My Blog List

Saturday, May 31, 2008

ಇಂದಿನ ಇತಿಹಾಸ History Today ಮೇ 31

ಇಂದಿನ ಇತಿಹಾಸ

ಮೇ 31

ನಾತ್ಸಿ ಕ್ರಿಮಿನಲ್ ಅಡಾಲ್ಫ್ ಇಚ್ಮನ್ ಗೆ ಇಸ್ರೇಲಿನಲ್ಲಿ ಗಲ್ಲು ವಿಧಿಸಲಾಯಿತು. ಇದು ಇಸ್ರೇಲಿನ ಪ್ರಪ್ರಥಮ ಗಲ್ಲು ಶಿಕ್ಷೆ.

2007: ಭಾಷಾ ಮಾಧ್ಯಮದ ಉಲ್ಲಂಘನೆಯ ಆರೋಪದಿಂದ ಮಾನ್ಯತೆ ಕಳೆದುಕೊಂಡ ಖಾಸಗಿ ಶಾಲೆಗಳ ಮಾನ್ಯತೆ ರದ್ದತಿಗೆ ತಾನು ಈ ಹಿಂದೆ ನೀಡಿದ ತಡೆಯಾಜ್ಞೆಯನ್ನು ಹೈಕೋರ್ಟ್ ಜೂನ್ 14ರವರೆಗೆ ವಿಸ್ತರಿಸಿತು.

2007: ಶಸ್ತ್ರಾಸ್ತ್ರ ಮದ್ದುಗುಂಡು, ಮದ್ದುಗುಂಡು ಸಾಗಣೆ, ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿರುವುದು ಮತ್ತು 1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಸಂಚಿನಲ್ಲಿ ವಹಿಸಿದ ಪಾತ್ರಕ್ಕಾಗಿ ಏಳು ಮಂದಿಗೆ ವಿಶೇಷ ಟಾಡಾ ನ್ಯಾಯಾಲಯವು ಐದು ವರ್ಷಗಳ ಕಠಿಣ ಸಜೆಯಿಂದ ಜೀವಾವಧಿ ಸಜೆವರೆಗಿನ ಶಿಕ್ಷೆಗಳನ್ನು ವಿಧಿಸಿತು.

2007: ಅಗ್ಗದ ದರದ ವಿಮಾನಯಾನ ಸಂಸ್ಥೆ ಏರ್ ಡೆಕ್ಕನ್ ತನ್ನ ಶೇಕಡಾ 26ರಷ್ಟು ಪಾಲನ್ನು ವಿಜಯ ಮಲ್ಯ ನೇತೃತ್ವದ ಯುಬಿ ಹೋಲ್ಡಿಂಗ್ಸ್ ಕಂಪೆನಿಗೆ ಮಾರಾಟ ಮಾಡಿರುವುದಾಗಿ ಘೋಷಿಸಿತು.

2007: ಜೈಬಾಸಾ ಬೊಕ್ಕಸದಿಂದ 1990ರ ದಶಕದಲ್ಲಿ 48 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ಪಡೆದುಕೊಂಡದ್ದಕ್ಕಾಗಿ ರೈಲ್ವೆ ಸಚಿವ ಲಾಲು ಪ್ರಸಾದ್ ಅವರ ಇಬ್ಬರು ಸೋದರಳಿಯಂದಿರು ಸೇರಿದಂತೆ ಒಟ್ಟು 58 ಮಂದಿಗೆ ಎರಡೂವರೆ ವರ್ಷಗಳಿಂದ 6 ವರ್ಷಗಳವರೆಗಿನ ಸೆರೆವಾಸದ ಶಿಕ್ಷೆಯನ್ನು ಮೇವು ಹಗರಣದ ವಿಚಾರಣೆ ನಡೆಸಿದ ವಿಶೇಷ ಸಿಬಿಐ ನ್ಯಾಯಾಲಯವು ವಿಧಿಸಿತು.

2007: ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ನಿಗೂಢ ಕಣ್ಮರೆ/ಸಾವಿಗೆ ಸಂಬಂಧಿಸಿದ ಕಡತವನ್ನು 30 ವರ್ಷಗಳ ಹಿಂದೆ ನಾಶ ಪಡಿಸಿದ್ದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೇಳಿ ಕೇಂದ್ರೀಯ ಮಾಹಿತಿ ಆಯೋಗದ ಮುಂದೆ ಸಲ್ಲಿಸಲಾದ ಅರ್ಜಿಯನ್ನು ಪ್ರಧಾನ ಮಂತ್ರಿಗಳ ಕಚೇರಿ ಬಲವಾಗಿ ವಿರೋಧಿಸಿತು. ದೆಹಲಿ ಮೂಲಕ ಮಿಷನ್ ನೇತಾಜಿ ಸಂಸ್ಥೆ ಈ ಅರ್ಜಿ ಸಲ್ಲಿಸಿತ್ತು.

2006: ತತ್ ಕ್ಷಣ ಕರ್ತವ್ಯಕ್ಕೆ ಹಾಜರಾಗುವಂತೆ ಸುಪ್ರೀಂಕೋರ್ಟ್ ಆದೇಶಿಸಿದ್ದನ್ನು ಅನುಸರಿಸಿ ನವದೆಹಲಿಯ ಎಲ್ಲ ಪ್ರಮುಖ ವೈದ್ಯಕೀಯ ಕಾಲೇಜು ಆಸ್ಪತ್ರೆಗಳ ಸ್ಥಾನೀಯ ವೈದ್ಯರು ಮುಷ್ಕರಕ್ಕೆ ಅಂತ್ಯ ಘೋಷಿಸಿದರು. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ವಿವಾದದ ಹಿನ್ನೆಲೆಯಲ್ಲಿ 20 ದಿನಗಳಿಂದ ವೈದ್ಯರು ಅಸಹಕಾರ ಚಳವಳಿ ನಡೆಸಿದ್ದರು.

2006: ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿಯ 12ನೇ ಹಾರಾಟ ಪರೀಕ್ಷೆಯನ್ನು ರಾಜಸ್ಥಾನ ಮರುಭೂಮಿಯಲ್ಲಿ ಯಶಸ್ವಿಯಾಗಿ ನಡೆಸಲಾಯಿತು.

2006: ಒರಿಸ್ಸಾದ ಕರಾವಳಿಯ ಆತಾಲ ಗ್ರಾಮದ ನಿವಾಸಿ ಬಸುದೇವ್ ಭೋಯಿ ಅವರ ಪುತ್ರಿ 30 ವರ್ಷದ ಬಿಂಬಾಲಿ ಭೋಯಿ ಎಂಬ ತರುಣಿ ಈ ದಿನ ನಾಗದೇವತೆಯನ್ನು ಶಾಸ್ತ್ರೋಕ್ತವಾಗಿ ಮದುವೆಯಾದಳು. ತನ್ನನ್ನು ವರಿಸಲು ಬಂದ ಯಾವುದೇ ವರ ಒಪ್ಪದೇ ಹೋದುದರಿಂದ ಬೇಸತ್ತ ಆಕೆ ಕೊನೆಗೆ ನಾಗದೇವತೆಯನ್ನು ಮದುವೆಯಾಗಲು ನಿರ್ಧರಿಸಿದಳು. ಕೆಲವು ದಿನಗಳ ಹಿಂದೆ 30ರ ಹರೆಯದ ಯುವಕನೊಬ್ಬ ಆಕೆಯ ತಾಯಿಯ ಬಳಿ ನಿಮ್ಮ ಮಗಳು 14 ವರ್ಷದಿಂದ ಪೂಜಿಸುತ್ತಾ ಬಂದ ನಾಗರ ಹಾವನ್ನು ಮದುವೆಯಾಗಲಿ ಎಂದು ಹೇಳಿದ್ದು ಹಾಗೂ ಇದಕ್ಕೂ ಮೊದಲು ಒಂದು ದಿನ ಮನೆಯ ಹಿಂಬದಿಯ ಹುತ್ತದಲ್ಲಿ ಹಾವು ಬಿಂಬಾಲಿಗೆ ದರ್ಶನ ನೀಡಿದ ಘಟನೆ ನಡೆದು, ಆ ಬಳಿಕ ಆಕೆ ಆ ಹಾವಿನೊಂದಿಗೆ ಪ್ರೀತಿ ಹೊಂದಿದ್ದಳು. ಕುಟುಂಬ ಸದಸ್ಯರು ಮೊದಲು ಈ ಮದುವೆಗೆ ಒಪ್ಪದಿದ್ದರೂ ನಂತರ ಗ್ರಾಮದ ಹಿರಿಯರ ಸಲಹೆ ಮೇರೆಗೆ ಆಕೆಗೂ ಕಂಚಿನಿಂದ ಮಾಡಿದ ಹಾವಿನ ಪ್ರತಿರೂಪಕ್ಕೂ ಶಾಸ್ತ್ರೋಕ್ತವಾಗಿ ಮದುವೆ ನೆರವೇರಿಸಲಾಯಿತು.

1996: ಹಿರಿಯ ಸಮಾಜವಾದಿ ಚಿಂತಕ ಜೆ.ಎಚ್. ಪಟೇಲ್ ಅವರು ಈದಿನ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.

1988: ಈ ದಿನವನ್ನು `ತಂಬಾಕುರಹಿತ ದಿನ' ಎಂದು ಆಚರಿಸಬೇಕು ಎಂದು ವಿಶ್ವ ಸ್ವಾಸ್ಥ್ಯ ಸಂಸ್ಥೆ ಘೋಷಿಸಿತು.

1962: ನಾತ್ಸಿ ಕ್ರಿಮಿನಲ್ ಅಡಾಲ್ಫ್ ಇಚ್ಮನ್ ಗೆ ಇಸ್ರೇಲಿನಲ್ಲಿ ಗಲ್ಲು ವಿಧಿಸಲಾಯಿತು. ಇದು ಇಸ್ರೇಲಿನ ಪ್ರಪ್ರಥಮ ಗಲ್ಲು ಶಿಕ್ಷೆ.

1939: ಜೈನ ಸಾಹಿತ್ಯ, ಸಿದ್ಧಾಂತಗಳಿಗೆ ಮಹತ್ವದ ಕಾಣಿಕೆಗಳನ್ನು ನೀಡಿದ ಸಾಹಿತಿ ಡಾ. ಎಸ್.ಪಿ. ಪಾಟೀಲ ಅವರು ಪೀರಗೌಡ ಧರ್ಮ ಗೌಡ ಪಾಟೀಲ- ಪದ್ಮಾವತಿ ದಂಪತಿಯ ಪುತ್ರನಾಗಿ ಮಹಾರಾಷ್ಟ್ರದ ಸಾಂಗಲಿಯಲ್ಲಿ ಈದಿನ ಜನಿಸಿದರು.

1928: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕ್ರಿಕೆಟಿಗ ಪಂಕಜ್ ಖಿರೋಡ್ ಜನನ.

1911: ಜಗತ್ತಿನ ಅತ್ಯಾಧುನಿಕ ನೌಕೆ `ಟೈಟಾನಿಕ್' ಬೆಲ್ ಫಾಸ್ಟ್ ನಿಂದ ತನ್ನ ಮೊದಲ ಪಯಣ ಆರಂಭಿಸಿತು.

1845; ರೂಕ್ಸ್ ಇವೆಲಿನ್ ಬೆಲ್ ಕ್ರಾಂಪ್ಟನ್ (1845-1940) ಜನ್ಮದಿನ. ಬ್ರಿಟಿಷ್ ಸಂಶೋಧಕನಾದ ಈತ ವಿದ್ಯುತ್ ದೀಪಗಳ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದ.

1818: ವಿಲಿಯಂ ಕ್ಯಾರೀ ಮತ್ತು ಸೆರಾಂಪೋರಿನ ಜೊಶುವಾ ಮಾರ್ಶ್ ಮ್ಯಾನ್ ನೇತೃತ್ವದಲ್ಲಿ ಬಂಗಾಳಿಯಲ್ಲಿ ಪ್ರಪ್ರಥಮ ಪ್ರಾದೇಶಿಕ ಭಾಷಾ ಪತ್ರಿಕೆ `ಸಮಾಚಾರ್ ದರ್ಪಣ್' ಪ್ರಕಟಣೆ ಆರಂಭವಾಯಿತು.

1578: ರೋಮ್ ನ ಸಮಾಧಿ ಗುಹೆಗಳು ಅನಿರೀಕ್ಷಿತವಾಗಿ ಪತ್ತೆಯಾದವು. ಉತ್ತರ ರೋಮ್ ನ ಪ್ರವೇಶದ್ವಾರದಲ್ಲಿ ಕೆಲವು ಕಾರ್ಮಿಕರ ಭೂಮಿ ಅಗೆಯುತ್ತಿದ್ದಾಗ ಸಮಾಧಿಗುಹೆಯೊಂದರ ಸುರಂಗ ಕಾಣಿಸಿ, ಸಮಾಧಿ ಗುಹೆ ಬೆಳಕಿಗೆ ಬಂತು. ಹದಿನೈದು ವರ್ಷಗಳ ನಂತರ ನಂತರ 1593ರಲ್ಲಿ 18ರ ತರುಣ ಆಂಟಾನಿಯೋ ಬೋಸಿಯೋ ಈ ಗುಹಾ ಸಮಾಧಿಗಳ ಪತ್ತೆ ಕಾರ್ಯ ಆರಂಭಿಸಿದ. ತಮ್ಮ ಜೀವಮಾನಪೂರ್ತಿ ಇದೇ ಕಾರ್ಯ ಮಾಡಿದ ಈತ ಈ ಸಮಾಧಿ ಗುಹೆಗಳ ಮಧ್ಯೆ ಸಂಪರ್ಕ ಇದ್ದುದನ್ನು ಪತ್ತೆ ಹಚ್ಚಿದ. ಅವುಗಳಿಗೆ 30 ಹೆಚ್ಚುವರಿ ಪ್ರವೇಶದ್ವಾರಗಳು ಇದ್ದುದನ್ನೂ ಪತ್ತೆ ಮಾಡಿದ. ಈ ಸಮಾಧಿ ಗುಹೆಗಳು ಮೂರನೇ ಶತಮಾನದಷ್ಟು ಪ್ರಾಚೀನ ಕಾಲದವು. ಸ್ಮಶಾನಗಳಲ್ಲಿ ಶವ ಹೂಳದಂತೆ ಬಹಿಷ್ಕೃತರಾಗಿದ್ದ ಕ್ರೈಸ್ತರು ಈ ಗುಹೆಗಳಲ್ಲಿ ಶವಗಳನ್ನು ಹೂಳುತ್ತಿದ್ದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement