Friday, May 30, 2008

ಇಂದಿನ ಇತಿಹಾಸ History Today ಮೇ 30

ಇಂದಿನ ಇತಿಹಾಸ

ಮೇ 30

ಚಲನಚಿತ್ರೋದ್ಯಮ ರಂಗದಲ್ಲಿ `ಸ್ನೇಹಲ್ ಭಾಟ್ಕರ್' ಎಂದೇ ಖ್ಯಾತರಾಗಿದ್ದ ಗಾಯಕ ವಾಸುದೇವ ಗೋವಿಂದ ಭಾಟ್ಕರ್ (88) ಹೃದಯಾಘಾತದಿಂದ ನಿಧನರಾದರು. ಭಾಟ್ಕರ್ ಅವರು ಹಿಂದಿ ಮತ್ತು ಮರಾಠಿ ಚಿತ್ರಗಳಿಗೆ ಹಲವಾರು ಜನಪ್ರಿಯ ಹಾಡುಗಳನ್ನು ರಚಿಸಿದ್ದರು.

2007: ಭಾಷಾ ಮಾಧ್ಯಮದ ಉಲ್ಲಂಘನೆಯ ಆರೋಪದಿಂದ ಮಾನ್ಯತೆ ಕಳೆದುಕೊಂಡ 2215 ಖಾಸಗಿ ಶಾಲೆಗಳು ಇನ್ನು ಮುಂದೆ ತಾವು ಅನುಮತಿ ಪಡೆದಿರುವ ಮಾಧ್ಯಮದಲ್ಲಿಯೇ ಬೋಧಿಸುವಂತೆ ವಾರದ ಹಿಂದೆ ನೀಡಿದ ಆದೇಶದಲ್ಲಿ ಮಾರ್ಪಾಡು ಮಾಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿತು.

2007: ಅಡುಗೆ ಅರಿಶಿಣದಿಂದ ಕ್ಯಾನ್ಸರ್ ಗುಣಪಡಿಸಬಹುದು ಎಂಬುದನ್ನು ತಾನು ಪತ್ತೆ ಹಚ್ಚಿರುವುದಾಗಿ ಆದಿ ಚುಂಚನಗಿರಿ ಮಹಾಸಂಸ್ಥಾನದ ಕ್ಯಾನ್ಸರ್ ಸಂಶೋಧನಾ ಸಂಸ್ಥೆ ಪ್ರಕಟಿಸಿತು. ಕ್ಯಾನ್ಸ ರಿಗಷ್ಟೇ ಅಲ್ಲ ಹಾವು ಕಡಿತಕ್ಕೂ ಅಡುಗೆ ಅರಿಶಿಣ ಮದ್ದು ಎಂಬುದು ಸಂಶೋಧನೆಯಿಂದ ದೃಢಪಟ್ಟಿದೆ ಎಂದು ಸಂಶೋಧಕಿ ಡಾ. ಲೀಲಾ ಶ್ರೀನಿವಾಸನ್ ಅವರು ಬೆಂಗಳೂರಿನಲ್ಲಿ ಆದಿ ಚುಂಚನಗಿರಿ ಮಠದಲ್ಲಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಸಮ್ಮುಖದಲ್ಲಿ ಪ್ರಕಟಿಸಿದರು.

2007: ಮಹಿಳೆಯರು ಹಾನಿಕಾರಕ ಪ್ಲಾಸ್ಟಿಕ್ ಸ್ಟಿಕರ್ಸ್ ಗಳಿಗೆ (ಟಿಕಲಿ) ಬದಲಾಗಿ ಬಳಸಹುದಾದ ನಂಜುಮುಕ್ತ, ಪರಿಸರ ಸ್ನೇಹಿ ನೈಸರ್ಗಿಕ ಸಿಂಧೂರವನ್ನು ಅವಿಷ್ಕರಿಸಿರುವುದಾಗಿ ಲಖನೌ ಮೂಲದ ರಾಷ್ಟ್ರೀಯ ಸಸ್ಯ ಸಂಶೋಧನಾ ಸಂಸ್ಥೆ (ಎನ್ಬಿಆರ್ಐ) ಪ್ರಕಟಿಸಿತು.

2007: ಗುರ್ಜರ ಜನಾಂಗವನ್ನು ಪರಿಶಿಷ್ಟರ ಪಟ್ಟಿಗೆ ಸೇರಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿ ಪ್ರತಿಭಟನೆ ಮಾಡಿದವರ ಮೇಲೆ ಪೊಲೀಸರು ಗೋಲಿಬಾರ್ ಮಾಡ್ದಿದನ್ನು ಖಂಡಿಸಿ ಗುರ್ಜರ ಮೀಸಲಾತಿ ಕ್ರಿಯಾ ಸಮಿತಿ ಕರೆಯ ಮೇರೆಗೆ ರಾಜಸ್ಥಾನದ ವಿವಿಧ ಪ್ರದೇಶಗಳಲ್ಲಿ ಸಂಪೂರ್ಣ ಬಂದ್ ಆಚರಿಸಲಾಯಿತು. ದೌಸಾ ಜಿಲ್ಲೆಯ ದುಬಿ ಮತ್ತು ಸಿಕಂದ್ರಾದಲ್ಲಿ ಎರಡು ಪೊಲೀಸ್ ಠಾಣೆಗಳಿಗೆ ಉದ್ರಿಕ್ತರು ಕಿಚ್ಚಿಟ್ಟರು.

2007: ಚಲನಚಿತ್ರೋದ್ಯಮ ರಂಗದಲ್ಲಿ `ಸ್ನೇಹಲ್ ಭಾಟ್ಕರ್' ಎಂದೇ ಖ್ಯಾತರಾಗಿದ್ದ ಗಾಯಕ ವಾಸುದೇವ ಗೋವಿಂದ ಭಾಟ್ಕರ್ (88) ಹೃದಯಾಘಾತದಿಂದ ನಿಧನರಾದರು. ಭಾಟ್ಕರ್ ಅವರು ಹಿಂದಿ ಮತ್ತು ಮರಾಠಿ ಚಿತ್ರಗಳಿಗೆ ಹಲವಾರು ಜನಪ್ರಿಯ ಹಾಡುಗಳನ್ನು ರಚಿಸಿದ್ದರು.

2006: ರಾಷ್ಟ್ರೀಯ ಸಲಹಾ ಮಂಡಳಿ ಅಧ್ಯಕ್ಷ ಹುದ್ದೆ ಸೇರಿದಂತೆ 56 ಹುದ್ದೆಗಳನ್ನು `ಲಾಭದಾಯಕ' ವ್ಯಾಪ್ತಿಯಿಂದ ಹೊರಗಿಡುವ ಮಸೂದೆಯನ್ನು ರಾಷ್ಟ್ರಪತಿ ಅಬ್ದುಲ್ ಕಲಾಂ ವಾಪಸ್ ಕಳುಹಿಸಿದರು. ಸಂಸದರು ಮತ್ತು ಶಾಸಕರನ್ನು `ಲಾಭದ ಹುದ್ದೆ' ವಿವಾದದಿಂದ ಪಾರುಮಾಡಲು ಯತ್ನಿಸಿದ್ದ ಕೇಂದ್ರ ಸರ್ಕಾರಕ್ಕೆ ರಾಷ್ಟ್ರಪತಿ ಕ್ರಮದಿಂದ ಹಿನ್ನಡೆಯಾಯಿತು.

2006: ಭಾರತದ ಗೌರಿ ಶಂಕರ್ ಅವರು ಚಿಕಾಗೊ ಅಂತಾರಾಷ್ಟ್ರೀಯ ಓಪನ್ ಚೆಸ್ ಚಾಂಪಿಯನ್ ಶಿಪ್ ನಲ್ಲಿ ಮೊದಲ ಸ್ಥಾನ ಪಡೆದುಕೊಂಡರು.

2006: ಕ್ಯಾನ್ನೆಸ್ಸಿನಲ್ಲಿ ಎರಡು ಬಾರಿ ಪ್ರತಿಷ್ಠಿತ ಪಾಲ್ಮೆ ಡಿ'ಓರ್ ಪ್ರಶಸ್ತಿಯನ್ನು ಗೆದ್ದ ಜಪಾನಿನ ಪ್ರಥಮ ಚಿತ್ರ ನಿರ್ದೇಶಕ ಶೋಹೆಲ್ ಇಮಾಮುರಾ ಈ ದಿನ 79ನೇ ವಯಸ್ಸಿನಲ್ಲಿ ನಿಧನರಾದರು. 1983ರಲ್ಲಿ ಪಾಲ್ಮೆ ಡಿ'ಓರ್ ಪ್ರಶಸ್ತಿಯನ್ನು `ದಿ ಬ್ಯಾಲ್ಲಡ್ ಆಫ್ ನರಯಾಮ'ಕ್ಕೆ ಪಡೆದಿದ್ದ ಇಮಾಮುರಾ, 1997ರಲ್ಲಿ `ದಿ ಎಲ್' ಗೆ ಈ ಪ್ರಶಸ್ತಿಯನ್ನು ಎರಡನೇ ಬಾರಿಗೆ ಪಡೆದರು.

1991: ಉಮಾಶಂಕರ ದೀಕ್ಷಿತ್ ನಿಧನರಾದರು.

1987: ಗೋವಾ ಭಾರತದ 25ನೇ ರಾಜ್ಯವಾಯಿತು. ಇಲ್ಲಿಯವರೆಗೆ ಅದು ಕೇಂದ್ರಾಡಳಿತ ಪ್ರದೇಶವಾಗಿತ್ತು.

1959: ಸರ್ ಕ್ರಿಸ್ಟೋಫರ್ ಕೋಕರೆಲ್ ಅವರು ವಿನ್ಯಾಸಗೊಳಿಸಿದ ಮೊತ್ತ ಮೊದಲ ಪ್ರಾಯೋಗಿಕ ಹೋವರ್ ಕ್ರಾಫ್ಟಿಗೆ ಐಲ್ ಆಫ್ ವೈಟ್ ನಲ್ಲಿ ಚಾಲನೆ ಸಿಕ್ಕಿತು. ಪ್ರಾರಂಭದಲ್ಲಿ ಇದನ್ನು ಸೇನಾ ಸೇವೆಗಾಗಿ ಮಾತ್ರ ಎಂಬುದಾಗಿ ರೂಪಿಸಲಾಗಿತ್ತಾದರೂ ನಂತರ ನಾಗರಿಕ ಬಳಕೆಗೆ ಇದನ್ನು ಬಿಡುಗಡೆ ಮಾಡಲಾಯಿತು.

1950: ಕಲಾವಿದೆ ಶೋಭಾ ಹುಣಸಗಿ ಜನನ.

1948: ಸುಗಮ ಸಂಗೀತರ ಗಾನ ಕೋಗಿಲೆ ಎಂದೇ ಖ್ಯಾತರಾಗಿದ್ದ ಪಂಕಜ ಸಿಂಹ (30-5-1948ರಿಂದ 20-12-2000) ಅವರು ಅಡ್ವೋಕೇಟ್ ಗೋವಿಂದರಾವ್- ಖ್ಯಾತ ಪಿಟೀಲು ವಾದಕಿ ಶಾರದಮ್ಮ ದಂಪತಿಯ ಮಗಳಾಗಿ ಹಾಸನದಲ್ಲಿ ಜನಿಸಿದರು.

1919: ಅಮೃತಸರದಲ್ಲಿ ನಡೆದ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡವನ್ನು ಪ್ರತಿಭಟಿಸಿ ರಬೀಂದ್ರನಾಥ ಟ್ಯಾಗೋರ್ ಅವರು ತಮಗೆ ನೀಡಲಾಗಿದ್ದ `ನೈಟ್ ಹುಡ್' ಪದವಿಯನ್ನು ನಿರಾಕರಿಸಿ ಲಾರ್ಡ್ ಚೆಮ್ಸ್ ಫೋರ್ಡ್ ಅವರಿಗೆ ಪತ್ರ ಬರೆದರು.

1907: ನರೇಗಲ್ಲ ಮಾಸ್ತರ ಎಂದೇ ಖ್ಯಾತರಾಗಿದ್ದ ನರೇಗಲ್ಲ ಪ್ರಹ್ಲಾದರಾಯರು (30-5-1907ರಿಂದ 1977) ನವಲಗುಂದ ತಾಲ್ಲೂಕಿನ ಜಾವೂರಿನಲ್ಲಿ ಅನಂತರಾವ್ ನರೇಗಲ್ಲ- ಅಂಬಾಬಾಯಿ ಪುತ್ರನಾಗಿ ಜನಿಸಿದರು.

1895: ಖ್ಯಾತ ಇತಿಹಾಸಕಾರ ಪಾಂಡುರಂಗ ಶಂಕರಂ ಜನನ.

1606: ಸಿಖ್ ಧರ್ಮದ ಐದನೆಯ ಗುರುಗಳಾಗಿದ್ದ ಗುರು ಅರ್ಜುನ್ ದೇವ್ ಅವರನ್ನು ಬಂಡುಕೋರ ರಾಜಕುಮಾರ ಖುಸ್ರು ಬಗ್ಗೆ ಅನುಕಂಪ ವ್ಯಕ್ತಪಡಿಸಿದ ಕಾರಣಕ್ಕಾಗಿ ಮೊಘಲ್ ದೊರೆ ಜಹಾಂಗೀರ್ ಚಿತ್ರಹಿಂಸೆಗೆ ಗುರಿಪಡಿಸಿ ಕೊಲ್ಲಿಸಿದ. ಸಿಖ್ ಧರ್ಮದ ಮೊದಲನೆಯ ಹುತಾತ್ಮರಾದ ಅರ್ಜುನ್ ದೇವ್ `ಗುರು ಗ್ರಂಥ ಸಾಹಿಬ್'ನ್ನು ಸಂಕಲನಗೊಳಿಸಿದವರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement