Tuesday, July 22, 2008

ಇಂದಿನ ಇತಿಹಾಸ History Today ಜುಲೈ 22

ಇಂದಿನ ಇತಿಹಾಸ

22 ಜುಲೈ

ನವ್ಯ ಕಾದಂಬರಿಕಾರ, ವಿಮರ್ಶಕ, ಕಥೆಗಾರ ಶಾಂತಿನಾಥ ದೇಸಾಯಿ (22-7-1929ರಿಂದ 6-3-1998) ಅವರು ಈದಿನ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಜನಿಸಿದರು.

2007: ರಾಜ್ಯ ಸಭೆಯ ಮಾಜಿ ಉಪ ಸಭಾಪತಿ ನಜ್ಮಾ ಹೆಫ್ತುಲ್ಲಾ ಅವರು ಉಪ ರಾಷ್ಟ್ರಪತಿ ಸ್ಥಾನಕ್ಕೆ ಎನ್ ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸುವರು ಎಂದು ಎನ್ ಡಿಎ ಪ್ರಕಟಿಸಿತು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿವಾಸದಲ್ಲಿ ನಡೆದ ಎನ್ ಡಿಎ ಸಭೆಯ ನಂತರ ಈ ವಿಷಯ ಪ್ರಕಟಿಸಲಾಯಿತು. ನಜ್ಮಾ ಹೆಫ್ತುಲ್ಲಾ ಅವರು ಸ್ವಾತಂತ್ರ್ಯಯೋಧ ಮೌಲಾನ ಅಬುಲ್ ಕಲಾಂ ಆಜಾದ್ ಅವರ ಮೊಮ್ಮಗಳು. ಈ ಮೊದಲು ಇವರು ಕಾಂಗ್ರೆಸ್ಸಿನಲ್ಲಿದ್ದರು.

2007: ಟಿವಿಯಲ್ಲಿ ಕ್ರೈಸ್ತಧರ್ಮದ ಪ್ರಚಾರ ಮಾಡುತ್ತಿದ್ದ ಟಾಮಿ ಫಯೆ ಬಕ್ಕೆರ್ ಮೆಸ್ಸನೆರ್ ಅವರು ದೀರ್ಘಕಾಲದ ಅನಾರೋಗ್ಯದಿಂದ ಕಾನ್ಸಸ್ ಸಿಟಿಯಲ್ಲಿ ಮೃತರಾದರು. ಮೆಸ್ಸನೆರ್ ಅವರು ಕ್ಯಾನ್ಸರಿನಿಂದ ಬಳಲುತ್ತಿದ್ದರು. `ಪ್ರೈಸ್ ದಿ ಲಾರ್ಡ್' ಸಂಘಟನೆಯ ಸಂಸ್ಥಾಪಕರಾದ ಅವರ ಮೊದಲ ಪತಿ ಜಿಮ್ ಬಕ್ಕರ್ ಅವರಿಂದ ಮೆಸ್ಸನೆರ್ ಅವರು ಅಮೆರಿಕದಲ್ಲಿ ಮನೆಮಾತಾಗಿದ್ದರು.

2007: ಜೆ.ಕೆ.ರಾವ್ಲಿಂಗ್ ಬರೆದಿರುವ 'ಹ್ಯಾರಿ ಪಾಟರ್ ಅಂಡ್ ಡೆತ್ಲಿ ಹ್ಯಾಲೊಸ್' ಪುಸ್ತಕದ 30 ಲಕ್ಷ ಪ್ರತಿಗಳು ಲಂಡನ್ನಿನ ನ್ಯಾಚುರಲ್ ಹಿಸ್ಟ್ರಿ ಮ್ಯೂಸಿಯಮ್ಮಿನಲ್ಲಿ 24 ಗಂಟೆಗಳಲ್ಲಿ ಮಾರಾಟವಾಗಿ ಇತಿಹಾಸ ನಿರ್ಮಾಣಗೊಂಡಿತು. ಡಬ್ಲ್ಯು ಎಚ್ ಸ್ಮಿತ್ ಮತ್ತು ವೂಲ್ ವರ್ತ್ಸ್ ಅವರು ಬರೆದಿದ್ದ ಹಿಂದಿನ `ಹ್ಯಾರಿ ಪಾಟರ್' ಪುಸ್ತಕಕ್ಕೆ ಹೋಲಿಸಿದರೆ ಈ ಪುಸ್ತಕದ 10 ಲಕ್ಷದಷ್ಟು ಹೆಚ್ಚು ಪ್ರತಿಗಳು ಮಾರಾಟವಾದವು. ಪುಸ್ತಕವನ್ನು ಮಾರಾಟಕ್ಕೆ ಇಟ್ಟ ಎರಡು ಗಂಟೆಗಳಲ್ಲಿಯೇ 1 ಲಕ್ಷ ಪ್ರತಿ ಖರ್ಚಾಯಿತು ಎಂದು ಪ್ರಕಾಶಕ ಬ್ಲೂಮ್ಸ್ ಬರಿ ಹೇಳಿದರು.

2007: ಸರ್ಕಾರದ ಶಾಂತಿ ಒಪ್ಪಂದವನ್ನು ಉಲ್ಲಂಘಿಸಿ ಪಾಕಿಸ್ತಾನದ ಮಿರಾನ್ ಷಾ ಪ್ರದೇಶದಲ್ಲಿ ಹಿಂಸಾತ್ಮಕ ಚಟುವಟಿಕೆ ನಡೆಸುತ್ತಿದ್ದ 13 ಮಂದಿ ತಾಲಿಬಾನ್ ಉಗ್ರರನ್ನು ಪಾಕ್ ಸೇನೆ ಹತ್ಯೆ ಮಾಡಿತು.

2007: ಮಾಜಿ ಚಾಂಪಿಯನ್ ಗೀತ್ ಸೇಥಿ ಅವರು ಬ್ರಿಟನ್ನಿನ ಲೀಡ್ಸ್ ನಲ್ಲಿ ವಿಶ್ವ ವೃತ್ತಿಪರ ಬಿಲಿಯರ್ಡ್ಸ್ ಚಾಂಪಿಯನ್ ಷಿಪ್ ಫೈನಲ್ ಪ್ರವೇಶಿಸಲು ವಿಫಲರಾದರು. ನಾರ್ಥನ್ ಸ್ನೂಕರ್ ಸೆಂಟರಿನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡಿನ ಮೈಕ್ ರಸ್ಸೆಲ್ ಅವರು 1835-1231ರಲ್ಲಿ ಎಂಟು ಬಾರಿಯ ವಿಶ್ವ ಚಾಂಪಿಯನ್ ಸೇಥಿ ಅವರನ್ನು ಮಣಿಸಿದರು. ಇದೇ ಚಾಂಪಿಯನ್ ಷಿಪ್ ನಲ್ಲಿ ಪೈಪೋಟಿಗೆ ಇಳಿದ ಭಾರತದ ಇತರ ಸ್ಪರ್ಧಿಗಳಾದ ಪಂಕಜ್ ಅಡ್ವಾಣಿ, ದೇವೇಂದ್ರ ಜೋಶಿ, ಅಶೋಕ್ ಶಾಂಡಿಲ್ಯಾ, ಅಲೋಕ್ ಕುಮಾರ್, ಸೌರವ್ ಕೊಠಾರಿ, ಧ್ರುವ ಸೀತಾವಾಲಾ ಅವರು ಆರಂಭದ ಹಂತದಲ್ಲಿಯೇ ಸೋತು ಹೊರ ಬಿದ್ದಿದ್ದರು.

2006: ಹಿರಿಯ ನೃತ್ಯಗುರು ಎಚ್. ಆರ್. ಕೇಶವಮೂರ್ತಿ (87) ನಿಧನರಾದರು. 1949ರಲ್ಲಿ ಇವರು ಕೇಶವ ನೃತ್ಯ ಶಾಲೆಯನ್ನು ಸ್ಥಾಪಿಸಿ ಭರತನಾಟ್ಯವನ್ನು ಅತ್ಯಂತ ಶುದ್ಧ ಶೈಲಿಯಲ್ಲಿ ಬೆಳೆಸಿದವರಲ್ಲಿಪ್ರಮುಖರಾಗಿದ್ದರು.

2006: ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಅವರಿಗೆ ಸೆಡ್ಡು ಹೊಡೆದು ಜಾತ್ಯತೀತ ಜನತಾದಳವನ್ನು ತೊರೆದ ಸಿದ್ದರಾಮಯ್ಯ ನವದೆಹಲಿಯಲ್ಲಿ ವಿಧಿವತ್ತಾಗಿ ಕಾಂಗ್ರೆಸ್ ಸೇರಿದರು.

2006: ರಾಷ್ಟ್ರಪತಿಯವರು ತಿರಸ್ಕರಿಸಿದ `ಲಾಭದ ಹುದ್ದೆ' ಮಸೂದೆಯನ್ನು ಯಾವ ಬದಲಾವಣೆಯನ್ನೂ ಮಾಡದೆ ಯಥಾವತ್ತಾಗಿ ಮತ್ತೆ ಸಂಸತ್ತಿನಲ್ಲಿ ಮಂಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿತು. ಮಸೂದೆಯನ್ನು ಯಥಾವತ್ತಾಗಿ ಅಂಗೀಕರಿಸಬೇಕಾದ ಅಗತ್ಯ ಬಗ್ಗೆ ಪ್ರಧಾನಿ ಮನಮೋಹನ್ ಸಿಂಗ್ ರಾಷ್ಟ್ರಪತಿಗೆ ವಿವರಿಸಿದರು. ಲಾಭದ ಹುದ್ದೆ ವಿನಾಯ್ತಿಗೆ ಬಳಸಿದ ಮಾನದಂಡ ಅಪೂರ್ಣ ಎಂದು ಹೇಳಿದ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ದೇಶವ್ಯಾಪಿ ಅನ್ವಯವಾಗುವಂತಹ ಏಕರೂಪಿ ಸೂತ್ರ ರೂಪಿಸಲು ಸಲಹೆ ಮಾಡಿದ್ದರು. ವಿನಾಯ್ತಿಗೆ ಬಳಸುವ ಮಾನದಂಡಗಳು ನಿಷ್ಪಕ್ಷಪಾತ, ಪಾರದರ್ಶಕ, ಗೊಂದಲ ರಹಿತವಾಗಿರಬೇಕು ಎಂದು ಅವರು ಸೂಚಿಸಿದ್ದರು.

2000: ಪಾಕಿಸ್ತಾನದ ನ್ಯಾಯಾಲಯವೊಂದು ನವಾಜ್ ಷರೀಫ್ ಅವರಿಗೆ 14 ವರ್ಷಗಳ ಶಿಕ್ಷೆ ಮತ್ತು 21 ವರ್ಷಗಳ ಅವಧಿಯ ರಾಜಕೀಯ ಬಹಿಷ್ಕಾರವನ್ನು ವಿಧಿಸಿತು.

1999: ಕರ್ನಾಟಕದ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ವಿಧಾನಸಭೆ ವಿಸರ್ಜಿಸುವಂತೆ ರಾಜ್ಯಪಾಲ ಖುರ್ಷಿದ್ ಆಲಂ ಖಾನ್ ಅವರಿಗೆ ಶಿಫಾರಸು ಮಾಡಿದರು.

1997: ಸೆಪ್ಟೆಂಬರ್ 15ರಿಂದ ಪ್ರಸಾರ ಭಾರತಿ ಕಾಯ್ದೆಯನ್ನು ಜಾರಿಗೊಳಿಸುವಂತೆ ಸರ್ಕಾರ ಸುತ್ತೋಲೆ ಹೊರಡಿಸಿತು.

1993: ವಿಲೆ ಪೋಸ್ಟ್ ಅವರು 7 ದಿನ 18 ಗಂಟೆ 49 ನಿಮಿಷದಲ್ಲಿ ವಿಶ್ವವನ್ನು ಸುತ್ತಿದ ಮೊದಲಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

1991: ಗಾಯಕ ಪಂಡಿತ ಬಸವರಾಜ ರಾಜಗುರು ನಿಧನ.

1981: ಭಾರತದ ಪ್ರಥಮ ಪ್ರಾಯೋಗಿಕ ಉಪಗ್ರಹ ಆಪಲ್ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಣೆ ಪ್ರಾರಂಭಿಸಿ, ಎಲ್ಲ ನಿರೀಕ್ಷಿತ ಸಂಪರ್ಕ ಕಾರ್ಯಕ್ರಮ ಆರಂಭಿಸಿ ಸ್ಪಷ್ಟ ಚಿತ್ರಗಳನ್ನು ಪ್ರಸಾರ ಮಾಡಿತು.

1966: ಶಂಕರ ಬೈಚಬಾಳ ಜನನ.

1959: ಸಂಸದ, ಬಿಜೆಪಿ ನಾಯಕ ಅನಂತಕುಮಾರ ಜನನ.

1943: ಕುಮುದಾ ಪುರುಷೋತ್ತಮ ಜನನ.

1938: ಸಾಹಿತಿ ಕೆ.ಟಿ. ಗಟ್ಟಿ ಜನನ.

1929: ನವ್ಯ ಕಾದಂಬರಿಕಾರ, ವಿಮರ್ಶಕ, ಕಥೆಗಾರ ಶಾಂತಿನಾಥ ದೇಸಾಯಿ (22-7-1929ರಿಂದ 6-3-1998) ಅವರು ಈದಿನ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಜನಿಸಿದರು. ಕರ್ನಾಟಕ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಜ್ಞಾನಪೀಠ ಪ್ರಶಸ್ತಿ ಸಲಹಾ ಸಮಿತಿಯ ಸಲಹೆಗಾರರಾಗಿದ್ದ ದೇಸಾಯಿ ಅವರಿಗೆ ಜನಪ್ರಿಯತೆ ತಂದು ಕೊಟ್ಟ ಕಥೆ ಇಂಗ್ಲೆಂಡಿಗೆ ಹಡಗಿನ ಪ್ರಯಾಣ ಕಾಲದಲ್ಲಿ ಬರೆದ `ಕ್ಷಿತಿಜ'. ಅವರ ಐವತ್ತಕ್ಕೂ ಹೆಚ್ಚು ಕಥೆಗಳು ಪ್ರಕಟವಾಗಿವೆ. ಕನ್ನಡವಲ್ಲದೆ ಇಂಗ್ಲಿಷಿನಲ್ಲೂ ಕೃತಿಗಳನ್ನು ರಚಿಸಿದ ಅವರಿಗೆ ವರ್ಧಮಾನ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಲಭಿಸಿವೆ.

No comments:

Advertisement