ಉಭಯರಿಗೂ ಚುಚ್ಚಿದ 'ಸೊಳ್ಳೆ ನಿವಾರಕ'..!
ಸಮರ್ಪಕ ಪುರಾವೆ ಒದಗಿಸದ ಅರ್ಜಿದಾರರಿಗೆ 1.75 ಲಕ್ಷ ರೂಪಾಯಿ ಮೊತ್ತದ ಪರಿಹಾರ ನೀಡಲು ಜಿಲ್ಲಾ ಗ್ರಾಹಕ ನ್ಯಾಯಾಲಯ ಆಜ್ಞಾಪಿಸಿದ್ದೂ ತಪ್ಪು, ಅಕ್ರಮ ವ್ಯಾಪಾರದಂತಹ ಗಂಭೀರ ಆರೋಪ ಬಂದಾಗಲೂ ನಿರ್ಲಕ್ಷಿಸಿ ಕುಳಿತ ಪ್ರತಿವಾದಿಯ ವರ್ತನೆಯೂ ತಪ್ಪು ಎಂಬ ತೀರ್ಮಾನಕ್ಕೆ ರಾಜ್ಯ ಗ್ರಾಹಕ ನ್ಯಾಯಾಲಯ ಬಂದಿತು.
ನೆತ್ರಕೆರೆ ಉದಯಶಂಕರ
ದೂರು ನೀಡಿದ ವ್ಯಕ್ತಿ ತನ್ನ ಪ್ರತಿಪಾದನೆಗೆ ಸಮರ್ಪಕ ಸಾಕ್ಷ್ಯಾಧಾರ ಒದಗಿಸದೇ ಇದ್ದರೂ, ಪ್ರತಿವಾದಿ ಹಾಜರಾಗಲಿಲ್ಲ ಎಂಬ ಕಾರಣಕ್ಕಾಗಿ ಗ್ರಾಹಕ ನ್ಯಾಯಾಲಯ ಭಾರಿ ಮೊತ್ತದ ದಂಡ ವಿಧಿಸಬಹುದೇ? ಹಾಗೆಯೇ ತನ್ನ ವಿರುದ್ಧ ಗಂಭೀರ ಆಪಾದನೆ ಇದ್ದಾಗ, ಆಪಾದನೆಗೆ ಒಳಗಾದ ವ್ಯಕ್ತಿ ಗ್ರಾಹಕ ನ್ಯಾಯಾಲಯದ ನೋಟಿಸ್ನ್ನು ನಿರ್ಲಕ್ಷಿಸಿ ಸುಮ್ಮನೇ ಕುಳಿತುಕೊಳ್ಳಬಹುದೇ?
ಎರಡೂ ಪ್ರಶ್ನೆಗಳಿಗೆ 'ಇಲ್ಲ' ಎಂಬುದೇ ಉತ್ತರ. ತನ್ನ ಮುಂದೆ ಬಂದ ಇಂತಹ ಪ್ರಕರಣ ಒಂದರ ಮೇಲ್ಮನವಿಯ ವಿಚಾರಣೆ ನಡೆಸಿದ ರಾಜ್ಯ ಗ್ರಾಹಕ ನ್ಯಾಯಾಲಯ ಗ್ರಾಹಕನಿಗೆ ಬೃಹತ್ ಮೊತ್ತದ ಪರಿಹಾರ ಒದಗಿಸಿದ ಜಿಲ್ಲಾ ಗ್ರಾಹಕ ನ್ಯಾಯಾಲಯದ ಆದೇಶವನ್ನು ತಳ್ಳಿ ಹಾಕಿದ್ದಲ್ಲದೆ, ಮೇಲ್ಮನವಿ ಸಲ್ಲಿಸಿದ ಪ್ರತಿವಾದಿಗೂ ದಂಡ ವಿಧಿಸಿದೆ.
ಈ ಕುತೂಹಲಕರ ಪ್ರಕರಣದ ಅರ್ಜಿದಾರರು: ವಿಜಾಪುರದ ನಿವಾಸಿ ಡಾ. ವಿಶ್ವನಾಥನ್ ನಾಗಥಾಣ ಅವರ ಪುತ್ರಿ ಕುಮಾರಿ ಜಯಲಕ್ಷ್ಮಿ. ಪ್ರತಿವಾದಿಗಳು: 1) ಮೆ. ಗೋದ್ರೆಜ್ ಸಾರಾ ಲೀ ಲಿಮಿಟೆಡ್, ವಿಕ್ರೋಲಿ, ಮುಂಬೈ ಮತ್ತು 2) ಮಾಲೀಕರು, ರಾಜಸ್ಥಾನ ಎಂಪೋರಿಯಂ ವಿಜಾಪುರ.
ಅರ್ಜಿದಾರರಾದ ಜಯಲಕ್ಷ್ಮಿ ಅವರು ವಿದ್ಯಾರ್ಥಿನಿಯಾಗಿದ್ದು ಮೊದಲ ಪ್ರತಿವಾದಿಯಾದ ಗೋದ್ರೆಜ್ ಸಾರಾ ಲೀ ಲಿಮಿಟೆಡ್ ಸಂಸ್ಥೆಯು ಉತ್ಪಾದಿಸಿದ್ದ ಎರಡು ಸೊಳ್ಳೆ ನಿವಾರಕಗಳನ್ನು 2005ರ ಅಕ್ಟೋಬರ್ 26ರಂದು ಮತ್ತು ಅಕ್ಟೋಬರ್ 28ರಂದು ಪ್ರತ್ಯೇಕವಾಗಿ 63 ರೂಪಾಯಿ ಮತ್ತು 50 ರೂಪಾಯಿ ನೀಡಿ ಖರೀದಿಸಿದ್ದರು. ಅರ್ಜಿದಾರರ ಪ್ರಕಾರ ಈ ಎರಡೂ ಸೊಳ್ಳೆ ನಿವಾರಕಗಳಲ್ಲೂ ಒಂದೇ ಪ್ರಮಾಣ ಹಾಗೂ ಗುಣಮಟ್ಟದ ಔಷಧ ಬಳಸಲಾಗಿದ್ದು, ಒಂದು 90 ದಿನಗಳಿಗೂ ಇನ್ನೊಂದು 60 ದಿನಗಳಿಗೂ ಬರುವುದು ಎಂದು ಅವುಗಳಿಗೆ ಅಂಟಿಸಲಾಗಿದ್ದ ಚೀಟಿಯಲ್ಲಿ ಭರವಸೆ ನೀಡಲಾಗಿತ್ತು.
ಜಯಲಕ್ಷ್ಮಿ ಅವರು ಈ ಎರಡೂ ಸೊಳ್ಳೆ ನಿವಾರಕಗಳನ್ನು ಎರಡು ಪ್ರತ್ಯೇಕ ಕೊಠಡಿಗಳಲ್ಲಿ ಬಳಸಿದರು. ಎರಡೂ ಸೊಳ್ಳೆ ನಿವಾರಕಗಳು ನಿರಂತರವಾಗಿ ತಲಾ 50 ದಿನಗಳು ಮಾತ್ರ ಕೆಲಸ ಮಾಡಿದವು. ಇದು ಪ್ರತಿವಾದಿಗಳ ವಂಚನೆಯ ವ್ಯಾಪಾರ ಎಂದು ಭಾವಿಸಿದ ಅರ್ಜಿದಾರರು ಪರಿಹಾರ ನೀಡುವಂತೆ ಆಗ್ರಹಿಸಿ 2006ರ ಫೆಬ್ರುವರಿ 16ರಂದು ಲೀಗಲ್ ನೋಟಿಸ್ ಕಳುಹಿಸಿದರು. ಒಂದನೇ ಪ್ರತಿವಾದಿ ನೋಟಿಸಿಗೆ ಉತ್ತರಿಸಲಿಲ್ಲ. ಎರಡನೇ ಪ್ರತಿವಾದಿ ನೋಟಿಸ್ ಪಡೆಯುವುದಕ್ಕೇ ನಿರಾಕರಿಸಿದರು.
ಜಿಲ್ಲಾ ಗ್ರಾಹಕ ನ್ಯಾಯಾಲಯದ ಮೆಟ್ಟಲೇರಿದ ಜಯಲಕ್ಷ್ಮಿ ಅವರು 226 ರೂಪಾಯಿಗಳ ಆರ್ಥಿಕ ನಷ್ಟ ಪರಿಹಾರ, ಮಾನಸಿಕ ಕಿರುಕುಳಕ್ಕೆ 24,744 ರೂಪಾಯಿ ಪರಿಹಾರ ಮತ್ತು ತಮಗಾದ ನೋವು ಮತ್ತಿತರ ತೊಂದರೆಗಳಿಗೆ 1,50,000 ರೂಪಾಯಿ ಪರಿಹಾರ - ಒಟ್ಟು 1.75 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಮನವಿ ಮಾಡಿದರು.
ಜಿಲ್ಲಾ ಗ್ರಾಹಕ ನ್ಯಾಯಾಲಯ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿತು. ಆದರೆ ಉಭಯ ಪ್ರತಿವಾದಿಗಳೂ ಗೈರುಹಾಜರಾದರು. ಅವರ ಗೈರು ಹಾಜರಿಯಲ್ಲೇ ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕ ನ್ಯಾಯಾಲಯ 1.75 ಲಕ್ಷ ರೂಪಾಯಿ ಪರಿಹಾರವನ್ನು ಅರ್ಜಿದಾರಿಗೆ ಆರು ವಾರಗಳ ಒಳಗಾಗಿ ಪಾವತಿ ಮಾಡುವಂತೆ ಪ್ರತಿವಾದಿಗಳಿಗೆ ಆಜ್ಞಾಪಿಸಿ ತೀರ್ಪು ನೀಡಿತು.
ಈ ಆದೇಶ ಕೈಸೇರಿದಾಗ ಎಚ್ಚತ್ತ ಒಂದನೇ ಪ್ರತಿವಾದಿ ಗೋದ್ರೆಜ್ ಸಂಸ್ಥೆಯು ಜಿಲ್ಲಾ ಗ್ರಾಹಕ ನ್ಯಾಯಾಲಯದ ತೀರ್ಪಿನ ವಿರುದ್ಧ ರಾಜ್ಯ ಗ್ರಾಹಕ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿತು. ಅಧ್ಯಕ್ಷರಾದ ನ್ಯಾಯಮೂರ್ತಿ ಚಂದ್ರಶೇಖರಯ್ಯ ಮತ್ತು ಸದಸ್ಯರಾದ ಶ್ರೀಮತಿ ರಮಾ ಅನಂತ್ ಹಾಗೂ ಟಿ. ಹರಿಯಪ್ಪ ಗೌಡ ಅವರನ್ನು ಒಳಗೊಂಡ ಪೀಠವು ಅರ್ಜಿದಾರರ ಪರ ವಕೀಲ ಎಸ್.ಐ. ಕಡಿ ಹಾಗೂ ಪ್ರತಿವಾದಿ ಮೇಲ್ಮನವಿದಾರರ ಪರ ವಕೀಲರಾದ ಮೆ. ಕಿಂಗ್ ಅಂಡ್ ಪ್ಯಾಟ್ರಿಜ್ ಅವರ ಅಹವಾಲುಗಳನ್ನು ಅಲಿಸಿ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿತು.
ಪ್ರಕರಣದಲ್ಲಿ ಅರ್ಜಿದಾರರು ಎರಡು ಸೊಳ್ಳೆ ನಿವಾರಕಗಳನ್ನು ಖರೀದಿಸಿದ ವಿಚಾರದಲ್ಲಿ ವಿವಾದ ಇರಲಿಲ್ಲ. ನಮೂದಿತ ಬೆಲೆಗಿಂತ ಹೆಚ್ಚಿನ ದರ ಪಡೆಯಲಾಯಿತೆಂಬುದೂ ಅರ್ಜಿದಾರರ ದೂರಾಗಿರಲಿಲ್ಲ. ಒಂದೇ ಗುಣಮಟ್ಟ, ಒಂದೇ ಪ್ರಮಾಣದ ಸೊಳ್ಳೆ ನಾಶಕಗಳು 90 ಹಾಗೂ 60 ದಿನಗಳಿಗೆ ಬರುವುದೆಂಬ ಭರವಸೆ ನೀಡಿದ್ದು (ಅವು ಕೇವಲ 50 ದಿನಗಳಿಗೆ ಬಂದದ್ದು) ವಂಚನೆ ಹಾಗೂ ಮೋಸದ ವ್ಯಾಪಾರ ಎಂಬುದು ಅರ್ಜಿದಾರರ ವಾದವಾಗಿತ್ತು. ತನ್ನ ವಾದದ ಸಮರ್ಥನೆಗೆ ಅರ್ಜಿದಾರರು ಎರಡೂ ಸೊಳ್ಳೆ ನಿವಾರಕ ಬಾಟಲಿಗಳಿಗೆ ಅಂಟಿಸಿದ್ದ ಚೀಟಿಗಳನ್ನೂ ಹಾಜರುಪಡಿಸಿದ್ದರು ಹಾಗೂ ಅವುಗಳಲ್ಲಿ 90 ಹಾಗೂ 60 ರಾತ್ರಿಗಳು ಹಾಗೂ ಬೆಲೆ 63 ಮತ್ತು 50 ರೂಪಾಯಿಗಳು ಎಂದು ನಮೂದಿಸಿದ್ದುದರತ್ತ ಗಮನ ಸೆಳೆದಿದ್ದರು. ಅರ್ಜಿದಾರರ ಪರ ವಕೀಲರು ವಿಚಾರಣೆ ಕಾಲದಲ್ಲಿ ಇಂತಹುದೇ ಬರಹಗಳಿದ್ದ ಇನ್ನೆರಡು ಸೊಳ್ಳೆ ನಿವಾರಕ ಔಷಧ ಬಾಟಲಿಗಳಿಗೆ ಅಂಟಿಸಲಾಗಿದ್ದ ಚೀಟಿ ಪ್ರದರ್ಶಿಸಿದರು.
ಆದರೆ ಅರ್ಜಿದಾರರು 'ದಿನ'ಗಳು ಎಂಬುದಾಗಿ ವಾದಿಸಿದ್ದರೂ ಈ ಚೀಟಿಗಳಲ್ಲಿ 'ರಾತ್ರಿ'ಗಳು ಎಂಬುದಾಗಿ ಇದ್ದುದನ್ನು ಜಿಲ್ಲಾ ಗ್ರಾಹಕ ನ್ಯಾಯಾಲಯ ಗಮನಿಸಿಲ್ಲ ಎಂಬುದನ್ನು ರಾಜ್ಯ ಗ್ರಾಹಕ ನ್ಯಾಯಾಲಯ ತನ್ನ ಗಮನಕ್ಕೆ ತೆಗೆದುಕೊಂಡಿತು. ಅದೇ ರೀತಿ ಬಾಟಲಿಗಳ ಒಳಗಿನ ಔಷಧ ಪ್ರಮಾಣ ಒಂದೇ ಆಗಿದ್ದರೂ ಸೊಳ್ಳೆ ನಿವಾರಕ ರಾಸಾಯನಿಕಗಳ ಅಂಶಗಳಲ್ಲಿ ವ್ಯತ್ಯಾಸವಿದ್ದುದನ್ನೂ ನ್ಯಾಯಾಲಯ ಗಮನಿಸಿತು. ಜಿಲ್ಲಾ ಗ್ರಾಹಕ ನ್ಯಾಯಾಲಯ ಇದನ್ನೂ ಗಮನಕ್ಕೆ ತೆಗೆದುಕೊಂಡಿರಲಿಲ್ಲ. ಈ ಎರಡು ಅಂಶಗಳನ್ನು ಗಮನಿಸಿದ್ದರೆ ಜಿಲ್ಲಾ ಗ್ರಾಹಕ ನ್ಯಾಯಾಲಯ ಅರ್ಜಿಯನ್ನು ಪುರಸ್ಕರಿಸುವ ತೀರ್ಪು ನೀಡುತ್ತಿರಲಿಲ್ಲ ಎಂದು ರಾಜ್ಯ ಗ್ರಾಹಕ ನ್ಯಾಯಾಲಯ ಭಾವಿಸಿತು.
ಪ್ರತಿವಾದಿಗಳು ನ್ಯಾಯಾಲಯಕ್ಕೆ ಹಾಜರಾಗದೇ ಇದ್ದರೂ ತನ್ನ ಮುಂದಿದ್ದ ಸಾಕ್ಷ್ಯಾಧಾರಗಳನ್ನು ಸಮರ್ಪಕವಾಗಿ ಪರಿಶೀಲಿಸಿ ಜಿಲ್ಲಾ ಗ್ರಾಹಕ ನ್ಯಾಯಾಲಯ ತೀರ್ಪು ನೀಡಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರತಿವಾದಿಗಳು ವ್ಯಾಪಾರದಲ್ಲಿ ಅಕ್ರಮ ನಡೆಸಿದ್ದಾರೆಂಬ ತೀರ್ಮಾನಕ್ಕೆ ಜಿಲ್ಲಾ ಗ್ರಾಹಕ ನ್ಯಾಯಾಲಯ ಬಂದದ್ದು ಸರಿಯಲ್ಲ ಎಂಬ ನಿಲುವಿಗೆ ರಾಜ್ಯ ಗ್ರಾಹಕ ನ್ಯಾಯಾಲಯ ಬಂದಿತು.
ಅರ್ಜಿದಾರರು ತಮಗಾದ ನಷ್ಟ, ಕಿರಿಕಿರಿ ಬಗ್ಗೆ ಯಾವುದೇ ಸಮರ್ಪಕ ಪುರಾವೆಯನ್ನೂ ನೀಡದೇ ಇದ್ದರೂ ಅವರ ಪರವಾಗಿ 1.75 ಲಕ್ಷ ರೂಪಾಯಿಗಳ ಪರಿಹಾರ ನೀಡಿದ ಜಿಲ್ಲಾ ಗ್ರಾಹಕ ನ್ಯಾಯಾಲಯದ ಕ್ರಮವೂ ಸರಿಯಲ್ಲ. ವಾಸ್ತವವಾಗಿ ಸೊಳ್ಳೆ ನಿವಾರಕಗಳಿಂದ ಆದ ಹಾನಿ ವಿವರಿಸುವ ಬದಲು ಅವುಗಳಿಂದ 50 ದಿನಗಳ ಉಪಯೋಗ ಪಡೆದಿರುವುದಾಗಿಯೇ ಅರ್ಜಿದಾರರು ಸ್ವತಃ ಒಪ್ಪಿಕೊಂಡಿದ್ದಾರೆ. ಗ್ರಾಹಕ ಕಾಯ್ದೆಯ ನಿಯಮಗಳಿಗೆ ಅನುಗುಣವಾಗಿ ಸೊಳ್ಳಿ ನಿವಾರಕಗಳನ್ನು ಪ್ರಯೋಗಾಲಯ ಪರೀಕ್ಷೆಗೆ ಒಳಪಡಿಸಿಯೂ ಇಲ್ಲ ಎಂದೂ ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಪ್ರಕರಣದಲ್ಲಿ ಅಕ್ರಮ ವ್ಯಾಪಾರದಂತಹ ಗಂಭೀರ ಆಪಾದನೆ ಬಂದಾಗಲೂ ಗ್ರಾಹಕ ನ್ಯಾಯಾಲಯದ ನೋಟಿಸಿಗೆ ಉತ್ತರ ಕೊಡದ ಹಾಗೂ ಆಪಾದನೆ ನಿರಾಕರಿಸಲು ಕ್ರಮ ಕೈಗೊಳ್ಳದ ಪ್ರತಿವಾದಿಗಳ ವರ್ತನೆ ಕೂಡಾ ಅಸಮರ್ಥನೀಯ ಎಂದು ನ್ಯಾಯಾಲಯ ಭಾವಿಸಿತು.
ಈ ಹಿನ್ನೆಲೆಯಲ್ಲಿ ಜಿಲ್ಲಾ ಗ್ರಾಹಕ ನ್ಯಾಯಾಲಯದ ತೀರ್ಪನ್ನು ವಜಾ ಮಾಡಿದ ರಾಜ್ಯ ಗ್ರಾಹಕ ನ್ಯಾಯಾಲಯವು ಪ್ರತಿವಾದಿಗೂ (ಪ್ರಕರಣದಲ್ಲಿ ಮೇಲ್ಮನವಿದಾರ) 10,000 ರೂಪಾಯಿಗಳ ಖಟ್ಲೆ ಶುಲ್ಕ ವಿಧಿಸಿ ಆ ಹಣವನ್ನು ಗ್ರಾಹಕರ ಕಲ್ಯಾಣ ನಿಧಿಗೆ ಪಾವತಿ ಮಾಡುವಂತೆ ಆಜ್ಞಾಪಿಸಿತು.
No comments:
Post a Comment