್

 ರಂಗಸ್ಥಳದಲ್ಲಿ ದೇವಿಯಾಗಿ ಮಿಂಚಲಿರುವ ಅರ್ಷಿಯಾ ಖಾನ್

ಕರಾವಳಿಯ ಗಂಡುಕಲೆ ಯಕ್ಷಗಾನ ರಂಗದಲ್ಲಿ ಮತ್ತೊಂದು ಐತಿಹಾಸಿಕ ಹಾಗೂ ಸೌಹಾರ್ದತೆಯ ಸುಂದರ ಅಧ್ಯಾಯ ಅನಾವರಣಗೊಳ್ಳಲು ಸಜ್ಜಾಗಿದೆ. ಯಕ್ಷಗಾನ ಲೋಕ ಪ್ರವೇಶಿಸಿದ ಮೊಟ್ಟಮೊದಲ ಮುಸ್ಲಿಂ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಅರ್ಷಿಯಾ ಖಾನ್ (ತನು ವಿಟ್ಲ), ಇದೀಗ ಕರಾವಳಿಯ ಪ್ರತಿಷ್ಠಿತ ಧಾರ್ಮಿಕ ವೇದಿಕೆಯಲ್ಲಿ ಸಾಕ್ಷಾತ್ 'ಶ್ರೀದೇವಿ'ಯಾಗಿ ಅಭಿನಯಿಸುವ ಮೂಲಕ ಕಲಾ ಲೋಕದಲ್ಲಿ ಹೊಸ ಇತಿಹಾಸ ಬರೆಯಲಿದ್ದಾರೆ.

ಮಂಗಳೂರಿನ ಐತಿಹಾಸಿಕ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ರಾಜಾಂಗಣದಲ್ಲಿ ಅಕ್ಟೋಬರ್ 20 ರಂದು ನಡೆಯಲಿರುವ 'ಸಂಪೂರ್ಣ ಶ್ರೀ ದೇವಿ ಮಹಾತ್ಮೆ' ಪ್ರಸಂಗದಲ್ಲಿ ಅವರು ಈ ಪವಿತ್ರ ಪಾತ್ರ ನಿರ್ವಹಿಸಲಿದ್ದಾರೆ.

  • ಅಪೂರ್ವ ಮೈಲಿಗಲ್ಲು: ಯಕ್ಷಗಾನ ಕ್ಷೇತ್ರಕ್ಕೆ ಮುಸ್ಲಿಂ ಸಮುದಾಯದ ಹೆಣ್ಣುಮಗಳೊಬ್ಬರು ಕಾಲಿಟ್ಟಿರುವುದೇ ಅಪರೂಪ. ಅದರಲ್ಲಿಯೂ ದೇವಿಯಂತಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಕಲಾಪ್ರೇಮಿಗಳಲ್ಲಿ ಭಾರೀ ಹರ್ಷ ಹಾಗೂ ಮೆಚ್ಚುಗೆ ಮೂಡಿಸಿದೆ.
  • ಕಟ್ಟುನಿಟ್ಟಿನ ವ್ರತಾಚರಣೆ: ದೇವಿಯ ಪವಿತ್ರ ಪಾತ್ರದ ನಿರ್ವಹಣೆಗಾಗಿ ಕಲಾ ಧರ್ಮಕ್ಕೆ ತಕ್ಕಂತೆ, ಅರ್ಷಿಯಾ ಪ್ರಸ್ತುತ ಸಾತ್ವಿಕ ಸಸ್ಯಾಹಾರಿ ಆಹಾರ ಪದ್ಧತಿಯೊಂದಿಗೆ ಕಟ್ಟುನಿಟ್ಟಿನ ವ್ರತಾಚರಣೆಯನ್ನು ಕಾಯ್ದುಕೊಂಡಿದ್ದಾರೆ.
  • ಗುರುಗಳ ಮಾರ್ಗದರ್ಶನ: ಕಳೆದ 12 ವರ್ಷಗಳಿಂದ ಯಕ್ಷಗಾನ ರಂಗದಲ್ಲಿ ತೊಡಗಿಸಿಕೊಂಡಿರುವ ಇವರು, ಖ್ಯಾತ ಗುರು ಕದ್ರಿ ರಮೇಶ್ ಭಟ್ ಅವರ ಬಳಿ ತರಬೇತಿ ಪಡೆದಿದ್ದಾರೆ.
  • ತಂದೆ ತಾಯಿ ರಕ್ಷಾ ಕವಚ: ತನು ವಿಟ್ಲ ಎಂದೇ ಖ್ಯಾತರಾಗಿರುವ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಮಾಡ ಮೂಲದವರಾದ ಆರ್ಷಿಯಾ ಖಾನ್ 4ನೇ ತರಗತಿಯಲ್ಲಿದ್ದಾಗಲೇ ಯಕ್ಷಗಾನ ಕಲಿಯಲು ಆರಂಭಿಸಿದ್ದರು. ತಂದೆ ಅಬ್ದುಲ್ ಖಾದರ್ ಹಾಗೂ ತಾಯಿ ಮುಮ್ತಾಜ್ ಅವರ ಪೂರ್ಣ ಬೆಂಬಲವೇ ಆಕೆಗೆ ರಕ್ಷಾ ಕವಚ.
  • ಕದಳಿ ದಶಾಹ ದಸರಾ ಸಂಭ್ರಮ: ಕದ್ರಿ ಮಂಜುನಾಥ ದೇವಾಲಯದ ರಾಜಾಂಗಣದಲ್ಲಿ 'ಕದಳಿ ಕಲಾ ಕೇಂದ್ರ'ವು ಆಯೋಜಿಸಿರುವ 14ನೇ ವರ್ಷದ 10 ದಿನಗಳ 'ಕದಳಿ ದಶಾಹ' ಯಕ್ಷಗಾನ ಸಂಭ್ರಮದ (ಅಕ್ಟೋಬರ್ 11 ರಿಂದ 20) ಸಮಾರೋಪ ದಿನದಂದು ಈ ಪ್ರದರ್ಶನ ನಡೆಯಲಿದೆ. ಕಟೀಲು, ಪಾವಂಜೆ ಮೇಳಗಳ ಖ್ಯಾತ ಕಲಾವಿದರೊಂದಿಗೆ ಅರ್ಷಿಯಾ ಖಾನ್ ರಂಗಸ್ಥಳದಲ್ಲಿ ಶ್ರೀದೇವಿಯಾಗಿ ಪ್ರತ್ಯಕ್ಷರಾಗಲಿದ್ದಾರೆ.

ಕಲೆಯು ಯಾವುದೇ ಗಡಿಗಳು ಅಥವಾ ಧರ್ಮಗಳನ್ನು ಮೀರಿ ನಿಲ್ಲಬಲ್ಲದು ಎಂಬುದಕ್ಕೆ ಈ ಅಪೂರ್ವ ಘಟನೆ ಮತ್ತೊಮ್ಮೆ ಸಾಕ್ಷಿಯಾಗಿದ್ದು, ಯಕ್ಷಗಾನ ಪ್ರೇಮಿಗಳು ಈ ಐತಿಹಾಸಿಕ ಬೆಳವಣಿಗೆಯನ್ನು ತುಂಬು ಹೃದಯದಿಂದ ಸ್ವಾಗತಿಸಿದ್ದಾರೆ.

ಅರ್ಷಿಯಾ ಖಾನ್‌ ಅವರ ಇತ್ತೀಚಿನ ಸಂದರ್ಶನವನ್ನು ಈ ಕೆಳಗಿನ ಚಿತ್ರ ಕ್ಲಿಕ್‌ ಮಾಡಿ ನೋಡಿ.


Friday, January 23, 2026

ಪಂಚಲಿಂಗೇಶ್ವರನ ಅವಭೃತ

 ಪಂಚಲಿಂಗೇಶ್ವರನ ಅವಭೃತ

ಅವಭೃತ (ದೇವನಾಗರಿಯಲ್ಲಿ ʼಅವಭೃಥʼ) ಎಂದರೆ ವೈದಿಕ ಯಜ್ಞಗಳು ಅಥವಾ ಪ್ರಮುಖ ಧಾರ್ಮಿಕ ವಿಧಿವಿಧಾನಗಳು ಮುಗಿದ ನಂತರ ಯಜಮಾನನು ಮಾಡುವ ಪವಿತ್ರವಾದ ಮಂಗಳಸ್ನಾನ. ಇದು ಯಜ್ಞದ ಸಮಾಪ್ತಿಯನ್ನು ಸೂಚಿಸುವ ವಿಧಿಯಾಗಿದ್ದು, ಪಾಪ ಪರಿಹಾರ ಮತ್ತು ಶುದ್ಧೀಕರಣದ ಸಂಕೇತ. 


ಅವಭೃತದ ಮುಖ್ಯಾಂಶಗಳು:

  • ಯಜ್ಞಾಂತ ಸ್ನಾನ: ಪ್ರಧಾನ ಯಾಗ ಅಥವಾ ಯಜ್ಞ ಪೂರ್ಣಗೊಂಡ ನಂತರ ಮಾಡಲಾಗುವ ವಿಶೇಷ ಜಳಕ.
  • ಶುದ್ಧೀಕರಣ: ಯಜ್ಞದ ಸಮಯದಲ್ಲಿ ಉಂಟಾಗಬಹುದಾದ ದೋಷಗಳನ್ನು ಕಳೆದು, ಯಜಮಾನನನ್ನು ಶುದ್ಧಗೊಳಿಸುವ ಪ್ರಕ್ರಿಯೆ.
  • ಮಂಗಳ ಕಾರ್ಯ: ಇದು ಯಜ್ಞದ ಮುಕ್ತಾಯದ ಸೂಚಕವಾಗಿದ್ದು, ಯಶಸ್ಸನ್ನು ಸೂಚಿಸುತ್ತದೆ.
  • ನದಿ/ತೀರ್ಥ ಸ್ನಾನ: ಸಾಮಾನ್ಯವಾಗಿ ಹರಿಯುವ ನದಿ ಅಥವಾ ಪವಿತ್ರ ತೀರ್ಥಗಳಲ್ಲಿ ಈ ಸ್ನಾನವನ್ನು ಆಚರಿಸಲಾಗುತ್ತದೆ. 

ಸರಳವಾಗಿ ಹೇಳುವುದಾದರೆ, ಯಜ್ಞದ ಕೊನೆಯಲ್ಲಿ ಆಚರಿಸಲಾಗುವ ಸಮಾರೋಪ ಸ್ನಾನವೇ 'ಅವಭೃತ'. ದೇವಾಲಯದ ವಾರ್ಷಿಕೋತ್ಸವ, ಜಾತ್ರೆ, ಆಯನ ಕೂಡಾ ದೇವರ ಶಕ್ತಿಯನ್ನು ಜಾಗೃತಗೊಳಿಸುವ ಯಜ್ಞ, ಹಾಗಾಗಿಯೇ ಆಯನದ ಕೊನೆಗೆ ಅವಭೃತ ನಡೆಯುತ್ತದೆ.

ವಿಟ್ಲಾಯನದ ಸಡಗರದ ರಥೋತ್ಸವದ ಮರುದಿನ ಕೊಡಂಗಾಯಿ ಹೊಳೆಯಲ್ಲಿ ವಿಟ್ಲದೊಡೆಯ ಪಂಚಲಿಂಗೇಶ್ವರನ ಅವಭೃತ ನಡೆಯುತ್ತದೆ. ಈ ಅವಭೃತಕ್ಕಾಗಿ ದೇವಸ್ಥಾನದಿಂದ ಕೊಡಂಗಾಯಿವರೆಗೆ ಸಾಗುವಾಗ  ದೇವಸ್ಥಾನದ ಕಟ್ಟೆಯಿಂದ ತೊಡಗಿ, ವಿವಿಧ ಕಟ್ಟೆಗಳಲ್ಲಿ ಪಂಚಲಿಂಗೇಶ್ವರನಿಗೆ ಪೂಜೆ ಸಲ್ಲುತ್ತದೆ. ಪ್ರತಿವರ್ಷವೂ ಈ ಕಟ್ಟೆಗಳಿಗೆ ದೇವರು ಬರುವ ಹೊತ್ತಿನಲ್ಲಿ ಆಸುಪಾಸಿನ ಜನರು ಭಕ್ತಿ ಪೂರ್ವಕವಾಗಿ ನೆರೆದು ಭಗವಂತನಿಗೆ ಕೈ ಮುಗಿಯುತ್ತಾರೆ.

ಅವಭೃತಕ್ಕಾಗಿ ಪಂಚಲಿಂಗೇಶ್ವರನು ಸಾಗುವ ದೃಶ್ಯದ ವಿಡಿಯೋ ಹಾಗೂ ಪಂಚಲಿಂಗೇಶ್ವರ ದೇವಸ್ಥಾನ ಹಾಗೂ ಸಮೀಪದ ನೆತ್ರಕೆರೆಯ ಎರಡು ಕಟ್ಟೆಗಳಲ್ಲಿ ನಡೆದ ಪಂಚಲಿಂಗನ ಪೂಜೆಯ ಚಿತ್ರ, ವಿಡಿಯೋಗಳು ಮೇಲಿವೆ. (ಚಿತ್ರ, ವಿಡಿಯೋ ಕೃಪೆ: ಸದಾಶಿವ ಬನ, ವಿಟ್ಲ ಸುದ್ದಿಗಳು ಗ್ರೂಪ್‌, ನೆತ್ರಕೆರೆ ಮಠ ಗ್ರೂಪ್)

ಅವಭೃತದ ಮರುದಿನ ಧ್ವಜಾವರತಣದೊಂದಿಗೆ ವಿಟ್ಲಾಯನದ ಸಡಗರ ಕೊನೆಗೊಳ್ಳುತ್ತದೆ.

Thursday, January 22, 2026

ವಿಟ್ಲ ತೇರಿನ ಸುಂದರ ಕ್ಷಣ!

 ವಿಟ್ಲ ತೇರಿನ ಸುಂದರ ಕ್ಷಣ!

ವಿಟ್ಲಾಯನದ ಮಹತ್ವದ ದಿನ ವಿಟ್ಲ ತೇರು ಮತ್ತು ಬೆಡಿಯ ದಿನ. ೨೦೨೬ರ ಜನವರಿ ೨೧ರಂದು ಈ ಸಂಭ್ರಮದ ಹೊತ್ತು.

ವಿಟ್ಲ ತೇರಿನ ಸುಂದರ ಕ್ಷಣದ ವಿಡಿಯೋ ಇಲ್ಲಿದೆ 👇👇.


ಇದನ್ನೂ ನೋಡಿ:

ವಿಟ್ಲ ಶ್ರೀ ಪಂಚಲಿಂಗೇಶ್ವರ ಜಾತ್ರೋತ್ಸವ ಆರಂಭ

Thursday, January 15, 2026

ವಿಟ್ಲ ಶ್ರೀ ಪಂಚಲಿಂಗೇಶ್ವರ ಜಾತ್ರೋತ್ಸವ ಆರಂಭ

 ವಿಟ್ಲ ಶ್ರೀ ಪಂಚಲಿಂಗೇಶ್ವರ ಜಾತ್ರೋತ್ಸವ ಆರಂಭ

ವಿಟ್ಲದ ಸಹಸ್ರಾರು ವರ್ಷಗಳ ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವರ ಕಾಲಾವಧಿ ಜಾತ್ರೆಯು ಸಡಗರದೊಂದಿಗೆ ೨೦೨೬ ಜನವರಿ ೧೪ರ ಬುಧವಾರ ಮಕರ ಸಂಕ್ರಾಂತಿಯ ಶುಭದಿನ ಆರಂಭವಾಯಿತು. ವಿಟ್ಲ ಪಂಚಲಿಂಗೇಶ್ವರ ಜಾತ್ರೆಯು ಆಸುಪಾಸಿನಲ್ಲಿ ʼವಿಟ್ಲಾಯನʼ ಎಂದೇ ಖ್ಯಾತಿ ಪಡೆದಿದೆ.

ಧ್ವಜಾರೋಹಣದೊಂದಿಗೆ ಆರಂಭವಾದ ಜಾತ್ರಾ ಸಡಗರವು ಜನವರಿ ೨೧ರವರೆಗೆ ಮುಂದುವರಿಯಲಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಗಳೊಂದಿಗೆ ಭಕ್ತರನ್ನು ಮುದಗೊಳಿಸಲಿವೆ.

ಜಾತ್ರೋತ್ಸವ ಸಡಗರದ ವಿವಿಧ ಸಂದರ್ಭದ ಚಿತ್ರ ಹಾಗೂ ವಿಡಿಯೋಗಳು ಇಲ್ಲಿವೆ. (ಚಿತ್ರ, ವಿಡಿಯೋ ಕೃಪೆ: ವಿಟ್ಲ ಸುದ್ದಿಗಳು ವಾಟ್ಸಪ್‌ ಗ್ರೂಪ್)




 

Saturday, November 1, 2025

ಹೆಸರಾಂತ ಯಕ್ಷಗಾನ ಅರ್ಥಧಾರಿ ವಿಟ್ಲ ಶಂಭು ಶರ್ಮ ಇನ್ನಿಲ್ಲ

 ಹೆಸರಾಂತ ಯಕ್ಷಗಾನ ಅರ್ಥಧಾರಿ ವಿಟ್ಲ ಶಂಭು ಶರ್ಮ ಇನ್ನಿಲ್ಲ

ಹೆಸರಾಂತ ಯಕ್ಷಗಾನ ಅರ್ಥಧಾರಿ ವಿಟ್ಲ ಶಂಭು ಶರ್ಮ ಅವರು ಇನ್ನಿಲ್ಲ. ೨೦೨೫ರ ನವೆಂಬರ್‌ ೧ರ ಶನಿವಾರ ಅವರು ಸ್ವರ್ಗಸ್ಥರಾದರು.
ಶಂಭು ಶರ್ಮರ ಬಗ್ಗೆ ಯಕ್ಷದೀಪ.ಕಾಮ್‌ ಐದು ವರ್ಷಗಳ ಹಿಂದೆ ಇದೇ ದಿನ ಪ್ರಕಟಿಸಿದ್ದ ಬರಹ ಇಲ್ಲಿದೆ. ಶಂಭುಶರ್ಮದ ಸಂಪೂರ್ಣ ಚಿತ್ರವನ್ನು ಇದು ನೀಡುತ್ತದೆ. ಇದರ ಜೊತೆಗೆ ಶಂಭು ಶರ್ಮರು ಉತ್ತರಕುಮಾರನಾಗಿ ಮಾಡಿದ್ದ ಅರ್ಥಗಾರಿಕೆಯ ತುಣುಕೊಂದು ಇಲ್ಲಿದೆ.
ವಿಟ್ಲ ಶಂಭು ಶರ್ಮ ಎಂಬ ಹೆಸರೇ ಒಂದು ಕಾಲದಲ್ಲಿ ಯಕ್ಷಗಾನ ತಾಳಮದ್ದಳೆ ಕ್ಷೇತ್ರದಲ್ಲಿ ಸಂಚಲನ ಮೂಡಿಸುತ್ತಿದ್ದ ಹೆಸರು. ತಾಳಮದ್ದಳೆ ಪ್ರಿಯ ಪ್ರೇಕ್ಷಕರ ದೈನಂದಿನ ಚರ್ಚೆಗಳಲ್ಲಿ ಆಗಾಗ ಪ್ರಸ್ತಾಪವಾಗುತ್ತಿದ್ದ ವ್ಯಕ್ತಿತ್ವ. ನಾನು ಕಾಲೇಜಿಗೆ ಹೋಗುತ್ತಿದ್ದ ದಿನಗಳಲ್ಲಿಯೂ ಮನೆಯಲ್ಲಿ, ಸಮಾರಂಭಗಳಲ್ಲಿ ಶಂಭು ಶರ್ಮ ಎಂಬ ತಾಳಮದ್ದಳೆಯ ಹೊಸ ಪ್ರತಿಭೆಯ ಬಗ್ಗೆ ಮಾತನಾಡುವುದನ್ನು ಕೇಳಿದ್ದೆ. ‘ಒಳ್ಳೆ ಅರ್ಥ ಹೇಳ್ತಾರಂತೆ, ವಾದದಲ್ಲಿ ಎತ್ತಿದ ಕೈ” ಹೀಗೆ ಮಾತನಾಡುವುದು ಕೇಳಿಬರುತ್ತಿತ್ತು.
ಆಮೇಲೆ ಅವರ ಅರ್ಥಗಾರಿಕೆಯನ್ನು ಹಲವಾರು ಬಾರಿ ಕೇಳುವ ಅವಕಾಶವೂ ಬಂತು.  ವರ್ತಮಾನದ ಆಗುಹೋಗುಗಳ ಹೋಲಿಕೆ, ಹಾಸ್ಯಪ್ರವೃತ್ತಿ, ಶೃಂಗಾರ,  ಹುಡುಗಾಟಿಕೆಯ ಮನೋಭಾವ, ಇವುಗಳನ್ನೆಲ್ಲಾ ತನ್ನ ಅರ್ಥಗಾರಿಕೆಯಲ್ಲಿ ಬಳಸುವ ಶಂಭು ಶರ್ಮರ ಅರ್ಥಗಾರಿಕೆಯ ಶೈಲಿ  ಜನಪ್ರಿಯತೆಯನ್ನು ಸಾಧಿಸಿತು.  ತಾಳಮದ್ದಳೆ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ ಹೆಸರು. ಮಲ್ಪೆ ಶಂಕರನಾರಾಯಣ ಸಾಮಗ, ಶೇಣಿ ಗೋಪಾಲಕೃಷ್ಣ ಭಟ್, ದೇರಾಜೆ ಸೀತಾರಾಮಯ್ಯ ಮತ್ತು  ಪ್ರಸ್ತುತ ಕೂಟಗಳಲ್ಲಿ ಸಕ್ರಿಯರಾಗಿರುವ ಹಲವಾರು ಈಗಿನ ಕಿರಿಯ ಅರ್ಥಧಾರಿಗಳ ಜೊತೆಗೂ ಈಗಲೂ ಬಹುಬೇಡಿಕೆಯ ಅರ್ಥಧಾರಿ.
ಅವರು ಅತಿ ಕಿರಿಯ ವಯಸ್ಸಿನಲ್ಲಿ ಪ್ರೇಕ್ಷಕನಾಗಿ ಹೋಗಿದ್ದ ತಾಳಮದ್ದಳೆ ಕೂಟವೊಂದರಲ್ಲಿ ಅನಿವಾರ್ಯವಾಗಿ ಅರ್ಥಧಾರಿಯಾಗಿ ಭಾಗವಹಿಸಿದಾಗ ಎದುರು ಪಾತ್ರಧಾರಿಯಿಂದ ಆದ ಮಾತಿನ ದಾಳಿಯಲ್ಲಿ ಸೋತು ಕಣ್ಣೀರಿಳಿಸಿದ ಅವರು ಮುಂದೆ ಹಠದಿಂದ ತಾಳಮದ್ದಳೆ ಅರ್ಥಧಾರಿಯಾಗಿ ಸಾಧನೆಯನ್ನು ಮಾಡಿದರು. 

ವಿಟ್ಲ ಶಂಭುಶರ್ಮ ಹುಟ್ಟಿದ್ದು  13-10-1951ರಲ್ಲಿ ಕುಂಬಳೆ ಸೀಮೆಯ ಎಡನಾಡು ಗ್ರಾಮದ ಶೆಡಂಪಾಡಿ ಎಂಬಲ್ಲಿ.  ತಂದೆಯವರು ದಿ| ಕೃಷ್ಣ ಭಟ್ರು, ತಾಯಿ ಹೇಮಾವತಿ ಅಮ್ಮ. ತಂದೆಯವರು ಹೆಡ್‍ಮಾಸ್ಟ್ರು. ಓದಿದ್ದು ಬೇರೆ ಬೇರೆ ಕಾಲೇಜುಗಳಲ್ಲಿ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂ.ಎ  ಓದಿ 35 ವರ್ಷ ಬೇರೆ ಬೇರೆ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ದುಡಿದು ಎಲ್ಲಿಯೂ ಖಾಯಂ ಆಗದೆ ನಿವೃತ್ತಿ ಹೊಂದಿದರು. 
ಮೊದಲೇ ಹೇಳಿದಂತೆ ಆಕಸ್ಮಿಕ ಸನ್ನಿವೇಶವೊಂದರಲ್ಲಿ ಯಕ್ಷಗಾನ ತಾಳಮದ್ದಳೆ ಕೂಟವೊಂದರಲ್ಲಿ ಅರ್ಥ ಹೇಳಿದ ಶಂಭು ಶರ್ಮ ಮುಂದಕ್ಕೆ ಅದರಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡರು. ಮೊದಲ ಅನಿರೀಕ್ಷಿತ ಅವಕಾಶದಲ್ಲಿ ಆದ ಮುಖಭಂಗ ಅವರನ್ನು ಮುಂದೆ ಹಠವಾದಿಯನ್ನಾಗಿ ಬೆಳೆಸಿತು. ವಿಟ್ಲಕ್ಕೆ ಬಂದಿದ್ದ ಪ್ರಸಿದ್ಧ ಅರ್ಥಧಾರಿ ದೇರಾಜೆ ಸೀತಾರಾಮಯ್ಯನವರನ್ನು ಭೇಟಿಯಾಗಿ ಅರ್ಥಗಾರಿಕೆ ಕಲಿಸಿಕೊಡುವಂತೆ ಬಿನ್ನವಿಸಿದ್ದರು. ‘‘ಅರ್ಥಗಾರಿಕೆ ಎಂಬುದು ಕಲಿಸಿಕೊಡುವಂಥದ್ದಲ್ಲ. ತಾನಾಗಿ ಕಲಿತು ಸಿದ್ಧಿಸುವಂತದ್ದು’’ ಎಂದು ದೇರಾಜೆಯವರು ಹೇಳಿದರು. ಆದರೂ ಅವರೊಡನೆ ಸಂಭಾಷಣೆಯ ಮತ್ತು ಪಾತ್ರಗಳ ಸೂಕ್ಷ ಮರ್ಮಗಳನ್ನು ಕಲಿತರು.
ಅರ್ಥಧಾರಿಯಾಗಿ ಬೆಳೆಯಲು ಕರ್ಗಲ್ಲು ಸುಬ್ಬಣ್ಣ ಭಟ್ಟರು ಶಂಭು ಶರ್ಮರಿಗೆ ತುಂಬಾ ಪ್ರೋತ್ಸಾಹವನ್ನು ಕೊಟ್ಟರು. ಅದರಂತೆ ವಿಟ್ಲದ ಹಲವಾರು ಕೂಟಗಳಲ್ಲಿ ಹಿರಿಯ ಕಲಾವಿದರಾಗಿ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗಳು, ಪೆರುವೋಡಿ ನಾರಾಯಣ ಭಟ್ಟರೇ ಮೊದಲಾದವರು ಭಾಗವಹಿಸುತ್ತಿದ್ದುದರಿಂದ ಶಂಭು ಶರ್ಮರಿಗೆ ಅರ್ಥಧಾರಿಯಾಗಿ ಬೆಳೆಯಲು ಅನುಕೂಲವಾಯಿತು. ಆದರೆ ಶಂಭು ಶರ್ಮರಿಗೆ ಉದ್ಯೋಗದ ಕಾರಣದಿಂದ ಅರ್ಥಗಾರಿಕೆಯಲ್ಲಿ ಮತ್ತು ತಾಳಮದ್ದಳೆಯಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಲು ಆಗುತ್ತಲೇ ಇರಲಿಲ್ಲ. ಅವರು ಉಪನ್ಯಾಸಕ ವೃತ್ತಿಯನ್ನು ಕೈಗೊಂಡಿದ್ದ ಕೆಲವು ಕಾಲೇಜಿನ ಪರಿಸರಗಳಲ್ಲಿ ಯಕ್ಷಗಾನ, ತಾಳಮದ್ದಳೆಗಳು ನಡೆಯುತ್ತಿರಲಿಲ್ಲ. ಹೀಗೆ ಆಗಾಗ ತನ್ನ ವೃತ್ತಿ ಬದುಕಿನ ನಡುವೆ ಯಕ್ಷಗಾನ ಕ್ಷೇತ್ರದಿಂದ ದೂರ ಉಳಿಯಬೇಕಾಗಿ ಬರುತ್ತಿತ್ತು. 
ತುರ್ತುಪರಿಸ್ಥಿತಿಯ ವಿರುದ್ಧದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಯಕ್ಷಗಾನದಿಂದ ದೂರವಾಗಿದ್ದರು.  ತುರ್ತುಪರಿಸ್ಥಿತಿಯ ನಂತರ ಗಣಪತಿ ಜೂನಿಯರ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆಗೆ ಸೇರಿದ ನಂತರ ಆ ಸಂದರ್ಭದಲ್ಲಿ ಪುನಃ ಯಕ್ಷಗಾನದಲ್ಲಿ ಬೆಳೆಯುವುದಕ್ಕೆ ಅವಕಾಶ ಆಯಿತು. ಬೆಸೆಂಟ್ ಸಂಜೆ ಕಾಲೇಜು, ಬೆಸೆಂಟ್ ಡೇ ಕಾಲೇಜು- ಹೀಗೆ ಹಲವು ಕಾಲೇಜುಗಳಲ್ಲಿ ದುಡಿಯುತ್ತಾ  ರಾತ್ರಿ ಶ್ರೀಧರ ರಾಯರ ನೇತೃತ್ವದ ಯಕ್ಷಗಾನ ಬಯಲಾಟಗಳಲ್ಲಿ ಭಾಗವಹಿಸುತ್ತಿದ್ದರು. ತಾಳಮದ್ದಳೆಗಳಲ್ಲಿ ಭಾಗವಹಿಸುತ್ತಿದ್ದರು. 
ಯೌವನದ ಪ್ರಾರಂಭದಲ್ಲಿ ಹೀಗೆ ಅವಿಶ್ರಾಂತಿಯಿಂದ ದುಡಿಯುತ್ತಿದ್ದರೂ ಮತ್ತೆ ಪುನಃ ಮೂರ್ನಾಡಿಗೆ ಉದ್ಯೋಗಕ್ಕಾಗಿ ತೆರಳಿದಾಗ ಯಕ್ಷಗಾನದ ಸಂಪರ್ಕ ಮುರಿಯಿತು. ಎರಡು ವರ್ಷದ ನಂತರ ಮೂರ್ನಾಡಿಂದ ಮಂಗಳೂರಿನ ಫಿಶರೀಸ್ ಕಾಲೇಜಿಗೆ ಬಂದಾಗ ಮತ್ತೆ ಯಕ್ಷಗಾನದ ಅವಕಾಶಗಳು ಕೈತುಂಬಾ ಬಂದು ಜನಪ್ರಿಯನಾಗಲು ಸಹಾಯಕವಾಯಿತು. ಆದರೆ ಯಾಕೋ ಮತ್ತೆ ತಡೆ ಬಂತು. ಮುಂದಿನ ಎಂಟು ವರ್ಷಗಳ ಕಾಲ ಸೋಮವಾರಪೇಟೆಯ ಕಾಲೇಜಿನಲ್ಲಿ ಕೆಲಸ ಮಾಡಬೇಕಾಗಿ ಬಂತು. ಹೀಗೆ ಯಕ್ಷಗಾನದ ಸಂಪರ್ಕ ಆಗಾಗ ಕಡಿಯುತ್ತಾ ಇದ್ದುದು ಶಂಭು ಶರ್ಮರ ಕಲಾ ಬದುಕಿನ ದುರಂತವೆಂದೇ ಹೇಳಬೇಕು. ಸೋಮವಾರಪೇಟೆಯಿಂದ ಬಂದ ನಂತರ ವಿಜಯಾ ಕಾಲೇಜು, ಮುಲ್ಕಿ, ಸುಂಕದಕಟ್ಟೆ ಕಾಲೇಜು ಇಲ್ಲಿ ಕೆಲಸ ಮಾಡುತ್ತಿದ್ದಾಗ ಪ್ರಥಮ ಹಂತದ ಅರ್ಥಧಾರಿಗಳ ಸಾಲಿಗೆ ಸೇರಿದ್ದರು. 
ವಿಟ್ಲ ಶಂಭು ಶರ್ಮ ಕೇವಲ ತಾಳಮದ್ದಳೆ ಕ್ಷೇತ್ರದಲ್ಲಿ ಅರ್ಥಧಾರಿ ಎಂದು ಹಚ್ಚಿನವರು ಭಾವಿಸಿರಬಹುದು. ಆದರೆ ಅವರು ಯಕ್ಷಗಾನ ವೇಷಧಾರಿಯಾಗಿಯೂ ಕೆಲವು ವರ್ಷಗಳ ತಿರುಗಾಟ ಮಾಡಿದ್ದಾರೆ ಎಂದರೆ ಕೆಲವರಿಗೆ ಆಶ್ಚರ್ಯವಾಗಬಹುದು. ಶ್ರೀಧರ ರಾಯರ ತಂಡದಲ್ಲಿ ಹಾಗೂ ಕರ್ನೂರು ಕೊರಗಪ್ಪ ರೈಗಳ ತಂಡದಲ್ಲಿ ಖಾಯಂ ವೇಷಧಾರಿಯಾಗಿದ್ದರು.  ಮಾತ್ರವಲ್ಲ ಫೆಬ್ರವರಿ 28ಕ್ಕೆ ಕಾಲೇಜಿನ ಪಾಠವನ್ನು ಮುಗಿಸಿದ ಮೇಲೆ, ಬೇರೆ ಬೇರೆ ಮೇಳಗಳಲ್ಲಿ ಅಂದರೆ, ಸುಬ್ರಹ್ಮಣ್ಯ, ಕದ್ರಿಮೇಳ ಮೊದಲಾದುವುಗಳಲ್ಲಿ ಅತಿಥಿ ಕಲಾವಿದನಾಗಿ ಭಾಗವಹಿಸುತ್ತಿದ್ದರು.  ಒಂದು ವರ್ಷ ಉದ್ಯೋಗಕ್ಕೆ ರಜೆ ಹಾಕಿ ಪೂರ್ಣಾವಧಿ ಕಲಾವಿದನಾಗಿ ನಾರಾಯಣ ಕಮ್ತಿಯವರ ಬಪ್ಪನಾಡು ಮೇಳದಲ್ಲಿ ತಿರುಗಾಟ ಮಾಡಿದ್ದರು.
ಆಮೇಲೆ ಅನಿರೀಕ್ಷಿತ ಅಪಘಾತವಾಗಿದ್ದರಿಂದ ಚಿಟ್ಟೆಪಟ್ಟಿ ಕಟ್ಟಲಿಕ್ಕೂ ಕಷ್ಟವಾಗಿ ಯಕ್ಷಗಾನ ತಿರುಗಾಟವನ್ನು ನಿಲ್ಲಿಸಿದ್ದರು. ಆದರೆ ಕೆಲವೊಮ್ಮೆ ಅತಿಥಿ ಕಲಾವಿದನಾಗಿ ಅಪರೂಪಕ್ಕೆ ಒಂದೊಂದು ವೇಷವನ್ನು ಆಗಾಗ ಮಾಡುತ್ತಿದ್ದರು. ಶಂಭು ಶರ್ಮ ತನ್ನ 14ನೆಯ ವಯಸ್ಸಿನಲ್ಲಿ ಸೂರಂಬೈಲಿನಲ್ಲಿ ನಡೆದ ‘ಭೀಷ್ಮಪರ್ವ’ ತಾಳಮದ್ದಳೆ ಕೂಟದಲ್ಲಿ ದೊಡ್ಡ ಸಾಮಗರ (ಮಲ್ಪೆ ಶಂಕರನಾರಾಯಣ ಸಾಮಗ) ಭೀಷ್ಮನ ಪಾತ್ರಕ್ಕೆದುರಾಗಿ ಅಭಿಮನ್ಯುವಾಗಿ ಅರ್ಥ ಹೇಳಿದ್ದರು. ದೊಡ್ಡ ಸಾಮಗರು ಇವರ ಅರ್ಥವನ್ನು ಮೆಚ್ಚಿಕೊಂಡು ಪ್ರಶಂಸಿಸಿದ್ದರು. 
ಯಕ್ಷಗಾನಕ್ಕೆ ಶೈಕ್ಷಣಿಕ ಶಿಸ್ತಿನ ಗ್ರಂಥವನ್ನು ಅವಶ್ಯಕತೆಯ ಬಗ್ಗೆ ಶಂಭು ಶರ್ಮರಲ್ಲಿ ಕೇಳಿದಾಗ “ಅದು ಸಾಧ್ಯ ಇಲ್ಲ ಎಂದೇ ನನ್ನ ಅಭಿಪ್ರಾಯ. ಯಕ್ಷಗಾನ ಎಂದರೆ ಚೌಕಟ್ಟಿನೊಳಗಿರುವ ಸ್ವಾತಂತ್ರ್ಯ. ಇದಕ್ಕೆ ಚೌಕಟ್ಟೂ ಇದೆ, ಸ್ವಾತಂತ್ರ್ಯವೂ ಇದೆ ಎಂದಾಗ ಒಂದು clean syllabus ಸಾಧ್ಯವಿಲ್ಲ. ಒಂದು ರೂಪುರೇಷೆಗಳ outline ಮಾಡಬಹುದೇ ಹೊರತು ಕಡ್ಡಾಯ ಕಾನೂನಿನಲ್ಲಿ ಯಕ್ಷಗಾನವನ್ನು ಒಳಪಡಿಸಲು ಸಾಧ್ಯವೇ ಇಲ್ಲ. ಸ್ವಾತಂತ್ರ್ಯ ಸ್ವಲ್ಪ ಇದ್ದರೂ ಅದು ದುರುಪಯೋಗ ಆಗಬಾರದು ಎಂದು ನಿರ್ದೇಶನಗಳನ್ನು ಕೊಡಬಹುದೇ ಹೊರತು ಕಟ್ಟುನಿಟ್ಟು ಎಂಬುದು ಯಕ್ಷಗಾನದಲ್ಲಿ ಕಷ್ಟ” ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಶಂಭು ಶರ್ಮರಿಗೆ ಸಂಕಷ್ಟದ ಕಾಲವೊಂದಿತ್ತು. ಅಪಘಾತವೊಂದರಲ್ಲಿ ದೈಹಿಕವಾಗಿ ಜರ್ಝರಿತರಾಗಿದ್ದ ಸಮಯದಲ್ಲಿ ಫ್ರಾಕ್ಚರ್ ಆಗಿ ಕೈಯೊಂದನ್ನು ರಾಡ್ ಹಾಕಿ ಕೊರಳಿಗೆ ನೇತಾಡಿಸಿದ್ದರು. ಈ ಸ್ಥಿತಿಯಲ್ಲೇ ಶಂಭು ಶರ್ಮರು ಸುಮಾರು 50 ತಾಳಮದ್ದಳೆಗಳಲ್ಲಿ ಭಾಗವಹಿಸಿದ್ದರು. ಎಲ್ಲರಿಂದಲೂ ಇದು ಸಾಧ್ಯವಾಗುವ ಕಾರ್ಯವಲ್ಲ. ಶಂಭು ಶರ್ಮ ಇವರು ಯಕ್ಷರಂಗ ಪ್ರಶಸ್ತಿ, ಪೆರ್ಲ ಕೃಷ್ಣ ಭಟ್ಟ ಪ್ರಶಸ್ತಿ, ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ, ಸಂಪಾಜೆಯ ಪುರಸ್ಕಾರ, ವಿಟ್ಲ ಜೋಷಿ ಪ್ರಶಸ್ತಿ, ಮುಂಬಯಿ ಅಜೆಕಾರು ಪ್ರಶಸ್ತಿಯೇ ಮೊದಲಾದ ಹಲವಾರು ಪ್ರಶಸ್ತಿ, ಸನ್ಮಾನಗಳನ್ನು ಪಡೆದಿದ್ದಾರೆ. ಈಗ ಪತ್ನಿ ಲಕ್ಷ್ಮೀಶರ್ಮ, ಮಗ ಕೃಷ್ಣರಾಜ, ಸೊಸೆ ವಿದ್ಯಾ, ಮೊಮ್ಮಗ ನಿಶ್ಚಯರೊಂದಿಗೆ ಸಂತೃಪ್ತ ಜೀವನವನ್ನು ನಡೆಸಿದ್ದರು.

ಲೇಖನ: ಮನಮೋಹನ್ ವಿ.ಎಸ್. 

ಕೃಪೆ: ಯಕ್ಷದೀಪ.ಕಾಮ್‌ (https://yakshadeepa.com/)

Friday, March 28, 2025

ವಿಟ್ಲ ಶ್ರೀ ಪಂಚಲಿಂಗೇಶ್ವರ- ಬೊಳ್ನಾಡು ಶ್ರೀ ಚೀರುಂಭ ಭಗವತಿ ಭೇಟಿ

 ವಿಟ್ಲ ಶ್ರೀ ಪಂಚಲಿಂಗೇಶ್ವರ- ಬೊಳ್ನಾಡು ಶ್ರೀ ಚೀರುಂಭ ಭಗವತಿ ಭೇಟಿ

ಇದು ೬೦೦ ವರ್ಷಗಳಗೊಮ್ಮೆ ನಡೆಯುವ ಅಪರೂಪದ ಉತ್ಸವ

ದೈವ -ದೇವತೆಗಳ ಬೀಡಾಗಿರುವ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಸಹಸ್ರಾರು ವರ್ಷಗಳ ಇತಿಹಾಸವಿದೆ. ವಿಟ್ಲ ಪಾಂಡವರು ನೆಲೆಸಿದ್ದ ಏಕ ಚಕ್ರನಗರ ಎಂಬ ಪ್ರತೀತಿ ಇದೆ.

ಇದೇ ಬಂಟ್ವಾಳ ತಾಲೂಕಿನ ಬೊಳ್ನಾಡುವಿನ ಚೀರುಂಭ ಭಗವತಿ ದೇವಸ್ಥಾನ ಕೂಡಾ ಹಳೆಯದೇ. ಕೆಲವು ವರ್ಷಗಳ ಹಿಂದೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಆಗಿದ್ದರೆ, ಇತ್ತೀಚೆಗೆ ಬೊಳ್ನಾಡು ಚೀರುಂಭ ಭಗವತಿ ದೇವಸ್ಥಾನದ ಜೀರ್ಣೋದ್ಧಾರ ನಡೆದಿದೆ. ೨೦೨೫ರ ಮಾರ್ಚ್‌ ೨೦ರಿಂದ ೨೭ರವರೆಗೆ ಭಗವತಿ ದೇವಸ್ಥಾನದಲ್ಲಿ ಭರಣಿ ಮಹೋತ್ಸವ ನಡೆದಿದೆ.

ಈ ಸಂದರ್ಭದಲ್ಲಿ ಒಂದು ವಿಶೇಷವಾದ ಘಟನೆ ವಿಟ್ಲದಲ್ಲಿ ನಡೆದಿದೆ. ಮನುಷ್ಯರು ಅದರಲ್ಲೂ ಗಣ್ಯರು ಪರಸ್ಪರ ಭೇಟಿ ಮಾಡುವುದು ನಮಗೆಲ್ಲರಿಗೂ ಗೊತ್ತು. ಆದರೆ ದೇವರು- ದೇವಿ ಭೇಟಿ ಮಾಡುವುದು ಅಪರೂಪದ ಸಂಗತಿ. ಭಗವತಿ ದೇವಸ್ಥಾನದ ಭರಣಿ ಮಹೋತ್ಸವದ ಸಂದರ್ಭದಲ್ಲಿ ಚೀರುಂಭ ಭಗವತಿ, ಸನಿಹದ ಪಂಚಲಿಂಗೇಶ್ವರ ದೇಗುಲಕ್ಕೆ ಆಗಮಿಸಿ ಪಂಚಲಿಂಗೇಶ್ವರನ ದರ್ಶನಗೈದ ಘಟನೆ ನಡೆದಿದೆ.

ಶ್ರೀ ಪಂಚಲಿಂಗೇಶ್ವರ ಮತ್ತು ಚೀರುಂಭ ಭಗವತಿ ಭೇಟಿ ಹೀಗೆ ನಡೆಯುವುದು ೬೦೦ ವರ್ಷಗಳಿಗೆ ಒಮ್ಮೆ ಎಂಬ ಪ್ರತೀತಿ ಇದೆ. ಹೀಗಾಗಿ ಪ್ರಯಾಗದಲ್ಲಿ ನಡೆದ ಮಹಾಕುಂಭ ಮೇಳದಂತೆಯೇ, ಮನುಷ್ಯರ ಜೀವಮಾನದಲ್ಲಿ ಒಮ್ಮೆ ಮಾತ್ರ ಕಾಣಬಹುದಾದ, ಪಾಲ್ಗೊಳ್ಳಬಹುದಾದ ಅಪರೂಪದ ಭೇಟಿ ಇದು.

೨೦೨೫ರ ಮಾರ್ಚ್‌ ೨೫ರಂದು ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಉತ್ಸವ ರೂಪದಲ್ಲಿ ಈ ಘಟನೆ ನಡೆಯಿತು. ಬೊಳ್ನಾಡು ಚೀರುಂಭ ಭಗವತಿ ದೇವಸ್ಥಾನದಿಂದ ಕಾಲ್ನಡಿಗೆಯಲ್ಲೇ ಹೊರಟು ವಿಟ್ಲದ ಶ್ರೀ ಪಂಚಲಿಂಗೇಶ್ವರ ಸನ್ನಿಧಾನಕ್ಕೆ ವಾದ್ಯಮೇಳದೊಂದಿಗೆ ಆಗಮಿಸಿದ ಭಗವತಿ ಮಾತೆಯು ಶ್ರೀ ಪಂಚಲಿಂಗೇಶ್ವರನ ದೇವರ ದರ್ಶನ-ಭೇಟಿಯನ್ನು ಮಾಡಿದ ಅಪರೂಪದ ದೃಶ್ಯವನ್ನು ಸಹಸ್ರಾರು ಮಂದಿ ವೀಕ್ಷಿಸಿದರು.


ಈ ಸಂದರ್ಭದ ವಿಡಿಯೋ ನೋಡಲು ಕೆಳಗೆ ಕ್ಲಿಕ್‌ ಮಾಡಿರಿ.

ಈ ಕೆಳಗಿನವುಗಳನ್ನೂ ಓದಿರಿ:

ವಿಟ್ಲ ಪಂಚಲಿಂಗೇಶ್ವರನಿಗೆ ಮರುಹುಟ್ಟು ಸಂಭ್ರಮ

ವಿಟ್ಲ ಪಂಚಲಿಂಗೇಶ್ವರನಿಗೆ ಧರ್ಮಸ್ಥಳದ 'ಮುಗುಳಿ'

ವಿಟ್ಲಾಯನದ ಕೊನೆಯ ದಿನ

Wahl! What Water falls..!

Sunday, February 19, 2023

ಬಲಿಪರೆಂಬೋ ಮಹಾ ಮೇರುವಿನ ನೆನೆನೆನೆದು...

 ಬಲಿಪರೆಂಬೋ ಮಹಾ ಮೇರುವಿನ ನೆನೆನೆನೆದು...

ಬಹುಶಃ ಹಳೆ ತಲೆಗಳನ್ನು ಬಿಟ್ಟರೆ ಬಹಳ ಮಂದಿಗೆ ಇದು ಗೊತ್ತಿಲ್ಲ.  ೫೦-೬೦ ವರ್ಷಗಳಿಗೂ ಹಿಂದಿನ ನೆನಪು. ನಾನು ಆಗ ವಿಟ್ಲದಲ್ಲಿ ಪ್ರಾಥಮಿಕ ಶಾಲೆ/ ಹೈಸ್ಕೂಲಿನಲ್ಲಿ ಓದುತ್ತಿದ್ದೆ. ವಿಟ್ಲ ಪ್ರಾಥಮಿಕ ಶಾಲೆಯ ಸಮೀಪದಲ್ಲೇ ಇದ್ದ ಮನೆಯೊಂದರಲ್ಲಿ ಆಗ ಬಲಿಪ ನಾರಾಯಣ ಭಾಗವತರು ತಮ್ಮ ಕುಟುಂಬದೊಂದಿಗೆ ವಾಸವಾಗಿದ್ದರು.

ಅವರ ಸಹೋದರನೊಬ್ಬ ನಾನು ಓದುತ್ತಿದ್ದ ಶಾಲೆಯಲ್ಲೇ ಓದಲು ಬರುತ್ತಿದ್ದುದು ನನಗೆ ನೆನಪಿದೆ. ಕ್ಷಮಿಸಬೇಕು. ಹೆಸರು ಮರೆತಿದೆ. ಆದರೆ ಆತ ಕೂಡಾ ಬಲಿಪರಂತೆಯೇ ಶಾಲೆಯಲ್ಲಿ ಯಕ್ಷಗಾನದ ಹಾಡುಗಳನ್ನು ಹಾಡುತ್ತಿದ್ದುದು ನನಗೆ ನೆನಪಿದೆ.

ನಮ್ಮ ಮನೆಯಿಂದ ವಿಟ್ಲ ಪೇಟೆಗೆ ಹೋಗುವಾಗ ಸಿಗುತ್ತಿದ್ದ ಆ ಮನೆಯಲ್ಲಿ ಬಲಿಪರು ಎಲೆ ಅಡಿಕೆ ಮೆಲ್ಲುತ್ತಾ ಭಾಗವತಿಕೆಯ ಪದಗಳನ್ನು ಗುನು ಗುನಿಸುತ್ತಿದ್ದನ್ನು ನಾನು ಕಂಡದ್ದುಂಟು.

ಆ ಬಳಿಕ ಎಷ್ಟೋ ಬಾರಿ ತಂದೆಯವರ ಜೊತೆಗೆ ವಿಟ್ಲದ ಆಸುಪಾಸಿನಲ್ಲಿ ಕಟೀಲು ಮೇಳದ ಯಕ್ಷಗಾನ ಬಯಲಾಟ ಅದರಲ್ಲೂ ದೇವಿ ಮಹಾತ್ಮೆ ಪ್ರಸಂಗ ಇದ್ದರೆ ತಪ್ಪಿಸದೇ ಹೋಗುತ್ತಿದ್ದ ನೆನಪಿದೆ. ಆಗ ಕೇಳುತ್ತಿದ್ದ ಬಲಿಪರ ಹಾಡುಗಳು ಅಲ್ಪ ಸ್ವಲ್ಪ ನಮ್ಮ ಬಾಯಿಗಳಲ್ಲೂ ಎಷ್ಟೋ ದಿನ ಅಲ್ಪ ಸ್ವಲ್ಪ ನಲಿಯುತ್ತಿದ್ದವು.

ವಿಟ್ಲದ ಜೊತೆಗಿನ ಬಲಿಪರ ಸಂಬಂಧ – ಮರೆಯಲಾಗದಂತಹುದು. ಈ ಬಗ್ಗೆ ಹೆಚ್ಚು ನೆನಪು ಇದ್ದವರಿದ್ದರೆ ಅದನ್ನು ದಾಖಲಿಸುವುದು ಉತ್ತಮ

ಬಲಿಪರ ಬಗ್ಗೆ ಆತ್ಮೀಯವಾಗಿ ಬರೆದ ಚಂದ್ರಶೇಖರ ಆಚಾರ್ಯ ಕೈಯಬೆ ಅವರ ಈ ಲೇಖನವನ್ನು ವಿಟ್ಲ ಸುದ್ದಿಗಳು ವಾಟ್ಸಪ್‌ ಗುಂಪಿನಲ್ಲಿ ಸಿ.ಎ. ಶಾಸ್ತ್ರಿ ಹಾಕಿದ್ದಾರೆ. ಅದನ್ನು ʼಪರ್ಯಾಯʼ ಹಾಗೆಯೇ ಇಲ್ಲಿ ತೆಗೆದುಕೊಂಡಿದೆ. ಬಲಿಪರನ್ನು ಹತ್ತಿರದಿಂದ ಕಂಡ ಅನುಭವ ಇದನ್ನು ಓದುತ್ತಾ ಇದ್ದರೆ ನಿಮಗೆ ಆಗಬಹುದು.

-ನೆತ್ರಕೆರೆ ಉದಯಶಂಕರ

ಬಲಿಪರೆಂಬೋ ಮಹಾ ಮೇರುವಿನ ನೆನೆನೆನೆದು...

ಮಹಾ ಮಹಿಮಾ ಶ್ರೀ ಬಲಿಪರ ಕುರಿತು ಈಗಾಗಲೇ ಹತ್ತು ಹಲವು ಲೇಖನಗಳು ಸಮಷ್ಟಿಯ ಭಾವವನ್ನು ಹೊತ್ತು ಬಂದಿದೆ. ನಾಡಿನ ಪತ್ರಿಕೆಗಳು,  ಆಕಾಶವಾಣಿ ಎಲ್ಲವೂ ಯಥಾ ಸಾಧ್ಯ ಅವರ ಗುಣಗಾನ ಮಾಡಿದೆ. ಖುದ್ದು ದೇಶದ ಪ್ರಧಾನಮಂತ್ರಿಗಳು, ರಾಜ್ಯದ ಮುಖ್ಯಮಂತ್ರಿಗಳು ಸೇರಿ ಸರಕಾರ, ಕಲಾ ವಲಯ ಅವರ ಸಾವಿಗೆ ಕಂಬನಿಗರೆದಿದೆ.. ಈ ಕಿರು ಬರಹದಲ್ಲೂ ಅದಕ್ಕಿಂತ ಹೊರತಾದುದು ಬೇರೆ ಏನು ಇಲ್ಲ. ಆದರೂ ಒಳಗಿದ್ದ ಭಾವನೆಗಳಿಗೆ ಅಕ್ಷರ ರೂಪ ಕೊಡಲೇಬೇಕೆಂಬ ಒತ್ತಡವೇ ಈ ಬರಹಕ್ಕೆ ಮೂಲ ಪ್ರೇರಣೆ, ಅನ್ಯಥಾ ಬೇರೆ ಏನೂ ಇಲ್ಲ.....

ಬಲಿಪರೆಂಬ ಮಹಾ ವಿಸ್ಮಯ.

ಹೌದು ಬಲಿಪರೆಂಬುದೇ ಒಂದು ವಿಸ್ಮಯ, ವಿಶೇಷ, ಅದ್ಭುತ.. ಅದ್ಯಾಕೋ ಗೊತ್ತಿಲ್ಲ ನನಗೆ ಬುದ್ದಿ ಬಂದಾಗಿನಿಂದಲೂ ಅಥವಾ ಸರಿಯಾಗಿ ಕಣ್ಣು ಬಿಟ್ಟು ಆಟ ನೋಡುವಲ್ಲಿಂದ ತೊಡಗಿ ಬಲಿಪರೆಂದರೆ ನನಗೆ ಕಾರಣವೇ ಇಲ್ಲದ ವಿಶೇಷ ಅಕ್ಕರೆ, ಪ್ರೀತಿ, ಗೌರವ.ಅದು ಬಲಿಪರು ಮೆರೆಯುತ್ತಿದ್ದ ಕಾಲ. ಕಟೀಲು ಮೇಳಗಳಲ್ಲೇ ಬಲಿಪರ ಸೆಟ್ ಗೆ ಬೇರೆಯದ್ದೇ ಆದ ಒಂದು ವಿಶೇಷ ಬೇಡಿಕೆ ಸೃಷ್ಟಿಯಾಗಿತ್ತು. ಇವತ್ತಿನ ಯಾವ ಪ್ರಚಾರ ಮಾಧ್ಯಮಗಳು ಇಲ್ಲದ ಕಾಲಘಟ್ಟದಲ್ಲಿ ಬಲಿಪರು ಸೃಷ್ಟಿಸಿದ್ದ ಸಂಚಲನ ಅಧ್ಯಯನ ಯೋಗ್ಯ ವಿಷಯ.ಜತೆಗೆ ಅದು ಆಡಿಯೋ ಕ್ಯಾಸೆಟ್ ಯುಗ. ಕ್ಯಾಸೆಟ್ ಅಂಗಡಿಗೆ ಹೋದರೆ ನನ್ನ ಮೊದಲ ಆಯ್ಕೆ ಭಾಗವತರು ಯಾರು ಎಂಬುದಾಗಿತ್ತು, ಹಾಗಾಗಿಯೇ ಬಲಿಪರ ಭಾಗವತಿಕೆಯ ನೂರಾರು ಕ್ಯಾಸೆಟ್ ನನ್ನ ಬಳಿ ಸಂಗ್ರಹವಾಗಿತ್ತು. ಆ ಬಳಿಕ ವೀಡಿಯೋ ಸಿಡಿ, ಡಿವಿಡಿಗಳು ಬಂದಾಗಲೂ ಯಥಾ ಪ್ರಕಾರ ಬಲಿಪರ ಹತ್ತಾರು ಸಿಡಿ, ಡಿವಿಡಿಗಳು ನನ್ನ ಸಂಗ್ರಹ ಸೇರಿತ್ತು..ಇನ್ನೂ ಸಾವಿರ ವರ್ಷ ಕಳೆದರೂ ಬಲಿಪ ಧ್ವನಿ ಆ ಮೂಲಕ ಕೇಳುತ್ತಲೇ ಇರುತ್ತದೆ. ಇದೇ ನಮ್ಮ ಪಾಲಿನ ದೊಡ್ಡ ಸೌಭಾಗ್ಯ.

ಅದ್ಬುತವಾದ ರಂಗ ತಂತ್ರಜ್ಞ

ಬಲಿಪರಿಗೆ ಆಟ ಬಿಟ್ಟರೆ ಬೇರೆ ಏನೇನೂ ಅಂದರೆ ಏನೂ ಗೊತ್ತಿರಲಿಲ್ಲ ಎಂಬುದು ಎಲ್ಲರಿಗೂ ಗೊತ್ತಿದ್ದ ವಿಷಯ. ಚೌಕಿಯ ರಾಜಕಾರಣ ಎನ್ನುವುದು ಅವರಿಗೆ ಅರ್ಥವಾಗದ ವಿಷಯ. ಅವರಿಗೆ ಗೊತ್ತಿದ್ದುದು ಒಂದೇ ಆಟ ಚೆನ್ನಾಗಿ ಆಗಬೇಕು, ಅಷ್ಟೇ ಅಷ್ಟೇ. ತಾನು ಮೆರೆಯಬೇಕು, ತನ್ನ ಪದ್ಯ ಹೈಲೈಟ್ ಆಗಬೇಕು,ತಾನು ಪ್ರಸಿದ್ದಿಯ ಉತ್ತುಂಗಕ್ಕೆ ಹೋಗಬೇಕು ಇತ್ಯಾದಿ ಯಾವ ಕಲ್ಪನೆಯೂ ಇಲ್ಲದ ಮುಗ್ದಾತೀ ಮುಗ್ದ ಭಾಗವತ ರತ್ನ ನಮ್ಮ ಬಲಿಪರು.. ಆದರೆ ಆಟದೊಂದಿಗೆ ಬಲಿಪರು ಮೆರೆದರು, ಜನ ಕೂಡ ಅವರನ್ನು ಮೆರೆಸಿದರು..

ಚೌಕಿ ಅಥವಾ ರಂಗಸ್ಥಳವಿರಲಿ ಅಥವಾ ಕೂಟದಲ್ಲಿ ಆಗಲಿ ಅವರ ಉಪಸ್ಥಿತಿಯೇ ಒಂದು ಅನೂಹ್ಯ ಅನುಭವ. ಚೌಕಿಯಲ್ಲಿ ಸಹ ಕಲಾವಿದರಿಗೆ ಪ್ರಸಂಗ ಜ್ಞಾನ ಕಲಿಸುವುದರಿಂದ ತೊಡಗಿ, ಅವರು ಮುಂಡಾಸು ಕಟ್ಟುವುದು, ದೇವರ ಎದುರುಗಡೆ ಪ್ರಸಾದ ತೆಗೆದುಕೊಳ್ಳುವುದು, ಅವರ ಕವಳದ ಪೆಟ್ಟಿಗೆ, ಎಲೆ ಅಡಿಕೆ ತಿನ್ನುವ ರೀತಿ, ಹೆಗಲ ಮೇಲೆ ಶಾಲು, ಕೈಯಲ್ಲಿ ಕವಳದ ಪೆಟ್ಟಿಗೆಯೊಂದಿಗೆ, ಇಳಿ ಬಿಟ್ಟ ವೇಸ್ಟಿಯನ್ನು ಸ್ವಲ್ಪ ಮೇಲೆ ಎತ್ತಿಕೊಂಡು ಅವರು ರಂಗಸ್ಥಳಕ್ಕೆ ಬರುವುದು... ನೋಡುವುದೇ ಒಂದು ಸೊಗಸು. ಸುಬ್ರಾಯ ಹೊಳ್ಳರ ಮಾತಿನ ಪ್ರಕಾರ ಅವರು ಚೌಕಿಯಲ್ಲಿ ತಯಾರಾಗುವುದೇ ಒಂದು ಪರಿಪೂರ್ಣ ವೇಷ ತಯಾರಾದಂತೆ.ಒಮ್ಮೆಅವರು ರಂಗಸ್ಥಳಕ್ಕೆ ಬಂದರೆ ಆಮೇಲೆ ಏನಿದ್ದರೂ ಬಲಿಪರೇ ಇಡೀ ರಂಗ ನಿರ್ದೇಶಕ, ಭಾಗವತ, ನಿಯಂತ್ರಕ.. ಬಲಿಪರು, ಬಲಿಪರು, ಬಲಿಪರು.... ಆಟದ ವಿಷಯದಲ್ಲಿ ಬಲಿಪರಿಗೆ ಗೊತ್ತಿಲ್ಲದ್ದು ಏನು?ಚೌಕಿಯಲ್ಲಿ ವೇಷ ತಯಾರು ಆಗುವುದರಿಂದ ತೊಡಗಿ, ವೇಷಗಳ

ರಂಗಸ್ಥಳಕ್ಕೆ ಪ್ರವೇಶ,ವೇಷಗಳ ನಿಲ್ಲುವಿಕೆ, ಮಾತನಾಡುವುದು, ನಿರ್ಗಮನ ಎಲ್ಲವೂ ಬಲಿಪರೆಂಬ ಚುಂಬಕ ಶಕ್ತಿಯ ನಿಯಂತ್ರಣಕ್ಕೆ ಒಳಪಟ್ಟೆ ನಡೆಯುತ್ತಿತ್ತು. ಅವರು ಸ್ವಯಂ ವೇಷ ಮಾಡದಿದ್ದರೂ ಯಾವ ಪಾತ್ರ ಹೇಗೆ ಇರಬೇಕು ಬಣ್ಣದಿಂದ ತೊಡಗಿ ಎಲ್ಲದಕ್ಕೂ ಅವರು ಇದಂಮಿತ್ಥಂ..

 ಕಲಾವಿದರ ನಿರ್ಮಾಣದ ಕುಶಲ ಶಿಲ್ಪಿ

ಮೇಳಕ್ಕೆ ಒಬ್ಬ ಯಜಮಾನ, ಮ್ಯಾನೇಜರ್ ಇತ್ಯಾದಿ ಎಲ್ಲ ವ್ಯವಸ್ಥೆ ಇದ್ದರೂ ಭಾಗವತನ ಸ್ಥಾನ ಪ್ರತ್ಯೇಕ, ಅದು ವಿಶೇಷ ವಿಶಿಷ್ಟ. ಒಬ್ಬ ಭಾಗವತ ಮನಸು ಮಾಡಿದರೆ ಇಡೀ ಆಟ ಮಾತ್ರವಲ್ಲ ಇಡೀ ಮೇಳದ ವ್ಯವಸ್ಥೆಯನ್ನೇ ಹಾಳು ಮಾಡಬಹುದು, ಹಾಗೆ ಮೆರೆಸಲುಬಹುದು. ಸಹ ಕಲಾವಿದನನ್ನು ಮೆರೆಸಬಹುದು, ಚಿವುಟಿ ಹಾಕಲೂಬಹುದು. ಇದು ಹಿಂದೆಯೂ ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತದೆ.. ಆದರೆ ಬಲಿಪರು ಇಲ್ಲೂ ವಿಶೇಷ, ವಿಶಿಷ್ಟ. ಪ್ರಾಯಶ: ಸುಮಾರು ನಾಲ್ಕು ಅಥವಾ ಐದು ತಲೆಮಾರಿನ ಕಲಾವಿದರನ್ನು ಅವರು ಕುಣಿಸಿದ್ದಾರೆ, ಮೆರೆಸಿದ್ದಾರೆ, ಕೂಟಗಳಲ್ಲಿ ಅರ್ಥ ವೈಭವ ಕಾಣಿಸುವಂತೆ ಮಾಡಿದ್ದಾರೆ. ತೆಂಕಿನ ಲೆಜೆಂಡ್ ಕಲಾವಿದರೆಲ್ಲರನ್ನು ಕುಣಿಸಿದ ಕೀರ್ತಿ ಅವರದ್ದು. ಕುದ್ರೆಕೂಡ್ಲು, ನಿಡ್ಲೆ, ದಿವಾಣ,ಕಾಸರಗೋಡು, ಕುರುಪ್, ಚಿಪ್ಪಾರು ಮೊದಲಾದ ಚೆಂಡೆ ಮದ್ದಳೆಯ ಪ್ರಾತ:ಸ್ಮರಣಿಯರೊಂದಿಗೆ ಭಾಗವತಿಕೆ ಮಾಡಿದ ಬಲಿಪರಿಗೆ  ಕೇವಲ ಚೆಂಡೆ ಮದ್ದಳೆಯ ಬಾಲ ಪಾಠ ಅಷ್ಟೇ ಕಲಿತ ಒಬ್ಬ ಬಾಲಕ ಕೂಡ ಯಾವುದೇ ಅಂಜಿಕೆ ಅಳುಕು ಇಲ್ಲದೇ ಚೆಂಡೆ ಮದ್ದಳೆ ನುಡಿಸಬಹುದಿತ್ತು. ತನಗೆ ಇಂತವನೇ ಚೆಂಡೆ ಮದ್ದಳೆಗೆ ಬೇಕು ಎಂಬ ಯಾವ ಅಗ್ರಹವಾಗಲಿ, ಬೇಡಿಕೆಯಾಗಲಿ ಅವರಲ್ಲಿ ಎಂದೂ ಇರಲೇ ಇಲ್ಲ. ನುಡಿಸಲು ಬಂದರೆ ಸಾಕು, ಉಳಿದಂತೆ ಎಲ್ಲವನ್ನು, ಎಲ್ಲರನ್ನು ತಾನೇ ಸುಧಾರಿಸಿಕೊಂಡು ಮುಂದೆ ಹೋಗುತ್ತಿದ್ದುದು ಅವರ ದೊಡ್ಡ ಗುಣಗಳಲ್ಲಿ ಒಂದು.

ಪ್ರಾಯ: ಇವತ್ತು ತೆಂಕಿನ ಶ್ರೇಷ್ಠ ಕಲಾವಿದರೆಲ್ಲರೂ ಒಂದಲ್ಲ ಒಂದು ಹಂತದಲ್ಲಿ ಬಲಿಪರಿಂದ ಪ್ರೇರಣೆ ಪಡೆದವರೇ ಆಗಿದ್ದಾರೆ. ಸುಣ್ಣಂಬಳ ವಿಶ್ವಣ್ಣನಿಂದ ತೊಡಗಿ ಪೆರ್ಮುದೆ ಜಯಪ್ರಕಾಶ ಶೆಟ್ಟರ ತನಕ ಎಲ್ಲ ಕಲಾವಿದರ ಮೆರೆಯುವಿಕೆಯಲ್ಲಿ ಬಲಿಪರ ಕಲಾ ಕಾಣಿಕೆ ಇದ್ದೇ ಇದೆ. ಅನೇಕ ಕಲಾವಿದರನ್ನು ಅವರ ಪ್ರತಿಭೆಯನ್ನು ಗುರುತಿಸಿ ಕಟೀಲು ಮೇಳಕ್ಕೆ ಮೇಳದ ಯಜಮಾನರ ಬಳಿ ಹೇಳಿ ಕರೆಸಿಕೊಂಡವರು ಅವರು. ಕಲಾವಿದನ ಸಾಮರ್ಥ್ಯ, ಪ್ರಸಂಗ, ಪದ್ಯದ ಅಪೇಕ್ಷೆಗೆ ತಕ್ಕಂತೆ ಕಲಾವಿದರನ್ನು  ಮೆರೆಸುವುದು ಬಲಿಪರ ವಿಶೇಷತೆ.ವೇಷಧಾರಿಯಾಗಿ ಮೇಳ ಸೇರಿದ್ದ ಮಹೇಶ್ ಮಣಿಯಾಣಿ ಇವತ್ತು ಶ್ರೇಷ್ಠ ಹಾಸ್ಯಗಾರರಾಗಿ ಬೆಳೆದಿದ್ದರೆ ಅದಕ್ಕೆ ದೊಡ್ಡ ಕಾಣಿಕೆ ಕೊಟ್ಟವರು ಬಲಿಪರು.ಪೆರ್ಮುದೆಯವರ ಸಾಮರ್ಥ್ಯ ಗುರುತಿಸಿ ಸಣ್ಣ ವಯಸ್ಸಿನಲ್ಲೇ ದೊಡ್ಡ ದೊಡ್ಡ ಪಾತ್ರ ಕೊಟ್ಟು ತಯಾರು ಮಾಡಿದ್ದು ಇರಬಹುದು, ದೇವಿ ಭಟ್ರು ಎಂದೇ ಖ್ಯಾತರಾದ ಬಾಯರು ರಮೇಶ್ ಭಟ್ರು ರಂಗದಲ್ಲಿ ಅಷ್ಟು ಮೆರೆಯಲು ಸಾಧ್ಯವಾಗಿದ್ದು ಬಲಿಪರ ನಿರಂತರ ಪ್ರೋತ್ಸಾಹದಿಂದಲೇ ತಾನೇ? ಅವರು ನಿವೃತ್ತರಾದ ಬಳಿಕ ಮಂಗಳೂರು ಪುರಭವನದಲ್ಲಿ ನಡೆದ ಒಂದು ಕಮ್ಮಟದಲ್ಲಿ ಪಾತಾಳ ವೆಂಕಟರಮಣ ಭಟ್ಟರ ಮಾಯಾ ಪೂತನಿಯನ್ನು ಅವರು ಕುಣಿಸಿದ ಬಗೆ ಈಗಲೂ ಕಣ್ಣ ಮುಂದೆ ಹಾಗೆಯೇ ಇದೆ. ಎಂತಹ ದುರ್ಬಲ ಕಲಾವಿದನನ್ನು  ಹೊಂತಕಾರಿಯಾನ್ನಾಗಿಸುವ ಸಾಮರ್ಥ್ಯ ಅವರ ಪದ್ಯಕ್ಕೆ ಇರುತ್ತಿತ್ತು.

ನಾವು ಕಂಡ ನಮ್ಮ ಕಾಲದ ಶ್ರೇಷ್ಠ ಕಿರೀಟ ವೇಷ ಅಂದರೆ ಸಂಪಾಜೆ ಶೀನಪ್ಪ ರೈಗಳದ್ದು. ಅವರ ಇಂದ್ರಜಿತು, ಹಿರಣ್ಯಾಕ್ಷ, ಅರುಣಾಸುರ,ರಕ್ತಬೀಜ, ಶಿಶುಪಾಲ, ದೇವೇಂದ್ರ, ಅರ್ಜುನ, ಕರ್ಣ ಮೊದಲಾದ ಪಾತ್ರಗಳು ಇನ್ನಿಲ್ಲದಂತೆ ಮೆರೆದಿದ್ದು ಬಲಿಪರ ಭಾಗವತಿಕೆಯಲ್ಲೇ.ಪೆರುವಾಯಿ ನಾರಾಯಣ ಶೆಟ್ಟರು ಇನ್ನೊಬ್ಬ ಮಹಾನ್ ಇದಿರು ವೇಷಧಾರಿಗಳು. ಅವರ ಸಾಮರ್ಥ್ಯ ಹೊರ ಬಂದಿದ್ದು ಬಲಿಪರ ರಂಗ ನಿರ್ದೇಶನದಲ್ಲೇ ತಾನೇ? ರೆಂಜಾಳ ರಾಮಕೃಷ್ಣ ರಾಯರನ್ನು  ಒರ್ವ ಸವ್ಯಸಾಚಿ ಪರಿಪೂರ್ಣ ಕಲಾವಿದನಾಗಿ ಕಾಣಿಸುವಲ್ಲಿ ಬಲಿಪರ ಕಾಣಿಕೆ ಕಡಿಮೆಯದ್ದಲ್ಲ.. ಒಂದೇ ಎರಡೇ ಹೇಳಿ ಮುಗಿಯದಷ್ಟು ಇದೆ..

 ಬಲಿಪ - ಪಟ್ಲರೆಂಬ ಅಪೂರ್ವ ಗುರು ಶಿಷ್ಯ ಬಾಂಧವ್ಯ

ಪಟ್ಲ ಸತೀಶ್ ಶೆಟ್ಟರು ಯಕ್ಷಗಾನ ವಲಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದ ಕಲಾವಿದ. ಸುಮ್ಮನೆ ಹಾಗೆ ಗಮನಿಸಿ. ಪಟ್ಲ ಭಾಗವತರು ಬಲಿಪರ ಸೆಟ್ ಗೆ ಬರುವ ಮುಂಚೆಯೇ ಅವರು ತಮ್ಮನ್ನು ತಾವು ಸ್ಥಾಪಿಸಿಕೊಂಡ ಭಾಗವತರಾಗಿದ್ದರು. ಮೇಲಾಗಿ ಶಾಸ್ತ್ರೀಯ ಸಂಗೀತ ಪಾಠ ಆಗಿತ್ತು, ಅದರೊಂದಿಗೆ ಖುದ್ದು ಅವರ ತಂದೆಯವರಿಂದ ಮತ್ತು ಮಾಂಬಾಡಿ ಗುರುಗಳ ಪಾಠವಾಗಿತ್ತು.ಇನ್ನೊಂದು ಸ್ವಾರಸ್ಯವೆಂದರೆ ಬಲಿಪರ ಕಿರಿಯ ಸುಪುತ್ರ ಪ್ರಸಾದರು ಎರಡನೇ ಮೇಳದಲ್ಲಿ ಆಗಲೇ ಸೆಟ್ ಆಗಿದ್ದರು, ತಂದೆಯವರ ಮಾರ್ಗದರ್ಶನದೊಂದಿಗೆ.. ಯಾವನೇ ಒಬ್ಬ ತಂದೆಗೆ ತನ್ನ ಮಗನಿಗೆ ಮುಂದಕ್ಕೆ ಇನ್ನೊಬ್ಬ ಪ್ರತಿಭಾವಂತ ಕಲಾವಿದ ಪ್ರತಿಸ್ಪರ್ಧಿಯಾಗಬಹುದು ಎಂಬ ಆತಂಕವೋ,ಭಯವೋ ಬಂದರೆ ಅದರಲ್ಲಿ ಯಾವ ಆಶ್ಚರ್ಯವೂ ಇಲ್ಲ, ಅದು ಮಾನವ ಸಹಜ ಗುಣ. ಆದರೆ ಬಲಿಪರ ಅದೆಂಥಹ ಗುಣ ಅಂದರೆ ತನ್ನ ಸರಿ ಮಿಗಿಲು ಎನಿಸುವಂತೆ ಪಟ್ಲರನ್ನು ಬೆಳೆಸಿದರು. ಮಾತ್ರವಲ್ಲ ಅವರನ್ನು ಅವರ ಸ್ವಂತ ಶೈಲಿಯೊಂದಿಗೆ ಬೆಳೆಯಲು ಅವಕಾಶ ಮಾಡಿಕೊಟ್ಟರು. ಆಶ್ಚರ್ಯವೆಂದರೆ ಪ್ರಸಾದರಿಗೂ ಈ ಕುರಿತು ಯಾವುದೇ ಗೊಂದಲವೂ ಇರಲಿಲ್ಲ ಎಂಬುದು ಅಷ್ಟೇ ವಿಶೇಷ.. ಪಟ್ಲ ಭಾಗವತರ ಕುರಿತು ಬಲಿಪರಿಗೆ  ಇದ್ದ ಶಿಷ್ಯ ಭಾವ ಮತ್ತು ಪಟ್ಲ ಭಾಗವತರಿಗೆ ಬಲಿಪರಿಗೆ ಇದ್ದ ಗುರು ಭಾವ ಅನೂಹ್ಯ,ಅನುಪಮ, ಅನ್ಯಾದೃಶ್ಯ ಅಲಭ್ಯ...

ಕಲಾವಿದರಿಗೆ ಮಾದರಿ ಹೇಗೆ?

ಸಾಮಾನ್ಯ ಯಾವನೇ ಒಬ್ಬ ಶ್ರೇಷ್ಠ ಕಲಾವಿದನನ್ನು ಕೇಳಿ ನೋಡಿ, ತಮ್ಮ ಸಾಧನೆಯ ಬಗ್ಗೆ ಹೆಮ್ಮೆ, ಅಭಿಮಾನ ಇರವುದೆಲ್ಲ ಸಹಜವೇ. ಆದರೆ ತಮ್ಮ ಮಕ್ಕಳು ತಪ್ಪಿಯೂ ಈ ಕ್ಷೇತ್ರಕ್ಕೆ ಬರವುದನ್ನು ಅವರು ಇಷ್ಟ ಪಡುವುದೇ ಇಲ್ಲ.ಅದು ಸಹಜ ಕೂಡ.ಈ ಕಷ್ಟ ತನಗೆ ಮಾತ್ರ ಸಾಕು ಎಂಬುದೇ ಎಲ್ಲರ ಅಪೇಕ್ಷೆ.ಆದರೆ ಬಲಿಪರು ಇಲ್ಲೂ ಕೂಡ ಅಪವಾದ. ಯಾವುದು ತನಗೆ ಪರಂಪರೆಯಿಂದ ಬಂದ ಕಲಾ ಬಳುವಳಿ ಏನಿದೆಯೋ ಅದನ್ನು ಅಷ್ಟೇ ಜತನವಾಗಿ ಕಾಪಿಟ್ಟು ತನ್ನ ಮುಂದಿನ ಪೀಳಿಗೆಗೂ ಅಷ್ಟೇ ಶ್ರದ್ದೆಯಿಂದ ದಾಟಿಸಿದ ಕೀರ್ತಿ ಅವರದ್ದು. ತಮ್ಮ ನಾಲ್ವರು ಪುತ್ರರ ಒಬ್ಬರನ್ನು ಬಿಟ್ಟು ಮೂರು ಮಂದಿಗೆ ಭಾಗವತಿಕೆ ಕಲಿಸಿದ್ದಾರೆ,ಕಿರಿಯ ಪುತ್ರನನ್ನು ಒರ್ವ ಸಮರ್ಥ ಭಾಗವತನ್ನಾಗಿ ರೂಪಿಸಿ ತನ್ನ ಉತ್ತರಾಧಿಕಾರಿಯಾಗಿ ಮೇಳದ ಪ್ರಧಾನ ಭಾಗವತರನ್ನಾಗಿ ಮೆರೆದುದನ್ನು ಕಣ್ಣಾರೆ ಕಂಡು ಅಭಿಮಾನ ಪಟ್ಟರು ಕೂಡ.ಆದರೆ ನಮ್ಮ ದುರ್ದೈವ ಅವರನ್ನು ಉಳಿಸಿಕೊಳ್ಳುವ ಭಾಗ್ಯ ನಮಗಿರಲಿಲ್ಲ ಅಷ್ಟೇ..ದ್ವಿತೀಯ ಪುತ್ರ ಶಿವಶಂಕರ ಹವ್ಯಾಸಿಯಾಗಿದ್ದು, ವೃತ್ತಿ ಭಾಗವತರಿಗೆ ಹೇಳಿಕೊಡುವಷ್ಟು  ಅನುಭವವನ್ನು ಗಳಿಸಿಕೊಂಡವರು. ಅನಿವಾರ್ಯವಾಗಿ ತನ್ನ ಪೂಜ್ಯ ತಂದೆಯವರು,ಪ್ರೀತಿಯ ಸಹೋದರ ಬಿಟ್ಟು ಹೋದ ಸ್ಥಾನವನ್ನು ಈಗ ಅಷ್ಟೇ ಸಮರ್ಥವಾಗಿ ಈಗ ತುಂಬುತ್ತಿದ್ದಾರೆ, ತುಂಬಿಸುತ್ತಿದ್ದಾರೆ.. ಬಲಿಪರ ಆಳಿಯ ಪುಂಡಿಕಾಯಿ ಗೋಪಾಲಕೃಷ್ಣ ಭಟ್ ಕೂಡ ಕಟೀಲು ಮೇಳದ ಒಬ್ಬ ಪ್ರಧಾನ ಭಾಗವತರಾಗಿ ಜನಮನ್ನಣೆ ಪಡೆಯುವಲ್ಲಿ ಬಲಿಪರ ಕೊಡುಗೆ ಕಡಿಮೆಯದಲ್ಲ.. ಈ ಕಲಾ ಕಾಣಿಕೆಗೆ ಬೆಲೆ ಕಟ್ಟಲು ಸಾಧ್ಯವೇ?

ಗಾನ ವೈಭವದಲ್ಲಿ ಬಲಿಪರು

ಕಳೆದ ಒಂದು ದಶಕದಲ್ಲಿ ಯಕ್ಷಗಾನದ ಒಂದು ಪ್ರಕಾರವಾಗಿ ಗಾನ ವೈಭವ  ತುಳುನಾಡಿನ ಯಾವುದೇ ಸಾಂಸ್ಕೃತಿಕ ವೇದಿಕೆಗಳಲ್ಲಿ ಅನಿವಾರ್ಯವಾದ ಒಂದು ಕಾರ್ಯಕ್ರಮವಾಗಿ ಆಯೋಜನೆಗೊಳ್ಳುತ್ತಿರುತ್ತದೆ. ಅದರ ಒಳಿತು ಕೇಡುಕುಗಳ ಬಗ್ಗೆ ಪ್ರತ್ಯೇಕ ಅಭಿಪ್ರಾಯವಿದೆ. ಆದರೆ ಮುಖ್ಯವಾಗಿ ಗಮನಿಸಬೇಕಾದ ವಿಷಯವೆಂದರೆ ಸಾಮಾನ್ಯವಾಗಿ ಯಾವುದೇ ಕಲಾ ಪ್ರಕಾರಗಳಲ್ಲಿ ಕ್ಲಾಸ್ ಮತ್ತು ಮಾಸ್ ಎಂಬ ಎರಡು ವಿಭಾಗಗಳು ಇರುತ್ತದೆ. ಕ್ಲಾಸ್ ನ್ನು ಇಷ್ಟ ಪಡುವ ವರ್ಗವೇ ಬೇರೆ, ಮಾಸ್ ನ್ನು ಬಯಸುವ ಜನವೇ ಬೇರೆ. ಆದರೆ ಬಲಿಪರು ಇದಕ್ಕೂ ಅಪವಾದದಂತಿದ್ದರು. ಅವರೊಬ್ಬ ಸಂಪ್ರದಾಯ ಬದ್ದ ಪಕ್ಕಾ ಕ್ಲಾಸ್ ಭಾಗವತರು. ಆದರೆ ಹೊಸ ತಲೆಮಾರಿನ, ಹೊಸ ಜಮಾನದ ಹುಡುಗರಿಗೂ ಬಲಿಪರು ಅಷ್ಟೇ ಇಷ್ಟವಾಗುತ್ತಿದ್ದು ಮತ್ತೊಂದು ವಿಶೇಷ, ವಿಸ್ಮಯ.. ಪುತ್ತಿಗೆ ಹೊಳ್ಳರೊಂದಿಗಿನ ಅವರ ದ್ವಂದ್ವ ಅಂತೂ ಸರಿಸಾಟಿ ಇಲ್ಲದ್ದು. ಕೇಳಿದಷ್ಟು, ನೋಡಿದಷ್ಟು ಕೇಳುತ್ತಲೇ ಇರಬೇಕು ಅನ್ನಿಸುವಂತಹದ್ದು. ಹಲವು ಮಂದಿ ನೋಡಿರುವ ಅವರ ಮತ್ತು ಪಟ್ಲರೊಂದಿಗಿನ ದ್ವಂದ್ವ ಕಪಟ ನಾಟಕ ರಂಗ ಅದೇಷ್ಟು ಸೊಗಸಾದ ಪ್ರಸ್ತುತಿ. ಬಲಿಪರೆಂದರೆ ವೀರ ರಸ ಭಾವ ಇರುವುದು ನಿಜ, ಆದರೆ ಕರುಣಾ ರಸ, ಶೃಂಗಾರ ಭಾವದ ಪದ್ಯಗಳನ್ನು, ಪ್ರಸಂಗಗಳನ್ನು ಅಷ್ಟೇ ಭಾವಪೂರ್ಣವಾಗಿ ಹಾಡುತ್ತಿದ್ದರು, ಆಡಿಸುತ್ತಿದ್ದುದು ನಮ್ಮೆಲ್ಲರ ಗಮನದಲ್ಲಿ ಇರುವಂತಹದ್ದೇ..

ಬಲಿಪರೆಂದರೆ ಮುಗ್ಧ ಮುಗ್ಧ ಮುಗ್ಧ

 ಮುಗ್ಧತೆ ಮತ್ತು ಸರಳತೆಗೆ ಮತ್ತೊಂದು ಹೆಸರು ಎನ್ನುವಂತೆ ಅವರು ಇದ್ದರು.. ಸ್ವಯಂ ಶಾಸ್ತ್ರೀಯ ಸಂಗೀತದ ಅಭ್ಯಾಸ ಮಾಡಿರದಿದ್ದರೂ ಅಜ್ಜನಿಂದ ಕಲಿತ ಪಾಠ ಅವರಿಗೆ ಎಲ್ಲವನ್ನು ಕಲಿಸಿತ್ತು. ಯೌಟ್ಯೂಬ್ ನಲ್ಲಿ ಸಂಗೀತ ವಿದ್ವಾನ್ ನಿತ್ಯಾನಂದ ರಾಯರು ಬಲಿಪರೊಂದಿಗೆ ನಡೆಸಿದ ಸಂವಾದವನ್ನು ಅನೇಕರು ಗಮನಿಸಿರಬಹುದು. ಅನೇಕ ಪದಗಳನ್ನು ಬಲಿಪರು ಹಾಡಿದಾಗ ನಿತ್ಯಾನಂದರಾಯರು ಇದು ಅತ್ಯಂತ ಶುದ್ಧವಾದ ರಾಗ ಎಂದು ಹೇಳಿದರೆ ಬಲಿಪರು ತಮ್ಮ ಎಂದಿನ ಮುಗ್ಧತೆಯಲ್ಲಿ ಹೇಳುತ್ತಿದ್ದು, ಹೌದಾ ಇದು ಶುದ್ಧ ಉಂಟಾ.. ಇದು ನನಗೆ ನನ್ನ ಅಜ್ಜ ಹೇಳಿಕೊಟ್ಟಿದ್ದು ಹೀಗೆ, ಶುದ್ಧವೋ ಅಶುದ್ಧವೋ ನನಗೆ ಗೊತ್ತಿಲ್ಲ. ಶುದ್ಧ ಇರಬಹುದು, ಇಲ್ಲದಿರಬಹುದು, ಆದರೆ ಆಟದಲ್ಲಿ ಹಾಡುವ ಕ್ರಮ ಹೀಗೆ.. ಬಲಿಪರ ಉತ್ತರವಿದು. ಬೇರೆ ಯಾರೋ ಆ ಜಾಗದಲ್ಲಿ ಇರುತ್ತಿದ್ದರೆ ಹತ್ತಡಿ ಮೇಲೆ ಹೋಗುತ್ತಿದ್ದರು. ಒಬ್ಬ ಸಂಗೀತ ವಿದ್ವಾಂಸರ ಶುದ್ಧ ರಾಯಸ ಸಿಕ್ಕಾಗ ಉಬ್ಬಿದರೆ ತಪ್ಪೇ ಅಲ್ಲವಲ್ಲ.ಆದರೆ ಇವರು ಬಲಿಪರು...!

ಅವರು ಒಬ್ಬ ಸಮಗ್ರ ಯಕ್ಷಗಾನದ ಪೂರ್ವ ರಂಗದ ಸಭಾ ಲಕ್ಷಣದಿಂದ ತೊಡಗಿ ವೀಳ್ಯ ತೆಗೆದುಕೊಳ್ಳುವ ವರೆಗಿನ ಸರ್ವ ಮಾಹಿತಿಯನ್ನು ತಿಳಿದ ದೊಡ್ಡ ಭಾಗವತರಾಗಿದ್ದು, ಜೊತೆಗೆ ಕವಿಯಾಗಿ,ರಂಗ ನಿರ್ದೇಶಕನಾಗಿ ತನ್ನದೇ ಆದ ಛಾಪನ್ನು ಹೊಂದಿದ್ದರೂ ಅವರು ಸಾರ್ವಜನಿಕ ವೇದಿಕೆಯಲ್ಲೇ ಹೇಳುತ್ತಿದ್ದ ಮಾತು ಅಗರಿ ಭಾಗವತರ  ಬಳಿಕ ತನ್ನನ್ನು ಸೇರಿಸಿಕೊಂಡು ಪದ ಹಾಡುವವರು ಬಿಟ್ಟರೆ ನಾವು ಯಾರು ಭಾಗವತರು ಅಲ್ಲ. ಅಗರಿಯವರಲ್ಲಿಗೆ ಅದು ಮುಗಿದು ಹೋಯಿತು ಎಂದು ಯಾವ ಹಮ್ಮು ಬಿಮ್ಮು ಇಲ್ಲದೇ ಮುಕ್ತವಾಗಿ ಹೇಳುತ್ತಿದ್ದರು. ಯಾಕೆಂದರೆ ಅವರು ಬಲಿಪರು..

ಆದರ್ಶ ಹಿಂದೂ ಮನೆಗೆ ಪರ್ಯಾಯ ಹೆಸರು ಬಲಿಪರ ಮನೆ

ಭಾರತಿಯ ಪರಂಪರೆಯಲ್ಲಿ ಮನೆಗೆ ಬಂದ ನೆಂಟರಿಗೆ, ಮಿತ್ರರು,ಅತಿಥಿಗಳಿಗೆ ಅತಿಥ್ಯ ಕೊಡುವುದು ಅದು ಅತ್ಯಂತ ಸಹಜವಾಗಿತ್ತು. ಆದರೆ ಇಂದು ಅದು ಕೇವಲ ಓದುವಿಕೆಗೋ, ಕೇಳುವಿಕೆಗೋ ಅಷ್ಟೇ ಸೀಮಿತವಾಗಿದೆ. ಕೂಡು ಕುಟುಂಬ ಹೋಗಿ ಸೆಮಿ ನ್ಯೂಕ್ಲಿಯರ್ ಕುಟುಂಬಗಳಿಗೆ ನಮ್ಮ ಸಮಾಜ ಒಗ್ಗಿ ಹೋಗಿ ಕಾಲ ಸುಮಾರು ಕಳೆದಿದೆ... ಆದರೆ ಮೂಡುಬಿದ್ರೆ ಬಳಿಯ ಮರೂರು ನೂಯಿಯ ಬಲಿಪರ ಮನೆ ಈ ಎರಡು ವಿಷಯಗಳಿಗೂ ಆದರ್ಶಪ್ರಾಯ. ಒಂದೇ ಮನೆಯಲ್ಲಿ ನಾಲ್ಕು ಮಂದಿ ಮಕ್ಕಳು ತಮ್ಮ ಸಂಸಾರದೊಂದಿಗೆ ಒಂದಾಗಿ, ಒಟ್ಟಾಗಿ ಉಣ್ಣುವುದೇ ಸಂಭ್ರಮ, ವಿಶೇಷ.ಹತ್ತಿಪ್ಪತ್ತು ಮಂದಿ ಒಂದು ಮನೆಯಲ್ಲಿ ಒಟ್ಟಾಗಿ ಇರುವುದನ್ನು ನೋಡುವುದೇ ಕಣ್ಣುಗಳಿಗೆ ಹಬ್ಬ. ಒಬ್ಬ ಯಕ್ಷಗಾನ ಕಲಾವಿದ ತನ್ನ ಸೀಮಿತ ಸಂಪಾದನೆಯಲ್ಲಿ ಇಷ್ಟು ದೊಡ್ಡ ಕುಟುಂಬವನ್ನು ಪೋಷಣೆ ಮಾಡಿದ್ದೆ ಇನ್ನೊಂದು ಕೌತುಕ. ಅವರ ಮನೆಗೆ ಹೋಗಿ ಏನೂ ತಿನ್ನದೇ, ಕುಡಿಯದೇ ಹಾಗೆ ಬಂದವರು ಯಾರಾದರೂ ಇರಲು ಸಾಧ್ಯವೇ? ಜಾತಿ ಮತ ಭೇದವಿಲ್ಲದೇ ಮನೆಗೆ ಬಂದವರನ್ನು ಆದರಿಸಿ ಅಥಿತ್ಯ ನೀಡಿದ ಮನೆಯದು. ಬಲಿಪರ ಬಹು ಧೀರ್ಘ ಕಾಲದ ಒಡನಾಡಿ ಡಾ.ಜೋಶಿಯವರ, ಉಜಿರೆ ಅಶೋಕ ಭಟ್ಟರ ಬಾಯಲ್ಲಿ ಕೇಳಬೇಕು ಬಲಿಪರ ಮನೆಯ ಅಥಿತ್ಯದ ಸೊಬಗನ್ನು... ಹೇಗೆ ಇದು ಸಾಧ್ಯವಾಯಿತು ಎಂದರೆ ಯಾರಿಗೂ ಉತ್ತರ ಗೊತ್ತಿರಲಿಕ್ಕಿಲ್ಲ, ಖುದ್ದು ಬಲಿಪರಿಗೂ ಕೂಡ.

 ಸಿಕ್ಕಿದ ಮಾನ ಸನ್ಮಾನ

ಬಲಿಪರ ಅರ್ಹತೆಗೆ, ಯೋಗ್ಯತೆಗೆ ಅಥವಾ ಅವರ ಸಾಧನೆಗೆ ತಕ್ಕುದಾದ ಗೌರವ ಸಿಕ್ಕಿದೆಯೋ ಎಂದು ಕೇಳಿದರೆ ಇಲ್ಲ ಎಂಬುದೇ ನೂರಕ್ಕೆ ನೂರು ಸತ್ಯವಾದ ಮಾತು. ಆದರೆ ಹಿಂದಿನ ಅನೇಕ ಸಾಧಕರಿಗೆ ಹೋಲಿಸಿದರೆ ತುಂಬಾ ಗೌರವ ಸನ್ಮಾನಗಳು ಯಕ್ಷಗಾನ ಕಲಾ ವಲಯ ಅವರಿಗೆ ನೀಡಿದೆ ಗೌರವಿಸಿದೆ, ಗುರುತಿಸಿದೆ.ಅವರ ಸನ್ಮಾನ ಪತ್ರಗಳನ್ನು ಇಡುವುದಕ್ಕಾಗಿಯೇ ಅವರ ಮನೆ ಅಂಗಳದಲ್ಲಿ ಬಲಿಪ ಭವನ ನಿರ್ಮಾಣ ಮಾಡಿಕೊಟ್ಟಿದ್ದಾರೆ ಅವರ ಅಭಿಮಾನಿಗಳು. ಇದಂತೂ ಇಡೀ ಯಕ್ಷಗಾನ ವಲಯದಲ್ಲಿ ಒಬ್ಬ ಕಲಾವಿದನಿಗೆ ಸಿಕ್ಕ ಬಲು ದೊಡ್ಡ ಗೌರವ.ಅಭಿಮಾನಿಗಳು, ಸರಕಾರ, ಸಂಘ ಸಂಸ್ಥೆಗಳು ಕೂಡ ಅತ್ಯಂತ ಗೌರವದಿಂದ ಅವರನ್ನು ಮಾನಿಸಿದ್ದಾರೆ, ಗೌರವಿಸಿದ್ದಾರೆ.ಮೇಳದ ಯಜಮಾನರು ಅವರು ಮೇಳದಿಂದ ನಿವೃತ್ತರಾದ ಬಳಿಕವೂ ಅವರು ಯಾವಾಗ ಬೇಕಾದರೂ, ಯಾವ ಸೆಟ್ ಲ್ಲಾದರೂ, ಎಷ್ಟು ಹೊತ್ತಿಗಾದರೂ ಪದ್ಯ ಹೇಳಬಹುದು ಎಂಬ ಮುಕ್ತ ಅವಕಾಶವನ್ನು ಮಾಡಿ ಕೊಟ್ಟಿದ್ದರು. ಅಗರಿಯವರ ಬಳಿಕ ಈ ರೀತಿಯ ದೊಡ್ಡ ಗೌರವ ಸಿಕ್ಕಿದ್ದು ಬಲಿಪರಿಗೆ ಮಾತ್ರ ಎಂಬುದನ್ನು ನಾವು ಗಮನಿಸಬೇಕು. ಅಭಿಮಾನಿಗಳು ಬಯಸಿದಂತೆ ಮೇಳದಿಂದ ನಿವೃತ್ತರಾದ ಬಳಿಕ  ಅನೇಕ ವರ್ಷಗಳ ಕಾಲ ಕಟೀಲು ಮೇಳದಲ್ಲಿ ಅವರು ಪದ್ಯ ಹೇಳುತ್ತಿದ್ದರು. ಇವತ್ತು ಯೌಟ್ಯೂಬ್ ನಲ್ಲಿ ತುಂಬಾ ಜನಪ್ರಿಯವಾಗಿರುವ ಸುಬ್ರಾಯ ಹೊಳ್ಳರ ಕಾಂಬಿನೇಶನ್ ನಲ್ಲಿ ಇರುವ ಹಿರಣ್ಯಾಕ್ಷ ವಧೆ, ಇಂದ್ರನಂದನ ವಾನರೇಂದ್ರ ಇತ್ಯಾದಿಗಳು ಅವರ ನಿವೃತ್ತಿಯ ನಂತರದ ಆಟಗಳು.

ಕೊನೆಯ ಮಾತು

ಹುಟ್ಟಿರುವ ಪ್ರತಿಯೊಂದು ಜೀವಕ್ಕೂ ಕೊನೆ ಎಂಬುದು ಇದ್ದೇ ಇರುತ್ತದೆ. ಬಲಿಪರು ಸಹಸ್ತ್ರ ಚಂದ್ರ ದರ್ಶನ ಮಾಡಿಸಿಕೊಂಡ ಪುಣ್ಯ ಜೀವಿ. ಆದರೆ ಅವರು ಇನ್ನೂ ಹತ್ತಾರು ವರ್ಷ ಬಾಳಿ ಬದುಕುತ್ತಿದ್ದರೋ ಏನೋ. ಆ ಮನೆಯ ಎಲ್ಲರೂ ಅವರ ಸೇವೆಗಾಗಿ ಕಾತರರತೆ ಯಿಂದ ಕಾಯುತ್ತಿದ್ದೂ ಸತ್ಯವೇ. ಆದರೆ ವಿಧಿ ಲಿಖಿತ ಬೇರೆಯೇ ಇತ್ತು.ಕೈ ಹಿಡಿದು ಸಂಸಾರದ ನೌಕೆಗೆ ಜತೆಯಾದ ತನ್ನ ಸತಿಯ ಅಗಲುವಿಕೆ, ಜತೆಗೆ ಯಾರಿಗೂ ಬರಬಾರದ ಪುತ್ರ ವಿಯೋಗದಿಂದ ಅವರು ತಮ್ಮ ಇಳಿ ವಯಸ್ಸಲ್ಲಿ ಬಳಲಬೇಕಾಯಿತು.ಕಳೆದ ವರ್ಷದ ಮಾರ್ಚ್ ಅಥವಾ ಏಪ್ರಿಲ್ ಇರಬಹುದು, ಪ್ರಸಾದ ಭಾಗವತರ ಮರಣ ವಾರ್ತೆ ಬಂದಾಗ ಅವರ ಅಂತಿಮ ದರ್ಶನ ಪಡೆಯಬೇಕೆಂದು ಅವರ ಮನೆಗೆ ಹೋಗಿದ್ದೆವು. ಹೋಗಬೇಕಿದ್ದರೆ ಮನಸ್ಸಿನ ತುಂಬಾ ಇದ್ದಿದ್ದು ಈ ಸಾವನ್ನು ಆ ಮನೆ ಹೇಗೆ ಸ್ವೀಕರಿಸಿರಬಹುದು, ಎಲ್ಲಕ್ಕಿಂತ ಆ ಹಿರಿ ಜೀವ ಹೇಗೆ ತಡೆದುಕೊಳ್ಳಬಹುದು ಎಂಬ ಆತಂಕ, ಭಯ ಇತ್ತು. ಆದರೆ ಮನೆಗೆ ಹೋದಾಗ ಪ್ರಸಾದರ ಪಾರ್ಥಿವ ಚಾವಡಿಯಲ್ಲಿ ಇದ್ದರೆ,ಅಲ್ಲೇ ಪಕ್ಕದ ಕುರ್ಚಿಯಲ್ಲಿ ಕುಳಿತುಕೊಂಡಿದ್ದ ಬಲಿಪರು ಬಂದವರೊಟ್ಟಿಗೆ ಯಕ್ಷಗಾನ ಅಂದು,ಇಂದು, ಮುಂದಿನ ಬಗ್ಗೆ ಮಾತಾಡುತ್ತಿದ್ದರು. ಹತ್ತಿರದಲ್ಲಿ ಕುಳಿತವರಿಗೆ ಶುದ್ಧ ಯಕ್ಷಗಾನ ಪರಂಪರೆಯ ಭವಿಷ್ಯವೇ ಚಿರ ನಿದ್ರೆಗೆ ಜಾರಿದ್ದು ಕಣ್ಣ ಮುಂದೆಯೇ ಪ್ರತ್ಯಕ್ಷ ಇರುವಾಗ ಹೇಗೆ ಪ್ರತಿಕ್ರಿಯಿಸಲು ಸಾಧ್ಯ? ಯಾವುದನ್ನು ತನ್ನ ಅಜ್ಜನಿಂದ ಪಡೆದುಕೊಂಡರೋ, ಅದನ್ನು ಅಷ್ಟೇ ಜತನದಿಂದ ಪೋಷಿಸಿ, ಬೆಳೆಸಿ ತನ್ನ ಮಗನಿಗೆ ದಾಟಿಸಿ ನಿರುಮ್ಮಳ ಚಿತ್ತದಿಂದ ಅವರು ಇದ್ದರು. ಪ್ರಸಾದರು ಕೂಡ ತನ್ನ ತಂದೆಯ ಅಷ್ಟು ಒಳ್ಳೆಯ ಗುಣಗಳನ್ನು ಜೊತೆಗೆ ಯಕ್ಷಗಾನದ ಸಮಗ್ರ ಜ್ಞಾನಗಳನ್ನು ಪಡೆದು ಸಿದ್ಧಿ, ಪ್ರಸಿದ್ದಿ ಎರಡು ಪಡೆದು ತಂದೆಯ ಮತ್ತು ಮನೆತನದ ಗೌರವವನ್ನು ಹೆಚ್ಚಿಸಿದ್ದರು ಕೂಡ.ಆದರೆ ದುರ್ದೈವ ಅಕಾಲಿಕವಾಗಿ ನಾವು ಅವರನ್ನು ಕಳೆದುಕೊಂಡೆವು.. ಬೆಲೆ ಕಟ್ಟಲಾಗದ ಈ ಸಾವು ಬಲಿಪರ ಜೀವ - ಜೀವನ ಎರಡಕ್ಕೂ ದೊಡ್ಡ ಅಘಾತವನ್ನು ತಂದು ಕೊಟ್ಟಿತ್ತು. ಕೊನೆಗೂ ಮಗ ಹೋದ ದಾರಿಯನ್ನು ತಾವು ಆಯ್ಕೆ ಮಾಡಿಕೊಂಡರು.. ಒಂದು ತುಂಬು ಮನೆ ವರ್ಷ ಒಂದರಲ್ಲಿ ಎರಡು ಅಘಾತಗಳನ್ನು ಕಂಡು ಹೇಗೆ ಸಹಿಸಲು ಸಾಧ್ಯ? ನಂಬಿದ ದೇವರೇ ಆ ಶಕ್ತಿಯನ್ನು ಆ ಮನೆಯ ಎಲ್ಲರಿಗೂ ಜತೆಗೆ ಇಷ್ಟ ಬಂಧು ಮಿತ್ರರಿಗೆ ನೀಡಲಿ ಎಂದು ಪ್ರಾರ್ಥಿಸುವುದು ಬಿಟ್ಟರೆ ನಮಗಾದರೂ ಬೇರೆ ಆಯ್ಕೆ ಯಾವುದಿದೆ?

- ಚಂದ್ರಶೇಖರ ಆಚಾರ್ಯ ಕೈಯಬೆ.

 ಬಲಿಪರು ಇನ್ನು ದಂತಕಥೆಮಾತ್ರ….

Advertisement