Monday, May 12, 2008

'ಕಟ್ಟ' ಕಟ್ಟಲು ಸಿದ್ಧರಾಗಿ, ವಾರಣಾಶಿಗೆ ದೌಡಾಯಿಸಿ..! (Get ready to build Kattas..!)

Get ready to build Kattas..!

Kattas or small scale check dams in parts of Kerala and Karnataka are life lines of farmers and getting popularity again by efforts of Varanashi Research Foundation, Jalakoota Kasaragodu etc. These organisation with the help of Argyam of Bangalore now organised one day workshop on Kattas in Varanashi Farm at Adyanadka of Dakshina Kannada District on Sunday, 18th May 2007. Learn the skill of building Kattas as rainy season is fast approaching.


'ಕಟ್ಟ' ಕಟ್ಟಲು ಸಿದ್ಧರಾಗಿ,

ವಾರಣಾಶಿಗೆ ದೌಡಾಯಿಸಿ..!


ವಾರಣಾಶಿ ಸಂಶೋಧನಾ ಪ್ರತಿಷ್ಠಾನವು ಕಾಸರಗೋಡು ಜಲಕೂಟ ಮತ್ತು 'ಆರ್ಘ್ಯಮ್' ಸಹಯೋಗದೊಂದಿಗೆ ಮೇ 18ರ ಆದಿತ್ಯವಾರ ದಕ್ಷಿಣ ಕನ್ನಡ ಜಿಲ್ಲೆ ಅಡ್ಯನಡ್ಕದ ಸರವು ಬಳಿಯ ವಾರಣಾಶಿ ತೋಟದಲ್ಲಿ 'ಕಟ್ಟಗಳು, ಅನುಶೋಧನೆಗಳು ಮತ್ತು ವಾರಣಾಶಿ ಕಟ್ಟ' ಬಗ್ಗೆ ಒಂದು ದಿನದ ಕಾರ್ಯಾಗಾರವನ್ನು ಸಂಘಟಿಸಿದೆ.

ನೆತ್ರಕೆರೆ ಉದಯಶಂಕರ

ಹದಿನೈದು - ಇಪ್ಪತ್ತು ವರ್ಷಗಳ ಹಿಂದಿನ ನೆನಪು. ನಾನು ವಿಟ್ಲದಲ್ಲಿ ಪೇಟೆಯಿಂದ ಮನೆಯತ್ತ ಹೊರಟಿದ್ದೆ. ಎದುರಿನಿಂದ ಬರುತ್ತಿದ್ದ ಸ್ಕೂಟರ್ ಹಠಾತ್ತನೆ ನಿಂತಿತು. ನೋಡ ನೋಡುವಷ್ಟರಲ್ಲಿ ಅದರಿಂದ ಶ್ರೀ ಪಡ್ರೆ ಕೆಳಗಿಳಿದರು.

ನನಗೆ ಅಚ್ಚರಿಯ ಮೇಲೆ ಅಚ್ಚರಿ. ಅರೆ! ಶ್ರೀಪಡ್ರೆ ಇಲ್ಲೇಕೆ ಬಂದರು ಅಂತ.

ಶ್ರೀಪಡ್ರೆ ಅವರೇ ಮಾತಿಗೆ ಆರಂಭಿಸಿದರು: ಇಲ್ಲೇ ಕಡಂಬಿನಲ್ಲಿ ಒಂದು ಕಟ್ಟ ಉಂಟಲ್ಲ ಅಲ್ಲಿಗೆ ಹೋಗಿದ್ದೆ. ನೀರು ಉಳಿತಾಯದ ಎಂತಹ ಅದ್ಭುತ ವಿಧಾನ ಅಲ್ಲವೇ?'

ಹೌದು. ನಮ್ಮ ಮನೆಯಿಂದ ಹೆಚ್ಚು ಕಡಿಮೆ ಒಂದೂವರೆ ಕಿ.ಮೀ. ದೂರದಲ್ಲಿರುವ ಕಡಂಬಿನಲ್ಲಿ ಇರುವ ಕಟ್ಟವನ್ನು ನಾನು ಚಿಕ್ಕ ಹುಡುಗನಿದ್ದಾಗಿನಿಂದಲೇ ನೋಡಿದ್ದೆ. ಬಹುಶ: ನಮ್ಮ ಪರಿಸರದಲ್ಲಿ ನಾನು ಕಂಡಿದ್ದ ಏಕೈಕ ಕಟ್ಟ ಅದು. ಆ ಕಟ್ಟದ ಪರಿಣಾಮವಾಗಿ ಅಲ್ಲಿನ ಸುತ್ತ ಮುತ್ತಲಿನ ಪರಿಸರದಲ್ಲಿ ಸದಾ ಕಾಲ ಹಸಿರು ತುಂಬಿ ತುಳುಕಾಡುತ್ತಿತ್ತು.

ನನ್ನ ಅನಿಸಿಕೆ ಪ್ರಕಾರ ಶ್ರೀಪಡ್ರೆ ಅವರನ್ನು ಜಲ ಸಂರಕ್ಷಣೆ ವಿಚಾರ ತೀವ್ರವಾಗಿ ಕಾಡತೊಡಗಿದ್ದ ಕಾಲ ಅದು. ಹಾಗಾಗಿಯೇ ಅವರು ಕಟ್ಟದ ಬಗ್ಗೆ ತಿಳಿಯಲು ಕಡಂಬಿಗೆ ಬಂದಿದ್ದರು.

ಆ ಬಳಿಕ ಶ್ರೀಪಡ್ರೆ ಅವರು ಕಟ್ಟ, ಸುರಂಗ, ಮದಕ, ಇಂಗುಗುಂಡಿಗಳಿಂದ ಹಿಡಿದು ರಾಜಸ್ಥಾನದ ಟಾಂಕಾಗಳವರೆಗೂ ನೀರಿಂಗಿಸುವ, ನೀರು ಉಳಿತಾಯ ಮಾಡುವ ಪಾರಂಪರಿಕ ವ್ಯವಸ್ಥೆಗಳ ಬಗ್ಗೆ ಮಾಡಿದ ಅಧ್ಯಯನ ಅಷ್ಟಿಷ್ಟಲ್ಲ, ಬರೆದ ಲೇಖನಗಳಿಗೂ ಲೆಖ್ಖವಿಲ್ಲ.

ಏತಡ್ಕ ಕಟ್ಟ ಸೇರಿದಂತೆ ಕಾಸರಗೋಡು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜಲ ಸಾಕ್ಷರತೆಯ ಜೊತೆಗೆ ಕಟ್ಟಗಳ ಪುನರುಜ್ಜೀವನಕ್ಕೆ ನಡೆದ ಯತ್ನಗಳ ಬಗ್ಗೆ ಅವರು ಬರೆದ ಲೇಖನಗಳು ವಿಶ್ವವ್ಯಾಪಿ ಪ್ರಸಿದ್ಧಿ ಪಡೆದವು.

ಜಲ ಸಂರಕ್ಷಣೆ, ಮಳೆಕೊಯ್ಲು, ಪಾರಂಪರಿಕ ನೀರು ಉಳಿತಾಯ ವಿಧಾನಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಅವರು ಕಾಸರಗೋಡು 'ಜಲಕೂಟ'ವನ್ನೂ ಕೂಡಾ ಕಟ್ಟಿದರು. ಈ 'ಜಲಕೂಟ' ಇತರ ಸಂಘ ಸಂಸ್ಥೆಗಳನ್ನೂ ಸೇರಿಸಿಕೊಂಡು ಕಾಲ ಕಾಲಕ್ಕೆ ನೀರುಳಿತಾಯದ ಬಗ್ಗೆ ಜನ ಜಾಗೃತಿ ಮಾಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇತ್ತೀಚೆಗೆ ಕೂಟವು ಸಂಪ್ರದಾಯಿಕ ಜಲ ನೆಲ ಸಂರಕ್ಷಣಾ ವ್ಯವಸ್ಥೆಗಳ ಬಗ್ಗೆ ವಿಷಯ ಸಂಗ್ರಹಿಸಿ ಪ್ರಚಾರ ಮಾಡುವ ಕಾರ್ಯ ನಡೆಸುತ್ತಿದೆ. ಇತ್ತೀಚೆಗೆ ಮದಕಗಳ ಬಗ್ಗೆ ಪುಸ್ತಕವೊಂದನ್ನು ಪ್ರಕಟಿಸಿದೆ.

ಹಾಗೆಯೇ ಕೃಷಿಯ, ನೀರುಳಿತಾಯ, ಸಾವಯವ ಕೃಷಿ ಬಗ್ಗೆ ಆಳವಾದ ಅಧ್ಯಯನ ಸಂಶೋಧನೆಗಳನ್ನು ನಡೆಸುತ್ತಿರುವ ಇನ್ನೊಂದು ಸಂಸ್ಥೆ ದಕ್ಷಿಣ ಕನ್ನಡದ ಅಡ್ಯನಡ್ಕದ 'ವಾರಣಾಶಿ ಪ್ರತಿಷ್ಠಾನ'. ವಾರಣಾಶಿ ತೋಟವೇ ಈ ಪ್ರತಿಷ್ಠಾನದ ಕೇಂದ್ರ ಸ್ಥಾನ. ಸುಮಾರು 100 ಎಕರೆಗಳ ವಿಸ್ತೀರ್ಣದ ಈ ತೋಟದಲ್ಲಿ ವೆನಿಲ್ಲಾ, ಅಡಿಕೆ, ಕೊಕ್ಕೊ, ತೆಂಗು, ಕಾಳುಮೆಣಸು, ಗೇರು, ಬಾಳೆ, ಭತ್ತ, ತರಕಾರಿಗಳು ಇತ್ಯಾದಿ ಬೆಳೆಗಳಲ್ಲದೆ ಸ್ವಾಭಾವಿಕವಾಗಿ ಇರುವ ಕಾಡುಮರಗಳೊಂದಿಗೆ ತೇಗ, ಮಹಾಗನಿ, ಅಕೇಶಿಯಾ, ಮಾಂಜಿಯಂ, ಗಾಳಿ, ಹಲಸು, ಬಿದಿರು ಇತ್ಯಾದಿ ಮರಗಳನ್ನು ನೆಟ್ಟು ಬೆಳೆಸಲಾಗಿದೆ. ವಿವಿಧ ರೀತಿಯ ಜಲ ನೆಲ ಸಂರಕ್ಷಣಾ ಮಾದರಿಗಳನ್ನು ವಾರಣಾಶಿಯಲ್ಲಿ ಅಳವಡಿಸಲಾಗಿದೆ. ಸದ್ರಿ ಕೃಷಿಯಿಂದಾಗಿ ವಾರಣಾಶಿಯವರಿಗೆ ಕೃಷಿ ಪಂಡಿತ ಪ್ರಶಸ್ತಿ ಸಂದಿದೆ. ಕೇಂದ್ರ ಸರಕಾರದ ಮಾನ್ಯತೆ ಪಡೆದ ವಾರಣಾಶಿ ಸಂಶೋಧನಾ ಪ್ರತಿಷ್ಠಾನವು ಎ.ಪಿ.ಜೆ ಅಬ್ದುಲ್ ಕಲಾಂ ಪರಿಸರ ಪ್ರಶಸ್ತಿಯನ್ನು ಕೂಡಾ ಪಡೆದಿದೆ.

ನಾಡಿನ ನೈಸರ್ಗಿಕ ಸಂಪತ್ತನ್ನು ರಕ್ಷಿಸುವ, ಉಳಿಸುವ, ಬೆಳೆಸುವ ಕಾರ್ಯಕ್ಕೆ ನೆರವಾಗಿ, ಬೆನ್ನೆಲುಬಾಗಿ ನಿಲ್ಲುವ ಮಹತ್ತರ ಕಾಯಕಕ್ಕೆ ಇತ್ತೀಚೆಗೆ ಕೈಹಾಕಿರುವ ಚಾರಿಟಬಲ್ ಟ್ರಸ್ಟ್ ರೋಹಿಣಿ ನೀಲೇಕಣಿ ಅವರ ವೈಯಕ್ತಿಕ ದತ್ತಿ ನಿಧಿಯಿಂದ ಆರಂಭವಾದ 'ಅರ್ಘ್ಯಮ್'. ಎಲ್ಲ ನಾಗರಿಕರಿಗೆ ನೀರು ದೊರಕಿಸುವ, ಜಲ ಕ್ಷೇತ್ರದ ಸುಸ್ಥಿರ ಯೋಜನೆಗಳನ್ನು 'ಅರ್ಘ್ಯಮ್' ಪ್ರೋತ್ಸಾಹಿಸುತ್ತದೆ. ಪರಿಸರ, ಆರ್ಥಿಕ, ಸಾಮಾಜಿಕ, ತಾಂತ್ರಿಕ ಮತ್ತು ಸಾಂಸ್ಥಿಕವಾಗಿ ಸುಸ್ಥಿರವಾದ ಯೋಜನೆಗಳನ್ನು 'ಅರ್ಘ್ಯಮ್' ಬೆಂಬಲಿಸುತ್ತಿದೆ.

ತನ್ನ ಸಹಯೋಗಿ ಸಂಸ್ಥೆಗಳ ನೆರವಿನೊಂದಿಗೆ ಅದು 'ಭಾರತ ಜಲ ಪೋರ್ಟಲ್' ನ್ನು ಸ್ಥಾಪಿಸಿದೆ. ಇದು ಜಲ ಪದ್ಧತಿಗಳನ್ನು ಹಂಚಿಕೊಳ್ಳಲು ಇರುವ ಮುಕ್ತ ವೆಬ್ ಆಧಾರಿತ ವೇದಿಕೆ. ನಗರ ಜಲ ಯೋಜನೆ ಮೂಲಕ ಸಮಗ್ರ ನಗರ ಜಲ ನಿರ್ವಹಣೆಯನ್ನು ಅಭಿವೃದ್ಧಿ ಪಡಿಸಲು 'ಅರ್ಘ್ಯಮ್' ಉದ್ದೇಶಿಸಿದೆ. ಜಲ ಮತ್ತು ನೈರ್ಮಲ್ಯ ವಲಯದಲ್ಲಿ ವಿಶಿಷ್ಠ ಪರಿಣಾಮಗಳನ್ನು ರೂಪಿಸಬಲ್ಲ ಹೊಸ ತಾಂತ್ರಿಕತೆ, ಸಂಶೋಧನೆಗಳಿಗೂ 'ಅರ್ಘ್ಯಮ್' ಬೆಂಬಲ ನೀಡುತ್ತದೆ.

ವಾರಣಾಶಿ ಸಂಶೋಧನಾ ಪ್ರತಿಷ್ಠಾನವು ಕಾಸರಗೋಡು ಜಲಕೂಟ ಮತ್ತು ''ಅರ್ಘ್ಯಮ್' ಸಹಯೋಗದೊಂದಿಗೆ ಮೇ 18ರ ಆದಿತ್ಯವಾರ ದಕ್ಷಿಣ ಕನ್ನಡ ಜಿಲ್ಲೆ ಅಡ್ಯನಡ್ಕದ ಸರವು ಬಳಿಯ ವಾರಣಾಶಿ ತೋಟದಲ್ಲಿ 'ಕಟ್ಟಗಳು, ಅನುಶೋಧನೆಗಳು ಮತ್ತು ವಾರಣಾಶಿ ಕಟ್ಟ' ಬಗ್ಗೆ ಒಂದು ದಿನದ ಕಾರ್ಯಾಗಾರವನ್ನು ಸಂಘಟಿಸಿದೆ.

ಬೆಳಗ್ಗೆ 7ರಿಂದ ಸಂಜೆ 5.30ರವರೆಗಿನ ಈ ಕಾರ್ಯಾಗಾರದಲ್ಲಿ ವಾರಣಾಶಿ ಸಾವಯವ ಕೃಷಿ ತೋಟ ಹಾಗೂ ಜಲ ನೆಲ ಸಂರಕ್ಷಣಾ ವ್ಯವಸ್ಥೆ, ಸರವು ತೋಟಕ್ಕೆ ಪ್ರಯಾಣ ದಾರಿಯಲ್ಲಿ ಪೆಲತ್ತಡ್ಕ ಕಟ್ಟ ಹಾಗೂ ಸರವು ಕಟ್ಟಗಳ ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 'ಕಟ್ಟಗಳು, ಅನುಶೋಧನೆ ಮತ್ತು ವಾರಣಾಶಿ ಕಟ್ಟಗಳು' - ಪುಸ್ತಕ ಬಿಡುಗಡೆ ಆಗಲಿದೆ.

ಡಾ. ಡಿ.ಸಿ. ಚೌಟ, ಶ್ರೀಪಡ್ರೆ, ಚಂದ್ರಶೇಖರ್ ಏತಡ್ಕ, ಬಿ.ಕೆ. ಪರಮೇಶ್ವರ ರಾವ್, ಪ್ರಕಾಶ್ ಜಗತಾಪ್, ಶಿವಾನಂದ ಕಳವೆ, ಡಾ. ವಾರಣಾಶಿ ಕೃಷ್ಣಮೂರ್ತಿ ಮತ್ತು ಡಿ. ವಸಂತ ಕುಮಾರ್ ದರ್ಭೆ, ರವಿಶಂಕರ ದೊಡ್ಡಮಾಣಿ, ಡಾ. ವೀರರಾಜು, ಶಂಕರ್ ಸಾರಡ್ಕ, ಮಧುಸೂದನನ್ ನಾಯರ್ ಮಾತನಾಡಲಿದ್ದಾರೆ.

ಇಡೀ ದಿನದ ಕಾರ್ಯಕ್ರಮದಲ್ಲಿ ಪಾರಂಪರಿಕ ಕಟ್ಟಗಳು, ಏತಡ್ಕದ ಕಟ್ಟಗಳು, ಮಿತ್ತ ಬಾಗಿಲು ಕಟ್ಟಗಳು, ವನರಾಯಿ ಕಟ್ಟಗಳು, ವಾರಣಾಶಿ ಕಟ್ಟಗಳು ಬಗ್ಗೆ ಉಪನ್ಯಾಸ ಕಟ್ಟಗಳು ಮತ್ತು ಕಿಂಡಿ ಅಣೆಕಟ್ಟುಗಳ ತುಲನೆ, ಮುಕ್ತ ವಿಚಾರ ವಿನಿಮಯ ನಡೆಯಲಿದೆ.
ಕಟ್ಟದ ಬಗೆಗಿನ ಸಮಸ್ಯೆಗಳು ಮತ್ತು ಪರಿಹಾರ ಮಾರ್ಗಗಳು ಬಗ್ಗೆ, ಸರಕಾರದ ಇತಿಮಿತಿಗಳ ಬಗೆಗೂ ಚರ್ಚೆ ನಡೆಯಲಿದೆ. ಯಲ್.ಸಿ.ಡಿ. ಪ್ರೊಜೆಕ್ಟರ್ ಮೂಲಕ ಚಿತ್ರಗಳೊಂದಿಗೆ ವಿವರಣೆ ಪಾಲ್ಗೊಂಡವರಿಗೆ ಕಟ್ಟಗಳ ಬಗ್ಗೆ ವಿಶೇಷ ತಿಳುವಳಿಕೆಯನ್ನು ನೀಡಲಿದೆ.

ಬಹುಶಃ ಮಳೆ ಕೊಯ್ಲು ಹಾಗೂ ನೀರು ಉಳಿತಾಯದ ಪಾರಂಪರಿಕ ವಿಧಾನಗಳ ಬಗ್ಗೆ ಆಳವಾದ ಅರಿವು ಪಡೆಯಲು ಆಸಕ್ತರಿಗೆ ಈ ಕಾರ್ಯಾಗಾರ ಉತ್ತಮ ಅವಕಾಶ ಒದಗಿಸಲಿದೆ. ಕಾರ್ಯಾಗಾರದಲ್ಲಿ ಪಾಲ್ಗೊಳ್ಳಬಯಸುವ ಆಸಕ್ತರು ಮುಂದಾಗಿ ಪೋಸ್ಟ್ ಕಾರ್ಡ್/ ಫೋನ್/ ಇ-ಮೇಲ್ ಮೂಲಕ ಸಂಪರ್ಕಿಸುವಂತೆ ಸಂಘಟಕರು ಕೋರಿದ್ದಾರೆ.

ಸಂಪರ್ಕ ವಿಳಾಸ: ವಾರಣಾಶಿ ಸಂಶೋಧನಾ ಪ್ರತಿಷ್ಠಾನ, ಅಡ್ಯನಡ್ಕ, ದ.ಕ.- 574260. ದೂರವಾಣಿ 91-8255-270254.

ಮಿಂಚಂಚೆ: (ಇ-ಮೇಲ್): info@varanashi.com

ಅಂತರ್ಜಾಲ: http://www.varanashi.com/

No comments:

Advertisement