ಗ್ರಾಹಕರ ಸುಖ-ದುಃಖ

My Blog List

Thursday, September 25, 2008

ಇಂದಿನ ಇತಿಹಾಸ History Today ಸೆಪ್ಟೆಂಬರ್ 25

ಇಂದಿನ ಇತಿಹಾಸ  

ಸೆಪ್ಟೆಂಬರ್ 25

ರಿಲಯನ್ಸ್ ಸಮೂಹದ ಅಧ್ಯಕ್ಷ ಮುಖೇಶ್ ಅಂಬಾನಿ ಅವರು 2 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಸಂಪತ್ತು ಹೊಂದಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಷೇರುಪೇಟೆ  ಸೂಚ್ಯಂಕ ಏರಿದ ಪರಿಣಾಮ ಮುಖೇಶ್ ಅಂಬಾನಿ ಅವರ ರಿಲಯನ್ಸ್ ಸಮೂಹದ ಷೇರು ಮೌಲ್ಯ ಭಾರಿ ಪ್ರಮಾಣದಲ್ಲಿ ಏರಿ 2,04,945 ಕೋಟಿ ರೂಪಾಯಿಗೆ ತಲುಪಿತು. 

2007: ಜನತಾದಳ ಕಾರ್ಯಕರ್ತರು ತನ್ನ ಮೇಲೆ ಗುಂಡು ಹಾರಿಸಿ ಸಾಯಿಸಲು ಯತ್ನಿಸಿದ್ದಾರೆ, ಪೊಲೀಸರೂ ಅವರೊಂದಿಗೆ ಕೈ ಜೋಡಿಸಿದ್ದಾರೆ, ಇದರಲ್ಲಿ ಮುಖ್ಯಮಂತ್ರಿಯವರ ಕೈವಾಡವಿದೆ ಎಂದು ರಾಜ್ಯ ಪ್ರವಾಸೋದ್ಯಮ ಸಚಿವ ಶ್ರೀರಾಮುಲು ಆರೋಪಿಸಿದರು.  ಬಳ್ಳಾರಿಯ ವಿದ್ಯಾನಗರದಲ್ಲಿ ಮಧ್ಯರಾತ್ರಿ ಶಾಸಕ ಜನಾರ್ದನ ರೆಡ್ಡಿಯವರ ಸಂಬಂಧಿಕರು ಮತ್ತು ಪೊಲೀಸರ ನಡುವೆ ನಡೆದ ಘರ್ಷಣೆಯ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಶ್ರೀರಾಮುಲು ಪೊಲೀಸರ ಮೇಲೆ ಕಿಡಿ ಕಾರಿ, `ನನ್ನ ಸಾವಿಗೆ ಜೆಡಿಎಸ್ ಸಂಚು ರೂಪಿಸಿದೆ' ಎಂದು ಹೇಳಿದರು.

2007: ದೇವೇಗೌಡ ಮತ್ತು ಅವರ ಕುಟುಂಬದವರು 10 ಸಾವಿರ ಕೋಟಿಗೂ ಹೆಚ್ಚು ಆಸ್ತಿ ಮಾಡಿಕೊಂಡಿದ್ದಾರೆ ಎಂದು ಮೈಸೂರಿನಲ್ಲಿ ತೀವ್ರ ಆರೋಪ ಮಾಡಿದ ನಂದಿ ಇನ್ ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ ಪ್ರೈಸಸ್ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಖೇಣಿ, ಇದಕ್ಕೆ ಸಂಬಂಧಪಟ್ಟ ಕೆಲವು ದಾಖಲೆಗಳನ್ನು ಪ್ರದರ್ಶಿಸಿದರು. ಇದರಲ್ಲಿ ಸುಮಾರು ಒಂದು ಸಾವಿರ ಕೋಟಿ ರೂಪಾಯಿ ಆಸ್ತಿಯ ದಾಖಲೆ ಇದೆ ಎಂದು ಅವರು ಹೇಳಿದರು.  ಸತ್ಯಶೋಧ ಮಾಡಲು ವಿಧಾನಸೌಧದ ಮುಂದೆ ಮುಖಾಮುಖಿ ಚರ್ಚೆಗೆ ಬನ್ನಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಅವರ ಕುಟುಂಬ ವರ್ಗದವರಿಗೆ ಖೇಣಿ ಬಹಿರಂಗ ಸವಲು ಹಾಕಿದರು.

2007:  ಒರಿಸ್ಸಾ ರಾಜ್ಯ ಮಟ್ಟದ ಸಣ್ಣ ವ್ಯಾಪಾರಸ್ಥರ ಒಕ್ಕೂಟದ ಸದಸ್ಯರು ಭುವನೇಶ್ವರದ ಲೆವಿಸ್ ರಸ್ತೆ ಮತ್ತು ಗೊಪಬಂಧು ವೃತ್ತದಲ್ಲಿನ ಎರಡು `ರಿಲಯನ್ಸ್ ಫ್ರೆಶ್' ಹಣ್ಣು, ತರಕಾರಿ ಚಿಲ್ಲರೆ ಮಾರಾಟ ಮಳಿಗೆಗೆ ದಾಳಿ ಮಾಡಿ, ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದರು. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಅಂಗಡಿಗಳನ್ನು ತೆರೆಯದಂತೆ ರಿಲಯನ್ಸ್ ಕಂಪೆನಿಗೆ ಆದೇಶ ನೀಡಲಾಯಿತು. ಈ ನಗರದಲ್ಲಿ ಸುಮಾರು 11 ರಿಲಯನ್ಸ್ ಫ್ರೆಶ್ ಮಳಿಗೆಗಳು ಆರಂಭವಾಗಿವೆ. ಇಡೀ ರಾಜ್ಯದಲ್ಲಿ 235 ಮಳಿಗೆಗಳನ್ನು ತೆರೆಯಲು ರಿಲಯನ್ಸ್ ತಯಾರಿ ನಡೆಸಿತ್ತು. ಸಣ್ಣ ವ್ಯಾಪಾರಿ ಒಕ್ಕೂಟದವರ ವಿರೋಧವಿದ್ದದ್ದರಿಂದ ಅದು ಸಾಧ್ಯವಾಗಲಿಲ್ಲ. ಅಂದಾಜು 7 ಲಕ್ಷ ಸಣ್ಣ ವ್ಯಾಪಾರಸ್ಥರ ಜೀವನಕ್ಕೆ ಅಡ್ಡವಾಗುತ್ತಿದೆ ಎಂಬ ಹಿನ್ನೆಲೆಯಲ್ಲಿ ರಿಲಯನ್ಸ್ ಫ್ರೆಶ್ ಮಳಿಗೆಗಳನ್ನು ಮುಚ್ಚಿಸಲು `ನಿಖಿಲ್ ಒರಿಸ್ಸಾ ಉಥಾ ದೊಕನಿ ಮತ್ತು ಖ್ಯುದ್ರಾ ವೈವಶ್ಯಿ ಮಹಾಸಂಘ'ಗಳು ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ಕೆ ಕೈಹಾಕಿದವು.

 2007: ರಿಲಯನ್ಸ್ ಸಮೂಹದ ಅಧ್ಯಕ್ಷ ಮುಖೇಶ್ ಅಂಬಾನಿ ಅವರು 2 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಸಂಪತ್ತು ಹೊಂದಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಷೇರುಪೇಟೆ  ಸೂಚ್ಯಂಕ ಏರಿದ ಪರಿಣಾಮ ಮುಖೇಶ್ ಅಂಬಾನಿ ಅವರ ರಿಲಯನ್ಸ್ ಸಮೂಹದ ಷೇರು ಮೌಲ್ಯ ಭಾರಿ ಪ್ರಮಾಣದಲ್ಲಿ ಏರಿ 2,04,945 ಕೋಟಿ ರೂಪಾಯಿಗೆ ತಲುಪಿತು. ಮುಖೇಶ್ ಅಂಬಾನಿ ತಮ್ಮ ಅನಿಲ್ ಅಂಬಾನಿ ಎರಡನೇ ಸ್ಥಾನಕ್ಕೆ (1,77,710 ಕೋಟಿ ರೂ), ಡಿಎಲ್ ಎಫ್ ರಿಯಲ್ ಎಸ್ಟೇಟ್ ಸಮೂಹದ ಮಾಲೀಕ ಕೆ.ಪಿ. ಸಿಂಗ್ ಮೂರನೇ ಸ್ಥಾನಕ್ಕೆ (1,15,225 ಕೋಟಿ ರೂ) ಬಂದರು. ಒಂದು ಕಾಲದಲ್ಲಿ ಅತಿ ಶ್ರೀಮಂತ ಭಾರತೀಯ ಎಂಬ ಕೀರ್ತಿಗೆ ಪಾತ್ರರಾಗಿದ್ದ ವಿಪ್ರೊ ಅಧ್ಯಕ್ಷ ಅಜೀಂ ಪ್ರೇಂಜಿ ಅವರ ಆಸ್ತಿ ಮೌಲ್ಯ 50,600 ಕೋಟಿಗೆ (5ನೇ ಸ್ಥಾನ)ಇಳಿಯಿತು, ಏರ್ ಟೆಲ್ ನ ಭಾರತಿ ಮಿತ್ತಲ್ 91,500 ಕೋಟಿ ರೂಗೆ (4ನೇ ಸ್ಥಾನ) ಏರಿತು.

2007: ಬಿಜೆಪಿಯ ಮಾಜಿ ಅಧ್ಯಕ್ಷ ಮತ್ತು ಕೇಂದ್ರದ ಮಾಜಿ ಕಾನೂನು ಸಚಿವ ಜನಾ ಕೃಷ್ಣಮೂರ್ತಿ (79) ಅವರು ಚೆನ್ನೈಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. 1928ರಲ್ಲಿ ಮದುರೈಯಲ್ಲಿ ಜನಿಸಿದ ಕೃಷ್ಣಮೂರ್ತಿ 2001-2002 ರ ಅವಧಿಯಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. 2003ರಲ್ಲಿ ಕೇಂದ್ರದ ಎನ್ ಡಿಎ ಸರ್ಕಾರದಲ್ಲಿ ಕಾನೂನು ಸಚಿವರಾಗಿದ್ದರು. ಆರೆಸ್ಸೆಸ್ ಪ್ರಚಾರಕ, ಜನಸಂಘ ಕಾರ್ಯದರ್ಶಿಯಾಗಿದ್ದ ಅವರು ತಮಿಳುನಾಡಿನಿಂದ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷತೆಗೆ ಏರಿದ ಮೊಟ್ಟ ಮೊದಲ ಮುಖಂಡ. ಪ್ರಸ್ತುತ ರಾಜ್ಯಸಭೆಯಲ್ಲಿ ಗುಜರಾತ್ ರಾಜ್ಯವನ್ನು ಪ್ರತಿನಿಧಿಸುತ್ತಿದ್ದರು.

2007:  ಜಪಾನ್ ಪ್ರಧಾನಿ ಶಿಂಜೊ ಅಬೆ ಮತ್ತು ಅವರ ಸಚಿವ ಸಂಪುಟ ರಾಜೀನಾಮೆ ಸಲ್ಲಿಸಿದ್ದು ಈ ಮೂಲಕ ಅವರ ಉತ್ತರಾಧಿಕಾರಿಯಾಗಿ ಸಂಸತ್ ಹೆಸರಿಸಿರುವ ಆಡಳಿತ ಪಕ್ಷದ ಹೊಸ ನಾಯಕ ಯಸುವೋ ಫಕುಡ ಅವರು ಅಧಿಕಾರ ವಹಿಸಿಕೊಳ್ಳಲು ಮಾರ್ಗ ಸುಗಮಗೊಂಡಿತು. 53 ವರ್ಷದ ಅಬೆ ಅವರು ಸೆ. 12ರಂದು ದಿಢೀರ್ ಅಧಿಕಾರ ತ್ಯಜಿಸುವ ನಿರ್ಧಾರ ಪ್ರಕಟಿಸಿ, ಇಡೀ ದೇಶವನ್ನು ನಿಬ್ಬೆರಗಾಗಿಸಿದ್ದರು.

2007: ರಿಪ್ಪನ್ಪೇಟೆ ಸಮೀಪದ ಹರತಾಳು ಶ್ರೀ ರಾಮಾಶ್ರಮದ ಸಂಸ್ಥಾಪಕರು ಹಾಗೂ ಶ್ರೀ ಗುರು ರಾಘವೇಂದ್ರರ ಆರಾಧಕರಾಗಿದ್ದ ವಿದ್ಯಾಮಿತ್ರ ತೀರ್ಥ ಸ್ವಾಮೀಜಿ (80) ಈದಿನ ಬೆಳಗ್ಗೆ ನಿಧನರಾದರು. ಶ್ರೀಶನದಾಸ ಎಂಬುದು ಅವರ ಪೂರ್ವಾಶ್ರಮದ ಹೆಸರು.

2007: ಸ್ವಸಹಾಯ ಗುಂಪುಗಳಿಗೆ (ಎಸ್ ಎಚ್ ಜಿ) 2006-07ನೇ ಸಾಲಿನಲ್ಲಿ ಗರಿಷ್ಠ ಪ್ರಮಾಣದಲ್ಲಿ ಸಾಲ ಸಹಾಯ ನೀಡಿದ ಹಣಕಾಸು ಸಂಸ್ಥೆಗಳಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿಐ) ಮೊದಲ ಸ್ಥಾನ ಗಳಿಸಿತು. ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್) ಸ್ಥಾಪಿಸಿರುವ ಈ ವಾರ್ಷಿಕ ಪ್ರಶಸ್ತಿಯನ್ನು ಈದಿನ ಬೆಂಗಳೂರಿನಲ್ಲಿ ಪ್ರದಾನ ಮಾಡಲಾಯಿತು. ವಾಣಿಜ್ಯ ಬ್ಯಾಂಕ್ಗಳ ಪೈಕಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (ಎಸ್ಬಿಎಂ) ಮತ್ತು ಸಿಂಡಿಕೇಟ್ ಬ್ಯಾಂಕ್ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಬಹುಮಾನ ಪಡೆದವು.

2006: ಬಿಹಾರಿನ ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದಂತೆ ಪಶು ಸಂಗೋಪನಾ ಇಲಾಖೆಯ ಮಾಜಿ ಅಧಿಕಾರಿ ಹೇಮೇಂದ್ರ ನಾಥ ವರ್ಮ ಸೇರಿದಂತೆ ಎಂಟು ಮಂದಿ ಆಪಾದಿರತನ್ನು ವಿಶೇಷ ಸಿಬಿಐ ನ್ಯಾಯಾಲಯವು ಶಿಕ್ಷೆಗೆ ಗುರಿಪಡಿಸಿದ್ದು, ವಿನೋದ ಕುಮಾರ್ ಝಾ ಅವರನ್ನು ಖುಲಾಸೆ ಮಾಡಿತು. ಅವಿಭಜಿತ ಬಿಹಾರಿನ ದುಮ್ಕಾ ಬೊಕ್ಕಸದಿಂದ 49 ಲಕ್ಷ ರೂಪಾಯಿಗಳಿಗೂ ಹೆಚ್ಚಿನ ಸರ್ಕಾರಿ ಹಣವನ್ನು ಅಕ್ರಮವಾಗಿ ಹಿಂತೆಗೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶ ಸಂಜಯ ಪ್ರಸಾದ್ ಅವರು ಈ ತೀರ್ಪು ನೀಡಿದರು. ಸೆಪ್ಟೆಂಬರ್ 23ರಂದು ನ್ಯಾಯಾಲಯವು ಪಶು ಸಂಗೋಪನಾ ಇಲಾಖೆಯ ಮಾಜಿ ಪ್ರಾದೇಶಿಕ ನಿರ್ದೇಶಕ ಸೇರಿದಂತೆ 28 ಮಂದಿ ಆರೋಪಿಗಳನ್ನು ಶಿಕ್ಷೆಗೆ ಗುರಿಪಡಿಸಿತ್ತು. ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಮತ್ತು ಬಿಹಾರಿನ ಮಾಜಿ ಮುಖ್ಯಮಂತ್ರಿ ಜಗನ್ನಾಥ ಮಿಶ್ರ ಅವರೂ ಹಗರಣದಲ್ಲಿ ಆರೋಪಿಗಳು.

2006: 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ಮುಖ್ಯ ಆರೋಪಿ ತಲೆ ತಪ್ಪಿಸಿಕೊಂಡಿರುವ ಟೈಗರ್ ಮೆಮನ್ ನ ಸಹಚರರಾದ ಮೊಹಮ್ಮದ್ ಇಕ್ಬಾಲ್ ಮೊಹಮ್ಮದ್ ಯೂಸುಫ್ ಖಾನ್ ಮತ್ತು ನಸೀಂ ಬರ್ಮರೆ ತಪ್ಪಿತಸ್ಥರು ಎಂದು ಟಾಡಾ ನ್ಯಾಯಾಲಯ ತೀರ್ಪು ನೀಡಿತು. ಭಯೋತ್ಪಾದಕ ಕೃತ್ಯ ಎಸಗಿದ ಮತ್ತು ಸಂಚಿನಲ್ಲಿ ಭಾಗಿಯಾದ ಆರೋಪವನ್ನು ಇವರ ಮೇಲೆ ಹೊರಿಸಲಾಗಿದೆ.

2006: ಅಂತಾರಾಜ್ಯ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾಜನ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಲು ಸೂಕ್ರ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ಸರ್ವಾನುಮತದ ನಿರ್ಣಯವನ್ನು ಬೆಳಗಾವಿಯಲ್ಲಿ ನಡೆದ ರಾಜ್ಯ ವಿಧಾನ ಮಂಡಲದ ಐತಿಹಾಸಿಕ ವಿಶೇಷ ಅಧಿವೇಶನದ ಮೊದಲ ದಿನವೇ ಉಭಯ ಸದನಗಳೂ ಅಂಗೀಕರಿಸಿದವು. ರಾಜದಾನಿ ಬೆಂಗಳೂರಿನಿಂದ ಹೊರಗೆ ಬೆಳಗಾವಿಯಲ್ಲಿ ವಿಧಾನ ಮಂಡಲದ ಅಧಿವೇಶನ ನಡೆಯುವುದರೊಂದಿಗೆ ರಾಜ್ಯದಲ್ಲಿ ಹೊಸ ಇತಿಹಾಸ ನಿರ್ಮಾಣಗೊಂಡಿತು. ಕೆಎಲ್ ಇ ಶಿಕ್ಷಣ ಸಂಸ್ಥೆಯಲ್ಲಿ ಮೈದಳೆದ ಪ್ರತಿರೂಪಿ ವಿಧಾನ ಮಂಡಲದಲ್ಲಿ ಈ  ಅಧಿವೇಶನ ಸಮಾವೇಶಗೊಳ್ಳುವುದರೊಂದಿಗೆ ಹೊಸ ಮನ್ವಂತರಕ್ಕೆ ಬೆಳಗಾವಿ ಸಾಕ್ಷಿಯಾಯಿತು. ಬೆಳಗಾವಿ ಮತ್ತು ಕಾಸರಗೋಡು ಎರಡೂ ಕರ್ನಾಟಕದ್ದೇ ಎಂಬ ಸ್ಪಷ್ಟ ಸಂದೇಶವನ್ನು ಚಾರಿತ್ರಿಕ ನಿರ್ಣಯ ಅಂಗೀಕಾರದ ಮೂಲಕ ವಿಧಾನ ಮಂಡಲ ಇತರ ರಾಜ್ಯಗಳಿಗೆ ಹಾಗೂ ಕೇಂದ್ರ ಸರ್ಕಾರಕ್ಕೆ ರವಾನಿಸಿತು.

2001: ಮೊಣಕಾಲಿನ ಕೆಳಗಿನ ಭಾಗಗಳಿಲ್ಲದ ಅಂಗವಿಕಲ ಕೋಲ್ಕತ್ತಾದ ಮಸುದುರ್ ರಹಮಾನ್ ಬೈದ್ಯ ಅವರು ಜಿಬ್ರಾಲ್ಟರ್ ಕಾಲುವೆಯ 22 ಕಿ.ಮೀ. ದೂರವನ್ನು 4 ಗಂಟೆ 20 ನಿಮಿಷಗಳಲ್ಲಿ ಈಜುವ ಮೂಲಕ ಈ ಸಾಹಸ ಗೈದ ಮೊದಲ ಅಂಗವಿಕಲ ಎಂಬ ಕೀರ್ತಿಗೆ ಪಾತ್ರರಾದರು.

1997: ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಇಂಗಳಗುಪ್ಪೆ ಸೀತಾರಾಮಯ್ಯ ವೆಂಕಟರಾಮಯ್ಯ (ಇ.ಎಸ್. ವೆಂಕಟರಾಮಯ್ಯ)(18-12-1924ರಿಂದ 25-9-1997) ಈದಿನ ಬೆಂಗಳೂರಿನಲ್ಲಿ ನಿಧನರಾದರು. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಇಂಗಳಗುಪ್ಪೆಯಲ್ಲಿ 1924ರ ಡಿಸೆಂಬರ್ 18ರಂದು ಜನಿಸಿದ್ದ ವೆಂಕಟರಾಮಯ್ಯ ಹೈಕೋರ್ಟ್ ವಕೀಲ, ಸರ್ಕಾರಿ ಅಡ್ವೋಕೇಟ್ ಜನರಲ್, ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿ ಹಾಗೂ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು.

1969: ದಕ್ಷಿಣ ಆಫ್ರಿಕದ ಮಾಜಿ ಕ್ರಿಕೆಟ್ ಕ್ಯಾಪ್ಟನ್ ಹ್ಯಾನ್ಸೀ ಕ್ರೋನಿಯೆ (1969-2002) ಜನ್ಮದಿನ. ಮ್ಯಾಚ್ ಫಿಕ್ಸಿಂಗ್ ಹಗರಣ ಮೂಲಕ ಕ್ರಿಕೆಟ್ ಕ್ರೀಡೆಗೆ ಮಸಿ ಬಳಿದ ಅಪಖ್ಯಾತಿಗೆ ಈಡಾದ ಇವರು ಇವರು ದಕ್ಷಿಣ ಆಫ್ರಿಕದಲ್ಲಿ ಸಂಭವಿಸಿದ ವಿಮಾನ ಅಪಘಾತವೊಂದರಲ್ಲಿ ಅಸು ನೀಗಿದರು.

1969: ಬ್ರಿಟಿಷ್ ಚಿತ್ರನಟಿ ಕ್ಯಾಥರೀನ್ ಝೇಟಾ-ಜೋನ್ಸ್ ಜನ್ಮದಿನ. ವಿಶೇಷವೆಂದರೆ ಈಕೆಯ ಪತಿ ಅಮೆರಿಕನ್ ನಟ, ನಿರ್ದೇಶಕ ಮೈಕೆಲ್ ಡಗ್ಲಾಸ್ ಅವರ ಜನ್ಮದಿನವೂ ಇದೇ ದಿನ. ಡಗ್ಲಾಸ್ ಅವರು ಜನಿಸಿದ್ದು 1944ರ ಸೆಪ್ಟೆಂಬರ್ 25ರಂದು.

1948: ಸಾಹಿತಿ ಅರ್ಜುನಪುರಿ ಅಪ್ಪಾಜಿಗೌಡ ಜನನ.

1946: ಭಾರತೀಯ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಹಾಗೂ ಸ್ಪಿನ್ ಬೌಲರ್ ಬಿಷನ್ ಸಿಂಗ್ ಬೇಡಿ ಜನ್ಮದಿನ.

1940: ಅಧ್ಯಾಪಕ, ಸಾಹಿತಿ, ನ್ಯಾಯಾಧೀಶ ಶಂಕರ ಖಂಡೇರಿ ಅವರು ಸುಬ್ಬಪ್ಪ- ಗಂಗಮ್ಮ ದಂಪತಿಯ ಮಗನಾಗಿ ಕಾಸರಗೋಡು ತಾಲ್ಲೂಕು ಕಾಟುಕುಕ್ಕೆ ಗ್ರಾಮದ ಖಂಡೇರಿಯಲ್ಲಿ ಜನಿಸಿದರು.

1930: ಸಾಹಿತಿ ಎಚ್. ವಿ. ನಾರಾಯಣ್ ಜನನ.

1921: ನೂಜಿಲೆಂಡಿನ ಮಾಜಿ ಪ್ರಧಾನಿ ರಾಬರ್ಟ್ ಡೇವಿಡ್ ಮುಲ್ಡೂನ್ (1921) ಜನ್ಮದಿನ. 

1916: ಭಾರತೀಯ ಸ್ವಾತಂತ್ರ್ಯ ಹೋರಾಟಗಾರ, ಭಾರತೀಯ ಜನಸಂಘದ ಮಾಜಿ ಅಧ್ಯಕ್ಷ ದೀನದಯಾಳ್ ಉಪಾಧ್ಯಾಯ  (1916-1968) ಜನ್ಮದಿನ.
 
1914: ಭಾರತದ ರಾಜಕಾರಣಿ ಹಾಗೂ ಉಪ ಪ್ರಧಾನಿಯಾಗಿದ್ದ ದೇವಿಲಾಲ್ (1914-2001) ಜನ್ಮದಿನ.


1829: ಅಸ್ಸಾಮಿ ಆಧುನಿಕ ಕಾವ್ಯದ ಜನಕ ಆನಂದರಾಮ್ ಧೇಕಿಯಲ್ ಫೂಕಾನ್ ಜನನ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement