ಇಂದಿನ ಇತಿಹಾಸ
ಜನವರಿ 09
ಈತನ ಹೆಸರು ಪುಟ್ಟು. ಶಿರಸಿಯ ಹೆಗಡೆಕಟ್ಟಾ ಬಳಿಯ ಶೀಗೆಹಳ್ಳಿಯ ಗೀತೆಮನೆ ಈತನ ಊರು. ಶಿರಸಿಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗಾಮಾಭಿವೃದ್ಧಿ ಸಂಸ್ಥೆ ಏರ್ಪಡಿಸಿದ 28ನೇ `ಕೃಷಿಮೇಳ'ದ ಮೆರವಣಿಗೆಯ ಉದ್ದಕ್ಕೂ ಗಾಂಭೀರ್ಯದಿಂದ ನಡೆದು ಬಂದ ಈತನ ಮೊಗದಲ್ಲಿ ಮಂದಹಾಸವಿತ್ತು. ತನಗಾಗಿ ವ್ಯವಸ್ಥೆ ಮಾಡಲಾಗಿದ್ದ ಚಪ್ಪರದ ಅಡಿ ನಿಂತು, ಬಂದವರನ್ನು ಮುದದಿಂದ ನೋಡುತ್ತಿದ್ದ ಈತನ ವಯಸ್ಸು ಕೇವಲ ಮೂರು ವರ್ಷ. ಹದಿನೈದು ವರ್ಷವಾದಂತೆ ಕಾಣುವ, ದಷ್ಟಪುಷ್ಟವಾಗಿ ಬೆಳೆದಿರುವ ಪುಟ್ಟು ಎಂದು ಪ್ರೀತಿಯಿಂದ ಕರೆಯಿಸಿಕೊಳ್ಳುವ ಈತ ಸಾಹಿವಾಲ್ ತಳಿಯ ಹೋರಿ.
2008: ಈತನ ಹೆಸರು ಪುಟ್ಟು. ಶಿರಸಿಯ ಹೆಗಡೆಕಟ್ಟಾ ಬಳಿಯ ಶೀಗೆಹಳ್ಳಿಯ ಗೀತೆಮನೆ ಈತನ ಊರು. ಶಿರಸಿಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗಾಮಾಭಿವೃದ್ಧಿ ಸಂಸ್ಥೆ ಏರ್ಪಡಿಸಿದ 28ನೇ `ಕೃಷಿಮೇಳ'ದ ಮೆರವಣಿಗೆಯ ಉದ್ದಕ್ಕೂ ಗಾಂಭೀರ್ಯದಿಂದ ನಡೆದು ಬಂದ ಈತನ ಮೊಗದಲ್ಲಿ ಮಂದಹಾಸವಿತ್ತು. ತನಗಾಗಿ ವ್ಯವಸ್ಥೆ ಮಾಡಲಾಗಿದ್ದ ಚಪ್ಪರದ ಅಡಿ ನಿಂತು, ಬಂದವರನ್ನು ಮುದದಿಂದ ನೋಡುತ್ತಿದ್ದ ಈತನ ವಯಸ್ಸು ಕೇವಲ ಮೂರು ವರ್ಷ. ಹದಿನೈದು ವರ್ಷವಾದಂತೆ ಕಾಣುವ, ದಷ್ಟಪುಷ್ಟವಾಗಿ ಬೆಳೆದಿರುವ ಪುಟ್ಟು ಎಂದು ಪ್ರೀತಿಯಿಂದ ಕರೆಯಿಸಿಕೊಳ್ಳುವ ಈತ ಸಾಹಿವಾಲ್ ತಳಿಯ ಹೋರಿ. ಪಂಜಾಬಿನಲ್ಲಿ ಮಾತ್ರ ಕಾಣಸಿಗುವ ಈ ತಳಿ ಈಗ ಶಿರಸಿ, ಸಾಗರ ಹಾಗೂ ಸಿದ್ದಾಪುರ ಭಾಗದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಹೊಲದ ಕೆಲಸಕ್ಕೆ ಹೋರಿ ಬಳಸುವ ರೈತರು, ಆಕಳನ್ನು ಹೈನುಗಾರಿಕೆಗಾಗಿ ಬಳಸುವ ಮೂಲಕ ಈ ಅಪರೂಪದ ತಳಿ ರಕ್ಷಣೆಯಲ್ಲಿ ಸದ್ದಿಲ್ಲದೆಯೇ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಳೆದ ಆರು ವರ್ಷಗಳ ಹಿಂದೆ, ಹೊಸ ತಳಿಯ ಹುಡುಕಾಟದಲ್ಲಿದ್ದ ಮಲೆನಾಡಿನ ರೈತರು ಅಮೃತಮಹಲ್, ಲಾಂಗೋಲ್, ಹರಿಯಾಣ ಹೀಗೆ ಹತ್ತಾರು ತಳಿ ತಂದು ಸಾಕಿದರು. ಆದರೆ, ಅವುಗಳು ಸರಿಯಾಗಿ ಹಾಲು ಕೊಡದಿರುವುದು ಒಂದು ಕಡೆ. ಹೊಲದ ಕೆಲಸಕ್ಕೂ ಬಾರದೇ ಸತಾಯಿಸುತ್ತಿದ್ದುದು ಇನ್ನೊಂದು ಕಡೆ. ಆದರೆ, ಮಲೆನಾಡಿನ ರೈತರು ತಳಿ ಹುಡುಕುವಲ್ಲಿ ಜಾಣರು. ಶಿವಮೊಗ್ಗ ಜಿಲ್ಲೆಯ ಹೊಸನಗರದ ರಾಮಚಂದ್ರಾಪುರ ಮಠದ ಮಾರ್ಗದರ್ಶನದಿಂದ ಸಾಹಿವಾಲ್ ತಳಿಯನ್ನು ಹುಡುಕಿ ತಂದರು. ಅದನ್ನೇ ತಮ್ಮ ದೇಶಿ ತಳಿಯಾದ ಗಿಡ್ಡದ ಮೂಲಕ ವಂಶಾಭಿವೃದ್ಧಿ ಮಾಡಿ ಒಂದರಿಂದ ಸಾವಿರ ಸಂಖ್ಯೆಯ ತನಕ ಬೆಳೆಸಿದರು. ಇದೇ ತಳಿಯಲ್ಲಿ ಹುಟ್ಟಿರುವ ಮುದ್ದಾದ, ದಪ್ಪನೆಯ ಪುಟ್ಟುವಿಗೆ ಈಗ ಮೂರು ವರ್ಷ ಎಂದಾಗ ಯಾರೂ ನಂಬಲು ಸಾಧ್ಯವಿರಲಿಲ್ಲ. ಬೇರೆ ತಳಿಯಾದರೆ ಇಷ್ಟು ದಪ್ಪ ಬೆಳೆಯಲು ಕನಿಷ್ಟ 12 ವರ್ಷ ಬೇಕು. ಆದರೆ, ಸಾಹಿವಾಲ್ ತಳಿ ಮಾತ್ರ ಕೇವಲ ಮೂರೇ ವರ್ಷಕ್ಕೆ ದೊಡ್ಡದಾಗಿ ಬೆಳೆಯುತ್ತದೆ. ಹುಟ್ಟಿದ ನಾಲ್ಕೇ ವರ್ಷಕ್ಕೆ ಕರುಹಾಕುವ ಈ ತಳಿ ಒಂದು ಹೊತ್ತಿಗೆ 6ರಿಂದ 8 ಲೀಟರ್ ಹಾಲನ್ನು ಇನ್ನೊಮ್ಮೆ ಗರ್ಭಾವಸ್ಥೆಯಾಗುವ ಮೂರು ತಿಂಗಳ ತನಕವೂ ನೀಡುತ್ತದೆ. ಸಾಹಿವಾಲ್ ತಳಿಯ ಹೋರಿ ಬುದ್ದಿಯಲ್ಲೂ ಚುರುಕು. ಆಕಳು ಕೂಡಾ ಬುದ್ಧಿಯಲ್ಲಿ ಇತರ ತಳಿಗಳಿಗಿಂತ ಒಂದು ಹೆಜ್ಜೆ ಮುಂದೆ. ಮಲೆನಾಡ ಭಾಗದಲ್ಲಿ ಇದರ ಬೆಲೆ ಈಗ 15ರಿಂದ 18 ಸಾವಿರ ರೂಪಾಯಿ. ಹೋರಿಗೆ ಕಡಿಮೆ ದರ ಇದ್ದರೂ ಆಕಳಿಗೆ ದರ ಹೆಚ್ಚು. ಈಗ ಈ ತಳಿಯನ್ನು ಯಾರೂ ಮಾರಾಟ ಮಾಡುತ್ತಿಲ್ಲ. ಬೇಕಾದರೆ ಮಲೆನಾಡ ಗಿಡ್ಡದ ಮೂಲಕ ವಂಶಾಭಿವೃದ್ಧಿ ಮಾಡಿಕೊಳ್ಳಬೇಕು. ಹೆಚ್ಚೆಂದರೆ 20 ವರ್ಷಗಳ ಕಾಲ ಬದುಕುವ ಸಾಹಿವಾಲ್ ತಳಿ 5 ಬಾರಿ ಕರುಹಾಕಬಲ್ಲುದು ಎಂಬುದು ಕೃಷಿ ಮೇಳದಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದ ರೈತಾಪಿ ಕುಟುಂಬದ ಸೌಭದ್ರ ಹೆಗಡೆ ಅವರ ಅಭಿಪ್ರಾಯ.
2008: ಉಡುಪಿಯ ಕೃಷ್ಣಾಪುರಮಠದ ಪರ್ಯಾಯ ಸಮಾರೋಪ ಸಂದರ್ಭದಲ್ಲಿ ಕೃಷ್ಣಮಠದ ಮುಖ್ಯಪ್ರಾಣ ದೇವರಿಗೆ (ಹನುಮಂತ) ಅರ್ಪಿಸುವ ಉದ್ದೇಶದಿಂದ ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ನವರತ್ನಸಹಿತ ವಜ್ರಕವಚ ನಿರ್ಮಿಸಲಾಗಿದೆ ಎಂದು ಕೃಷ್ಣಾಪುರ ಮಠಾಧೀಶ ವಿದ್ಯಾಸಾಗರ ತೀರ್ಥರು ಪ್ರಕಟಿಸಿದರು ಕವಚ ಹಾಗೂ ಪಾಣಿಪೀಠ ನಿರ್ಮಾಣಕ್ಕೆ ಒಟ್ಟು 6.7 ಕಿಲೋ ಬಂಗಾರ, 5287 ವಜ್ರದ ಹರಳುಗಳನ್ನು (404.91 ಕ್ಯಾರೆಟ್) ಬಳಸಲಾಗಿದೆ. ಜತೆಗೆ ನವರತ್ನಗಳಾದ ಕೆಂಪು, ನೀಲ, ಪಚ್ಚೆ, ಪುಷ್ಯರಾಗ, ಇತ್ಯಾದಿ 2664 ಹರಳುಗಳನ್ನು (347.96 ಕ್ಯಾರೆಟ್) ಜೋಡಿಸಲಾಗಿದೆ ಎಂದು ಅವರು ವಿವರಿಸಿದರು. ಈ ಹಿಂದೆ ಶ್ರೀಕೃಷ್ಣನ ವಜ್ರಕವಚವನ್ನು ನಿರ್ಮಿಸಿದ ಹೈದರಾಬಾದಿನ ಗಿರಿರಾಜ ಚರಣ ಅವರೇ ಮುಖ್ಯಪ್ರಾಣ ದೇವರ ಕವಚ ನಿರ್ಮಿಸಿದ್ದಾರೆ. ಜನವರಿ 11ರಂದು ರಾತ್ರಿ ಅಷ್ಟಮಠಾಧೀಶರ ಉಪಸ್ಥಿತಿಯಲ್ಲಿ ಇದನ್ನು ಕೃಷ್ಣನಿಗೆ ಸಮರ್ಪಿಸಿ, ಬಳಿಕ ಮುಖ್ಯಪ್ರಾಣದೇವರಿಗೆ ತೊಡಿಸಲಾಗುವುದು ಎಂದು ಸ್ವಾಮೀಜಿ ನುಡಿದರು.
2008: ನ್ಯೂಜಿಲೆಂಡಿನ ನ್ಯಾಯಾಧೀಶ ಜಾನ್ ಹನ್ಸೆನ್ ಅವರನ್ನು ಹರಭಜನ್ ಸಿಂಗ್ ನಿಷೇಧ ಶಿಕ್ಷೆಯನ್ನು ಪ್ರಶ್ನಿಸಿ ಬಿಸಿಸಿಐ ಸಲ್ಲಿಸಿರುವ ಮೇಲ್ಮನವಿ ಬಗ್ಗೆ ವಿಚಾರಣೆ ನಡೆಸುವ ಆಯುಕ್ತರನ್ನಾಗಿ ನೇಮಿಸಲಾಯಿತು. ಜನಾಂಗೀಯ ನಿಂದನೆ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯು (ಐಸಿಸಿ) ಹರಭಜನ್ ಗೆ 3 ಟೆಸ್ಟ್ ಪಂದ್ಯಗಳ ನಿಷೇಧ ಹೇರಿತ್ತು. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿತ್ತು. ಹರಭಜನ್ ಕೂಡಾ ಪ್ರತ್ಯೇಕ ಮನವಿ ಸಲ್ಲಿಸಿದ್ದರು.
2008: ಪ್ರತಿಪಕ್ಷ ನಾಯಕ ಎಲ್. ಕೆ.ಅಡ್ವಾಣಿ ಅವರು ಬಿಜೆಪಿ ಹಿರಿಯ ಧುರೀಣ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ದೇಶದ ಅತ್ಯುನ್ನತ ಭಾರತ ರತ್ನ ಪ್ರಶಸ್ತಿ ನೀಡಬೇಕೆನ್ನುವ ಪ್ರಸ್ತಾವನೆಯನ್ನು ಪ್ರಧಾನಿ ಮನಮೋಹನ್ ಸಿಂಗ್ ಅವರ ಮುಂದೆ ಇಟ್ಟರು. ಸಂಸದೀಯ ಪ್ರಜಾಪ್ರಭುತ್ವಕ್ಕೆ ವಾಜಪೇಯಿ ಅವರು ನೀಡಿರುವ ಕೊಡುಗೆ ಗೌರವಿಸಿ ಅವರಿಗೆ ಜನವರಿ 26 ರ ಗಣರಾಜ್ಯೋತ್ಸವದ ದಿನ `ಭಾರತ ರತ್ನ' ಪ್ರಶಸ್ತಿ ನೀಡಬೇಕೆಂದು ಅವರು ಪ್ರಧಾನಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದರು. ವಾಜಪೇಯಿ ಅವರು ದೀರ್ಘಕಾಲ ಸಂಸದೀಯ ಪಟುವಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಅಡ್ವಾಣಿ ಉಲ್ಲೇಖಿಸಿದರು.
2008: ವಿನ್ಯಾಸದಲ್ಲಿ ಒಂದನ್ನೊಂದು ಮೀರಿಸುವ ಮೂರು ಮಾದರಿಯ ಕಾರುಗಳ ಕಾನ್ಸೆಪ್ಟನ್ನು ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ನವದೆಹಲಿಯಲ್ಲಿ ಬಿಡುಗಡೆ ಮಾಡಿತು. ಕಣ್ಣು ಕೋರೈಸುವಂತಿದ್ದ ಎ- ಸ್ಟಾರ್, ಸ್ಪ್ಲಾಷ್ ಮತ್ತು ಕಿಜಾಶಿ ಕಾನ್ಸೆಪ್ಟ್ ಕಾರುಗಳು ವಿಶ್ವ ಮಾರುಕಟ್ಟೆಗೆ ಸುಜುಕಿ ಕೊಡುಗೆ. ಪ್ರಗತಿ ಮೈದಾನದಲ್ಲಿ ಆಟೋ ಎಕ್ಸ್ಪೋ ಪ್ರದರ್ಶನಕ್ಕೆ ಪೂರ್ವಭಾವಿಯಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಶೊಂಜಿ ನಕಾನಿಶಿ ಈ ಕಾರುಗಳ ಕಾನ್ಸೆಪ್ಟನ್ನು ಪರಿಚಯಿಸಿದರು. ಈ ಕಾರುಗಳು ಸಂಪೂರ್ಣವಾಗಿ ಭಾರತದಲ್ಲಿಯೇ ನಿರ್ಮಾಣಗೊಳ್ಳಲಿವೆ. ಕಿಜಾಶಿ ಕಾರು ಸುಜುಕಿ ಮೋಟಾರ್ ಕಾರ್ಪೋರೇಷನ್ನಿನ ಜಪಾನ್ ಘಟಕದಲ್ಲಿ ಸಿದ್ಧಗೊಳ್ಳಲಿದೆ. ಹಲವು ಕಾರಣಗಳಿಗಾಗಿ ಎ- ಸ್ಟಾರ್ ಕಾನ್ಸೆಪ್ಟ್ ಪ್ರಮುಖವಾಗಿದೆ. ಮೊದಲ ಬಾರಿಗೆ ಸಮಾನಾಂತರ ತಂತ್ರಜ್ಞಾನದ ಮೂಲಕ ಮಾರುತಿ ಸುಜುಕಿ ಈ ಕಾರಿನ ಕಾನ್ಸೆಪ್ಟ್ ಸಿದ್ಧಪಡಿಸಿದೆ. ಇದುವರೆಗೆ ವಿದೇಶಿ ಕಾರಿನ ಮಾದರಿಯನ್ನೇ ಇಟ್ಟುಕೊಂಡು ಭಾರತದ ಅಗತ್ಯತೆಗಳಿಗೆ ತಕ್ಕಂತೆ ಪರಿವರ್ತಿಸಿ ಬಿಡುಗಡೆ ಮಾಡಲಾಗುತ್ತಿತ್ತು. ಆದರೆ ಎ ಸ್ಟಾರ್ ಕಾನ್ಸೆಪ್ಟನ್ನು ಮೊತ್ತ ಮೊದಲ ಬಾರಿಗೆ ಭಾರತ ಮತ್ತು ಜಪಾನ್ ತಂತ್ರಜ್ಞರು ಏಕಕಾಲಕ್ಕೆ ಸಿದ್ಧಪಡಿಸಿದ್ದಾರೆ. ಎ ಸ್ಟಾರ್ ವಿನ್ಯಾಸವನ್ನು ರೂಪಿಸಿದವರು ಬೆಂಗಳೂರಿನ ಭಾರತ ವಿಜ್ಞಾನ ಸಂಸ್ಥೆಯಲ್ಲಿ ಓದಿದ ಸೌರವ್ ಮತ್ತು ರಾಜೇಶ್ ಎಂಬ ಇಬ್ಬರು ಯುವಕರು.
2008: ತಮಿಳುನಾಡಿನ ಮದುರೆ ಸಮೀಪದ ದಿಂಡಿಗಲ್ ಕ್ರಾಸ್ ಬಳಿ ಸಂಭವಿಸಿದ ಕಾರು ಮತ್ತು ಲಾರಿ ನಡುವಿನ ಮುಖಾಮುಖಿ ಅಪಘಾತದಲ್ಲಿ ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಳ್ಳಿ ಅವರ ಪುತ್ರ ನಾಗರಾಜ (35) ಮತ್ತು ಮೊಮ್ಮಗ ಕೈಲಾಸ (18) ಮೃತರಾದರು. ಮದುರೆಯಿಂದ ಬೆಂಗಳೂರಿಗೆ ಹೊರಟಿದ್ದ `ಇನ್ನೋವಾ' ಕಾರು ಬೆಳಗಿನ ಜಾವ 2 ಗಂಟೆಗೆ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತರಾಗಿ ಮೂವರು ಗಾಯಗೊಂಡರು. ನಾಗಮಾರಪಲ್ಲಿ ಕುಟುಂಬ ದುರ್ಘಟನೆಗಳ ಸರಮಾಲೆಯನ್ನೇ ಕಂಡಿದೆ. ಕಳೆದ ವರ್ಷ ಒಬ್ಬ ಪುತ್ರನ ಹತ್ಯೆಯಾಗಿದ್ದರೆ, 7 ವರ್ಷದ ಹಿಂದೆ ನಾಗಮಾರಪಲ್ಲಿ ಅವರ ಪತ್ನಿ ಲಕ್ಷ್ಮಿಬಾಯಿ ಅಪಘಾತದಲ್ಲಿ ಮೃತರಾಗಿದ್ದರು.
2008: ಸಿಂಗಪುರದ ಪ್ರಮುಖ ಉದ್ಯಮಪತಿಯಾಗಿರುವ ಮುಂಬೈ ಮೂಲದ ರಾಬರ್ಟ್ ವಿಶ್ವನಾಥನ್ ಚಂದ್ರನ್ ಅವರು ಇಂಡೋನೇಷ್ಯಾದ ರಿವೂ ಪ್ರಾಂತ್ಯದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತರಾದರು. ರಾಬರ್ಟ್ (57) ಅವರು ಸಿಂಗಪುರದಲ್ಲಿ ಬಹುಕೋಟಿ ಡಾಲರ್ ಮೊತ್ತದ ಪೆಟ್ರೋಲಿಯಂ ವ್ಯವಹಾರ ಹೊಂದಿದ್ದರು. ಚೆಮೊಯಿಲ್ ಎನರ್ಜಿ ಕಂಪೆನಿಯನ್ನು ಹುಟ್ಟುಹಾಕಿದ ಅವರ ಆಸ್ತಿ 49 ಕೋಟಿ ಮೊತ್ತದಷ್ಟಿದೆ.
2007: ರಾಷ್ಟ್ರಪತಿ ಡಾ. ಎ ಪಿ ಜೆ ಅಬ್ದುಲ್ ಕಲಾಂ ಅವರು ಅಬು ಧಾಬಿಯಲ್ಲಿ ನೆಲೆಸಿರುವ ಕನ್ನಡಿಗ ಬಿ.ಆರ್. ಶೆಟ್ಟಿ ಸೇರಿದಂತೆ 15 ಮಂದಿ ಭಾರತೀಯ ಮೂಲದ ಜನರಿಗೆ `ಪ್ರವಾಸಿ ಭಾರತೀಯ ಸನ್ಮಾನ' ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ತಮ್ಮ ಕ್ಷೇತ್ರದಲ್ಲಿ ಮಾಡಿದ ಸಾಧನೆ ಹಾಗೂ ಉಭಯ ರಾಷ್ಟ್ರಗಳ ನಡುವಣ ಬಾಂಧವ್ಯ ವೃದ್ಧಿಗಾಗಿ ಈ ಪ್ರಶಸ್ತಿ ನೀಡಲಾಗಿದೆ.
2007: ರೂಪಾ ಬಜ್ವಾ ಅವರ ಇಂಗ್ಲಿಷ್ ಕಾದಂಬರಿ `ಸ್ಯಾರಿ ಶಾಪ್' ಕೃತಿ ಕೇಂದ್ರ ಸಾಹಿತ್ಯ ಅಕಾಡೆಮಿಯ 2006ನೇ ಸಾಲಿನ ಪ್ರಶಸ್ತಿಗೆ ಆಯ್ಕೆಯಾಯಿತು.
2007: ಹಿರಿಯ ಕಥೆಗಾರ ಮೈಸೂರಿನ ಪ್ರೊ. ಮಾಧವ ಕುಲಕರ್ಣಿ ಅವರ `ಉದ್ಯಾನವನ ಮತ್ತು ಇತರ ಕಥೆಗಳು' ಕಥಾ ಸಂಗ್ರಹವು ಮೂಡುಬಿದರೆಯ ವರ್ಧಮಾನ ಪ್ರಶಸ್ತಿ ಪೀಠದ 2005ರ ಸಾಲಿನ ವರ್ಧಮಾನ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾಯಿತು. ಚಿಕ್ಕಮಗಳೂರಿನ ಜಯಾ ಯಾಜಿ ಶಿರಾಲಿ ಅವರ `ಶಂಕ್ರಿ' ಕಥಾ ಸಂಕಲನವು ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾಯಿತು.
2007: ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷಾ ರಂಗಭೂಮಿಗಳಿಗೂ ರಾಷ್ಟ್ರೀಯ ಸ್ಥಾನಮಾನ ನೀಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಆಗ್ರಹಿಸಿ ಐದು ದಿನಗಳಿಂದ ನಡೆಸುತ್ತಿದ್ದ ನಿರಶನವನ್ನು ಉಭಯ ಸರ್ಕಾರಗಳ ಭರವಸೆ ಮೇರೆಗೆ ಹಿರಿಯ ರಂಗಕರ್ಮಿ ಪ್ರಸನ್ನ ಅವರು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸಮ್ಮುಖದಲ್ಲಿ ಅಂತ್ಯಗೊಳಿಸಿದರು. ಹನ್ನೊಂದನೇ ಪಂಚವಾರ್ಷಿಕ ಯೋಜನೆಯಡಿ ಐದು ರಾಜ್ಯಗಳಿಗೆ ರಾಷ್ಟ್ರೀಯ ನಾಟಕ ಶಾಲೆಯನ್ನು ಮಂಜೂರು ಮಾಡಿರುವುದಾಗಿಯೂ, ಇದರಲ್ಲಿ ಕರಾಟಕಕ್ಕೆ ಮೊದಲ ಆದ್ಯತೆ ನೀಡುವುದಾಗಿಯೂ ಕೇಂದ್ರ ಸಂಸ್ಕೃತಿ ಖಾತೆ ಸಚಿವೆ ಅಂಬಿಕಾ ಸೋನಿ ದೆಹಲಿಯಲ್ಲಿ ಪ್ರಕಟಿಸಿದರು.
2007: ಇರಾಕಿನ ಪದಚ್ಯುತ ಅಧ್ಯಕ್ಷ ಸದ್ದಾಮ್ ಹುಸೇನ್ ಅವರನ್ನು ಗಲ್ಲಿಗೇರಿಸಿದ ಸಂದರ್ಭದ 27 ಸೆಕೆಂಡುಗಳ ಅವಧಿಯ ಮತ್ತೊಂದು ವಿಡಿಯೋ ಚಿತ್ರ ಇಂಟರ್ನೆಟ್ಟಿನಲ್ಲಿ ಪ್ರಸಾರಗೊಂಡಿತು. ಸದ್ದಾಮ್ ಅವರ ಕೊರಳಲ್ಲಿ ಆಗಿರುವ ಗಾಯ ಈ ವಿಡಿಯೋದಲ್ಲಿ ಎದ್ದು ಕಾಣುತ್ತಿದೆ. ಸದ್ದಾಮ್ ಅವರನ್ನು ನೇಣಿಗೇರಿಸುವುದನ್ನು ಗುಪ್ತವಾಗಿ ಚಿತ್ರೀಕರಣ ಮಾಡಿದ ಎರಡನೇ ಘಟನೆ ಇದು. ಕ್ಯಾಮರಾ ಒಳಗೊಂಡ ಮೊಬೈಲಿನಿಂದ ಈ ಚಿತ್ರಿಕರಣ ಮಾಡಲಾಗಿದ್ದು, ಸದ್ದಾಮ್ ಅವರನ್ನು ನೇಣು ಹಾಕಿದ ಬಳಿಕ ಕೆಳಕ್ಕೆ ಇಳಿಸಿ ಕಬ್ಬಿಣದ ಮಂಚದ ಮೇಲೆ ಮಲಗಿಸುವವರೆಗಿನ ಚಿತ್ರೀಕರಣ ಇದೆ.
2007: ಹಿರಿಯ ಪತ್ರಕರ್ತ, ಖ್ಯಾತ ಕಥೆಗಾರ ಜಿ.ಎಸ್. ಸದಾಶಿವ (67) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಸಂಯುಕ್ತ ಕರ್ನಾಟಕ ಹಾಗೂ ಪ್ರಜಾವಾಣಿ, ಸುಧಾ ವಾರಪತಿಕೆ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದ ಅವರು ಕನ್ನಡ ಪ್ರಭದ ಕಾರ್ಯ ನಿರ್ವಾಹಕ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದರು.
2006: ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿರುವ ಚಾವುಂಡರಾಯ ಪ್ರಶಸ್ತಿಗೆ ಕನ್ನಡದ ಹಿರಿಯ ವಿದ್ವಾಂಸ ಪಂಡಿತ ಪ. ನಾಗರಾಜಯ್ಯ ಆಯ್ಕೆಯಾದರು.
2006: ಅರುಂಧತಿ ರಾಯ್ ಅವರ ರಾಜಕೀಯ ಪ್ರಬಂಧಗಳ ಸಂಕಲನ ದಿ ಅಲ್ಜೀಬ್ರಾ ಆಫ್ ಇನ್ಫಿನಿಟ್ ಜಸ್ಟೀಸ್ 2005ನೇ ಸಾಲಿನ ಕೇಂದ್ರ ಸಾಹಿತ್ಯ ಪ್ರಶಸ್ತಿಯ ಇಂಗ್ಲಿಷ್ ವಿಭಾಗಕ್ಕೆ ಆಯ್ಕೆಯಾಯಿತು.
2006: ಕೇರಳದ ಮಂಗಳಂ ಪ್ರಕಾಶನದ ಮಂಗಳ ಸಾಪ್ತಾಹಿಕದ ಮುಖ್ಯಸಂಪಾದಕ, ಪ್ರಕಾಶನ ಸಂಸ್ಥೆಯ ಮುಖ್ಯಸಂಪಾದಕ ಎಂ.ಸಿ. ವರ್ಗೀಸ್ (73) ಕೊಟ್ಟಾಯಮ್ಮಿನಲ್ಲಿ ನಿಧನರಾದರು. ಮಂಗಳ ಮಲಯಾಳಂ ದಿನಪತ್ರಿಕೆಯಲ್ಲದೆ ಕನ್ನಡದ ಮಂಗಳ ವಾರಪತ್ರಿಕೆ, ಬಾಲ ಮಂಗಳ ಮತ್ತು ಗಿಳಿವಿಂಡು ವರ್ಗೀಸ್ ಅವರ ಅವರ ಒಡೆತನಕ್ಕೆ ಸೇರಿವೆ.
1982: ಡಾ. ಎಸ್. ಝಡ್. ಖಾಸಿಂ ನೇತೃತ್ವದಲ್ಲಿ ದಕ್ಷಿಣ ಧ್ರುವಕ್ಕೆ (ಅಂಟಾರ್ಕ್ಟಿಕಾ) ಭಾರತದ ಮೊದಲ ಸಂಶೋಧನಾ ತಂಡದ ಪಯಣ. `ದಕ್ಷಿಣ ಗಂಗೋತ್ರಿ' ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಯಿತು.
1953: ಮೃದಂಗ, ತಬಲಾ, ಢೋಲಕ್, ಡೋಲ್ಕಿ, ಖೋಲ್, ಖಂಜಿರ ಮತ್ತಿತರ ಹಲವಾರು ವಾದ್ಯಗಳನ್ನು ನುಡಿಸುವುದರಲ್ಲಿ ಖ್ಯಾತಿ ಪಡೆದ ವಾದ್ಯ ಸಂಗೀತಗಾರ ಎಸ್. ಬಾಲಸುಬ್ರಹ್ಮಣ್ಯ ಅವರು ಬಯಾಲಜಿ ಸುಂದರೇಶನ್ ಎಂದೇ ಖ್ಯಾತರಾಗಿದ್ದ ಎಂ.ವಿ. ಸುಂದರೇಶನ್- ಸಾವಿತ್ರಿ ದಂಪತಿಯ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು.
1926: ಕಲಾವಿದೆ ಲಲಿತಾ ದೊರೈ ಜನನ.
1915: ಮಹಾತ್ಮಾ ಗಾಂಧೀಜಿಯವರು ದಕ್ಷಿಣ ಆಫ್ರಿಕಾದಲ್ಲಿ ತಮ್ಮ ಮೊತ್ತ ಮೊದಲ ಕಾನೂನುಭಂಗ ಚಳವಳಿ ನಡೆಸಿದ ಬಳಿಕ ಬಾಂಬೆಗೆ (ಈಗಿನ ಮುಂಬೈ) ಹಿಂದಿರುಗಿದರು. ಅಪೋಲೊ ಬಂದರಿಗೆ ಅವರಿದ್ದ ಹಡಗು ಬಂದಾಗ ವೈಸ್ರಾಯ್ ಸೇರಿದಂತೆ ಪ್ರಮುಖ ವ್ಯಕ್ತಿಗಳು ಹಾಜರಿದ್ದರು.
1913: ಅಮೆರಿಕಾದ ಅಧ್ಯಕ್ಷ ರಿಚರ್ಡ್ ಎಂ. ನಿಕ್ಸನ್ (1913-1994) ಹುಟ್ಟಿದ ದಿನ. 1969-74ರ ಅವಧಿಯಲ್ಲಿ ಅಮೆರಿಕಾದ ಅಧ್ಯಕ್ಷರಾಗಿದ್ದ ಇವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಮೊದಲ ಅಮೆರಿಕನ್ ಅಧ್ಯಕ್ಷ.
1873: ಫ್ರಾನ್ಸಿನ ಚಕ್ರವರ್ತಿ ನೆಪೋಲಿಯನ್ ಬೋನಪಾರ್ಟೆಯ ಸೋದರ ಸಂಬಂಧಿ 3ನೇ ನೆಪೋಲಿಯನ್ ತನ್ನ 64ನೇ ವಯಸ್ಸಿನಲ್ಲಿ ಕೆಂಟ್ನಲ್ಲಿ ಗಡೀಪಾರಾಗಿದ್ದ ಸಮಯದಲ್ಲಿ ಮೃತನಾದ.
1839: ಫೊಟೋಗ್ರಾಫ್ ಸಂಸ್ಕರಣೆಯ ಪೂರ್ಣ ವಿವರಣೆಯನ್ನು ಅಕಾಡೆಮಿ ಆಫ್ ಸೈನ್ಸಸ್ ಸಭೆಯಲ್ಲಿ ಖ್ಯಾತ ಖಗೋಳ ತಜ್ಞ ಹಾಗೂ ಭೌತತಜ್ಞ ಡಿ.ಎಫ್.ಜೆ. ಆರಗೊ ಪ್ರಕಟಿಸಿದರು. ಫ್ರಾನ್ಸಿನ ಜೋಸೆಫ್ ನೀಸೆಫೋರ್ ನೀಪೆಸ್ ಅವರು 1926-27ರಲ್ಲಿ ಮೊತ್ತ ಮೊದಲ ಫೊಟೋಗ್ರಾಫ್ ತಯಾರಿಸಿದ್ದರೂ ಅದರ ಗುಣಮಟ್ಟ ತುಂಬಾ ಕೆಳಮಟ್ಟದ್ದಾಗಿತ್ತು. ಅದನ್ನು ತಯಾರಿಸಲು ಸಮಯ ಕೂಡಾ 8 ಗಂಟೆ ಬೇಕಾಗುತ್ತಿತ್ತು. ಡ್ಯಾಗುಯೆರೆ ಅಭಿವೃದ್ಧಿ ಪಡಿಸಿದ ಸಂಸ್ಕರಣಾ ವಿಧಾನ ಕೇವಲ 20-30ರಿಂದ ನಿಮಿಷಗಳನ್ನು ತೆಗೆದುಕೊಂಡಿತು.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment