My Blog List

Wednesday, July 30, 2008

ಇಂದಿನ ಇತಿಹಾಸ History Today ಜುಲೈ 30

ಇಂದಿನ ಇತಿಹಾಸ

ಜುಲೈ 30

ಮೂವತ್ತೈದು ವರ್ಷಗಳ ಅವಧಿಯಲ್ಲಿ 8000 ಕೋಟಿ ರೂಪಾಯಿ ವೆಚ್ಚದಲ್ಲಿನಿರ್ಮಾಣಗೊಂಡಿರುವ 2400 ಮೆ.ವಾ. ಸಾಮರ್ಥ್ಯದ ಅತಿ ವಿವಾದಿತ ತೆಹ್ರಿ ಜಲ ವಿದ್ಯುತ್ ಸ್ಥಾವರವು ಕಡೆಗೂ ಈದಿನ ಕಾರ್ಯಾರಂಭ ಮಾಡಿತು.

2007: ಭಾರತದಲ್ಲಿ ಆಗಸ್ಟ್ 3ರಂದು ಬಿಡುಗಡೆಯಾಗುವುದಕ್ಕೆ ಒಂದು ದಿನ ಮೊದಲೇ (ಈದಿನ) ಜೋಹಾನ್ಸ್ ಬರ್ಗಿನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ `ಗಾಂಧಿ ಮೈ ಫಾದರ್' ಚಿತ್ರದ ಚೊಚ್ಚಲ ಪ್ರದರ್ಶನ (ಪ್ರೀಮಿಯರ್ ಶೋ) ನಡೆಯಿತು. ದಕ್ಷಿಣ ಆಫ್ರಿಕದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಮತ್ತು ದಕ್ಷಿಣ ಆಫ್ರಿಕಾದ ಇಡೀ ಸಚಿವ ಸಂಪುಟವೇ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಚಲನಚಿತ್ರವನ್ನು ವೀಕ್ಷಿಸಿತು. ಮಹಾತ್ಮ ಗಾಂಧಿ ಅವರು ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ ರಾಷ್ಟ್ರದಲ್ಲಿ `ಗಾಂಧಿ ಮೈ ಫಾದರ್' ಚಿತ್ರದ ಜಾಗತಿಕ ಮಟ್ಟದ ಪ್ರದರ್ಶನದ ಉದ್ಘಾಟನೆ ಮಾಡುತ್ತಿರುವುದು ನನಗೆ ಅತ್ಯಂತ ಖುಷಿಯ ವಿಷಯ. ಭಾರತವು ನಮಗೆ `ಬ್ಯಾರಿಸ್ಟರ್ ಗಾಂಧಿ'ಯನ್ನು ನೀಡಿತು, ಪ್ರತಿಯಾಗಿ ದಕ್ಷಿಣ ಆಫ್ರಿಕವು `ಮಹಾತ್ಮ ಗಾಂಧಿ'ಯನ್ನು ಹಿಂದಿರುಗಿಸಿತು' ಎಂದು ಮಂಡೇಲಾ ತಮ್ಮ ಸಂದೇಶದಲ್ಲಿ ನುಡಿದರು. ಗಾಂಧೀಜಿಯವರ ಹಿರಿಯ ಪುತ್ರ ಹರಿಲಾಲ್ ಜೊತೆಗಿನ ಸಂಕೀರ್ಣ ಸಂಬಂಧದ ಸುತ್ತ ಹೆಣೆಯಲಾಗಿರುವ ಕಥೆಯನ್ನು ಹೊಂದಿರುವ ಈ ಚಿತ್ರ ಜಗತ್ತಿನಾದ್ಯಂತ 2007ರ ಆಗಸ್ಟ್ 3ರಂದು ಬಿಡುಗಡೆಯಾಯಿತು.

2007: ಗೋವಾ ಮುಖ್ಯಮಂತ್ರಿ ದಿಗಂಬರ ಕಾಮತ್ ಅವರು ಈದಿನ ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಯಾಚನೆಯಲ್ಲಿ ಗೆಲುವು ಸಾಧಿಸಿದರು. ಬಹುಮತ ಕಳೆದುಕೊಂಡಿದ್ದ ಅವರು ಮತ್ತೆ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದ ನಾಟಕೀಯ ಬೆಳವಣಿಗೆ ನಡೆಯಿತು. ವಿಧಾನಸಭಾಧ್ಯಕ್ಷ ಪ್ರತಾಪ್ ಸಿಂಗ್ ರಾಣೆ ಅವರು ಎಂಜಿಪಿಯ ಸುದೀನ್ ಮತ್ತು ದೀಪಕ್ ಧವಳೀಕರ್ ಹಾಗೂ ಕಾಂಗ್ರೆಸ್ಗೆ ರಾಜೀನಾಮೆ ಸಲ್ಲಿಸಿದ ವಿಕ್ಟೋರಿಯಾ ಫರ್ನಾಂಡಿಸ್ ಈ ಮೂವರು ಶಾಸಕರನ್ನು ಮತದಾನದಿಂದ ನಿರ್ಬಂಧಿಸಿ, ತಾವೇ ಕಾಂಗ್ರೆಸ್ ನೇತೃತ್ವ ಸಮ್ಮಿಶ್ರ ಸರ್ಕಾರದ ಪರವಾಗಿ ಮತ ಹಾಕಿದ್ದರಿಂದ ಕಾಮತ್ ಬಹುಮತ ಪಡೆದರು. ಇದರಿಂದ ಆಕ್ರೋಶಗೊಂಡ ಬಿಜೆಪಿ ನೇತೃತ್ವದ ವಿರೋಧಿ ಗೋವಾ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಸದಸ್ಯರು (ಜಿಡಿಎ), ಸರ್ಕಾರ ರಾಜ್ಯಪಾಲರ ಆದೇಶವನ್ನು ಉಲ್ಲಂಘಿಸಿರುವುದಾಗಿ ತೀವ್ರ ಪ್ರತಿಭಟನೆ ನಡೆಸಿ ಸಭಾತ್ಯಾಗ ಮಾಡಿದರು.

2007: ಕೇಂದ್ರ ಮಾನವ ಸಂಪನ್ಮೂಲಗಳ ಅಭಿವೃದ್ಧಿ ಸಚಿವ ಅರ್ಜುನ್ ಸಿಂಗ್ ಹಾಗೂ ಕುಟುಂಬದ ಇತರ ಆರು ಸದಸ್ಯರ ವಿರುದ್ಧ ಉತ್ತರಪ್ರದೇಶ ಪೊಲೀಸರು ವರದಕ್ಷಿಣೆ ಕಿರುಕುಳ ಆರೋಪದ ಮೇಲೆ ಮೊಕದ್ದಮೆ ದಾಖಲಿಸಿದರು. ಮೊರಾದಾಬಾದ್ ಜಿಲ್ಲೆಯ ಚಾಂದೌಸಿ ಪೊಲೀಸ್ ಠಾಣೆಯಲ್ಲಿ ಹಿಂದಿನ ದಿನ ರಾತ್ರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನಿರ್ದೇಶನದ ಮೇರೆಗೆ ಐಪಿಸಿ 323, 234, 235, 498(ಎ), 506 ಹಾಗೂ 304 ಸೆಕ್ಷನ್ ಅಡಿ ಅಪರಾಧ ಪ್ರಕರಣ ದಾಖಲಿಸಿಕೊಳ್ಳಲಾಯಿತು. ಅರ್ಜುನ್ ಸಿಂಗ್ ಮೊಮ್ಮಗ ಅಭಿಜಿತ್ ಅವರ ಮಾವ ನೌರಲಿಯ ರಾಜಾ ಮಣ್ವಿಂದರ್ ಸಿಂಗ್ ಅವರು ನೀಡಿದ ದೂರಿನ ಮೇರೆಗೆ ಈ ಮೊಕದ್ದಮೆ ದಾಖಲಿಸಲಾಯಿತು. ಅಭಿಜಿತ್ ಪತ್ನಿ ಪ್ರಿಯಾಂಕಾ ಸಿಂಗ್ ಆರೋಪದ ಆಧಾರದಲ್ಲಿ, ಅರ್ಜುನ್ ಸಿಂಗ್ ಮತ್ತು ಪತ್ನಿ ಬೀನಾ ಸಿಂಗ್, ಪುತ್ರ ಅಭಿಮನ್ಯು ಸಿಂಗ್, ಮೊಮ್ಮಗ ಅಭಿಜಿತ್ ಸೇರಿದಂತೆ ಕುಟುಂಬದ ಒಟ್ಟು ಏಳು ಜನರ ವಿರುದ್ಧ ಅಪರಾಧ ಮೊಕದ್ದಮೆ ದಾಖಲಿಸಿಕೊಳ್ಳುವಂತೆ ಮೊರಾದಾಬಾದ್ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರು ಪೊಲೀಸರಿಗೆ ಆದೇಶಿಸಿದ್ದರು.

2007: ಸಿಕ್ಕಿಂನ ಪ್ರಥಮ ಮುಖ್ಯಮಂತ್ರಿ ಹಾಗೂ ರಾಜ್ಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಸ್ಥಾಪಕರಾದ ಹೆಂಡುಪ್ ದೋರ್ಜಿ ಖಂಗಸರ್ಪಾ ಅವರು ಈದಿನ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು. ವಿಧುರರಾಗಿದ್ದ ಅವರಿಗೆ 103 ವರ್ಷ ವಯಸಾಗಿತ್ತು. ಕಾಜಿ ಸಾಬ್ ಎಂದೇ ಖ್ಯಾತರಾಗಿದ್ದ ಅವರು ಉತ್ತರ ಬಂಗಾಳದ ಕಲಿಪಾಂಗಿನಲ್ಲಿ ವಾಸವಾಗಿದ್ದರು. ಕಳೆದ ಕೆಲವು ವರ್ಷಗಳಿಂದ ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿದ್ದರು. ಭಾರತದ ಒಕ್ಕೂಟದಲ್ಲಿ ಸಿಕ್ಕಿಂ ರಾಜ್ಯದ ಸೇರ್ಪಡೆಗೆ ಪ್ರಮುಖ ಪಾತ್ರ ವಹಿಸಿದ್ದ ಅವರಿಗೆ 2002ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಸಿಕ್ಕಿಂ ಸರ್ಕಾರವು 2004ರಲ್ಲಿ ಅವರಿಗೆ ಸಿಕ್ಕಿಂ ರತ್ನ ಪ್ರಶಸ್ತಿ ನೀಡಿ ಗೌರವಿಸಿತ್ತು.

2007: ಭಯೋತ್ಪಾದನೆ ಸಂಚಿನಲ್ಲಿ ಭಾಗಿಯಾಗಿದ್ದ ಆರೋಪ ಹೊರಿಸಿ ಭಾರತೀಯ ಮೂಲದ ವೈದ್ಯ ಡಾ. ಮೊಹಮ್ಮದ್ ಹನೀಫರನ್ನು ನಾಲ್ಕು ವಾರಗಳ ಕಾಲ ಬಂಧಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಮೆ ಯಾಚಿಸಲು ಆಸ್ಟ್ರೇಲಿಯಾ ಪ್ರಧಾನಿ ಜಾನ್ ಹೋ ವರ್ಡ್ ನಿರಾಕರಿಸಿದರು.

2007: ಸ್ವೀಡನ್ನಿನ ಖ್ಯಾತ ಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ ಇಂಗ್ಮಾರ್ ಬರ್ಗ್ ಮನ್ (89) ಅವರು ಈದಿನ ಸ್ಟಾಕ್ ಹೋಮಿನಲ್ಲಿ ನಿಧನರಾದರು. ಬರ್ಗ್ ಮೆನ್ ಅರ್ಧ ಶತಮಾನದಲ್ಲಿ 50 ಚಿತ್ರಗಳು ಹಾಗೂ 125 ನಾಟಕಗಳನ್ನು ನಿರ್ಮಿಸಿ ಸ್ಕಾಂಡಿನೇವಿಯಾದ ಸಾಂಸ್ಕೃತಿಕ ಲೋಕದಲ್ಲಿ ಖ್ಯಾತರಾಗಿದ್ದರು. ಅವರ ಖಾಸಗಿ ಬದುಕು ಸಹ ವರ್ಣರಂಜಿತವಾಗಿತ್ತು. ಸುಂದರ ಹಾಗೂ ಬುದ್ಧಿವಂತರಾಗಿದ್ದ ಐವರು ಮಹಿಳೆಯರನ್ನು ವಿವಾಹವಾಗಿದ್ದ ಅವರು ಅನೇಕ ನಟಿಯರ ಜತೆ ಸಂಬಂಧವಿಟ್ಟುಕೊಂಡು ವಿವಾದಕ್ಕೂ ಒಳಗಾಗಿದ್ದರು. ವೈಲ್ಡ್ ಸ್ಟ್ರೀವ್ ಬ್ಯಾರಿಸ್, ಸೀನ್ಸ್ ಫ್ರಾಮ್ ಮ್ಯಾರೇಜ್ ನಂತಹ ಚಿತ್ರಗಳು ಅವರಿಗೆ ಜಗತ್ತಿನಾದ್ಯಂತ ಖ್ಯಾತಿ ತಂದುಕೊಟ್ಟಿದ್ದವು.

2007: ಪಾಕಿಸ್ಥಾನದ ಈಶಾನ್ಯ ಪ್ರಾಂತ್ಯದಲ್ಲಿನ ಮಸೀದಿಯೊಂದನ್ನು ನೂರಾರು ಉಗ್ರರು ತಮ್ಮ ವಶಕ್ಕೆ ತೆಗೆದುಕೊಂಡು, ಅದಕ್ಕೆ `ಲಾಲ್ ಮಸೀದಿ' ಎಂದು ಹೆಸರಿಸಿ, ಈ ತಿಂಗಳು ಇಸ್ಲಾಮಾಬಾದಿನಲ್ಲಿ ಹತನಾದ ಉಗ್ರರ ನೇತಾರ ಅಬ್ದುಲ್ ರಶೀದ್ ಘಾಜಿಯ `ಆದರ್ಶ'ಗಳನ್ನು ಪಾಲಿಸುವುದಾಗಿ ಘೋಷಿಸಿದರು. ಇಸ್ಲಾಮಾಬಾದಿನ ಲಾಲ್ ಮಸೀದಿಯ ಪಕ್ಕಕ್ಕೆ ಇದ್ದ ಬಾಲಕಿಯರ ಮದರಸಾ `ಜಾಮಿಯಾ ಹಫ್ಸಾ' ಮಾದರಿಯಲ್ಲೇ ಬಾಲಕಿಯರಿಗೆ ತರಬೇತಿ ಶಾಲೆಯನ್ನು ಇಲ್ಲಿಯೂ ಆರಂಭಿಸುವುದಾಗಿ ಉಗ್ರರು ಸಾರಿದರು. ಲಾಲ್ ಮಸೀದಿಯನ್ನು ತೆರವುಗೊಳಿಸಿದ ನಂತರ `ಜಾಮಿಯಾ ಹಫ್ಸಾ'ವನ್ನು ಪಾಕ್ ಸೈನಿಕರು ಧ್ವಂಸಗೊಳಿಸಿದ್ದರು.

2007: ಮಾಜಿ ಸಚಿವ ಮೊಹಮ್ಮದ್ ಮೊಯಿನ್ದುದೀನ್ ಅವರು ಜುಲೈ 29ರ ಈದಿನ ಬೆಂಗಳೂರಿನಲ್ಲಿ ನಿಧನರಾದರು. 1985ರಲ್ಲಿ ಚಾಮರಾಜಪೇಟೆ ವಿಧಾನ ಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಅವರು, ರಾಮಕೃಷ್ಣ ಹೆಗಡೆಯವರ ಸಚಿವ ಸಂಪುಟದಲ್ಲಿ ವಸತಿ ಖಾತೆಯ ರಾಜ್ಯ ಸಚಿವರಾಗಿದ್ದರು. ಭದ್ರಾವತಿಯಲ್ಲಿ ಜನಿಸಿದ್ದ ಇವರು ಬಿ.ಎಸ್ಸಿ ಪದವೀಧರರಾಗಿದ್ದರು. ಕರ್ನಾಟಕ ರೇಷ್ಮೆ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಗಂಜಾಂನಲ್ಲಿರುವ ಟಿಪ್ಪು ಸುಲ್ತಾನ್ ವಕ್ಫ್ಸ್ ಎಸ್ಟೇಟ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಶ್ರೀರಂಗಪಟ್ಟಣದ ಟಿಪ್ತು ಸುಲ್ತಾನ್ ಸಂಶೋಧನಾ ಸಂಸ್ಥೆ ಹಾಗೂ ವಸ್ತು ಸಂಗ್ರಹಾಲಯದ ಅಧ್ಯಕ್ಷರಾಗಿಯೂ ಅವರು ಕಾರ್ಯ ನಿರ್ವಹಿಸಿದ್ದರು.

2007: ಸ್ಯಾನ್ ಫೋರ್ಡಿನಲ್ಲಿ ಮುಕ್ತಾಯವಾದ ಆರು ಲಕ್ಷ ಅಮೆರಿಕನ್ ಡಾಲರ್ ಬಹುಮಾನ ಮೊತ್ತದ ವೆಸ್ಟ್ ಬ್ಯಾಂಕ್ ಕ್ಲ್ಯಾಸಿಕ್ ಡಬ್ಲ್ಯುಟಿಎ ಟೂರ್ನಿಯಲ್ಲಿ ಶ್ರೇಯಾಂಕಿತ ಆಟಗಾರ್ತಿಯರನ್ನು ಮಣ್ಣುಮುಕ್ಕಿಸಿ ಫೈನಲ್ ಪ್ರವೇಶಿಸಿದ್ದ ಸಾನಿಯಾ ಮಿರ್ಜಾ ಫೈನಲಿನಲ್ಲಿ ಮುಗ್ಗರಿಸಿದರು. ಸಾನಿಯಾ ಮಿರ್ಜಾ ಅವರು 3-6, 2-6 ನೇರ ಸೆಟ್ ಗಳಲ್ಲಿ ರಷ್ಯಾದ ಅನ್ನಾ ಚಕ್ವೆಟಾಜ್ ಅವರ ಕೈಯಲ್ಲಿ ಪರಾಭವಗೊಂಡರು.

2007: ಉದ್ಯಮಿ ಡಾ. ವಿಜಯ್ ಮಲ್ಯ ಕರ್ನಾಟಕದ ಕ್ರಿಕೆಟಿನತ್ತ ಕಣ್ಣು ಹಾಯಿಸಿದರು. ರಾಜಾಜಿನಗರದ ಸೆಲೆಕ್ಟ್ ಕ್ರಿಕೆಟ್ ಕ್ಲಬ್ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ರಾಜ್ಯ ಕ್ರಿಕೆಟ್ ಕಡೆಗೆ ಅವರು ಹೆಜ್ಜೆಯಿಟ್ಟರು.

2006: ಮೂವತ್ತೈದು ವರ್ಷಗಳ ಅವಧಿಯಲ್ಲಿ 8000 ಕೋಟಿ ರೂಪಾಯಿ ವೆಚ್ಚದಲ್ಲಿನಿರ್ಮಾಣಗೊಂಡಿರುವ 2400 ಮೆ.ವಾ. ಸಾಮರ್ಥ್ಯದ ಅತಿ ವಿವಾದಿತ ತೆಹ್ರಿ ಜಲ ವಿದ್ಯುತ್ ಸ್ಥಾವರವು ಕಡೆಗೂ ಈದಿನ ಕಾರ್ಯಾರಂಭ ಮಾಡಿತು. ಉತ್ತರದ ಗ್ರಿಡ್ ಜಾಲಕ್ಕೆ ಬೆಸೆದಿರುವ ಸ್ಥಾವರದ 250 ಮೆಗಾವ್ಯಾಟ್ ಸಾಮರ್ಥ್ಯದ ಮೊದಲ ಘಟಕದ ಕಾರ್ಯಾರಂಭಕ್ಕೆ ಕೇಂದ್ರ ಇಂಧನ ಸಚಿವ ಸುಶೀಲ್ ಕುಮಾರ್ ಶಿಂಧೆ ಚಾಲನೆ ನೀಡಿದರು. 1657 ಕೋಟಿ ರೂಪಾಯಿ ವೆಚ್ಚದ ತೆಹ್ರಿ ಪಂಪ್ ಸ್ಟೋರೇಜ್ ಯೋಜನೆಗೆ ಶಂಕುಸ್ಥಾಪನೆಯನ್ನೂ ನೆರವೇರಿಸಿದರು. ಏಷ್ಯದಲ್ಲೇ ಅತ್ಯಂತ ಎತ್ತರದ `ರಾಕ್ ಫಿಲ್ ಡ್ಯಾಮ್' ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಅಣೆಕಟ್ಟು ವಿದ್ಯುತ್ ಯೋಜನೆಯಿಂದ ಉತ್ತರ ಭಾರತದ 9 ರಾಜ್ಯಗಳ ವಿದ್ಯುತ್ ಪರಿಸ್ಥಿತಿ ಸುಧಾರಿಸುವುದು ಎಂಬುದು ಆಡಳಿತಗಾರರ ನಿರೀಕ್ಷೆ. 35 ವರ್ಷಗಳ ಹಿಂದೆ ಯೋಜನೆಗೆ ಅಡಿಗಲ್ಲು ಹಾಕಿದಾಗ ಅದರ ವೆಚ್ಚ 200 ಕೋಟಿ ರೂಪಾಯಿ ಎಂದು ಅಂದಾಜು ಮಾಡಲಾಗಿತ್ತು.

2006: ಬಹರೇನಿನಲ್ಲಿ ಮೂರು ಮಹಡಿಯ ಕಟ್ಟಡವೊಂದರಲ್ಲಿ ಅಗ್ನಿ ಅನಾಹುತ ಸಂಭವಿಸಿ 16 ಭಾರತೀಯ ಕಾರ್ಮಿಕರು ಮೃತರಾದರು.

1995: ಜಾರ್ಖಂಡ್ ಸ್ವಾಯತ್ತ ಜಿಲ್ಲಾ ಮಂಡಳಿ ರಚನೆಗೆ ಅಧಿಸೂಚನೆ ಪ್ರಕಟಗೊಂಡಿತು.

1960: ಕರ್ನಾಟಕದ ಸಿಂಹ, ಶ್ರೇಷ್ಠ ಸೇನಾನಿ ಗಂಗಾಧರ ಬಾಲಕೃಷ್ಣ ದೇಶಪಾಂಡೆ ನಿಧನ.

1951: ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಜನನ.

1947: ಕಾಶ್ಮೀರದ ಭಾಗವಾದ ನೈಋತ್ಯ ಗಡಿ ಪ್ರದೇಶವನ್ನು (ಎನ್ ಡಬ್ಲ್ಯೂ ಎಫ್ ಸಿ) ಪಾಕಿಸ್ಥಾನ ಕೈವಶಪಡಿಸಿಕೊಂಡಿತು. ನವೆಂಬರಿನಲ್ಲಿ ಇಲ್ಲಿ ಪಾಕಿಸ್ತಾನದ ಧ್ವಜಾರೋಹಣ ಮಾಡಲಾಯಿತು.

1928: ಜಾಜ್ ಈಸ್ಟ್ ಮನ್ ರಿಂದ ಮೊದಲ ಬಣ್ಣದ ಸಿನಿಮಾ ಪ್ರಾತ್ಯಕ್ಷಿಕೆ.

1923: ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಕೃತಿಗಳನ್ನು ರಚಿಸಿದ ಖ್ಯಾತ ವಿದ್ವಾಂಸ ಡಾ. ಕೆ. ಕೃಷ್ಣಮೂರ್ತಿ (30-7-1923ರಿಂದ 18-7-1997) ಅವರು ಎನ್. ವೆಂಕಟಸುಬ್ಬಯ್ಯ- ಗೌರಮ್ಮ ದಂಪತಿಯ ಮಗನಾಗಿ ಹಾಸನ ಜಿಲ್ಲೆಯ ಕೇರಳಾಪುರದಲ್ಲಿ ಜನಿಸಿದರು. ಅವರು ರಚಿಸಿದ ಒಟ್ಟು ಗ್ರಂಥಗಳು 54.

1913: ದ್ವಿತೀಯ ಬಾಲ್ಕನ್ ಯುದ್ಧ ಸಮಾಪ್ತಿಗೊಂಡಿತು.

1883: ಕೈಗಾರಿಕೋದ್ಯಮಿ ಬದ್ರಿದಾಸ್ ಜನನ.

1622: ಶ್ರೇಷ್ಠ ಕವಿ, ಸಂತ ತುಳಸೀದಾಸರ ಪುಣ್ಯದಿನ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement