Tuesday, November 25, 2008

ಇಂದಿನ ಇತಿಹಾಸ History Today ನವೆಂಬರ್ 23

ಇಂದಿನ ಇತಿಹಾಸ

ನವೆಂಬರ್ 23

ಭಾರತದ ಸಸ್ಯವಿಜ್ಞಾನಿ ಹಾಗೂ ಭೌತವಿಜ್ಞಾನಿ ಸರ್. ಜಗದೀಶ ಚಂದ್ರ ಬೋಸ್ (1858-1937) ಅವರು ತಮ್ಮ 79ನೇ ಹುಟ್ಟು ಹಬ್ಬಕ್ಕೆ ಒಂದು ವಾರ ಮೊದಲು ನಿಧನರಾದರು.

2007: ಸರಣಿ ಭಯೋತ್ಪಾದನಾ ಕೃತ್ಯಗಳಿಂದ ಉತ್ತರ ಪ್ರದೇಶ ತತ್ತರಿಸಿತು. ವಾರಣಾಸಿ, ಫೈಜಾಬಾದ್ ಮತ್ತು ಲಖನೌ ಸಿವಿಲ್ ನ್ಯಾಯಾಲಯಗಳ ಆವರಣಗಳಲ್ಲಿ ಈದಿನ ಮಧ್ಯಾಹ್ನ ಸಂಭವಿಸಿದ ಸರಣಿ ಬಾಂಬ್ ಸ್ಫೋಟಗಳಲ್ಲಿ ಕೆಲವು ವಕೀಲರು ಸೇರಿ 14 ಜನ ಮೃತರಾಗಿ, ಇತರ 65ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ತಮ್ಮ ಪರವಾಗಿ ವಾದಿಸಲು ನಿರಾಕರಿಸಿದ ವಕೀಲ ಸಮುದಾಯದ ಮೇಲೆ ಪ್ರತೀಕಾರ ತೆಗೆದುಕೊಳ್ಳಲು ಉಗ್ರರು ಈ ಸ್ಫೋಟ ನಡೆಸಿದ್ದಾರೆ ಎಂದು ಪೊಲೀಸರು ಶಂಕಿಸಿದರು. 2006ರ ಬಳಿಕ ಸಂಭವಿಸಿದ ಪ್ರಮುಖ ಬಾಂಬ್ ಸ್ಫೋಟಗಳು: 3ನೇ ಮಾರ್ಚ್ 2006: ಉತ್ತರ ಪ್ರದೇಶದ ವಾರಣಾಸಿಯಲ್ಲಿ ಮೂರು ಬಾಂಬ್ ಸ್ಫೋಟ-  28 ಜನರ ಸಾವು. 14ನೇ ಏಪ್ರಿಲ್ 2006: ಹಳೆ ದೆಹಲಿಯ ಮಸೀದಿಯೊಂದರಲ್ಲಿ ಶಕ್ತಿಶಾಲಿಯಲ್ಲದ ಬಾಂಬ್ ಸ್ಫೋಟ. 11ನೇ ಜುಲೈ 2006: ಮುಂಬೈ ಸ್ಥಳೀಯ ರೈಲು ಜಾಲದ ನಿಲ್ದಾಣ, ಮಾರ್ಗಗಳಲ್ಲಿ 11 ನಿಮಿಷಗಳಲ್ಲಿ 7 ಬಾಂಬ್ಗಳ ಸ್ಫೋಟ- 209 ಜನರ ಸಾವು. 8ನೇ ಸೆಪ್ಟೆಂಬರ್ 2006: ಮಹಾರಾಷ್ಟ್ರದ ಮಾಲೆಗಾಂವ್ ಪಟ್ಟಣದ ಮೂರು ಕಡೆ ಏಕಕಾಲದಲ್ಲಿ ಬಾಂಬ್ ಸ್ಫೋಟ - 38 ಜನರ ಸಾವು. 19ನೇ ಫೆಬ್ರುವರಿ 2007: ದೆಹಲಿ ಮತ್ತು ಲಾಹೋರ್ ನಡುವೆ ಓಡಾಡುವ ಸಮ್ ಜೋತಾ ಎಕ್ಸ್ ಪ್ರೆಸ್ ರೈಲಿನಲ್ಲಿ ಸ್ಫೋಟ, ಪರಿಣಾಮವಾಗಿ ಅಗ್ನಿದುರಂತ-  68 ಜನರ ಸಾವು. 18 ಮೇ 2007:  ಹೈದರಾಬಾದಿನ ಐತಿಹಾಸಿಕ ಮೆಕ್ಕಾ ಮಸೀದಿಯಲ್ಲಿ ಬಾಂಬ್ ಸ್ಫೋಟ- 9 ಸಾವು, ಪೊಲೀಸ್ ಗೋಲಿಬಾರಿಗೆ 5 ಜನರ ಬಲಿ. 26 ಆಗಸ್ಟ್ 2007:  ಹೈದರಾಬಾದಿನ ಜನಪ್ರಿಯ ಚಾಟ್ ಸೆಂಟರ್ ಹಾಗೂ ವಿಹಾರ ತಾಣ ಲುಂಬಿಣಿ ಉದ್ಯಾನದಲ್ಲಿ ಸರಣಿ ಸ್ಫೋಟ-  42 ಜನರ ಸಾವು 

2007: ಹತ್ತು ಮಂದಿ ಮಹನೀಯರಿಗೆ `ಆಳ್ವಾಸ್ ನುಡಿಸಿರಿ ಪ್ರಶಸ್ತಿ' ಯನ್ನು ಪ್ರಕಟಿಸಲಾಯಿತು. ಪ್ರಶಸ್ತಿಗೆ ಪಾತ್ರರಾದವರು: ಡಾ. ಮತ್ತೂರು ಕೃಷ್ಣಮೂರ್ತಿ, (ಕನ್ನಡ ಸಂಸ್ಕೃತಿ ಪ್ರಸರಣ), ಪ್ರೊ. ಅ.ರಾ.ಮಿತ್ರ (ಸಾಹಿತ್ಯ), ಕೆ.ಎಸ್.ಅಶ್ವತ್ಥ್ (ಚಲನಚಿತ್ರ), ಎಂ.ಬಿ.ಸಿಂಗ್ (ಪತ್ರಿಕೋದ್ಯಮ). ಬಿ.ಎಂ.ಇದಿನಬ್ಬ (ಕನ್ನಡ ಚಳವಳಿ), ಡಾ. ಪಿ.ಎಸ್. ಶಂಕರ್ (ವೈದ್ಯಕೀಯ ಸಾಹಿತ್ಯ), ಆನಂದ ಗಾಣಿಗ (ರಂಗಭೂಮಿ, ಸಂಘಟನೆ), ಪ್ರೊ. ಸುನೀತಾ ಶೆಟ್ಟಿ (ಹೊರನಾಡು, ಕನ್ನಡ ಸಾಹಿತ್ಯ), ಕರ್ನೂರು ಕೊರಗಪ್ಪ ರೈ (ಯಕ್ಷಗಾನ) ಮತ್ತು ಪ್ರೇಮಾ ಭಟ್ (ಸಾಹಿತ್ಯ).

2007: ಮಾಂಡೊವಿ ನದಿಗೆ ತಾಗಿಕೊಂಡಂತಿರುವ ಪಣಜಿಯ ಕಲಾ ಅಕಾಡೆಮಿಯ ಸಭಾಂಗಣದಲ್ಲಿ ಈದಿನ ಸಂಜೆ ಜರುಗಿದ ಸರಳ, ಸುಂದರ ಸಮಾರಂಭದಲ್ಲಿ ಯುವ ಪೀಳಿಗೆಯ ಮೆಚ್ಚಿನ ನಟ ಶಾರುಖ್ ಖಾನ್, 38ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಿದರು.

2007: ಕೋಲ್ಕತ್ತ ಗಲಭೆಗಳ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ವಿವಾದಾತ್ಮಕ ಬರಹಗಾರ್ತಿ ತಸ್ಲಿಮಾ ನಸ್ರೀನ್ ಅವರನ್ನು ಜೈಪುರದಿಂದ ದೆಹಲಿಗೆ ಕರೆದೊಯ್ಯಲಾಯಿತು.

2007: 59 ಮಂದಿಯನ್ನು ಬಲಿ ತೆಗೆದುಕೊಂಡಿದ್ದ 1997ರ ಉಪಾಹಾರ್ ಚಿತ್ರ ಮಂದಿರ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ಚಿತ್ರ ಮಂದಿರದ ಮಾಲೀಕರಾದ ಸುಶೀಲ್ ಅನ್ಸಾಲ್ ಮತ್ತು ಗೋಪಾಲ್ ಅನ್ಸಾಲ್ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಹಾಗೂ ಚಿತ್ರಮಂದಿರಕ್ಕೆ ಲೈಸೆನ್ಸ್ ನೀಡಿದ್ದ ಡಿಸಿಪಿ ವಿರುದ್ಧ ಹೊಸದಾಗಿ ತನಿಖೆ ನಡೆಸುವಂತೆ ಸಿಬಿಐಗೆ ಆದೇಶ ನೀಡಲಾಯಿತು.

2007: ರಾಷ್ಟ್ರದಲ್ಲಿ ತುರುಸ್ಥಿತಿ ಹೇರಿದ ಪಾಕಿಸ್ಥಾನವನ್ನು ಕಾಮನ್ವೆಲ್ತ್ ರಾಷ್ಟ್ರಗಳ ಸಚಿವರ ಸಮಾವೇಶವು ತನ್ನ 53 ರಾಷ್ಟ್ರಗಳ ಒಕ್ಕೂಟದಿಂದ ಅಮಾನತುಗೊಳಿಸಿತು.

2006: ದೆಹಲಿಯ ಸುಮಾರು 18,000 ಮಂದಿ ವರ್ತಕರು ಮತ್ತು ವೃತ್ತಿ ನಿರತರಿಗೆ ವಸತಿ ಪ್ರದೇಶಗಳಲ್ಲಿನ ಅಕ್ರಮ ವಾಣಿಜ್ಯ ಕಟ್ಟಡಗಳ ಬೀಗಮುದ್ರೆ ಕಾರ್ಯಾಚರಣೆಯಿಂದ ತಾತ್ಕಾಲಿಕ ರಕ್ಷಣೆ ಒದಗಿಸಲು ಸುಪ್ರೀಂಕೋರ್ಟ್ ಆಜ್ಞಾಪಿಸಿತು. ವಸತಿ ಪ್ರದೇಶಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸಿಕೊಳ್ಳುವುದಿಲ್ಲ ಎಂಬುದಾಗಿ ಬರೆದು ಕೊಟ್ಟಿರುವ ತಮ್ಮ ವಚನವನ್ನು ಇವರು ಪಾಲಿಸಿದ್ದಾರೆ ಎಂಬುದಾಗಿ ನ್ಯಾಯಾಲಯದ ಪರಿಶೀಲನಾ ಸಮಿತಿ ನೀಡಿರುವ ವರದಿಯನ್ನು ಅನುಸರಿಸಿ ಸುಪ್ರೀಂಕೋರ್ಟ್ ಈ ಕ್ರಮ ಕೈಗೊಂಡಿತು.

2006: ಇರಾಕ್ ರಾಜಧಾನಿ ಬಾಗ್ದಾದಿನ ದಕ್ಷಿಣದಲ್ಲಿನ ಶಿಯಾ ಪ್ರಾಬಲ್ಯದ ಸದರ್ ನಗರದಲ್ಲಿ ಸರಣಿ ಆತ್ಮಾಹುತಿ ಕಾರುಬಾಂಬ್ ದಾಳಿಗಳಲ್ಲಿ 154 ಜನ ಮೃತರಾಗಿ 250ಕ್ಕೂ ಹೆಚ್ಚು ಮಂದಿ ಗಾಯಗೊಂಡರು.

2005: ಐದು ದಿನಗಳ ಹಿಂದೆ ತಾಲಿಬಾನ್ ಉಗ್ರರಿಂದ ಅಪಹರಣಗೊಂಡ ಭಾರತೀಯ ಚಾಲಕ ಮಣಿಯಪ್ಪನ್ ಕುಟ್ಟಿ (36) ಅವರ ಶವ ದಕ್ಷಿಣ ಆಫ್ಘಾನಿಸ್ತಾನದ ನಿಮ್ರೋಜ್ ಪ್ರಾಂತ್ಯದ ದೇಲರಾಂ ಜ್ಲಿಲೆಯಲ್ಲಿ ಪತ್ತೆಯಾಯಿತು. ಬಾರ್ಡರ್ ರೋಡ್ಸ್ ಸಂಸ್ಥೆಯಲ್ಲಿ ಚಾಲಕರಾಗಿದ್ದ ಕುಟ್ಟಿ ಅವರನ್ನು ಕತ್ತು ಸೀಳಿ ಬರ್ಬರವಾಗಿ ಕೊಲೆಗೈದದ್ದು ಇದರೊಂದಿಗೆ ಬೆಳಕಿಗೆ ಬಂತು.

1991: ಧುಲೆಯಲ್ಲಿ ಭಾಸ್ಕರಾಚಾರ್ಯ ಸಂಶೋಧನಾ ಕೇಂದ್ರದ ಸ್ಥಾಪನೆ.

1983: ಭಾರತದ ನವದೆಹಲಿಯಲ್ಲಿ ಮೊತ್ತ ಮೊದಲ ಬಾರಿಗೆ ಕಾಮನ್ವೆಲ್ತ್ ಮುಖ್ಯಸ್ಥರ ಸಭೆ (ಸಿ ಎಚ್ ಓ ಜಿ ಎಂ) ನಡೆಯಿತು.

1979: ಸಾಹಿತಿ ಮಂಜುಶ್ರೀ ಹೊಸಮನಿ ಜನನ.

1956: ದಕ್ಷಿಣ ರೈಲ್ವೆ ಇತಿಹಾಸದಲ್ಲೇ ಅತ್ಯಂತ ಭೀಕರವಾದ ಅಪಘಾತವೊಂದು ಟ್ಯುಟಿಕಾರನ್- ಮದ್ರಾಸ್ ಎಕ್ಸ್ ಪ್ರೆಸ್ ರೈಲುಗಾಡಿಗೆ ಈದಿನ ಬೆಳಗಿನ ಜಾವ ಸಂಭವಿಸಿತು. 104 ಜನ ಮೃತರಾದರು. ತಿರುಚಿನಾಪಳ್ಳಿಗೆ ಸಮೀಪದ ಅರಿಯಲೂರು ಮತ್ತು ಕಳಗಂ ನಿಲ್ದಾಣಗಳ ಮಧ್ಯೆ ಈ ಅಪಘಾತ ಸಂಭವಿಸಿತು.

1939: ಅಂಕಣಗಾರ್ತಿ, ಸಂಪಾದಕಿ, ಅಧ್ಯಾಪಕಿಯಾಗಿ ಖ್ಯಾತರಾದ ಸಾಹಿತಿ ಉಷಾ ನವರತ್ನರಾಂ (23-11-1989ರಿಂದ 1-10-2000) ಅವರು ಎಂ.ವಿ. ಸುಬ್ಬರಾವ್- ಶಾಂತಾ ದಂಪತಿಯ ಮಗಳಾಗಿ ಬೆಂಗಳೂರಿನಲ್ಲಿ ಜನಿಸಿದರು.

1937: ಭಾರತದ ಸಸ್ಯವಿಜ್ಞಾನಿ ಹಾಗೂ ಭೌತವಿಜ್ಞಾನಿ ಸರ್. ಜಗದೀಶ ಚಂದ್ರ ಬೋಸ್ (1858-1937) ಅವರು ತಮ್ಮ 79ನೇ ಹುಟ್ಟು ಹಬ್ಬಕ್ಕೆ ಒಂದು ವಾರ ಮೊದಲು ನಿಧನರಾದರು.

1936: `ಲೈಫ್' ಮ್ಯಾಗಜಿನ್ ನ ಮೊದಲ ಸಂಚಿಕೆ ಪ್ರಕಟಗೊಂಡಿತು. ಇದು ಹೆನ್ರಿ ಆರ್. ಲ್ಯೂಸ್ ಅವರ ಸೃಷ್ಟಿ.

1915: ಸಾಹಿತಿ ಎಸ್. ಆರ್. ಚಂದ್ರ ಜನನ.

1925: ಭಾರತೀಯ ಆಧ್ಯಾತ್ಮಿಕ ಧುರೀಣ ಪುಟ್ಟಪರ್ತಿಯ ಸತ್ಯಸಾಯಿ ಬಾಬಾ ಹುಟ್ಟಿದ ದಿನ. 

1899: ಸಾಹಿತಿ ಬೆಂಗೇರಿ ಮಾಸ್ತರ ಜನನ.

1897: ಭಾರತೀಯ ವಿದ್ವಾಂಸ, ಬರಹಗಾರ ನೀರದ್ ಸಿ. ಚೌಧುರಿ (1897-1999) ಹುಟ್ಟಿದ ದಿನ. 

1889: ನಾಣ್ಯ ಹಾಕಿದರೆ ಸಂಗೀತ ಹಾಡುವ ಸಂಗೀತ ಪೆಟ್ಟಿಗೆ `ಜ್ಯೂಕ್ ಬಾಕ್ಸ್' ಮೊತ್ತ ಮೊದಲ ಬಾರಿಗೆ ಸ್ಥಾಪನೆಗೊಂಡಿತು. ಲೂಯಿ ಗ್ಲಾಸ್ ಎಂಬ ಉದ್ಯಮಿ ಹಾಗೂ ಅವರ ಸಹೋದ್ಯೋಗಿ ವಿಲಿಯಂ ಎಸ್ ಅರ್ನಾಲ್ಡ್ ಅವರು ನಾಣ್ಯ ಹಾಕಿದರೆ ಹಾಡುವಂತಹ `ಎಡಿಸನ್ ಸಿಲಿಂಡರ್ ಫೊನೋಗ್ರಾಫ್' ನ್ನು ಸ್ಯಾನ್ ಫ್ರಾನ್ಸಿಸ್ಕೊದ ಪಲಾಯಿಸ್ ರಾಯಲ್ ಸಲೂನಿನಲ್ಲಿ ಸ್ಥಾಪಿಸಿದರು. ಈ ಯಂತ್ರ ಅದ್ಭುತ ಯಶಸ್ಸು ಗಳಿಸಿತು. ಕೇವಲ ಆರು ತಿಂಗಳಲ್ಲಿ 1000 ಡಾಲರ್ ಆದಾಯವನ್ನು ಇದು ತಂದು ಕೊಟ್ಟಿತು.

1885: ಸಾಹಿತಿ ಕಂದಗಲ್ ಹನುಮಂತರಾಯ ಜನನ.

1882: ಭಾರತೀಯ ಕೈಗಾರಿಕೋದ್ಯಮಿ ವಾಲ್ ಚಂದ್ ಹೀರಾಚಂದ್ ದೋಶಿ (1882-1953) ಹುಟ್ಟಿದ ದಿನ. ಇವರು ಭಾರತದ ಮೊತ್ತ ಮೊದಲ ಹಡಗುಕಟ್ಟೆ (ಶಿಪ್ ಯಾರ್ಡ್), ಮೊದಲ ವಿಮಾನ ಕಾರ್ಖಾನೆ ಹಾಗೂ ಮೊದಲ ಕಾರು ಕಾರ್ಖಾನೆ ಸ್ಥಾಪಿಸಿದವರು. ಮುಂಬೈ-ಪುಣೆ ನಡುವಣ ಭೋರ್- ಘಾಟ್ ಟನೆಲ್ಸ್ ನಿರ್ಮಿಸಿದ್ದೂ ಇವರ ನಿರ್ಮಾಣ ಸಂಸ್ಥೆಯೇ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement