My Blog List

Friday, May 23, 2008

ಇಂದಿನ ಇತಿಹಾಸ History Today ಮೇ 23

ಇಂದಿನ ಇತಿಹಾಸ

ಮೇ 23

ಬಚೇಂದ್ರಿಪಾಲ್ ಅವರು ಎವರೆಸ್ಟ್ ಶಿಖರವನ್ನು ಏರುವ ಮೂಲಕ ಜಗತ್ತಿನ ಅತ್ಯುನ್ನತ ಶಿಖರವನ್ನು ಏರಿದ ಪ್ರಥಮ ಭಾರತೀಯ ಮಹಿಳೆ ಎಂಬ ಕೀರ್ತಿಗೆ ಭಾಜನರಾದರು.

2007: ಎಂಭತ್ತೇಳರ ಹರೆಯದ ಅಜ್ಜ ಅಬ್ದುಲ್ ಅಜೀಜ್ ಹಾರಿ ಘರತಕ್ಕರ್ ಗೆ ಮುಂಬೈ ಸರಣಿ ಬಾಂಬ್ ಸ್ಫೋಟದ ಪ್ರಕರಣಗಳ ವಿಚಾರಣೆ ನಡೆಸಿರುವ ವಿಶೇಷ ಟಾಡಾ ನ್ಯಾಯಾಲಯವು 6 ವರ್ಷಗಳ ಕಠಿಣಶಿಕ್ಷೆ ಹಾಗೂ 50,000 ರೂಪಾಯಿಗಳ ದಂಡವನ್ನು ವಿಧಿಸಿತು.

2007: ಮೊಬೈಲ್ ಫೋನಿನಲ್ಲಿ ದೂರದರ್ಶನ ಕಾರ್ಯಕ್ರಮ ವೀಕ್ಷಣೆ ಸೌಲಭ್ಯವು ಈದಿನ ನವದೆಹಲಿಯಲ್ಲಿ ಚಾಲನೆಗೊಂಡಿತು. ಇದರೊಂದಿಗೆ ದೂರದರ್ಶನವು ತನ್ನ ಸಾಧನೆಗೆ ಮತೊಂದು ಗರಿ ಸೇರಿಸಿಕೊಂಡಿತು.

2007: ತಮಿಳುನಾಡಿನ ತಿರುಪುರದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಾರ್ಖಾನೆಯೊಂದರ ಗೋಡೆಯು ಪಕ್ಕದ ಸಾರಾಯಿ ಅಂಗಡಿ ಮೇಲೆ ಕುಸಿದು ಬಿದ್ದು 27 ಜನ ಮೃತರಾಗಿ ಇತರ ಐವರು ಗಾಯಗೊಂಡರು.

2007: ಮಾಹಿತಿ ಹಕ್ಕು ಅಧಿನಿಯಮವನ್ನು ಕಟ್ಟು ನಿಟ್ಟಾಗಿ ಅನುಷ್ಠಾನಗೊಳಿಸುವ ಸಲುವಾಗಿ ಕರ್ನಾಟಕ ಶಿಕ್ಷಣ ಇಲಾಖೆಯು `ಇ- ಆಡಳಿತ ವಿಭಾಗ'ದ ವತಿಯಿಂದ `ಕೇಂದ್ರೀಕೃತ ಶಿಕ್ಷಣ ಇಲಾಖೆ'ಯ ಮಾಹಿತಿ ಕೇಂದ್ರವನ್ನು ಆರಂಭಿಸಿತು.

2007: ಪ್ರೊಬೆಬಿಲಿಟಿ ಸಿದ್ಧಾಂತದ ಮೇಲೆ ಸಂಶೋಧನೆ ನಡೆಸಿದ ಓಸ್ಲೋದ ಭಾರತೀಯ ಮೂಲದ ಅಧ್ಯಾಪಕ 67 ವರ್ಷದ ಶ್ರೀನಿವಾಸ ವರದನ್ ಅವರಿಗೆ ಒಂದು ದಶಲಕ್ಷ ಡಾಲರ್ ಮೊತ್ತದ ಬಹುಮಾನ ದೊರಕಿತು. ಈ ಬಹುಮಾನದ ಬಹುತೇಕ ಹಣವನ್ನು ಅವರು ಚೆನ್ನೈ ಬಳಿಯಲ್ಲಿರುವ ತಮ್ಮ ತವರೂರು ತಂಬರಂನಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಬಳಸುವುದಾಗಿ ಪ್ರಕಟಿಸಿದರು. ವರದನ್ ಅವರು ಮುಂದೆ ನಡೆಯಬಹುದಾದ ಅಪಘಾತಗಳ ಸಂಖ್ಯೆಯನ್ನು ಅಂದಾಜು ಮಾಡಲು ಕಾರು ವಿಮಾ ಕಂಪೆನಿಗಳಿಗೆ ನೆರವಾಗುವುದರಿಂದ ಹಿಡಿದು, ನೂರು ವರ್ಷಗಳ ಕಾಲ ಸಮುದ್ರದ ಅಲೆಗಳ ಹೊಡೆತವನ್ನು ಸಹಿಸಿಕೊಳ್ಳುವ ತೈಲ ಘಟಕ ಸ್ಥಾಪನೆಯವರೆಗೆ ಬಳಸಲು ಸಾಧ್ಯವಾಗುವಂತೆ ಪ್ರೊಬೆಬಿಲಿಟಿ ಸಿದ್ಧಾಂತವನ್ನು ರೂಪಿಸಿದ್ದರು.

2006: ವೈದ್ಯ ವಿದ್ಯಾರ್ಥಿಗಳು ಮತ್ತು ಇತರ ವಿದ್ಯಾರ್ಥಿಗಳ ಮೀಸಲು ವಿರೋಧಿ ಮುಷ್ಕರವನ್ನು ನಿರ್ಲಕ್ಷಿಸಿ, 2007ರ ಜೂನ್ ತಿಂಗಳಿನಿಂದ ಉನ್ನತ ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಶೇಕಡಾ 27ರಷ್ಟು ಮೀಸಲಾತಿ ಜಾರಿಗೊಳಿಸಲು ಕೇಂದ್ರದ ಯುಪಿಎ ಸರ್ಕಾರ ನಿರ್ಧರಿಸಿತು. ಸಾಮಾನ್ಯ ವರ್ಗಕ್ಕೆ ತೊಂದರೆಯಾಗದಂತೆ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಲೂ ಅದು ತೀರ್ಮಾನಿಸಿತು. ಯುಪಿಎ ಸಮನ್ವಯ ಸಮಿತಿ ಸಭೆಯಲ್ಲಿ ಎಡಪಕ್ಷಗಳು ಸರ್ಕಾರದ ಕ್ರಮವನ್ನು ಸಂಪೂರ್ಣವಾಗಿ ಬೆಂಬಲಿಸಿದ ಹಿನ್ನೆಲೆಯಲ್ಲಿ ಆಳುವ ಮೈತ್ರಿಕೂಟ ಈ ನಿರ್ಧಾರಕ್ಕೆ ಬಂದಿತು.

2006: ವಿಶ್ವದ ಅತಿ ಎತ್ತರದ ಎವರೆಸ್ಟ್ ಪರ್ವತ ಶಿಖರವನ್ನು ಏರಿದ ವಯೋವೃದ್ಧ 70 ವರ್ಷದ ಜಪಾನಿ ಪರ್ವತಾರೋಹಿ ಟಕೊವ್ ಅರಯಾಮ ಅವರಿಗೆ ಕಠ್ಮಂಡುವಿನಲ್ಲಿ ಟಿಬೆಟ್ ಸ್ವಾಯತ್ತ ಪ್ರಾಂತ್ಯದ ಚೀನಾ ಪರ್ವತಾರೋಹಣ ಸಂಘ ಈ ಸಂಬಂಧ ಪ್ರಮಾಣಪತ್ರ ನೀಡಿತು.

1999: `ಸ್ಟಾರ್ ವಾರ್ ಎಪಿಸೋಡ್ 1: ದಿ ಫ್ಯಾಂಟಮ್ ಮೆನೇಸ್' ಚಲನಚಿತ್ರವು ಐದು ದಿನಗಳಲ್ಲಿ 100 ಮಿಲಿಯನ್ ಡಾಲರುಗಳಿಗೂ ಹೆಚ್ಚು ಆದಾಯ ಗಳಿಸಿದ ಪ್ರಥಮ ಚಲನ ಚಿತ್ರವಾಯಿತು.

1984: ಬಚೇಂದ್ರಿಪಾಲ್ ಅವರು ಎವರೆಸ್ಟ್ ಶಿಖರವನ್ನು ಏರುವ ಮೂಲಕ ಜಗತ್ತಿನ ಅತ್ಯುನ್ನತ ಶಿಖರವನ್ನು ಏರಿದ ಪ್ರಥಮ ಭಾರತೀಯ ಮಹಿಳೆ ಎಂಬ ಕೀರ್ತಿಗೆ ಭಾಜನರಾದರು.

1952: ಸಿ.ಡಿ. ದೇಶಮುಖ್ ಅವರು ತಮ್ಮ ಆರು ಮುಂಗಡಪತ್ರಗಳ ಪೈಕಿ ಮೊದಲನೆಯ ಮುಂಗಡಪತ್ರವನ್ನು ಭಾರತದ ಸಂಸತ್ತಿನಲ್ಲಿ ಮಂಡಿಸಿದರು. ಇದು ಭಾರತದ ಸಂಸತಿನಲ್ಲಿ ಮಂಡನೆಯಾದ ಮೊತ್ತ ಮೊದಲನೆಯ ಮುಂಗಡಪತ್ರ.

1934: `ಬೋನಿ' ಮತ್ತು `ಗ್ಲೈಡ್' ಎಂದೇ ಪರಿಚಿತರಾಗಿದ್ದ ಅಮೆರಿಕದ ಕುಖ್ಯಾತ ಅಪರಾಧಿಗಳಾದ ಬೋನಿ ಪಾರ್ಕರ್ ಮತ್ತು ಗ್ಲೈಡ್ ಬ್ಯಾರೋ ಲೌಸಿಯಾನಾ ಸಮೀಪದ ಗಿಬ್ ಲ್ಯಾಂಡಿನಲ್ಲಿ ನಡೆದ ಘರ್ಷಣೆಯೊಂದರಲ್ಲಿ ಮೃತರಾದರು.

1926: ಮೃದಂಗ ಹಾಗೂ ಘಟಂ ವಾದನದಲ್ಲಿ ಖ್ಯಾತರಾಗಿರುವ ಕೆ.ಎನ್. ಕೃಷ್ಣಮೂರ್ತಿ ಅವರು ಕೆ.ಕೆ. ನಾರಾಯಣನ್ ಅಯ್ಯರ್- ಪಾರ್ವತಿ ಅಮ್ಮಾಳ್ ದಂಪತಿಯ ಮಗನಾಗಿ ಪಾಲ್ಘಾಟಿನ ಕೊಯಲ್ ಮನ್ನಂ ಗ್ರಾಮದಲ್ಲಿ ಜನಿಸಿದರು.

1734: ಫ್ರಾಂಜ್ ಆಂಟನ್ ಮೆಸ್ಮರ್ (1734-1815) ಜನ್ಮದಿನ. ಈಗ `ಹಿಪ್ನಾಟಿಸಂ' ಹೆಸರಿನಲ್ಲಿ ಜನಪ್ರಿಯವಾಗಿರುವ ಸಮ್ಮೋಹಿನಿಯನ್ನು `ಮೆಸ್ಮರಿಸಂ' ಹೆಸರಿನಲ್ಲಿ ಖ್ಯಾತಿಗೆ ತಂದಿದ್ದ ಜರ್ಮನಿಯ ವೈದ್ಯನೀತ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement