ಇಂದಿನ ಇತಿಹಾಸ
ನವೆಂಬರ್ 11
`ಕೇರಾಫ್ ಫುಟ್ಪಾತ್' ಚಿತ್ರವನ್ನು ನಿರ್ದೇಶಿಸಿ, `ಅತ್ಯಂತ ಕಿರಿಯ ವಯಸ್ಸಿನ ನಿರ್ದೇಶಕ' ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದ 11ರ ಹರೆಯದ ಮಾಸ್ಟರ್ ಕಿಶನ್ ಗಿನ್ನೆಸ್ ದಾಖಲೆಗೆ ಸೇರ್ಪಡೆಯಾದ. ಈ ಕುರಿತು ಗಿನ್ನೆಸ್ನಿಂದ ಪತ್ರ ಬಂತು. ಕೊಳೆಗೇರಿ ಮಕ್ಕಳ ಕತೆ ಹೊಂದಿರುವ ಈ ಚಿತ್ರದಲ್ಲಿ ನಟರಾದ ಅಂಬರೀಷ್, ಸುದೀಪ್, ಬಾಲಿವುಡ್ ನಟ ಜಾಕಿ ಶ್ರಾಫ್ ನಟಿಸಿದ್ದಾರೆ.
1998ರಲ್ಲಿ ಜೇ ಕೊಚ್ರಾನೆ ಅವರು ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಆಗಸದಲ್ಲಿ ನಡೆದರು. ನೆವಾಡಾದ ಲಾಸ್ ವೆಗಾಸಿನಲ್ಲಿ ಫ್ಲೆಮಿಂಗೊ ಹಿಲ್ಟನ್ ಗೋಪುರಗಳ ಮಧ್ಯೆ ಬಿಗಿಯಾಗಿ ಕಟ್ಟಿದ್ದ ಹಗ್ಗದ ಮೇಲೆ ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಅವರು ನಡೆದರು. ಈ ಗೋಪುರಗಳ ನಡುವಣ ಅಂತರ 600 ಅಡಿಗಳು. 1981ರಲ್ಲಿ ಸ್ಟಂಟ್ ಮ್ಯಾನ್ ಗುಡ್ ವಿನ್ ಅವರು 100 ಮಹಡಿಗಳ ಕಟ್ಟಡವನ್ನು ಅದರ ಹೊರಭಾಗದ ಗೋಡೆಯ ಮೂಲಕ ಏರಿದರು. ಈ ಸಾಹಸಕ್ಕೆ ಅವರು 6 ಗಂಟೆಗಳನ್ನು ತೆಗೆದುಕೊಂಡರು.
2007: ಪಾಕಿಸ್ಥಾನದಲ್ಲಿ 2008ರ ಜನವರಿ 9ರಂದು ಸಾರ್ವತ್ರಿಕ ಚುನಾವಣೆಯನ್ನು ನಡೆಸುವುದಾಗಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಘೋಷಿಸಿದರು. ಚುನಾವಣೆ ಪ್ರಕ್ರಿಯೆ ನೋಡಿಕೊಳ್ಳಲು ಉಸ್ತುವಾರಿ ಸರ್ಕಾರ ನವೆಂಬರ್ 15ರಂದು ಅಸ್ತಿತ್ವಕ್ಕೆ ಬರಲಿದೆ ಎಂದು ಹೇಳಿದ ಅವರು 'ನಾನು ಅಧ್ಯಕ್ಷನಾಗಿ ಮತ್ತೊಂದು ಅವಧಿಗೆ ಪ್ರಮಾಣ ವಚನ ತೆಗೆದುಕೊಳ್ಳುವೆ. ಸೇನಾ ಮುಖ್ಯಸ್ಥನ ಸ್ಥಾನ ಬಿಟ್ಟುಕೊಡುವೆ' ಎಂದೂ ಪ್ರಕಟಿಸಿದರು. ತುರ್ತು ಪರಿಸ್ಥಿತಿ ಘೋಷಿಸಿದ 9 ದಿನಗಳ ನಂತರ ಮುಷರಫ್ ಈ ಘೋಷಣೆ ಮಾಡಿದರು.
2007: ಅಮೆರಿಕದ ನ್ಯೂಜೆರ್ಸಿ ಶಾಸನ ಸಭೆಯ ಉಪಾಧ್ಯಕ್ಷ ಉಪೇಂದ್ರ ಜೆ.ಚಿವುಕುಲ ಅವರಿಗೆ ಪ್ರತಿಷ್ಠಿತ ಅತ್ಯುತ್ತಮ ಶಾಸಕ ಪ್ರಶಸ್ತಿ ಸಂದಿದೆ ಎಂದು ನ್ಯೂಜೆರ್ಸಿ ರಾಜ್ಯ ವಾಣಿಜ್ಯ ಮಂಡಳಿ ಘೋಷಿಸಿತು. ಈ ಪ್ರಶಸ್ತಿ ಸ್ವೀಕರಿಸುವ ಒಟ್ಟು ನಾಲ್ಕು ಮಂದಿಯಲ್ಲಿ ಚಿವುಕುಲ ಅವರೂ ಒಬ್ಬರು.
2007: ಆಗ್ನೇಯ ಚೀನಾದ ಕಲ್ಲಿದ್ದಲು ಗಣಿಯಲ್ಲಿ ವಿಷಾನಿಲ ಸೋರಿಕೆಯಿಂದ ಸತ್ತವರ ಸಂಖ್ಯೆ 35ಕ್ಕೆ ಏರಿತು. ವಿಷಾನಿಲ ಸೋರಿಕೆ ಶುರುವಾದಾಗ ಒಟ್ಟು 86 ಗಣಿ ಕಾರ್ಮಿಕರು ಗಣಿಯಲ್ಲಿ ಸಿಕ್ಕಿಹಾಕಿಕೊಂಡಿದ್ದರು.
2007: ಇಂಡೋನೇಷ್ಯಾದ ಸುಮಾತ್ರ ದ್ವೀಪದಲ್ಲಿ ಲಘು ಭೂಕಂಪ ಸಂಭವಿಸಿತು. ರಿಕ್ಟರ್ ಮಾಪಕದಲ್ಲಿ 6.0ಯಷ್ಟು ತೀವ್ರತೆಯ ಈ ಭೂಕಂಪದಿಂದ ಪ್ರಾಣ ಮತ್ತು ಆಸ್ತಿಪಾಸ್ತಿಗಳಿಗೆ ಹಾನಿಯಾದ ವರದಿ ಬಂದಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿತು.
2006: `ಕೇರಾಫ್ ಫುಟ್ಪಾತ್' ಚಿತ್ರವನ್ನು ನಿರ್ದೇಶಿಸಿ, `ಅತ್ಯಂತ ಕಿರಿಯ ವಯಸ್ಸಿನ ನಿರ್ದೇಶಕ' ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದ 11ರ ಹರೆಯದ ಮಾಸ್ಟರ್ ಕಿಶನ್ ಗಿನ್ನೆಸ್ ದಾಖಲೆಗೆ ಸೇರ್ಪಡೆಯಾದ. ಈ ಕುರಿತು ಗಿನ್ನೆಸ್ನಿಂದ ಪತ್ರ ಬಂತು. ಕೊಳೆಗೇರಿ ಮಕ್ಕಳ ಕತೆ ಹೊಂದಿರುವ ಈ ಚಿತ್ರದಲ್ಲಿ ನಟರಾದ ಅಂಬರೀಷ್, ಸುದೀಪ್, ಬಾಲಿವುಡ್ ನಟ ಜಾಕಿ ಶ್ರಾಫ್ ನಟಿಸಿದ್ದಾರೆ.
2006: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರಿಗೆ ಬ್ರಸ್ಸೆಲ್ಸ್ ನಲ್ಲಿ ಬೆಲ್ಜಿಯಂನ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ `ಆರ್ಡರ್ ಆಫ್ ಲಿಯೋಪೋಲ್ಡ್' ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಷ್ಟ್ರೀಯ ಅಭಿವೃದ್ಧಿ, ಭಾರತದ ಬಹು ಸಂಸ್ಕೃತಿ, ಸಹನಶೀಲ ಸಮಾಜ ವ್ಯವಸ್ಥೆಯ ರಕ್ಷಣೆಗೆ ಶ್ರಮಿಸುತ್ತಿರುವ ಹಿನ್ನೆಲೆಯಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಈ ಸಂದರ್ಭದಲ್ಲಿ ತಿಳಿಸಲಾಯಿತು.
2006: ಎರಡು ವರ್ಷಗಳ ಹಿಂದೆ ಸುನಾಮಿ ದುರಂತದಲ್ಲಿ ತಾಯಿಯೊಡನೆ ಸಾವನ್ನಪ್ಪಿದ ಹುಬ್ಬಳ್ಳಿಯ ಶಾಲಾ ಬಾಲಕ ಶ್ರೇಯಸ್ ಪಾಟೀಲನಿಗೆ ಮರಣೋತ್ತರವಾಗಿ ರಾಜ್ಯ ಸರ್ಕಾರ ಶೌರ್ಯ ಪ್ರಶಸ್ತಿ ಘೋಷಿಸಿತು. 2004ರ ಡಿಸೆಂಬರಿನಲ್ಲಿ ವಾಸುದೇವ ಪಾಟೀಲ ಕುಟುಂಬ ಮತ್ತು ಗೆಳೆಯ ಶಶಿಧರ ಉಡುಪ ಕುಟುಂಬ ಕಡಲೂರಿಗೆ ಪ್ರವಾಸ ಹೋಗಿದ್ದಾಗ ಈ ದುರಂತ ಸಂಭವಿಸಿತ್ತು. ಡಿಸೆಂಬರ್ 26ರಂದು ದುರಂತ ಸಂಭವಿಸಿದಾಗ ಸಮುದ್ರ ತೀರದಲ್ಲಿದ್ದ ಈ ಕುಟುಂಬಗಳ ನಾಲ್ವರು ಸಮುದ್ರದದ ಅಲೆಯ ಮಧ್ಯೆ ಕೊಚ್ಚಿ ಹೋಗಿದ್ದರು. ತಾಯಿ ಸಂಧ್ಯಾ ಅವರನ್ನು ಉಳಿಸಲು ಯತ್ನಿಸಿದ ಶ್ರೇಯಸ್ ಹಾಗೂ ಶಶಿಧರ ಉಡುಪ ಅವರ ಪತ್ನಿ ಗೀತಾ ಪ್ರಾಣ ಕಳೆದುಕೊಂಡಿದ್ದರು. ಅವರ ಮಗ ಪ್ರಣಾಮ್ ಮತ್ತು ವಾಸುದೇವ ಪಾಟೀಲ ಮಾತ್ರ ಪಾರಾಗಿದ್ದರು.
2005: ಅಂಧರ ಬಾಳಿಗೆ ಆಶಾಕಿರಣವಾಗಿದ್ದ ಅಂತಾರಾಷ್ಟ್ರೀಯ ಖ್ಯಾತಿಯ ನೇತ್ರತಜ್ಞ ಡಾ. ಎಂ.ಸಿ. ಮೋದಿ (90) ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಅವರ ಇಚ್ಛೆಯಂತೆ ಅವರ ಎರಡೂ ಕಣ್ಣುಗಳನ್ನು ಲಯನ್ಸ್ ಕಣ್ಣಿನ ಆಸ್ಪತ್ರೆಗೆ ದಾನ ಮಾಡಲಾಯಿತು.
1992: ಕರ್ನಾಟಕದ ಮುಖ್ಯಮಂತ್ರಿ ಎಸ್. ಬಂಗಾರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.
1960: ಸಾಹಿತಿ ಸತ್ಯನಾರಾಯಣ ಉರಾಳ ಜನನ.
1958: ಸಾಹಿತಿ ಬಸವರಾಜ ಹುಡೇದಗಡ್ಡಿ ಜನನ.
1948: ಸಾಮಾಜಿಕ, ಚಾರಿತ್ರಿಕ ಸೇರಿದಂತೆ ಎಲ್ಲ ಪ್ರಾಕಾರಗಳಲ್ಲೂ ಕಾದಂಬರಿ ರಚಿಸಿ ಖ್ಯಾತಿ ಪಡೆದ ಕಾದಂಬರಿಕಾರ ರುದ್ರಮೂರ್ತಿ ಶಾಸ್ತ್ರಿ ಅವರು ಎಸ್.ಎನ್. ಶಿವರುದ್ರಯ್ಯ- ಸಿದ್ದಗಂಗಮ್ಮ ದಂಪತಿಯ ಮಗನಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸುಗ್ಗನಹಳ್ಳಿಯಲ್ಲಿ ಜನಿಸಿದರು.
1947: ಫಂಡರಪುರದ ವಿಠೋಬಾ ದೇವಾಲಯ ಪ್ರವೇಶಕ್ಕೆ ಹರಿಜನರಿಗೆ ಅವಕಾಶ ಲಭಿಸಿತು. ಗಣಪತರಾವ್ ತಾಪ್ಸೆ ಅವರು ದೇವಾಲಯ ಪ್ರವೇಶಿಸಿದ ಮೊತ್ತ ಮೊದಲ ಹರಿಜನ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
1944: ಸಾಹಿತಿ ಲಲಿತಾ ಬಿ. ರಾವ್ ಜನನ.
1942: ಸಾಹಿತಿ ಗಂಡಸಿ ವಿಶ್ವೇಶ್ವರ ಜನನ.
1938: ಇಪ್ಪತ್ತನೇ ಶತಮಾನದ ಆದಿಯಲ್ಲಿ ನ್ಯೂಯಾರ್ಕ್ ನಗರದಲ್ಲಿ `ಟೈಫಾಯಿಡ್ ವಾಹಕಿ' ಎಂಬುದಾಗಿಯೇ ಹೆಸರು ಪಡೆದ ಮೇರಿ ಮಲ್ಲೊನ್ (1870-1938) ಮೃತಳಾದಳು. 51 ಟೈಫಾಯಿಡ್ ಪ್ರಕರಣಗಳಿಗೆ ನೇರವಾಗಿ ಈಕೆ ಕಾರಣಳಾಗಿದ್ದು, ಮೂರು ಸಾವುಗಳೂ ನೇರವಾಗಿ ಈಕೆಯಿಂದ ಟೈಫಾಯಿಡ್ ಹರಡಿದ ಪರಿಣಾಮವಾಗಿಯೇ ಸಂಭವಿಸಿವೆ. (ಈಕೆಯ ಮೂಲಕ ಪರೋಕ್ಷವಾಗಿ ರೋಗ ಹರಡಿದ ಪ್ರಕರಣಗಳು ಅಸಂಖ್ಯಾತ). ಇಷ್ಟೆಲ್ಲ ಮಂದಿಗೆ ರೋಗ ತಗುಲಿಸಿದರೂ ಈಕೆಗೆ ಮಾತ್ರ ಟೈಫಾಯಿಡ್ ರೋಗಾಣುಗಳಿಂದ ಏನೂ ತೊಂದರೆ ಆಗಿರಲಿಲ್ಲ.
1918: ಫ್ರಾನ್ಸಿನ ಕಾಂಪಿಗ್ನೆ ಅರಣ್ಯದ ನಡುವೆ ಮಿತ್ರ ಪಡೆಗಳ ಕಮಾಂಡರ್ ಮಾರ್ಷಲ್ ಫರ್ಡಿನಾಂಡ್ ಫೋಕ್ ಅವರ ರೈಲ್ವೇ ಬೋಗಿಯಲ್ಲಿ ಆರ್ಮಿಸ್ಟೀಸ್ ಗೆ ಸಹಿ ಮಾಡುವುದರೊಂದಿಗೆ ಮೊದಲನೆಯ ವಿಶ್ವ ಸಮರ ಕೊನೆಗೊಂಡಿತು. ಈ ದಿನವನ್ನು `ಆರ್ಮಿಸ್ಟೀಸ್ ದಿನ' ಎಂಬುದಾಗಿ ಕರೆಯಲಾಗಿದೆ. ಈ ರೈಲ್ವೇ ಬೋಗಿಯನ್ನು ಸ್ಮಾರಕವಾಗಿ ಸಂರಕ್ಷಿಸಿ ಇಡಲಾಗಿದೆ.
1888: ಭಾರತರತ್ನ ಪ್ರಶಸ್ತಿ ಪುರಸ್ಕೃತ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಮೌಲಾನಾ ಅಬುಲ್ ಕಲಂ ಅಜಾದ್ ಅವರು ಹುಟ್ಟಿದ ದಿನ. ಅವರು ಈದಿನ ಹುಟ್ಟಿದ್ದು ಮೆಕ್ಕಾದಲ್ಲಿ. ಅವರ ತಂದೆ ಮೌಲಾನಾ ಕೈರುದ್ದೀನ್ 1890ರಲ್ಲಿ ಕೋಲ್ಕತ್ತಾಕ್ಕೆ ಬಂದು ನೆಲೆಸಿದರು. ಹೀಗಾಗಿ ಭಾರತ ಅಜಾದ್ ಅವರ ಕರ್ಮಭೂಮಿಯಾಯಿತು.
1888: ಸ್ವಾತಂತ್ರ್ಯ ಸೇನಾನಿ, ಮಾಜಿ ಸಂಸದ ಆಚಾರ್ಯ ಕೃಪಲಾನಿ ಜನನ.
1675: ಸಿಕ್ಖರ 9ನೇ ಗುರುಗಳಾದ ಗುರು ತೇಗ್ ಬಹದೂರ್ (1621-1675) ಅವರನ್ನು ಇಸ್ಲಾಮಿಗೆ ಮತಾಂತರಗೊಳ್ಳಲು ನಿರಾಕರಿಸಿದ್ದಕ್ಕಾಗಿ ದೆಹಲಿಯಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬ್ ಮರಣದಂಡನೆಗೆ ಗುರಿಪಡಿಸಿದ. ಈ ಘಟನೆ ನಡೆದಾಗ ತೇಗ್ ಬಹದೂರ್ ಅವರ ಪುತ್ರ ಗೋಬಿಂದ್ ಸಿಂಗ್ ವಯಸ್ಸು ಕೇವಲ 9 ವರ್ಷ.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment