Thursday, October 9, 2008

ಇಂದಿನ ಇತಿಹಾಸ History Today ಅಕ್ಟೋಬರ್ 09

ಇಂದಿನ ಇತಿಹಾಸ

ಅಕ್ಟೋಬರ್ 9

ಉದ್ದೀಪನ ಮದ್ದು ಸೇವಿಸಿದ್ದು ಸಾಬೀತಾದ ಹಿನ್ನೆಲೆಯಲ್ಲಿ ಅಮೆರಿಕಾದ ಖ್ಯಾತ ಅಥ್ಲೆಟ್ 31 ವರ್ಷದ ಮೇರಿಯನ್ ಜೋನ್ಸ್ ಮೇಲೆ ಎರಡು ವರ್ಷಗಳ ನಿಷೇಧ ಹೇರಲಾಯಿತು. `ಸಿಡ್ನಿಯಲ್ಲಿ ನಾನು ನ್ಯಾಯೋಚಿತವಾಗಿ ಪದಕಗಳನ್ನು ಗೆದ್ದಿರಲಿಲ್ಲ. ಅವುಗಳನ್ನು ಹಿಂದಿರುಗಿಸಿದ್ದೇನೆ' ಎಂದು ಜೋನ್ಸ್ ಉತ್ತರ ಕರೋಲಿನಾದ ಸಾಲ್ವೋದಲ್ಲಿ ಪ್ರಕಟಿಸಿದರು.

ಇಬ್ಬರು ಖ್ಯಾತ ಸರೋದ್ ವಾದಕರ ಜನ್ಮದಿನವಿದು. ಸರೋದ್ ವಾದಕ ಅಮ್ಜದ್ ಅಲಿಖಾನ್ ಅವರು 1945 ರಲ್ಲಿ ಈದಿನ ಜನಿಸಿದರೆ, ಇನ್ನೊಬ್ಬ ಸರೋದ್ ವಾದಕ ಝರೀನೆ ಸೊಹ್ರಾಬ್ ದಾರೂವಾಲಾ ಅವರು 1946ರ ಅಕ್ಟೋಬರ್ 9ರಂದು ಜನಿಸಿದರು. ಇದು ವಿಶ್ವ ಅಂಚೆ ದಿನವೂ ಹೌದು. ಸ್ವಿಸ್ ರಾಜಧಾನಿ ಬರ್ನಿನಲ್ಲಿ 1874ರ ಈ ದಿನ ಯುನಿವರರ್ಸಲ್ ಪೋಸ್ಟಲ್ ಯೂನಿಯನ್ (ಯುಪಿಯು) ಸ್ಥಾಪಿಸಲಾಯಿತು. 1969ರಲ್ಲಿ ಜಪಾನಿನ ಟೋಕಿಯೋದಲ್ಲಿ ನಡೆದ ಯುಪಿಯು ಕಾಂಗ್ರೆಸ್ಸಿನಲ್ಲಿ ಯುಪಿಯು ಸ್ಥಾಪನಾ ದಿನವನ್ನು (ಅಕ್ಟೋಬರ್ 9) ವಿಶ್ವ ಅಂಚೆ ದಿನವಾಗಿ ಆಚರಿಸಲು ಕರೆ ನೀಡಲಾಯಿತು. ವಿಶ್ವದಾದ್ಯಂತ ಹಲವು ರಾಷ್ಟ್ರಗಳು  ಅಂಚೆ ಉತ್ಪನ್ನಗಳ ಬಿಡುಗಡೆ ಅಥವಾ ಅಂಚೆ ಸೇವೆ ಅಭಿವೃದ್ಧಿಗೆ ಸಂಬಂಧಿಸಿದ ಹೊಸ ಕಾರ್ಯಕ್ರಮಗಳನ್ನು ಇದೇ ದಿನ ಸಂಘಟಿಸುತ್ತವೆ. ವಿಶ್ವದಾದ್ಯಂತ 66 ಲಕ್ಷಕ್ಕೂ ಹೆಚ್ಚು ಅಂಚೆ ಕಚೇರಿಗಳಲ್ಲಿ 50 ಲಕ್ಷಕ್ಕೂ ಹೆಚ್ಚು ನೌಕರರು ದುಡಿಯುತ್ತಿದ್ದಾರೆ. ಕಾಗದ ಪತ್ರಗಳ ರವಾನೆ ಜೊತೆಗೆ ಇತರ ಸೇವೆಗಳನ್ನು ಮಾಡುತ್ತಿರುವ ಅಂಚೆ ಇಲಾಖೆಯಿಂದ ಬರುವ ಪತ್ರಗಳ ಜೊತೆಗೆ ಜನರಿಗೆ ಭಾವನಾತ್ಮಕ ಸಂಬಂಧ ಬೆಸೆದಿರುವುದು ವಿಶೇಷ.

2007: ಕಿರುಗಾತ್ರದ ಕಂಪ್ಯೂಟರ್ ಹಾರ್ಡ್ ಡಿಸ್ಕ್ ತಯಾರಿಕೆಗೆ ಸಹಕಾರಿಯಾದ ತಂತ್ರಜ್ಞಾನ ಅಭಿವೃದ್ಧಿಗಾಗಿ ಫ್ರಾನ್ಸಿನ ಅಲ್ಬರ್ಟ್ ಫರ್ಟ್ ಮತ್ತು ಜರ್ಮನಿಯ ಪೀಟರ್ ಗ್ರುಯೆನ್ ಬರ್ಗ್ ಅವರಿಗೆ ಭೌತಶಾಸ್ತ್ರ ಕ್ಷೇತ್ರದ 2007ನೇ ಸಾಲಿನ ನೊಬೆಲ್ ಪ್ರಶಸ್ತಿ ಘೋಷಿಸಲಾಯಿತು. ಫರ್ಟ್ ಮತ್ತು ಗ್ರುಯೆನ್ ಬರ್ಗ್ ಸಿದ್ಧಪಡಿಸಿದ `ಜಯಂಟ್ ಮ್ಯಾಗ್ನೆಟೊ ರೆಸಿಸ್ಟೆನ್ಸ್ (ಜಿಎಂಆರ್)' ತತ್ವದಿಂದಾಗಿ ಆಧುನಿಕ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಯಾಗಿತ್ತು. ಜಿಎಂಆರ್ ನಿಂದ ನ್ಯಾನೋ ತಂತ್ರಜ್ಞಾನದ ಅಳವಡಿಕೆ ಸಾಧ್ಯ ಎನ್ನುವುದು ಮೊದಲ ಬಾರಿಗೆ ರುಜುವಾತಾಗಿತ್ತು ಎಂದು ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಹೇಳಿತು.

2007: ಉದ್ದೀಪನ ಮದ್ದು ಸೇವಿಸಿದ್ದು ಸಾಬೀತಾದ ಹಿನ್ನೆಲೆಯಲ್ಲಿ ಅಮೆರಿಕಾದ ಖ್ಯಾತ ಅಥ್ಲೆಟ್ 31 ವರ್ಷದ ಮೇರಿಯನ್ ಜೋನ್ಸ್ ಮೇಲೆ ಎರಡು ವರ್ಷಗಳ ನಿಷೇಧ ಹೇರಲಾಯಿತು. `ಸಿಡ್ನಿಯಲ್ಲಿ ನಾನು ನ್ಯಾಯೋಚಿತವಾಗಿ ಪದಕಗಳನ್ನು ಗೆದ್ದಿರಲಿಲ್ಲ. ಅವುಗಳನ್ನು ಹಿಂದಿರುಗಿಸಿದ್ದೇನೆ' ಎಂದು ಜೋನ್ಸ್ ಉತ್ತರ ಕರೋಲಿನಾದ ಸಾಲ್ವೋದಲ್ಲಿ ಪ್ರಕಟಿಸಿದರು. ಸಿಡ್ನಿ ಒಲಿಂಪಿಕ್ ನಲ್ಲಿ ಗೆದ್ದಿದ್ದ ಎಲ್ಲ ಪದಕಗಳನ್ನು ಹಿಂದಿರುಗಿಸುವಂತೆ ಅಮೆರಿಕಾ ಒಲಿಂಪಿಕ್ ಸಮಿತಿಯು (ಯುಎಸ್ಒಸಿ) ನಿರ್ದೇಶನ ನೀಡಿತ್ತು. ಹಾಗಾಗಿ ಈ ಅಥ್ಲೆಟ್ ತಾವು 2000ನೇ ಇಸವಿಯ ಒಲಿಂಪಿಕ್ ನಲ್ಲಿ ಟ್ರ್ಯಾಕ್ ಮತ್ತು ಫೀಲ್ಡ್ ವಿಭಾಗದಲ್ಲಿ ಪಡೆದಿದ್ದ ಎಲ್ಲ ಪದಕಗಳನ್ನು ಹಿಂದಿರುಗಿಸಿದರು. `ದಿ ಕ್ಲಿಯರ್' ಎನ್ನುವ ಅನ್ವರ್ಥಕ ನಾಮವನ್ನೂ ಪಡೆದಿರುವ `ಟೆಟ್ರಾಹೈಡ್ರೊಜೆಸ್ಟ್ರಿನೊನ್' (ಟಿಎಚ್ಜಿ) ಉದ್ದೀಪನ ಮದ್ದನ್ನು ಬಹಳ ಹಿಂದಿನಿಂದಲೂ ಜೋನ್ಸ್ ತೆಗೆದುಕೊಳ್ಳುತ್ತಾ ಬಂದಿದ್ದರು.

 2007: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು, ಈದಿನ ವಹಿವಾಟಿನಲ್ಲಿ ದಾಖಲೆ 789 ಅಂಶಗಳಷ್ಟು ಏರಿಕೆ ಕಂಡು, 18 ಸಾವಿರ ಅಂಶಗಳ ಗಡಿ ದಾಟುವ ಮೂಲಕ ಇನ್ನೊಂದು ಮೈಲಿಗಲ್ಲು ಸಾಧಿಸಿತು. ರಿಲಯನ್ಸ್ ಇಂಡಸ್ಟ್ರೀಸ್ ಷೇರಿನ ನೇತೃತ್ವದಲ್ಲಿ ಮುಂಚೂಣಿ ಷೇರುಗಳನ್ನು ಭಾರಿ ಪ್ರಮಾಣದಲ್ಲಿ ಖರೀದಿಸಿದ್ದು ಈ ದಾಖಲೆ ಕಾಣಲು ಸಾಧ್ಯವಾಯಿತು. 17 ಸಾವಿರ ಅಂಶಗಳಿಂದ 18 ಸಾವಿರ ಅಂಶಗಳಿಗೆ  ಅಲ್ಪಾವಧಿಯಲ್ಲಿ ತಲುಪಿದ ಎರಡನೇ ದಾಖಲೆಯೂ ಇದಾಯಿತು. 30 ಪ್ರಮುಖ ಷೇರುಗಳನ್ನು ಒಳಗೊಂಡ ಸಂವೇದಿ ಸೂಚ್ಯಂಕವು ಸೆಪ್ಟೆಂಬರ್ 26ರಂದು 17 ಸಾವಿರ ಅಂಶಗಳ ಗಡಿ ದಾಟಿತ್ತು. 

2007: ದೇವನಹಳ್ಳಿಯ ಸರೋಜಾದೇವಿ ಆಚಾರ್ಯ, ಉಡುಪಿಯ ಟಿ. ರಾಘವ ಆಚಾರ್ಯ, ಕೋಲಾರ ಜಿಲ್ಲೆಯ ಎಸ್.ಬಿ. ನಂಜುಂಡಾಚಾರ್ಯ, ಬಾಗಲಕೋಟೆಯ ಕೃಷ್ಣಪ್ಪ ರಾಮಪ್ಪ ಬಡಿಗೇರ, ಸುರಪುರದ ಬಸಣ್ಣ ಮೋನಪ್ಪ ಬಡಿಗೇರ ಮತ್ತು ಶಿರಸಿಯ ಸೂರ್ಯಕಾಂತ ಗುಡಿಗಾರ ಅವರನ್ನು 2007ನೇ ಸಾಲಿನ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. 

2007: ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ರಾಜ್ಯಪಾಲ ರಾಮೇಶ್ವರ್ ಠಾಕೂರ್ ಅವರು ಮಾಡಿದ ಶಿಫಾರಸಿನ ಬಗ್ಗೆ ಚರ್ಚೆ ನಡೆಸಿದ ಕೇಂದ್ರ ಸಚಿವ ಸಂಪುಟವು ವಿಧಾನಸಭೆಯನ್ನು ಅಮಾನತಿನಲ್ಲಿಟ್ಟು ರಾಷ್ಟ್ರಪತಿ ಆಡಳಿತ ಹೇರಲು ನಿರ್ಧರಿಸಿತು. ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಈ ನಿರ್ಣಯಕ್ಕೆ ಸಹಿ ಹಾಕಿದರು. ಇದರಿಂದಾಗಿ ರಾಜ್ಯ ರಾಜಕೀಯದ ಮೈದಾನ ಮುಂದಿನ ಆಟಕ್ಕೆ ಇನ್ನೂ ಮುಕ್ತವಾಗಿ ಉಳಿಯಿತು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ ಸ್ಪಷ್ಟ ಆದೇಶದ ಪ್ರಕಾರ ಸಂವಿಧಾನದ 356ನೇ ವಿಧಿ ಪ್ರಕಾರ ರಾಷ್ಟ್ರಪತಿಗಳು ವಿಧಾನಸಭೆಯನ್ನು ಅಮಾನತ್ತಿನಲ್ಲಿ ಮಾತ್ರ ಇಡಬಹುದು. ಸಂಸತ್ತಿನ ಎರಡೂ ಸದನಗಳ ಒಪ್ಪಿಗೆ ಇಲ್ಲದೆ, ವಿಧಾನಸಭೆಯನ್ನು ಯಾವುದೇ ಕಾರಣಕ್ಕೂ ವಿಸರ್ಜಿಸುವಂತಿಲ್ಲ. ಅಮಾನತು ಮಾಡಿದ ಎರಡು ತಿಂಗಳ ಒಳಗೆ ಸಂಸತ್, ರಾಷ್ಟ್ರಪತಿಯ ಆದೇಶವನ್ನು ಸಮರ್ಥಿಸದೇ ಹೋದರೆ ಮತ್ತೆ ವಿಧಾನಸಭೆ ಚಾಲ್ತಿಗೆ ಬರುತ್ತದೆ. ಒಂದು ವೇಳೆ ಅದಕ್ಕೆ ಒಪ್ಪಿಗೆ ಕೊಟ್ಟರೆ, ವಿಧಾನಸಭೆ ವಿಸರ್ಜನೆ ಆಗುವುದು ಎಂದು ಸುಪ್ರೀಂಕೋರ್ಟ್ 1994ರ ಮಾರ್ಚ್ 11ರಂದು ತನ್ನ ಆದೇಶದಲ್ಲಿ ತಿಳಿಸಿತ್ತು.

2006: ಅಮೆರಿಕದ ಅರ್ಥಶಾಸ್ತ್ರಜ್ಞ ಎಡ್ಮಂಡ್ ಎಸ್. ಫೆಲ್ಪ್ಸ್ ಅವರನ್ನು ಸೂಕ್ಷ್ಮ ಆರ್ಥಿಕ ನೀತಿಯಲ್ಲಿ ಅಲ್ಪಕಾಲೀನ ಹಾಗೂ ದೀರ್ಘಕಾಲೀನ ವ್ಯಾಪಾರ ಹೊಂದಾಣಿಕೆ ಕುರಿತ ವಿಶ್ಲೇಷಣೆಗಾಗಿ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.

2006: ದಕ್ಷಿಣ ಕೊರಿಯಾದ ವಿದೇಶಾಂಗ ಸಚಿವ ಬಾನ್ ಕಿ-ಮೂನ್ ಅವರನ್ನು ಜನವರಿ 1ರಿಂದ ಐದು ವರ್ಷಗಳ ಅವಧಿಗೆ ವಿಶ್ವಸಂಸ್ಥೆಯ ಎಂಟನೇ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಚುನಾಯಿಸಲು 15 ಸದಸ್ಯ ಬಲದ ಭದ್ರತಾ ಮಂಡಳಿಯು 192 ಸದಸ್ಯ ಬಲದ ವಿಶ್ವಸಂಸ್ಥೆ ಜನರಲ್ ಅಸೆಂಬ್ಲಿಗೆ ಶಿಫಾರಸು ಮಾಡಿತು.

2006: 1993ರ ಮುಂಬೈ ಸರಣಿ ಬಾಂಬ್ ಸ್ಫೋಟದಲ್ಲಿ ಆರೋಪಿಯಾಗಿದ್ದ ಫಾರೂಕ್ ಪಾವಳೆ ಎಂಬಾತನನ್ನು ಅಪರಾಧಿ ಎಂಬುದಾಗಿ ವಿಶೇಷ ಟಾಡಾ ನ್ಯಾಯಾಲಯ ಘೋಷಿಸಿತು. ದಾದರಿನ ಶಿವಸೇನಾ ಭವನ ಮತ್ತು ಏರ್ ಇಂಡಿಯಾ ಕಟ್ಟಡದ ಬಳಿ ಕಾರುಗಳಲ್ಲಿ ಆರ್ ಡಿಎಕ್ಸ್ ಬಾಂಬುಗಳನ್ನು ಇಟ್ಟ ಆರೋಪ ಈತನ ಮೇಲಿದೆ. ಪಾವಳೆ ಮೊದಲು ತಪ್ಪು ಒಪ್ಪಿಕೊಂಡರೂ ನಂತರ ಅದನ್ನು ಹಿಂತೆಗೆದುಕೊಂಡಿದ್ದ.

2006: ವಿಶ್ವ ಸಮುದಾಯದ ಮನವಿ ಹಾಗೂ ಎಚ್ಚರಿಕೆಯನ್ನು ಧಿಕ್ಕರಿಸಿ ಉತ್ತರ ಕೊರಿಯಾ ತನ್ನ ಮೊತ್ತ ಮೊದಲ ಪರಮಾಣು ಬಾಂಬ್ ಪರೀಕ್ಷೆಯನ್ನು ನಡೆಸಿತು. ಭಾರತೀಯ ಕಾಲಮಾನ ಬೆಳಗ್ಗೆ 7.06ಕ್ಕೆ ಈಶಾನ್ಯ ಕರಾವಳಿಯಲ್ಲಿನ ವಡಯೆರಿಯಲ್ಲಿ ಈ ಭೂಗರ್ಭ ಪರಮಾಣು ಪರೀಕ್ಷೆ ನಡೆಸಲಾಯಿತು. ಪರೀಕ್ಷೆ ವೇಳೆಯಲ್ಲಿ ಉತ್ತರ ಕೊರಿಯಾದಲ್ಲಿ ರಿಕ್ಟರ್ ಮಾಪಕದಲ್ಲಿ 4.2ರಷ್ಟು ತೀವ್ರತೆಯ ಭೂಕಂಪ ದಾಖಲಾಯಿತು. ಸ್ವದೇಶೀ ತಂತ್ರಜ್ಞಾನ ಆಧಾರಿತವಾದ ಈ ಪರಮಾಣು ಪರೀಕ್ಷೆ ಅತ್ಯಂತ ಸುರಕ್ಷಿತವಾಗಿದ್ದು, ಪರೀಕ್ಷಾ ಪ್ರದೇಶದಲ್ಲಿ ವಿಕಿರಣ ಸೋರಿಕೆ ಆಗಿಲ್ಲ ಎಂದು ಉತ್ತರ ಕೊರಿಯಾ ಪ್ರತಿಪಾದಿಸಿತು. 

1993: ಕ್ರಿಕೆಟಿಗ ಸಿ.ಆರ್. ರಂಗಾಚಾರಿ ನಿಧನ.

1975: ಸೋವಿಯತ್ ನ ಮಾನವ ಹಕ್ಕುಗಳ ಪ್ರತಿಪಾದಕ, ಭಿನ್ನಮತೀಯ ಆಂದ್ರೇಯಿ ಸಖರೊವ್ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಯಿತು.

1967: ಲ್ಯಾಟಿನ್ ಅಮೆರಿಕಾದ ಗೆರಿಲ್ಲಾ ನಾಯಕ ಚೆ ಗ್ಯುವರಾ ಅವರನ್ನು ಬೊಲಿವಿಯಾದ್ಲಲಿ ದಂಗೆಗೆ ಪ್ರಚೋದನೆ ನೀಡಲು ಯತ್ನಿಸುತ್ತಿದ್ದಾಗ ಬಂಧಿಸಿ ಮರಣದಂಡನೆಗೆ ಗುರಿಪಡಿಸಲಾಯಿತು.

1962: ಎಪ್ಪತ್ತು ವರ್ಷಗಳ ಬ್ರಿಟಿಷ್ ಆಳ್ವಿಕೆಯಿಂದ ಉಗಾಂಡಾ ಸ್ವತಂತ್ರವಾಯಿತು. ಮಿಲ್ಟನ್ ಒಬೋಟೆ ರಾಷ್ಟ್ರದ ಮೊದಲ ಪ್ರಧಾನಮಂತ್ರಿಯಾದರು.

1961: ಬ್ರಿಟನ್ನಿನ ಮಾಜಿ ಪ್ರಧಾನಿ ಸರ್ ಅಲೆಕ್ ಡಗ್ಲಾಸ್ ಹೋಮ್ ಅವರು ತಮ್ಮ 92ನೇ ವಯಸ್ಸಿನಲ್ಲಿ ನಿಧನರಾದರು.

1948: ಸಾಹಿತಿ ಭಾಗ್ಯ ಜಯ ಸುದರ್ಶನ ಜನನ.

1930: ಸಾಹಿತಿ ಅಂಬುಜಾ ತರಾಸು ಜನನ.

1920: ಚತುರ್ಭಾಷಾ ಕೋವಿದ, ವೃತ್ತಿಯಿಂದ ವೈದ್ಯರಾದ ಕವಿ ಡಾ. ಕೆ. ಮುದ್ದಣ್ಣ (9-10-1920ರಿಂದ 16-3-2002) ಅವರು ಪ್ರಭುರಾವ್- ಸೂಗಮ್ಮ ದಂಪತಿಯ ಮಗನಾಗಿ ಗುಲ್ಬರ್ಗದ ಸುರಪುರದ ರಂಗಂಪೇಟೆಯಲ್ಲಿ ಜನಿಸಿದರು.

1877: ಭಾರತದ ಸ್ವಾತಂತ್ರ್ಯ ಯೋಧ, ಕವಿ, ಸಾಹಿತಿ ಗೋಪಬಂಧು ದಾಸ್ (1877-1928) ಜನ್ಮದಿನ.

1877: ಸ್ವಾತಂತ್ರ್ಯ ಹೋರಾಟಗಾರ ಉತ್ಕಲ ಮಣಿ ಪಂಡಿತ್ ಜನನ.

1873: ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ರೂವಾರಿ ಜನರಲ್ ಡಯರ್ ಜನನ.

1562: ಹದಿನಾರನೇ ಶತಮಾನದ ಖ್ಯಾತ ದೇಹತಜ್ಞ ಇಟಲಿಯ ಗೇಬ್ರಿಯಲ್ ಫ್ಲಾಲೋಪಿಯಸ್ (1523-62) ಮೃತನಾದ. ಕಿವಿ ಮತ್ತು ಸಂತಾನೋತ್ಪತ್ತಿ ಅಂಗಗಳಿಗೆ ಸಂಬಂಧಿಸಿದಂತೆ ಈತ ಬಹಳಷ್ಟು ಸಂಶೋಧನೆಗಳನ್ನು ನಡೆಸಿ ಈ ಕ್ಷೇತ್ರಕ್ಕೆ ತನ್ನ ಕಾಣಿಕೆ ಸಲ್ಲಿಸಿದ್ದ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement