Wednesday, September 24, 2008

ಇಂದಿನ ಇತಿಹಾಸ History Today ಸೆಪ್ಟೆಂಬರ್ 24

ಇಂದಿನ ಇತಿಹಾಸ

ಸೆಪ್ಟೆಂಬರ್ 24

ಚಿತ್ರರಂಗದ ಜನಪ್ರಿಯ ಪಂಚಭಾಷಾ (ಮಲಯಾಳಂ, ಕನ್ನಡ, ತಮಿಳು, ತೆಲುಗು, ಹಿಂದಿ) ತಾರೆಯಾಗಿದ್ದ ಪದ್ಮಿನಿ (74) (12-6-1932ರಿಂದ 24-9-2006) ತಮಿಳುನಾಡಿನ ಚೆನ್ನೈಯ ಅಪೋಲೋ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಶಾಸ್ತ್ರೀಯ ನರ್ತಕಿಯಾಗಿ ಕೂಡಾ ಜನಮನ್ನಣೆ ಗಳಿಸಿದ್ದ ಪದ್ಮಿನಿ 1932ರ ಜೂನ್ 12ರಂದು ತಿರುವನಂತಪುರದ ಪೂಜಾಪ್ಪುರು ಎಂಬಲ್ಲಿ ಜಮೀನ್ದಾರಿ ಕುಟುಂಬದಲ್ಲಿ ಜನಿಸಿದರು.

2007: ಆಫ್ರಿಕಾದ ಜೋಹಾನ್ಸ್ ಬರ್ಗಿನ ವಾಂಡರರ್ಸ್ ಕ್ರೀಡಾಂಗಣದಲ್ಲಿ ಭಾರತದ `ಟೀಮ್ ಇಂಡಿಯಾ'ಕ್ಕೆ ಚೊಚ್ಚಲ ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಕಿರೀಟ ಲಭಿಸಿತು. ಫೈನಲಿನಲ್ಲಿ ಮಹೇಂದ್ರಸಿಂಗ್ ದೋನಿ ನೇತೃತ್ವದ ಯುವ ಪಡೆ ಪಾಕಿಸ್ಥಾನ ತಂಡವನ್ನು ಕೇವಲ ಐದು ರನ್ನುಗಳಿಂದ ಬಗ್ಗುಬಡಿಯಿತು. 1983ರ ಜೂನ್ 25ರ ಮುಸ್ಸಂಜೆಯ ನಂತರ ಹಿಂದೂಸ್ಥಾನವನ್ನು 2007ರ ಸೆಪ್ಟೆಂಬರ್ 24 ಸಂಭ್ರಮದ ಮಳೆಯಲ್ಲಿ ತೋಯಿಸಿತು.

2007: ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ)ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸುವ ಮೂಲಕ  ಪಕ್ಷದಲ್ಲಿ ರಾಹುಲ್ ಗಾಂಧಿ ಅವರ ಅಧಿಕೃತ ಪಟ್ಟಾಭಿಷೇಕ ನಡೆಯಿತು. ಪಕ್ಷದ ಕಾರ್ಯಕರ್ತರ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಮಗನಿಗೆ ಯುವ ಕಾಂಗ್ರೆಸ್ ಮತ್ತು ರಾಷ್ಟ್ರೀಯ ವಿದ್ಯಾರ್ಥಿ ಕಾಂಗ್ರೆಸ್ಸಿನ ಜವಾಬ್ದಾರಿ ನೀಡಿದರು. ಇದರ ಜೊತೆಗೆ ಭವಿಷ್ಯದ ಸವಾಲುಗಳತ್ತ ಮುನ್ನೋಟ ಹರಿಸಲಿಕ್ಕಾಗಿ ರಚಿಸಿದ ಗುಂಪಿನಲ್ಲಿಯೂ ರಾಹುಲ್ ಸದಸ್ಯರಾಗಿ ನೇಮಕಗೊಂಡರು.

2007: ಮುಂದಿನ ವರ್ಷದ ಆರಂಭದಲ್ಲಿ ತನ್ನ ಮೊದಲ ಚಂದ್ರಯಾನಕ್ಕೆ ಭಾರತ ವೇದಿಕೆ ಸಜ್ಜುಗೊಳಿಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಅಧ್ಯಕ್ಷ ಜಿ. ಮಾಧವನ್ ನಾಯರ್ ಪ್ರಕಟಿಸಿದರು. ಹೈದರಾಬಾದಿನಲ್ಲಿ ನಡೆದ 58ನೇ ಅಂತಾರಾಷ್ಟ್ರೀಯ ಗಗನಯಾನ ಸಮಾವೇಶದ ಸಂದರ್ಭದಲ್ಲಿ ನಾಯರ್ ಈ ವಿಷಯ ಬಹಿರಂಗಪಡಿಸಿದರು. `ಚಂದ್ರಯಾನ 1' ಎಂದು ಕರೆಯಲಾಗುವ ಭಾರತದ ಬಾಹ್ಯಾಕಾಶ ಸಾಹಸಕ್ಕೆ ನಾಸಾ ಮತ್ತು ಯುರೋಪ್ ಬಾಹ್ಯಾಕಾಶ ಸಂಸ್ಥೆ (ಇಎಸ್ ಎ) ಸಹಕಾರ  ನೀಡಿದ್ದು, ಯೋಜನೆಗಾಗಿ ನಾಸಾ ಮತ್ತು ಇಎಸ್ ಎ ಜತೆ ಇಸ್ರೋ ಒಪ್ಪಂದ ಮಾಡಿಕೊಂಡಿದೆ. ಮುಂದಿನ ಒಂದೇ ವರ್ಷದಲ್ಲಿ ನಾಲ್ಕು ಬಾರಿಚಂದ್ರನಲ್ಲಿಗೆ ಹೋಗುವ ಭಾರತ, ನಂತರದ 5 ವರ್ಷಗಳಲ್ಲಿ ಇಂಥ 60 ಯಾನಗಳನ್ನು ಕೈಗೊಳ್ಳುವುದು ಎಂದು ನಾಯರ್ ನುಡಿದರು.

2007: ಪ್ರತಿಷ್ಠಿತ `ಆಸ್ಕರ್' ಪ್ರಶಸ್ತಿಯ ಅತ್ಯುತ್ತಮ ವಿದೇಶಿ ಚಿತ್ರದ ವಿಭಾಗಕ್ಕೆ ಭಾರತದ ಅಧಿಕೃತ ಚಿತ್ರವಾಗಿ ಅಮಿತಾಭ್ ಬಚ್ಚನ್ ನಟನೆಯ ಏಕಲವ್ಯ ಹಿಂದಿ ಸಿನಿಮಾ ಪ್ರವೇಶ ಪಡೆಯಿತು. ಇದರೊಂದಿಗೆ ಮೂರನೇ ಬಾರಿಗೆ ವಿದುವಿನೋದ್ ಛೋಪ್ರಾ ಅವರ ಸಿನಿಮಾ ಆಸ್ಕರ್ ಪ್ರಶಸ್ತಿಯ ಪೈಪೋಟಿಯಲ್ಲಿ ಕಾಣಿಸಿಕೊಂಡಿತು. 1980 ರಲ್ಲಿ `ಆನ್ ಎನ್ ಕೌಂಟರ್ ವಿತ್ ಫೇಸಸ್' ಮತ್ತು 1989ರಲ್ಲಿ `ಪರಿಂದಾ' ಸಿನಿಮಾಗಳು ಇದೇ ವಿಭಾಗದಲ್ಲಿ ಪ್ರಶಸ್ತಿಗಾಗಿ ಪೈಪೋಟಿ ನಡೆಸಿದ್ದವು.

2007: 1857ರ ಸಿಪಾಯಿ ದಂಗೆಯಲ್ಲಿ ಮಡಿದ ತಮ್ಮ ಪೂರ್ವಿಕರಿಗೆ ಗೌರವ ಸಲ್ಲಿಸಲು ಆಗಮಿಸಿದ 39 ಜನ ಬ್ರಿಟಿಷ್ ಪ್ರವಾಸಿಗರ ತಂಡವು ಗ್ವಾಲಿಯರಿನಲ್ಲಿ ಕಪ್ಪುಬಾವುಟ ಪ್ರತಿಭಟನೆಯನ್ನು ಎದುರಿಸಬೇಕಾಯಿತು. ಪ್ರತಿಭಟನಾಕಾರರಲ್ಲಿ ಹಿಂದೂ ಮಹಾಸಭಾ ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರಿದ್ದರು.  19 ಜನ ಮಹಿಳೆಯರೂ ಇದ್ದ ಬ್ರಿಟಿಷ್ ತಂಡವನ್ನು ಬಿಗಿ ಪೊಲೀಸ್ ಕಾವಲಿನಲ್ಲಿ ರೈಲು ನಿಲ್ದಾಣಕ್ಕೆ ಕರೆದೊಯ್ಯಲಾಯಿತು. 

2007: ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಖಲೀಜ್ ಟೈಮ್ಸ್ ಪತ್ರಿಕೆಯ ಭಾರತೀಯ ಆವೃತ್ತಿಯ ನಿವೃತ್ತ ಸಂಪಾದಕ ಸೇರಿದಂತೆ ಇಬ್ಬರು ಪತ್ರಕರ್ತರಿಗೆ ದುಬೈಯ ಸ್ಥಳೀಯ ನ್ಯಾಯಾಲಯ ಎರಡು ತಿಂಗಳ ಜೈಲು ಶಿಕ್ಷೆ ವಿಧಿಸಿತು. ಇರಾನ್ ಮೂಲದ ಮಹಿಳೆಯೊಬ್ಬರ ವಿರುದ್ಧ ವರದಕ್ಷಿಣೆ ಲೇಖನ ಪ್ರಕಟಿಸಿದ್ದಕ್ಕಾಗಿ ನ್ಯಾಯಾಲಯ ಈ ಶಿಕ್ಷೆ ವಿಧಿಸಿತು.

2007: ಇಂಡೋನೇಷ್ಯಾ ರಾಜಧಾನಿ ಜಕಾರ್ತ ದ್ವೀಪದ ಬಳಿ ಸಮುದ್ರ ತಳದಲ್ಲಿ ಮತ್ತೆ ಭೂಕಂಪ ಸಂಭವಿಸಿತು.

2006: ಸಿಖ್ ಯುವಕನನ್ನು ನೇಮಿಸಿಕೊಂಡ ಒಂದು ತಿಂಗಳ ನಂತರ ದೇಶದ 60 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪಾಕಿಸ್ಥಾನಿ ಸೇನೆಯು ಹಿಂದೂ ಧರ್ಮದ ಧಾನೇಶ್ ಎಂಬ (ಸಿಂಧ್ ಗ್ರಾಮೀಣ ಪ್ರದೇಶದ ಥಾರ್ ಪರ್ಕೆರ್ ಜಿಲ್ಲೆ) ವ್ಯಕ್ತಿಯನ್ನು ಯೋಧನನ್ನಾಗಿ ನೇಮಕ ಮಾಡಿಕೊಂಡಿತು. ಹರಿಚರಣ್ ಸಿಂಗ್ ಪಾಕಿಸ್ಥಾನಿ ಸೇನಾಪಡೆ ಸೇರಿದ ಮೊತ್ತ ಮೊದಲ ಸಿಖ್ ವ್ಯಕ್ತಿ.

2006: ಚಿತ್ರರಂಗದ ಜನಪ್ರಿಯ ಪಂಚಭಾಷಾ (ಮಲಯಾಳಂ, ಕನ್ನಡ, ತಮಿಳು, ತೆಲುಗು, ಹಿಂದಿ) ತಾರೆಯಾಗಿದ್ದ ಪದ್ಮಿನಿ (74) (12-6-1932ರಿಂದ 24-9-2006) ತಮಿಳುನಾಡಿನ ಚೆನ್ನೈಯ ಅಪೋಲೋ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಶಾಸ್ತ್ರೀಯ ನರ್ತಕಿಯಾಗಿ ಕೂಡಾ ಜನಮನ್ನಣೆ ಗಳಿಸಿದ್ದ ಪದ್ಮಿನಿ 1932ರ ಜೂನ್ 12ರಂದು ತಿರುವನಂತಪುರದ ಪೂಜಾಪ್ಪುರು ಎಂಬಲ್ಲಿ ಜಮೀನ್ದಾರಿ ಕುಟುಂಬದಲ್ಲಿ ಜನಿಸಿದರು. ಸೂಪರ್ ಸ್ಟಾರ್ ಗಳಾಗಿದ್ದ ಶಿವಾಜಿ ಗಣೇಶನ್, ವರನಟ ರಾಜಕುಮಾರ್, ಪ್ರೇಮ್ ನಜೀರ್, ದೇವಾನಂದ್ ಸೇರಿದಂತೆ ಹಲವಾರು ನಾಯಕರೊಂದಿಗೆ 250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಪದ್ಮಿನಿ ಸಹೋದರಿಯರಾದ ಲಲಿತಾ ಮತ್ತು ರಾಗಿಣಿ ಕೂಡಾ ಚಿತ್ರನಟಿ, ನೃತ್ಯಗಾತಿಯರಾಗಿ `ತಿರುವನಂತಪುರ (ತಿರುವಾಂಕೂರು) ಸಹೋದರಿಯರು' ಎಂದೇ ಈ ಮೂವರು ಖ್ಯಾತರಾಗಿದ್ದರು. ನಾಲ್ಕನೇ ವಯಸ್ಸಿನಲ್ಲೇ ಕಾಲಿಗೆ ಗೆಜ್ಜೆ ಕಟ್ಟಿದ ಪದ್ಮಿನಿ 1949 ರಲ್ಲಿ ಚಿತ್ರ ಜಗತ್ತಿಗೆ ಕಾಲಿಟ್ಟು `ಕಲ್ಪನಾ' ಹಿಂದಿ ಚಿತ್ರದಲ್ಲಿ ನಟಿಸಿದರು. ಡಾ. ಕೆ.ಟಿ. ರಾಮಚಂದ್ರನ್ ಅವರೊಂದಿಗೆ ವೈವಾಹಿಕ ಬದುಕಿಗೆ ಕಾಲಿಟ್ಟ ಬಳಿಕ ಬೆಳ್ಳಿ ತೆರೆಯಿಂದ ಮಾಯವಾದ ಪದ್ಮಿನಿ ಅಮೆರಿಕದಲ್ಲಿ ನೆಲಸಿದ್ದರು. 1977ರಲ್ಲಿನ್ಯೂಜೆರ್ಸಿಯಲ್ಲಿ ತಮ್ಮದೇ ಆದ ಲಲಿತಕಲಾ ಸಂಸ್ಥೆಯನ್ನೂ ಸ್ಥಾಪಿಸಿದ್ದರು. ಇವರ ಸೋದರ ಸಂಬಂಧಿ ಸುಕುಮಾರಿ ಮತ್ತು ಅಂಬಿಕಾ ಸಹ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಖ್ಯಾತಿ ಗಳಿಸಿದವರು. 1981ರಲ್ಲಿ ಭಾರತಕ್ಕೆ ಮರಳಿದ ಪದ್ಮಿನಿ ಅವರನ್ನು ಬೆಳ್ಳಿತೆರೆ ಮತ್ತೆ ಕರೆಯಿತು. ಎರಡನೇ ಇನ್ನಿಂಗ್ಸಿನಲ್ಲಿ ಅವರು ನಟಿಸಿ `ವಾಸ್ತುಹಾರ' ಮತ್ತಿತರ ಮಲಯಾಳಿ ಚಿತ್ರಗಳು ಅಪಾರ ಜನಮನ್ನಣೆ ಗಳಿಸಿದವು. ಹಿಂದಿಯ `ಜಿಸ್ ದೇಶ್ ಮೆ ಗಂಗಾ ಬೆಹತಿ ಹೈ', `ಮೇರಾ ನಾಮ್ ಜೋಕರ್', ಮಲಯಾಳಂನ `ಸ್ನೇಹಸೀಮಾ', `ಅಧ್ಯಾಪಿಕಾ', `ವಿವಾಹಿತ', `ಕುಮಾರ ಸಂಭವ', ತಮಿಳಿನ `ಮೋಹನಾಂಬಾಳ್' ಅವರ ಕೆಲವು ಪ್ರಮುಖ ಚಿತ್ರಗಳು.

2006: ಒರಿಸ್ಸಾದ ಬಾಲಕ ಬುಧಿಯಾಸಿಂಗ್ ಮ್ಯಾರಥಾನ್ ನೆನನಪು ಮಾಸುವ ಮುನ್ನವೇ ಅದೇ ರಾಜ್ಯದ 7ವರ್ಷದ ಇನ್ನೊಬ್ಬ ಬಾಲಕ ಮೃತ್ಯುಂಜಯ ಮಂಡಲ್ ಥಾಣೆ ಜಿಲ್ಲೆಯ ಕಲ್ಯಾಣದಿಂದ 68 ಕಿ.ಮೀ. ದೂರ ಓಡಿ ಅಚ್ಚರಿ ಮೂಡಿಸಿದ. ಈತ ಕಲ್ಯಾಣದಿಂದ ಮುಂಬೈಯ ಗೇಟ್ ವೇ ಆಫ್ ಇಂಡಿಯಾವರೆಗೆ ಓಡಬೇಕಿತ್ತು. ಆದರೆ 68 ಕಿ.ಮೀ. ಓಡಿದ ಬಳಿಕ ನಿಗದಿತ ಗುರಿ ಮುಟ್ಟುವ ಮುನ್ನವೇ ತೀವ್ರವಾಗಿ ಬಸವಳಿದ ಆತ ಕುಸಿದು ಬಿದ್ದ. ಬಳಿಕ ಆತನನ್ನು ಕಾರಿನಲ್ಲಿ ಗೇಟ್ ವೇ ಆಫ್ ಇಂಡಿಯಾಕ್ಕೆ ಕರೆತರಲಾಯಿತು. ಮೂರನೇ ತರಗತಿಯ ಈ ಬಾಲಕ ನಸುಕಿನ 4 ಗಂಟೆಗೆ ತನ್ನ ಓಟ ಪ್ರಾರಂಬಿಸಿದ್ದ. 50ಕ್ಕೂ ಹೆಚ್ಚು ಮಂದಿ ಈತನ ಜೊತೆಗೆ ಮ್ಯಾರಥಾನಿನಲ್ಲಿಪಾಲ್ಗೊಂಡಿದ್ದರು.

2006: ಮೂರ್ತಿ ವಿ.ಎನ್. ರಾವ್ ಮೆಮೋರಿಯಲ್ ಟ್ರಸ್ಟ್ ಹಾಗೂ ಬೆಂಗಳೂರು ಗಾಯನ ಸಮಾಜ ಭಾನುವಾರ ಜಂಟಿಯಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ಸಂಗೀತಗಾರ ಪದ್ಮಶ್ರೀ ಎಂ.ಎಸ್. ಗೋಪಾಲಕೃಷ್ಣನ್ ಅವರಿಗೆ `ವೀಣೆ ಶೇಷಣ್ಣ ಸ್ಮಾರಕ ಪ್ರಶಸ್ತಿ' ಮತ್ತು ಡಾ. ಆರ್. ಕೆ. ಶ್ರೀಕಂಠನ್ ಅವರಿಗೆ `ಸ್ವರಮೂರ್ತಿ ವಿ.ಎನ್. ರಾವ್ ಸ್ಮಾರಕ ಪ್ರಶಸ್ತಿ' ನೀಡಿ ಗೌರವಿಸಲಾಯಿತು.

2006: ಬೆಲ್ಜಿಯಂನ ರಾಜತಾಂತ್ರಿಕ ಮಹಿಳಾ ಅಧಿಕಾರಿ ಇಸಬೆಲ್ಲಾ ಡಿಸಾಯ್ ಅವರನ್ನು ದಕ್ಷಿಣ ದೆಹಲಿಯ ಪ್ರತಿಷ್ಠಿತ ವಸಂತವಿಹಾರ ಬಡಾವಣೆಯಲ್ಲಿನ ಅವರ ನಿವಾಸದಲ್ಲಿ ಕಾರಿನ ಚಾಲಕ ವಿಜಯಪಾಲ್ ಚೌಧರಿ ಇರಿದು ಕೊಲೆಗೈದ.

2006: ಮೃತ ವ್ಯಕ್ತಿಯ ಭ್ರೂಣದಿಂದ (ಗರ್ಭಪಿಂಡ) ಅಣುಕೋಶಗಳನ್ನು ತೆಗೆದು ಅವುಗಳನ್ನು ಜೀವಂತ ಅಂಗಾಂಶಗಳಾಗಿ ಮಾರ್ಪಡಿಸುವಲ್ಲಿ ಯಶಸ್ವಿಯಾಗಿರುವುದಾಗಿ ಬ್ರಿಟಿಷ್ ಲ್ಯಾಬೋರೇಟರಿಯ ವಿಜ್ಞಾನಿಗಳು ಪ್ರಕಟಿಸಿದರು. `ಸ್ಟೆಮ್ ಸೆಲ್ ವಿಜ್ಞಾನ'ದಲ್ಲಿ ಅತ್ಯಂತ ಮಹತ್ವದ ಸಂಶೋಧನಾ ಸಾಧನೆ ಇದಾಗಿದೆ. ಅಲ್ಜಿಮೀರ್ಸ್, ಪಾರ್ಕಿನ್ ಸನ್ಸ್ ನಂತಹ ರೋಗಗಳಿಂದ ನರಳುತ್ತಿರುವವರಿಗೆ ಇದು ವರದಾನ ಆಗಬಲ್ಲುದು ಎಂದು ವಿಜ್ಞಾನಿಗಳು ಪ್ರತಿಪಾದಿಸಿದರು. ನ್ಯೂ ಕ್ಯಾಸಲ್ ಯುನಿವರ್ಸಿಟಿಯ ಸೆಂಟರ್ ಫಾರ್ ಸ್ಟೆಮ್ ಸೆಲ್ ಬಯಾಲಜಿಯ ಪ್ರೊಫೆಸರ್ ಮಿಯೋಡ್ರಾಗ್ ಸ್ಟೊಜ್ಕೊವಿಕ್ ಮತ್ತು ಅವರ ಸಹೋದ್ಯೋಗಿ ಸಂಶೋಧಕರ ತಂಡ ಈ ಸಾಧನೆ ಮಾಡಿದ್ದು `ಸ್ಟೆಮ್ ಸೆಲ್ಸ್' ಜರ್ನಲ್ ನಲ್ಲಿ ಈ ಕುರಿತ ವಿವರವನ್ನು ಪ್ರಕಟಿಸಿದ್ದಾರೆ. ಆದರೆ ನೈತಿಕತೆಯ ಸ್ಟೆಮ್ ಸೆಲ್ ಸಂಶೋಧನೆಗಳಿಗೆ ತೀವ್ರ ವಿರೋಧವಿದ್ದು ಈ ಸಂಶೋಧನೆ ವಿವಾದಾತ್ಮಕ ರೂಪವನ್ನೂ ಪಡೆದಿದೆ.  

1993: ನೊರೋಧಮ್ ಸಿಹಾನೌಕ್ ಅವರು ಕಾಂಬೋಡಿಯಾ ಸಿಂಹಾಸನದ ಮೇಲೆ  ಅಧಿಕಾರ ಮರುಸ್ಥಾಪನೆ ಮಾಡಿ, `ಪ್ರಜಾತಾಂತ್ರಿಕ, ಸಂವೈಧಾನಿಕ ರಾಜಪ್ರಭುತ್ವ' ರಾಷ್ಟ್ರ ತಮ್ಮದು ಎಂದು ಘೋಷಿಸುವ ಸಂವಿಧಾನಕ್ಕೆ ಸಹಿ ಹಾಕಿದರು.

1988: ಕೆನಡಾದ ವೇಗದ ಓಟಗಾರ ಬೆನ್ ಜಾನ್ಸನ್ ಅವರು ಸೋಲ್ ಒಲಿಂಪಿಕ್ಸಿನಲ್ಲಿ 100 ಮೀಟರ್ ದೂರವನ್ನು 9.79 ಸೆಕೆಂಡುಗಳಲ್ಲಿ ಓಡಿ ದಾಖಲೆ ನಿರ್ಮಿಸಿದರು. ಮೂರು ದಿನಗಳ ಬಳಿಕ ನಿಷೇಧಿತ ಉತ್ತೇಜಕ ಮದ್ದು ಸೇವಿಸಿದ್ದರೆಂಬುದು ಬಹಿರಂಗಗೊಂಡು ಅವರ ಪದಕವನ್ನು ಕಿತ್ತುಕೊಳ್ಳಲಾಯಿತು.

1951: ಸಾಹಿತಿ ನಾಗರತ್ನಮ್ಮ ಎಂ. ಶಿವರ ಜನನ.

1947: ಪಾಕಿಸ್ಥಾನಿ ಸೈನಿಕರಿಂದ ಕಾಶ್ಮೀರದ ಮೇಲೆ ದಾಳಿ.

1932: ಚಿತ್ತಗಾಂಗಿನ ಐರೋಪ್ಯ ಕ್ಲಬ್ ಒಂದರ ಮೇಲೆ ಸಶಸ್ತ್ರ ದಾಳಿಯ ನೇತೃತ್ವ ವಹಿಸಿದ್ದ ಪ್ರೀತಿಲತಾ ವಡ್ಡೆದಾರ್ ಆತ್ಮಾಹುತಿ ಮಾಡಿಕೊಳ್ಳುವುದರೊಂದಿಗೆ ರಾಷ್ಟ್ರಕ್ಕಾಗಿ ಆತ್ಮಾರ್ಪಣೆ ಮಾಡಿದ ಮೊದಲ ಭಾರತೀಯ ಮಹಿಳಾ ಉಗ್ರಗಾಮಿ ಎಂಬ ಕೀರ್ತಿಗೆ ಪಾತ್ರರಾದರು.

1932: ಭಾರತದಲ್ಲಿನ ಹಿಂದೂ ನಾಯಕರು ಸಹಿ ಹಾಕಿದ ಒಪ್ಪಂದವೊಂದು ರಾಷ್ಟ್ರದಲ್ಲಿನ `ಅಸ್ಪೃಶ್ಯ'ರಿಗೆ ಹೊಸ ಹಕ್ಕುಗಳನ್ನು ನೀಡಿತು. `ಪೂನಾ ಕಾಯ್ದೆ' ಎಂದೇ ಹೆಸರು ಪಡೆದ ಈ ಒಪ್ಪಂದವು `ಪ್ರತ್ಯೇಕ ಮತದಾರ' ವ್ಯವಸ್ಥೆಯನ್ನು ಹಿಂತೆಗೆದುಕೊಂಡು  ಪರಿಶಿಷ್ಟ ಜಾತಿಗಳಿಗೆ ಹತ್ತು ವರ್ಷಗಳ ಅವಧಿಗೆ ಹೆಚ್ಚಿನ ಪ್ರಾನಿಧ್ಯವನ್ನು ಒದಗಿಸಿತು. ಮಹಾತ್ಮಾ ಗಾಂಧೀಜಿಯವರು `ಪ್ರತ್ಯೇಕ ಮತದಾರ' ವ್ಯವಸ್ಥೆಯು ಪರಿಶಿಷ್ಟರನ್ನು ಹಿಂದೂ ಸಮುದಾಯದಿಂದ ಇನ್ನಷ್ಟು ದೂರಮಾಡುತ್ತದೆ ಎಂದು ವಾದಿಸಿ ಅದನ್ನು ಕಿತ್ತುಹಾಕಲು ಉಪವಾಸ ಹೂಡಿದಾಗ ಡಾ. ಬಿ.ಆರ್. ಅಂಬೇಡ್ಕರ್ ಅವರು ಅದನ್ನು ತೆಗೆದುಹಾಕಿದರು.

1910: `ಗ್ರಾಮಾಯಣ'ದ ಮೂಲಕ ಖ್ಯಾತರಾದ ರಾಮಚಂದ್ರ ರಾವ್ ಭೀಮರಾವ್ ಕುಲಕರ್ಣಿ ಯಾನೆ ರಾವ್ ಬಹದ್ದೂರ್ (24-9-1910ರಿಂದ 31-12-1984) ಅವರು ಭೀಮರಾಯರು- ಸುಭದ್ರಾಬಾಯಿ ದಂಪತಿಯ ಮಗನಾಗಿ ವಿಜಾಪುರ ಜಿಲ್ಲೆಯ ಕೃಷ್ಣಾ ನದಿ ತೀರ ಗ್ರಾಮವಾದ ಹಿರೇ ಪಡಸಲಗಿಯಲ್ಲಿ ಜನಿಸಿದರು.

1861: ಭಾರತೀಯ ಸ್ವಾತಂತ್ರ್ಯ ಯೋಧೆ ಭಿಕಾಜಿ ಕಾಮಾ (1861-1936) ಜನ್ಮದಿನ. 1907ರಲ್ಲಿ ಸ್ಟಟ್ ಗರ್ಟಿನಲ್ಲಿ ನಡೆದ 12ನೇ ಅಂತಾರಾಷ್ಟ್ರೀಯ ಸೋಶಿಯಲಿಸ್ಟ್ ಕಾಂಗ್ರೆಸ್ಸಿನಲ್ಲಿ ಕೆಂಪು, ಬಿಳಿ ಮತ್ತು ಹಸಿರು ಪಟ್ಟಿಗಳಿದ್ದ ತ್ರಿವರ್ಣ ರಂಜಿತ ಭಾರತೀಯ ರಾಷ್ಟ್ರಧ್ವಜದ ಮೊದಲ ಮಾದರಿಯನ್ನು ಹಾರಿಸಿದ ವಿಶೇಷ ಕೀರ್ತಿಗೆ ಕಾಮಾ ಅವರು ಭಾಜನರಾಗಿದ್ದಾರೆ.

1829: ಅಸ್ಸಾಮಿ ಕವಿ ಆನಂದರಾಂ ಫೂಕಾನ್ ಜನನ.

No comments:

Advertisement