Monday, April 7, 2008

ಇಂದಿನ ಇತಿಹಾಸ History Today ಏಪ್ರಿಲ್ 7

ಇಂದಿನ ಇತಿಹಾಸ

ಏಪ್ರಿಲ್ 7

ಇಂದು ವಿಶ್ವ ಆರೋಗ್ಯ ದಿನ. ಈದಿನ ಸ್ಥಾಪನೆಯಾದ ವಿಶ್ವ ಆರೋಗ್ಯ ಸಂಸ್ಥೆಯು ಪ್ರತಿವರ್ಶ ಏಪ್ರಿಲ್ 7ರಂದು ವಿಶ್ವ ಆರೋಗ್ಯ ದಿನಾಚರಣೆಯನ್ನು ಹಮ್ಮಿಕೊಳ್ಳುತ್ತದೆ. ಆರೋಗ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಇದರ ಉದ್ದೇಶ.. 1948ರಲ್ಲಿ ನಡೆದ ಮೊದಲ ವಿಶ್ವ ಆರೋಗ್ಯ ಸಭೆಯಲ್ಲಿ ಏಪ್ರಿಲ್ 7ನ್ನು ವಿಶ್ವ ಆರೋಗ್ಯ ದಿನವಾಗಿ ಆಚರಿಸಲು ನಿರ್ಧರಿಸಲಾಯಿತು. 1950ರಿಂದ ವಿಶ್ವ ಆರೋಗ್ಯ ದಿನದ ಆಚರಣೆ ಜಾರಿಗೆ ಬಂತು.

2007: ಖ್ಯಾತ ಜಾನಪದ ತಜ್ಞ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಡಾ. ದೇವೇಂದ್ರ ಕುಮಾರ ಸಿ. ಹಕಾರಿ (78) ಅವರು ಧಾರವಾಡದ ಶ್ರೀನಗರದ ತಮ್ಮ ಸ್ವಗೃಹ `ಕರುಣಾಂಜಲಿ'ಯಲ್ಲಿ ನಿಧನರಾದರು. ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲ್ಲೂಕಿನ ಚಿಕ್ಕೇನಕೊಪ್ಪದಲ್ಲಿ 1931ರಲ್ಲಿ ಜನಿಸಿದ ದೇವೇಂದ್ರ ಕುಮಾರ ಅವರು ಗುಲ್ಬರ್ಗದ ಶರಣ ಬಸವೇಶ್ವರ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. 1970ರಲ್ಲಿ ಕರ್ನಾಟಕ ವಿಶ್ವ ವಿದ್ಯಾಲಯ ಸೇರಿದ ಹಕಾರಿ 1991ರಲ್ಲಿ ನಿವೃತ್ತರಾಗುವ ವೇಳೆಗೆ ಜಾನಪದ ಕ್ಷೇತದಲ್ಲಿ ಆಳ ಅಧ್ಯಯನ ಮತ್ತು ಬರಹಗಳಿಂದ ಖ್ಯಾತರಾಗಿದ್ದರು. ಕಾಲೇಜಿನ ದಿನಗಳಲ್ಲೇ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಅವರು ಹೈದರಾಬಾದ್ ರಜಾಕಾರರ ವಿರುದ್ಧ ಸಮರ ಸಾರಿದ್ದರು. ಕಾದಂಬರಿ, ಕವನ ಸಂಕಲನ, ವಿಮರ್ಶೆ, ನಾಟಕ, ಜೀವನ ಚರಿತ್ರೆ, ಸಂಪಾದಿತ ಕೃತಿ, ಅನುವಾದ ಕೃತಿ ಸೇರಿ 37 ಪುಸ್ತಕಗಳನ್ನು ಅವರು ಪ್ರಕಟಿಸಿದ್ದರು.

2007: ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದು ಜಯಭೇರಿ ಬಾರಿಸಿತು. ಆಡಳಿತಾರೂಢ ಕಾಂಗ್ರೆಸ್ ಮುಖಭಂಗಕ್ಕೆ ಗುರಿಯಾಯಿತು. 272 ಸದಸ್ಯ ಬಲದ ಎಂಸಿಡಿಯಲ್ಲಿ ಬಿಜೆಪಿ 164, ಕಾಂಗ್ರೆಸ್ 69, ಪಕ್ಷೇತರರು 16, ಬಿಎಸ್ಪಿ 15, ಎನ್ಸಿಪಿ, ಜೆಎಂಎಂ, ಎಲ್ಜೆಪಿ ಮತ್ತು ಐಎನ್ಎಲ್ಡಿ ತಲಾ ಎರಡು ಸ್ಥಾನ ಗಳಿಸಿದವು.

2007: ಕಾಂಚೀಪುರಂಗೆ ಸಮೀಪದ ಮಾಮಲ್ಲಾಪುರಂನಲ್ಲಿ 1800 ವರ್ಷಗಳಷ್ಟು ಹಳೆಯದಾದ ಮುರುಗನ್ ದೇವಾಲಯ ಒಂದರ ಅವಶೇಷಗಳನ್ನು ಪ್ರಾಕ್ತನ ತಜ್ಞರು ಪತ್ತೆ ಹಚ್ಚಿದರು.

2007: ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲ್ಲೂಕಿನ ಬನವಾಸಿಯಲ್ಲಿ ಅರಂಭವಾದ ಕದಂಬೋತ್ಸವದಲ್ಲಿ 2006ನೇ ಸಾಲಿನ ಪ್ರತಿಷ್ಠಿತ ಪಂಪ ಪ್ರಶಸ್ತಿಯನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಮಹಾದೇವ ಪ್ರಸಾದ್ ಅವರು ಖ್ಯಾತ ವಿಮರ್ಶಕ ಡಾ. ಜಿ.ಎಸ್. ಆಮೂರ ಅವರಿಗೆ ಪ್ರದಾನ ಮಾಡಿದರು.

2007: ಲಖನೌದಲ್ಲಿ 2004 ಏಪ್ರಿಲ್ 12ರಂದು ಸಂಭವಿಸಿದ ಸೀರೆ (ವಿತರಣೆ ) ಕಾಲ್ತುಳಿತ ಪ್ರಕರಣದಲ್ಲಿಉತ್ತರ ಪ್ರದೇಶ ವಿಧಾನಸಭೆಯ ವಿರೋಧ ಪಕ್ಷದ ನಾಯಕ, ಬಿಜೆಪಿ ಧುರೀಣ ಲಾಲ್ ಜಿ ಟಂಡನ್ ಆರೋಪಮುಕ್ತರು ಎಂದು ಲಖನೌ ವಿಶೇಷ ಹೆಚ್ಚುವರಿ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಬಾಲ ಮುಕುಂದ ತೀರ್ಪು ನೀಡಿದರು. ಟಂಡನ್ ಅವರ ಜನ್ಮದಿನಾಚರಣೆ ಅಂಗವಾಗಿ ಮಹಾನಗರದ ಚಂದ್ರಶೇಖರ ಆಜಾದ್ ಪಾರ್ಕಿನಲ್ಲಿ ನಡೆದ ಸಮಾರಂಭದಲ್ಲಿ ಈ ಕಾಲ್ತುಳಿತದ ಘಟನೆ ಸಂಭವಿಸಿ 21 ಮಂದಿ ಮಹಿಳೆಯರು ಅಸು ನೀಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಲ್ಲಿಸಿದ ಅಂತಿಮ ವರದಿಯನ್ನು ಪರಿಗಣಿಸಿದ ಮ್ಯಾಜಿಸ್ಟ್ರೇಟರು ಹಿರಿಯ ಬಿಜೆಪಿ ನಾಯಕನ ವಿರುದ್ಧ ಸಲ್ಲಿಸಲಾದ ಅರ್ಜಿಯನ್ನು ವಜಾ ಮಾಡಿದರು. ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ 2004ರ ಏಪ್ರಿಲ್ 17ರಂದು ಮಹಾನಗರ ಪೊಲೀಸ್ ಠಾಣೆಯಲ್ಲಿ ಟಂಡನ್ ಮತ್ತು ಸಂಘಟಕ ಬ್ರಿಜೇಂದ್ರ ಮುರಾರಿ ಯಾದವ್ ವಿರುದ್ಧ ಮುಖ್ಯ ಚುನಾವಣಾ ಅಧಿಕಾರಿ ಪ್ರಥಮ ಮಾಹಿತಿ ವರದಿ (ಎಫ್ಐಆರ್) ಸಲ್ಲಿಸಿದ್ದರು.. 2005ರ ಮೇ 28ರಂದು ಪೊಲೀಸರು ಅಂತಿಮ ವರದಿ ಸಲ್ಲಿಸಿದ್ದರು.. ಆದರೆ 2007ರ ಫೆಬ್ರುವರಿ 5ರಂದು ಚುನಾವಣಾ ಆಯೋಗವು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಪೊಲೀಸ್ ತನಿಖೆ ಬಗ್ಗೆ ತನಗೆ ತೃಪ್ತಿ ಇಲ್ಲ ಎಂದು ತಿಳಿಸಿತ್ತು. ಚೇತ್ ರಾಮ್ ಎಂಬ ಇನ್ನೊಬ್ಬ ವ್ಯಕ್ತಿ ಕೂಡಾ 2006ರ ಮಾರ್ಚ್ 13ರಂದು ಇನ್ನೊಂದು ಅರ್ಜಿ ಸಲ್ಲಿಸಿ ಟಂಡನ್ ಮತ್ತು ಯಾದವ್ ಅವರ ಕಾರಣದಿಂದಾಗಿಯೇ ತನ್ನ ಪತ್ನಿ ಮೃತಳಾಗಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.. 2004ರ ಮಹಾಚುನಾವಣೆಗೆ ಕೆಲವೇ ದಿನಗಳು ಇರುವಾಗ ಈ ಕಾಲ್ತುಳಿತ ಘಟನೆ ಸಂಭವಿಸಿತ್ತು. ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿ ಎ ಅಧಿಕಾರ ಕಳೆದುಕೊಂಡಿತ್ತು.

2006: ಬೆಂಗಳೂರು, ಹೈದರಾಬಾದ್ ಮತ್ತು ಮುಂಬೈ ನಗರಗಳಲ್ಲಿ ಮೆಟ್ರೊ ರೈಲು ಯೋಜನೆ ಆರಂಭಿಸಲು ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸಿದ್ದು, ಆಯಾ ರಾಜ್ಯ ಸರ್ಕಾರಗಳು ತತ್ ಕ್ಷಣದಿಂದಲೇ ಕಾಮಗಾರಿ ಆರಂಭಿಸಬಹುದು ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ಜೈಪಾಲ್ ರೆಡ್ಡಿ ಪ್ರಕಟಿಸಿದರು.

2006: ಸುಮಾರು 1700 ವರ್ಷಗಳಿಂದ ಕಾಣೆಯಾಗಿತ್ತು ಎನ್ನಲಾದ ಗಾಸ್ಪೆಲ್ ಆಫ್ ಜುದಾಸನ ಹಸ್ತಪ್ರತಿ ವಾಷಿಂಗ್ಟನ್ ನಲ್ಲಿ ಪತ್ತೆಯಾಯಿತು. ಮೂರು ಅಥವಾ ನಾಲ್ಕನೇ ಶತಮಾನಕ್ಕೆ ಸೇರಿದ ಈ ಹಸ್ತಪ್ರತಿಯ ಅಧಿಕೃತ, ಅನುವಾದಿತ ಪ್ರತಿಯನ್ನು ವಾಷಿಂಗ್ಟನ್ ನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಏಸು ಕ್ರಿಸ್ತ ಹಾಗೂ ಜುದಾಸ್ ಬಗ್ಗೆ ಈ ಕೃತಿ ಹೊಸ ಭಾಷ್ಯ ಬರೆದಿದೆ. ಬೈಬಲ್ಲಿನಲ್ಲಿ ಕೆಟ್ಟ ವ್ಯಕ್ತಿ ಎಂಬುದಾಗಿ ಬಿಂಬಿತನಾಗಿರುವ ಜುದಾಸ್, ಕ್ರಿಸ್ತನಿಗೆ ದ್ರೋಹ ಎಸಗಿಲ್ಲ, ಆದರೆ ಕ್ರಿಸ್ತ ಖುದ್ದಾಗಿ ತನ್ನನ್ನು ಶಿಲುಬೆಗೆ ಏರಿಸುವವರಿಗೆ ಒಪ್ಪಿಸುವಂತೆ ತನ್ನ ಶಿಷ್ಯ ಜುದಾಸನಿಗೆ ಸೂಚಿಸಿದ್ದುದಾಗಿಯೂ ಇದರಿಂದ ಜುದಾಸನಿಗೆ ಬಹಳ ವ್ಯಥೆಯಾಯಿತು ಎಂದೂ ಈ ಕೃತಿ ಹೇಳಿದೆ.

2000: ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ ಜಗತ್ತನ್ನು ದಂಗು ಬಡಿಸಿತು. ದೆಹಲಿ ಪೊಲೀಸರು ದಕ್ಷಿಣ ಆಫ್ರಿಕದ ಕ್ರಿಕೆಟ್ ಆಟಗಾರರಾದ ಹ್ಯಾನ್ಸಿ ಕ್ರೋನ್ಯೆ, ನಿಕಿ ಬೋಯೆ ಮತ್ತು ಹರ್ಶೆಲ್ ಗಿಬ್ಸ್ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗಿಗೆ ಸಂಬಂಧಿಸಿದಂತೆ ವಂಚನೆ ಹಾಗೂ ಕ್ರಿಮಿನಲ್ ಸಂಚಿನ ಆರೋಪ ಹೊರಿಸಿ ಪ್ರಕರಣಗಳನ್ನು ದಾಖಲಿಸಿದರು.

1964: ಕಾಶ್ಮೀರದ ನಾಯಕ ಷೇಕ್ ಅಬ್ದುಲ್ಲ ಅವರನ್ನು ಸೆರೆಮನೆಯಿಂದ ಬಿಡುಗಡೆ ಮಾಡಲಾಯಿತು ಹಾಗೂ ಅವರ ವಿರುದ್ಧ ಹೂಡಲಾಗಿದ್ದ ಕಾಶ್ಮೀರ ಸಂಚು ಪ್ರಕರಣವನ್ನು ಹಿಂದಕ್ಕೆ ಪಡೆಯಲಾಯಿತು.

1954: ಕಲಾವಿದ ಟಿ. ರಾಧಾಕೃಷ್ಣ ಜನನ.

1953: ಡ್ಯಾಗ್ ಹ್ಯಾಮ್ಮರ್ಷೀಲ್ಡ್ ಅವರು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು.

1948: ಜಿನೀವಾದಲ್ಲಿ ವಿಶ್ವ ಆರೋಗ್ಯ ಸಂಘಟನೆ (ವರ್ಲ್ಡ್ ಹೆಲ್ತ್ ಆರ್ಗನೈಸೇಷನ್) ಸ್ಥಾಪನೆಯಾಯಿತು.

1947: ಮಿಷಿಗನ್ನ ಡೀಯರ್ ಬಾರ್ನ್ ಸಮೀಪ ಆಟೋಮೊಬೈಲ್ ಉದ್ಯಮಿ ಹೆನ್ರಿಫೋರ್ಡ್ ತಮ್ಮ 83ನೇ ವಯಸ್ಸಿನಲ್ಲಿ ನಿಧನರಾದರು.

1942: ರವಿ ಕಪೂರ್ ಹುಟ್ಟಿದ ದಿನ. ಭಾರತೀಯ ಚಿತ್ರನಟರಾದ ಇವರು `ಜಿತೇಂದ್ರ' ಎಂಬ ಹೆಸರಿನಲ್ಲಿ ಖ್ಯಾತಿ ಪಡೆದರು.

1920: ಭಾರತದ ಖ್ಯಾತ ಸಿತಾರವಾದಕ ರವಿ ಶಂಕರ್ ಹುಟ್ಟಿದ ದಿನ.

1918: ಯಕ್ಷಗಾನದ ಮಾತಿನ ಮಾಂತ್ರಿಕ, ವೇಷಧಾರಿ, ಪ್ರಸಂಗ ಕರ್ತೃ, ಮೇಳದ ಯಜಮಾನ- ಹೀಗೆ ಹತ್ತು ಹಲವು ಪ್ರತಿಭೆಗಳ ಸಂಗಮವಾಗಿದ್ದ ಶೇಣಿ ಗೋಪಾಲಕೃಷ್ಣ ಭಟ್ (7-4-1918ರಿಂದ 18-7-2006) ಅವರು ನಾರಾಯಣ ಭಟ್ಟ- ಲಕ್ಷ್ಮೀ ಅಮ್ಮ ದಂಪತಿಯ ಮಗನಾಗಿ ಕಾಸರಗೋಡು ತಾಲ್ಲೂಕು ಕುಂಬಳೆಯ ಎಡನಾಡು ಗ್ರಾಮದಲ್ಲಿ ಜನಿಸಿದರು. ಕರ್ನಾಟಕ ಮತ್ತು ಕೇರಳ ಎರಡೂ ರಾಜ್ಯಗಳಿಂದ ರಾಜ್ಯ ಪ್ರಶಸ್ತಿ ಪಡೆದ ಯಕ್ಷಗಾನ ಕಲಾವಿದ ಎಂಬ ಹೆಗ್ಗಳಿಕೆಗೆ ಪಾತ್ರರಾದ ಶೇಣಿ ಚಿಕ್ಕಂದಿನಿಂದಲೇ ಯಕ್ಷಗಾನದಲ್ಲಿ ಆಸಕ್ತಿ ಬೆಳೆಸಿಕೊಂಡವರು. ಯಕ್ಷಗಾನದಲ್ಲಿ ಅರ್ಥ ಹೇಳುವುದರ ಜೊತೆಗೆ ಮದ್ದಲೆ ವಾದನ, ಹಾಡುಗಾರಿಕೆಯ ಜೊತೆಗೇ ಬೆಳೆದ ಸಾಹಿತ್ಯದಲ್ಲಿ ಒಲವು ಮೂಡಿಸಿಕೊಂಡ ಶೇಣಿ, ಮೇಘನಾದ, ರಾಮಾಂಜನೇಯ, ಮಾತೃಭಕ್ತಿ ಇತ್ಯಾದಿ ಯಕ್ಷಗಾನ ಪ್ರಸಂಗಗಳ ಕರ್ತೃ. ಇವರ ಕ್ಯಾಸೆಟ್ಟುಗಳೂ ಮಾರಾಟ ದಾಖಲೆ ಸ್ಥಾಪಿಸಿವೆ.

1893: ರಾಮಕೃಷ್ಣ ದಾಲ್ಮಿಯಾ (1893-1978) ಹುಟ್ಟಿದ ದಿನ. ಇವರು ಭಾರತದ ಖ್ಯಾತ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರು.

1827: ಜಾನ್ ವಾಕರ್ ಎಂಬಾತ ಸಲ್ಫರ್ ಪೆರಾಕ್ಸೈಡ್ ಬಳಿದ ಒಂದು ಯಾರ್ಡ್ ಉದ್ದದ ಕಡ್ಡಿಯನ್ನು ನಿರ್ಮಿಸಿದ. ಬಳಕೆದಾರರಿಗೆ ಅನುಕೂಲಕರವಾಗಿ ಇಲ್ಲದೇ ಹೋದರೂ ಇದು ವಿಶ್ವದ ಪ್ರಥಮ ಗೀರುಕಡ್ಡಿ (ಮ್ಯಾಚ್ ಸ್ಟಿಕ್) ಎನಿಸಿಕೊಂಡಿತು.

1770: ವಿಲಿಯಂ ವರ್ಡ್ಸ್ ವರ್ತ್ (1770-1850) ಹುಟ್ಟಿದ ದಿನ. ಈತ ಇಂಗ್ಲೆಂಡಿನ ಖ್ಯಾತ ರೊಮ್ಯಾಂಟಿಕ್ ಕವಿ.

1506: ಸೇಂಟ್ ಫ್ರಾನ್ಸಿಸ್ ಝೇವಿಯರ್ (1506-1552) ಜನ್ಮದಿನ. ಈತ ಆಧುನಿಕ ಕಾಲದ ಖ್ಯಾತ ರೋಮನ್ ಕ್ಯಾಥೋಲಿಕ್ ಪ್ರಚಾರಕ. ಭಾರತ, ಜಪಾನ್ ಮತ್ತಿತರ ರಾಷ್ಟಗಳಲ್ಲಿ ಕ್ರೈಸ್ತಧರ್ಮ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಿದ ವ್ಯಕ್ತಿ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement