Saturday, August 9, 2008

ಇಂದಿನ ಇತಿಹಾಸ History Today ಆಗಸ್ಟ್ 9

ಇಂದಿನ ಇತಿಹಾಸ

ಆಗಸ್ಟ್ 9

ಅಮೆರಿಕನ್ ಪೈಲಟ್ ಜಾಕ್ ಲಿನ್ ಕೊಚ್ರನ್ (1910-1980) ಅವರು ಕ್ಯಾಲಿಫೋರ್ನಿಯಾದ ಇಂಡಿಯೋದಲ್ಲಿ ಮೃತರಾದರು. 1964ರಲ್ಲಿ ಆಕೆ ಗಂಟೆಗೆ 1429 ಮೈಲು ವೇಗದಲ್ಲಿ ವಿಮಾನ ಹಾರಿಸುವ ಮೂಲಕ ಇತಿಹಾಸ ನಿರ್ಮಿಸಿದ್ದರು.

2007: ಬಾಂಗ್ಲಾದೇಶದ ಖ್ಯಾತ ಕಾದಂಬರಿಗಾರ್ತಿ ತಸ್ಲಿಮಾ ನಸ್ರೀನ್ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಜ್ಲಿಸ್ ಇತ್ತೇಹಾದುಲ್ ಮುಸ್ಲಿಮೀನ್ (ಎಂಐಎಂ) ಕಾರ್ಯಕರ್ತರು ನುಗ್ಗಿ ದಾಂಧಲೆ ನಡೆಸಿದರು. ತಮ್ಮ ಕೃತಿ `ಶೋಧಾ' ತೆಲುಗು ಅವತರಣಿಕೆಯಲ್ಲಿ ಇಸ್ಲಾಂ ಧರ್ಮದ ವಿರುದ್ಧ ಅವಹೇಳನಕಾರಿ ವಿಚಾರ ಪ್ರಕಟಿಸಿದ್ದಾರೆ ಎಂದು ಆರೋಪಿಸಿ ಅಖಿಲ ಭಾರತ ಮಜ್ಲಿಸ್-ಇ-ಇತ್ತೇಹಾದುಲ್ ಮುಸ್ಲಿಮೀನ್ (ಎಂಐಎಂ) ಸಂಘಟನೆಯ ಮೂವರು ಶಾಸಕರು ಹೈದರಾಬಾದಿನ ಪ್ರೆಸ್ ಕ್ಲಬ್ಬಿನಲ್ಲಿ `ಶೋಧ' ಕೃತಿ ಬಿಡುಗಡೆ ಸಮಾರಂಭದಲ್ಲಿ ಬಾಂಗ್ಲಾದ ಖ್ಯಾತ ಕಾದಂಬರಿಗಾರ್ತಿ ತಸ್ಲಿಮಾ ನಸ್ರೀನ್ ಅವರ ಮೇಲೆ ಪುಸ್ತಕ, ಕಾಗದಗಳನ್ನು ಎಸೆದು ಹಲ್ಲೆಗೆ ಯತ್ನಿಸಿದರು. ಶಾಸಕರಾದ ಅಫ್ಸರ್ ಖಾನ್, ಅಹ್ಮದ್ ಪಾಷಾ ಮತ್ತು ಮೊಜುಂ ಖಾನ್ ನೇತೃತ್ವದಲ್ಲಿ ಬಂದ ಸುಮಾರು 20 ಮಂದಿ ಎಂಐಎಂ ಕಾರ್ಯಕರ್ತರು ಲೇಖಕಿ ವಿರುದ್ಧ ಘೋಷಣೆ ಕೂಗಿದರು. ಸಮಾರಂಭ ಮುಕ್ತಾಯದ ಹಂತಕ್ಕೆ ಬಂದಾಗ 'ನಸ್ರೀನ್ ಅವರನ್ನು ಹಿಂದಕ್ಕೆ ಕಳುಹಿಸಬೇಕು' ಎಂದು ಆಗ್ರಹಿಸಿದ ಕಾರ್ಯಕರ್ತರು ಸಭಾಂಗಣಕ್ಕೆ ಏಕಾಏಕಿ ನುಗ್ಗಿ ಮಾಧ್ಯಮಗಳ ಛಾಯಾಗ್ರಾಹಕರ ಮೇಲೆ ಹಲ್ಲೆ ನಡೆಸಿ, ಪೀಠೋಪಕರಣ, ಕಿಟಕಿ ಗಾಜುಗಳಿಗೆ ಹಾನಿಯುಂಟು ಮಾಡಿ, ತಸ್ಲಿಮಾ ನಸ್ರೀನ್ ಜತೆ ಒರಟಾಗಿ ವರ್ತಿಸಿದರು.

2007: ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ನಿರ್ಮಾಣ ಕಾರ್ಯ ಮುಂದುವರಿಸುವ ಸಲುವಾಗಿ ಅಮೆರಿಕದ ಎಂಡೆವರ್ ಬಾಹ್ಯಾಕಾಶ ನೌಕೆಯನ್ನು ಈದಿನ ಭಾರತೀಯ ಕಾಲಮಾನ ಬೆಳಗಿನ 4.06ಕ್ಕೆ ಫ್ಲಾರಿಡಾದ ಉಡಾವಣಾ ಕೇಂದ್ರದಿಂದ ಬಾಹ್ಯಾಕಾಶಕ್ಕೆ ಹಾರಿ ಬಿಡಲಾಯಿತು. ಗಗನನೌಕೆಯಲ್ಲಿ 7 ಮಂದಿ ಯಾನಿಗಳು ಪಯಣಿಸಿದರು. ಇವರಲ್ಲಿ ಶಾಲಾ ಶಿಕ್ಷಕಿ ಬಾರ್ಬರಾ ಮಾರ್ಗನ್ ಸೇರಿದ್ದಾರೆ. ಈಕೆ 1986ರಲ್ಲಿ ಉಡಾವಣಾ ಹಂತದಲ್ಲಿಯೇ ದುರಂತಕ್ಕೀಡಾದ ಚಾಲೆಂಜರ್ ಗಗನ ನೌಕೆಯ ಮೀಸಲು ಗಗನ ಯಾನಿಯಾಗಿ ಆಯ್ಕೆಯಾಗಿದ್ದವರು. ಆದರೆ ಕೊನೆ ಘಳಿಗೆಯಲ್ಲಿ ಅವರಿಗೆ ನೌಕೆಯನ್ನು ಏರುವ ಅವಕಾಶ ಸಿಗದೆ ಸಾವಿನ ದವಡೆಯಿಂದ ತಪ್ಪಿಸಿಕೊಂಡಿದ್ದರು. ಇದಾದ ಬಳಿಕ ಎರಡು ಸಲ ಬಾಹ್ಯಾಕಾಶದಲ್ಲಿ ದುರಂತ ನಡೆದರೂ ಬಾರ್ಬರಾ ಎದೆಗುಂದಿರಲಿಲ್ಲ.

2007: ಪ್ರಸ್ತುತ ವರ್ಷ, ಭಾರತದ ಸ್ವಾತಂತ್ರ್ಯ ದಿನವಾದ ಆಗಸ್ಟ್ 15ರಂದು ಬಾಲಿವುಡ್ ನಟಿ ಐಶ್ವರ್ಯ ರೈ ಅವರ ಮೇಣದ ಪ್ರತಿಮೆಯನ್ನು ನ್ಯೂಯಾರ್ಕಿನ ಟೈಮ್ಸ್ ಸ್ಕ್ವೇರ್ ಬಳಿಯ ಮೇಡಮ್ ಟುಸ್ಸಾಡ್ ಶಾಖಾ ವಸ್ತುಸಂಗ್ರಹಾಲಯದಲ್ಲಿ 6 ವಾರದ ಮಟ್ಟಿಗೆ ತಂದಿಡಲಾಗುವುದು ಎಂದು ಈದಿನ ಪ್ರಕಟಿಸಲಾಯಿತು. ಲಂಡನ್ನಿನ ಮೇಡಮ್ ಟುಸ್ಸಾಡ್ ವಸ್ತುಸಂಗ್ರಹಾಲಯದಲ್ಲಿ 2004ರಲ್ಲಿ ಐಶ್ವರ್ಯ ಮೇಣದ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿತ್ತು.

2007: ನ್ಯೂಯಾರ್ಕ್ (ಪಿಟಿಐ): ವಿಶ್ವದ ಬಿಸಿ ಏರುತ್ತಿರುವುದರ ದುಷ್ಪರಿಣಾಮ ಗೋಚರವಾಗುತ್ತಿದ್ದು, 1980ರ ನಂತರ ಇದೇ ಮೊದಲ ಸಲ ಜನವರಿ ಮತ್ತು ಏಪ್ರಿಲ್ ತಿಂಗಳುಗಳಲ್ಲಿ ಭೂಮಿ ವಾಡಿಕೆಗಿಂತಲೂ ಹೆಚ್ಚು ಬಿಸಿಯಾಗಿತ್ತು ಎಂದು ವಿಶ್ವ ಸಂಸ್ಥೆ ಹವಾಮಾನ ಸಂಘಟನೆ ಪ್ರಕಟಿಸಿತು. ಜನವರಿಯಲ್ಲಿ ಉಷ್ಣತೆ ಸರಾಸರಿಗಿಂತ 1.89 ಡಿಗ್ರಿ ಸೆಲ್ಷಿಯಸ್ ಮತ್ತು ಏಪ್ರಿಲ್ ತಿಂಗಳಲ್ಲಿ 1.37 ಡಿ.ಸೆಲ್ಷಿಯಸ್ ಹೆಚ್ಚಿತ್ತು. ಈ ಸಲ ಭಾರತೀಯ ಉಪಖಂಡದಲ್ಲಿ ವಾಡಿಕೆಗಿಂತ ಎರಡು ಪಟ್ಟು ಹೆಚ್ಚು ಅಂದರೆ ನಾಲ್ಕು ಸಲ ವಾಯುಭಾರ ಕುಸಿತ ಉಂಟಾದುದರ ಫಲವಾಗಿಯೇ ಭಾರತ ಮತ್ತು ಪಾಕಿಸ್ಥಾನದಲ್ಲಿ ಭಾರಿ ಮಳೆ, ಪ್ರವಾಹದ ಅನಾಹುತ ಉಂಟಾಗಿದೆ ಎಂದು ವರದಿ ಹೇಳಿತು.

2006: ವಿಷಕಾರಕ ರಾಸಾಯನಿಕ ಅಂಶಗಳ ಬಳಕೆ ಸಾಬೀತಾದ ಹಿನ್ನೆಲೆಯಲ್ಲಿ ಕರ್ನಾಟಕದ ಶಾಲೆ, ಕಾಲೇಜು ಹಾಗೂ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಕೋಕಾ ಕೋಲಾ, ಪೆಪ್ಸಿ ಸಹಿತ 12 ತಂಪು ಪಾನೀಯಗಳ ಸರಬರಾಜು ಮತ್ತು ಮಾರಾಟವನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿತು. ಕೇರಳ ಸರ್ಕಾರ ಕೂಡಾ ಪೆಪ್ಸಿ ಮತ್ತು ಕೋಕಾ ಕೋಲಾ ಉತ್ಪಾದನೆ ಮತ್ತು ಮಾರಾಟವನ್ನು ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ನಿಷೇಧಿಸಿತು.

2006: ಟ್ರೆನಿಡಾಡ್ ಮತ್ತು ಟೊಬ್ಯಾಗೊ ಕ್ರಿಕೆಟ್ ಮಂಡಳಿಯು ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ನಾಯಕ ಬ್ರಯಾನ್ ಲಾರಾ ಅವರಿಗೆ `ವರ್ಷದ ಕ್ರಿಕೆಟಿಗ ` ಪ್ರಶಸ್ತಿ ನೀಡಿ ಗೌರವಿಸಿತು. ಜಿಂಬಾಬ್ವೆ ಮತ್ತು ಭಾರತದ ವಿರುದ್ಧದ ಸರಣಿಗಳಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಕ್ಕೆ ಲಾರಾ ಅವರಿಗೆ ಈ ಗೌರವ ಲಭಿಸಿತು.

2006: ಖ್ಯಾತ ದ್ರುಪದ್ ಗಾಯಕಿ ಅಸ್ಗಾರಿ ಬಾಯಿ (88) ಮಧ್ಯಪ್ರದೇಶದ ಟಿಕಂಗಢದಲ್ಲಿ ನಿಧನರಾದರು. ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದ ಅಸ್ಗಾರಿ ಬಾಯಿ ಅವರಿಗೆ 1990ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

1980: ಅಮೆರಿಕನ್ ಪೈಲಟ್ ಜಾಕ್ ಲಿನ್ ಕೊಚ್ರನ್ (1910-1980) ಅವರು ಕ್ಯಾಲಿಫೋರ್ನಿಯಾದ ಇಂಡಿಯೋದಲ್ಲಿ ಮೃತರಾದರು. ವೇಗ, ದೂರ ಮತ್ತು ಎತ್ತರದಲ್ಲಿ ವಿಮಾನ ಹಾರಾಟ ನಡೆಸುವಲ್ಲಿ ಇತರ ಮಹಿಳಾ ಪೈಲಟ್ ಗಳನ್ನು ಮೀರಿಸುವಂತಹ ದಾಖಲೆಗಳನ್ನು ಆಕೆ ನಿರ್ಮಾಣ ಮಾಡಿದ್ದರು. 1964ರಲ್ಲಿ ಆಕೆ ಗಂಟೆಗೆ 1429 ಮೈಲು ವೇಗದಲ್ಲಿ ವಿಮಾನ ಹಾರಿಸುವ ಮೂಲಕ ಇತಿಹಾಸ ನಿರ್ಮಿಸಿದ್ದರು. ಇಷ್ಟು ವೇಗವಾಗಿ ವಿಮಾನ ಹಾರಿಸಿದ ಪ್ರಥಮ ಮಹಿಳಾ ಪೈಲಟ್ ಈಕೆ.

1974: ರಿಚರ್ಡ್ ನಿಕ್ಸನ್ ರಾಜೀನಾಮೆಯ ಹಿನ್ನೆಲೆಯಲ್ಲಿ ಗೆರಾಲ್ಡ್ ಫೋರ್ಡ್ ಅಮೆರಿಕದ 38ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು.

1969: ಸಾಹಿತಿ ವಿಜಯಕಾಂತ ಪಾಟೀಲ ಜನನ.

1953: ಸಾಹಿತಿ ಶಿವರಾಮ ಕಾಡನಕುಪ್ಪೆ ಜನನ.

1945: ಜಪಾನಿನ ಹಿರೋಷಿಮಾದಲ್ಲಿ ಯುರೇನಿಯಂ ಬಾಂಬ್ ದಾಳಿ ನಡೆಸಿದ ಮೂರು ದಿನಗಳ ಬಳಿಕ ನಾಗಾಸಾಕಿಯ ಮೇಲೆ ಅಮೆರಿಕ ಪ್ಲುಟೋನಿಯಂ ಬಾಂಬ್ ಹಾಕಿತು. ಸುಮಾರು 74,000 ಮಂದಿ ಮೃತರಾದರು.

1936: ಬರ್ಲಿನ್ ಒಲಿಂಪಿಕ್ ನಲ್ಲಿ ಅಮೆರಿಕಕ್ಕೆ 400 ಮೀಟರ್ ರಿಲೇಯಲ್ಲಿ ಗೆಲುವು ತರುವುದರೊಂದಿಗೆ ಜೆಸ್ಸಿ ಓವೆನ್ಸ್ ತಮ್ಮ ನಾಲ್ಕನೇ ಸ್ವರ್ಣ ಪದಕವನ್ನು ಗೆದ್ದರು. 100 ಹಾಗೂ 200 ಮೀಟರ್ ರಿಲೇ ಹಾಗೂ ಲಾಂಗ್ ಜಂಪಿನಲ್ಲಿ ಅವರು ಈ ವೇಳೆಗಾಗಲೇ ಸ್ವರ್ಣ ಪದಕಗಳನ್ನು ತಮ್ಮ ಹೆಗಲಿಗೆ ಏರಿಸಿಕೊಂಡಿದ್ದರು.

1925: ರಾಮಪ್ರಸಾದ್ ಬಿಸ್ಮಿಲ್, ಅಶ್ಫಾಕ್- ಉಲ್ಲಾ ಖಾನ್ ಮತ್ತು ಇತರರ ನೇತೃತ್ವದಲ್ಲಿ 10 ಜನ ಭಾರತೀಯ ಕ್ರಾಂತಿಕಾರಿಗಳ ತಂಡವು ಲಖ್ನೊ ಸಮೀಪದ ಕಾಕೋರಿಯಲ್ಲಿ 8- ಡೌನ್ ರೈಲುಗಾಡಿಯನ್ನು ತಡೆ ಹಿಡಿದು ಬ್ರಿಟಷರು ಸಾಗಿಸುತ್ತಿದ್ದ ನಗದು ಹಣವನ್ನು ಲೂಟಿ ಮಾಡಿತು. ಬ್ರಿಟಿಷರ ವಿರುದ್ಧ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿಕಾರಿ ಹೋರಾಟಗಾರರಿಗೆ ಶಸ್ತ್ರಾಸ್ತ್ರ, ತರಬೇತಿ ನೀಡಲು ಬೇಕಾದ ಹಣಕ್ಕಾಗಿ ಈ ಕೃತ್ಯ ಎಸಗಲಾಯಿತು. ಸರ್ಕಾರವು `ಕಾಕೋರಿ ಒಳಸಂಚು' ಆರೋಪದಲ್ಲಿ ಬಿಸ್ಮಿಲ್ ಮತ್ತು ಖಾನರನ್ನು ಬಂಧಿಸಿ ನಂತರ ಗಲ್ಲಿಗೇರಿಸಿತು. ಇತರರಿಗೆ ವಿವಿಧ ಅವಧಿಗಳ ಸೆರೆಮನೆವಾಸ ವಿಧಿಸಲಾಯಿತು.

1904: ಆಧುನಿಕ ಕನ್ನಡ ಸಾಹಿತ್ಯದ ಪ್ರಮುಖ ಕವಿ, ನಾಟಕಕಾರ, ಕಥೆ - ಕಾದಂಬರಿಕಾರ ಕಡೆಂಗೋಡ್ಲು ಶಂಕರಭಟ್ಟರು (9-8-1904ರಿಂದ 17-5-1968) ಈಶ್ವರ ಭಟ್ಟ- ಗೌರಮ್ಮ ದಂಪತಿಯ ಮಗನಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪೆರುಮಾಯಿ (ಪೆರುವಾಯಿ?) ಗ್ರಾಮದಲ್ಲಿ ಜನಿಸಿದರು. 1930ರಲ್ಲಿ ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಅವರು 1965ರಲ್ಲಿ ಕಾರವಾರದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

1902: ತಾಯಿ ವಿಕ್ಟೋರಿಯಾಳ ಮರಣದ ನಂತರ ಎಂಟನೇ ಎಡ್ವರ್ಡ್ ಇಂಗ್ಲೆಂಡಿನ ದೊರೆಯಾಗಿ ಸಿಂಹಾಸನ ಏರಿದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement