Friday, September 19, 2008

ಇಂದಿನ ಇತಿಹಾಸ History Today ಸೆಪ್ಟೆಂಬರ್ 19


ಇಂದಿನ ಇತಿಹಾಸ
ಸೆಪ್ಟೆಂಬರ್ 19

ಖ್ಯಾತ ನಾಟಕಕಾರ ಬಿ.ವಿ. ಕಾರಂತ (19-9-1929ರಿಂದ 1-9-2002) ಅವರು ಬಾಬುಕೋಡಿ ನಾರಣಪ್ಪಯ್ಯ- ಲಕ್ಷ್ಮಮ್ಮ ದಂಪತಿಯ ಮಗನಾಗಿ ದಕ್ಷಿಣ ಕನ್ನಡ ಜಿಲ್ಲೆಯ ಮಂಚಿ ಗ್ರಾಮದ ಬಾಬುಕೋಡಿಯಲ್ಲಿ ಜನಿಸಿದರು. ಒಟ್ಟು 52 ನಾಟಕಗಳನ್ನು ನಿರ್ದೇಶಿದ ಅವರು 15 ಕೃತಿಗಳನ್ನು ಹಿಂದಿಗೆ ಅನುವಾದಿಸಿದ್ದರು.  ಏವಂ ಇಂದ್ರಜಿತ, ಹಯವದನ, ಸಂಕ್ರಾಂತಿ, ಈಡಿಪಸ್, ಜೋಕುಮಾರಸ್ವಾಮಿ ಅವರು ನಿರ್ದೇಶಿಸಿದ ನಾಟಕಗಳಲ್ಲಿ ಹೆಸರುವಾಸಿಯಾದವು.

2014:  ಚೆನ್ನೈ: ಖ್ಯಾತ ಮ್ಯಾಂಡೋಲಿನ್ ವಾದಕ ಯು ಶ್ರೀನಿವಾಸ್ ಅವರು ಇನ್ನಿಲ್ಲ. ಮಾಂಡೋಲಿನ್ ಮಾಂತ್ರಿಕ ಎಂದೇ ಖ್ಯಾತರಾಗಿದ್ದ ಶ್ರೀನಿವಾಸ್ (45) ಅವರು ಅಲ್ಪಕಾಲದ ಅಸ್ವಸ್ಥತೆ ಬಳಿಕ ನಿಧನರಾದರು. ಜಠರದ ಸಮಸ್ಯೆ ಕಾರಣ ಅವರನ್ನು ಚೆನ್ನೈಯ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಅಸು ನೀಗಿದರು. ಅತ್ಯಂತ ಜನಪ್ರಿಯ ಮ್ಯಾಂಡೋಲಿನ್ ವಾದಕರಾಗಿದ್ದ ಶ್ರೀನಿವಾಸ್ ದೇಶ ವಿದೇಶಗಳಲ್ಲಿ ಪ್ರತಿಷ್ಠಿತ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ್ದರು. ಜರ್ಮನಿಯ ಬರ್ಲಿನ್​ನಲ್ಲಿ ತಮ್ಮ ಶಾಸ್ತ್ರೀಯ ಮ್ಯಾಂಡೋಲಿನ್ ವಾದನದ ಮೂಲಕ ಶ್ರೋತೃಗಳನ್ನು ಅವರು ಮಂತ್ರ ಮುಗ್ಧರನ್ನಾಗಿ ಮಾಡಿದ್ದರು. ಭಾರತ ಸರ್ಕಾರ ಶ್ರೀನಿವಾಸ್ ಅವರನ್ನು ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಿತ್ತು. ತಮಿಳ್ನಾಡು ವಿಶ್ವವಿದ್ಯಾಲಯದ ಆಸ್ಥಾನ ವಿದ್ವಾನ್ ಸಹಿತ ಹಲವಾರು ಪುರಸ್ಕಾರಗಳಿಗೆ ಶ್ರೀನಿವಾಸ್ ಪಾತ್ರರಾಗಿದ್ದರು.

2014: ನವದೆಹಲಿ: 'ಭಾರತದ ಮುಸ್ಲಿಮರ ದೇಶಪ್ರೇಮ ಪ್ರಶ್ನಾತೀತ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಮೇ ತಿಂಗಳಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊತ್ತ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಸಂದರ್ಶನ ನೀಡಿದ ಅವರು ಅಮೆರಿಕದ ಟಿವಿ ವಾಹಿನಿ ಸಿಎನ್​ಎನ್​ನ ಫರೇದ್ ಝುಕಾರಿಯಾ ಜೊತೆ ಮಾತನಾಡುತ್ತಾ ಈ ಮಾತು ಹೇಳಿದರು. 'ಭಾರತೀಯ ಮುಸ್ಲಿಮರು ಭಾರತಕ್ಕಾಗಿ ಬದುಕುತ್ತಾರೆ ಮತ್ತು ಭಾರತಕ್ಕಾಗಿ ಸಾಯುತ್ತಾರೆ. ಕೆಟ್ಟ ಭಾರತವನ್ನು ಅವರು ಬಯಸುವುದಿಲ್ಲ' ಎಂದು ಅವರು ನುಡಿದರು. ಭಾರತದ ಮುಸ್ಲಿಮರು ತನ್ನ ತಾಳಕ್ಕೆ ತಕ್ಕಂತೆ ಕುಣಿಯುತ್ತಾರೆ ಎಂದು ಅಲ್ ಖೈದಾ ಭಾವಿಸಿದ್ದರೆ ಅದು ಭ್ರಮೆ ಮಾತ್ರ ಎಂದು ಅಲ್ ಖೈದಾ ಇತ್ತೀಚೆಗೆ ಬಿಡುಗಡೆ ಮಾಡಿದ ವಿಡಿಯೋ ಒಂದರಲ್ಲಿ ಇಸ್ಲಾಂ ಹೆಸರಿನಲ್ಲಿ ನಡೆಯುತ್ತಿರುವ ಜಾಗತಿಕ ಯುದ್ಧದಲ್ಲಿ ಪಾಲ್ಗೊಳ್ಳುವಂತೆ ಭಾರತದ ಮುಸ್ಲಿಮರಿಗೆ ಕರೆ ನೀಡಿದ ಬಗ್ಗೆ ಪ್ರಸ್ತಾಪಿಸುತ್ತಾ ಪ್ರಧಾನಿ ಹೇಳಿದರು. ಭಾರತೀಯ ಮುಸ್ಲಿಮರ ಬಗ್ಗ್ಗೆ ನರೇಂದ್ರ ಮೋದಿ ಅವರು ನೀಡಿರುವ ಈ ಹೇಳಿಕೆಗೆ ಭಾರಿ ಮಹತ್ವವಿದೆ ಎಂದು ಸುದ್ದಿ ವಲಯಗಳಲ್ಲಿ ಭಾವಿಸಲಾಯಿತು. ಹಿಂದಿನ ವಾರ ನಡೆದ 33 ವಿಧಾನಸಭಾ ಉಪ ಚುನಾವಣೆಗಳಲ್ಲಿ ಬಿಜೆಪಿಗೆ ಹಿನ್ನಡೆಯಾಗಿರುವ ಹಿನ್ನೆಲೆಯಲ್ಲಿ ಬಿಜೆಪಿಯ ತಂತ್ರ ಬದಲಾವಣೆಯ ಸೂಚನೆಯನ್ನು ಪ್ರಧಾನಿಯವರ ಹೇಳಿಕೆ ನೀಡಿದೆ ಎನ್ನಲಾಯಿತು.  ತನ್ನ ಕೈಯಲ್ಲಿದ್ದ 23 ಸ್ಥಾನಗಳ ಪೈಕಿ 13 ಸ್ಥಾನಗಳನ್ನು ಬಿಜೆಪಿ ಈ ಉಪಚುನಾವಣೆಗಳಲ್ಲಿ ಕಳೆದುಕೊಂಡಿತ್ತು. ತನ್ನ ಪ್ರಬಲ ನೆಲೆಯಾದ ಉತ್ತರ ಪ್ರದೇಶ, ರಾಜಸ್ಥಾನ, ಗುಜರಾತಿನಲ್ಲಿ ಲೋಕಸಭಾ ಚುನಾವಣೆಯಲ್ಲಿ ಭಾರಿ ಜಯಭೇರಿ ಭಾರಿಸಿದ ನಾಲ್ಕೇ ತಿಂಗಳಲ್ಲಿ ಬಿಜೆಪಿ ಹಿನ್ನಡೆಗಳನ್ನು ಅನುಭವಿಸಿತ್ತು. ಮೋದಿ ಜನಪ್ರಿಯತೆಯ ಪರೀಕ್ಷೆ ಎಂದೇ ಲೋಕಸಭಾ ಚುನಾವಣೆಯನ್ನು ಪಕ್ಷ ಪರಿಗಣಿಸಿತ್ತು.

2014: ಭುವನೇಶ್ವರ: ಸ್ಥಳೀಯ ಚುನಾವಣಾ ಅಧಿಕಾರಿ ಅಧಿಸೂಚನೆ ಹೊರಡಿಸುವುದರೊಂದಿಗೆ ಒಡಿಶಾದ ಕಂಧಮಲ್ ಲೋಕಸಭಾ ಕ್ಷೇತ್ರದಲ್ಲಿ ಉಪಚುನಾವಣೆ ಪ್ರಕ್ರಿಯೆ ಚಾಲನೆ ಪಡೆಯಿತು. ಆಡಳಿತಾರೂಢ ಬಿಜು ಜನತಾದಳದ ಹಾಲಿ ಸದಸ್ಯ ಹೇಮೇಂದ್ರ ಚಂದ್ರ ಸಿಂಗ್ ಅವರು ಅಸ್ವಾಸ್ಥ್ಯ ಪರಿಣಾಮವಾಗಿ ಸೆಪ್ಟೆಂಬರ್ 5ರಂದು ಮೃತರಾದ ಕಾರಣ ಇಲ್ಲಿ ಉಪಚುನಾವಣೆ ನಡೆಸಬೇಕಾಗಿ ಬಂದಿತು. 'ನಾಮಪತ್ರ ಸಲ್ಲಿಕೆ ಈದಿನ ಆರಂಭವಾಗುವುದು ಮತ್ತು ಸೆಪ್ಟೆಂಬರ್ 26ರವರೆಗೆ ಮುಂದುವರಿಯುವುದು. ಚುನಾವಣೆಯು ಅಕ್ಟೋಬರ್ 15ರಂದು ನಡೆಯುವುದು. ಅಕ್ಟೋಬರ್ 19ರಂದು ಮತಗಳ ಎಣಿಕೆ ನಡೆಯುವುದು ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಎನ್. ತಿರುಮಲ ನಾಯ್ಕ ತಿಳಿಸಿದರು.

2014: ನವದೆಹಲಿ: ಮಳೆಯ ಪ್ರಮಾಣ ಕಡಿಮೆಯಾದ ಕಾರಣ ಈ ವರ್ಷ ಭಾರತದ ಆಹಾರ ಧಾನ್ಯ ಉತ್ಪಾದನೆ ಶೇಕಡಾ 7ರಷ್ಟು ಕುಸಿಯುವ ಸಾಧ್ಯತೆ ಇದೆ ಎಂದು ಅಂದಾಜು ಮಾಡಲಾಯಿತು. ಅಂದರೆ ಆಹಾರ ಧಾನ್ಯ ಉತ್ಪಾದನೆ 12 ಕೋಟಿ ಟನ್​ಗಳಿಗೆ ಕುಸಿಯಲಿದೆ. 2013-14ರ ಜುಲೈ-ಜೂನ್ ನಡುವಣ ಹಿಂಗಾರು ಅವಧಿಯಲ್ಲಿ ಅಹಾರ ಧಾನ್ಯ ಉತ್ಪಾದನೆ 12.92 ಕೋಟಿ ಟನ್ ಆಗಿತ್ತು. ಬಿತ್ತನೆ ಪ್ರಮಾಣ ಸರಾಸರಿ ಕಳೆದ ಐದು ವರ್ಷಗಳಲ್ಲಿ ಆದಷ್ಟೇ ಆಗಿದ್ದು, ಕಳೆದ ವರ್ಷಕ್ಕಿಂತ ಕೇವಲ ಶೇಕಡಾ 3ರಷ್ಟು ಕಡಿಮೆಯಾಗಿದೆ. ಮಳೆ ಪ್ರಮಾಣ ಅಲ್ಪ ಸುಧಾರಣೆ ಕಾರಣ ಆಹಾರ ಧಾನ್ಯ ಉತ್ಪಾದನೆ ಅಂದಾಜು 12 ಕೋಟಿ ಟನ್​ಗಳಷ್ಟು ಆಗಬಹುದು ಎಂದು ಅಧಿಕೃತ ಪ್ರಕಟಣೆ ತಿಳಿಸಿತು. ಹಿಂಗಾರು ಅವಧಿಯಲ್ಲಿ ಬತ್ತವೇ ಮುಖ್ಯಬೆಳೆ. ಈ ವರ್ಷ ಮಳೆಯ ಪ್ರಮಾಣ ಜೂನ್​ನಲ್ಲಿ ಇದ್ದ ಶೇಕಡಾ 43ರಿಂದ ಪ್ರಸ್ತುತ ಶೇಕಡಾ 12ಕ್ಕೆ ಇಳಿಯಿತು. ಆದರೆ ಆಗಸ್ಟ್​ನಲ್ಲಿ ಮಳೆ ಸುಧಾರಿಸಿದ್ದರಿಂದ ಆಹಾರ ಧಾನ್ಯ ಉತ್ಪಾದನೆಗೆ ಹೆಚ್ಚಿನ ಅನುಕೂಲವಾಯಿತು.

2014: ಎಡಿನ್​ಬರೋ: ಸ್ಕಾಟ್ಲೆಂಡ್ ಮತದಾರರು ಬ್ರಿಟನ್ನಿನಿಂದ ಪ್ರತ್ತ್ಯೇಕಗೊಂಡು ಸ್ವಾತಂತ್ರ್ಯ ಪಡೆಯಬೇಕೆಂಬ ಪ್ರಸ್ತಾವವನ್ನು  ನಿರ್ಣಾಯಕವಾಗಿ ತಿರಸ್ಕರಿಸಿದರು. ಇದರೊಂದಿಗೆ ಅಲೆಕ್ಸ್ ಸಾಲ್ಮಂಡ್ ಅವರ ಸ್ವತಂತ್ರ ಸ್ಕಾಟ್ಲೆಂಡ್ ಕನಸು ನುಚ್ಚು ನೂರಾಯಿತು. ಬ್ರಿಟನ್​ನಲ್ಲಿಯೇ ಸ್ಕಾಟ್ಲೆಂಡ್ ಉಳಿಯಬೇಕು ಎಂಬುದಕ್ಕೆ ಜನರ ಪ್ರಬಲ ಬೆಂಬಲ ವ್ಯಕ್ತವಾಯಿತು. ಜನಮತಗಣನೆಯಲ್ಲಿ ಸ್ವಾತಂತ್ರ್ಯಪರ ಲಭಿಸಿದ 1,617,989 ಮತಗಳಿಗೆ ವಿರುದ್ಧವಾಗಿ 20,01,926 ಮತಗಳು ಬಂದುದು ಖಚಿತವಾಗುತ್ತಿದ್ದಂತೆಯೇ 'ಒಗ್ಗಟ್ಟಿನಿಂದ ಇರುವುದೇ ಲೇಸು' ಚಳವಳಿಕಾರರು ವಿಜಯೋತ್ಸವ ಆಚರಿಸಿದರು. ವಿಜಯದ ಅಂತರದ ಅನುಪಾತ ಶೇಕಡಾ 55 - 45ರಷ್ಟಿದ್ದು ಪರಿಸ್ಥಿತಿಯನ್ನು ಇನ್ನಷ್ಟು ಸ್ಪಷ್ಟಗೊಳಿಸಿದೆ. ಒಗ್ಗಟ್ಟಾಗಿರುವುದರ ಪರ ಶೇಕಡಾ 3ರಷ್ಟು ಹೆಚ್ಚೇ ಮತಗಳು ಬಂದವು. ಗೆಲ್ಲಲು ಬೇಕಿದ್ದ ಮತಗಳು 18,52,828. ಮುಂಜಾನೆ 6.15ರ ಬಳಿಕ ಸ್ವಲ್ಪ ಹೊತ್ತಿನಲ್ಲೇ ಅಲೆಕ್ಸ್ ಸಾಲ್ಮಂಡ್ ತಮ್ಮ ಪರಾಭವ ಒಪ್ಪಿಕೊಂಡರು. 'ಜನರ ತೀರ್ಪನ್ನು ನಾನು ಸ್ವೀಕರಿಸುತ್ತೇನೆ ಮತ್ತು ಸ್ಕಾಟ್ಲೆಂಡಿನ ಪ್ರಜಾತಾಂತ್ರಿಕ ನಿರ್ಣಯವನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಎಂದು ಕರೆ ನೀಡಬಯಸುತ್ತೇನೆ' ಎಂದು ಅಲೆಕ್ಸ್ ಹೇಳಿದರು. ಸ್ಕಾಟ್ಲೆಂಡ್ ಸ್ವತಂತ್ರವಾಗಬೇಕೆ ಎಂಬ ಬಗ್ಗೆ ಗುರುವಾರ ಜನಮತಗಣನೆ ನಡೆದಿತ್ತು.

2014: ನವದೆಹಲಿ: ರಾಷ್ಟ್ರಾದ್ಯಂತ ಸಾಮೂಹಿಕ ಸ್ವಚ್ಛತೆ ಖಾತರಿಗಾಗಿ ಬಳಕೆದಾರ ಸ್ನೇಹಿ ಶೌಚಾಲಯಗಳನ್ನು ನಿರ್ವಿುಸುವ ನಿಟ್ಟಿನಲ್ಲಿ ಬಿಲ್ ಗೇಟ್ಸ್ ಮತ್ತು ಮಿಲಿಂದಾ ಗೇಟ್ಸ್ ಫೌಂಡೇಶನ್ ಜೊತೆ ಪಾಲುದಾರಿಕೆಗೆ ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಒಪ್ಪಿತು. ಕೇಂದ್ರ ನಗರಾಭಿವೃದ್ಧಿ ಇಲಾಖೆ ಸಚಿವ ವೆಂಕಯ್ಯ ನಾಯ್ಡು ಅವರ ಜೊತೆಗೆ ಇಲ್ಲಿ ನಡೆದ ಸಭೆಯೊಂದರಲ್ಲಿ ಬಿಲ್ ಗೇಟ್ಸ್ ಅವರು ಸರ್ಕಾರದ ಸ್ವಚ್ಛತಾ ಕ್ರಮಗಳ ಬಗ್ಗೆ ವಿಚಾರಿಸಿದರು. 2022ರ ವೇಳೆಗೆ ಎಲ್ಲರಿಗೂ ವಸತಿ ಖಾತರಿ ಹಾಗೂ ಈ ವರ್ಷ ಅಕ್ಟೋಬರ್ 2ರಂದು 'ಸ್ವಚ್ಛ ಭಾರತ ಅಭಿಯಾನ'ವನ್ನು ಸರ್ಕಾರ ಆರಂಭಿಸುತ್ತಿರುವ ಬಗ್ಗೆ ಗೇಟ್ಸ್ ಅವರಿಗೆ ವಿವರಿಸಿದ ವೆಂಕಯ್ಯ ನಾಯ್ಡು, ಸ್ವಚ್ಛ ಭಾರತ ಅಭಿಯಾನದ ಮೂಲಕ 2019ರ ವೇಳೆಗೆ ಪ್ರತಿಯೊಂದು ಮನೆಯಲ್ಲೂ ಶೌಚಾಲಯ ಸವಲತ್ತು ಇರುವಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು. ಹೊಸ ವಸತಿ ಯೋಜನೆಯಡಿಯಲ್ಲಿ ನಗರ ಪ್ರದೇಶದಲ್ಲಿ ನಿರ್ವಿುಸಲಾಗುವ ಪ್ರತಿ ಮನೆಯಲ್ಲೂ ಶೌಚಾಲಯ ಸವಲತ್ತುಗಳನ್ನು ಒದಗಿಸಲಾಗುವುದು. ಪ್ರಸ್ತುತ 1.20 ಕೋಟಿ ಮನೆಗಳಲ್ಲಿ ಶೌಚಾಲಯ ಸವಲತ್ತಿಲ್ಲ ಎಂದು ನಾಯ್ಡು ಹೇಳಿದರು. ಆರ್ಥಿಕ ದುರ್ಬಲರು ಮತ್ತು ಕಡಿಮೆ ಆದಾಯದವರಿಗಾಗಿ ಕೇವಲ ನಗರ ಪ್ರದೇಶಗಳಲ್ಲೇ ಸುಮಾರು 3 ಕೋಟಿ ಮನೆಗಳನ್ನು ನಿರ್ವಿುಸಬೇಕಾಗಿರುವುದರಿಂದ ಸರ್ಕಾರವು ಬಿಲ್ ಗೇಟ್ಸ್ ಫೌಂಡೇಶನ್ ಪಾಲುದಾರಿಕೆಯನ್ನು ಅಪೇಕ್ಷಿಸುತ್ತದೆ. ಫೌಂಡೇಶನ್ನಿನ ಅನುಭವ ಮತ್ತು ಕೌಶಲದ ಸದುಪಯೋಗ ಪಡೆಯುವುದು ಸರ್ಕಾರದ ಉದ್ಧೇಶ ಎಂದು ಸಚಿವರು ಹೇಳಿದರು. ರಾಷ್ಟ್ರದಲ್ಲಿ ಸಾಮೂಹಿಕ ಸ್ವಚ್ಛತೆಗೆ ಪ್ರಧಾನಿ ನರೇಂದ್ರ ಮೋದಿ ವಿಶೇಷ ಒತ್ತು ನೀಡಿದ್ದಾರೆ ಎಂದು ಅವರು ನುಡಿದರು. ಗೇಟ್ಸ್ ಮಾತುಕತೆ ಸಂದರ್ಭದಲ್ಲಿ ಈ ನಿಟ್ಟಿನಲ್ಲಿ ಸರ್ಕಾರ ಮಾಡುತ್ತಿರುವ ಯತ್ನವನ್ನು ಶ್ಲಾಘಿಸಿದರು.

2007: ಶ್ರೀರಾಮ ಐತಿಹಾಸಿಕ ವ್ಯಕ್ತಿಯೇ ಅಲ್ಲ ಎಂಬ ತಮ್ಮ ಮುಂಚಿನ ಹೇಳಿಕೆಯನ್ನು ಮತ್ತೆ ಸಮರ್ಥಿಸಿಕೊಂಡ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ, ತಮ್ಮ ವಾದ ವಿರೋಧಿಸುವವರು ಸೂಕ್ತ ದಾಖಲೆಗಳನ್ನು ತೋರಿಸಲಿ ಎಂದು ಸವಾಲು ಹಾಕಿದರು. ಟಿವಿ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ನಿಲುವು ಸ್ಪಷ್ಟಪಡಿಸಿದ ಅವರು, ರಾಮ ಬದುಕಿದ್ದ ಎಂಬುದಕ್ಕೆ ಯಾವುದೇ ದಾಖಲೆಗಳಿಲ್ಲ, ಅದೇ ರೀತಿ ಸಮುದ್ರಕ್ಕೆ ಸೇತುವೆ ಕಟ್ಟಬಲ್ಲ ಎಂಜಿನಿಯರಿಂಗ್ ಪರಿಣಿತಿಯನ್ನು ಹೊಂದಿರುವ ಕುರಿತೂ ಸಾಕ್ಷ್ಯಾಧಾರಗಳಿಲ್ಲ ಎಂದು ಹೇಳಿದರು.

2007: ಅಮೆರಿಕದ ಕೇಂದ್ರೀಯ ಬ್ಯಾಂಕ್ ಫೆಡರಲ್ ರಿಸರ್ವ್ ಬಡ್ಡಿ ದರಗಳನ್ನು ಕಡಿಮೆ ಮಾಡಿದ್ದರಿಂದ ಉತ್ತೇಜನಗೊಂಡ ಷೇರುಪೇಟೆ ಸೂಚ್ಯಂಕವು 653 ಅಂಶಗಳಷ್ಟು ಏರಿಕೆಯೊಂದಿಗೆ ಇನ್ನೊಂದು ಸಾರ್ವಕಾಲಿಕ ದಾಖಲೆ ಬರೆಯಿತು. ಮುಂಬೈ ಷೇರುಪೇಟೆ ವಹಿವಾಟಿನ ಅಳತೆ ಗೋಲಾಗಿರುವ ಸಂವೇದಿ ಸೂಚ್ಯಂಕವು ಮಾಂತ್ರಿಕ ಸಂಖ್ಯೆ 16 ಸಾವಿರ ಅಂಶಗಳನ್ನು ದಾಟಿ ಹೊಸ ಮೈಲಿಗಲ್ಲು ಸ್ಥಾಪಿಸಿತು. ಷೇರುಪೇಟೆಯಲ್ಲಿ ಹಣ ಹೂಡಿದವರು ಕಳೆದ ಎರಡು ತಿಂಗಳಲ್ಲಿ ರೂ 5 ಲಕ್ಷ ಕೋಟಿಗಳಷ್ಟು ಶ್ರೀಮಂತರಾದರು. ಸೂಚ್ಯಂಕವು 15 ಸಾವಿರ ಅಂಶಗಳಿಂದ 16 ಸಾವಿರ ಅಂಶಗಳವರೆಗೆ ಸಾಗಿ ಬಂದ ಹಿನ್ನೆಲೆಯಲ್ಲಿ ಬಂಡವಾಳ ಮಾರುಕಟ್ಟೆಯಲ್ಲಿ ಹೂಡಿಕೆಯಾದ ಹಣದ ಒಟ್ಟು ಮೊತ್ತ ರೂ 49,17,402 ಕೋಟಿಗಳಷ್ಟಾಯಿತು.

 2007: ವಿಫಾ ಹೆಸರಿನ ಚಂಡಮಾರುತ ಚೀನದ ಝೆಜಿಯಾಂಗ್ ಪ್ರಾಂತವನ್ನು ಅಪ್ಪಳಿಸಿದ ಪರಿಣಾಮವಾಗಿ 50 ಲಕ್ಷಕ್ಕೂ ಹೆಚ್ಚು ಜನ ನಿರಾಶ್ರಿತರಾದರು. ಕಳೆದ ವರ್ಷ ಇದೇ ಭಾಗಕ್ಕೆ ಅಪ್ಪಳಿಸಿದ್ದ ಸೊಮಾಯ್ ಚಂಡಮಾರುತ ನೂರಾರು ಜನರನ್ನು ಬಲಿತೆಗೆದುಕೊಂಡಿತ್ತು.

2007: ಷೇರುಪೇಟೆ ವಹಿವಾಟನ್ನು ಮನೆ ಅಥವಾ ಕಚೇರಿಯಲ್ಲಿ ಕುಳಿತೇ ಇಂಟರ್ನೆಟ್ ನೆರವಿನಿಂದ ನಿರ್ವಹಿಸಬಹುದಾದ ಇ-ಟ್ರೇಡಿಂಗ್ ಸೇವೆಯನ್ನು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (ಎಸ್ಬಿಎಂ) ಬೆಂಗಳೂರಿನಲ್ಲಿ ಆರಂಭಿಸಿತು.

2007: ಎಸ್ಬಿಎಂ ಜೈನ್ ಕಾಲೇಜಿನ ಜೈಪ್ರಕಾಶ್ ಶೆಟ್ಟಿ ಬೆಂಗಳೂರು ವಿಶ್ವವಿದ್ಯಾಲಯ ಅಂತರ ಕಾಲೇಜ್ 43ನೇ ವಾರ್ಷಿಕ ಅಂತರ ಕಾಲೇಜ್ ಅಥ್ಲೆಟಿಕ್ ಕೂಟದ ಪುರುಷರ 400 ಮೀ. ಓಟದ ಸ್ಪರ್ಧೆಯಲ್ಲಿ ಕೂಟದ ನೂತನ ದಾಖಲೆ ಸ್ಥಾಪಿಸಿದ ಕೀರ್ತಿಗೆ ಪಾತ್ರರಾದರು. ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಮೂರು ದಿನಗಳ ಅಥ್ಲೆಟಿಕ್ ಕೂಟದ ಎರಡನೇ ದಿನ, ಜೈಪ್ರಕಾಶ್ ಶೆಟ್ಟಿ 400 ಮೀ ಓಟದ ಸ್ಪರ್ಧೆಯನ್ನು 48.2 ಸೆಕೆಂಡುಗಳಲ್ಲಿ ಕ್ರಮಿಸಿ 2005ರಲ್ಲಿ ಅಲ್ ಅಮೀನ್ ಕಾಲೇಜಿನ ಅಯ್ಯಪ್ಪ ಹೆಸರಿನಲ್ಲಿದ್ದ 48.8 ಸೆಕೆಂಡು ಹಳೆ ದಾಖಲೆಯನ್ನು ಅಳಿಸಿ ಹಾಕಿದರು.

2006: `ಜೋಗಿ' ಚಿತ್ರದ ಶ್ರೇಷ್ಠ ಅಭಿನಯಕ್ಕಾಗಿ ನಟ ಶಿವರಾಜ್ ಕುಮಾರ್, `ನಾಯಿ ನೆರಳು' ಚಿತ್ರದ ಅದ್ಭುತ ನಟನೆಗಾಗಿ ಪವಿತ್ರಾ ಲೋಕೇಶ್ ಅವರು 2005-06 ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದರು. ಗಿರೀಶ್ ಕಾಸರವಳ್ಳಿ ನಿರ್ದೇಶನದ `ನಾಯಿ ನೆರಳು' ಶ್ರೇಷ್ಠ ಚಿತ್ರ ಪ್ರಶಸ್ತಿ ಪಡೆಯಿತು. `ಕೇರಾಫ್ ಫುಟ್ ಪಾತ್' ನ ಮಾಸ್ಟರ್ ಕಿಶನ್ ಅತ್ಯುತ್ತಮ ಬಾಲ ನಟ ಪ್ರಶಸ್ತಿ ಪಡೆದುಕೊಂಡರು.

 2006: 1993ರಲ್ಲಿ ಮುಂಬೈಯ ವರ್ಲಿ ಸೆಂಚುರಿ ಬಜಾರಿನಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟದಲ್ಲಿ ಆರೋಪಿ `ಅಬ್ದುಲ್ ಗನಿ ಟರ್ಕ್ ತಪ್ಪಿತಸ್ಥ' ಎಂದು ವಿಶೇಷ ಟಾಡಾ ನ್ಯಾಯಾಧೀಶ ಪಿ.ಡಿ. ಕೋಡೆ  ತೀರ್ಪು ನೀಡಿದರು. 47 ವರ್ಷದ ಟರ್ಕ್ ನನ್ನು ಸ್ಫೋಟ ಸಂಭವಿಸಿದ ಕೆಲವೇ ಸಮಯದಲ್ಲಿ ಬಂಧಿಸಲಾಗಿತ್ತು. ಈತನು ಪ್ರಮುಖ ಆರೋಪಿ ಟೈಗರ್ ಮೆಮನ್ ನ ವಾಹನ ಚಾಲಕನಾಗಿದ್ದ. 1993ರ ಮಾರ್ಚರ್್ 12ರಂದು ಈತ ಸೆಂಚುರಿ ಬಜಾರಿನಲ್ಲಿ ಆರ್ಡಿಎಕ್ಸ್ ತುಂಬಿದ್ದ ಜೀಪ್ ನಿಲ್ಲಿಸಿ ಭಾರಿ ಸ್ಫೋಟಕ್ಕೆ ಕಾರಣನಾಗಿದ್ದ.

2006: ಬ್ರಿಟನ್ನಿನ ವರ್ತಮಾನ ಪತ್ರಿಕೆಗಳ ಮುಖಪುಟದಲ್ಲಿ ಪ್ರಕಟವಾದ ಶತಮಾನದ ಸ್ಥಳೀಯ ಹಗರಣಗಳು, ಅಂತಾರಾಷ್ಟ್ರೀಯ ಪ್ರಮುಖ ಘಟನಾವಳಿಗಳು, ಜಾಗತಿಕ ಮಟ್ಟದ ದುರಂತಗಳ ಸಂಗ್ರಹವನ್ನು ಒಳಗೊಂಡ 'ಸುದ್ದಿಮನೆ' ಲಂಡನ್ನಿನಲ್ಲಿ ಅನಾವರಣಗೊಂಡಿತು. ಖಾಸಗಿಯವರಿಂದ ಸಂಗ್ರಹಿಸಲಾದ ಒಂದು ಲಕ್ಷ ಪತ್ರಿಕೆಗಳ ಮುಖಪುಟಗಳು ಇಲ್ಲಿ ಪ್ರದರ್ಶಿತವಾಗಿವೆ. 1909ರಲ್ಲಿ ನಡೆದ ಪ್ರಪ್ರಥಮ ವಿಮಾನ ಹಾರಾಟ, 1953ರಲ್ಲಿ ಪ್ರಥಮ ಬಾರಿಗೆ ಮೌಂಟ್ ಎವರೆಸ್ಟ್ ಏರಿದ ಘಟನೆಯಿಂದ ಹಿಡಿದು, ಲಂಡನ್ನಿನಲ್ಲಿ ಇತ್ತೀಚೆಗೆ ಸಂಭವಿಸಿದ ಮಾನವ ಬಾಂಬ್ ಸ್ಫೋಟದವರೆಗಿನ ಸುದ್ದಿಗಳನ್ನು ಒಳಗೊಂಡ ಪತ್ರಿಕೆಗಳ ಮುಖಪುಟಗಳು ಇಲ್ಲಿವೆ. 1969ರ ಜುಲೈ 21ರಂದು ಮಾನವ ಚಂದ್ರನ ಮೇಲೆ ಕಾಲಿಟ್ಟ ಸುದ್ದಿಯನ್ನು ಮೊದಲಿಗೆ ಪ್ರಕಟಿಸಿದ `ಈವ್ನಿಂಗ್ ಸ್ಟ್ಯಾಂಡರ್ಡ್' ಮುಖಪುಟ, 1963ರ ನವೆಂಬರ್ 25ರಂದು ಪ್ರಥಮ ಬಾರಿಗೆ ವಿಧಿಸಲಾದ ಮರಣದಂಡನೆ (ಓಸ್ವಾಲ್ಡ್ ಹಾರ್ವೆ ಹತ್ಯೆಯ ಆರೋಪಿ ಜಾಕ್ ರೂಬಿ) ಪ್ರಕರಣದ ವರದಿ ಕೂಡಾ ಈ ಪ್ರದರ್ಶನದಲ್ಲಿದೆ.

 2006: ಪ್ರಧಾನಿ ತಕ್ ಸಿನ್ ಶಿನವಾತ್ರ ಅವರು ನ್ಯೂಯಾರ್ಕಿನಲ್ಲಿ ವಿಶ್ವಸಂಸ್ಥೆ ಶೃಂಗಸಬಯಲ್ಲಿ ಪಾಲ್ಗೊಂಡಿದ್ದಾಗ ಅವರ ಅನುಪಸ್ಥಿತಿಯಲ್ಲಿ ಥಾಯ್ಲೆಂಡ್ ಸೇನೆ ಕ್ಷಿಪ್ರ ಕ್ರಾಂತಿಗೆ ಯತ್ನಿಸಿದ ಹಿನ್ನೆಲೆಯಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಯಿತು. ಶಿನವಾತ್ರ ಅವರು ಸೇನಾ ಮುಖ್ಯಸ್ಥರನ್ನು ವಜಾ ಮಾಡಿ ತುರ್ತು ಪರಿಸ್ಥಿತಿ ಘೋಷಿಸಿದರು.

2001: ಪಂಜಾಬಿನ ಗುರುಪ್ರೀತ್ ಸಿಂಗ್ ಅವರು ಲಖ್ನೋದಲ್ಲಿ ನಡೆದ 41ನೇ  ಅಂತರ್ ರಾಜ್ಯ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ 110 ಮೀಟರ್ ಹರ್ಡಲ್ಸನ್ನು 14.07 ಸೆಕೆಂಡುಗಳಲ್ಲಿ ಓಡುವ ಮೂಲಕ ಭಾರತೀಯ ಓಟಗಾರರ ಹಳೆಯ ದಾಖಲೆಯನ್ನು ಅಳಿಸಿ ಹಾಕಿದರು. 1964ರ ಟೋಕಿಯೊ ಒಲಿಪಿಂಕ್ಸಿನಲ್ಲಿ ಜಿ.ಎಸ್. ರಾಂಧವಾ ಅವರು ಮಾಡಿದ್ದ ದಾಖಲೆಯನ್ನು ಅವರು ಮುರಿದರು. ಈ ದಾಖಲೆ ಮುರಿಯುವ ಯತ್ನವನ್ನು ಜಿ.ಎಸ್. ರಾಂಧವಾ ಅವರೂ ವೀಕ್ಷಿಸಿದರು.

2000: ಸಿಡ್ನಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರ ಎತ್ತುವ ಸ್ಪರ್ಧೆಯ  (ವೆಯ್ಟ್ ಲಿಫ್ಟಿಂಗ್) 69 ಕಿ.ಗ್ರಾಂ. ವಿಭಾಗದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಕರ್ಣಂ ಮಲ್ಲೇಶ್ವರಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ಭಾರತದ ಮೊತ್ತ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

1965: ಭಾರತೀಯ ಸ್ವಾತಂತ್ರ್ಯ ಯೋಧ, ಗುಜರಾತಿನ ಮುಖ್ಯಮಂತ್ರಿ ಬಲವಂತರಾಯ್ ಮೆಹ್ತಾ ಅವರು ಭಾರತ - ಪಾಕ್ ಘéರ್ಷಣೆಯ ಸಂದರ್ಭದಲ್ಲಿ ಕಛ್ ಗಡಿಯಲ್ಲಿ ಅವರ ವಿಮಾನಕ್ಕೆ ಪಾಕ್ ವಿಮಾನವು ಗುಂಡು ಹೊಡೆದು ಉರುಳಿಸಿದ ಪರಿಣಾಮವಾಗಿ ಮೃತರಾದರು. ಅವರ ಬದುಕಿನಲ್ಲಿನಂಬರ್ 19 ಮಹತ್ವ ಪಡೆದಿದೆ. ಅವರು ಹುಟ್ಟಿದ್ದು 1899ರ ಫೆಬ್ರುವರಿ 19ರಂದು. ಮದುವೆಯಾದದ್ದು 1936ರ ಏಪ್ರಿಲ್ 19ರಂದು. ಮೃತರಾದದ್ದು 1965ರ ಸೆಪ್ಟೆಂಬರ್ 19ರಂದು.

1961: ಸಾಹಿತಿ ಅನುರಾಧ ಕೆ.ವಿ. ಜನ್ಮದಿನ.

1958: ಅಮೆರಿಕದ ಮಿಲಿಟರಿಯೇತರ ಬಾಹ್ಯಾಕಾಶ ಯಾನಗಳಿಗೆ ಸಂಬಂಧಿಸಿದಂತೆ ಸಂಶೋಧನೆ ನಡೆಸುವ ವಿಚಾರದಲ್ಲಿ ಸಮನ್ವಯ ಸಾಧಿಸುವ ಸಲುವಾಗಿ ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ಎಂಬ ಸರ್ಕಾರಿ ಸಂಸ್ಥೆಯನ್ನು ಸ್ಥಾಪಿಸಲಾಯಿತು.

1929: ಖ್ಯಾತ ನಾಟಕಕಾರ ಬಿ.ವಿ. ಕಾರಂತ (19-9-1929ರಿಂದ 1-9-2002) ಅವರು ಬಾಬುಕೋಡಿ ನಾರಣಪ್ಪಯ್ಯ- ಲಕ್ಷ್ಮಮ್ಮ ದಂಪತಿಯ ಮಗನಾಗಿ ದಕ್ಷಿಣ ಕನ್ನಡ ಜಿಲ್ಲೆಯ ಮಂಚಿ ಗ್ರಾಮದ ಬಾಬುಕೋಡಿಯಲ್ಲಿ ಜನಿಸಿದರು. ಒಟ್ಟು 52 ನಾಟಕಗಳನ್ನು ನಿರ್ದೇಶಿದ ಅವರು 15 ಕೃತಿಗಳನ್ನು ಹಿಂದಿಗೆ ಅನುವಾದಿಸಿದ್ದರು. ಏವಂ ಇಂದ್ರಜಿತ, ಹಯವದನ, ಸಂಕ್ರಾಂತಿ, ಈಡಿಪಸ್, ಜೋಕುಮಾರಸ್ವಾಮಿ ಅವರು ನಿರ್ದೇಶಿಸಿದ ನಾಟಕಗಳಲ್ಲಿ ಹೆಸರುವಾಸಿಯಾದವು. ಮಕ್ಕಳಿಗಾಗಿಯೂ ಹಲವಾರು ನಾಟಕಗಳನ್ನು ರಚಿಸಿದ ಕಾರಂತ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

1704: ಗುರುಗೋವಿಂದ ಸಿಂಗ್ ನಿಧನ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement