ಇಂದಿನ ಇತಿಹಾಸ
ಮೇ 6
ಕನ್ನಡ ಚಲನಚಿತ್ರ ರಂಗಕ್ಕೆ ಮೊತ್ತ ಮೊದಲ ಸ್ವರ್ಣ ಕಮಲ ಪ್ರಶಸ್ತಿ ತಂದುಕೊಟ್ಟಿದ್ದ `ಸಂಸ್ಕಾರ' ಚಿತ್ರದ ನಿರ್ದೇಶಕ ಟಿ. ಪಟ್ಟಾಭಿರಾಮರೆಡ್ಡಿ (87) ಅವರು ದೀರ್ಘಕಾಲದ ಅನಾರೋಗ್ಯದಿಂದ ಈದಿನ ಬೆಳಗಿನ ಜಾವ 3.30ರ ವೇಳೆಗೆ ಮಲ್ಯ ಆಸ್ಪತೆಯಲ್ಲಿ ನಿಧನರಾದರು. ಆಂಧ್ರಪ್ರದೇಶದ ನೆಲ್ಲೂರಿನಲ್ಲಿ 1919ರ ಫೆಬ್ರುವರಿ 2ರಂದು ಜನಿಸಿದ ಪಟ್ಟಾಭಿ `ಸಂಸ್ಕಾರ'ದ ಮೂಲಕ ಕನ್ನಡ ಚಲನಚಿತ್ರ ರಂಗದಲ್ಲಿ ಸಮಾನಾಂತರ ಚಿತ್ರಗಳ ಹೊಸ ಯುಗಕ್ಕೆ ನಾಂದಿ ಹಾಡಿದವರು.
2007: ಜಗತ್ತಿನ ಅತಿದೊಡ್ಡ ಉಕ್ಕಿನ ಹಕ್ಕಿ ಸೂಪರ್ ಜಂಬೋ ಎ-380 ನವದೆಹಲಿಯಲ್ಲಿ ಭಾರತದ ನೆಲವನ್ನು ಸ್ಪರ್ಶಿಸಿತು. ಕಿಂಗ್ ಫಿಶರ್ ಏರ್ ಲೈನ್ಸಿನ ಎರಡನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಈ ಜಂಬೋ ಭಾರತದ ನೆಲಕ್ಕೆ ಬಂದಿಳಿಯಿತು. 80 ಅಡಿ ಉದ್ದದ ಈ ವಿಮಾನದಲ್ಲಿ 850 ಜನಕ್ಕೆ ಕೂರಲು ಸೌಲಭ್ಯಗಳಿವೆ. ಆದರೆ ಮೂರು ವರ್ಗಗಳಲ್ಲಿ 550 ಪ್ರಯಾಣಿಕರಿಗೆ ಅನುಕೂಲವಾಗುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಇದು ನಿರಂತರವಾಗಿ 15,000 ಕಿ.ಮೀ. ದೂರವನ್ನು ಒಂದೇ ಸಲಕ್ಕೆ ಕ್ರಮಿಸಬಲ್ಲುದು. 300 ದಶಲಕ್ಷ ಡಾಲರ್ ಬೆಲೆಯ ಈ ಸೂಪರ್ ಜಂಬೋ ವಿಮಾನಕ್ಕೆ ರೋಲ್ಸ್ ರಾಯ್ಸ್ ಕಂಪೆನಿ ಎಂಜಿನ್ ಸಿದ್ಧ ಪಡಿಸಿದೆ. ಕಿಂಗ್ ಫಿಶರ್ ಸಂಸ್ಥೆಯು ಇಂತಹ ಐದು ವಿಮಾನಗಳಿಗೆ ಬೇಡಿಕೆ ಸಲ್ಲಿಸಿದೆ.
2007: ಭಾರತದ ಖಾಸಗಿ ಬ್ಯಾಂಕಿಂಗ್ ಕ್ಷೇತ್ರದ ಅತಿದೊಡ್ಡ ಬ್ಯಾಂಕ್ ಆಗಿರುವ ಐಸಿಐಸಿಐ ದುಬೈಯ ದೋಹಾದಲ್ಲಿ ತನ್ನ ಮೊತ್ತ ಮೊದಲ ಶಾಖೆಯನ್ನು ಆರಂಭಿಸಿತು.
2007: ಸೊಹ್ರಾಬ್ದುದೀನ್ ಷೇಕ್ ನನ್ನು ನಕಲಿ ಎನ್ಕೌಂಟರಿನಲ್ಲಿ ಕೊಂದ ಆರೋಪಕ್ಕೆ ಒಳಗಾಗಿ ಬಂಧಿತರಾದ 12 ದಿನಗಳ ಬಳಿಕ ಗುಜರಾತ್ ಸರ್ಕಾರವು ತನ್ನ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿತು.
2007: ಸಂಗೀತ ವಿದುಷಿ, ಸಮಾಜ ಸೇವಕಿ ಚೊಕ್ಕಮ್ಮ ಎನ್. ಎನ್. ಅಯ್ಯಂಗಾರ್ ಅವರು ಬೆಂಗಳೂರಿನಲ್ಲಿ ನಿಧನರಾದರು. ಪಿಟೀಲು ಚೌಡಯ್ಯ ಮತ್ತು ವಿದ್ವಾನ್ ದೇವೇಂದ್ರಪ್ಪ ಅವರ ಬಳಿ ಸಂಗೀತ ಅಭ್ಯಾಸ ಮಾಡಿದ್ದ ಚೊಕ್ಕಮ್ಮ ಅನೇಕ ವರ್ಷಗಳ ಕಾಲ ಆಕಾಶವಾಣಿಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದರು. ಚೊಕ್ಕಮ್ಮ ಅವರು ಹಿರಿಯ ಅಧಿಕಾರಿ ದಿವಂಗತ ಎನ್. ನರಸಿಂಹ ಅಯ್ಯಂಗಾರ್ ಅವರ ಪತ್ನಿ.
2007: ಬಲಪಂಥೀಯ ಧುರೀಣ ನಿಕೋಲಸ್ ಸರ್ಕೋಜಿ ಅವರು ಪ್ರಾನ್ಸಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು.
2007: ಹರಿದ್ವಾರದ ನ್ಯಾಯಾಲಯವೊಂದರ ಆದೇಶದ ಅನುಸಾರ ಮುಂಬೈ ಪೊಲೀಸರು ವಿವಾದಾತ್ಮಕ ಖ್ಯಾತ ಕಲಾವಿದ ಎಂ.ಎಫ್. ಹುಸೇನ್ ಅವರು ಆಸ್ತಿಪಾಸ್ತಿ ಮುಟ್ಟುಗೋಲು ಪ್ರಕ್ರಿಯೆ ಆರಂಭಿಸಿದರು. ತಮ್ಮ ಕಲಾಕೃತಿಯಲ್ಲಿ ಹಿಂದೂ ದೇವತೆಗಳನ್ನು ಅಶ್ಲೀಲವಾಗಿ ಚಿತ್ರಿಸಿದ್ದಾರೆ ಎಂದು ದೂರಿ ಸಲ್ಲಿಸಲಾಗಿದ್ದ ಮೊಕದ್ದಮೆಗೆ ಸಂಬಂಧಪಟ್ಟಂತೆ ಮೇಲಿಂದಮೇಲೆ ಸಮನ್ಸ್ ಕಳುಹಿಸಿದ್ದರೂ ಹುಸೇನ್ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರ ಆಸ್ತಿ ಜಪ್ತಿಗೆ ನ್ಯಾಯಾಲಯ ಆದೇಶಿಸಿತ್ತು.
2007: ಚೀನಾದ ಉತ್ತರ ಭಾಗದಲ್ಲಿ ಗಣಿಗಾರಿಕೆ ನಡೆಸುತ್ತಿದ್ದಾಗ ಸ್ಫೋಟ ಸಂಭವಿಸಿ 20 ಮಂದಿ ಮೃತರಾದರು. ಜಗತ್ತಿನಲ್ಲೇ ಅತಿದೊಡ್ಡ ಗಣಿಗಾರಿಕೆ ಸಂಸ್ಥೆಯ ಪುಡೆಂಗ್ ಮೈನ್ ನಲ್ಲಿ ಈ ಸ್ಫೋಟ ಸಂಭವಿಸಿತು. ಈ ಸಂದರ್ಭದಲ್ಲಿ 125 ಕಾರ್ಮಿಕರಿದ್ದು, 95 ಮಂದಿ ಅಪಾಯದಿಂದ ಪಾರಾದರು.
2006: ಕನ್ನಡ ಚಲನಚಿತ್ರ ರಂಗಕ್ಕೆ ಮೊತ್ತ ಮೊದಲ ಸ್ವರ್ಣ ಕಮಲ ಪ್ರಶಸ್ತಿ ತಂದುಕೊಟ್ಟಿದ್ದ `ಸಂಸ್ಕಾರ' ಚಿತ್ರದ ನಿರ್ದೇಶಕ ಟಿ. ಪಟ್ಟಾಭಿರಾಮರೆಡ್ಡಿ (87) ಅವರು ದೀರ್ಘಕಾಲದ ಅನಾರೋಗ್ಯದಿಂದ ಈದಿನ ಬೆಳಗಿನ ಜಾವ 3.30ರ ವೇಳೆಗೆ ಮಲ್ಯ ಆಸ್ಪತೆಯಲ್ಲಿ ನಿಧನರಾದರು. ಆಂಧ್ರಪ್ರದೇಶದ ನೆಲ್ಲೂರಿನಲ್ಲಿ 1919ರ ಫೆಬ್ರುವರಿ 2ರಂದು ಜನಿಸಿದ ಪಟ್ಟಾಭಿ `ಸಂಸ್ಕಾರ'ದ ಮೂಲಕ ಕನ್ನಡ ಚಲನಚಿತ್ರ ರಂಗದಲ್ಲಿ ಸಮಾನಾಂತರ ಚಿತ್ರಗಳ ಹೊಸ ಯುಗಕ್ಕೆ ನಾಂದಿ ಹಾಡಿದವರು. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವಕ್ಕೆ ಪಾತ್ರರಾಗಿದ್ದ ಅವರಿಗೆ ರಾಜ್ಯಸರ್ಕಾರ 2005ರಲ್ಲಿ ಪ್ರತಿಷ್ಠಿತ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ನೀಡಿ ಗೌರವಿಸಿತ್ತು. ಯು.ಆರ್. ಅನಂತಮೂರ್ತಿ ಅವರ ಕಾದಂಬರಿ ಆಧಾರಿತ `ಸಂಸ್ಕಾರ' ಗಿರೀಶ ಕಾರ್ನಾಡ್, ಪಿ. ಲಂಕೇಶ್ ಮತ್ತಿತರರಿಗೆ ಚಿತ್ರರಂಗ ಪ್ರವೇಶಕ್ಕೆ ಅವಕಾಶ ಕಲ್ಪಿಸಿತ್ತು. ರೆಡ್ಡಿ ಅವರ ಪತ್ನಿ ಸ್ನೇಹಲತಾ ರೆಡ್ಡಿ ಅವರು `ಸಂಸ್ಕಾರ' ಚಿತ್ರದಲ್ಲಿ ಪ್ರಮುಖ ಭೂಮಿಕೆಯಲ್ಲಿದ್ದರು. `ಚಂಡಮಾರುತ', `ಶೃಂಗಾರಮಾಸ', `ದೇವರ ಕಾಡು' ಪಟ್ಟಾಭಿರಾಮರೆಡ್ಡಿ ನಿರ್ದೇಶಿಸಿದ ಇತರ ಕನ್ನಡ ಚಿತ್ರಗಳು.
2006: ಸಿಡಿಸಿದರೆ ದಾಳಿಕೋರನನ್ನು 40 ನಿಮಿಷ ಕಾಲ ನಿಶ್ಚೇತನಗೊಳಿಸುವ `ಒಲೆವೋ ಝ್ಯಾಪ್' ಎಂಬ ಸ್ವಯಂರಕ್ಷಣಾ ಸ್ಪ್ರೇಯನ್ನು ಸಂಸತ್ ಸದಸ್ಯ ಎಚ್.ಟಿ. ಸಾಂಗ್ಲಿಯಾನ ಬಿಡುಗಡೆ ಮಾಡಿದರು. ಕ್ಲಿಯರಾಕ್ ಎಂಟರ್ ಪ್ರೈಸಸ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆ ಈ ಸಾಧನವನ್ನು ತಯಾರಿಸಿದೆ.
2006: ಹನ್ನೆರಡು ವರ್ಷಗಳ ಬಳಿಕ ಹಾಸನ- ಮಂಗಳೂರು ರೈಲ್ವೇ ಮಾರ್ಗವನ್ನು ಮಂಗಳೂರಿನಲ್ಲಿ ಉದ್ಘಾಟಿಸಲಾಯಿತು. ರೈಲ್ವೆ ಹಳಿಯನ್ನು ಮೀಟರ್ ಗೇಜ್ ನಿಂದ ನ್ಯಾರೋ ಗೇಜ್ ಗೆ ಪರಿವರ್ತಿಸುವ ಸಲುವಾಗಿ 1994ರಲ್ಲಿ ಈ ರೈಲುಮಾರ್ಗದ ಸೇವೆಯನ್ನು ನಿಲ್ಲಿಸಲಾಗಿತ್ತು.
2006: ಸಿಂಗಪುರದ ನಿರ್ಣಾಯಕ ಸಂಸದೀಯ ಚುನಾವಣೆಯಲ್ಲಿ ಆಳುವ ಪೀಪಲ್ಸ್ ಆಕ್ಷನ್ ಪಾರ್ಟಿ(ಪಿಎಪಿ) 82 ಸ್ಥಾನಗಳನ್ನು ಗೆದ್ದು ಭಾರಿ ಬಹುಮತ ಗಳಿಸಿತು. ವಿರೋಧ ಪಕ್ಷಕ್ಕೆ 2 ಸ್ಥಾನಗಳು ಮಾತ್ರ ಲಭಿಸಿದವು.
1947: ಕಲಾವಿದ ಮಹಾದೇವ ಪಾಂಚಾಲ್ ಜನನ.
1946: ಖ್ಯಾತ ಭಾರತೀಯ ವಕೀಲ ಭುಲಾಭಾಯಿ ದೇಸಾಯಿ (1877-1946) ತಮ್ಮ 68ನೇ ವಯಸ್ಸಿನಲ್ಲಿ ಮುಂಬೈಯಲ್ಲಿ ಮೃತರಾದರು. ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಭಾರತ ರಾಷ್ಟ್ರೀಯ ಸೇನೆಯ (ಐಎನ್ಎ) ಅಧಿಕಾರಿಗಳನ್ನು ಬ್ರಿಟಿಷ್ ಸರ್ಕಾರ 1945ರಲ್ಲಿ ವಿಚಾರಣೆಗೆ ಗುರಿಪಡಿಸಿದಾಗ ಐಎನ್ಎ ಅಧಿಕಾರಿಗಳ ಪರವಾಗಿ ವಾದಿಸುವ ಮೂಲಕ ದೇಸಾಯಿ ವ್ಯಾಪಕ ಪ್ರಸಿದ್ಧಿ ಪಡೆದರು.
1935: ಕಲಾವಿದ ರಾಮಚಂದ್ರಮೂರ್ತಿ ನವರತ್ನ ಜನನ.
1928: ಖ್ಯಾತ ವ್ಯಂಗ್ಯಚಿತ್ರಕಾರ ಎಸ್.ಕೆ. ನಾಡಿಗ್ ಅವರು ಕೃಷ್ಣಸ್ವಾಮಿ ರಾವ್- ರಾಧಮ್ಮ ದಂಪತಿಯ ಮಗನಾಗಿ ಶಿವಮೊಗ್ಗದಲ್ಲಿ ಜನಿಸಿದರು.
1923: ಕಲಾವಿದ ಚೆನ್ನಬಸವಯ್ಯ ಗುಬ್ಬಿ ಜನನ.
1861: ಮೋತಿಲಾಲ್ ನೆಹರೂ (1861-1931) ಜನ್ಮದಿನ. ಭಾರತದ ರಾಷ್ಟ್ರೀಯ ನಾಯಕ, ಸ್ವರಾಜ್ ಪಕ್ಷದ ಸಹ ಸಂಸ್ಥಾಪಕರಾದ ಇವರು ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ತಂದೆ.
1856: ರಾಬರ್ಟ್ ಎಡ್ವಿನ್ ಪಿಯರೆ (1856-1920) ಹುಟ್ಟಿದ ದಿನ. ಅಮೆರಿಕದ ಸಂಶೋಧಕನಾದ ಈ ಭೂ ಶೋಧಕ 1909ರಲ್ಲಿ ಪ್ರಪ್ರಥಮ ಬಾರಿಗೆ ಉತ್ತರ ಧ್ರುವವನ್ನು ತಲುಪಿದ.
1542: ಫ್ರಾನ್ಸಿಸ್ ಝೇವಿಯರ್ ಮೊತ್ತ ಮೊದಲ ಕ್ರೈಸ್ತ ಪ್ರಚಾರಕನಾಗಿ ಗೋವಾಕ್ಕೆ ಆಗಮಿಸಿದ. ಆಧುನಿಕ ಕಾಲದ ಮಹಾನ್ ರೋಮನ್ ಕ್ಯಾಥೋಲಿಕ್ ಪ್ರಚಾರಕ ಎಂಬ ಹೆಗ್ಗಳಿಕೆ ಗಳಿಸಿರುವ ಈತ ಭಾರತ, ಮಲಯ ಹಾಗೂ ಜಪಾನಿನಲ್ಲಿ ಕ್ರೈಸಮತವನ್ನು ಪಸರಿಸಿದವರಲ್ಲಿ ಪ್ರಮುಖ ವ್ಯಕ್ತಿ.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment