Sunday, November 2, 2008

ಇಂದಿನ ಇತಿಹಾಸ History Today ನವೆಂಬರ್ 02

ಇಂದಿನ ಇತಿಹಾಸ

ನವೆಂಬರ್ 2

ಸ್ವಿಟ್ಜರ್ಲೆಂಡಿನ ಆಟಗಾರ್ತಿ ಮಾರ್ಟಿನಾ ಹಿಂಗಿಸ್ ಅವರು ತಮ್ಮ ಟೆನಿಸ್ ಜೀವನಕ್ಕೆ ಜ್ಯೂರಿಸ್ಸಿನಲ್ಲಿ ವಿದಾಯ ಹೇಳಿದರು. ವಿಂಬಲ್ಡನ್ ಟೂರ್ನಿಯ ವೇಳೆಯಲ್ಲಿ ತಾನು ಉದ್ದೀಪನ ಮದ್ದು ಕೊಕೇನ್ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದ ಸಂಗತಿಯನ್ನೂ ಅವರು ಇದೇ ವೇಳೆ ಬಹಿರಂಗಪಡಿಸಿ ಟೆನಿಸ್ ಜಗತ್ತನ್ನು ಅಚ್ಚರಿಯಲ್ಲಿ ಕೆಡವಿದರು. ಆದರೆ ತಾನು ಯಾವುದೇ ಉದ್ದೀಪನ ಮದ್ದು ಸೇವಿಸಿಲ್ಲ ಎಂದು ಅವರು ಸ್ಪಷ್ಟ ಪಡಿಸಿದರು.

2007: ಅಸ್ವಸ್ಥತೆಯಿಂದ ಬಳಲುತ್ತಿದ್ದ ಎಚ್ ಐ ವಿ ಸೋಂಕು ಬಾಧಿತೆ ಮತ್ತು ಸಾಮಾಜಿಕ ಕಾರ್ಯಕರ್ತೆ ವೀಣಾಧರಿ (54) ಈದಿನ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು. ಮಂಗಳೂರು ಸಮೀಪದ ಮಂಜೇಶ್ವರ ನಿವಾಸಿಯಾದ ವೀಣಾಧರಿ ಅವರು ಕೆಲ ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ದರು. ಎಚ್ ಐ ವಿ ಸೋಂಕಿನಿಂದ ಬಳಲುತ್ತಿದ್ದ 
ಅವರು ಆತ್ಮವಿಶ್ವಾಸದಿಂದ ಜೀವನ ನಡೆಸುತ್ತಿದ್ದರು. ಎಚ್ ಐ ವಿ ಸೋಂಕು ಮತ್ತು ಏಡ್ಸ್ ನಿಂದ ಬಳಲುತ್ತಿದ್ದವರಿಗೆ ನೆಮ್ಮದಿಯಿಂದ ಜೀವನ ನಡೆಸುವಂತೆ ಧೈರ್ಯ ಹೇಳುತ್ತಿದ್ದರು. ಖಾಸಗಿ ಸಂಸ್ಥೆಯ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ವೃತ್ತಿ ಜೀವನ ಆರಂಭಿಸಿದ್ದ ಅವರು ತಮಗೆ ಎಚ್ ಐ ವಿ ಸೋಂಕಿದೆ ಎಂದು ಯಾವತ್ತೂ ಧೃತಿಗೆಟ್ಟವರಲ್ಲ. ಬೆಂಗಳೂರಿನ ಜೆ.ಸಿ.ರಸ್ತೆ ಬಳಿಯಿರುವ ಕಚೇರಿಯೊಂದರಲ್ಲಿ ಎಚ್ ಐ ವಿ ಸೋಂಕು ಬಾಧಿತ ಮತ್ತು ಏಡ್ಸ್ ಕಾಯಿಲೆ ಪೀಡಿತರಿಗಾಗಿ ಅವರು ಪ್ರತಿ ವಾರ ಸಲಹಾ  ಶಿಬಿರ ನಡೆಸುತ್ತಿದ್ದರು. ಕರಾವಳಿ ಎಚ್ ಐವಿ ಸೋಂಕು ಬಾಧಿತ ಮಹಿಳಾ ಮತ್ತು ಮಕ್ಕಳ ಜಾಲ ಸಂಘವನ್ನು ಸ್ಥಾಪಿಸಿದ್ದ ವೀಣಾಧರಿ ರಾಜ್ಯೋತ್ಸವ ಪ್ರಶಸ್ತಿಯ ಜೊತೆಗೆ ವಿವಿಧ ಸಂಘ ಸಂಸ್ಥೆಗಳು ನೀಡುವ ಪ್ರಶಸ್ತಿಗಳನ್ನು ಪಡೆದಿದ್ದರು. ಬ್ಯಾಂಕ್ ಉದ್ಯೋಗಿಯಾದ ಪತಿಯಿಂದ  ವೀಣಾಧರಿ ಅವರಿಗೆ ಎಚ್ ಐ ವಿ ಸೋಂಕು ತಗುಲಿತು. ಪತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಎಚ್ ಐ ವಿ ಸೋಂಕು ಸೇರಿದಂತೆ ಬೇರೆ ಕಾಯಿಲೆಗಳು ಇರುವುದು ಬೆಳಕಿಗೆ ಬಂತು. ನಂತರ ಪತಿಯನ್ನು ತೊರೆದ ವೀಣಾ ಮಂಗಳೂರಿನಲ್ಲಿ ನೆಲೆಸಿದರು. ಎಚ್ ಐ ವಿ ಸೋಂಕಿನಿಂದ ಬಾಧಿತರಾಗಿದ್ದಾರೆ ಎಂದು ತಿಳಿದ ನಂತರ  ಅವರನ್ನು ತಂದೆ ತಾಯಿ ಸಹ ದೂರವಿರಿಸಿದ್ದರು.

2007: ಸಾಗರೋಲ್ಲಂಘನ ಮಾಡಿದ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥರು ಪರ್ಯಾಯ ಸಂದರ್ಭದಲ್ಲಿ ನಿಯಮದಂತೆ ಶ್ರೀಕೃಷ್ಣನ ಪೂಜೆ ಮಾಡುವಂತಿಲ್ಲ. ಆದರೆ ಪುತ್ತಿಗೆ ಪರ್ಯಾಯ ಸಂದರ್ಭದಲ್ಲಿ ಕೃಷ್ಣಮಠದ ಆಡಳಿತ ಜವಾಬ್ದಾರಿಯನ್ನು ಸುಗುಣೇಂದ್ರ ತೀರ್ಥರಿಗೆ ನೀಡಬಹುದು ಎಂದು ಉಡುಪಿಯಲ್ಲಿ ಜರುಗಿದ ಅಷ್ಟ ಮಠಾಧೀಶರ ಸಭೆ ನಿರ್ಣಯಿಸಿತು. ಆದರೆ ಈ ನಿರ್ಣಯವನ್ನು ಈ ತಿಂಗಳ 28ರ ಸಭೆಯ ಬಳಿಕವೇ ಜಾರಿಗೆ ತರಲು ನಿರ್ಧರಿಸಲಾಯಿತು. ಅಷ್ಟ ಮಠಾಧೀಶರಾದ ಪರ್ಯಾಯ ಕೃಷ್ಣಾಪುರ ಸ್ವಾಮೀಜಿ, ಪೇಜಾವರ ಸ್ವಾಮೀಜಿ, ಪಲಿಮಾರು ಸ್ವಾಮೀಜಿ, ಕಾಣಿಯೂರು ಹಾಗೂ ಸೋದೆ ಸ್ವಾಮೀಜಿಗಳು ನಡೆಸಿದ ಸಭೆಯ ಕಾಲಕ್ಕೆ ಈ ನಿರ್ಧಾರ ತೆಗೆದು ಕೊಳ್ಳಲಾಯಿತು. ಆದರೆ ಅದಮಾರು ಮಠಾಧೀಶರು ಮತ್ತು ಪುತ್ರಿಗೆ ಮಠಾಧೀಶರ ಅನುಪಸ್ಥಿತಿಯಲ್ಲಿ ಈ ಸಭೆ ನಡೆಯಿತು.

2007: ಮನೆಯ ತಾರಸಿಯ ಮೇಲೆ ವಿದ್ಯುತ್ ಘಟಕವನ್ನು ಸ್ಥಾಪಿಸಿ ಮನೆಗೆ ಬೇಕಾಗುವಷ್ಟು ವಿದ್ಯುತ್ ಉತ್ಪಾದಿಸಿಕೊಳ್ಳಬಹುದಾದ ಗಾಳಿ ಮತ್ತು  ಸೌರಶಕ್ತಿಗಳನ್ನು ಜೊತೆಯಾಗಿ ಬಳಸುವ ವಿದ್ಯುತ್ ಉತ್ಪಾದನಾ ಘಟಕವನ್ನು ಕರ್ನಾಟಕ ನವೀಕರಿಸ ಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ (ಕ್ರೆಡಲ್) ರೂಪಿಸಿರುವುದಾಗಿ ಸಂಸ್ಥೆಯ ಉಪ ಪ್ರಧಾನ ವ್ಯವಸ್ಥಾಪಕ ಡಾ. ಎಚ್. ನಾಗನಗೌಡ ಮೈಸೂರಿನಲ್ಲಿ ಪ್ರಕಟಿಸಿದರು. ರಾಜ್ಯದಲ್ಲಿ ಈಗಾಗಲೇ ಸುಮಾರು 21 ಮನೆಗಳಲ್ಲಿ ಈ ಘಟಕವನ್ನು ಸ್ಥಾಪಿಸಲಾಗಿದ್ದು ಎಲ್ಲ ಕಡೆ ಅತ್ಯುತ್ತಮ ಕಾರ್ಯ ನಿರ್ವಹಣೆ ಇದೆ ಎಂದು ಅವರು ಹೇಳಿದರು. ಎರಡು ಕಡೆ ಬೀದಿ ದೀಪ ಹಾಗೂ ಒಂದು ಕಡೆ ನಾಡದೋಣಿ ಓಡಿಸಲು ಈ ವಿದ್ಯುತ್ ಬಳಕೆ ಮಾಡಲಾಗುತ್ತಿದೆ. 550 ವಾಟ್ ಸಾಮರ್ಥ್ಯದ ಘಟಕವನ್ನು ಮನೆಯ ಮೇಲೆ ಸ್ಥಾಪಿಸಿಕೊಂಡರೆ 8 ದೀಪಗಳನ್ನು ನಿರಂತರವಾಗಿ 5 ಗಂಟೆಗಳ ಕಾಲ ಉರಿಸಬಹುದು. ಜೊತೆಗೆ ಒಂದು ಟಿವಿಯನ್ನು 6 ಗಂಟೆಗಳ ಕಾಲ ಬಳಸಬಹುದು. ಜೊತೆಗೆ ಟೇಪ್ ರೆಕಾರ್ಡರ್, ರೇಡಿಯೋ, ಫ್ಯಾನ್, ಫ್ರಿಜ್ಜುಗಳಿಗೂ ಕೂಡ ಈ ವಿದ್ಯುತ್ ಬಳಸಬಹುದು. ಒಟ್ಟಾರೆಯಾಗಿ ಮನೆಗೆ ಬೇಕಾಗುವಷ್ಟು ವಿದ್ಯುತ್ತನ್ನು ಇದರಿಂದ ಪಡೆಯಬಹುದು. ವಿದ್ಯುತ್ ಖೋತಾ, ವೋಲ್ಟೇಜ್ ಸಮಸ್ಯೆ ಮುಂತಾದ  ತೊಂದರೆಗಳು ಇಲ್ಲ. 550 ವಾಟ್ ಸಾಮರ್ಥ್ಯದ ಈ  ಗಾಳಿ ಮತ್ತು  ಸೌರಶಕ್ತಿಗಳನ್ನು ಜೊತೆ ಜೊತೆಯಾಗಿ ಬಳಸುವ ವಿದ್ಯುತ್ ಘಟಕವನ್ನು ಸ್ಥಾಪಿಸಲು 95 ಸಾವಿರ ರೂಪಾಯಿ ವೆಚ್ಚವಾಗುತ್ತದೆ. ವೈಯಕ್ತಿಕ ಉಪಯೋಗ, ಕೈಗಾರಿಕೆಗಳು, ಸಂಶೋಧನೆ ಮತ್ತು ಅಬಿವೃದ್ಧಿ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳಿಗೆ ಶೇ 50ರಷ್ಟು ಸಬ್ಸಿಡಿ ನೀಡಲಾಗುತ್ತದೆ. ಸಾರ್ವಜನಿಕ ಉಪಯೋಗ, ಕೇಂದ್ರ, ರಾಜ್ಯ ಸರ್ಕಾರಿ ಕಚೇರಿಗಳಿಗಾದರೆ ಶೇ 75ರಷ್ಟು ಸಬ್ಸಿಡಿ, ಅಲ್ಲದೆ ಅತ್ಯಂತ ಕುಗ್ರಾಮಗಳಿಗಾದರೆ ಶೇ 90ರಷ್ಟು ಸಬ್ಸಿಡಿ ನೀಡಲಾಗುತ್ತದೆ ಎಂಬುದು ನಾಗನಗೌಡ ವಿವರಣೆ. ಈ ಘಟಕ ಸ್ಥಾಪಿಸಿಕೊಳ್ಳಬಯಸಿದರೆ, ಕ್ರೆಡಲ್ ಸಂಸ್ಥೆ ನಿಮ್ಮ ಮನೆಯ ಜಾಗವನ್ನು ನೋಡಿ ಪರಿಶೀಲಿಸುತ್ತದೆ. ಗಾಳಿ ಯಂತ್ರವನ್ನು ಭೂಮಿಯ ಮಟ್ಟಕ್ಕಿಂತ ಕನಿಷ್ಠ 18 ಅಡಿ ಎತ್ತರದಲ್ಲಿ ಇಡಬೇಕು. ಘಟಕದ ನೂರು ಮೀಟರ್ ವ್ಯಾಪ್ತಿಯೊಳಗೆ ಎತ್ತರವಾದ ಮರಗಳು, ಕಟ್ಟಡಗಳಂತಹ ಅಡೆತಡೆ ಇರಬಾರದು. ಗಾಳಿ ಯಾವ ದಿಕ್ಕಿನಲ್ಲಿ ಯಾವ ವೇಗದಲ್ಲಿ ತಿರುಗುತ್ತದೆ ಎನ್ನುವುದನ್ನು ನೋಡಿಕೊಂಡು ಘಟಕ ಸ್ಥಾಪಿಸಲಾಗುತ್ತದೆ. ಗಾಳಿ ಮತ್ತು ಸೂರ್ಯ ಇರುವವರೆಗೂ ವಿದ್ಯುತ್ ಉತ್ಪಾದನೆ ಸಾಧ್ಯ. ಚಲಿಸುವ ಭಾಗಗಳು ಕಡಿಮೆ ಇರುವುದರಿಂದ ನಿರ್ವಹಣೆ ವೆಚ್ಚ ಕಡಿಮೆ. ಸುಲಭವಾಗಿ  ನಿರ್ವಹಿಸುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಸ್ಥಾವರಕ್ಕೆ 2 ವರ್ಷಗಳ ಖಾತರಿ ಇದೆ. ಸೋಲಾರ್ ಪಿವಿ ಮಾಡ್ಯೂಲುಗಳಿವೆ 10 ವರ್ಷದ ಗ್ಯಾರಂಟಿ. ಸ್ವಯಂ ಚಾಲಿತ ವ್ಯವಸ್ಥೆ ಇದಾಗಿದ್ದು ವಿದ್ಯುತ್ ಬಿಲ್ ಪಾವತಿ ಮಾಡುವ ಅಗತ್ಯವೇ ಇಲ್ಲ. ಇದು ಪರಿಸರ ಸ್ನೇಹಿ ಹಾಗೂ ಶುದ್ಧ ಇಂಧನ ಮೂಲ. ದೃಢವಾದ ವೋಲ್ಟೇಜ್ ಮತ್ತು ಪ್ರೀಕ್ವೆನ್ಸಿ ಹೊಂದಿರುವ ವಿದ್ಯುತ್ ಉತ್ಪಾದನೆ ಇರುವುದರಿಂದ ವಿದ್ಯುತ್ ಅಡೆತಡೆಯ ಪ್ರಶ್ನೆ ಇಲ್ಲ. ಆಸಕ್ತರು ಡಾ.ನಾಗನಗೌಡ ಅವರನ್ನು 9845787698 ಮೂಲಕ ಸಂಪರ್ಕಿಸಬಹುದು.

2007: ಸ್ವಿಟ್ಜರ್ಲೆಂಡಿನ ಆಟಗಾರ್ತಿ ಮಾರ್ಟಿನಾ ಹಿಂಗಿಸ್ ಅವರು ತಮ್ಮ ಟೆನಿಸ್ ಜೀವನಕ್ಕೆ ಜ್ಯೂರಿಸ್ಸಿನಲ್ಲಿ ವಿದಾಯ ಹೇಳಿದರು. ವಿಂಬಲ್ಡನ್ ಟೂರ್ನಿಯ ವೇಳೆಯಲ್ಲಿ ತಾನು ಉದ್ದೀಪನ ಮದ್ದು ಕೊಕೇನ್ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದ ಸಂಗತಿಯನ್ನೂ ಅವರು ಇದೇ ವೇಳೆ ಬಹಿರಂಗಪಡಿಸಿ ಟೆನಿಸ್ ಜಗತ್ತನ್ನು ಅಚ್ಚರಿಯಲ್ಲಿ ಕೆಡವಿದರು. ಆದರೆ ತಾನು ಯಾವುದೇ ಉದ್ದೀಪನ ಮದ್ದು ಸೇವಿಸಿಲ್ಲ ಎಂದು ಅವರು ಸ್ಪಷ್ಟ ಪಡಿಸಿದರು. ಹಿಂಗಿಸ್ ವೃತ್ತಿಪರ ಟೆನಿಸಿನಿಂದ ನಿವೃತ್ತಿ ಹೊಂದುತ್ತಿರುವುದು ಇದು ಎರಡನೇ ಬಾರಿ. ಐದು ಗ್ರ್ಯಾಂಡ್ ಸ್ಲಾಮ್ ಕಿರೀಟ ಮುಡಿಗೇರಿಸಿಕೊಂಡ ಅವರು 2003ರಲ್ಲಿ ಮೊದಲ ಬಾರಿ ಟೆನಿಸಿಗೆ ನಿವೃತ್ತಿ ಘೋಷಿಸಿದ್ದರು. ಪಾದದ ಗಾಯದಿಂದ ಬಳಲಿದ ಅವರು ಈ ನಿರ್ಧಾರ ಕೈಗೊಂಡಿದ್ದರು. 2006 ರಲ್ಲಿ ಮತ್ತೆ ಟೆನಿಸ್ ಕಣಕ್ಕೆ ಮರಳಿದರೂ ಅವರಿಗೆ ಹಳೆಯ ಲಯವನ್ನು ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಮೂರು ಡಬ್ಲ್ಯುಟಿಎ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಮೂಲಕ ತಮ್ಮ ಪುನರಾಗಮವನ್ನು ಭರ್ಜರಿಯಾಗಿಸಿದ್ದರೂ ಅವರು ಮತ್ತೆ ಗಾಯದ ಸಮಸ್ಯೆ ಎದುರಿಸಬೇಕಾಯಿತು.

2007: ಭಾರತ-ಅಮೆರಿಕ ನಾಗರಿಕ ಪರಮಾಣು ಸಹಕಾರ ಒಪ್ಪಂದವನ್ನು ವಿರೋಧಿಸುತ್ತಿರುವ ದೇಶದ ಸಂಸದರನ್ನು `ರುಂಡವಿಲ್ಲದ ಕೋಳಿಗಳು' ಎಂದು ಟೀಕಿಸಿ ತೀವ್ರ ವಿವಾದಕ್ಕೆ ಕಾರಣರಾಗಿದ್ದ ಅಮೆರಿಕದಲ್ಲಿನ ಭಾರತೀಯ ರಾಯಭಾರಿ ರೊನೆನ್ ಸೇನ್ ರಾಜ್ಯಸಭೆಯ ಉಪ ಸಭಾಪತಿ ಕೆ. ರೆಹಮಾನ್ ನೇತೃತ್ವದ ಹಕ್ಕುಬಾಧ್ಯತಾ ಸಮಿತಿಯ ಮುಂದೆ ಹಾಜರಾಗಿ ಬೇಷರತ್ ಕ್ಷಮೆಯಾಚನೆ ಮಾಡಿದರು. ಇಂತಹ ಹೇಳಿಕೆ ನೀಡುವ ಮೂಲಕ ಸೇನ್ ಅನುಚಿತವಾಗಿ ವರ್ತಿಸಿದ್ದಾರೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಸಂಸದರು, ತತ್ ಕ್ಷಣವೇ ಅವರನ್ನು ಸ್ವದೇಶಕ್ಕೆ ವಾಪಸ್ ಕರೆಸಿಕೊಳ್ಳಬೇಕು ಮತ್ತು ಸಂಸತ್ತಿನಿಂದ ಛೀಮಾರಿ ಹಾಕಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಸೇನ್ ಲೋಕಸಭೆಯ ಹಕ್ಕುಬಾಧ್ಯತಾ ಸಮಿತಿ ಮುಂದೆ ಹಾಜರಾಗಿ ಕ್ಷಮೆ ಯಾಚಿಸಿದರು.

2006: ಬೆಂಗಳೂರು- ಮೈಸೂರು ಕಾರಿಡಾರ್ ಯೋಜನೆ ಸಂಬಂಧ ನಡೆದ ಸುದೀರ್ಘ ಕಾನೂನು ಸಮರದಲ್ಲಿ ನೈಸ್ ಕಂಪೆನಿ ವಿಜಯ ಗಳಿಸಿತು. ನ್ಯಾಯಮೂರ್ತಿಗಳಾದ ಕೆ.ಜಿ. ಬಾಲಕೃಷ್ಣ, ಎಸ್.ಬಿ. ಸಿನ್ಹ ಮತ್ತು ದಲ್ವೀರ್ ಭಂಡಾರಿ ಅವರನ್ನು ಒಳಗೊಂಡ ಸುಪ್ರೀಂಕೋರ್ಟ್ ಪೀಠವು ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿದ್ದ ಆದೇಶ ಮರುಪರಿಶೀಲನೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿ, ತನ್ಮೂಲಕ ಹೈಕೋರ್ಟ್ ತೀರ್ಪನ್ನು ಮತ್ತೊಮ್ಮೆ ಎತ್ತಿ ಹಿಡಿಯಿತು. ಇದರಿಂದಾಗಿ ಬೆಂಗಳೂರು- ಮೈಸೂರು ನಡುವಣ 111 ಕಿ.ಮೀ. ಉದ್ದದ ಎಕ್ಸ್ಪ್ರೆಸ್ ಮಾರ್ಗ ನಿರ್ಮಾಣ ಯೋಜನೆಗೆ ಇದ್ದ ಕಾನೂನು ಅಡಚಣೆ ನಿವಾರಣೆ ಗೊಂಡಂತಾಯಿತು.

2006: ಡಾ. ಸೀ. ಹೊಸಬೆಟ್ಟು ಎಂದೇ ಖ್ಯಾತರಾಗಿದ್ದ ವಾಗ್ಮಿ, ಚಿಂತಕ, ಕವಿ, ಅಂಕಣಕಾರ ಡಾ. ಸೀತಾರಾಮಾಚಾರ್ಯ (74) ಸುರತ್ಕಲ್ಲಿನ ತಮ್ಮ ನಿವಾಸದಲ್ಲಿ ನಿಧನರಾದರು. ಸುರತ್ಕಲ್ ಗೋವಿಂದದಾಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿ, ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದ ಸೀತಾರಾಮಾಚಾರ್ಯ ಅದಕ್ಕೂ ಮೊದಲು ಪ್ರಾಥಮಿಕ ಶಾಲಾ ಶಿಕ್ಷಕ, ಮುಖ್ಯೋಪಾಧ್ಯಾಯರಾಗಿ, ಪ್ರೌಢಶಾಲಾ ಶಿಕ್ಷಕರಾಗಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದರು.

2005: ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಧುರೀಣ ಗುಲಾಂ ನಬಿ ಆಜಾದ್ ಪ್ರಮಾಣ ವಚನ ಸ್ವೀಕರಿಸಿದರು.

1999: ಭಾರತೀಯ ಪೌರತ್ವದಿಂದ ಸೋನಿಯಾ ಗಾಂಧಿ ಹೆಸರನ್ನು ತೆಗೆದುಹಾಕುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ನವದೆಹಲಿಯ ಹೈಕೋರ್ಟ್ ತಳ್ಳಿಹಾಕಿತು.

1975: ಸಾಹಿತಿ ಚಂದ್ರಕಲಾ ಎಸ್.ಎನ್. ಜನನ.

1965: ಭಾರತದ ಚಿತ್ರನಟ ಶಾರುಖ್ ಖಾನ್ ಜನ್ಮದಿನ.

1963: ದಕ್ಷಿಣ ವಿಯೆಟ್ನಾಂ ಅಧ್ಯಕ್ಷ ನೊ ಡಿಹ್ನ್ ಡೀಮ್ ಅವರನ್ನು ಸೇನಾ ದಂಗೆಯೊಂದರಲ್ಲಿ ಕೊಲೆಗೈಯಲಾಯಿತು.

1955: ಸಾಹಿತಿ ಓಂಕಾರಯ್ಯ ತವನಿಧಿ ಜನನ.

1951: ಜಾನಪದ ತಜ್ಞ, ಸಂಶೋಧಕ ವೀರಣ್ಣ ದಂಡೆ ಅವರು ಶರಣಪ್ಪ ದಂಡೆ- ಬಂಡಮ್ಮ ದಂಪತಿಯ ಮಗನಾಗಿ ಗುಲ್ಬರ್ಗ ಜಿಲ್ಲೆಯ ಅಳಂದ ತಾಲ್ಲೂಕಿನ ಸಲಗರ ಗ್ರಾಮದಲ್ಲಿ ಜನಿಸಿದರು.

1950: ಐರಿಷ್ ನಾಟಕಕಾರ ಜಾರ್ಜ್ ಬರ್ನಾರ್ಡ್ ಶಾ ಅವರು ಹೆರ್ಟ್ ಫೋರ್ಡ್ ಶೈರಿನ ಅಯೊಟ್ ಸೇಂಟ್ ಲಾರೆನ್ಸಿನಲ್ಲಿ ತಮ್ಮ 94ನೇ ವಯಸ್ಸಿನಲ್ಲಿ ಮೃತರಾದರು.

1930: ಡ್ಯುಪಾಂಟ್ ಕಂಪೆನಿಯು ಮೊತ್ತ ಮೊದಲ ಸಿಂಥೆಟಿಕ್ ರಬ್ಬರ್ ತಯಾರಿಯನ್ನು ಪ್ರಕಟಿಸಿತು. ಕಂಪೆನಿಯು ಅದನ್ನು `ಡ್ಯುಪ್ರೇನ್' ಎಂದು ಹೆಸರಿಸಿತು. ಇದೇ ದಿನ ಹೈಲೆ ಸೆಲೆಸೀ ಇಥಿಯೋಪಿಯಾದ ಚಕ್ರವರ್ತಿಯಾದರು.

1917: ಪ್ಯಾಲೆಸ್ಟೈನಿನ ಯಹೂದ್ಯರಿಗೆ `ರಾಷ್ಟ್ರೀಯ ನೆಲೆ'ಗೆ ಬೆಂಬಲ ವ್ಯಕ್ತಪಡಿಸುವ `ಬಾಲ್ ಫೋರ್ ಘೋಷಣೆ'ಗೆ ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಆರ್ಥರ್ ಬಾಲ್ ಫೋರ್ ಬೆಂಬಲ ವ್ಯಕ್ತಪಡಿಸಿದರು.

1885: ಮೊದಲ ಮರಾಠಿ ಸಂಗೀತ ನಾಟಕಕಾರ ಬಲವಂತ ಪಾಂಡುರಂಗ ಕಿರ್ಲೋಸ್ಕರ್ (ಅಣ್ಣಾಸಾಹೇಬ್) ನಿಧನ.

1871: ಗ್ರೇಟ್ ಬ್ರಿಟನ್ನಿನ ಎಲ್ಲ ಸೆರೆಯಾಳುಗಳ ಛಾಯಾಚಿತ್ರ ತೆಗೆಯಲಾಯಿತು. ಇದರೊಂದಿಗೆ `ರೋಗ್ಸ್ ಗ್ಯಾಲರಿ' ಆರಂಭವಾಯಿತು.

1774: ಭಾರತದಲ್ಲಿ ಬ್ರಿಟಿಷ್ ಆಡಳಿತ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದವರಲ್ಲಿ ಒಬ್ಬರಾಗಿದ್ದ ಲಾರ್ಡ್ ರಾಬರ್ಟ್ ಕ್ಲೈವ್ ತನ್ನ 49ನೇ ವಯಸ್ಸಿನಲ್ಲಿ ಇಂಗ್ಲೆಂಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡು ಅಸು ನೀಗಿದ. ಭಾರತದ ಕಂಪೆನಿ ವ್ಯವಹಾರದಲ್ಲಿ ಅವ್ಯವಹಾರ ನಡೆಸಿದ ಆರೋಪಕ್ಕೆ ಗುರಿಯಾಗಿದ್ದ ಕ್ಲೈವ್, ಇದೇ ಕಾರಣಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ಎನ್ನಲಾಗಿದೆ.

1607: ಹಾರ್ವರ್ಡ್ ಕಾಲೇಜು ಸ್ಥಾಪನೆಗೆ ಮೂಲಕಾರಣನಾದ ಜಾನ್ ಹಾರ್ವರ್ಡ್ (1607-38) ಜನ್ಮದಿನ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement