My Blog List

Sunday, June 22, 2008

ಇಂದಿನ ಇತಿಹಾಸ History Today ಜೂನ್ 21

ಇಂದಿನ ಇತಿಹಾಸ

ಜೂನ್ 21

ನಕಲಿ ಛಾಪಾ ಕಾಗದ ಹಗರಣದ ರೂವಾರಿ ಅಬ್ದುಲ್ ಕರೀಂ ಲಾಲಾ ತೆಲಗಿ ಹಾಗೂ ಆತನಿಗೆ ನಕಲಿ ವೈದ್ಯಕೀಯ ಪ್ರಮಾಣ ಪತ್ರ ನೀಡಲು ಸಹಕರಿಸಿದ ಬೆಂಗಳೂರು ನಗರದ ಇಬ್ಬರು ವೈದ್ಯರಿಗೆ ತಲಾ 7 ವರ್ಷಗಳ ಕಠಿಣ ಸಜೆ ವಿಧಿಸಿ, ನಗರ ವಿಶೇಷ ನ್ಯಾಯಾಲಯ ಆದೇಶಿಸಿತು.

2007: ನಕಲಿ ಛಾಪಾ ಕಾಗದ ಹಗರಣದ ರೂವಾರಿ ಅಬ್ದುಲ್ ಕರೀಂ ಲಾಲಾ ತೆಲಗಿ ಹಾಗೂ ಆತನಿಗೆ ನಕಲಿ ವೈದ್ಯಕೀಯ ಪ್ರಮಾಣ ಪತ್ರ ನೀಡಲು ಸಹಕರಿಸಿದ ಬೆಂಗಳೂರು ನಗರದ ಇಬ್ಬರು ವೈದ್ಯರಿಗೆ ತಲಾ 7 ವರ್ಷಗಳ ಕಠಿಣ ಸಜೆ ವಿಧಿಸಿ, ನಗರ ವಿಶೇಷ ನ್ಯಾಯಾಲಯ ಆದೇಶಿಸಿತು. ತೆಲಗಿಗೆ 25 ಲಕ್ಷ ರೂಪಾಯಿ ದಂಡ ಹಾಗೂ ನಗರದ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರಾದ ಡಾ. ಜ್ಞಾನೇಂದ್ರಪ್ಪ ಹಾಗೂ ಡಾ. ಕೆ.ಎಂ.ಚೆನ್ನಕೇಶವ ಅವರಿಗೆ ನ್ಯಾಯಾಧೀಶ ವಿಶ್ವನಾಥ ವಿರೂಪಾಕ್ಷ ಅಂಗಡಿ ಅವರು ತಲಾ 14 ಲಕ್ಷ ರೂ. ದಂಡ ವಿಧಿಸಿದರು. ದಂಡ ನೀಡಲು ತಪ್ಪಿದಲ್ಲಿ ಎರಡು ವರ್ಷಗಳ ಹೆಚ್ಚುವರಿ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದೂ ಅವರು ಹೇಳಿದರು. ತೆಲಗಿಗೆ ಈಗಾಗಲೇ 3 ಪ್ರಕರಣಗಳಲ್ಲಿ ಶಿಕ್ಷೆಯಾಗಿದ್ದು, ಭ್ರಷ್ಟಾಚಾರ ನಿರ್ಮೂಲನ ಕಾಯ್ದೆ ಅಡಿ ಶಿಕ್ಷೆಯಾಗಿರುವ ಪ್ರಕರಣ ಇದೇ ಮೊದಲನೆಯದು. ಈತ ಜೈಲಿನಲ್ಲಿದ್ದಾಗ ನಕಲಿ ವೈದ್ಯಕೀಯ ಪ್ರಮಾಣ ಪತ್ರ ನೀಡಿರುವ ತಪ್ಪಿಗಾಗಿ ವೈದ್ಯರಿಬ್ಬರೂ ಶಿಕ್ಷೆಗೆ ಒಳಗಾದರು. ಈ ಪ್ರಕರಣದಲ್ಲಿ ಪುಣೆಯ ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ತೆಲಗಿಯ ವಿಚಾರಣೆ ನಡೆಸಲಾಗಿತ್ತು.

2007: ರಾಷ್ಟ್ರಪತಿ ಸ್ಥಾನಕ್ಕೆ ಯುಪಿಎಯ ಅಭ್ಯರ್ಥಿಯಾದ ಪ್ರತಿಭಾ ಪಾಟೀಲ್ ರಾಜಸ್ಥಾನದ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿದರು. ರಾಷ್ಟ್ರಪತಿ ಎ.ಪಿ.ಜೆ ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿ ಭವನದಲ್ಲಿ ಈದಿನ ಮಧ್ಯಾಹ್ನ 3.45ಕ್ಕೆ ಭೇಟಿಯಾದ ಪ್ರತಿಭಾ ಅವರು ರಾಜೀನಾಮೆ ಪತ ಸಲ್ಲಿಸಿದರು. 73ರ ಹರೆಯದ ಪ್ರತಿಭಾ 2004 ರಿಂದ ರಾಜಸ್ಥಾನದ ರಾಜ್ಯಪಾಲರಾಗಿ ಅಧಿಕಾರದಲ್ಲಿದ್ದರು.

2007: ವಿಶ್ವದಾಖಲೆ ಸ್ಥಾಪಿಸುವ ನೆಪದಲ್ಲಿ 15ರ ಹರೆಯದ ಬಾಲಕನೊಬ್ಬ ಸಿಜೇರಿಯನ್ ಶಸ್ತ್ರಕ್ರಿಯೆ ನಡೆಸಿದ ಘಟನೆಯ ಬಗ್ಗೆ ತನಿಖೆ ನಡೆಸುವಂತೆ ತಿರುಚಿರಾಪಳ್ಳಿ ಜಿಲ್ಲಾಧಿಕಾರಿ ಅಶೀಶ್ ವಚಾನಿ ಆದೇಶಿಸಿದರು. ಘಟನೆಯ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ವರದಿ ಒಪ್ಪಿಸುವಂತೆ ತಿರುಚ್ಚಿಯ ಕಂದಾಯ ವಿಭಾಗದ ಅಧಿಕಾರಿಗೆ ಜಿಲ್ಲಾಧಿಕಾರಿ ಆಜ್ಞಾಪಿಸಿದರು. `ಘಟನೆ ನಡೆದಿರುವುದು ನಿಜವೆಂದು ಸಾಬೀತಾದರೆ ಇದಕ್ಕೆ ಕಾರಣರಾದ ವೈದ್ಯ ದಂಪತಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ' ಎಂದು ವಚಾನಿ ತಮ್ಮ ಹೇಳಿಕೆಯಲ್ಲಿ ತಿಳಿಸಿದರು. ಗಿನ್ನೆಸ್ ದಾಖಲೆ ಸ್ಥಾಪಿಸುವ ಸಲುವಾಗಿ 10ನೇ ತರಗತಿಯ ವಿದ್ಯಾರ್ಥಿ 15ರ ಹರೆಯದ ಎಂ. ದಿಲೀಪನ್ ರಾಜ್ ತಿರುಚಿರಾಪಳ್ಳಿಯ ಮಥಿ ಹೆರಿಗೆ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರಿಗೆ ಸಿಜೇರಿಯನ್ ಶಸ್ತ್ರಕ್ರಿಯೆ ನಡೆಸಿದ್ದ. ಇದಕ್ಕೆ ವೈದ್ಯರಾಗಿರುವ ತಂದೆ ಮುರುಗೇಶನ್ ಮತ್ತು ಪ್ರಸೂತಿ ತಜ್ಞೆಯಾಗಿರುವ ತಾಯಿ ಎಂ. ಗಾಂಧಿಮತಿ ಮಾರ್ಗದರ್ಶನ ನೀಡಿದ್ದರು. ಭಾರತೀಯ ವೈದ್ಯಕೀಯ ಸಂಘದ (ಐಎಂಎ)ನ ತಮಿಳುನಾಡು ವಿಭಾಗ ಬಾಲಕನ ದುಸ್ಸಾಹಸವನ್ನು ಗಂಭೀರವಾಗಿ ಪರಿಗಣಿಸಿದ ಕಾರಣ ಈ ಘಟನೆ ಹೊರಲೋಕದ ಅರಿವಿಗೆ ಬಂದಿತು.

2007: 1993ರಲ್ಲಿ ಆರೆಸ್ಸೆಸ್ ಮುಖ್ಯ ಕಚೇರಿ ಮೇಲೆ ಬಾಂಬ್ ದಾಳಿ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಯೋಜಿತ ಕೋರ್ಟ್ ಟಾಡಾ ಕಾಯ್ದೆ ಅನ್ವಯ 11 ಮಂದಿಯನ್ನು ತಪ್ಪಿತಸ್ಥರು ಎಂದು ತೀರ್ಪು ನೀಡಿತು. ನಿಷೇಧಿತ ಅಲ್ ಉಮ್ಮಾ ಸಂಘಟನೆಯ ನಾಯಕ ಎಸ್. ಎ. ಪಾಶಾ ಸೇರಿದಂತೆ ನಾಲ್ವರನ್ನು ನ್ಯಾಯಲಯ ಆರೋಪ ಮುಕ್ತ ಗೊಳಿಸಿತು. ಈ ಬಾಂಬ್ ಸ್ಫೋಟ ಪ್ರಕರಣದಲ್ಲಿ 11 ಜನ ಮೃತರಾಗಿದ್ದರು. ನ್ಯಾಯಮೂರ್ತಿ ಟಿ.ರಾಮಸ್ವಾಮಿ ಅವರು ಈ ತೀರ್ಪು ನೀಡಿದರು. ಪ್ರಕರಣದಲ್ಲಿ ಭಾಗಿಯಾದ ಇನ್ನೂ ಏಳು ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಮುಸ್ತಾಕ್ ಅಹ್ಮದ್ ಎನ್ನುವ ವ್ಯಕ್ತಿ ತಲೆಮರೆಸಿಕೊಂಡಿದ್ದಾನೆ. ಘಟನೆಂಯಲ್ಲಿ ಭಾಗಿಯಾಗಿದ್ದ ಐಎಸ್ ಐ ಏಜೆಂಟ್ ಇಮಾಮ್ ಅಲಿ ಮತ್ತು ಜೆಹಾದ್ ಸಮಿತಿ ಸಂಸ್ಥಾಪಕ ಪಳನಿ ಬಾಬಾನನ್ನು ಬೇರೆ ಪ್ರಕರಣದಲ್ಲಿ ಹತ್ಯೆ ಮಾಡಲಾಗಿತ್ತು.

2007: ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ವಿಭಜಿಸಿ ಕ್ರಮವಾಗಿ ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಗಳನ್ನಾಗಿ ರಚಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿತು.. ಹತ್ತು ವರ್ಷಗಳ ಹಿಂದೆ ಆಗಿನ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಏಳು ಹೊಸ ಜಿಲ್ಲೆಗಳನ್ನು ರಚಿಸಿದ್ದರು.

2007: ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ ಸೇರಿದಂತೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಏಳು ಗಗನಯಾತ್ರಿಗಳನ್ನು ಭೂಮಿಗೆ ಮರಳಿ ಕರೆತರುತ್ತಿದ್ದ ಬಾಹ್ಯಾಕಾಶ ನೌಕೆ ಅಟ್ಲಾಂಟಿಸ್ ನ ಭೂಸ್ಪರ್ಶವನ್ನು ಪ್ರತಿಕೂಲ ಹವಾಮಾನ ಕಾರಣ ಮುಂದೂಡಲಾಯಿತು. ನಿಗದಿತ ವೇಳಾಪಟ್ಟಿಯಂತೆ ಈದಿನ ರಾತ್ರಿ 11.24ರ ಸುಮಾರಿಗೆ (ಭಾರತೀಯ ಕಾಲಮಾನ) ಫ್ಲಾರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿ ಅಂತರಿಕ್ಷ ನೌಕೆ ಇಳಿಯಬೇಕಿತ್ತು. ಆದರೆ, ಫ್ಲಾರಿಡಾದಲ್ಲಿ ಮೋಡ ಕವಿದ ವಾತಾವರಣ, ಗುಡುಗು, ಮಿಂಚು ಹಾಗೂ ಬಿರುಗಾಳಿ ಕಾರಣದಿಂದ ರಾತ್ರಿ ಒಂದು ಗಂಟೆಗೆ ಮುಂದೂಡಲಾಯಿತು. ನಂತರ ಅಂತಿಮವಾಗಿ ಮುಂದೂಡಲಾಯಿತು.

2007: ಕಮ್ಯೂನಿಕೇಷನ್ ಫಾರ್ ಡೆವಲಪ್ ಮೆಂಟ್ ಅಂಡ್ ಲರ್ನಿಂಗ್ ಸಂಸ್ಥೆ ನೀಡುವ ಚರಕ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿಗೆ 2006ನೇ ಸಾಲಿನಲ್ಲಿ ರವೀಂದ್ರ ಭಟ್ ಐನಕೈ, ರಾಜಶೇಖರ ಜೋಗಿಮನೆ ಹಾಗೂ ಅಭಿವೃದ್ಧಿ ಪತ್ರಿಕೋದ್ಯಮ ಪ್ರೋತ್ಸಾಹಕ ಪ್ರಶಸ್ತಿಗೆ ಶ್ರೀಪಡ್ರೆ ಆಯ್ಕೆಯಾದರು.

2007: ಸರ್ಕಾರಿ ಸ್ವಾಮ್ಯದ ಹಿಂದುಸ್ಥಾನ್ ಪೆಟ್ರೋಲಿಯಂ ಕಂಪೆನಿಯ ಭಟಿಂಡಾ ತೈಲ ಸಂಸ್ಕರಣೆ ಘಟಕದ ಶೇಕಡಾ 49ರಷ್ಟು ಷೇರನ್ನು ಖರೀದಿಸಲು ಉಕ್ಕು ಸಾಮ್ರಾಟ ಲಕ್ಷ್ಮಿ ಮಿತ್ತಲ್ ಅವರಿಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿತು.

2006: ಸಿಬ್ಬಂದಿ ಸೇರಿದಂತೆ ಸುಮಾರು 70 ಜನರಿದ್ದ ಹಡಗೊಂದು ಜಕಾರ್ತದ ಸುಮಾತ್ರಾ ದ್ವೀಪ ಸಮೀಪದಲ್ಲಿ ಸಮುದ್ರದಲ್ಲಿ ಮುಳುಗಿ ಎಲ್ಲರೂ ಸಾವನ್ನಪ್ಪಿದರು. ಸಿಬೊಲ್ಗಾ ಬಂದರಿನಿಂದ ಸುಮಾರು 64 ಕಿ.ಮೀ. ಅಂತರದಲ್ಲಿ ಈ ದುರಂತ ಸಂಭವಿಸಿತು. ಹವಾಮಾನದ ದುಷ್ಪರಿಣಾಮ ಮತ್ತು ಹಡಗಿನಲ್ಲಿ ಉಂಟಾಗಿದ್ದ ರಂಧ್ರದಿಂದ ಈ ದುರಂತ ಸಂಭವಿಸಿತು.

2006: ಒಟ್ಟಾವಾದಲ್ಲಿ 1985ರಲ್ಲಿ ಬಾಂಬ್ ಸ್ಫೋಟದಿಂದ 324 ಪ್ರಯಾಣಿಕರು ಹತರಾದ ಕನಿಷ್ಕ ಏರ್ ಇಂಡಿಯಾ ವಿಮಾನ ದುರಂತದ ನ್ಯಾಯಾಂಗ ತನಿಖೆಯನ್ನು ಕೆನಡಾದ ಮಾಜಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಜಾನ್ ಮೇಜರ್ ಟೊರಾಂಟೊದಲ್ಲಿ ಆರಂಭಿಸಿದರು. ಈ ಹಿಂದಿನ ಎರಡು ವಿಚಾರಣೆಗಳಲ್ಲೂನ್ಯಾಯಾಲಯ ಇಬ್ಬರು ಸಿಖ್ ಪ್ರತ್ಯೇಕತಾವಾದಿಗಳನ್ನು ಆರೋಪ ಮುಕ್ತಗೊಳಿಸಿದ ಕ್ರಮವನ್ನು ಪ್ರಶ್ನಿಸಿ ದುರಂತದಲ್ಲಿ ಮಡಿದವರ ಕುಟುಂಬದ ಸದಸ್ಯರು ಕೆನಡಾ ಸರ್ಕಾರಕ್ಕ್ಕೆ ಮನವಿ ಸಲ್ಲಿಸಿದ ಮೇರೆಗೆ ಹೊಸದಾಗಿ ಇನ್ನೊಮ್ಮೆ ನ್ಯಾಯಮೂರ್ತಿ ಜಾನ್ ಮೇಜರ್ ನೇತೃತ್ವದಲ್ಲಿ ಸಾರ್ವಜನಿಕ ತನಿಖೆಗೆ ಆದೇಶಿಸಲಾಗಿತ್ತು.

2006: ಭಾರತೀಯ ಮೂಲದ ಅಮೆರಿಕನ್ ಪ್ರಜೆ ರಾಜನ್ ಝೆಡ್ ಅವರನ್ನು ಅಂತಾರಾಷ್ಟ್ರೀಯ ವಾಣಿಜ್ಯ ಸಂಘಟನೆ ನೆವಾಡಾ ಜಾಗತಿಕ ವಾಣಿಜ್ಯ ಮಂಡಳಿಯ (ಎನ್ ಇಡಬ್ಲ್ಯೂಟಿಆರ್ ಎಸಿ) ನಿರ್ದೇಶಕರಲ್ಲಿ ಒಬ್ಬರನ್ನಾಗಿ ನೇಮಕ ಮಾಡಲಾಯಿತು. ನೆವಾಡಾದ ರೆನೋ ನಿವಾಸಿಯಾಗಿರುವ ರಾಜನ್ ಅವರು ಅಮೆರಿಕಕ್ಕೆ ವಲಸೆ ಹೋಗುವ ಮುನ್ನ ಭಾರತದಲ್ಲಿ ಪತ್ರಕರ್ತರಾಗಿದ್ದರು.

2006: ಈಶಾನ್ಯ ಚೀನಾದ ಜಿಲಿನ್ ಪ್ರಾಂತದಲ್ಲಿ ಕನಿಷ್ಠ 3000 ವರ್ಷಗಳಷ್ಟು ಹಳೆಯದಾದ ಪಿರಮಿಡ್ಡುಗಳನ್ನು ಚೀನೀ ಪ್ರಾಕ್ತನ ತಜ್ಞರು ಪತ್ತೆ ಹಚ್ಚಿದರು.

2006: ಕರ್ನಾಟಕದಾದ್ಯಂತ ಹರಡಿರುವ ಚಿಕುನ್ ಗುನ್ಯ ರೋಗಕ್ಕೆ ಹುಬ್ಬಳ್ಳಿಯ ಸರ್ಕಾರಿ ಆಯುರ್ವೇದ ಕಾಲೇಜಿನ ಸ್ನಾತಕೋತ್ತರ ವಿಭಾಗವು ಔಷಧ ಕಂಡು ಹಿಡಿದಿದ್ದು, ರೋಗಿಗಳಿಗೆ ಉಚಿತವಾಗಿ ಹಂಚಲು ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಾಚಾರ್ಯ ಡಾ. ಎಂ.ಎ. ಕುಂದಗೋಳ ಪ್ರಕಟಿಸಿದರು.

2006: ಇಂಡೋನೇಷ್ಯದ ಸುಲೇಸಿಯಾ ಪ್ರಾಂತ್ಯದಲ್ಲಿ ಎರಡು ದಿನಗಳಿಂದ ಸತತ ಮಳೆ ಸುರಿದ ಪರಿಣಾಮವಾಗಿ ಭೂಕುಸಿತಗಳು ಸಂಭವಿಸಿ 114 ಮಂದಿ ಮೃತರಾದರು.

1991: ಪಿ.ವಿ. ನರಸಿಂಹರಾವ್ ಅವರು ಭಾರತದ 9ನೇ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು.

1977: ಮೊನಾಚೆಮ್ ಬೆಗಿನ್ ಇಸ್ರೇಲಿನ 6ನೇ ಪ್ರಧಾನಮಂತ್ರಿಯಾದರು.

1970: ಮೆಕ್ಸಿಕೋ ನಗರದಲ್ಲಿ ಇಟಲಿಯನ್ನು ಸೋಲಿಸಿದ ಬ್ರೆಜಿಲ್ ಮೂರನೇ ಬಾರಿಗೆ ಸಾಕರ್ ವರ್ಲ್ಡ್ ಚಾಂಪಿಯನ್ ಎನಿಸಿಕೊಂಡು ದಾಖಲೆ ನಿರ್ಮಿಸಿತು. ಜೂಲ್ಸ್ ರಿಮೆಟ್ ಟ್ರೋಫಿಯನ್ನು ಕಾಯಂ ಆಗಿ ಇರಿಸಿಕೊಳ್ಳಲು ಬ್ರೆಜಿಲ್ ಗೆ ಅನುಮತಿ ನೀಡಲಾಯಿತು.

1963: ಕಾರ್ಡಿನಲ್ ಗಿಯಾವನ್ನಿ ಬಟ್ಟಿಸ್ಟ ಮೊಂಟಿನಿ ಅವರು ರೋಮನ್ ಕ್ಯಾಥೋಲಿಕ್ ಚರ್ಚಿನ ದಿವಂಗತ ಪೋಪ್ 23ನೇ ಜಾನ್ ಅವರ ಉತ್ತರಾಧಿಕಾರಿಯಾಗಿ ಆಯ್ಕೆಯಾದರು. ಅವರು 6ನೇ ಪೌಲ್ ಎಂಬ ಹೆಸರನ್ನು ಪಡೆದುಕೊಂಡರು.

1956: ಶಂಭುಗೌಡ ನೀ. ಪಾಟೀಲ ಜನನ.

1953: ಪಾಕಿಸ್ಥಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಜನ್ಮದಿನ. 1988ರಲ್ಲಿ ಪಾಕಿಸ್ತಾನದ ಪ್ರಧಾನಮಂತ್ರಿಯಾದ ಇವರು ಆಧುನಿಕ ಇತಿಹಾಸದಲ್ಲಿ ಮುಸ್ಲಿಂ ರಾಷ್ಟ್ರವೊಂದರಲ್ಲಿ ಮೊತ್ತ ಮೊದಲ ಬಾರಿಗೆ ಪ್ರಧಾನಿಯಾದ ನಾಯಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

1948: ಚಕ್ರವರ್ತಿ ರಾಜಗೋಪಾಲಾಚಾರಿ (ರಾಜಾಜಿ) ಅವರು ಭಾರತದ ಮೊತ್ತ ಮೊದಲ ಹಾಗೂ ಏಕೈಕ ಗವರ್ನರ್ ಜನರಲ್ ಆಗಿ ನೇಮಕಗೊಂಡರು.

1947: ಸಾಹಿತಿ ಈಚನೂರು ಜಯಲಕ್ಷ್ಮಿ ಅವರು ಖ್ಯಾತ ಸೂತ್ರದ ಬೊಂಬೆಯಾಟಗಾರ ಸೀತಾರಾಮಯ್ಯ- ಸಾವಿತ್ರಮ್ಮ ದಂಪತಿಯ ಮಗಳಾಗಿ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಈಚನೂರು ಗ್ರಾಮದಲ್ಲಿ ಜನಿಸಿದರು.

1940: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪಕ ಕೇಶವ ಬಲಿರಾಮ ಹೆಡಗೇವಾರ್ ಈ ದಿನ ನಿಧನರಾದರು. 1889ರ ಏಪ್ರಿಲ್ 1ರಂದು ನಾಗಪುರದಲ್ಲಿ ಜನಿಸಿದ ಇವರು 1925ರಲ್ಲಿ ನಾಗಪುರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಸ್ಥಾಪಿಸಿದರು.

1932: ಭಾರತೀಯ ಚಲನಚಿತ್ರನಟ ಅಮರೇಶ್ ಪುರಿ ಜನ್ಮದಿನ.

1926: ಪುರುಷರಿಗೆ ಸರಿಸಮಾನವಾಗಿ ನಾಟಕ ಸಂಸ್ಥೆ ಕಟ್ಟಿ ಬೆಳೆಸಿ ಮಹಿಳೆಯರಿಂದಲೇ ನಾಟಕ ಮಾಡಿಸಿ, ಪುರುಷ ಪಾತ್ರಗಳನ್ನೂ ನಿರ್ವಹಿಸಿ ಪ್ರೇಕ್ಷಕರಿಂದ ಸೈ ಎನ್ನಿಸಿಕೊಂಡ ಕಲಾವಿದೆ ನಾಗರತ್ನಮ್ಮ ಕೃಷ್ಣ ಭಟ್ಟ- ರುಕ್ಮಿಣಿಯಮ್ಮ ದಂಪತಿಯ ಮಗಳಾಗಿ ಮೈಸೂರಿನಲ್ಲಿ ಜನಿಸಿದರು.

1907: ಕಲಾವಿದ ಕೆರೆಮನೆ ಶಿವರಾಮ ಹೆಗಡೆ ಜನನ.

1906: ಸಾಹಿತಿ ಕಾಮಾಕ್ಷಮ್ಮ ಆರ್. ಜನನ.

1906: ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಮೊದಲ ಅಧ್ಯಕ್ಷ ಉಮೇಶ ಚಂದ್ರ ಬ್ಯಾನರ್ಜಿ ನಿಧನರಾದರು.

1893: ಚಿಕಾಗೋದ ಕೊಲಂಬಿಯನ್ ಪ್ರದರ್ಸನದಲ್ಲಿ `ಫೆರ್ರಿಸ್ ವ್ಹೀಲ್' ಪ್ರದಶರ್ಿಸಲಾಯಿತು. ಪಿಟ್ಸ್ ಬರ್ಗ್ ಸೇತುವೆ ನಿರ್ಮಾಪಕ ಜಾರ್ಜ್ ಟಬ್ಲ್ಯೂ ಫೆರ್ರಿಸ್ ನ ಸಂಶೋಧನೆ ಇದು. ಪ್ಯಾರಿಸ್ಸಿನ ಐಫೆಲ್ ಗೋಪುರದಂತೆ ಜನರನ್ನು ಆಕರ್ಷಿಸುವ ಸಲುವಾಗಿ ನಿರ್ಮಿಸಲಾದ ಈ `ಫೆರ್ರಿಸ್ ವ್ಹೀಲ್' ನಲ್ಲಿ ಒಂದು ಸಲಕ್ಕೆ 60 ಪ್ರಯಾಣಿಕರನ್ನು ಸುತ್ತಿಸಬಲ್ಲ 36 ತೊಟ್ಟಿಲುಗಳಿದ್ದವು. ಈ ಸಂಶೋಧನೆಯ 4 ವರ್ಷಗಳ ಬಳಿಕ ತನ್ನ 38ನೇ ವಯಸ್ಸಿನಲ್ಲಿಫೆರ್ರಿಸ್ ಮೃತನಾದ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement