My Blog List

Friday, May 16, 2008

ಇಂದಿನ ಇತಿಹಾಸ History Today ಮೇ 16

ಇಂದಿನ ಇತಿಹಾಸ

ಮೇ 16

ನೇಪಾಳದ ಖ್ಯಾತ ಪರ್ವತಾರೋಹಿ ಅಪ್ಪಾ ಶೆರ್ಪಾ ಅವರು 17ನೇ ಬಾರಿಗೆ ಹಿಮಾಲಯ ಶಿಖರವನ್ನು ಹತ್ತುವ ಮೂಲಕ ತಮ್ಮದೇ ವಿಶ್ವದಾಖಲೆಯನ್ನು ಮುರಿದು ಮತ್ತೊಂದು ಇತಿಹಾಸ ನಿರ್ಮಿಸಿದರು. ಆಗ್ನೇಯ ದಿಕ್ಕಿನಿಂದ ಶಿಖರವನ್ನು ಹತ್ತಿದ ಇವರು ಈ ದಿನ ಬೆಳಗ್ಗೆ 8.30ಕ್ಕೆ (ಸ್ಥಳೀಯ ಕಾಲಮಾನ) 29,035 ಅಡಿ ಎತ್ತರ ಕ್ರಮಿಸಿ ನೂತನ ದಾಖಲೆ ನಿರ್ಮಿಸಿದರು.

2007: ನೇಪಾಳದ ಖ್ಯಾತ ಪರ್ವತಾರೋಹಿ ಅಪ್ಪಾ ಶೆರ್ಪಾ ಅವರು 17ನೇ ಬಾರಿಗೆ ಹಿಮಾಲಯ ಶಿಖರವನ್ನು ಹತ್ತುವ ಮೂಲಕ ತಮ್ಮದೇ ವಿಶ್ವದಾಖಲೆಯನ್ನು ಮುರಿದು ಮತ್ತೊಂದು ಇತಿಹಾಸ ನಿರ್ಮಿಸಿದರು. ಆಗ್ನೇಯ ದಿಕ್ಕಿನಿಂದ ಶಿಖರವನ್ನು ಹತ್ತಿದ ಇವರು ಈ ದಿನ ಬೆಳಗ್ಗೆ 8.30ಕ್ಕೆ (ಸ್ಥಳೀಯ ಕಾಲಮಾನ) 29,035 ಅಡಿ ಎತ್ತರ ಕ್ರಮಿಸಿ ನೂತನ ದಾಖಲೆ ನಿರ್ಮಿಸಿದರು. ಇವರ ತಂಡದ ಇತರ ಏಳು ಮಂದಿ ಪರ್ವತಾರೋಹಿಗಳೂ ಯಶಸ್ವಿಯಾಗಿ ಶಿಖರ ಏರಿದರು.

2007: ಮದ್ಯದ ದೊರೆ ವಿಜಯ್ ಮಲ್ಯ ಒಡೆತನದ ಯುನೈಟೆಡ್ ಸ್ಪಿರಿಟ್ , ಸ್ಕಾಟ್ ಲೆಂಡಿನ ವಿಸ್ಕಿ ತಯಾರಕ ವೈಟ್ ಅಂಡ್ ವೈಟ್ ಅಂಡ್ ಮೆಕೆಯನ್ನು 5950 ಲಕ್ಷ ಪೌಂಡುಗಳಿಗೆ (ಸುಮಾರು 4819 ಕೋಟಿ ರೂಪಾಯಿಗಳಿಗೆ) ಖರೀದಿಸಿತು.

2007: ಹೊಸದಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು ರಾಗಿಂಗ್ ಮೂಲಕ ಗೋಳು ಹುಯ್ದುಕೊಳ್ಳುವ ಹಿರಿಯ ವಿದ್ಯಾರ್ಥಿಗಳ ವಿರುದ್ಧ ತಪ್ಪದೇ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಸುಪ್ರೀಂಕೋರ್ಟ್ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಿತು.

2006: ಪಾಂಡವರು ಮತ್ತು ಕೌರವರ ನಡುವೆ ಯುದ್ಧ ನಡೆದ ಕುರುಕ್ಷೇತ್ರದ ಸಮೀಪದಲ್ಲಿ 4500 ವರ್ಷಗಳಿಗೂ ಹಳೆಯದು ಎಂದು ಅಂದಾಜು ಮಾಡಲಾದ ಇಟ್ಟಿಗೆಗಳು ಪತ್ತೆಯಾಗಿರುವುದಾಗಿ ಹರಿಯಾಣದ ಪ್ರಾಚ್ಯವಸ್ತು ಇಲಾಖೆ ಪ್ರಕಟಿಸಿತು. ಕುಶಾನ ವಂಶದ ಆಡಳಿತ ಅವಧಿಯಲ್ಲಿ ಬ್ರಹ್ಮಸಾರ ತೀರ್ಥದ ಪ್ರದೇಶದಲ್ಲಿ ಬಳಸಲಾಗಿದ್ದವೆಂದು ನಂಬಲಾಗಿರುವ ಈ ಇಟ್ಟಿಗೆಗಳು ಬ್ರಹ್ಮಸಾರ ತೀರ್ಥದಲ್ಲಿ ಹೂಳೆತ್ತುವಾಗ ಪತ್ತೆಯಾದವು.

2006: ಬಿಜೆಪಿ ನೇತೃತ್ವದ ಎನ್ ಡಿಎ ನೇತೃತ್ವದ ಪ್ರತಿಪಕ್ಷಗಳ ವಿರೋಧದ ನಡುವೆ `ಲಾಭದಾಯಕ ಹುದ್ದೆ' ಪರಿಧಿಯಿಂದ ವಿವಾದಾತ್ಮಕ ರಾಷ್ಟ್ರೀಯ ಸಲಹಾ ಮಂಡಳಿಯ ಅಧ್ಯಕ್ಷ ಸ್ಥಾನ ಸೇರಿದಂತೆ 56 ಹುದ್ದೆಗಳಿಗೆ ವಿನಾಯ್ತಿ ನೀಡುವ ಮಸೂದೆಯನ್ನು (ಸಂಸದರ ಅನರ್ಹತೆ ತಡೆ ತಿದ್ದುಪಡಿ ಮಸೂದೆ-2006) ಲೋಕಸಭೆಯಲ್ಲಿ ತೀವ್ರ ಚರ್ಚೆಯ ನಂತರ ಧ್ವನಿಮತದಿಂದ ಅಂಗೀಕರಿಸಲಾಯಿತು. ಲೋಕಸಭಾ ಸ್ಪೀಕರ್ ಸೋಮನಾಥ ಚಟರ್ಜಿ ಅವರು ಅಧ್ಯಕ್ಷರಾಗಿರುವ ಶಾಂತಿನಿಕೇತನ ಅಭಿವೃದ್ಧಿ ಪ್ರಾಧಿಕಾರ, ಸಮಾಜವಾದಿ ಪಕ್ಷದ ನಾಯಕ ಅಮರಸಿಂಗ್ ಅಧ್ಯಕ್ಷರಾಗಿರುವ ಉತ್ತರಪ್ರದೇಶ ಅಭಿವೃದ್ಧಿ ಮಂಡಲಿ, ಕೇಂದ್ರ ಗಣಿ ಖಾತೆ ರಾಜ್ಯ ಸಚಿವ ಟಿ. ಸುಬ್ರಮಣಿ ರೆಡ್ಡಿ ಅಧ್ಯಕ್ಷರಾಗಿರುವ ತಿರುಮಲ ತಿರುಪತಿ ದೇವಸ್ಥಾನಂ ಮಂಡಲಿ, ಬಿಜೆಪಿ ಸಂಸದ ವಿ.ಕೆ. ಮಲ್ಹೋತ್ರ ಅಧ್ಯಕ್ಷರಾಗಿರುವ ಅಖಿಲ ಭಾರತ ಕ್ರೀಡಾ ಮಂಡಲಿ, ಸೋನಿಯಾ ಗಾಂಧಿ ಅವರು ಅಧ್ಯಕ್ಷರಾಗಿರುವ ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ಆರ್ಟ್ಸ್, ನೆಹರು ಸ್ಮಾರಕ ಮ್ಯೂಜಿಯಂ ಮತ್ತು ಗ್ರಂಥಾಲಯ, ಜಲಿಯನ್ ವಾಲಾಬಾಗ್ ಸ್ಮಾರಕ ಟ್ರಸ್ಟುಗಳೂ ಈ ಹುದ್ದೆಗಳಲ್ಲಿ ಸೇರಿವೆ. ಆದರೆ `ಲಾಭದ ಹುದ್ದೆಯ ವಿವಾದಕ್ಕೆ ಮೂಲವಾದ ಹಾಗೂ ಜಯಾ ಬಚ್ಚನ್ ಅವರು ರಾಜ್ಯಸಭಾ ಸ್ಥಾನ ಕಳೆದುಕೊಳ್ಳಲು ಕಾರಣವಾದ ಉತ್ತರಪ್ರದೇಶ ಚಲನಚಿತ್ರ ಅಭಿವೃದ್ಧಿ ನಿಗಮವನ್ನು ಲಾಭದ ಹುದ್ದೆ ಮಸೂದೆ ವ್ಯಾಪ್ತಿಯಿಂದ ಹೊರಗಿಡಲಾಯಿತು.

2006: ಸಹಕಾರ ಕೃಷಿ ಪತ್ತಿನ ಸಂಸ್ಥೆಗಳು ರೈತರಿಗೆ ಏಪ್ರಿಲ್ ಒಂದರಿಂದ ಪೂರ್ವಾನ್ವಯ ಆಗುವಂತೆ ಶೇಕಡಾ 4ರ ಬಡ್ಡಿ ದರದಲ್ಲಿ ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲ ವಿತರಣೆ ಮಾಡಲು ರಾಜ್ಯ ಸರ್ಕಾರ ಹಿಂದಿನ ರಾತ್ರಿ ಆದೇಶ ಹೊರಡಿಸಿದ್ದು, ಉಪಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆದೇಶದ ಪ್ರತಿಗಳನ್ನು ಈದಿನ ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು.

1975: ಜಪಾನಿನ ಪರ್ವತಾರೋಹಿ ಜಂಕೋ ತಾಬೀ ಎವರೆಸ್ಟ್ ಶಿಖರವನ್ನು ತಲುಪುವ ಮೂಲಕ ಜಗತ್ತಿನ ಅತಿ ಎತ್ತರದ ಈ ಶಿಖರ ತಲುಪಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

1975: ಸಿಕ್ಕಿಂ ಭಾರತದ 22ನೇ ರಾಜ್ಯವಾಯಿತು.

1957: ಕಲಾವಿದೆ ಆಶಾ ಜನನ.

1957: ಕಲಾವಿದೆ ರಂಗಶ್ರೀ ಜನನ.

1956: ಕಲಾವಿದ ರೆಡ್ಡಪ್ಪ ಎ.ಎನ್. ಜನನ.

1929: ಹಾಲಿವುಡ್ನ ರೂಸ್ ವೆಲ್ಟ್ ಹೋಟೆಲಿನಲ್ಲಿ ಮೊತ್ತ ಮೊದಲ (ಚಲನಚಿತ್ರ) ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಅತ್ಯುತ್ತಮ ನಿರ್ಮಾಣ ಪ್ರಶಸ್ತಿ `ವಿಂಗ್ಸ್' ಚಲನಚಿತ್ರಕ್ಕೆ ಲಭಿಸಿತು. ಎಮಿಲ್ ಜೆನ್ನಿಂಗ್ಸ್ ಮತ್ತು ಜಾನೆಟ್ ಗೇನೊರ್ ಕ್ರಮವಾಗಿ ಅತ್ಯುತ್ತಮ ನಟ ಹಾಗೂ ಅತ್ಯುತ್ತಮ ನಟಿ ಪ್ರಶಸ್ತಿ ಗಳಿಸಿದರು. ಅಕಾಡೆಮಿ ಅಧ್ಯಕ್ಷ ಡಗ್ಲಾಸ್ ಫೇರ್ ಬ್ಯಾಂಕ್ಸ್ ಪ್ರಶಸ್ತಿ ಪ್ರದಾನ ಮಾಡಿದರು.

1926: ಪ್ರಜಾವಾಣಿಯ ನಿವೃತ್ತ ಸಂಪಾದಕ, ಹಿರಿಯ ಪತ್ರಕರ್ತ ವೈಎನ್ ಕೆ (1926-1999)ಅವರು ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಅಗರ ಗ್ರಾಮದಲ್ಲಿ ಈದಿನ ಜನಿಸಿದರು. ವಿದ್ಯಾರ್ಥಿಯಾಗಿದ್ದಾಗಲೇ ಪತ್ರಿಕೋದ್ಯಮದಲ್ಲಿ ಅಪಾರ ಆಸಕ್ತಿ ತಾಳಿದ್ದ `ಬಾಲಚಂದ್ರ' ಎಂಬ ಕೈಬರಹದ ಪತ್ರಿಕೆ ನಡೆಸಿದ್ದರು. ಕೆಲವು ಕಾಲ `ಕುಸುಮ' `ಕಿರಣ' ಕೈಬರಹದ ಪತ್ರಿಕೆಗಳನ್ನು ಹೊರತಂದಿದ್ದರು. ಪತ್ರಿಕೋದ್ಯಮವೂ ಸಾಹಿತ್ಯದ ಒಂದು ಭಾಗ ಎಂಬುದನ್ನು ನಿರೂಪಿಸಲು ಹೊಸ ಹೊಸ ಅಂಕಣಗಳನ್ನು ತಾವು ದುಡಿದ ಪ್ರಜಾವಾಣಿ, ಕನ್ನಡ ಪ್ರಭ ಪತ್ರಿಕೆಗಳಲ್ಲಿ ಆರಂಭಿಸಿ ಅವುಗಳ ಮೌಲ್ಯ ಹೆಚ್ಚಿಸಿದರು. ಶಬ್ದಗಳನ್ನು ಪನ್ (pun) ಮಾಡಿ ಆಡುವ ಕಲೆ ಅವರಿಗೆ ಕರಗತವಾಗಿತ್ತು. 16-10-1999 ರಂದು ಅವರು ಹೃದಯಾಘಾತದಿಂದ ನಿಧನರಾದರು.

1916: ನಟ, ನಿರ್ದೇಶಕ, ನಾಟಕಕಾರ, ರಂಗತಜ್ಞ, ರಂಗಶಿಕ್ಷಕರಾಗ್ದಿದ ಚಂದ್ರಶೇಖರ್ (16-5-1916ರಿಂದ 13-12-2000) ಅವರು ವಕೀಲ ಬೆಳವಾಡಿ ರಾಮಸ್ವಾಮಯ್ಯ- ಗುಂಡಮ್ಮ ದಂಪತಿಯ ಮಗನಾಗಿ ಹಾಸನದಲ್ಲಿ ಜನಿಸಿದರು.

1888: ಫ್ರಾಂಕ್ಲಿನ್ ಇನ್ ಸ್ಟಿಟ್ಯೂಟ್ ಆಫ್ ಫಿಲಿಡೆಲ್ಫಿಯದ ಸದಸ್ಯರ ಮುಂದೆ ಫ್ಲಾಟ್ ರೆಕಾರ್ಡಿಂಗ್ ಡಿಸ್ಕನ್ನು (ಹಾಡುವ ತಟ್ಟೆ) ಎಮಿಲ್ ಬರ್ಲೈನರ್ ಮೊತ್ತ ಮೊದಲ ಬಾರಿಗೆ ಪ್ರದರ್ಶಿಸಿದ. ಈ `ರೆಕಾರ್ಡನ್ನು' ಧ್ವನಿ ಮರು ಉತ್ಪಾದಿಸುವ ಯಂತ್ರದಲ್ಲಿ ಹಾಕಿ ಮತ್ತೆ ಧ್ವನಿಯನ್ನು ಕೇಳಬಹುದಾಗಿತ್ತು. ಈ ಧ್ವನಿ ಮರು ಉತ್ಪಾದನಾ ಯಂತ್ರವನ್ನು ಎಮಿಲ್ ಬರ್ಲೈನರ್ `ಗ್ರಾಮೋಫೋನ್' ಎಂಬುದಾಗಿ ಕರೆದ.

1831: ಆಂಗ್ಲೋ ಅಮೆರಿಕನ್ ಸಂಶೋಧಕ ಡೇವಿಡ್ ಎಡ್ವರ್ಡ್ ಹ್ಯೂಗ್ಸ್ (1831-1900) ಜನ್ಮದಿನ. ಈತ ಕಾರ್ಬನ್ ಮೈಕ್ರೋಫೋನನ್ನು ಕಂಡು ಹಿಡಿದ. ಈತನ ಈ ಸಂಶೋಧನೆ ಮುಂದೆ ದೂರವಾಣಿ ತಂತ್ರದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement