Wednesday, May 28, 2008

ಇಂದಿನ ಇತಿಹಾಸ History Today ಮೇ 28

ಇಂದಿನ ಇತಿಹಾಸ

ಮೇ 28

ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ ಸಾವರ್ಕರ್ (1883-1966) ಜನ್ಮದಿನ.

2007: ಎರಡನೇ ಮಹಾಯುದ್ಧ ಕಾಲದಲ್ಲಿ ಜಪಾನ್ ಸೈನಿಕ ಹಾರಿಸಿದ್ದ ಗುಂಡು ಹೊಕ್ಕು 64 ವರ್ಷಗಳಿಂದ ತಲೆನೋವಿನಿಂದ ನರಳುತ್ತಿದ್ದ ಚೀನೀ ಮಹಿಳೆಯ ತಲೆಯಿಂದ ಗುಂಡನ್ನು ವೈದ್ಯರು ಕೊನೆಗೂ ಹೊರತೆಗೆದರು. 1943ರಲ್ಲಿ ತನ್ನ ತಾತನನ್ನು ನೋಡಲು ಹೊಗ್ಲು ಪ್ರಾಂತ್ಯಕ್ಕೆ ತೆರಳಿದ ಸಂದರ್ಭದಲ್ಲಿ ಜಪಾನಿ ಸೇನಾಪಡೆಯವನೊಬ್ಬ ಹಾರಿಸಿದ ಗುಂಡು ಜಿನ್ ಗುಂಜಿಂಗ್ (77) ತಲೆಗೆ ಹೊಕ್ಕು ಆಕೆ ಪ್ರಜ್ಞೆ ಕಳೆದುಕೊಂಡಿದ್ದಳು. ಬಳಿಕ ಅಸಭ್ಯ ಮಾತುಗಳೊಂದಿಗೆ ನಿರಂತರ ತಲೆ ನೋವು ಅನುಭವಿಸುತ್ತಿದ್ದಳು. ಮಾನಸಿಕವಾಗಿ ಅಸ್ವಸ್ಥಗೊಂಡಿದ್ದಳು.

2007: ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದ ಜಪಾನಿನ ಕೃಷಿ ಸಚಿವ ತೊಷಿಕಾತ್ಸು ಮಾತ್ಸುಕಾ (62) ಆತ್ಮಹತ್ಯೆ ಮಾಡಿಕೊಂಡರು. ನೇಣು ಹಾಕಿಕೊಳ್ಳಲು ಯತ್ನಿಸಿ ಮನೆಯಲ್ಲಿ ಪ್ರಜ್ಞಾಹೀನರಾಗಿ ಬಿದ್ದಿದ್ದ ಮಾತ್ಸುಕಾ ಅವರನ್ನು ಟೋಕಿಯೋದ ಕಿಯೋ ವಿವಿ ಆಸ್ಪತ್ರೆಗೆ ತಂದಾಗ ಪ್ರಾಣ ಹಾರಿಹೋಗಿತ್ತು.

2007: ಆದಾಯಕ್ಕೂ ಮೀರಿ ಆಸ್ತಿ ಹೊಂದಿದ ಆರೋಪ ಹೊತ್ತಿರುವ ಮಾಜಿ ಸಿಕ್ಕಿಂ ಮುಖ್ಯಮಂತ್ರಿ ಎನ್. ಬಿ. ಭಂಡಾರಿ ಅವರಿಗೆ ವಿಶೇಷ ಸಿಬಿಐ ನ್ಯಾಯಾಲಯವು ಒಂದು ತಿಂಗಳ ಕಾರಾಗೃಹ ಶಿಕ್ಷೆ ಮತ್ತು 5000 ರೂಪಾಯಿಗಳ ದಂಡ ವಿಧಿಸಿ ತೀರ್ಪು ನೀಡಿತು. ಸಿಕ್ಕಿಂ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಭಂಡಾರಿ ಅವರು ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತಮ್ಮ ಆದಾಯ ಮೀರಿ 15.22 ಲಕ್ಷ ರೂಪಾಯಿಗಳಷ್ಟು ಅಕ್ರಮ ಆಸ್ತಿ ಸಂಪಾದಿಸಿದ್ದನ್ನು ಸಿಬಿಐ ಪತ್ತೆ ಹಚ್ಚಿತ್ತು.

2007: ಶ್ರವಣಬೆಳಗೊಳದ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಸಂಶೋಧನ ಸಂಸ್ಥೆಯ ನಿಯೋಜಿತ ನಿರ್ದೇಶಕ ಡಾ. ಪ್ರೇಮ ಸುಮನ್ ಜೈನ್ ಅವರು 35 ವರ್ಷಗಳಿಂದ ಪಾಲಿ, ಪ್ರಾಕೃತ ಭಾಷೆಯ ಶೈಕ್ಷಣಿಕ ಮತ್ತು ಸಂಶೋಧನ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಂದ ರಾಷ್ಟ್ರೀಯ ಗೌರವ ಪುರಸ್ಕಾರ ಪಡೆದರು.

2007: ಸ್ತನ ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ವಂಶವಾಹಿಗಳನ್ನು (ಜೀನ್ಸ್) ಪತ್ತೆ ಹಚ್ಚುವಲ್ಲಿ ತಾವು ಯಶಸ್ವಿಯಾಗಿರುವುದಾಗಿ ಕ್ಯಾನ್ಸರ್ ತಜ್ಞ ಕರೋಲ್ ಸಿಕೋರ ನೇತೃತ್ವದ ವಿಜ್ಞಾನಿಗಳ ತಂಡವೊಂದು ಲಂಡನ್ನಿನಲ್ಲಿ ಪ್ರಕಟಿಸಿತು. ಮಹಿಳೆಯರಲ್ಲಿ ಸ್ತನ ಕ್ಯಾನ್ಸರಿಗೆ ಕಾರಣವಾಗುವ ಕನಿಷ್ಠ ನಾಲ್ಕು ವಂಶವಾಹಿಗಳನ್ನು ತಾವು ಪತ್ತೆ ಹಚ್ಚಿರುವುದಾಗಿ ಈ ವಿಜ್ಞಾನಿಗಳು `ನೇಚರ್ ಅಂಡ್ ನೇಚರ್ ಜೆನೆಟಿಕ್ಸ್' ಪತ್ರಿಕೆಯ ಆನ್ ಲೈನ್ ಆವೃತ್ತಿಯಲ್ಲಿ ಪ್ರಕಟಿಸಿದರು. ವಂಶವಾಹಿ ವಿಜ್ಞಾನದಲ್ಲಿ ಇದೊಂದು ಮಹತ್ವದ ಮುನ್ನಡೆ.

2007: ಎಂಜಿನಿಯರಿಂಗ್ ಶಿಕ್ಷಣದ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಶ್ವ ವಿದ್ಯಾಲಯವು (ವಿಟಿಯು) ತನ್ನ ವಾಪ್ತಿಗೆ ಒಳಪಟ್ಟ ಕಾಲೇಜುಗಳ ವಿದ್ಯಾರ್ಥಿಗಳಿಗೆ ಯಾವುದೇ ಭದ್ರತೆಯ ಆವಶ್ಯಕತೆ ಇಲ್ಲದೆ 4 ಲಕ್ಷ ರೂಪಾಯಿಗಳವರೆಗೆ ಸಾಲ ನೀಡಲು ನಿರ್ಧರಿಸಿತು. ವಿಟಿಯು ಕುಲಪತಿ ಡಾ. ಕೆ. ಬಾಲವೀರರೆಡ್ಡಿ ಈ ವಿಚಾರ ಪ್ರಕಟಿಸಿದರು.

2007: ಉಡುಪಿ ಜಿಲ್ಲೆಯ ಮೂಳೂರು ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮದುವೆಗೆ ಹೊರಟಿದ್ದ ವ್ಯಾನೊಂದು ಅಪಘಾತಕ್ಕೆ ಈಡಾದ ಪರಿಣಾಮವಾಗಿ 7 ಮಕ್ಕಳು, 9 ಮಹಿಳೆಯರು ಸೇರಿ ಒಟ್ಟು 17 ಜನ ಮೃತರಾದರು.

2007: ಸುಂದರಗಢ ಜಿಲ್ಲೆಯ ಖಂದಧರ್ ಬೆಟ್ಟಗಳಲ್ಲಿ ಸಮೀಕ್ಷೆ ಕಾಲದಲ್ಲಿ ಅವಯವ ರಹಿತ ಹಲ್ಲಿಗಳನ್ನು ಪತ್ತೆ ಹಚ್ಚಿದುದಾಗಿ ಒರಿಸ್ಸಾ ಪ್ರಾಣಿಶಾಸ್ತ್ರಜ್ಞರ ತಂಡ ಪ್ರಕಟಿಸಿತು.

2006: ಫಿಲಿಪ್ಪೀನ್ಸಿನ ರಾಜಧಾನಿ ಮನಿಲಾ ಸಮೀಪದ ಫೆಸಿಗ್ ನಗರದಲ್ಲಿ ಈದಿನ ಮುಕ್ತಾಯಗೊಂಡ ನಾಲ್ಕು ಸ್ಟಾರ್ ಫಿಲಿಪ್ಪೀನ್ಸ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ಪಿನ ಫೈನಲ್ಲಿನಲ್ಲಿ ಪ್ರಶಸ್ತಿ ಗೆದ್ದ ನೈನಾ ನೆಹ್ವಾಲ್ ರಾಷ್ಟ್ರದ ಬ್ಯಾಡ್ಮಿಂಟನ್ ರಂಗದ ದಾಖಲೆಯ ಪುಟದಲ್ಲಿ ತಮ್ಮ ಹೆಸರು ಸೇರ್ಪಡೆ ಮಾಡಿದರು.

1998: ಭಾರತದ ಅಣ್ವಸ್ತ್ರ ಪರೀಕ್ಷೆಗಳಿಗೆ ಪ್ರತಿಯಾಗಿ ಪಾಕಿಸ್ತಾನ ಐದು ಅಣ್ವಸ್ತ್ರಗಳನ್ನು ಸ್ಫೋಟಿಸಿತು. ಇದನ್ನು ಅನುಸರಿಸಿ ಅಮೆರಿಕ, ಜಪಾನ್ ಮತ್ತು ಇತರ ರಾಷ್ಟ್ರಗಳು ಪಾಕಿಸ್ತಾನದ ವಿರುದ್ಧ ಆರ್ಥಿಕ ದಿಗ್ಬಂಧನ ಹೇರಿದವು.

1997: ಮಾಜಿ ಕೇಂದ್ರ ಸಚಿವರಾದ ಅರ್ಜುನ್ ಸಿಂಗ್, ಎನ್.ಡಿ. ತಿವಾರಿ, ಆರ್.ಕೆ. ಧವನ್ ಮತ್ತು ಮಾಧವರಾವ್ ಸಿಂಧಿಯಾ ಅವರನ್ನು ವಿ.ಬಿ. ಗುಪ್ತ ನೇತೃತ್ವದ ವಿಶೇಷ ನ್ಯಾಯಾಲಯವು ಜೈನ್ ಹವಾಲಾ ಹಗರಣದಿಂದ ಮುಕ್ತಗೊಳಿಸಿತು.

1964: ಪ್ಯಾಲಸ್ತೈನ್ ಲಿಬರೇಶನ್ ಆರ್ಗನೈಸೇಷನ್ (ಪಿಎಲ್ಒ) ಸ್ಥಾಪನೆಗೊಂಡಿತು.

1961: ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ಜನಾಭಿಪ್ರಾಯ ರೂಪಿಸಲು ಮತ್ತು ರಾಜಕೀಯ ಕೈದಿಗಳ ಬಿಡುಗಡೆಗೆ ಒತ್ತಾಯಿಸಲು ಬ್ರಿಟಿಷ್ ವಕೀಲ ಪೀಟರ್ ಬೆನೆನ್ಸನ್ ಲಂಡನ್ನಿನಲ್ಲಿ `ಅಮ್ನೆಸ್ಟಿ ಇಂಟರ್ ನ್ಯಾಷನಲ್' ಸಂಘಟನೆಯನ್ನು ಸ್ಥಾಪಿಸಿದರು. ಶಾಂತಿ, ನ್ಯಾಯ ಮತ್ತು ಜಗತ್ತಿನಲ್ಲಿ ಶಾಂತಿ ಸ್ಥಾಪನೆಗೆ ನೆಲೆಗಟ್ಟು ಒದಗಿಸಲು ಸಲ್ಲಿಸಿದ ಸೇವೆಗಾಗಿ ಈ ಸಂಘಟನೆಗೆ 1977ರ ನೊಬೆಲ್ ಪ್ರಶಸ್ತಿ ಲಭಿಸಿತು.

1930: ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗವತಿ ಚರಣ ವೋಹ್ರಾ ನಿಧನರಾದರು.

1906: ಸಾಹಿತಿ, ಕಾದಂಬರಿಕಾರ, ನಾಟಕಕಾರ ಕೆ. ವೆಂಕಟರಾಮಪ್ಪ (28-5-1906 ರಿಂದ 2-9-1991) ಅವರು ಸುಬ್ಬಾಶಾಸ್ತ್ರಿ- ಸಾವಿತ್ರಮ್ಮ ದಂಪತಿಯ ಪುತ್ರನಾಗಿ ಈ ದಿನ ಜನಿಸಿದರು. ಕರ್ನಾಟಕ ಸಾಹಿತ್ಯ ಪರಿಷತ್ ವೆಂಕಟರಾಮಪ್ಪ ಅವರ ವಿದ್ವತ್ತನ್ನು ಗುರುತಿಸಿ 1986ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿತ್ತು.

1923: ತೆಲುಗು ಚಿತ್ರನಟ, ತೆಲುಗುದೇಶಂ ಪಕ್ಷದ ಸ್ಥಾಪಕ, ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಟಿ. ರಾಮರಾವ್ (1923-96) ಜನ್ಮದಿನ.

1883: ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ ಸಾವರ್ಕರ್ (1883-1966) ಜನ್ಮದಿನ.

1865: `ಬ್ರೋಚೆವಾರೆವರುರಾ' ಕೃತಿ ರಚಿಸಿದ ಖ್ಯಾತ ಸಂಗೀತಗಾರ ಮೈಸೂರು ವಾಸುದೇವಾಚಾರ್ಯ (28-5-1865ರಿಂದ 17-5-1961) ಅವರು ಸುಬ್ರಹ್ಮಣ್ಯಾಚಾರ್ಯ- ಕೃಷ್ಣಾಬಾಯಿ ದಂಪತಿಯ ಮಗನಾಗಿ ಮೈಸೂರಿನಲ್ಲಿ ಜನಿಸಿದರು.

1759: ವಿಲಿಯಂ ಪಿಟ್ ಜನ್ಮದಿನ (1759-1806). ಈತ ಅತ್ಯಂತ ಕಿರಿಯ ಬ್ರಿಟಿಷ್ ಪ್ರಧಾನಿ. 1783ರಲ್ಲಿ ಪ್ರಧಾನಿಯಾದಾಗ ಈತನಿಗೆ 24 ವರ್ಷ ವಯಸ್ಸು. ಈತ ಪ್ರಧಾನಿ ಸ್ಥಾನಕ್ಕೆ ತಂದೆಯ ಉತ್ತರಾಧಿಕಾರಿಯಾಗಿ ಆಯ್ಕೆಯಾದ ಮೊತ್ತ ಮೊದಲ ವ್ಯಕ್ತಿ ಕೂಡಾ.

1738: ಜೋಸೆಫ್ ಗಿಲೋಟಿನ್ (1738-1814) ಹುಟ್ಟಿದ ದಿನ. ಫ್ರಾನ್ಸಿನ `ತಲೆ ಕಡಿಯುವ ಯಂತ್ರ'ಕ್ಕೆ ಈ ವ್ಯಕ್ತಿಯ ಹೆಸರನ್ನೇ ಇಡಲಾಯಿತು. ಇಂತಹ ಯಂತ್ರದ ಬಗ್ಗೆ ಬೋಧಿಸುತ್ತಿದ್ದ ಹಿನ್ನೆಲೆಯಲ್ಲಿ ಈತನ ಹೆಸರನ್ನು ಅದಕ್ಕೆ ನೀಡಲಾಯಿತು. ಆದರೆ ಈ ಯಂತ್ರ ಆತನ ಸಂಶೋಧನೆಯಲ್ಲ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement