Friday, June 13, 2008

'ಸಮ್ಮರ್ ಆಫ್ 2007' ನೈಜ ಸಮಸ್ಯೆ ಬಿಚ್ಚಿಡುತ್ತದೆಯೇ?

'ಸಮ್ಮರ್ ಆಫ್ 2007' ನೈಜ

ಸಮಸ್ಯೆ ಬಿಚ್ಚಿಡುತ್ತದೆಯೇ?


ರೈತರ ಹೆಸರು ಬಳಸಿಕೊಂಡು ರಾಜಕೀಯ ಮಾಡುವವರು, ವ್ಯಾಪಾರ ಮಾಡಿ ಲಾಭ ಕೊಳ್ಳೆ ಹೊಡೆಯುವವರು ಕಮ್ಮಿ ಇಲ್ಲ. ರೈತರ ಆತ್ಮಹತ್ಯೆಯ ಹೆಸರಿನಲ್ಲಿ ಇಂದು ಬಿಡುಗಡೆ ಆಗುತ್ತಿರುವ ಸಿನೆಮಾ 'ಸಮ್ಮರ್ ಆಫ್ 2007' ನಿಜವಾಗಿಯೂ ರೈತರ ಸಂಕಷ್ಟದ ಹಿನ್ನೆಲೆಯನ್ನು ಅನಾವರಣಗೊಳಿಸುತ್ತದೆಯೇ?

ನೆತ್ರಕೆರೆ ಉದಯಶಂಕರ

ರೈತರ ಆತ್ಮಹತ್ಯೆ ಈಗ ನಿತ್ಯ ಸುದ್ದಿ. ಈಗಾಗಲೇ ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಸಂಖ್ಯೆ ಲಕ್ಷ ಮೀರಿದೆ. ರೈತರ ರಕ್ಷಣೆಗೆ ಟೊಂಕ ಕಟ್ಟಿರುವುದಾಗಿ ಹೇಳುವ ಸರ್ಕಾರಗಳು ರೈತರ ಸಲುವಾಗಿ ಪ್ಯಾಕೇಜುಗಳನ್ನು ಘೋಷಿಸಿವೆ. ಆದರೂ ರೈತರ ಆತ್ಮಹತ್ಯೆ ಸರಣಿ ನಿಂತಿಲ್ಲ.

ಯಾಕೆ ಹೀಗೆ? ರೈತರು ಏಕೆ ಸರಣಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ?

ಇಂತಹುದೊಂದು ಪ್ರಶ್ನೆ ಐವರು ವೈದ್ಯಕೀಯ ವಿದ್ಯಾರ್ಥಿಗಳನ್ನು ಕಾಡುತ್ತದೆ. ಅವರು ಉತ್ತರ ಕಂಡು ಹಿಡಿಯುವ ಯತ್ನದಲ್ಲಿ ತೊಡಗುತ್ತಾರೆ. ತಮ್ಮ ಸುತ್ತುಮತ್ತಲಿನ ಸಾಮಾಜಿಕ ವ್ಯವಸ್ಥೆಯ ಅಧ್ಯಯನಕ್ಕೆ ತೊಡಗುತ್ತಾರೆ. ಸುತ್ತಲಿನ ಸಾಮಾಜಿಕ ಬದುಕು ರೈತರ ಬಡತನ ಅದರ ಕರಾಳತೆಯ ಆಳ ಕಂಡು ಹಿಡಿಯಲು ಯತ್ನಿಸುತ್ತಾರೆ.

ಅವರಿಗೆ ರೈತರು ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂಬುದರ ಸುಳಿವು ಸಿಗುತ್ತದೆಯೇ?ಇದನ್ನು ಅರಿತುಕೊಳ್ಳಬೇಕಿದ್ದರೆ ನೀವು 'ಸಮ್ಮರ್ ಆಫ್ 2007' ಸಿನೆಮಾ ನೋಡಬೇಕು ಎನ್ನುತ್ತಾರೆ ಅದರ ನಿರ್ದೇಶಕ ಸುಹೇಲ್ ತತಾರಿ.

ಹೌದು, ಗ್ರಾಮೀಣ ಪ್ರದೇಶಗಳಲ್ಲಿನ ರೈತರ ಸರಣಿ ಆತ್ಮಹತ್ಯೆ ಘಟನೆ ಆಧರಿಸಿ ನಿರ್ಮಿಸಲಾಗಿರುವ ಚಿತ್ರ `ಸಮ್ಮರ್ ಆಫ್ 2007', ಇಂದು ಅಂದರೆ 13 ಜೂನ್ 2008ರ ಶುಕ್ರವಾರ ತೆರೆ ಕಾಣುತ್ತಿದೆ.

`ವುಡ್ ಸ್ಟೊಕ್ ವಿಲ್ಲಾ' ಚಿತ್ರದ ಮೂಲಕ ಜನಪ್ರಿಯತೆ ಪಡೆದಿರುವ ಸಿಕಂದರ್ ಖೇರ್ ಈ ಚಿತ್ರದಲ್ಲಿ ನಾಯಕ ನಟ. ಮಹಾರಾಷ್ಟ್ರದ ವಿದರ್ಭ ಪ್ರದೇಶದಲ್ಲಿ ಕಳೆದ ಹತ್ತು ವರ್ಷದ ಅವಧಿಯಲ್ಲಿ ನೂರಾರು ರೈತರು ಆರ್ಥಿಕ ಸಂಕಷ್ಟ ಎದುರಿಸಲಾಗದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಹಿನ್ನೆಲೆಯೇ `ಸಮ್ಮರ್ ಆಫ್ 2007' ಚಿತ್ರದ ಕಥೆಯ ಹಂದರ ಎನ್ನುತ್ತಾರೆ ಸುಹೇಲ್ ತತಾರಿ.

ತಮ್ಮ ಸುತ್ತುಮುತ್ತಲಿನ ಸಾಮಾಜಿಕ ಬದುಕು, ರೈತರ ಬಡತನದ ಕರಾಳತೆಯನ್ನು ಕಂಡು ಅದರ ಮೂಲ ಅರಿಯಲು ಹೊರಡುವ ವೈದ್ಯಕೀಯ ವಿದಾರ್ಥಿಗಳು ಗೇಣಿದಾರರು ಹಾಗೂ ಸಣ್ಣ ಹಿಡುವಳಿದಾರರ ಮೇಲೆ ಜಮೀನ್ದಾರರು ಯಾವ ರೀತಿ ದೌರ್ಜನ್ಯ ಮಾಡುತ್ತಾರೆ ಎಂಬುದನ್ನು ಬಯಲು ಮಾಡುತ್ತಾರೆ. ಈ ದೌರ್ಜನ್ಯದ ಚಿತ್ರಣವನ್ನು ನೈಜವಾಗಿ ಸೆರೆ ಹಿಡಿಯುವ ಯತ್ನ ಇಲ್ಲಿದೆ ಎಂಬುದು ತತಾರಿ ಅವರ ಹೇಳಿಕೆ.

ಜಮೀನ್ದಾರಿ ಪದ್ಧತಿ ಉಳುವವರನ್ನು ಹಣ್ಣುಗಾಯಿ ನೀರುಗಾಯಿ ಮಾಡಿದೆ ಎಂಬುದು ಶತಕಗಳಷ್ಟು ಹಿಂದಿನ ಕಥೆ. ಆಗ ರೈತರು ನಿರಂತರ ಶೋಷಣೆಗೆ ಒಳಗಾದದ್ದೂ ಸುಳ್ಳೇನಲ್ಲ.

ಆದರೆ ರೈತರ ಆತ್ಮಹತ್ಯೆಯ ಸರಣಿ ಶುರುವಾದದ್ದು ಹೆಚ್ಚು ಕಡಿಮೆ ಉದಾರ ಆರ್ಥಿಕ ನೀತಿ, ಜಾಗತೀಕರಣ ದೇಶದೊಳಕ್ಕೆ ಕಾಲಿರಿಸಿದ ಬಳಿಕ. ಹಸಿರು ಕ್ರಾಂತಿಯ ಹೆಸರಿನಲ್ಲಿ ರಸಗೊಬ್ಬರ, ಕೀಟನಾಶಕ ಆಧಾರಿತ ಆಧುನಿಕ ಕೃಷಿ ಪದ್ಧತಿಯನ್ನು ಅವಲಂಬಿಸಿ, ಪರಂಪರಾಗತ ಸ್ವಾವಲಂಬಿ ಗೋ ಆಧಾರಿತ ಕೃಷಿಗೆ ಎಳ್ಳುನೀರು ಬಿಟ್ಟ ನಂತರ ಎಂಬುದನ್ನು ಗಮನಿಸಬೇಕಾದ ಅಗತ್ಯವಿದೆ.

ಗೋ ಆಧಾರಿತ ಸಾವಯವ ಕೃಷಿ ನಡೆಸುತ್ತಿದ್ದಾಗ ಸೂಕ್ಷ್ಮ ಜೀವಿಗಳಿಂದ ಸಮೃದ್ಧವಾಗಿದ್ದ ಭೂಮಿ ರಸಗೊಬ್ಬರ ಪ್ರಯೋಗದ ಬಳಿಕ ಬರಡಾಗಿ ಉತ್ಪಾದನೆ ಕುಸಿದದ್ದು ಒಂದೆಡೆಯಾದರೆ, ಮನೆಯಲ್ಲೇ ತಯಾರಾಗುತ್ತಿದ್ದ ಗೊಬ್ಬರಕ್ಕೆ ಬದಲಾಗಿ ಕಂಪೆನಿಗಳು ಬಿಡುಗಡೆ ಮಾಡುವ ರಸಗೊಬ್ಬರಕ್ಕಾಗಿ, ಕೀಟನಾಶಕಕ್ಕಾಗಿ ಅಂಗಡಿಗಳ ಮುಂದೆ ಕ್ಯೂ ನಿಲ್ಲುವ ಪರಿಸ್ಥಿತಿಗೆ ರೈತ ಬಂದದ್ದು ಇನ್ನೊಂದೆಡೆ. ಪರಿಣಾಮವಾಗಿ ಕನಿಷ್ಠ ಪ್ರಮಾಣದಲ್ಲಿದ್ದ ಕೃಷಿ ವೆಚ್ಚ ಕೈ ಮೀರಿ ಬೆಳೆದದ್ದು ರೈತರ ಸಾಲ ವೃದ್ಧಿ- ತನ್ಮೂಲಕ ಸಂಕಟ ವೃದ್ಧಿಗೆ ಕಾರಣವಾದದ್ದು ಕಣ್ಣಿಗೆ ಕಾಣುವ ಸತ್ಯ.

ಜೊತೆಗೆ ರೈತರ ಬೆಳೆಗಳಿಗೆ ವೈಜ್ಞಾನಿಕವಾಗಿ ಬೆಲೆ ಸಿಗದಂತೆ ಮಾಡಿರುವ ನಮ್ಮ ಆರ್ಥಿಕ ಸಾಮಾಜಿಕ ವ್ಯವಸ್ಥೆ ಕೂಡಾ ರೈತರ ಜೀವನ ಅಸಹನೀಯವಾಗುವಂತೆ ಮಾಡಿದ್ದು ಪುಟ್ಟ ಮಕ್ಕಳಿಗೂ ಅರ್ಥವಾಗುವ ವಿಚಾರ.

ಮಳೆ ಬಂದೊಡನೆ ಸಾಲು ಸಾಲಾಗಿ ನೇಗಿಲು ಹಿಡಿದು ಎತ್ತುಗಳೊಂದಿಗೆ ಉಳುಮೆಗೆ ಸಾಗಿ ವ್ಯವಸಾಯ ಕೆಲಸ ಆರಂಭಿಸುತ್ತಿದ್ದ ರೈತರು ತಮ್ಮ ಮನೆಯಲ್ಲೇ ಕಾಪಿಡುತ್ತಿದ್ದ ಬೀಜ ಬಳಸುತ್ತಿದ್ದುದು, ಹಟ್ಟಿ ಗೊಬ್ಬರ ಹಾಕಿ ಬೆಳೆ ತೆಗೆಯುತ್ತಿದ್ದ ಆಗಿನ ನೆಮ್ಮದಿಯ ಕಾಲ ಎಲ್ಲಿ?

ಮಳೆ ಬಂದೊಡನೆ ಬೀಜ, ರಸಗೊಬ್ಬರ, ಕೀಟನಾಶಕಕ್ಕಾಗಿ ಅಂಗಡಿಗಳಲ್ಲಿ ಕ್ಯೂ ನಿಲ್ಲಬೇಕಾಗಿ ಬಂದಿರುವ, ಅದಕ್ಕಾಗಿ ಬೀದಿಗಳಲ್ಲಿ ಚಳವಳಿ ಮಾಡಬೇಕಾಗಿ ಬಂದಿರುವ, ಲಾಠಿ, ಗುಂಡಿಗೆ ಎದೆಯೊಡ್ಡಬೇಕಾಗಿ ಬಂದಿರುವ ಇಂದಿನ ಕಾಲ ಎಲ್ಲಿ?

ರೈತರ ಸಂಕಷ್ಟಗಳಿಗೆಲ್ಲ ಓಬೀರಾಯನ ಕಾಲದ ಜಮೀನ್ದಾರಿ ಪದ್ಧತಿ ಒಂದೇ ಕಾರಣ ಎಂಬುದಾಗಿ ಬಿಂಬಿಸುವ ಬದಲು ಆಧುನಿಕ ವ್ಯವಸ್ಥೆಯ ಅವ್ಯವಸ್ಥೆಗಳನ್ನು ಕೂಡಾ 'ಸಮ್ಮರ್ ಆಫ್ 2007' ಬಿಚ್ಚಿಟ್ಟರೆ, ಜನರ ಸಮಾಜದ ಕಣ್ಣು ತೆರೆಸಲು ಅದು ಸಮರ್ಥವಾಗಬಹುದು. ಇಲ್ಲದೇ ಇದ್ದರೆ ರೈತರ ಆತ್ಮಹತ್ಯೆಯ ಹೆಸರಿನಲ್ಲಿ ಮೋಜು ಮಾಡುವವರ ಪಾಲಿಗೆ ಅದು ಇನ್ನೊಂದು ಮೋಜಿನ- ಮನರಂಜನೆಯ ಚಿತ್ರವಾದೀತು ಅಷ್ಟೆ.

ಇದೆಲ್ಲಕ್ಕಿಂತ ಹೆಚ್ಚಾಗಿ, ರೈತರು ರಸಗೊಬ್ಬರ - ಕೀಟನಾಶಕದಿಂದ ಅಧಿಕ ಸಂಪತ್ತು ಎಂಬ ಭ್ರಮೆಯ ಮೊಟ್ಟೆಯನ್ನು ಒಡೆದುಕೊಂಡು ಹೊರಬರಬೇಕಾಗಿದೆ. ಮಳೆ ನೀರು ಕೊಯ್ಲು, ಸಹಜ ಕೃಷಿ, ಗೋ ಆಧಾರಿತ ಸಾವಯವ ಕೃಷಿಯೊಂದೇ ಭೂಮಿಯ ಫಲವತ್ತತೆ ಹೆಚ್ಚಳ, ಸಮೃದ್ಧ ಆಹಾರ ಧಾನ್ಯ ಉತ್ಪಾದನೆ, ಸುಖೀ ಸ್ವಾವಲಂಬಿ ಬದುಕಿಗೆ ಬುನಾದಿ ಎಂಬುದನ್ನು ಅರಿತುಕೊಳ್ಳಬೇಕಾಗಿದೆ.

ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ, ಆರ್ಟ್ ಆಫ್ ಲಿವಿಂಗ್ ನ ಶ್ರೀ ಶ್ರೀ ರವಿಶಂಕರ ಗುರೂಜಿ, ಬಾಲಗಂಗಾಧರ ನಾಥ ಸ್ವಾಮೀಜಿ ಸೇರಿದಂತೆ ಹಲವಾರು ಮಂದಿ ಸಂತರು ಹಿರಿಯರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ರೈತರು ಅಂತಹವರ ಮಾರ್ಗದರ್ಶನ ಪಡೆಯಲು ಮುಂದಾಗಬೇಕಾದ್ದು ಇಂದಿನ ಅಗತ್ಯ

1 comment:

ಕುಕೂಊ.. said...

ಉಳಿದಿದ್ದೆಲ್ಲಾ ಓಕೆ ಆದರೆ ಈ ಕದೀಮ ಸ್ವಾಮಿ, ಸಂತರು, ಇಲ್ಲಿ ಬಂದರು ಯಾಕೆ?
"ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ, ಆರ್ಟ್ ಆಫ್ ಲಿವಿಂಗ್ ನ ಶ್ರೀ ಶ್ರೀ ರವಿಶಂಕರ ಗುರೂಜಿ, ಬಾಲಗಂಗಾಧರ ನಾಥ ಸ್ವಾಮೀಜಿ ಸೇರಿದಂತೆ ಹಲವಾರು ಮಂದಿ ಸಂತರು ಹಿರಿಯರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ರೈತರು ಅಂತಹವರ ಮಾರ್ಗದರ್ಶನ ಪಡೆಯಲು ಮುಂದಾಗಬೇಕಾದ್ದು ಇಂದಿನ ಅಗತ್ಯ "

ಇವರಿಗೆ ಧರ್ಮ, ಸಮಾಜ, ಮಾನವಯಿತೆಗಿಂತ ರಾಜಿಕಿಯ ಮುಖ್ಯಗುರು. ಗುರು ನಮ್ಮಪ್ಪನಾಣೆಯಾಗಿ ಯಾವ ಧರ್ಮ ಗುರುಗುಳಿಗೂ ಈ ಕಾಳಜಿ ಇಲ್ಲ. ನಾನು ಚಿಕ್ಕವನಾಗಿದ್ದಾಗಿನಿಂದ ನೋಡಿದ್ದೇನೆ. ಅಲ್ಲೊಬ್ಬರು ಇಲ್ಲೊಬ್ಬರು ಬೆರೆಳೆಣಿಕೆಯಷ್ಟು ಬಿಟ್ಟು ಎಲ್ಲರೂ ಅಷ್ಟೆಯ. ನಿಜವಾಗ್ಲು ಹೇಳು ಗುರು ನೀವು ಮೇಲೆ ಹೇಳಿರೋ ಯಾವ ಸ್ವಾಮಿಗಾದರು ರೈತರ ಹಿತಾಸಕ್ತಿ ಕಾಪಾಡೋ ಕಾಳಜಿ ಇದೆಯ? ದೇವರಾಣೆಗೂ ಇಂತಹ ಸಲಹೆ ನಮ್ಮ ಪಾಪಿ ರೈತರಿಗೆ ಕೊಡಬೇಡ. ರಾಕ್ಷಸ ಕುಲದವರರು ಇವರು. ರಾಜಿಕಿಯ ದೊಂಬರಾಟ ಇವರೆಲ್ಲರಿಗೂ ಬೇಕು ಗುರು. ಐ.ಟಿ ಜನಬೇಕು ಇವರಿಗೆ. ರೈತರೆಲ್ಲಿ ಬೇಕು? ಬರಿ ಹೋಳು ಬಿಡ್ತಾರೆ ಈ ಕಾವಿಗಳು.

ತಪ್ಪು ತಿಳಿಬೇಡಿ ಈ ರೀತಿ ಈ ಕದೀಮರಿಗೆ ಬೈದೆ ಅಂತ. ಆದರೆ ಅವರಿರುವುದೇ ಆಗೆ. ಬೇರೆ ಏನಾದರು ಒಳ್ಳೇ ದಾರಿ ಇದ್ದರೆ ತೋರಿಸು ಗುರು ನಮ್ಮ ಪಾಪದ ರೈತರಿಗೆ. ಈ ಸ್ವಾಮಿಗಳ ಹತ್ತಿರ ಮಾತ್ರ ಹೋಗು ಅಂತ ಹೇಳಬೇಡ.

ಕುಮಾರಸ್ವಾಮಿ. ಕಡಾಕೊಳ್ಳ
ಪುಣೆ

Advertisement