My Blog List

Saturday, November 1, 2008

ಇಂದಿನ ಇತಿಹಾಸ History Today ನವೆಂಬರ್ 1

ಇಂದಿನ ಇತಿಹಾಸ

ನವೆಂಬರ್ 1

ಅನಾರೋಗ್ಯದಿಂದ ಬಳಲುತ್ತಿದ್ದ ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ಹಿರಿಯ ನಾಟಕಕಾರ ಹಾಗೂ ನಿರ್ದೇಶಕ ಪುಂಡಲೀಕಪ್ಪ ಬಸನಗೌಡ ಧುತ್ತರಗಿ (78) ಮಧ್ಯಾಹ್ನ ಕೆರೂಡಿ ಆಸ್ಪತ್ರೆಯಲ್ಲಿ ನಿಧನರಾದರು. ಪುಂಡಲೀಕ ಬಸವನಗೌಡ ಧುತ್ತರಗಿ ವೃತ್ತಿರಂಗ ಭೂಮಿಯ ಪ್ರಖ್ಯಾತ ನಾಟಕ ಕಾರರು. ನಟ, ನಾಟಕ ಕಂಪನಿಯ ಮಾಲೀಕರು ಆಗಿದ್ದ ಇವರು ರಚಿಸಿದ ನಾಟಕಗಳನ್ನು ಬಹುತೇಕ ಎಲ್ಲ ನಾಟಕ ಕಂಪೆನಿಗಳೂ ಪ್ರಯೋಗಿಸಿವೆ.

ಇದು ಕರ್ನಾಟಕ ರಾಜ್ಯವು ಉದಯಿಸಿದ ದಿನ. 1956 ರಲ್ಲಿ ಈ ದಿನ ಭಾಷಾವಾರು ರಾಜ್ಯಗಳ ಪುನರ್ ವಿಂಗಡಣೆಯಾಗಿ ಕರ್ನಾಟಕ (ಆಗ ಮೈಸೂರು ರಾಜ್ಯ) ಸೇರಿದಂತೆ ಹೊಸ ಭಾಷಾವಾರು ರಾಜ್ಯಗಳು ಅಸ್ತಿತ್ವಕ್ಕೆ ಬಂದವು. ಕರ್ನಾಟಕದ ಜೊತೆಗೆ ಅಸ್ತಿತ್ವಕ್ಕೆ ಬಂದ ಇತರ ರಾಜ್ಯಗಳು: ಮದ್ರಾಸ್, ಕೇರಳ, ದ್ವಿಭಾಷಾ ಬಾಂಬೆ, ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಪಂಜಾಬ್. ಮೊದಲೇ ಸ್ಥಾಪನೆಗೊಂಡಿದ್ದ ಆಂಧ್ರಪ್ರದೇಶ ರಾಜ್ಯವು ವಿಸ್ತರಣೆಗೊಂಡು ಹೈದರಾಬಾದ್ ಅದರ ರಾಜಧಾನಿಯಾಯಿತು. 1973ರಲ್ಲಿಮೈಸೂರು ರಾಜ್ಯಕ್ಕೆ `ಕರ್ನಾಟಕ' ಎಂಬುದಾಗಿ ಪುನರ್ ನಾಮಕರಣ ಮಾಡಲಾಯಿತು. ರಾಷ್ಟ್ರಾಧ್ಯಕ್ಷ ರಾಜೇಂದ್ರ ಪ್ರಸಾದ್ ಅವರು ಈ ದಿನ ಮಧ್ಯಾಹ್ನ ಶುಭ ಮುಹೂರ್ತದಲ್ಲಿ ಕರ್ನಾಟಕ ರಾಜ್ಯದ ಆರಂಭೋತ್ಸವವನ್ನು ನೆರವೇರಿಸಿ `ಒಂದುಗೂಡಿರುವ ಜನತೆಗೆ ಕಲ್ಯಾಣವಾಗಲಿ' ಎಂದು ಹಾರೈಸಿದರು.

2007: ಸುವರ್ಣ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಬೆಳಗಾವಿಯಿಂದ 21 ಚಿಣ್ಣರು ಸ್ಕೇಟಿಂಗ್ ಮೂಲಕ 530 ಕಿ.ಮೀ. ಕ್ರಮಿಸಿ ರಾಜಧಾನಿಯಲ್ಲಿರುವ ವಿಧಾನಸೌಧಕ್ಕೆ ಬಂದು ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರನ್ನು ಭೇಟಿ ಮಾಡಿದರು. 530 ಕಿ.ಮೀ. ದೂರವನ್ನು ಈ ಚಿಣ್ಣರು ನಾಲ್ಕು ದಿನಗಳಲ್ಲಿ ಕ್ರಮಿಸಿದರು. ಬೆಳಗಾವಿಯ ವಿವಿಧ ಶಾಲೆಗಳ ಈ ಚಿಣ್ಣರಲ್ಲಿ ಅತ್ಯಂತ ಕಿರಿಯ ಮಗುವಿನ ವಯಸ್ಸು 5 ವರ್ಷವಾದರೆ, ಗರಿಷ್ಠ ವಯಸ್ಸು 14 ವರ್ಷ. ಕನ್ನಡ ಧ್ವಜದ ಬಣ್ಣದ ವೇಷ ಧರಿಸಿದ್ದ ಮಕ್ಕಳೂ ರಾಜ್ಯೋತ್ಸವ ಪ್ರಯುಕ್ತ ರಾಜ್ಯಪಾಲರು ಬ್ಯಾಂಕ್ವೆಟ್ ಹಾಲಿನಲ್ಲಿ ಏರ್ಪಡಿಸಿದ್ದ ಸಂತೋಷ ಕೂಟದಲ್ಲಿ ಕೂಡಾ ಪಾಲ್ಗೊಂಡರು. ಬೆಳಗಾವಿಯ ರೋಲರ್ ಸ್ಕೇಟಿಂಗ್ ಅಕಾಡೆಮಿ ಆಯೋಜಿಸಿದ್ದ ಈ 'ಚಿಣ್ಣರ ಸ್ಕೇಟಿಂಗ್ ಓಟ'ಕ್ಕೆ ಅಲ್ಲಿನ ರಾಣಿ ಚೆನ್ನಮ್ಮ ಪ್ರತಿಮೆ ಬಳಿ ಅಕ್ಟೋಬರ್ 28ರಂದು ಚಾಲನೆ ನೀಡಲಾಗಿತ್ತು. ಈ ಮಕ್ಕಳ ತಂಡ  ಧಾರವಾಡ, ಹುಬ್ಬಳ್ಳಿ, ಹಾವೇರಿ, ರಾಣೆಬೆನ್ನೂರು, ದಾವಣಗೆರೆ, ಚಿತ್ರದುರ್ಗ, ಸಿರಾ, ತುಮಕೂರು, ನೆಲಮಂಗಲ ಮಾರ್ಗವಾಗಿ ಬೆಂಗಳೂರಿಗೆ ಬಂದು ತಲುಪಿತು.

2007: ಅನಾರೋಗ್ಯದಿಂದ ಬಳಲುತ್ತಿದ್ದ ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ಹಿರಿಯ ನಾಟಕಕಾರ ಹಾಗೂ ನಿರ್ದೇಶಕ ಪುಂಡಲೀಕಪ್ಪ ಬಸನಗೌಡ ಧುತ್ತರಗಿ (78) ಮಧ್ಯಾಹ್ನ ಕೆರೂಡಿ ಆಸ್ಪತ್ರೆಯಲ್ಲಿ ನಿಧನರಾದರು. ಪುಂಡಲೀಕ ಬಸವನಗೌಡ ಧುತ್ತರಗಿ ವೃತ್ತಿರಂಗಭೂಮಿಯ ಪ್ರಖ್ಯಾತ ನಾಟಕಕಾರರು. ನಟ, ನಾಟಕ ಕಂಪನಿಯ ಮಾಲೀಕರು ಆಗಿದ್ದ ಇವರು ರಚಿಸಿದ ನಾಟಕಗಳನ್ನು ಬಹುತೇಕ ಎಲ್ಲ ನಾಟಕ ಕಂಪೆನಿಗಳೂ ಪ್ರಯೋಗಿಸಿವೆ. ಹಾಗಾಗಿ ಐದು ದಶಕಗಳ ಕಾಲ ಕನ್ನಡ ವೃತ್ತಿ ರಂಗಭೂಮಿಯ ಅವಿಭಾಜ್ಯ ಅಂಗವಾಗಿದ್ದರು. ಧುತ್ತರಗಿ ರಚಿಸಿದ 'ಸಂಪತ್ತಿಗೆ ಸವಾಲು' ವರ್ಗ ಸಂಘರ್ಷ ಕುರಿತ ಮೊದಲ ನಾಟಕ. ಡಾ. ರಾಜಕುಮಾರ್ ನಾಯಕನ ಪಾತ್ರದಲ್ಲಿ ಅಭಿನಯಿಸಿದ ಇದೇ ಹೆಸರಿನ ಚಲನಚಿತ್ರ ಭಾರಿ ಜನಪ್ರಿಯ ಚಿತ್ರವಾಯಿತಲ್ಲದೆ, ತಮಿಳು, ತೆಲುಗು, ಮಲೆಯಾಳಿ ಭಾಷೆಯಲ್ಲೂ ಚಿತ್ರೀಕರಣಗೊಂಡು 4 ಭಾಷೆಯಲ್ಲಿ ಮೂಡಿಬಂದ ಹೆಗ್ಗಳಿಕೆ ಪಡೆಯಿತು. `ಕಲ್ಪನಾ ಪ್ರಪಂಚ'ದಿಂದ ಆರಂಭಿಸಿ ಒಟ್ಟು 63 ನಾಟಕಗಳನ್ನು ರಚಿಸಿರುವ ಧುತ್ತರಗಿ ಅವರ ಮಲಮಗಳು (ಮುದುಕನ ಮದುವೆ), ತಾಯಿಕರುಳು, ಸುಖದ ಸುಪ್ಪತ್ತಿಗೆ, ಸಂಪತ್ತಿಗೆ ಸವಾಲು, ಸೊಸೆ ತಂದ ಸೌಭಾಗ್ಯ (ಚಿಕ್ಕಸೊಸೆ) ಕಿತ್ತೂರು ಚೆನ್ನಮ್ಮ, ಸಿಂಧೂರ ಲಕ್ಷ್ಮಣ, ಪುರಂದರದಾಸ ಮುಂತಾದವು ಶ್ರೇಷ್ಠ ಹಾಗೂ ಜನಪ್ರಿಯ ನಾಟಕಗಳಾಗಿದ್ದು, ವಿವಿಧ ನಾಟಕ ಕಂಪೆನಿಗಳಲ್ಲಿ ಹಾಗೂ ಗ್ರಾಮೀಣ ಹವ್ಯಾಸಿಗಳಲ್ಲಿ ಲಕ್ಷಗಟ್ಟಲೆ ಪ್ರದರ್ಶನ ಕಂಡಿವೆ. ಪತ್ನಿ ಸರೋಜಮ್ಮ ಧುತ್ತರಗಿ ವೃತ್ತಿರಂಗಭೂಮಿಯ ಜನಪ್ರಿಯ ತಾರೆ. ಪತ್ನಿಯೊಂದಿಗೆ 15 ವರ್ಷಕ್ಕಿಂತ ಹೆಚ್ಚು ಕಾಲ ನಾಟಕ ಕಂಪೆನಿಯೊಂದನ್ನು ಅವರು ನಡೆಸಿದ್ದರು. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ (1985), ರಾಜ್ಯೋತ್ಸವ ಪ್ರಶಸ್ತಿ (1996)ಗೆ ಭಾಜನರಾದ ಅವರಿಗೆ ಕನ್ನಡ ರಂಗಭೂಮಿಯ ಅತ್ಯುನ್ನತ ಪ್ರಶಸ್ತಿಯಾದ ಗುಬ್ಬಿ ವೀರಣ್ಣ ಪ್ರಶಸ್ತಿಯನ್ನು 2000ರಲ್ಲಿ ಪ್ರದಾನ ಮಾಡಲಾಗಿತ್ತು. ಪತ್ನಿ ಸರೋಜಮ್ಮನವರಿಗೆ ಪ್ರಸಕ್ತ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಗಿತ್ತು. ಅವರು ಇತ್ತ ಬೆಂಗಳೂರಿನಲ್ಲಿ ಪ್ರಶಸ್ತಿ ಸ್ವೀಕರಿಸುತ್ತಿದ್ದಾಗಲೇ ಅತ್ತ ಧುತ್ತರಗಿ ಅವರು ನಿಧನರಾದುದು, ನಾಟಕಕಾರನ ಜೀವನದ ಬಹುದೊಡ್ಡ ನಾಟಕೀಯ ದುಃಖಾಂತ್ಯಕ್ಕೆ ಕನ್ನಡಿ ಹಿಡಿಯಿತು.

2007: ಮಾನವ ಭಾಷೆ ತಿಳಿದಿದ್ದ ಹೆಣ್ಣು ಚಿಂಪಾಂಜಿ ವಾಶೋಯೆ ವಾಷಿಂಗ್ಟನ್ ಸಂಶೋಧನಾ ಸಂಸ್ಥೆಯಲ್ಲಿ ಸಾವನ್ನಪ್ಪಿತು. 1965 ರಲ್ಲಿ ಹುಟ್ಟಿದ ಈ ಚಿಂಪಾಜಿ ಮಾನವ ಭಾಷೆಯನ್ನು ಮಾತನಾಡುವ, ಮೊಟ್ಟಮೊದಲ ಮಾನವೇತರ ಪ್ರಾಣಿ ಎಂದು ಹೇಳಲಾಗಿತ್ತು. ಈ ಚಿಂಪಾಂಜಿ ಮೊದಲಿಗೆ ಅಮೆರಿಕದ ಸಂಜ್ಞೆ  ಭಾಷೆ ಕಲಿತಿತ್ತು. ನಂತರ 250 ಪದಗಳನ್ನು ಕಲಿತು, ನೆನಪಿನಲ್ಲಿ ಇಟ್ಟುಕೊಂಡಿತ್ತು. ಆದರೆ ಟೀಕಾಕಾರರು ಇದನ್ನು ಒಪ್ಪಿರಲಿಲ್ಲ. ಚಿಂಪಾಂಜಿಯ ಮತ್ತೊಂದು ವಿಶೇಷ ಗುಣವೆಂದರೆ ತಾನು ಕಲಿತ ಭಾಷೆಯನ್ನು ಅದು ಮೂರು ಮರಿ ಚಿಂಪಾಂಚಿಗಳಿಗೂ ಕಲಿಸಿತ್ತು.

2007: `ಮಾಜಿ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಉಭಯ ಪಕ್ಷಗಳ ಸಮನ್ವಯ ಸಮಿತಿಯನ್ನು ರಚಿಸಬೇಕು' ಎಂಬ ಷರತ್ತನ್ನು ವಿಧಿಸುವ ಮೂಲಕ ಬಿಜೆಪಿ ಮೇಲೆ ತಮ್ಮ ಹಿಡಿತ ಸಾಧಿಸಲು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಮುಂದಾದರು. ಬಿಜೆಪಿ- ಜೆಡಿಎಸ್ ಮೈತ್ರಿ ಕೂಟಕ್ಕೆ ಸರ್ಕಾರ ರಚಿಸಲು ರಾಜ್ಯಪಾಲರು ಇನ್ನೂ ಆಹ್ವಾನಿಸಿಲ್ಲ. ಮೈತ್ರಿ ಸರ್ಕಾರ ರಚನೆ ಇನ್ನೂ ಅನಿಶ್ಚಿತವಾಗಿರುವ ಸನ್ನಿವೇಶದಲ್ಲಿ 12 ಅಂಶಗಳ ಪರಸ್ಪರ ಒಪ್ಪಂದ ಪತ್ರಕ್ಕೆ ಸಹಿ ಹಾಕುವಂತೆ ಗೌಡರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥಸಿಂಗ್ ಅವರಿಗೆ ಪತ್ರ ಬರೆದರು.

2007: ಭಾರತದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಎಂದು ಜನ ಗುರುತಿಸುವುದು ಕಿರಣ್ ಬೇಡಿ ಅವರನ್ನು. ಆದರೆ ನಿಜವಾಗಿಯೂ ಕಾಂಚನ್ ಚೌಧರಿ ಭಟ್ಟಾಚಾರ್ಯ ಅವರು ಭಾರತದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಎಂಬುದು ಅನೇಕರಿಗೆ ಗೊತ್ತಿಲ್ಲ.  1973ರ ತಂಡದಲ್ಲಿ ಆಯ್ಕೆಯಾದ  ಭಟ್ಟಾಚಾರ್ಯ ಅವರು, 2004ರ ಜೂನ್ 15ರಂದು ಉತ್ತರಖಂಡದ ಡಿಜಿಪಿಯಾಗಿ ಅಧಿಕಾರ ಸ್ವೀಕರಿಸಿ, ಮೂರು ವರ್ಷಗಳಿಗೂ ಹೆಚ್ಚು ಕಾಲ ಡಿಜಿಪಿಯಾಗಿ ಅಧಿಕಾರ ನಿರ್ವಹಿಸಿ ಈದಿನ ಡೆಹರಾಡೂನಿನಲ್ಲಿ ನಿವೃತ್ತಿಯಾದರು. ಭಟ್ಟಾಚಾರ್ಯ ಅವರ ಕುರಿತಾಗಿ, ಅವರ ಸೋದರಿ ಕವಿತಾ ಅವರು ನಿರ್ದೇಶಿಸಿ, 1990ರಲ್ಲಿ ದೂರದರ್ಶನದಲ್ಲಿ ಪ್ರಸಾರವಾದ `ಉಡಾನ್' ಧಾರಾವಾಹಿಯಲ್ಲಿ ಭಟ್ಟಾಚಾರ್ಯ ಅವರ ಪಾತ್ರವನ್ನು ಕವಿತಾ ನಿರ್ವಹಿಸಿದ್ದರು. ಭ್ರಷ್ಟಾಚಾರದ ವಿರುದ್ಧ ಹೋರಾಡಲು ಪೊಲೀಸ್ ಕೆಲಸವನ್ನು ಆರಿಸಿಕೊಂಡ ದಿಟ್ಟ ಯುವತಿಯಾದ ಭಟ್ಟಾಚಾರ್ಯ ಅವರನ್ನು ಕುರಿತು ಈ ಧಾರಾವಾಹಿ ನಿರ್ಮಿಸಲಾಗಿತ್ತು.

2006: ದಕ್ಷಿಣ ಆಫ್ರಿಕದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಅವರಿಗೆ 2006ರ ಅಮ್ನೆಸ್ಟಿ ಇಂಟರ್ ನ್ಯಾಷನಲ್ ನ  `ಪ್ರಜ್ಞೆಯ ರಾಯಭಾರಿ' ಪ್ರಶಸ್ತಿಯನ್ನು ಜೋಹಾನ್ಸ್ ಬರ್ಗಿನಲ್ಲಿ ಪ್ರದಾನ ಮಾಡಲಾಯಿತು.

2006: ಪೋಲಿಯೋ ಲಸಿಕೆಗಳ ದಾಸ್ತಾನಿಗೆ ಅನುಕೂಲವಾಗುವಂತೆ ವಿಶ್ವಸಂಸ್ಥೆ ಪರಿಸರ ಕಾರ್ಯಕ್ರಮ (ಯು ಎನ್ ಇ ಪಿ) ಅಡಿಯಲ್ಲಿ ತಾವೇ ಸ್ವತಃ ನಿರ್ಮಿಸಿದ `ಸೋಲಾರ್ ಚಿಲ್' ಹೆಸರಿನ `ಸೌರ ಲಸಿಕಾ ಶೈತ್ಯ ಪೆಟ್ಟಿಗೆ'ಯನ್ನು (ಸೋಲಾರ್ ವ್ಯಾಕ್ಸೀನ್ ಕೂಲರ್) ಭಾರತೀಯ ವಿಜ್ಞಾನಿ ರಾಜೇಂದ್ರ ಶೆಂಡೆ ಅವರು ಭಾರತದ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಗೆ ಅರ್ಪಿಸಿದರು. ಬ್ಯಾಟರಿಗಳು ಹಾಗೂ ಸಾಂಪ್ರದಾಯಿಕ ರೆಫ್ರಿಜರೇಟರುಗಳಲ್ಲಿ ಬಳಸುವ ಓಝೋನ್ ಗೆ ಮಾರಕವಾದ ಕ್ಲೋರೋ-ಫ್ಲುರೋ ಕಾರ್ಬನ್ನುಗಳಿಗೆ ಪರ್ಯಾಯವಾಗಿರುವ ಈ `ಸೋಲಾರ್ ಚಿಲ್' ಪರಿಸರ ಮಿತ್ರ ಸಾಧನವಾಗಿದ್ದು ವಿದ್ಯುತ್ ಸರಬರಾಜು ತೊಂದರೆಯಿಂದ ಬಳಲುತ್ತಿರುವ ಹಳ್ಳಿಗಳಿಗೆ ವರದಾನ ಆಗಬಲ್ಲುದು. `ಸೋಲಾರ್ ಚಿಲ್' ನಲ್ಲಿ ಸಾಂಪ್ರದಾಯಿಕ ಸೌರ ಶೈತ್ಯಾಗಾರಗಳಲ್ಲಿ ಬಳಸುವಂತೆ ಬ್ಯಾಟರಿಗಳು ಅಥವಾ ಸೀಮೆ ಎಣ್ಣೆಯನ್ನು ಬಳಸುವುದಿಲ್ಲ. ಮಂಜುಗಡ್ಡೆಯ ದಪ್ಪ ಪೊರೆ ನಿರ್ಮಿಸಲು ಸೌರಶಕ್ತಿಯನ್ನೇ ಬಳಸಲಾಗುತ್ತದೆ. ಇದು ಕೂಲರಿನ ಒಳಗಿನ ಉಷ್ಣತೆಯನ್ನು ಮೈನಸ್ 2 ಡಿಗ್ರಿಯಿಂದ 8 ಡಿಗ್ರಿ ಸೆಲ್ಷಿಯಸ್ ಮಟ್ಟದಲ್ಲಿ ಇರಿಸುತ್ತದೆ. ಈ ಶೈತ್ಯ ಪೆಟ್ಟಿಗೆ ರಾತ್ರಿಯಲ್ಲಿ ಕೂಡಾ ಲಸಿಕೆಯನ್ನು ತಂಪಾಗಿ ಇರಿಸಬಲ್ಲುದು. ಸೂರ್ಯನಿಲ್ಲದೇ ಇದ್ದರೂ ನಾಲ್ಕೈದು ದಿನಗಳ ಕಾಲ ಲಸಿಕೆಯನ್ನು ತಂಪಾಗಿ ಇಡಬಲ್ಲುದು. ಶೈತ್ಯ ಪೆಟ್ಟಿಗೆಗೆ ಯಾವುದೇ ರಾಸಾಯನಿಕಗಳ ಬಳಕೆ ಮಾಡುವುದಿಲ್ಲವಾದ ಕಾರಣ ಅದರಿಂದ ಓಝೋನ್ ಗೆ ಧಕ್ಕೆಯಾಗುವುದಿಲ್ಲ, ವಾತಾವರಣವೂ ಬಿಸಿ ಆಗುವುದಿಲ್ಲ.

2005: ಒಟ್ಟು 175 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡುವ ಮೂಲಕ ಕರ್ನಾಟಕದ ಧರ್ಮಸಿಂಗ್ ನೇತೃತ್ವದ ಸಮ್ಮಿಶ್ರ ಸರ್ಕಾರ ದಾಖಲೆ ನಿರ್ಮಿಸಿತು. 1992 ರಲ್ಲಿ ಎಸ್. ಬಂಗಾರಪ್ಪ ನೇತೃತ್ವದ ಕಾಂಗ್ರೆಸ್ ಸರ್ಕಾರ 172 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿತ್ತು.

2005: ವಿಧಾನ ಪರಿಷತ್ ಸದಸ್ಯ, ಕರ್ನಾಟಕ ಬಿಜೆಪಿ ಹಿರಿಯ ಧುರೀಣ ಗುಲ್ಬರ್ಗದ ಡಾ. ಎಂ.ಆರ್. ತಂಗಾ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು.

1981: ಸೌರಾಷ್ಟ್ರ ಕರಾವಳಿಯಲ್ಲಿ ಬೀಸಿದ ತೀವ್ರ ಚಂಡಮಾರುತಕ್ಕೆ ಸಿಲುಕಿ ದ್ವಾರಕಾ ಮತ್ತು ಜಕೋವೋ ಬಂದರುಗಳ ನಡುವೆ 190 ಮೀನುಗಾರಿಕೆ ದೋಣಿಗಳು ನಾಪತ್ತೆಯಾದವು.

1974: ಭಾರತೀಯ ಕ್ರಿಕೆಟ್ ಆಟಗಾರ ವೆಂಗಿಪುರುಪ್ಪು ವೆಂಕಟ್ ಸಾಯಿ ಲಕ್ಷ್ಮಣ್ ಜನ್ಮದಿನ.

1973: ಭಾರತದ ವಿಶ್ವಸುಂದರಿ ಐಶ್ವರ್ಯ ರೈ ಜನ್ಮದಿನ. ಈಗ ಈಕೆ ಬಾಲಿವುಡ್ ನಿಂದ ಹಾಲಿವುಡ್ ವರೆಗೂ ಖ್ಯಾತಿ ಪಡೆದಿರುವ ಚಿತ್ರನಟಿ.

1956: ವಿಶಾಲ ಮೈಸೂರು ರಾಜ್ಯ ಉದಯವಾದ ಕೆಲವೇ ಗಂಟೆಗಳಲ್ಲಿ ಗೌರ್ನರ್ ಮತ್ತು 54 ವರ್ಷದ ಕರ್ನಾಟಕದ ಹಿರಿಯ ರಾಜಕಾರಣಿ ಎಸ್. ನಿಜಲಿಂಗಪ್ಪ ಅವರ ಮುಖ್ಯಮಂತ್ರಿತ್ವದಲ್ಲಿ 12 ಮಂದಿ ಸಚಿವರ ಮಂತ್ರಿ ಮಂಡಲವು ಪ್ರಮಾಣವಚನ ಸ್ವೀಕರಿಸಿತು.

1954: ಫ್ರೆಂಚರ ಆಡಳಿತಕ್ಕೆ ಒಳಪಟ್ಟಿದ್ದ ಪಾಂಡಿಚೆರಿ, ಕಾರೈಕಲ್, ಮಾಹೆ ಮತ್ತು ಯಾನಮ್ ಗಳು ಭಾರತಕ್ಕೆ ಸೇರ್ಪಡೆಯಾದವು.

1913: ಲಾಲಾ ಹರ್ ದಯಾಳ್ ಮತ್ತು ಸೋಹನ್ ಸಿಂಗ್ ಭಾಂಕ್ನಾ ಅವರು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಪಶ್ಚಿಮದಲ್ಲಿ ಬೆಂಬಲ ದೊರಕಿಸುವ ಸಲುವಾಗಿ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ `ಘದರ್' ಚಳವಳಿಯನ್ನು ಆರಂಭಿಸಿದರು.

1858: ಭಾರತದ ಆಡಳಿತವನ್ನು ಈಸ್ಟ್ ಇಂಡಿಯಾ ಕಂಪೆನಿಯಿಂದ ಬ್ರಿಟಿಷ್ ರಾಜಸತ್ತೆಯು ವಹಿಸಿಕೊಂಡಿತು. ಗವರ್ನರ್ ಜನರಲ್ ಗೆ `ವೈಸ್ ರಾಯ್' ಎಂಬ ಹೆಸರು ನೀಡಲಾಯಿತು. ಈ ಹೆಸರೇ ಭಾರತವು ಸ್ವಾತಂತ್ರ್ಯ ಗಳಿಸುವವರೆಗೂ ಮುಂದುವರಿಯಿತು.

1848: ಡಬ್ಲ್ಯೂ.ಎಚ್. ಸ್ಮಿತ್ ಅವರ ಮೊತ್ತ ಮೊದಲ ರೈಲ್ವೆ ಬುಕ್ ಸ್ಟಾಲ್ ಲಂಡನ್ನಿನ ಈಸ್ಟನ್ ಸ್ಟೇಷನ್ನಿನಲ್ಲಿ ಪ್ರಾರಂಭಗೊಂಡಿತು.

1800: ಅಮೆರಿಕದ ಅಧ್ಯಕ್ಷ ಜಾನ್ ಆಡಮ್ಸ್ ಅವರು `ಶ್ವೇತಭವನ'ಕ್ಕೆ ತಮ್ಮ ವಾಸ್ತವ್ಯವನ್ನು ವರ್ಗಾಯಿಸಿದರು. ಇದರೊಂದಿಗೆ `ಶ್ವೇತಭವನ'ದಲ್ಲಿ ವಾಸ್ತವ್ಯ ಹೂಡಿದ ಮೊದಲ ಅಧ್ಯಕ್ಷರೆಂಬ ಹೆಗ್ಗಳಿಕೆ ಅವರದಾಯಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement