Thursday, April 24, 2008

ಇಂದಿನ ಇತಿಹಾಸ History Today ಏಪ್ರಿಲ್ 24

ಇಂದಿನ ಇತಿಹಾಸ

ಏಪ್ರಿಲ್ 24

ಕನ್ನಡದ ವರನಟ ಡಾ. ರಾಜಕುಮಾರ್ (1929-2006) ಜನ್ಮದಿನ. ಮೂಲತಃ ಮುತ್ತುರಾಜ್ ಎಂಬ ಹೆಸರು ಇದ್ದ ಅವರು ಮುಂದೆ ಕನ್ನಡ ಚಲನಚಿತ್ರ ರಂಗದ ಮೇರು ನಟನಾಗಿ `ರಾಜಕುಮಾರ್' ಎಂಬ ಹೆಸರಿನಿಂದಲೇ ಮನೆ ಮಾತಾದರು. 2006ರ ಏಪ್ರಿಲ್ 12ರಂದು ತಮ್ಮ ಜನ್ಮದಿನಾಚರಣೆಗೆ 11 ದಿನ ಮೊದಲು ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು.

2007: ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿಗಾಗಿ ಅವಿರತವಾಗಿ ಶ್ರಮಿಸುತ್ತಿದ್ದ ಸೇವ್ ದಿ ಚಿಲ್ಡ್ರನ್ ಇಂಡಿಯಾ ಸಂಸ್ಥೆಯ ರಾಷ್ಟ್ರೀಯ ನಿರ್ದೇಶಕಿ ವಿಪುಲ ಕದ್ರಿ (71) ಮುಂಬೈಯಲ್ಲಿ ನಿಧನರಾದರು. ಇವರ ಪುತ್ರಿ ಮನಾಶೆಟ್ಟಿ ಬಾಲಿವುಡ್ ನಟ ಸುನಿಲ್ ಶೆಟ್ಟಿ ಅವರ ಪತ್ನಿ.

2007: ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕು ನೀರಮಾನ್ವಿ ಗ್ರಾಮದಲ್ಲಿ ಮಧ್ಯಾಹ್ನ ಆಟವಾಡಲು ಹೊಲಕ್ಕೆ ಹೋದ ಸಂದೀಪ ಎಂಬ 8 ವರ್ಷದ ಬಾಲಕ ಕೊಳವೆ ಬಾವಿಯೊಳಕ್ಕೆ ಬಿದ್ದ.

2007: ಬೆಂಗಳೂರು ಅರಮನೆ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಸಹಸ್ರ ಚಂಡಿಕಾ ಯಾಗದ ಪೂರ್ಣಾಹುತಿಯು ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ನಡೆಯಿತು.

2007: ವಿದೇಶೀ ಮತ್ತು ದೇಶೀಯ ಗೋ ತಳಿಗಳ ಜೀನುಗಳು ತೀರಾ ವಿಭಿನ್ನ ಗುಣಗಳನ್ನು ಹೊಂದಿದ್ದು, ಈ ವಿಭಿನ್ನ ತಳಿಗಳ ನಡುವೆ ಸಂಕರ ಸಲ್ಲದು, ಇದರಿಂದ ಮೂಲ ದೇಶೀಯ ಶುದ್ಧ ತಳಿಗಳಿಗೆ ಆಪತ್ತು ಬರುತ್ತದೆ ಎಂದು ಥಾಯ್ಲೆಂಡಿನ ಡಾ. ಡೇವಿಡ್ ಸ್ಟೀವ್ ಹೊಸನಗರದಲ್ಲಿ ನಡೆದ ವಿಶ್ವ ಗೋ ಸಮ್ಮೇಳನದ ಗೋ ವಿಚಾರ ಮಂಥನ ಗೋಷ್ಠಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು. ಸಾವಯವ ಕೃಷಿ ತಜ್ಞ ಸುಭಾಶ ಪಾಳೇಕರ್ ಅಧ್ಯಕ್ಷತೆ ವಹಿಸಿದ್ದರು.

2006: ಪ್ರಜಾಪ್ರಭುತ್ವ ಸ್ಥಾಪನೆಗಾಗಿ ಎಡಬಿಡದೆ ನಡೆದ ಚಳವಳಿಗೆ ನೇಪಾಳದ ರಾಜಸತ್ತೆ ಕೊನೆಗೂ ಮಣಿಯಿತು. ಈ ದಿನ ರಾತ್ರಿ ಟೆಲಿವಿಷನ್ನಿನಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ದೊರೆ ಜ್ಞಾನೇಂದ್ರ 2002ರಲ್ಲಿ ತಾವು ವಿಸರ್ಜಿಸಿದ್ದ ಸಂಸತ್ತಿಗೆ ಮರುಜೀವ ನೀಡಿ ಮತ್ತೆ ಸಮಾವೇಶಗೊಳಿಸುವುದಾಗಿಯೂ, ಮುಷ್ಕರ ನಿರತ ಸಪ್ತಪಕ್ಷಗಳ ಮೈತ್ರಿಕೂಟ ಮಾತುಕತೆಗೆ ಬರಬೇಕು ಎಂದೂ ಆಹ್ವಾನ ನೀಡಿದರು. ಚಳವಳಿ ನಿರತ ಪಕ್ಷಗಳು ಈ ಪ್ರಕಟಣೆಯನ್ನು ಸ್ವಾಗತಿಸಿದವು.

2006: ಲಾಭದ ಹುದ್ದೆ ಹೊಂದಿದ ಕಾರಣಕ್ಕಾಗಿ ರಾಜ್ಯಸಭಾ ಸದಸ್ಯತ್ವದಿಂದ ಅನರ್ಹಗೊಂಡಿರುವ ಸಮಾಜವಾದಿ ಪಕ್ಷದ ನಾಯಕಿ, ಹಿರಿಯ ಚಿತ್ರನಟಿ ಜಯಾ ಬಚ್ಚನ್ ಅವರು ತಮ್ಮ ವಿರುದ್ಧದ ಕ್ರಮವನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಸಿದರು.

2006: ಜಗತ್ತಿನ ಮೊತ್ತ ಮೊದಲ ತದ್ರೂಪಿ ನಾಯಿ ಸ್ನಪ್ಪಿ ಕೊರಿಯಾದ ಸೋಲ್ ನಲ್ಲಿ ತನ್ನ ಮೊದಲ ಹುಟ್ಟುಹಬ್ಬ ಆಚರಿಸಿತು. ಆದರೆ ಈ ನಾಯಿಯನ್ನು ಸೃಷ್ಟಿಸಿದ ವಿಜ್ಞಾನಿಗಳ ತಂಡ ಹಾಗೂ ಅದರ ನಾಯಕ ದಕ್ಷಿಣ ಕೊರಿಯಾದ ಹ್ವಾಂಗ್ ವೂ-ಸಕ್ ಅವರು ವಂಚನೆ ಮತ್ತು ನೈತಿಕತೆಯ ಉಲ್ಲಂಘನೆಗಾಗಿ ವಿಚಾರಣೆಗೆ ಗುರಿಯಾದರು. 2005ರಲ್ಲಿ ದಕ್ಷಿಣ ಕೊರಿಯಾದ ಈ ವಿಜ್ಞಾನಿಗಳ ತಂಡ ತದ್ರೂಪಿ ನಾಯಿ ಸೃಷ್ಟಿಯನ್ನು ಪ್ರಕಟಿಸಿದಾಗ ಟೈಮ್ ನಿಯತಕಾಲಿಕ ಈ ವರ್ಷದ ಅದ್ಭುತ ಸಂಶೋಧನೆಗಳಲ್ಲಿ ಇದು ಒಂದು ಬಣ್ಣಿಸಿತ್ತು. ಹ್ವಾನ್ ಅವರನ್ನು ಆಗ ಕೊರಿಯಾದ ಹೆಮ್ಮೆ ಎಂದು ಬಣ್ಣಿಸಲಾಗಿತ್ತು. ಆದರೆ ವರ್ಷಾಂತ್ಯದವೇಳೆಗೆ ಮಾನವ ಭ್ರೂಣ ಸಂಗ್ರಹಕ್ಕೆ ಸಂಬಂಧಿಸಿದಂತೆ ನೈತಿಕತೆಯನ್ನು ಉಲ್ಲಂಘಿಸಿದ ಆರೋಪಕ್ಕೆ ಹ್ವಾನ್ ಮತ್ತು ಅವರ ತಂಡ ಗುರಿಯಾಯಿತು.

2006: ಖ್ಯಾತ ಹಿನ್ನಲೆ ಗಾಯಕ, ಐದು ಫಿಲ್ಮ್ ಫೇರ್ ಪ್ರಶಸ್ತಿಗಳ ವಿಜೇತ ಉದಿತ್ ನಾರಾಯಣ್ ಅವರಿಗೆ ಬಿಹಾರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಪ್ರಕಾಶ್ ಅವರು ನೋಟಿಸ್ ಕಳುಹಿಸಿ 15 ದಿನಗಳ ಒಳಗಾಗಿ ತಮ್ಮ ಮುಂದೆ ಹಾಜರಾಗಿ ರಂಜನಾ ನಾರಾಯಣ್ ಅವರನ್ನು ತನ್ನ ಪತ್ನಿ ಅಲ್ಲವೆಂದು ಹೇಳಿರುವುದು ಏಕೆ ಎಂದು ವಿವರಣೆ ನೀಡುವಂತೆ ಆಜ್ಞಾಪಿಸಿದರು. ವಾರದ ಹಿಂದೆ ಪಟ್ನಾದ ಐಶಾರಾಮಿ ಹೊಟೇಲ್ ಒಂದರಲ್ಲಿ ಉದಿತ್ ನಾರಾಯಣ್ ತನ್ನ ಪತ್ನಿ ದೀಪಾ ಮತ್ತು ಪುತ್ರ ಆದಿತ್ಯ ಜತೆ ಇದ್ದಾಗ ಅಲ್ಲಿಗೆ ರಂಜನಾ ನುಗ್ಗಿದ್ದರಿಂದ ಉದಿತ್ ನಾರಾಯಣ್ ಇಬ್ಬರನ್ನು ಮದುವೆಯಾದ ವಿಷಯ ಬೆಳಕಿಗೆ ಬಂದಿತ್ತು.

1973: ಕೇಶವಾನಂದ ಭಾರತೀ ಪ್ರಕರಣದಲ್ಲಿ ಭಾರತದ ಸುಪ್ರೀಂಕೋರ್ಟಿನ ಸಂವಿಧಾನ ಪೀಠವು ನೀಡಿದ್ದ ತನ್ನ ಹಿಂದಿನ ತೀರ್ಪನ್ನು ಬದಲಾಯಿಸಿ ಚಾರಿತ್ರಿಕ ತೀರ್ಪು ನೀಡಿತು. ಮೂಲಭೂತ ಹಕ್ಕುಗಳಿಗೆ ಸಂಸತ್ತು ತಿದ್ದುಪಡಿ ತರಲಾಗದು ಮತ್ತು ಅಂತಹ ಯಾವುದೇ ಬದಲಾವಣೆಗಳಿಗೆ ಹೊಸ ಸಂವಿಧಾನಬದ್ಧ ಶಾಸನಸಭೆಯ ರಚನೆಯಾಗಬೇಕು ಎಂಬುದಾಗಿ (ಗೋಲಕನಾಥ್ ಪ್ರಕರಣದಲ್ಲಿ) ಹಿಂದೆ ನೀಡಿದ್ದ ತೀರ್ಪನ್ನು ಸುಪ್ರೀಂಕೋರ್ಟ್ ಬದಲಾಯಿಸಿತು. ಸಂವಿಧಾನದ ಕೆಲವು ಮೂಲಭೂತ ಲಕ್ಷಣಗಳನ್ನು ಮಾತ್ರ ಬದಲಾಯಿಸುವಂತಿಲ್ಲ ಎಂದು ಅದು ಹೇಳಿತು.

1973: ಸಚಿನ್ ತೆಂಡೂಲ್ಕರ್ ಹುಟ್ಟಿದ ದಿನ.

1971: ಕಲಾವಿದ ಶ್ರೀಧರ ಎಸ್. ಚವ್ಹಾಣ್ ಜನನ.

1962: ಕಲಾವಿದೆ ನಿರ್ಮಲ ಕುಮಾರಿ ಜನನ.

1960: ಕಲಾವಿದ ಕೆ.ವಿ. ಅಕ್ಷರ ಜನನ.

1958: ಕಲಾವಿದ ರಾಮಾನುಜನ್ ಜಿ.ಎಸ್. ಜನನ.

1947: ಕಲಾವಿದ ಅಚ್ಯುತರಾವ್ ಪದಕಿ ಜನನ.

1929: ಕನ್ನಡದ ವರನಟ ಡಾ. ರಾಜಕುಮಾರ್ (1929-2006) ಜನ್ಮದಿನ. ಮೂಲತಃ ಮುತ್ತುರಾಜ್ ಎಂಬ ಹೆಸರು ಇದ್ದ ಅವರು ಮುಂದೆ ಕನ್ನಡ ಚಲನಚಿತ್ರ ರಂಗದ ಮೇರು ನಟನಾಗಿ `ರಾಜಕುಮಾರ್' ಎಂಬ ಹೆಸರಿನಿಂದಲೇ ಮನೆ ಮಾತಾದರು. 2006ರ ಏಪ್ರಿಲ್ 12ರಂದು ತಮ್ಮ ಜನ್ಮದಿನಾಚರಣೆಗೆ 11 ದಿನ ಮೊದಲು ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು.

1927: ಖ್ಯಾತ ಗಾಯಕಿ ಜಯವಂತಿದೇವಿ ಹಿರೇಬೆಟ್ಟು ಅವರು ಪಡುಕೋಣೆ ರಮಾನಂದರಾಯರು- ಸೀತಾದೇವಿ ದಂಪತಿಯ ಮಗಳಾಗಿ ಮಂಗಳೂರಿನಲ್ಲಿ ಜನಿಸಿದರು. ಕರ್ನಾಟಕದ ಪ್ರತಿಷ್ಠಿತ ಪ್ರಶಸ್ತಿಯಾದ ಸಂತ ಶಿಶುನಾಳ ಶರೀಫ ಪ್ರಶಸ್ತಿಯ ಪ್ರಥಮ ಪುರಸ್ಕೃತೆಯಾದ ಈಕೆ ಮಹಾತ್ಮ ಗಾಂಧೀಜಿವರ ಪ್ರಾರ್ಥನಾ ಸಭೆಯಲ್ಲಿ ವಂದೇ ಮಾತರಂ ಹಾಡಿದ್ದರು. ತ್ಯಾಗಯ್ಯ, ಕಲ್ಪನಾ ಚಿತ್ರಗಳಲ್ಲೂ ಹಿನ್ನೆಲೆ ಗಾಯಕರಾಗಿ ಹಾಡಿದ್ದರು. ಆಲ್ ಇಂಡಿಯಾ ರೇಡಿಯೋದಲ್ಲಿ ಅವರು ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮಗಳು ತುಂಬ ಹೆಸರುವಾಸಿ.

1889: ಸರ್ ಸ್ಟಾಫರ್ಡ್ ಕ್ರಿಪ್ಸ್ (1889-1952) ಜನ್ಮದಿನ. ಭಾರತಕ್ಕೆ ಸ್ವಾತಂತ್ರ್ಯ ನೀಡುವ ನಿಟ್ಟಿನಲ್ಲಿ ಇಂಗ್ಲೆಂಡ್ ಮತ್ತು ಭಾರತದ ಮಧ್ಯೆ ಮಾತುಕತೆ ನಡೆಸುವ ಸಲುವಾಗಿ ಈತನ ನೇತೃತ್ವದಲ್ಲಿ ಭಾರತಕ್ಕೆ ನಿಯೋಗವೊಂದು ಬಂದಿತ್ತು. ಅದಕ್ಕೆ `ಕ್ರಿಪ್ಸ್ ಮಿಷನ್' ಎಂದೇ ಹೆಸರು ಬಂದಿತು.

1800: ಜಗತ್ತಿನಲ್ಲೇ ಅತ್ಯಂತ ದೊಡ್ಡದೆಂದು ಹೆಸರು ಪಡೆದಿರುವ ಯುನೈಟೆಡ್ ಸ್ಟೇಟ್ಸ್ ಲೈಬ್ರರಿ ಆಫ್ ಕಾಂಗ್ರೆಸ್ ವಾಷಿಂಗ್ಟನ್ ಡಿ.ಸಿ.ಯಲ್ಲಿ ಸ್ಥಾಪನೆಯಾಯಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement