ಗ್ರಾಹಕರ ಸುಖ-ದುಃಖ

My Blog List

Wednesday, November 26, 2008

ಇಂದಿನ ಇತಿಹಾಸ History Today ನವೆಂಬರ್ 24

ಇಂದಿನ ಇತಿಹಾಸ

ನವೆಂಬರ್ 24

ಇಂಗ್ಲೆಂಡಿನಲ್ಲಿ ಭಾರತೀಯ ರಾಯಭಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಕಮಲೇಶ್ ಶರ್ಮಾ ಅವರು ಕಾಮನ್ವೆಲ್ತ್ ಒಕ್ಕೂಟದ ನೂತನ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಉಗಾಂಡದ ಕಂಪಾಲಾದಲ್ಲಿ ನಡೆದ ಕಾಮನ್ವೆಲ್ತ್ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳ ಸಭೆಯಲ್ಲಿ 66 ವರ್ಷದ ಐ ಎಫ್ ಎಸ್ ಅಧಿಕಾರಿ ಕಮಲೇಶ್ ಅವರನ್ನು ಈ ಮಹತ್ವದ ಹುದ್ದೆಗೆ ಬಹುಮತದಿಂದ ಆಯ್ಕೆ ಮಾಡಲಾಯಿತು.

2007: ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಬಿ. ಶ್ರೀನಿವಾಸರೆಡ್ಡಿ ಅವರ ಬೆಂಗಳೂರು, ಆನೆಕಲ್ಲಿನ ಮನೆ ಮತ್ತು ಕಚೇರಿ ಮೇಲೆ ಈದಿನ ಬೆಳಗ್ಗೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು 20 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಅಕ್ರಮ ಆಸ್ತಿಯನ್ನು ಪತ್ತೆ ಹಚ್ಚಿದರು. ಖಚಿತ ಮಾಹಿತಿಯನ್ನು ಆಧರಿಸಿ ರೆಡ್ಡಿ ಅವರ ಸದಾಶಿವನಗರದ ನಿವಾಸ, ಅವರ ಅತ್ತೆ (ಪತ್ನಿಯ ತಾಯಿ) ಚೌಡಮ್ಮ ಅವರ ಇಂದಿರಾನಗರದ ನಿವಾಸ ಮತ್ತು ಬೆಂಗಳೂರು ಉತ್ತರ ತಾಲ್ಲೂಕಿನ ತಿರುಮಗೊಂಡನಹಳ್ಳಿಯ ರಮಣ ಮಹರ್ಷಿ ಸೇವಾ ಟ್ರಸ್ಟ್ ಕಚೇರಿಯ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ನಗದು, ಬ್ಯಾಂಕ್ ಖಾತೆಗಳು ಮತ್ತು ಸ್ಥಿರಾಸ್ತಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ವಶಪಡಿಸಿಕೊಂಡರು. ಆದಾಯಕ್ಕಿಂತ 57 ಪಟ್ಟು ಅಧಿಕ ಆಸ್ತಿಪಾಸ್ತಿ ಶ್ರೀನಿವಾರ ರೆಡ್ಡಿ ಅವರ ಬಳಿ ದೊರಕಿತು. ಅವರ ಒಟ್ಟು ಸೇವಾ ಅವಧಿಯಲ್ಲಿ ಸರ್ಕಾರದಿಂದ ಪಡೆದ ಸಂಬಳ ಮತ್ತು ಇತರೆ ಸೌಲಭ್ಯಗಳ ಮೊತ್ತ ಕೇವಲ ರೂ 35 ಲಕ್ಷ! ಅದರೆ ದಾಳಿ ಕಾಲದಲ್ಲಿ ಪತ್ತೆಯಾದದ್ದು 20 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಮೌಲ್ಯದ ಆಸ್ತಿಪಾಸ್ತಿ ಎಂದು ಲೋಕಾಯುಕ್ತ ಸಂತೋಷ ಹೆಗ್ಡೆ ಹೇಳಿದರು.

2007: ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಆದಿವಾಸಿ ವಿದ್ಯಾರ್ಥಿಗಳ ಸಂಘಟನೆ ಅಸ್ಸಾಮಿನ ಗುವಾಹಟಿಯಲ್ಲಿ ನಡೆಸಿದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ, ಅದನ್ನು ನಿಯಂತ್ರಿಸಲು ಪೊಲೀಸರು ನಡೆಸಿದ ಗೋಲಿಬಾರಿಗೆ ಐವರು ಬಲಿಯಾದರು. ರಾಜ್ಯದ 2.6 ಕೋಟಿ ಜನ ಸಂಖ್ಯೆಯಲ್ಲಿ ಶೇ 6 ರಷ್ಟಿರುವ ಸಂತಲ್ ಆದಿವಾಸಿಗಳು ಬಹುತೇಕ ಚಹಾ ತೋಟಗಳಲ್ಲಿ ಕೆಲಸ ಮಾಡುವವರು. ತಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಕಳೆದ ಹಲವಾರು ವರ್ಷಗಳಿಂದ  ಹೋರಾಟ ನಡೆಸಿದ್ದು, ಇದೇ ಆಗ್ರಹ ಮುಂದಿಟ್ಟು ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದ್ದರು.

2007: ಜೈಪುರದಿಂದ ನವದೆಹಲಿಗೆ ಕರೆತರಲಾದ ಬಾಂಗ್ಲಾದೇಶದ ವಿವಾದಿತ ಲೇಖಕಿ ತಸ್ಲಿಮಾ ನಸ್ರೀನ್ ಅವರನ್ನು ರಾಜಸ್ಥಾನ ಹೌಸಿನಲ್ಲಿ ಇರಿಸಿ ದೆಹಲಿ ಹಾಗೂ ರಾಜಸ್ಥಾನೀ ಪೊಲೀಸರು ಬಿಗಿ ಭದ್ರತೆ ಒದಗಿಸಿದರು. ಅತಿಥಿ ಗೃಹಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಯಿತು. `ಲಜ್ಜಾ' ಪುಸ್ತಕ ಬರೆದು ತಸ್ಲಿಮಾ  ಮುಸ್ಲಿಂ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾದರು.

2007: ಪಾಕಿಸ್ಥಾನದ ರಾವಲ್ಪಿಂಡಿ ಹಾಗೂ ಆಪ್ಘಾನಿಸ್ಥಾನದ ಕಾಬೂಲಿನಲ್ಲಿ ಸಂಭವಿಸಿದ ಪ್ರತ್ಯೇಕ  ಆತ್ಮಹತ್ಯಾ ದಾಳಿಗಳಲ್ಲಿ ಒಟ್ಟು 39ಮಂದಿ ಮೃತರಾದರು. ರಾವಲ್ಪಿಂಡಿಯಲ್ಲಿ 30 ಜನ, ಕಾಬೂಲಿನಲ್ಲಿ 9 ಮಂದಿ ಸಾವನ್ನಪ್ಪಿದರು.

2007: ಹುಬ್ಬಳ್ಳಿ - ಧಾರವಾಡ ಅವಳಿ ನಗರದ ಕೆಲವೆಡೆ ಈದಿನ ಸಂಜೆ ಲಘು ಭೂಕಂಪದ ಅನುಭವವಾಯಿತು. ಸಂಜೆ 5ರ ಸುಮಾರಿಗೆ ಮನೆಗಳಲ್ಲಿ ಮೇಜು, ಕುರ್ಚಿ, ಪಾತ್ರೆಗಳು ಅಲುಗಾಡಿದ ಅನುಭವವಾಯಿತು.

2007: ವಿಚಾರವಾದಿ ದಿವಂಗತ ಕೆ.ರಾಮದಾಸ್ ಅವರ ಪತ್ನಿ ಆರ್. ನಿರ್ಮಲ (59) ದೀರ್ಘಕಾಲದ ಅನಾರೋಗ್ಯದಿಂದಾಗಿ ಮೈಸೂರಿನ ನಿವಾಸದಲ್ಲಿ ನಿಧನರಾದರು. ಕೆಲವು ತಿಂಗಳ ಹಿಂದೆಯಷ್ಟೆ ಪತಿ ಕೆ.ರಾಮದಾಸ್ ತೀರಿಕೊಂಡಿದ್ದರು. ಮೂರು ದಶಕಗಳ ಕಾಲ ಕನ್ನಡ ಅಧ್ಯಾಪಕಿಯಾಗಿ ಕೆಲಸ  ಮಾಡಿ ನಿವೃತ್ತಿಹೊಂದಿದ್ದ ನಿರ್ಮಲ ತಮ್ಮ ಪತಿಯೊಂದಿಗೆ ಸೇರಿ ನಾಡಿನ ಹಲವಾರು ಪ್ರಗತಿಪರ ಹೋರಾಟಗಳಲ್ಲಿ ಪಾಲ್ಗೊಂಡಿದ್ದರು. ನಿರ್ಮಲ ಅವರ  `ಚಲ್ ಮೇರಿ ಲೂನಾ' ಎಂಬ ಲಲಿತ ಪ್ರಬಂಧ ಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು. ಪಚ್ಚೆಪೈರು (ಮಕ್ಕಳ  ಸಾಹಿತ್ಯ), ಉರಿವ ಒಲೆಗಳ ಮುಂದೆ (ಕವನ ಸಂಕಲನ) ಪ್ರಕಟವಾಗಿವೆ.  

2007: ಇಂಗ್ಲೆಂಡಿನಲ್ಲಿ ಭಾರತೀಯ ರಾಯಭಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಕಮಲೇಶ್ ಶರ್ಮಾ ಅವರು ಕಾಮನ್ವೆಲ್ತ್ ಒಕ್ಕೂಟದ ನೂತನ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಉಗಾಂಡದ ಕಂಪಾಲಾದಲ್ಲಿ ನಡೆದ ಕಾಮನ್ವೆಲ್ತ್ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳ ಸಭೆಯಲ್ಲಿ 66 ವರ್ಷದ ಐ ಎಫ್ ಎಸ್ ಅಧಿಕಾರಿ ಕಮಲೇಶ್ ಅವರನ್ನು ಈ ಮಹತ್ವದ ಹುದ್ದೆಗೆ ಬಹುಮತದಿಂದ ಆಯ್ಕೆ ಮಾಡಲಾಯಿತು.

2007: ಅಂಟಾರ್ಟಿಕ್ ಸಾಗರದಲ್ಲಿ ಮುಳುಗುತ್ತಿದ್ದ ಹಡಗಿನಿಂದ ಬಹುತೇಕ ಎಲ್ಲ 154 ಪ್ರಯಾಣಿಕರು ಹಾಗೂ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾದರು ಎಂದು ಬ್ರಿಟಿಷ್ ಕರಾವಳಿ ರಕ್ಷಣಾ ಪಡೆ ವಕ್ತಾರ ಆ್ಯಂಡಿ ಕಟ್ರೆಲ್ ತಿಳಿಸಿದರು. 154 ಮಂದಿಯನ್ನು ರಕ್ಷಿಸಲು ಅರ್ಜೆಂಟೀನಾ ಹಾಗೂ ಅಮೆರಿಕಾ ಕರಾವಳಿ ರಕ್ಷಣಾ ಪಡೆ ಸಿಬ್ಬಂದಿ ನೆರವು ನೀಡಿದರು.

2006: ಕೆನ್ ಶಾಲೆಯ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘವು ಖ್ಯಾತ ಕಲಾವಿದ ಆರ್. ಎಂ. ಹಡಪದ್ ಹೆಸರಿನಲ್ಲಿ ನೀಡುವ ಪ್ರಶಸ್ತಿಯು ಕೆನ್ ಕಲಾ ಶಾಲೆಯ ಪ್ರಾಚಾರ್ಯ ಹಾಗೂ ಕಲಾವಿದ ಜಿ.ಎಂ.ಎನ್. ಮಣಿ ಅವರಿಗೆ ಲಭಿಸಿತು.

2006: ಭೋಪಾಲಿನಿಂದ 30 ಕಿ.ಮೀ. ದೂರದ ಭೋಜಪುರದಲ್ಲಿ ಪರ್ಮಾರ್ ರಾಜಮನೆತನದ ರಾಜಾ ಭೋಜಪಾಲ್ ನಿರ್ಮಿಸಿ ಕಾರಣಾಂತರಗಳಿಂದ ಅಪೂರ್ಣವಾಗಿ ಬಿಟ್ಟಿದ್ದ ಒಂದು ಸಹಸ್ರ ವರ್ಷಗಳ ಹಿಂದಿನ ಶಿವ ದೇವಸ್ಥಾನವನ್ನು ಭಾರತೀಯ ಸರ್ವೇಕ್ಷಣಾಲಯ ಇಲಾಖೆಯು ಪೂರ್ಣಗೊಳಿಸಿತು. ರಾಷ್ಟ್ರದಲ್ಲೇ ಅತ್ಯಂತ ದೊಡ್ಡದಾದ ಈ ದೇವಸ್ಥಾನವು ಕಳೆದ 1000 ವರ್ಷಗಳಿಂದ ಛಾವಣಿ ಇಲ್ಲದೆ ನಿಂತಿತ್ತು. ಸ್ಥಂಭಗಳ ಕೆಲಸವೂ ಅಪೂರ್ಣವಾಗಿತ್ತು. ಶಿವಲಿಂಗ ಬಿಸಿಲಿಗೆ ಒಣಗಿ ಮಳೆಗೆ ನೆನೆಯುತ್ತಿತ್ತು.

2006: ಭಾರತೀಯ ಏರೋನಾಟಿಕಲ್ ಎಂಜಿನಿಯರ್ ಬೆಂಗಳೂರಿನ ಜೋಸೆಫ್ ಪಿಚಮುತ್ತು ಅವರು ವಿಮಾನಗಳ ಸುರಕ್ಷಿತ ಭೂಸ್ಪರ್ಶಕ್ಕೆ ಅನುವು ಮಾಡುವ ಉಪಕರಣವೊಂದನ್ನು ಸಂಶೋಧಿಸಿರುವುದಾಗಿ ಪ್ರಕಟಿಸಿದರು. ಹವಾಮಾನ ವೈಪರೀತ್ಯಗಳ ನಡುವೆಯೂ ವಿಮಾನ ಭೂಸ್ಪರ್ಶ ಮಾಡಬೇಕಿರುವ ರನ್ ವೇ ನಡುವಿನ ಅಂತರವನ್ನು ಈ ಉಪಕರಣದ ಮೂಲಕ ನಿಖರವಾಗಿ ತಿಳಿಯಬಹುದು. ಇದರಿಂದ ಸುರಕ್ಷಿತ ಭೂಸ್ಪರ್ಶ ಮಾಡಲು ಪೈಲಟ್ ಗೆ ಅನುಕೂಲವಾಗುತ್ತದೆ.

2005: ಎನ್ ಡಿ ಎ ನಾಯಕ ನಿತೀಶ್ ಕುಮಾರ್ ಅವರು ಪಟ್ನಾದ ಚಾರಿತ್ರಿಕ ಗಾಂಧಿ ಮೈದಾನದಲ್ಲಿ ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಇದರೊಂದಿಗೆ ಎಂಟೂವರೆ ತಿಂಗಳ ರಾಷ್ಟ್ರಪತಿ ಆಡಳಿತ ಕೊನೆಗೊಂಡು ಜೆಡಿ (ಯು)-ಬಿಜೆಪಿ ಮೈತ್ರಿಕೂಟದ ಆಡಳಿತ ಆರಂಭಗೊಂಡಿತು.

2005: ಸರ್ಕಾರಿ ಸ್ವಾಮ್ಯದ ಎನ್ ಜಿ ಇ ಎಫ್ ಕಾರ್ಖಾನೆಗೆ ಬೀಗಮುದ್ರೆ ಘೋಷಿಸಿ ಆಸ್ತಿ ಮಾರಾಟ ಮಾಡುವ ನಿರ್ಧಾರವನ್ನು ಕೈಬಿಡಲು ಕರ್ನಾಟಕ ಸಚಿವ ಸಂಪುಟ ನಿರ್ಧರಿಸಿತು.

1992: ಲೋಕಸಭೆ ಅಧಿವೇಶನವು ವಂದೇ ಮಾತರಂನಿಂದ ಆರಂಭಗೊಂಡು ಜನಗಣಮನದೊಂದಿಗೆ ಅಂತ್ಯಗೊಳ್ಳುವಂತೆ ನಿರ್ಣಯ ಕೈಗೊಳ್ಳಲಾಯಿತು.

1991: ಬ್ರಿಟಿಷ್ ರಾಕ್ ಗ್ರೂಪಿನ ಸಂಗೀತ ರಾಣಿ ಫ್ರೆಡ್ಡೀ ಮರ್ಕ್ಯೂರಿ ಲಂಡನ್ನಿನಲ್ಲಿ ಏಡ್ಸ್ ಪರಿಣಾಮವಾಗಿ ತನ್ನ 45ನೇ ವಯಸ್ಸಿನಲ್ಲಿ ಮೃತರಾದರು.

1969: ಚಂದ್ರ ಗ್ರಹಕ್ಕೆ ಎರಡನೇ ಯಾತ್ರೆಯನ್ನು ಮುಗಿಸಿದ ಅಪೋಲೊ 12 ಗಗನನೌಕೆ ಕ್ಷೇಮವಾಗಿ ಪೆಸಿಫಿಕ್ ಸಾಗರಕ್ಕೆ ಬಂದಿಳಿಯಿತು.

1961: ಖ್ಯಾತ ಲೇಖಕಿ, ಪರಿಸರ ಚಿಂತಕಿ ಅರುಂಧತಿ ರಾಯ್ ಹುಟ್ಟಿದ ದಿನ. ಅವರ ಕಾದಂಬರಿ `ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್' (ಕ್ಷುದ್ರದೇವತೆ) ಪುಸ್ತಕಕ್ಕೆ ಬೂಕರ್ ಪ್ರಶಸ್ತಿ ಲಭಿಸಿದೆ.

1952: ಮಾಜಿ ಕ್ರಿಕೆಟ್ ಆಟಗಾರ ಬ್ರಿಜೇಶ್ ಪಟೇಲ್ ಹುಟ್ಟಿದ ದಿನ. 

1926: ಶ್ರೀ ಅರಬಿಂದೊ ಘೋಷ್ ಅವರು ಪಾಂಡಿಚೇರಿಯಲ್ಲಿ `ಪೂರ್ಣಸಿದ್ಧಿ' ಪಡೆದರು. ಈ ದಿನವನ್ನು ಶ್ರೀ ಅರಬಿಂದೋ ಆಶ್ರಮ ಸ್ಥಾಪನಾ ದಿನ ಎಂಬುದಾಗಿ  ಪರಿಗಣಿಸಲಾಗಿದೆ.

1924: ಖ್ಯಾತ ವ್ಯಂಗ್ಯಚಿತ್ರಕಾರ ರಾಸಿಪುರಂ ಕೃಷ್ಣಸ್ವಾಮಿ ಲಕ್ಷ್ಮಣ್ (ಆರ್. ಕೆ. ಲಕ್ಷ್ಮಣ್) ಹುಟ್ಟಿದ ದಿನ. ಇವರು ಖ್ಯಾತ ಕಾದಂಬರಿಕಾರ ಆರ್. ಕೆ. ನಾರಾಯಣ್ ಅವರ ಸಹೋದರ. ಲಕ್ಷ್ಮಣ್ ಅವರ ಸೃಷ್ಟಿ `ಕಾಮನ್ ಮ್ಯಾನ್' ತುಂಬ ಜನಪ್ರಿಯ.

1917: ಐತಿಹಾಸಿಕ ಕಾದಂಬರಿಕಾರರೆಂದೇ ಖ್ಯಾತರಾಗಿದ್ದ ಸಮೇತನಹಳ್ಳಿ ರಾಮರಾಯರು (24-11-1917ರಿಂದ 5-1-1999) ಶ್ರೀನಿವಾಸರಾವ್- ರುಕ್ಮಿಣಿಯಮ್ಮ ದಂಪತಿಯ ಮಗನಾಗಿ ಬೆಂಗಳೂರು ಜಿಲ್ಲೆ ಹೊಸಕೋಟೆಯ ಸಮೇತನಹಳ್ಳಿಯಲ್ಲಿ ಜನಿಸಿದರು.

1896: ಸಂಸ್ಕೃತ ವಿದ್ವಾಂಸ ಕ್ಷಿತಿಶ್ ಚಂದ್ರ ಚಟರ್ಜಿ (1896-1961) ಹುಟ್ಟಿದ ದಿನ.

1859: ಚಾರ್ಲ್ಸ್ ಡಾರ್ವಿನ್ ಅವರ `ಆನ್ ದಿ ಒರಿಜಿನ್ ಆಫ್ ಸ್ಪೀಸೀಸ್' ಪುಸ್ತಕ ಪ್ರಕಟಗೊಂಡಿತು. ಈ ಪುಸ್ತಕ ಡಾರ್ವಿನ್ ಅವರ ವಿಕಾಸವಾದವನ್ನು ವಿವರಿಸುತ್ತದೆ. ಮೊದಲ ಆವೃತ್ತಿಯ ಎಲ್ಲ 1250 ಪ್ರತಿಗಳು ಪ್ರಕಟವಾದ ದಿನವೇ ಮಾರಾಟವಾಗಿ ಹೋದವು.

1642: ಟಾಸ್ಮಾನಿಯಾವನ್ನು ಡಚ್ ಸಂಶೋಧಕ ಅಬೆಲ್ ಟಾಸ್ಮನ್ ಪತ್ತೆ ಹಚ್ಚಿದ. ಈ ಭೂಪ್ರದೇಶಕ್ಕೆ ಆತ ವ್ಯಾನ್ ಡೇಮಿನ್ಸ್ ಲ್ಯಾಂಡ್ ಎಂಬುದಾಗಿ ಡಚ್ ಈಸ್ಟ್ ಇಂಡೀಸ್ ನ ಗವರ್ನರ್ ಜನರಲನ ಹೆಸರನ್ನು ಇಟ್ಟ. ವ್ಯಾನ್ ಡೇಮಿನ್ಸ್ ಆತನ ಸಂಶೋಧನೆಗೆ ನೆರವು ನೀಡಿದ ವ್ಯಕ್ತಿ. 1853ರಲ್ಲಿ ಇದಕ್ಕೆ `ಟಾಸ್ಮಾನಿಯಾ' ಎಂಬುದಾಗಿ ಮರುನಾಮಕರಣ ಮಾಡಲಾಯಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement