ಸಮುದ್ರ ಮಥನ 24: ಕೀರ್ತಿಯ ಜೀವಂತಿಕೆ
ಕೆಲವು ಕೀರ್ತಿಗಳು ಇದಕ್ಕೆ ಅಪವಾದವಾಗಿ ನಿಲ್ಲುತ್ತವೆ. ಮಕ್ಕಳು, ಮೊಮ್ಮಕ್ಕಳ ಕಾಲವನ್ನೂ ಮೀರಿ ಶತ-ಶತಮಾನಗಳ ಕಾಲ ಜೀವಂತವಾಗಿರುತ್ತವೆ. ಬದುಕನ್ನು ಸಾರ್ಥಕಪಡಿಸಿಕೊಳ್ಳುವ ಹಂಬಲಿಗರಿಗೆ ಅಮೂಲ್ಯ ಸಂಪತ್ತಾಗಿ ವಿನಿಯೋಗಕ್ಕೆ ಸದಾ ಸಿದ್ಧವಿರುತ್ತದೆ.
ಕೀರ್ತಿಯ ಆಕಾಂಕ್ಷೆ ಪ್ರತಿಯೊಬ್ಬರಿಗೂ ಇದೆ. ಅದರಲ್ಲಿ ತರತಮ ಇರಬಹುದು. ಅದು ತಪ್ಪಲ್ಲ. ಅದರ ಹಿಂದೆಯೇ ಹೋಗುವುದು, ಅದಕ್ಕಾಗಿಯೇ ಎಲ್ಲವನ್ನೂ ಮಾಡುವುದು, ಬಂದ ಕೀರ್ತಿಯನ್ನು ಮತ್ತೂ ಉನ್ನತ ಕೀರ್ತಿಗಾಗಿ ಸಮರ್ಪಿಸಿಕೊಳ್ಳದಿರುವುದು ತಪ್ಪು.
ಕೀರ್ತಿಯ ವಿಷಯ ಬಂದಾಗ, ಅದನ್ನು ಹೇಗೆ ಪಡೆಯಲಾಯಿತು, ಪಡೆಯಲೆಷ್ಟು ಹಪಹಪಿಕೆ ಇತ್ತು, ಪಡೆದ ಕೀರ್ತಿಯ ವಿನಿಯೋಗ ಹೇಗೆ ಎಂಬುದರ ಮೇಲೆ ಕೀರ್ತಿಯ ಸಾರ್ಥಕತೆ ನಿಂತಿರುತ್ತದೆ. ಈ ಪ್ರಶ್ನೋತ್ತರ ಪರೀಕ್ಷೆಯಲ್ಲಿ ಉತ್ತೀರ್ಣನಾದ ಕೀರ್ತಿ ಒಂದು ಸಂಪತ್ತಾಗುತ್ತದೆ. ಮುಂದಿನ ಕಾರ್ಯಗಳಿಗೆ ಪ್ರಮುಖ ಸಂಪತ್ತಿನ ರೂಪದಲ್ಲಿ ವಿನಿಯೋಗವಾಗುತ್ತದೆ.
ಕೀರ್ತಿಗೂ ಆಯುಷ್ಯ ಇದೆ. ಘನವಾದ ಕೀರ್ತಿ ಬಹುಕಾಲ ಬಾಳುವಂಥದ್ದು. ದುರ್ಬಲವಾದದ್ದು ಅದಕ್ಕೆ ಹೊಂದಿಕೊಂಡು ಕೆಲವೇ ಕೆಲವು ಕಾಲ ಬಾಳಿ, ಬದುಕುತ್ತದೆ. ನಮ್ಮ ನಿತ್ಯ ಬದುಕಿನಲ್ಲಿ ನಿರಂತರ ಒಂದಷ್ಟು ಕೆಲಸ-ಕಾರ್ಯಗಳಲ್ಲಿ ನಿರತರಾಗಿರುತ್ತೇವೆ. ಅದು ನಮ್ಮನ್ನು ಮೈಮುರಿದು ದುಡಿಯುವ ಕೆಲಸಗಾರ ಎಂಬ ಕೀರ್ತಿಯಿಂದ ಅಲಂಕರಿಸುತ್ತದೆ. ಹೆಚ್ಚೆಂದರೆ ನಮ್ಮ ಮಕ್ಕಳು, ಮೊಮ್ಮಕ್ಕಳ ಕಾಲದವರೆಗೂ ಅದು ಬಾಳಬಹುದು. ನಂತರ ಮಾಸಿ ಹೋಗುತ್ತದೆ. ಕಾಲನ ಚಕ್ರದಲ್ಲಿ ಹೊಸ ಕೀರ್ತಿ ಸುತ್ತುತ್ತಿರುತ್ತದೆ. ಮತ್ತದು ಕೆಳಗಾದಾಗ ಇನ್ನೊಂದು ಮೇಲಿರುತ್ತದೆ.
ಕೆಲವು ಕೀರ್ತಿಗಳು ಇದಕ್ಕೆ ಅಪವಾದವಾಗಿ ನಿಲ್ಲುತ್ತವೆ. ಮಕ್ಕಳು, ಮೊಮ್ಮಕ್ಕಳ ಕಾಲವನ್ನೂ ಮೀರಿ ಶತ-ಶತಮಾನಗಳ ಕಾಲ ಜೀವಂತವಾಗಿರುತ್ತವೆ. ಬದುಕನ್ನು ಸಾರ್ಥಕಪಡಿಸಿಕೊಳ್ಳುವ ಹಂಬಲಿಗರಿಗೆ ಅಮೂಲ್ಯ ಸಂಪತ್ತಾಗಿ ವಿನಿಯೋಗಕ್ಕೆ ಸದಾ ಸಿದ್ಧವಿರುತ್ತದೆ.
ಶತಶತಮಾನಗಳಿಂದ ಜೀವಂತವಿರುವ ಕೀರ್ತಿ ಪುರುಷರ ಸಾಲಿನಲ್ಲಿ ರಾಮ ನಿಂತೇ ಇದ್ದಾನೆ. ಅದಕ್ಕೆ ಕವಿಯೊಬ್ಬ 'ರಾಮನ ಕೀರ್ತಿ ಶಾಶ್ವತ. ಹಾಗೆ ನೋಡಿದರೆ ಸೃಷ್ಟಿಯೇ ಅವನ ಕೀರ್ತಿ. ಸೂರ್ಯನ ಬೆಳಗು ಅವನ ಕೀರ್ತಿ. ಗಾಳಿಯ ಬೀಸೂ ಅವನ ಕೀರ್ತಿಯೇ. ನಕ್ಷತ್ರಗಳ ಮಿನುಗೂ ಅವನ ಕೀರ್ತಿಯಲ್ಲದೇ ಮತ್ತೇನೂ ಅಲ್ಲ' ಎಂದೆನ್ನುತ್ತಾನೆ.
ಅಂದರೆ ರಾಮ ಆ ಮಹಾತತ್ತ್ವದ ಅವತಾರವಾಗಿ, ಅದರ ಪ್ರತಿನಿಧಿಯಾಗಿ, ಈ ಅಖಂಡ ಸೃಷ್ಟಿಯ ಒಂದು ಭಾಗವಾಗಿಯೇ, ಈ ಸೃಷ್ಟಿಗೆ ಜೀವಂತವಾಗಿ ಬದುಕುವುದು ಹೇಗೆಂದು ತೋರಿಸಿಕೊಟ್ಟಿದ್ದಾನೆ. ದೃಷ್ಟಾಂತವನ್ನು ತೋರಿಸಿಯಲ್ಲ. ತಾನೇ ಒಂದು ದೃಷ್ಟಾಂತವಾಗಿ ನಿರೂಪಿಸಿದ್ದಾನೆ. ಆ ಹಿತವಾದ ಸತ್ಯ ಎಲ್ಲ ಚರಾಚರಗಳಿಗೂ ಪ್ರಿಯವಾಯಿತು. ಈ ಲೋಕ ಹಿತ-ಪ್ರೀತ ಪದಾರ್ಥವನ್ನು ಎಂದೆಂದಿಗೂ ಬಿಟ್ಟುಕೊಡಲು, ಕಳೆದುಕೊಳ್ಳಲು ಇಷ್ಟಪಡುವುದಿಲ್ಲ.
ಹಾಗದರ ಕೀರ್ತಿ ಬಹುಕಾಲ ಬೆಳೆಯುತ್ತದೆ. ಬೆಳೆ-ಬೆಳೆಯುತ್ತ ಅದರ ವ್ಯಾಪ್ತಿ ಹಿಗ್ಗುತ್ತ ಹೋಗುತ್ತದೆ, ವಿಶ್ವವ್ಯಾಪಿಯಾಗುತ್ತದೆ. ಕಡೆಯಲ್ಲದು ವಿಶ್ವಪ್ರೇಮದ ಅಮೂಲ್ಯ ಭಾವವನ್ನು ಸೃಜಿಸುವುದರಿಂದ ಕೀರ್ತಿ ತಲುಪಬೇಕಾದ ಜಾಗವನ್ನು ತಲುಪಿದಂತಾಗುತ್ತದೆ.
ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ
ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ
ಶ್ರೀರಾಮಚಂದ್ರಾಪುರಮಠ
1 comment:
Very good articles by our Swamiji. I t would be useful if the matha's website has got links to these' Samudra Mathana' articles.
Post a Comment