Saturday, October 11, 2008

ಇಂದಿನ ಇತಿಹಾಸ History Today ಅಕ್ಟೋಬರ್ 11


ಇಂದಿನ ಇತಿಹಾಸ

ಅಕ್ಟೋಬರ್ 11

ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ ಪಡುಕೋಣೆ ಅವರು ಕ್ವಾಲಾಲಂಪುರದಲ್ಲಿ ನಡೆದ ಪಂದ್ಯದಲ್ಲಿ ಪ್ರಥಮ ವಿಶ್ವಕಪ್ ಬ್ಯಾಡ್ಮಿಂಟನ್ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು. ಪಡುಕೋಣೆ ಅವರು ಪುರುಷರ ಸಿಂಗಲ್ಸ್ ಫೈನಲಿನಲ್ಲಿ ಚೀನಾದ ಅಗ್ರಮಾನ್ಯ ಆಟಗಾರ ಹ್ಯಾನ್ ಜಿಯಾನ್ ಅವರನ್ನು 15-10, 18-16ರಲ್ಲಿ ಪರಾಭವಗೊಳಿಸಿದರು.

ಭಾರತದ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಮುತ್ಸದ್ದಿ ಜಯಪ್ರಕಾಶ್ ನಾರಾಯಣ್ (1902-1979) ಹಾಗೂ ಬಾಲಿವುಡ್ಡಿನ ಖ್ಯಾತ ಚಿತ್ರನಟ ಅಮಿತಾಭ್ ಬಚ್ಚನ್ ಅವರ ಜನ್ಮದಿನವಿದು. ಜೆ.ಪಿ. ಎಂದೇ ಖ್ಯಾತರಾದ ಜಯಪ್ರಕಾಶ್ ನಾರಾಯಣ್ ಅವರು 1902ರ ಅಕ್ಟೋಬರ್ 11ರಂದು ಜನಿಸಿದರು. ಸಿನಿಮಾ ಜೊತೆಗೆ ಕಿರುತೆರೆಯಲ್ಲೂ ಹೆಸರು ಮಾಡಿದ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಹುಟ್ಟಿದ್ದು 1942ರ ಅಕ್ಟೋಬರ್ 11ರಂದು.

2007: ಬ್ರಿಟನ್ನಿನ ಖ್ಯಾತ ಮಹಿಳಾ ಸಾಹಿತಿ ಡೊರಿಸ್ ಲೆಸ್ಸಿಂಗ್ ಅವರಿಗೆ ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಶಸ್ತಿ ಘೋಷಿಸಲಾಯಿತು. ಐದು ದಶಕಗಳಿಂದ ಸಾಹಿತ್ಯ ಕೃಷಿ ನಡೆಸಿದ ಲೆಸ್ಸಿಂಗ್ ಅವರು ಮಹಿಳಾವಾದ, ರಾಜಕೀಯ ಮತ್ತು ಆಫ್ರಿಕದಲ್ಲಿ ತಮ್ಮ ಬಾಲ್ಯದ ಅನುಭವಗಳ ಕುರಿತು ಹಲವು ಕಾದಂಬರಿಗಳನ್ನು ರಚಿಸಿದವರು. ಮುಂದಿನ ವಾರ 88 ವರ್ಷ ತುಂಬಲಿರುವ ಡೊರಿಸ್ ನೊಬೆಲ್ ಪ್ರಶಸ್ತಿ ಪಡೆದ ಹನ್ನೊಂದನೇ ಮಹಿಳಾ ಸಾಹಿತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. `ಮಹಿಳಾ ಬರಹಗಾರ್ತಿಯಾಗಿ ಲೆಸ್ಸಿಂಗ್ ಅವರು ತಮ್ಮ ಅನುಭವಗಳನ್ನು, ಭವಿಷ್ಯದ ಹಿನ್ನೆಲೆಯಲ್ಲಿ ಸಮರ್ಥವಾಗಿ ಹಿಡಿದಿಟ್ಟಿದ್ದಾರೆ' ಎಂದು ನೊಬೆಲ್ ಪ್ರಶಸ್ತಿ ಪ್ರಕಟಿಸಿದ ಸ್ವೀಡಿಷ್ ಅಕಾಡೆಮಿ ಹೇಳಿತು. `ದಿ ಗೋಲ್ಡನ್ ನೋಟ್ ಬುಕ್' ಲೆಸ್ಸಿಂಗ್ ಅವರ ಶ್ರೇಷ್ಠ ಕೃತಿ. 1949 ರಲ್ಲಿ ಅವರು `ದಿ ಗ್ರಾಸ್ ಈಸ್ ಸಿಂಗಿಂಗ್' ಕೃತಿಯೊಂದಿಗೆ ತಮ್ಮ ಸಾಹಿತ್ಯ ಜೀವನವನ್ನು ಆರಂಭಿಸಿದ್ದರು.  

2007: ಆಸ್ಟ್ರೇಲಿಯದ ಸಿಡ್ನಿ ನಗರ ಸತತ 12ನೇ ಸಲ ವಿಶ್ವದ ಅತ್ಯುತ್ತಮ ನಗರ ಎಂಬ ಕೀರ್ತಿಗೆಪಾತ್ರವಾಯಿತು. ವಿಶ್ವದ ಹೆಸರಾಂತ ಪ್ರವಾಸಿ ನಿಯತಕಾಲಿಕವೊಂದುರ ಓದುಗರು ಈ ಆಯ್ಕೆ ಮಾಡಿದರು.

2007: ಹಸಿರು ಮನೆ ಅನಿಲದ ಪರಿಣಾಮವಾಗಿ ಓಜೋನ್ ಪದರದ ರಂದ್ರ ಹಿಗ್ಗುತ್ತಿದೆ. ಇದರಿಂದ ಭೂಮಿ ಮುಂಚಿಗಿಂತ ಹೆಚ್ಚು ಹಸಿ, ಅಂಟಾಗುತ್ತಿದೆ. ವಿಶುವೃತ್ತದ ಪ್ರದೇಶದಲ್ಲಿ ಇನ್ನಷ್ಟು ಬಲವಾದ ಚಂಡಮಾರುತ, ಬಿಸಿಯೇರುವಿಕೆ, ಮಳೆಯಾಗುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡಿದರು.

2007: ಮಂಗಳೂರಿನ ತಣ್ಣೀರುಬಾವಿ ಕಡಲ ತೀರದಲ್ಲಿ 2007ರ ಸೆಪ್ಟೆಂಬರ್ 6ರಂದು ವಾಲಿ ನಿಂತು ಅಪಾಯಕ್ಕೆ ಸಿಲುಕಿದ್ದ ಚೀನಾ ಮೂಲದ ಚಾಂಗ್-ಲೆ-ಮೆನ್ ಹಡಗು, ತಿಂಗಳ ಬಳಿಕ ತವರಿಗೆ ಯಾನ ಆರಂಭಿಸಲಿದೆ ಎಂದು ಅಧಿಕಾರಿಗಳು ಪ್ರಕಟಿಸಿದರು. ಅದಿರು ತುಂಬಿ ಸಮತೋಲನ ತಪ್ಪಿದ ಹಡಗು ಕಡೆಗೂ `ರಕ್ಷಣಾ' ಕಾರ್ಯದಿಂದ ವಿಮೋಚನೆ ಪಡೆಯಿತು. ಹಲವು ಬಾರಿ ಗಾಳಿ ಸುದ್ದಿಯಾಗಿ ಮೀನುಗಾರರ ಕೆಂಗಣ್ಣಿಗೂ ಗುರಿಯಾಗಿದ್ದ ಈ `ಚೀನಿ ಕನ್ಯೆ' (ಹಡಗನ್ನು `ಶಿ' ಎಂದು ಸಂಬೋಧಿಸುವುದು) ಸುರಕ್ಷಿತವಾಗಿ ವಾಪಸಾಗಲಿದೆ. 'ಡೆನ್ ಡೆನ್ ಹಡಗು' ಮುಳುಗಡೆ ದುರಂತದ ಕೇವಲ 75 ದಿನಗಳಲ್ಲೇ  ಇದೇ ಸ್ಥಳದಲ್ಲಿ ಚಾಂಗ್-ಲೆ-ಮೆನ್ ಲಂಬಕ್ಕಿಂತ 16 ಡಿಗ್ರಿ ವಾಲಿ, ತಳ ಮರಳಿನಲ್ಲಿ ಹೂತುಹೋಗಿ ಮುಳುಗಡೆಯ ಅಪಾಯ ಎದುರಿಸಿತ್ತು. ಕ್ಯಾಪ್ಟನ್ ಸೇರಿದಂತೆ ಒಟ್ಟು 28 ಮಂದಿ ನಾವಿಕರಿದ್ದ ಈ ಹಡಗು, ಮಂಗಳೂರಿನ ಎನ್ನೆಂಪಿಟಿ ಬಂದರಿನಿಂದ 11,100 ಟನ್ ಕಬ್ಬಿಣದ ಅದಿರು ತುಂಬಿಕೊಂಡು ಸಿಂಗಪುರ ಮಾರ್ಗವಾಗಿ ಚೀನಾಕ್ಕೆ ಹೊರಟಿತ್ತು.  ಆದರೆ ಸಂಚಾರ ಆರಂಭಿಸಿದ ಕೆಲವೇ ಗಂಟೆಯೊಳಗೆ ಅವಘಡ ಸಂಭವಿಸಿತ್ತು. ಸಿಂಗಪುರ ಮೂಲದ (ಡಚ್ ತಜ್ಞರೂ ಸೇರಿ) ವಿದೇಶಿ ವಿಮೋಚನಾ ತಂಡವು ಸ್ಥಳೀಯ ಯೋಜಕಾ ಸಂಸ್ಥೆಯ ನೆರವಿನೊಂದಿಗೆ ಕೇವಲ ಏಳು ದಿನಗಳಲ್ಲಿ ಹಡಗಿನ ರಕ್ಷಣೆ ಮಾಡಿದ್ದರು. ಅಲ್ಲದೇ ಸೆ.13ರಂದು ಆಳ ಸಮುದ್ರಕ್ಕೆ ಎಳೆದೊಯ್ದಿದ್ದರು. ಸುಮಾರು 2ಕೋಟಿ ರೂಪಾಯಿಯಷ್ಟು ವಿಮೋಚನಾ ವೆಚ್ಚವೂ ತಗುಲಿತ್ತು.  

2007: ಮನೆ, ಬಸ್ ನಿಲ್ದಾಣ, ವಿಧಾನಸೌಧ, ಲೋಕಸಭಾ ಕಟ್ಟಡ, ವಿಮಾನ ನಿಲ್ದಾಣ, ಬಂದರು, ವಾಯುನೆಲೆ, ನೌಕಾನೆಲೆ ಮುಂತಾದ ಕಡೆ ಸಂಪೂರ್ಣ ಸುರಕ್ಷತೆಯನ್ನು ಒದಗಿಸುವ ಹಾಗೂ ಅಪರಿಚಿತರು ಪ್ರವೇಶಿಸಿದರೆ ತಕ್ಷಣವೇ ಎಚ್ಚರಿಕೆಯನ್ನು ನೀಡುವ ತಂತ್ರಜ್ಞಾನವನ್ನು ಕನ್ನಡಿಗರೊಬ್ಬರ ನೇತೃತ್ವದಲ್ಲಿ ಅಭಿವೃದ್ಧಿ ಪಡಿಸಿರುವುದಾಗಿ ಸಿಂಗಪುರದ ಸಂಸ್ಥೆಯೊಂದು ಪ್ರಕಟಿಸಿತು. ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಕಟ್ಟೆಮಳಲವಾಡಿ ಗ್ರಾಮದ ಎಸ್. ಶೇಖರ್ ಸಿಂಗಪುರದ ನ್ಯಾನೋಸಾಫ್ಟ್ ಟೆಕ್ನಾಲಜಿ ಸಂಸ್ಥೆಯಲ್ಲಿ ತಾಂತ್ರಿಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದು ಇಸ್ರೇಲಿನ ಡಾ. ಆಫಲ್ ಮಿಲ್ಲರ್ ಅವರ ಜೊತೆಗೂಡಿ ಸುರಕ್ಷತಾ ತಂತ್ರಜ್ಞಾನವನ್ನು ಇನ್ನಷ್ಟು ಸುಧಾರಿಸಿದರು. ಐವಿಎಸ್-1000, ಐವಿಎಸ್-3000 ಹಾಗೂ ಐವಿಎಸ್-5000 ಎಂಬ ಯಂತ್ರಗಳನ್ನು ಸಿದ್ಧಪಡಿಸಲಾಗಿದ್ದು ಈ ಯಂತ್ರಗಳನ್ನು ಕೈಗಾರಿಕೆ ಕಟ್ಟಡಗಳು, ವಿಮಾನ ನಿಲ್ದಾಣ, ನೌಕಾನೆಲೆ, ಬಂದರು, ಪೊಲೀಸ್ ಇಲಾಖೆ, ಅಪಾರ್ಟ್ ಮೆಂಟುಗಳು, ಬ್ಯಾಂಕು, ವಾಣಿಜ್ಯ ಸಂಕೀರ್ಣ, ಅಣೆಕಟ್ಟು ಮುಂತಾದ ಕಡೆ ಅಳವಡಿಸಿದರೆ ಸೂಕ್ತ ಸುರಕ್ಷತೆ ಒದಗಿಸುತ್ತದೆ ಎಂಬುದು ಶೇಖರ್ ಅಭಿಪ್ರಾಯ.

2007:  ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಚಾಂಪಿಯನ್ ಶಿಪ್ ವೇಳೆಯಲ್ಲಿ ಸಹ ಆಟಗಾರ ಮೊಹಮ್ಮದ್ ಆಸಿಫ್ ಮೇಲೆ ಹಲ್ಲೆ ನಡೆಸಿದ್ದ ಪಾಕಿಸ್ಥಾನ ತಂಡದ ವೇಗದ ಬೌಲರ್ ಶೋಯಬ್ ಅಖ್ತರ್ ಅವರಿಗೆ 13 ಏಕದಿನ ಪಂದ್ಯಗಳನ್ನು ಆಡದಂತೆ ನಿಷೇಧ ಹೇರಲಾಯಿತು. ಜೊತೆಗೆ 34 ಲಕ್ಷ ರೂಪಾಯಿ ದಂಡ ವಿಧಿಸಲಾಯಿತು. ಹಲ್ಲೆ ಪ್ರಕರಣದ ವಿಚಾರಣೆ ನಡೆಸಿದ ಪಾಕಿಸ್ಥಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯ ಶಿಸ್ತು ಸಮಿತಿಯು ಈ ನಿರ್ಧಾರ ಕೈಗೊಂಡಿತು. ಅಖ್ತರ್ ತಂಡದ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಸಮಿತಿ ಹೇಳಿತು. 

2007: ಪ್ರಮುಖ ಖಾಸಗಿ ದೂರವಾಣಿ ಸೇವಾ ಕಂಪೆನಿ ಏರ್ಟೆಲ್, ಅಂತರ್ಜಾಲ ಸೇವೆಯನ್ನು ಪರಿಣಾಮಕಾರಿಯಾಗಿ ಪೂರೈಸುವ ಉದ್ದೇಶದಿಂದ ಪ್ರತಿ ಸೆಕೆಂಡಿಗೆ 8 ಮೆಗಾಬೈಟ್ (ಎಂಬಿಪಿಎಸ್) ಸಾಮರ್ಥ್ಯದ ಮಾಹಿತಿ ರವಾನೆ ಸೇವೆಗೆ ಬೆಂಗಳೂರಿನಲ್ಲಿ ಚಾಲನೆ ನೀಡಿತು. ಭಾರ್ತಿ ಏರ್ ಟೆಲ್ ಲಿಮಿಟೆಡ್ಡಿನ ಬ್ರಾಡ್ ಬ್ಯಾಂಡ್ ಮತ್ತು ಟೆಲಿಫೋನ್ ಸರ್ವೀಸಸ್ ಅಧ್ಯಕ್ಷ ಅತುಲ್ ಬಿಂದಾಲ್ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಇದೊಂದು ವಿಶ್ವದರ್ಜೆ ಮಟ್ಟದ ಸೇವೆಯಾಗಿದ್ದು, ಅಧಿಕ ಸಾಮರ್ಥ್ಯದ ಅಂತರ್ಜಾಲ ಸೇವೆ ಒದಗಿಸುತ್ತಿರುವ ದೇಶದ ಪ್ರಥಮ ಖಾಸಗಿ ಕಂಪೆನಿ ಎನ್ನುವ ಹೆಗ್ಗಳಿಕೆಗೆ ಏರ್ ಟೆಲ್ ಪಾತ್ರವಾಗಿದೆ ಎಂದು ಅವರು ಹೇಳಿದರು. ಈ ಹೊಸ ಅಂತರ್ಜಾಲ ಸೇವೆಯಿಂದ ಏಕಕಾಲಕ್ಕೆ ಆಟ, ಚಿತ್ರ ವೀಕ್ಷಣೆ ಮತ್ತು ಮಾಹಿತಿ ಪಡೆಯುವ ಕಾರ್ಯವನ್ನು ಅತಿ ವೇಗವಾಗಿ ಮಾಡಬಹುದು. ಇದು ಏಕಕಾಲಕ್ಕೆ ಆನ್ ಲೈನ್ ಆಟ, ಸಂಗೀತ ಆಲಿಸುವುದು, ಚಿತ್ರ ವೀಕ್ಷಣೆ (ಕಲಿಕೆ, ಕೆಲಸ ಮತ್ತು ಆಟ ಆಡುವ) ಅವಕಾಶವನ್ನು ನೀಡುತ್ತದೆ.

2007: ಉತ್ತರಖಂಡದ ಚಮೋಲಿ ಜಿಲ್ಲೆಯ ವಿಷ್ಣುಪ್ರಯಾಗ ಸಮೀಪ ಬಸ್ಸೊಂದು ಅಲಕನಂದಾ ನದಿಗೆ ಉರುಳಿ, ಅದರಲ್ಲಿ ಪ್ರಯಾಣಿಸುತ್ತಿದ್ದ 41 ಜನ ಬದರಿನಾಥ ಯಾತ್ರಿಗಳು ಮೃತರಾದರು. ಎಲ್ಲ ಯಾತ್ರಾರ್ಥಿಗಳು ಒರಿಸ್ಸಾದವರಾಗಿದ್ದು ಬದರಿನಾಥ ದರ್ಶನ ಪಡೆದು ಹೃಷಿಕೇಶಕ್ಕೆ ವಾಪಸಾಗುತ್ತಿದ್ದರು. ಕಡಿದಾದ ರಸ್ತೆಯಲ್ಲಿ ನಿಯಂತ್ರಣ ತಪ್ಪಿದ ಬಸ್ ಉರುಳಿ 100 ಅಡಿಗಳಷ್ಟು ಕೆಳಗೆ ಹರಿಯುತ್ತಿದ್ದ ಅಲಕನಂದಾ ನದಿಯಲ್ಲಿ ಬಿದ್ದಿತು.

2007: ರೈತರಿಗೆ ವರದಾನವಾಗಬಲ್ಲ ಹೊಸ ಭೂಸ್ವಾಧೀನ ನೀತಿಯನ್ನು ಪ್ರಕಟಿಸಿದ ಕೇಂದ್ರ ಸರ್ಕಾರ, ಇದಕ್ಕಾಗಿ ಮರು ವಸತಿ ಹಾಗೂ ಮರು ನೆಲೆ ರಾಷ್ಟ್ರೀಯ ನೀತಿ-2007ಕ್ಕೆ ಒಪ್ಪಿಗೆ ನೀಡಿತು. 2003ರ ಕಾಯ್ದೆ ಬದಲಿಗೆ ಇದು ಅಸ್ತಿತ್ವಕ್ಕೆ ಬರುವುದು. ಪ್ರಧಾನಮಂತ್ರಿ ಮನಮೋಹನ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿ ನಡೆದ ಕೇಂದ್ರ ಸಂಪುಟ ಸಭೆ ಈ ಕುರಿತು ತೀರ್ಮಾನ ತೆಗೆದುಕೊಂಡು, ರೈತರ ಹಿತರಕ್ಷಣೆ ಕಾಪಾಡಲು ಬದ್ಧತೆ ವ್ಯಕ್ತಪಡಿಸಿತು. ಹೊಸ ನೀತಿಯನ್ನು ಜಾರಿಗೆ ತರುವ ಉದ್ದೇಶದಿಂದ 1894ರ ಭೂಸ್ವಾಧೀನ ಕಾಯಿದೆಗೆ ಶೀಘ್ರ ತಿದ್ದುಪಡಿ ತರಲಾಗುವುದು. ಇದರ ಅನ್ವಯ ಅಭಿವೃದ್ಧಿ ಯೋಜನೆಗಳಿಗಾಗಿ ಭೂಮಿ ಕಳೆದುಕೊಳ್ಳುವ ರೈತರು ಯೋಜನೆ ಸ್ಥಳದ ಹತ್ತಿರವೇ ಪರ್ಯಾಯ ಭೂಮಿ ಪಡೆಯುವರು. ಜೊತೆಗೆ, ಅವರಿಗೆ ಅಲ್ಲಿ ಕೆಲಸವನ್ನೂ ನೀಡಲಾಗುವುದು. ಒಂದು ವೇಳೆ ಸಾಕಷ್ಟು ಪರ್ಯಾಯ ಭೂಮಿ ಲಭ್ಯವಿಲ್ಲದಿದ್ದರೆ, ಕಳೆದುಕೊಂಡ ಭೂಮಿಗೆ ನಗದು ಪರಿಹಾರ ದೊರೆಯುವುದು. ಕೃಷಿ ಭೂಮಿಗಿಂತ ಬಂಜರು ಭೂಮಿಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ ನೀಡಲಾಗುವುದು. ಈ ರೀತಿ ವಶಪಡಿಸಿಕೊಂಡ ಭೂಮಿಯಲ್ಲಿ ಐದು ವರ್ಷದೊಳಗೆ ಉದ್ಯಮ ಪ್ರಾರಂಭವಾಗದಿದ್ದರೆ ಅದು ವಾಪಸ್ ಸರ್ಕಾರದ ವಶಕ್ಕೆ ಹೋಗುವುದು. 

2006: `ಅಮರ ಕೋಲ್ಕತ್ತಾ' ಮತ್ತು `ಈಸ್ಟರ್ನ್ ಹಾರಿಜನ್' ಎಂಬ ಎರಡು ಪಾಕ್ಷಿಕ ನಿಯತಕಾಲಿಕಗಳನ್ನು ಅನುಕ್ರಮವಾಗಿ ಬಂಗಾಳಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಭಾರತೀಯ ಜನಸಂಖ್ಯೆ ಹೆಚ್ಚಿರುವ ಕೆನಡಾದ ಟೊರೆಂಟೊದಲ್ಲಿ ಕೋಲ್ಕತ್ತಾದ ಮಹಿಳಾ ಉದ್ಯಮಿ ಬೂಬೂನ್ ಬಿಸ್ವಾಸ್ ಆರಂಭಿಸಿದರು. ದುರ್ಗಾ ಪೂಜೆಯ ಸಮಯದಲ್ಲಿ ಇದನ್ನು ಬಿಡುಗಡೆ ಮಾಡಲಾಯಿತು. ಬಿಸ್ವಾಸ್ ಅವರು ತಮ್ಮ ಪತಿಯೊಂದಿಗೆ ಕೆನಡಾಕ್ಕೆ ವಲಸೆ ಬಂದವರು.

2006: ಮುಸ್ತಾಖ್ ಶೇಖ್ ಅವರು ಬರೆದ ಬಾಲಿವುಡ್ ನಟ ಶಾರುಖ್ ಖಾನ್ ಅವರ ಜೀವನ ಕುರಿತಾದ `ಸ್ಟಿಲ್ ರೀಡಿಂಗ್ ಖಾನ್' ಪುಸ್ತಕವನ್ನು ಮುಂಬೈಯಲ್ಲಿ ಬಿಡುಗಡೆ ಮಾಡಲಾಯಿತು. ಪುಸ್ತಕವು 460 ಪುಟಗಳನ್ನು ಒಳಗೊಂಡಿದೆ.

2006: ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರಿಗೆ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಫ್ರಾನ್ಸ್ ಸರ್ಕಾರವು ತನ್ನ ದೇಶದ ಅತ್ಯುನ್ನತ ಗೌರವವಾದ `ಆಫೀಸರ್ ಆಫ್ ದಿ ಆರ್ಡರ್ ಆಫ್ ದಿ ಲೀಜನ್ ಆಫ್ ಆನರ್' ನ್ನು ಪ್ರಕಟಿಸಿತು.

2001: ಸರ್ ವಿದ್ಯಾಧರ್ ಸೂರಜ್ ಪ್ರಸಾದ್ ನೈಪಾಲ್ ಅವರಿಗೆ ಸಾಹಿತ್ಯಕ್ಕಾಗಿ ನೀಡಲಾಗುವ ನೊಬೆಲ್ ಪ್ರಶಸ್ತಿ ಲಭಿಸಿತು.

1995: ಕ್ಲೋರೋಫ್ಲುರೋಕಾರ್ಬನ್ ಗಳು (ಸಿಎಫ್ ಸಿ) ಭೂಮಿಯ ಓಝೋನ್ ಪದರವನ್ನು ತಿಂದು ಹಾಕುತ್ತಿವೆ ಎಂದು ಎಚ್ಚರಿಸುವ ನಿಟ್ಟಿನಲ್ಲಿ ಮಾಡಿದ ರಾಸಾಯನಿಕ ಕ್ಷೇತ್ರದ ಸಾಧನೆಗಾಗಿ ಅಮೆರಿಕದ ಮಾರಿಯೋ ಮೊಲೀನಾ, ಶೆರ್ ವೂಡ್ ರಾಲೆಂಡ್ ಮತ್ತು ಡಚ್ ವಿಜ್ಞಾನಿ ಪೌಲ್ ಕ್ರಟ್ಜೆನ್ ಅವರಿಗೆ ನೊಬೆಲ್ ಪ್ರಶಸ್ತಿ ಲಭಿಸಿತು. ಒಂದು ದಶಕಕ್ಕೂ ಮೊದಲೇ ಅಂಟಾರ್ಕ್ಟಿಕ್ ಓಝೋನ್ ಪದರದಲ್ಲಿ ತೂತು ಪತ್ತೆಯಾಗಿತ್ತು. ಈ ವಿಜ್ಞಾನಿಗಳ ಸಂಶೋಧನೆಯು ಓಝೋನ್ ಪದರವನ್ನು ರಕ್ಷಿಸಲು ಸಿಎಫ್ ಸಿಗಳ ಹೊಗೆಯನ್ನು ನಿಯಂತ್ರಿಸಬೇಕೆಂಬುದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಾಯ ತೀವ್ರಗೊಳ್ಳಲು ಸ್ಫೂರ್ತಿ ನೀಡಿತು. 

1984: ಬಾಹ್ಯಾಕಾಶ ನೌಕೆ ಚಾಲೆಂಜರಿನ ಗಗನಯಾನಿ ಕಾಥಿ ಸುಲ್ಲಿವಾನ್ ಅವರು ಬಾಹ್ಯಾಕಾಶದಲ್ಲಿ ನಡೆದಾಡಿದ ಪ್ರಥಮ ಅಮೆರಿಕನ್ ಮಹಿಳೆ ಎಂಬ ಕೀರ್ತಿಗೆ ಭಾಜನರಾದರು.

1981: ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ ಪಡುಕೋಣೆ ಅವರು ಕ್ವಾಲಾಲಂಪುರದಲ್ಲಿ ನಡೆದ ಪಂದ್ಯದಲ್ಲಿ ಪ್ರಥಮ ವಿಶ್ವಕಪ್ ಬ್ಯಾಡ್ಮಿಂಟನ್ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು. ಪಡುಕೋಣೆ ಅವರು ಪುರುಷರ ಸಿಂಗಲ್ಸ್ ಫೈನಲಿನಲ್ಲಿ ಚೀನಾದ ಅಗ್ರಮಾನ್ಯ ಆಟಗಾರ ಹ್ಯಾನ್ ಜಿಯಾನ್ ಅವರನ್ನು 15-10, 18-16ರಲ್ಲಿ ಪರಾಭವಗೊಳಿಸಿದರು.

1968: ಮೊತ್ತ ಮೊದಲ ಮಾನವ ಸಹಿತ ಅಪೋಲೊ 7 ಗಗನನೌಕೆಯನ್ನು ಗಗನಕ್ಕೆ ಹಾರಿಸಲಾಯಿತು. ವಾಲ್ಲಿ ಸಚಿರ್ರಾ, ಡಾನ್ ಫಾಲ್ಟನ್ ಐಸೆಲ್ ಮತ್ತು ಆರ್. ವಾಲ್ಟರ್ ಕನ್ಹಿಂಗಾಮ್ ಅವರು ಈ ಗಗನ ನೌಕೆಯಲ್ಲಿ ಇದ್ದರು.

1900: ಖ್ಯಾತ ಸಾಹಿತಿ ಭಾಸ್ಕರ ಆನಂದ ಸಾಲೆತ್ತೂರು (11-10-1900ರಿಂದ 18-12-1963) ಅವರು ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಸಾಲೆತ್ತೂರು ಗ್ರಾಮದಲ್ಲಿನಾರಾಯಣ ರಾಯರು- ಪಾರ್ವತಿ ದಂಪತಿಯು ಮಗನಾಗಿ ಜನಿಸಿದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement