My Blog List

Tuesday, April 8, 2008

ಇಂದಿನ ಇತಿಹಾಸ History Today ಏಪ್ರಿಲ್ 8

ಇಂದಿನ ಇತಿಹಾಸ

ಏಪ್ರಿಲ್ 8

ಭಾರತೀಯರ ನಾಗರಿಕ ಹಕ್ಕುಗಳನ್ನು ಮೊಟಕುಗೊಳಿಸುವ ಬ್ರಿಟಿಷರ ನೀತಿಗೆ ಆಕ್ರೋಶ ಭುಗಿಲೆದ್ದ ದಿನವಿದು. ಬ್ರಿಟಿಷರ ಈ ದಮನ ನೀತಿಯನ್ನು ವಿರೋಧಿಸಿ, ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕ್ರಾಂತಿಕಾರಿಗಳಾದ ಭಗತ್ ಸಿಂಗ್ ಮತ್ತು ಬಟುಕೇಶ್ವರ ದತ್ ದೆಹಲಿಯ ಕೇಂದ್ರೀಯ ಶಾಸನಸಭೆಯಲ್ಲಿ ಈದಿನ ಬಾಂಬ್ ಸ್ಫೋಟಿಸಿದರು

2007: ಅಮೆರಿಕದ ಕೋಟ್ಯಧೀಶ ಚಾರ್ಲ್ಸ್ ಸಿಮೋನಿಯೀ ಅವರು ರಷ್ಯದ ಇಬ್ಬರು ಗಗನಯಾನಿಗಳೊಂದಿಗೆ ಬಾಹ್ಯಾಕಾಶಕ್ಕೆ ಏರಿದರು. ಅವರನ್ನು ಹೊತ್ತ ಸೋಯುಜ್ ಟಿಎಂಎ-10 ಗಗನನೌಕೆಯು ಕಝಕಸ್ತಾನದ ಬೈಕನೂರ್ ಬಾಹ್ಯಾಕಾಶ ನಿಲ್ದಾಣದಿಂದ ಉಡಾವಣೆಗೊಂಡಿತು.

2007: ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಕಾಯಕಯೋಗಿ ಡಾ. ಶಿವಕುಮಾರ ಸ್ವಾಮೀಜಿ ಅವರ ನೂರನೇ ಜನ್ಮ ಶತಮಾನೋತ್ಸವಕ್ಕೆ ಚಾಲನೆ ನೀಡಿದರು. ವಿದ್ಯುನ್ಮಾನ ಗುಂಡಿಯನ್ನು ಒತ್ತಿ ವೇದಿಕೆಯ ಮೇಲೆ ಏಕ ಕಾಲದಲ್ಲಿ 100 ದೀಪಗಳನ್ನು ಬೆಳಗುವ ಮೂಲಕ ಸ್ವಾಮೀಜಿಗೆ ಶುಭ ಕೋರಿದರು.

2007: ಮುಂಬೈ ಮಹಾನಗರದ ರೂಪದರ್ಶಿ ಸರಾಹ್ ಜೇನ್ ಅವರು ಮುಂಬೈಯಲ್ಲಿ ನಡೆದ ಸಮಾರಂಭದಲ್ಲಿ `ಭಾರತ ಸುಂದರಿ' ಆಗಿಯೂ, ಪೂಜಾ ಚಿಟ್ಗೋಪಕರ್ ಅವರು `ಭಾರತ ಭೂ ಸುಂದರಿ' ಆಗಿಯೂ ಆಯ್ಕೆಯಾದರು.

2007: ಭಾರತ ಮೂಲದ ಗಗನಯಾನಿ ಸುನೀತಾ ವಿಲಿಯಮ್ಸ್ ಅವರು ಇದೇ ಮೊದಲ ಬಾರಿಗೆ ಅಂತರರಾಷ್ಟ್ರೀಯ ಅಂತರಿಕ್ಷ ಕೇಂದ್ರದ ಜೈವಿಕ ವಿಜ್ಞಾನ ಪ್ರಯೋಗಾಲಯದಲ್ಲಿ ತಪಾಸಣೆಯ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಿದರು. ಬಾಹ್ಯಾಕಾಶ ನೌಕೆಯಲ್ಲಿ ಬ್ಯಾಕ್ಟೀರಿಯಾ, ಬೂಷ್ಟು ಮತ್ತಿತರ ಸೂಕ್ಷ್ಮಾಣು ಜೀವಿಗಳನ್ನು ಸಾಮಾನ್ಯ ತಪಾಸಣಾ ಕ್ರಮಕ್ಕಿಂತ ಬೇಗ ಗುರುತಿಸಬಹುದು. ಇದಕ್ಕೆ `ಲೊಕಾರ್ಡ್ ಪಿಟಿಎಸ್' ಎಂದು ಹೆಸರಿಸಲಾಗಿದೆ. ಇದು `ಲ್ಯಾಬ್ ಆನ್ ಚಿಪ್ ಅಪ್ಲಿಕೇಷನ್ ಡೆವಲಪ್ಮೆಂಟ್- ಸಣ್ಣ ತಪಾಸಣಾ ವ್ಯವಸ್ಥೆ' ಎಂಬುದರ ಸಂಕ್ಷಿಪ್ತ ರೂಪ. ನಾಸಾದ ಅಂತರಿಕ್ಷ ನೌಕೆ `ಡಿಸ್ಕವರಿ'ಯಲ್ಲಿ 2006ರ ಡಿಸೆಂಬರ್ 9ರಂದು ಈ ವ್ಯವಸ್ಥೆಯ ಬಳಕೆಗೆ ಚಾಲನೆ ನೀಡಿದ್ದರೂ ಆ ನಂತರ ಇದರ ಬಳಕೆ ಆಗಿರಲಿಲ್ಲ. ಸುನೀತಾ ಅವರೇ ಅ ಸಂದರ್ಭದಲ್ಲಿ ಲೊಕಾರ್ಡ್ ಪಿಟಿಎಸ್ ಉಪಕರಣ ವ್ಯವಸ್ಥೆ ರೂಪಿಸಿದ್ದರು.

2007: ರಸ್ತೆ ಅಪಘಾತದಲ್ಲಿ ಮೃತನಾದ ವ್ಯಕ್ತಿಯ ಪರಿಹಾರ ಧನ ಪಡೆಯಲು ಯಾರೂ ವಾರಸುದಾರರಿಲ್ಲದೇ ಹೋದಲ್ಲಿ, ಆ ವ್ಯಕ್ತಿಯ ವಿವಾಹಿತ ಪುತ್ರಿಗೆ ಅದನ್ನು ಪಡೆಯುವ ಹಕ್ಕಿದೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು. ಮೋಟಾರು ವಾಹನ ಕಾಯ್ದೆ 1988ರ ಪ್ರಕಾರ ವಿವಾಹಿತ ಪುತ್ರಿಯೂ ಪರಿಹಾರ ಧನ ಪಡೆಯಬಹುದು ಎಂದು ನ್ಯಾಯಮೂರ್ತಿ ಅರಿಜಿತ್ ಪಸಾಯತ್ ಮತ್ತು ಎಸ್. ಎಚ್. ಕಪಾಡಿಯಾ ಅವರನ್ನು ಒಳಗೊಂಡ ಪೀಠವು ಹೇಳಿತು.

2007: ಒರಿಸ್ಸಾದ ಪುರಿಯ ಗಜಪತಿ ಮಹಾರಾಜ ದಿವ್ಯಸಿಂಹ ದೇವ ಅವರನ್ನು ಮದುವೆಯಾದ ಮೂರು ವರ್ಷಗಳ ಬಳಿಕ ಮಹಾರಾಣಿ ಲೀಲಾವತಿ ಪಟ್ಟ ಮಹಾದೇವಿ ಅವರು ಇದೇ ಮೊದಲ ಬಾರಿಗೆ ಬಿಗಿ ಬಂದೋಬಸ್ತಿನ ಮಧ್ಯೆ ಪುರಿ ಜಗನ್ನಾಥ ದೇವಾಲಯಕ್ಕೆ ಭೇಟಿ ನೀಡಿದರು. ಈ ಪುಣ್ಯಕ್ಷೇತ್ರದಲ್ಲಿ 12ನೇ ಶತಮಾನದಲ್ಲಿ ನಡೆಯುತ್ತಿದ್ದ ರಾಜಮನೆತನದ ಈ ಧಾರ್ಮಿಕ ಕಾರ್ಯಕ್ರಮ 40 ವರ್ಷಗಳ ಬಳಿಕ ನಡೆಯಿತು.

2006: ನಾಲ್ಕು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯುತ್ತಿರುವಾಗ ಕೇಂದ್ರೀಯ ಶಿಕ್ಷಣ ಸಂಸ್ಥೆಗಳು, ಐಐಎಂಗಳು ಮತ್ತು ಐಐಟಿಗಳಲ್ಲಿ ಇತರೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ಪ್ರಸ್ತಾವ ಮುಂದಿಟ್ಟದ್ದಕ್ಕೆ ವಿವರಣೆ ನೀಡುವಂತೆ ಚುನಾವಣಾ ಆಯೋಗವು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಅರ್ಜುನ್ ಸಿಂಗ್ ಅವರಿಗೆ ನೋಟಿಸ್ ನೀಡಿತು.

2006: ಲಾಭದ ಹುದ್ದೆ ವಿವಾದದ ಹಿನ್ನೆಲೆಯಲ್ಲಿ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ರಾಜೀವ್ ಗಾಂಧಿ ಪ್ರತಿಷ್ಠಾನ, ಇಂದಿರಾಗಾಂಧಿ ಸ್ಮಾರಕ ಪ್ರತಿಷ್ಠಾನ ಮತ್ತು ಜವಾಹರ ಭವನ ಪ್ರತಿಷ್ಠಾನಗಳ ಅಧ್ಯಕ್ಷ ಸ್ಥಾನಗಳಿಗೂ ರಾಜೀನಾಮೆ ಸಲ್ಲಿಸಿದರು.

2006: ಮಂಡಲ್ ಆಯೋಗ ಪ್ರಕರಣದ ತನ್ನ ತೀರ್ಪನ್ನು ದೃಢಪಡಿಸಿದ ಸುಪ್ರೀಂಕೋರ್ಟ್ ಸಾಮಾನ್ಯ ವರ್ಗದಿಂದ ಆಯ್ಕೆಯಾದ ಇತರೆ ಹಿಂದುಳಿದ ವರ್ಗಕ್ಕೆ ಸೇರಿದ ಅಭ್ಯರ್ಥಿಯನ್ನು ಇತರೆ ಹಿಂದುಳಿದ ವರ್ಗಗಳ ಕೋಟಾದ ಅಡಿ (ಒಬಿಸಿ ಕೋಟಾ) ನೇಮಕಗೊಂಡವರು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟ ಪಡಿಸಿತು.

2001: ಜಾರ್ಜಿಯಾದ ಆಗಸ್ಟಾದಲ್ಲಿ `ಆಗಸ್ಟಾ ಮಾಸ್ಟರ್ಸ್' ಗೆಲ್ಲುವ ಮೂಲಕ ಟೈಗರ್ ವುಡ್ಸ್ ಅವರು ಏಕ ಕಾಲಕ್ಕೆ ಎಲ್ಲ ನಾಲ್ಕು ಪ್ರಮುಖ ಚಾಂಪಿಯನ್ ಶಿಪ್ಪುಗಳನ್ನು ಗೆದ್ದ ಮೊದಲ ಗಾಲ್ಫ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

1973: ಜಗತ್ತಿನ ಖ್ಯಾತ ಕಲಾವಿದರಲ್ಲಿ ಒಬ್ಬರಾದ ಪಾಬ್ಲೋ ಪಿಕಾಸೋ ಫ್ರಾನ್ಸಿನ ಮೌಗಿನ್ಸಿನಲ್ಲಿ ತಮ್ಮ 91ನೇ ವಯಸ್ಸಿನಲ್ಲಿ ನಿಧನರಾದರು. 20ನೇ ಶತಮಾನದ ಆಧುನಿಕ ಕಲೆಗೆ ಇವರು ಮಹತ್ವದ ಕಾಣಿಕೆ ಸಲ್ಲಿಸಿದರು.

1968: ಕಲಾವಿದ ಚಂದ್ರಶೇಖರ ಎ.ಪಿ. ಜನನ.

1965: ಕಲಾವಿದೆ ನಂದಿನಿ ಕೆ. ಮೆಹ್ತಾ ಜನನ.

1955: ಕಲಾವಿದ ಅಪ್ಪಗೆರೆ ತಿಮ್ಮರಾಜು ಜನನ.

1950: ಪಂಡಿತ್ ಜವಾಹರಲಾಲ್ ನೆಹರೂ ಮತ್ತು ಪಾಕಿಸ್ತಾನದ ಲಿಯಾಖತ್ ಅಲಿ ಖಾನ್ ಭಾರತ ಮತ್ತು ಪಾಕಿಸ್ತಾನದ ನಿರಾಶ್ರಿತರ ವಾಪಸಾತಿಗೆ ಸಂಬಂಧಿಸಿದ `ದೆಹಲಿ ಒಪ್ಪಂದ'ಕ್ಕೆ ಸಹಿ ಹಾಕಿದರು.

1939: ಸಿಪಿಕೆ ಎಂದೇ ಖ್ಯಾತರಾಗಿರುವ ಪ್ರೊ.ಸಿ.ಪಿ. ಕೃಷ್ಣಕುಮಾರ್ ಈದಿನ ಹುಟ್ಟಿದರು. ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕ ಸಿಪಿಕೆ ಕಾವ್ಯ, ವಿಮರ್ಶೆ, ಅನುವಾದ, ವಿಡಂಬನೆ ಇತ್ಯಾದಿ ಸಾಹಿತ್ಯ ಪ್ರಕಾರಗಳಲ್ಲಿ 250ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ರಾಜ್ಯ ಸಾಹಿತ್ಯ ಅಕಾಡೆಮಿ, ಜಾನಪದ, ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಅವರಿಗೆ ಲಭಿಸಿವೆ.

1929: ಭಾರತೀಯ ಕ್ರಾಂತಿಕಾರಿಗಳಾದ ಭಗತ್ ಸಿಂಗ್ ಮತ್ತು ಬಟುಕೇಶ್ವರ ದತ್ ದೆಹಲಿಯ ಕೇಂದ್ರೀಯ ಶಾಸನಸಭೆಯಲ್ಲಿ ಬಾಂಬ್ ಸ್ಫೋಟಿಸಿದರು. ಭಾರತೀಯ ಪ್ರಜೆಗಳ ಮುಖ್ಯವಾಗಿ ಕಾರ್ಮಿಕರ ನಾಗರಿಕ ಹಕ್ಕುಗಳನ್ನು ಮೊಟಕುಗೊಳಿಸುವ ಸಾರ್ವಜನಿಕ ಸುರಕ್ಷತೆ ಮತ್ತು ಕಾರ್ಮಿಕ ವಿವಾದಗಳ ಮಸೂದೆಯನ್ನು ಪ್ರತಿಭಟಿಸಿ ಅವರು ಈ ಕೃತ್ಯ ಎಸಗಿದರು.

1924: ಹಿಂದೂಸ್ಥಾನಿ ಸಂಗೀತದ ಅದ್ಭುತ ತಾರೆ ಎನಿಸಿದ್ದ ಕುಮಾರ ಗಂಧರ್ವ (8-4-1924ರಿಂದ 12-1-1992) ಅವರು ಸಂಗೀತಗಾರ ಸಿದ್ದರಾಮಯ್ಯ- ಗುರುಸಿದ್ದವ್ವ ದಂಪತಿಯ ಮಗನಾಗಿ ಬೆಳಗಾವಿ ಜ್ಲಿಲೆಯ ಸೂಳೆಭಾವಿಯಲ್ಲಿ ಜನಿಸಿದರು. ಜನ್ಮಜಾತ ಪ್ರತಿಭೆಯಾಗಿದ್ದ ಕುಮಾರ ಗಂಧರ್ವ ಅವರು ಐದು ವರ್ಷದವನಿದ್ದಾಗಲೇ ದಾವಣಗೆರೆಯಲ್ಲಿ ಪ್ರಥಮ ಸಂಗೀತ ಕಚೇರಿ ನೀಡಿದರು. ಹನ್ನೊಂದನೆಯ ವಯಸ್ಸಿನಲ್ಲಿ ಅಲಹಾಬಾದಿನಲ್ಲಿ ಸಂಗೀತ ಸಮ್ಮೇಳನದಲ್ಲಿ ಕಾಫಿ ರಾಗವನ್ನು ಅರ್ಧ ಗಂಟೆ ಹಾಡಿ ಶ್ರೋತೃಗಳನ್ನು ಮಂತ್ರಮುಗ್ಧಗೊಳಿಸಿದರು. ಗೀತವರ್ಷ (ಮಳೆಗಾಲ), ಗೀತ ಹೇಮಂತ (ಚಳಿಗಾಲ), ಗೀತ ವಸಂತ (ವಸಂತ ಕಾಲ) ಇವು ಋತುಮಾನಗಳಿಗೆ ಅನುಗುಣವಾಗಿ ಹಾಡಲು ಕುಮಾರ ಗಂಧರ್ವ ನೀಡಿದ ವಿಶಿಷ್ಟ ಹೊಸ ರಾಗಗಳು. ಸೂರದಾಸ, ಕಬೀರದಾಸ, ಮೀರಾ ಭಜನೆಗಳ ಗುಚ್ಛ, ಅನೂಪರಾಗ ವಿಲಾಸ ಇವೆಲ್ಲ ಅವರ ಹತ್ತು ವರ್ಷಗಳ ಸಂಶೋಧನೆಯ ಫಲವಾಗಿ ಮೂಡಿದ ಹೊಸ ರಾಗಗಳು. ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ, ಕಾಳಿದಾಸ ಸಮ್ಮಾನ, ಉಜ್ಜಯನಿ ವಿಕ್ರಮ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಇತ್ಯಾದಿ ಸೇರಿದಂತೆ ಅವರಿಗೆ ಲಭಿಸಿದ ಪ್ರಶಸ್ತಿಗಳಿಗೆ ಲೆಕ್ಕ ಇಲ್ಲ.

1894: ಭಾರತದ ಖ್ಯಾತ ಕಾದಂಬರಿಕಾರ ಬಂಕಿಮ್ ಚಂದ್ರ ಚಟರ್ಜಿ (1838-1894) ಅವರು ಕೊಲ್ಕತ್ತಾ(ಆಗಿನ ಕಲಕತ್ತಾ)ದಲ್ಲಿ ತಮ್ಮ 55ನೇ ವಯಸ್ಸಿನಲ್ಲಿ ನಿಧನರಾದರು. ಅವರ `ಆನಂದಮಠ' ಕೃತಿಯ `ವಂದೇ ಮಾತರಂ' ಭಾರತೀಯ ಸ್ವಾತಂತ್ರ್ಯ ಸಮರದಲ್ಲಿ ಮುಖ್ಯ ಸ್ಫೂರ್ತಿಮಂತ್ರವಾಯಿತು. ಮುಂದೆ ಭಾರತದ ರಾಷ್ಟ್ರೀಯ ಗೀತೆ ಕೂಡಾ ಆಯಿತು

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement